Friday, August 6, 2010

ಒಮ್ಮೆ ಜನಮತಸಾಂದ್ರತೆ (Demography) ಬದಲಾದರೆ...........

           ಪ್ರದೇಶವೊಂದನ್ನು (ಅದು ರಾಜ್ಯವಾಗಿರಲಿ ಅಥವಾ ರಾಜ್ಯವೊಂದರ ಭಾಗವಾಗಿರಲಿ) ದೇಶದಲ್ಲಿ ಇರುವಂತೆ ಮಾಡುವ ಅನೇಕ ಸಮಾನ ಅಂಶಗಳಿರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾಗಿದ್ದು ಆ ಪ್ರದೇಶದ ಜನಮತಸಾಂದ್ರತೆ (demography) ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಒಮ್ಮೆ ಆ ಪ್ರದೇಶದ ಜನಮತಸಾಂದ್ರತೆ ಬದಲಾದರೆ ಎಲ್ಲವೂ ಬದಲಾಗುತ್ತದೆ. ಇಲ್ಲಿ ಎಲ್ಲವೂ ಅಂದರೆ ಆ ಪ್ರದೇಶದ ಭಾಷೆ, ಆಚಾರ-ವಿಚಾರ, ರಾಷ್ಟ್ರನಿಷ್ಠೆ, ನಾಯಕರುಗಳು-ಎಲ್ಲವೂ ಬದಲಾಗುತ್ತದೆ!!! ಇದಕ್ಕೆ ಕಶ್ಮೀರಕಣಿವೆಯ ಉದಾಹರಣೆಯೇ ನಮ್ಮ ಕಣ್ಣುಮುಂದೆ (ಕಣ್ಣಿದ್ದವರಿಗೆ) ಕಾಣುತ್ತಿದೆ. ಕಲ್ಹಣ ಸಾಹಿತ್ಯ ರಚಿಸಿದ ಆ ಕಾಶ್ಮೀರಿ ಭಾಷೆ ಕಣಿವೆಯಲ್ಲಿ ಎಲ್ಲಿದೆ? ಬೋರ್ಡ್ ಗಳಲ್ಲೆಲ್ಲಾ ಅರಬಿ ಲಿಪಿ. ‘India’ ಎಂದು ಕಾಣುವ ಬೋರ್ಡ್ ಗಳ ಮೇಲೆ ಕಲ್ಲು, ಆಗಸ್ಟ್ ೧೫ ಬಂದ್!! ವಿಜೃಂಭಣೆಯ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ!!! ನಾಗಲ್ಯಾಂಡ್, ಮಿಜೊರಾಂ ಪರಿಸ್ಥಿತಿಯೂ (ಸದ್ಯಕ್ಕೆ ತಣ್ಣಕ್ಕಿದ್ದಂತೆ ಕಂಡರೂ) ತುಂಬವೇನು ಭಿನ್ನವಾಗಿಲ್ಲ. ಒಟ್ಟು ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದು ಕಶ್ಮೀರ, ನಾಗಲ್ಯಾಂಡ್ ಮತ್ತು ಮಿಜೋರಾಂಗಳಲ್ಲಿ ಅವರು ತುಂಬಾ ಅಲ್ಪಸಂಖ್ಯಾತರಾಗಿದ್ದು ಮುಸ್ಲಿಂ ಹಾಗೂ ಕ್ರೈಸ್ತರು ಅಲ್ಲಿ ಬಹುಸಂಖ್ಯಾತರಾಗಿರುವುದೇ ಇದಕ್ಕೆ ಕಾರಣ. (ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಆದರೆ ಬೌದ್ದರೇ ಸಾಕಷ್ಟು ಸಂಖ್ಯೆಯಲ್ಲಿರುವ ಲಡಕ್ ಪ್ರದೇಶದಲ್ಲಿ ಈ ಸಮಸ್ಯೆ ಅಷ್ಟಿಲ್ಲ!!) ಒಮ್ಮೆ ಜನಮತಸಾಂದ್ರತೆ ಬದಲಾದರೆ ರಾಷ್ಟ್ರನಿಷ್ಟೆಯೂ ಬದಲಾಗುತ್ತದೆಂಬುದು (ಪ್ರಪಂಚ ಮಟ್ಟದಲ್ಲಿ) ಅಪ್ರಿಯ ಸತ್ಯ.
