Friday, August 7, 2009

ಕರ್ನಾಟಕವನ್ನು ಒಡೆಯೋಣ !!!!!.

ಅರೆ !! ಇದೇನಪ್ಪ !!! ಈ ಥರ ಹೇಳ್ತಿದ್ದಾರೆ ಅಂತಾ ಆಶ್ಚರ್ಯನಾ ? ಈ ಲೇಖನ ಪೂರ್ತಿ ಓದಿದಮೇಲೆ ನಿಮ್ಮ ಅಭಿಪ್ರಾಯ ಹೇಳಿ. (ದಯವಿಟ್ಟು ಈ ಲೇಖನವನ್ನ ವಾಟಾಳ್ ನಾಗರಾಜ್ ಗೆ ಕೊಡಬೇಡಿ. ನನ್ನ ತಿಥಿ ಮಾಡ್ತಾರೆ.)

'ಚಿಕ್ಕ ರಾಜ್ಯ, ಚೊಕ್ಕ ರಾಜ್ಯ' ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ನಾಲ್ಕೈದು ವರ್ಷಗಳಿಂದ 'India Today' ವಾರ ಪತ್ರಿಕೆ ಭಾರತದ ರಾಜ್ಯಗಳಿಗೆ ranking ನೀಡುತ್ತಿದೆ. ಆಡಳಿತ, ಆರೋಗ್ಯ, ಕೃಷಿ, ಕಾನೂನು ವ್ಯವಸ್ಥೆ-ಮೊದಲಾದ ವಿಷಯಗಳಲ್ಲಿ ರಾಜ್ಯಗಳ ಸಾದನೆಯ ಮೇಲೆ ಈ ranking ನೀಡಲಾಗುತ್ತದೆ. ಮೇಲಿನ rank ಗಳೆಲ್ಲಾ ಸಣ್ಣ ರಾಜ್ಯಗಳ ಪಾಲಾಗುವುದನ್ನು ಗಮನಿಸಿದ ಪತ್ರಿಕೆ ಈಗ ದೊಡ್ಡ ರಾಜ್ಯಗಳಿಗೆ ಬೇರೆ ಚಿಕ್ಕ ರಾಜ್ಯಗಳಿಗೆ ಬೇರೆ ranking ನೀಡುತ್ತಿದೆ.

ಆಡಳಿತ, ಕಾನೂನು ವ್ಯವಸ್ಥೆ ಪಾಲನೆ-ಇವೆಲ್ಲ ದೊಡ್ಡ ರಾಜ್ಯಗಳಲ್ಲಿ ತುಂಬಾ ಕಷ್ಟ. ರಾಜ ಎಲ್ಲೋ; ಪ್ರಜೆಗಳು ಎಲ್ಲೋ. ಉತ್ತರ ಪ್ರದೇಶವನ್ನೇ ನೋಡಿ. 70 ಕ್ಕೂ ಹೆಚ್ಚು ಜಿಲ್ಲೆಗಳು. ಮಾಯಾವತಿ ಎಷ್ಟು ಜಿಲ್ಲಾಧಿಕಾರಿಗಳ ಹೆಸರು ಜ್ಞಾಪಕ ಇಟ್ಟುಕೊಳ್ಳಲು ಸಾದ್ಯ?
ಆಡಳಿತ ಯಂತ್ರ ಹಳ್ಳ ಹಿಡಿಯುತ್ತೆ. ಅದೇ 10 ರಿಂದ 12 ಜಿಲ್ಲೆಗಳ ಚಿಕ್ಕ ರಾಜ್ಯಗಳಾದರೆ ಆಡಳಿತ ಸುಲಭ.

ಕರ್ನಾಟಕದಲ್ಲಿ ನೋಡಿ. ರಾಜಧಾನಿಯಿಂದ ದೂರವಿರುವ ಉತ್ತರ ಕರ್ನಾಟಕ ಹಿಂದುಳಿದಿದೆ. ಬೀದರ್ ನಿಂದ ಬೆಂಗಳೂರು ಎಷ್ಟು ದೂರ. ಅಲ್ಲಿ ನಡೆಯುವ ಅಭಿವೃದ್ದಿ ಕಾರ್ಯಗಳ ನಿಗವಹಿಸುವುದು ಯಾರು? ಉತ್ತರ ಕರ್ನಾಟಕದಿಂದ ಆರಿಸಿ ಬರುವ ಜನ ಪ್ರತಿನಿದಿಗಳು ಬೆಂಗಳುರಲ್ಲೂ ತಮ್ಮ ಆಸ್ತಿ ಅಭಿವೃದ್ದಿ ಮಾಡಿಕೊಳ್ಳುತ್ತಾರೆಯೇ ವಿನಃ ಸ್ವಕ್ಷೇತ್ರ ಮರೆಯುತ್ತಾರೆ. ಉತ್ತರ ಕರ್ನಾಟಕಕ್ಕೆ ಮಲತಾಯಿ ದೋರಣೆ ಮಾಡುತ್ತಾರೆಂದು ಬೊಬ್ಬಿಡುತ್ತಾರೆ.

ಭಾರತದ ದೊಡ್ಡ ರಾಜ್ಯಗಳನ್ನೆಲ್ಲ ಒಡೆದು ಚಿಕ್ಕ ರಾಜ್ಯಗಳನ್ನಾಗಿ ಯಾಕೆ ಮಾಡಬಾರದು? ಉತ್ತರ ಪ್ರದೇಶವನ್ನು 4 ರಾಜ್ಯಗಳನ್ನಾಗಿ ಮಾಡಬಹುದು. ತಮಿಳು ನಾಡು, ಅಂದ್ರ 3 ಚಿಕ್ಕ ರಾಜ್ಯಗಳನ್ನಾಗಿ ಒಡೆಯಬಹುದು. ಕೇರಳವನ್ನು 2 ರಾಜ್ಯಗಳನ್ನಾಗಿ ಮಾಡಬಹುದು. 50 ರಾಜ್ಯಗಳಾಗಲಿ. ಏನೀಗ?

ಅದೇ ರೀತಿ ಕರ್ನಾಟಕವನ್ನು ಕೂಡ ಮೂರು ಚಿಕ್ಕ ರಾಜ್ಯಗಳಾಗಿ ಒಡೆಯಬಹುದು.
ಉತ್ತರ ಕರ್ನಾಟಕ
ದಕ್ಷಿಣ ಕರ್ನಾಟಕ
ಮಲೆನಾಡು ಮತ್ತು ಕರಾವಳಿ ಕರ್ನಾಟಕ.
ಜವಾಬ್ದಾರಿ ಬೆನ್ನಮೇಲೆ ಬಿದ್ದರೆ ಎಲ್ಲ ಮುಂದೆ ಬರುತ್ತಾರೆ. ಇಲ್ಲದಿದ್ದರೆ ಎಲ್ಲಿರುತ್ತಾರೋ ಅಲ್ಲೇ ಇರುತ್ತಾರೆ.

ನಿವೆನಂತಿರಿ? ಉತ್ತರ ಕರ್ನಾಟಕ ಮತ್ತು ಮಲೆನಾಡು ಮತ್ತು ಕರಾವಳಿ ಕರ್ನಾಟಕಕ್ಕೆ ರಾಜಧಾನಿಗಳು ಯಾವುದು ಆಗಲಿ?