          ಪ್ರಪಂಚ ಮಟ್ಟದಲ್ಲಿ ಎಂಬ ಪದಗಳನ್ನು ಉಪಯೋಗಿಸಿದೆ. ಹೌದು. ಆಗಿದೆ. ಆಗುತ್ತಿದೆ.ಮತ್ತು ಆಗುತ್ತದೆ!!! ಪಾಕಿಸ್ತಾನ-ಬಾಂಗ್ಲಾ ದೇಶ ತೆಗೆದುಕೊಳ್ಳಿ. ಮೊದಲು ಭಾರತದ ಒಂದು ಭಾಗವಾಗಿದ್ದವು. ಇಂದು? ಹಿಂದೂಗಳು ಕಡಿಮೆಯಿದ್ದ ಆ ಪ್ರದೇಶಗಳು ಭಾರತದಿಂದ ಬೇರೆಯೇ ಆದವು. ಅಂದು ಅಶ್ವಘೋಷ ದೊಡ್ಡ ಕಂಠದಿಂದ ಹಾಡಿದ ಪೇಶಾವರ ಇಂದು ಏನಾಗಿದೆ? (ಪರಸ್ಪರ ಹೊಡೆದಾಡುವ-ಬಡಿದಾಡುವ ಜನರ ಗೂಡಾಗಿದೆ!!). ಮುಸ್ಲಿಂ ಬಹುಸಂಖ್ಯಾತ ಇಂಡೋನೇಷ್ಯಾದಲ್ಲಿ ಏನಾಯಿತು? ಆ ದೇಶದ ಒಂದು ಭಾಗವಾಗಿದ್ದ (ಮಿಷನರಿಗಳ ಕೃಪೆಯಿಂದ) ಕ್ರೈಸ್ತ ಬಹುಸಂಖ್ಯಾತವಾಗಿದ್ದ ಈಸ್ಟ್ ಟಿಮೋರ್ ಪ್ರದೇಶ ಇಂದು ಹೊಸದೇಶವಾಗಿದೆ. ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ಗಲಬೆ ಪೀಡಿತ ಈಸ್ಟ್ ಟಿಮೋರ್ ನಿಂದ ಇಂಡೋನೇಷ್ಯ ಸೇನೆ ಹೊರಬಂದು ಕ್ರೈಸ್ತರೇ ಬಹುಸಂಖ್ಯಾತರಾದ ಹೊಸ ದೇಶ ಸೃಷ್ಟಿಯಾಯಿತು. (ಇಡೀ ಏಷ್ಯಾದಲ್ಲಿ ಇರುವುದು ಎರಡೇ ಕ್ಯಾಥೊಲಿಕ್ ಕ್ರೈಸ್ತ ಬಹುಸಂಖ್ಯಾತ ದೇಶಗಳು-ಈಸ್ಟ್ ಟಿಮೋರ್ ಮತ್ತು ಪಿಲಿಪ್ಪೈನ್ಸ್). ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೇನೆಂದರೆ ಹಿಂದೂ ಬಹುಸಂಖ್ಯಾತ ಬಾಲಿ ದ್ವೀಪ ಇಂಡೋನೇಷ್ಯಾದ ಭಾಗವಾಗೇ ಇದೆ. ಅಲ್ಲಿ ಪ್ರತ್ಯೇಕತಾ ಚಳುವಳಿಗಳು ಇಲ್ಲ!!! ಥಾಯ್ಲಂಡ್ನಲ್ಲೂ ಮುಸ್ಲಿಮ್ಮರು ಹೆಚ್ಚಾಗಿರುವ ಮಲೇಶಿಯಾಕ್ಕೆ ತಾಗಿರುವ ದಕ್ಷಿಣ ಭಾಗದಲ್ಲಿ ಪ್ರತ್ಯೇಕತಾ ಹೋರಾಟ. ಕ್ರೈಸ್ತ ಬಹುಸಂಖ್ಯಾತ ಪಿಲಿಪ್ಪೈನ್ಸ್ ನಲ್ಲೂ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಕಿರಿಕಿರಿ. ಹೇಗೆ ಜನಮತಸಾಂದ್ರತೆ ಬದಲಾದಂತೆ ರಾಷ್ಟ್ರನಿಷ್ಟೆ ಬದಲಾಗುತ್ತದೆ ಗಮನಿಸಿ!! 
                ಹೌದು. ಹೌದು. ಏನೂ ಮಾಡೋಕ್ಕಾಗಲ್ಲ ಬಿಡಿ.- ಎಂಬುದೇ ನಿಮ್ಮ ಅಭಿಪ್ರಾಯವಾದರೆ ಜಗತ್ತಿನ ನಾಳಿನ ದೊಡ್ಡಣ್ಣ ಚೀನಾದ ಕಡೆ ನೋಡಿ. ನಮ್ಮ ಕಶ್ಮೀರದ ಉತ್ತರಕ್ಕಿರುವ ಕ್ಸಿಕಿಯಾಂಗ್ (Xinjiang-ಇದರ ಉಚ್ಚಾರ ಕನ್ನಡದಲ್ಲಿ ಬರೆಯುವುದು ಕಷ್ಟ!!) ಪ್ರದೇಶ ಚೀನಾದಲ್ಲಿ ಮುಸ್ಲಿಮ್ಮರು ಹೆಚ್ಚಿರುವ ಪ್ರದೇಶ. ಸಮುದ್ರ-ಹಡಗುಗಳ ಮೂಲಕ ವ್ಯಾಪಾರ-ವಹಿವಾಟು ಆರಂಭವಾಗುವುದಕ್ಕೆ ಮೊದಲು ಚೀನಾ ಮತ್ತು ಯೂರೋಪ್ ಮಧ್ಯೆ ವಹಿವಾಟು ಈ ಪ್ರಾಂತ್ಯದ ಮೂಲಕವೇ ನಡೆಯುತ್ತಿತ್ತು. (ಈ ದಾರಿಗೆ ರೇಷ್ಮೆ ಹೆದ್ದಾರಿ (Silk Road) ಎಂದೇ ಕರೆಯುತ್ತಿದ್ದರು). ಟರ್ಕಿ ಭಾಷೆ ಮಾತಾಡುವ ವೀಗುರ್ ಮುಸ್ಲಿಮ್ಮರು ಲಕ್ಷ ಲಕ್ಷ ಸಂಖ್ಯೆಯಲ್ಲಿ ನೋಡಲು ಬಂಜರು ಭೂಮಿಯಂತೆ ಕಾಣುವ ಎತ್ತರ ಬೆಟ್ಟಗಳಿಂದ ಸುತ್ತುವರೆದ ಈ ಕ್ಸಿಕಿಯಾಂಗ್ ಪ್ರದೇಶದಲ್ಲಿ ವಾಸಿಸುತ್ತಾರೆ. (ಬಹುಶಃ ಟರ್ಕಿಯಿಂದ ಬಂದು ಅಲ್ಲಿ ಮೊದಲು ವಾಸಿಸುತ್ತಿದ್ದ ಅಹಿಂಸಾವಾದಿ ಬೌದ್ದರನ್ನು ಸುಲಭದಲ್ಲಿ ತರಿದು ಹಾಕಿ ನೆಲೆಗೊಂಡ ಜನಾಂಗವಿರಬಹುದು). ಎರೆಡುಬಾರಿ ಸ್ವಾತಂತ್ರ ಘೋಷಿಸಿಕೊಂಡರೂ ಚೈನಾದಲ್ಲಿ ಮಾವೋವಾದಿ ಕಮ್ಯುನಿಸ್ಟ್ ಪಾರ್ಟಿ ಬಲವಾದಂತೆ ಸೈನಿಕ ಕಾರ್ಯಾಚರಣೆಯಿಂದಾಗಿ ಕ್ಸಿಕಿಯಾಂಗ್ ವೀಗುರ್ ಅಟಾನಾಮಸ್ ರೀಜನ್ ಚೀನಾದ ಒಂದು ಪ್ರಾಂತ್ಯವಾಗಿ ವಿಲೀನವಾಯಿತು. ಅದಾಗುತ್ತಿದ್ದಂತೆ ನಡೆದಿದ್ದೇ ಚೀನಾದ ದೂರದೃಷ್ಟಿಯುಳ್ಳ ನಾಯಕರಿಂದ ನಡೆದ ಜನಮತಸಾಂದ್ರತೆ ಬದಲಾವಣೆಯ ಪ್ರಯತ್ನ!!!
                 ಮಾವೋ ಕಾಲದಲ್ಲಿ ಚೀನಾದ ಮುಖ್ಯ ಭಾಗದಿಂದ ರೈತರನ್ನ, ಸೈನಿಕರನ್ನ ಹಾಗೂ ಖೈದಿಗಳನ್ನ ತಂದು ಗಡಿ ಕಾವಲು ಕಾಯುತ್ತ ವ್ಯವಸಾಯ ಮಾಡುವ  ಕಾರ್ಯಕ್ರಮವೊಂದನ್ನು ರೂಪಿಸಲಾಯಿತು!!! (Xinjiyang Production and Construction Corps). ಅದರಂತೆ ೧೯೫೪ರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರ ಮೊದಲ ತಂಡ ಕ್ಸಿಕಿಯಾಂಗ್ ತಲುಪಿತು. ಅದರಲ್ಲಿ ಹೆಚ್ಚಿನ ಜನರು ಸೈನಿಕರೇ ಆಗಿದ್ದರು. ಕ್ಸಿಕಿಯಾಂಗ್ ರಾಜಧಾನಿ ಉರುಂಕಿಗೆ (Urumqi) ಮುಖ್ಯ ಭೂ ಬಾಗದೊಂದಿಗೆ ರೈಲು ಸಂಪರ್ಕವೆರ್ಪಟ್ಟಮೇಲಂತೂ ಜನ ದಟ್ಟಣೆಯ ಚೈನಾ ಮುಖ್ಯ ಬಾಗದಿಂದ ಜನ ಹರಿದುಬರಲಾರಂಬಿಸಿದರು. ನಂತರ ನಡೆದ ಸಂಶೋದನೆಗಳು ಕ್ಸಿಕಿಯಾಂಗ್ ಮೇಲ್ಭಾಗದಲ್ಲಿ ಮಾತ್ರ ಬಂಜರು ಭೂಮಿ-ನೆಲದಾಳದಲ್ಲಿ ಸಂಪತ್ಬರಿತವಾಗಿದೆ-ಎಂದು ಬಹಿರಂಗಪಡಿಸಿದ ಮೇಲಂತೂ ಬೀಜಿಂಗಿನ ಪಶ್ಚಿಮದ ಅಭಿವೃದ್ದಿ (Develop the West) ನೀತಿ ಅನ್ವಯ ನೂರಾರು ಕಂಪನಿಗಳು, ಕೆಲಸಗಾರರು ಕ್ಸಿಕಿಯಾಂಗ್ ಕಡೆ ಹರಿದು ಬಂದರು. (ಇಂದು ಚೀನಾದ ೪೦% ಕಲ್ಲಿದ್ದಿಲು, ೨೧% ನೈಸರ್ಗಿಕ ಅನಿಲ ಹಾಗೂ ೧೭% ತೈಲ ನಿಕ್ಷೇಪಗಳು ಈ ಬಂಜರು ಭೂಮಿಯಡಿಯಿದೆ!!! ತೈಲ ಹಾಗೂ ಅನಿಲ ದೊಡ್ಡ ಪೈಪ್ ಗಳಲ್ಲಿ ಶಾಂಘೈ ಕಡೆ ಸತತವಾಗಿ ಹರಿಯುತ್ತಿವೆ)  ಪರಿಣಾಮ? ೧೯೪೧ ರಲ್ಲಿ ಇಡೀ ಕ್ಸಿಕಿಯಾಂಗ್ ನಲ್ಲಿ ಕೇವಲ ೫% ಇದ್ದ ಸಾಂಪ್ರದಾಯಕ ಹ್ಯಾನ್ ಚೈನೀಯರ ಸಂಖ್ಯೆ ಇಂದು ೩೯%. ಅಂದು ೭೫% ಇದ್ದ ವೀಗುರ್ ಮುಸ್ಲಿಮ್ಮರ ಸಂಖ್ಯೆ ಇಂದು ೪೬%!!!. ರಾಜಧಾನಿ ಉರುಂಕಿಯಲ್ಲಂತೂ ವೀಗುರ್ ಮುಸಲ್ಮಾನರು ಅತಿ ಅಲ್ಪಸಂಖ್ಯಾತರು. ಕೇವಲ ೧೨%. ಜನಮತಸಾಂದ್ರತೆ ಬದಲಾವಣೆಯ ಪ್ರಯತ್ನ ಫಲ ಕೊಟ್ಟಿದೆ!!! ಪ್ರತ್ಯೇಕತೆಗಾಗಿ ಕ್ಸಿಕಿಯಾಂಗ್ ನಲ್ಲಿ ಅಶಾಂತಿ ಉಂಟಾದರೆ ಹ್ಯಾನ್ ಚೈನೀಯರು ಸಹಜವಾಗಿ ಭದ್ರತಾಪಡೆಗಳ ಜತೆ ಕೈ ಜೋಡಿಸುತ್ತಾರೆ. ಹೋದವರ್ಷ ನಡೆದ ಪ್ರತ್ಯೇಕತಾ ಚಳುವಳಿಯನ್ನು ಕೆಲವೇ ಕೆಲವು ದಿನಗಳಲ್ಲಿ ಚೈನಾ (ಸುಲಭವಾಗಿ) ಅಡಗಿಸಿತು!!! (ಮುಸ್ಲಿಂ ಉಗ್ರವಾದದ ವಿರುದ್ದ ಪ್ರಪಂಚಾದ್ಯಂತ ಉಂಟಾಗಿರುವ ಅಸಹನೆ ಚೀನಾಕ್ಕೆ ವರವಾಗಿದೆ)
             ಆದರೆ ನಮ್ಮ ಕಾಶ್ಮೀರದಲ್ಲಿ??? ವಿಭಜನೆಯ ನಂತರ ಗುಡ್ಡಗಾಡು ಜನರೊಂದಿಗೆ ಪಾಕಿಸ್ತಾನ ಸೈನ್ಯ ಕಶ್ಮೀರದ ಮೇಲೆ ಆಕ್ರಮಣಕ್ಕೆ ಮುಂದಾದಾಗ ರಾಜ ಹರಿಸಿಂಗ್ ಭಾರತಕ್ಕೆ ಓಡಿಬಂದ. ಬೇಷರತ್ ಸಂಪೂರ್ಣ ವಿಲೀನಕ್ಕೆ ಸಹಿ ಹಾಕಿಸುವ ಬದಲು ತಾತ್ಕಾಲಿಕ ಒಪ್ಪಂದ ಮಾಡಿಕೊಂಡು ಅಲ್ಲಿಗೆ ಸೈನ್ಯ ಕಳಿಸಲಾಯಿತು. ಆ ಸೈನ್ಯ ಆಕ್ರಮಣಕಾರರನ್ನು ಕಶ್ಮೀರದಿಂದ ಸಂಪೂರ್ಣ ಹೊರಗಟ್ಟುವ ಮೊದಲೇ ಅಂತರಾಷ್ಟ್ರೀಯ ಶಾಂತಿದೂತನಾಗುವ ಹಪಹಪಿಕೆಯ ನಮ್ಮ ನಾಯಕರು ಕದನವಿರಾಮ ಘೋಷಿಸಿ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಒಯ್ದೊಪ್ಪಿಸಿದರು!!! (ಇಂದಿಗೂ ಆ ಪ್ರದೇಶ ಪಾಕ್ ನಲ್ಲಿ ಆಜಾದ್ ಕಶ್ಮೀರವಾಗಿದೆ). ನಂತರ ಪಾಕಿಸ್ತಾನದೊಡನೆ ನಡೆದ ಮತ್ತೊಂದು ಯುದ್ದದಲ್ಲಿ ಲಕ್ಷಕ್ಕೂ ಹೆಚ್ಚು ಪಾಕ್ ಸೈನಿಕರು ನಮ್ಮ ವಶದಲ್ಲಿದ್ದರೂ ಅವರಿಗೆ ಪ್ರತಿಯಾಗಿ ಕಳೆದುಕೊಂಡ ಕಶ್ಮೀರದ ಭಾಗಗಳನ್ನು ಪಡೆಯಲು ನಮ್ಮ ನಾಯಕರು ಸಫಲರಾಗಲಿಲ್ಲ.
       ಅಲ್ಲಿ ಚೀನಾ ತನ್ನ ಮಾಜಿ ಸೈನಿಕರನ್ನು ಕ್ಸಿಕಿಯಾಂಗ್ಗೆ ಕಳಿಸಿದರೆ ಇಲ್ಲಿ ಭಾರತದ ಮುಖ್ಯಭೂಬಾಗದಿಂದ ಜನ ಕಾಶ್ಮೀರದಲ್ಲಿ ಜಮೀನು ಕೊಂಡು ನೆಲಸಲು ಅವಕಾಶ ನೀಡದ ೩೭೦ನೇ ವಿದಿ ಇನ್ನೂ ಜಾರಿಯಲ್ಲಿದೆ. (ಭಾರತದ ರಾಷ್ಟ್ರಪತಿಯೂ ಇಲ್ಲಿ ಜಮೀನು ಕೊಳ್ಳುವಂತಿಲ್ಲ!!!). ತೊಂಬತ್ತರ ದಶಕದಲ್ಲಿ ಪಾಕ್ ಮೂಲದ ಉಗ್ರಗಾಮಿಗಳ ನುಸುಳುವಿಕೆಯೊಂದಿಗೆ ಕಣಿವೆಯಿಂದ ಹಿಂದುಗಳನ್ನು ಹಿಂಸಿಸಿ ಹೆದರಿಸಿ ಹೊರಗಟ್ಟಲಾಯಿತು.(ಕಣಿವೆಯನ್ನು ದಾರ್-ಉಲ್-ಇಸ್ಲಾಂ ಮಾಡಲಾಯಿತು). ಇಂದು ಅಲ್ಲಿರುವ ನಮ್ಮ ಸೈನಿಕರಿಗೆ ಸಾಥಿಯಾಗಿ ಅಲ್ಲಿ ಯಾರಿದ್ದಾರೆ?? ಸೈನಿಕರನ್ನು ಬಡಿಯುತ್ತಿದ್ದಾರೆ. ತಾಳ್ಮೆ ಕಳೆದುಕೊಳ್ಳುವ ಸೈನಿಕರೂ ಗುಂಡು ಹಾರಿಸುತ್ತಾರೆ. ಅಮಾಯಕರು ಸಾಯುತ್ತಾರೆ. ಕ್ಸಿಕಿಯಾಂಗ್ ನ ಸಂಪತ್ತನ್ನು ಚೀನಾ ತನ್ನ ಕಡೆ ತಿರುಗಿಸುತ್ತಿದ್ದರೆ ನಾವು ರಾಷ್ಟ್ರದ ಸಂಪತ್ತನ್ನು (ಕಣಿವೆಯಲ್ಲಿ ಶಾಂತಿ ನೆಲೆಸುವಂತೆ ಮಾಡಲು) ಅತ್ತ ಹರಿಸುತ್ತಿದ್ದೇವೆ. (ಪ್ರಖ್ಯಾತ ಲೇಖಕಿ ಅರುದಂತಿ ರಾಯ್ ಅದನ್ನು ವರ್ಷಕ್ಕೆ ಎಷ್ಟೋ ಸಾವಿರ ಕೋಟಿ ಎಂದು ಲೆಕ್ಕ ಹಾಕಿ “ಕಾಶ್ಮೀರಕ್ಕೆ ಸ್ವಾತಂತ್ರ್ಯಕೊಟ್ಟು ಭಾರತ ಸ್ವಾತಂತ್ರ್ಯಹೊಂದಲಿ” ಎಂಬ ಲೇಖನವನ್ನು ಔಟ್ ಲುಕ್ ನಲ್ಲಿ ಬರೆದರು!!!) 
     ಈಗ ನಿಮ್ಮ ಅನಿಸಿಕೆ ಹೇಳಿ. ಒಮ್ಮೆ ಜನಮತಸಾಂದ್ರತೆ ಬದಲಾದರೆ ಎಲ್ಲವೂ ಬದಲಾಗುತ್ತದೆ-ಎಂಬ ನನ್ನ ಅನಿಸಿಕೆ ಸರಿಯೇ ತಪ್ಪೇ? ಅಥವಾ ನನ್ನೆಣಿಕೆ ತಪ್ಪೇ???