Tuesday, March 17, 2015

ಡಾರ್ಕ್ ಮ್ಯಾಟರ್(??) ಹಾಗೂ ಡಾರ್ಕ್ ಎನರ್ಜಿಯ (???) ವಿಸ್ಮಯವೀ ವಿಶ್ವ!!!!

            ಈ ಬರಹ ಅನೇಕರಿಗೆ ಸಖತ್ ಬೋರ್ ಮಗಾ ಅನ್ನಿಸಬಹುದು! ಆದರೆ ನಿಮ್ಮಲ್ಲಿ ಕೆಲವರಿಗಾದರೂ-ಕೊನೆಯವರೆಗೂ ತಾಳ್ಮೆಯಿಂದ ಈ ಲೇಖನ ಓದಿದಮೇಲೆ-ವರ್ಷದಲ್ಲಿ ಮೂರ್ನಾಕುಬಾರಿಯಾದರೂ-ಕತ್ತೆತ್ತಿ ರಾತ್ರಿ ಮಿನುಗುತ್ತಿರುವ ನಕ್ಷತ್ರಗಳನ್ನ ನೋಡಿದಾಗ-ನನ್ನ ಈ ಬ್ಲಾಗ್ ಬರಹ ಮತ್ತೊಮ್ಮೆ ಖಂಡಿತಾ ಜ್ಞಾಪಕಕ್ಕೆ ಬರುತ್ತದೆ. ಒಂದೈದು ನಿಮಿಷ ನಿಮ್ಮನ್ನು ಯೋಚನೆಗೀಡು ಮಾಡುತ್ತದೆ.ಅದೇ ಸಮಯದಲ್ಲಿ, ಈ ಬರಹವನ್ನು ಜೊತೆಗಿರುವವರ ಜೊತೆಗೂ ಹಂಚಿಕೊಂಡು ಅವರೆಲ್ಲರೂ ಒಂದೈದು ನಿಮಿಷ  ಯೋಚಿಸುವಂತಾಗುತ್ತದೆ. 
ಆಂಡ್ರೋಮಿಡ ಗ್ಯಾಲಕ್ಸಿ
             ಈ ವಿಶ್ವವನ್ನೊಮ್ಮೆ ನೋಡಲು ಪ್ರಯತ್ನಪಡುವ. ಅಗಾಧ ಜಲರಾಶಿಯ ನಮ್ಮ ಈ ಭೂಮಿ. ಅದರಾಚೆ ಗ್ರಹಗಳು. ಭೂಮಿಗಿಂತ ಎಷ್ಟೋ ಪಟ್ಟು ದೊಡ್ಡ ಗುರು,ಶನಿ,ಯುರೇನಸ್ ಗ್ರಹಗಳು. ಭೂಮಿಗಿಂತ ಅದೆಷ್ಟೋ ಪಟ್ಟು ದೊಡ್ದವಿರುವ, ಬೆಂಕಿಯ ಕುಲುಮೆಯಂತಿರುವ ಸೂರ್ಯ. ಇವೆಲ್ಲಾ ಸೇರಿ ಸೌರವ್ಯೂಹ. ಆಚೆ? ಈ ಸೂರ್ಯನು ಆಕಾಶಗಂಗೆ (Milky way) ಎಂಬ ಗ್ಯಾಲಕ್ಸಿಯಲ್ಲಿ ಯಕಶ್ಚಿತ್ ಒಂದು ನಕ್ಷತ್ರ!! ಅಂದಾಜು ಒಂದು ಲಕ್ಷ ಬೆಳಕಿನವರ್ಷ ಅಗಲವಿರುವ ಸಿಂಬೆಯಾಕಾರದ ನಮ್ಮ ಗ್ಯಾಲಾಕ್ಸಿಯಲ್ಲಿ ಅಂದಾಜು ಎರಡುನೂರು ಬಿಲಿಯನ್ ಗೂ ಹೆಚ್ಚು ನಕ್ಷತ್ರಗಳಿವೆ!!! ಗ್ಯಾಲಕ್ಸಿ ಕೇಂದ್ರದ ಸುತ್ತ ಅಸಾದಾರಣಾ ವೇಗದಲ್ಲಿ ನಾಲ್ಕು ಬಾಹುಗಳು ಸುತ್ತುತ್ತಿವೆ. (ಕೆಲವೊಮ್ಮೆ ರಾತ್ರಿಯಲ್ಲಿ ವಿದ್ಯುತ್ ಬೆಳಕು ಕಡಿಮೆಯಿರುವ ಜಾಗಗಳಲ್ಲಿ ಅದರ ಒಂದು ಬಾಹು ಒತ್ತೊತ್ತಾದ ನಕ್ಷತ್ರಗಳ ಪಟ್ಟಿಯಂತೆ ಕಾಣುತ್ತದೆ. ಅದಕ್ಕೇ ನಮ್ಮ ಗ್ಯಾಲಕ್ಸಿಗೆ ಮಿಲ್ಕಿ ವೆ ಎಂದು ಹೆಸರು).  ಅಬ್ಬಾ!!! ಆಕಾಶಗಂಗೆಯಾಚೆ??
ಆಕಾಶಗಂಗೆ ಗ್ಯಾಲಕ್ಸಿ
             ನಮ್ಮ ಆಕಾಶಗಂಗೆ ಗ್ಯಾಲಕ್ಸಿಯಿರುವುದು ಲೋಕಲ್ ಗ್ರೂಪ್ ಎಂಬ 54ಕ್ಕೂ ಹೆಚ್ಚು ಗ್ಯಾಲಕ್ಸಿಗಳಿರುವ ಗ್ಯಾಲಕ್ಸಿ ಗುಚ್ಛದಲ್ಲಿ. ಈ ಗ್ಯಾಲಕ್ಸಿ ಗುಚ್ಛದಲ್ಲಿ ಎರಡು ನೂರು ಬಿಲಿಯನ್ಗೂ (1ಬಿಲಿಯನ್=1,000,000,000) ಹೆಚ್ಚು ನಕ್ಷತ್ರಗಳಿರುವ  ನಮ್ಮ ಆಕಾಶಗಂಗೆ ಗ್ಯಾಲಕ್ಸಿಯಲ್ಲದೆ  ಕೇವಲ 40-50 ಬಿಲಿಯನ್ ನಕ್ಷತ್ರಗಳಿರುವ ಅನೇಕ ಚಿಕ್ಕಪುಟ್ಟ ಗ್ಯಾಲಕ್ಸಿಗಳಿವೆ. ಇದೇ ಗುಚ್ಛದ ಇನ್ನೊಂದು ದೊಡ್ಡ ಗ್ಯಾಲಕ್ಸಿ ಆಂಡ್ರೋಮಿಡ’. ಇದು ನಮ್ಮ ಆಕಾಶಗಂಗೆ ಗ್ಯಾಲಕ್ಸಿಗಿಂತಾ ದೊಡ್ಡದು. ಅಂದಾಜು ಎರಡು ಲಕ್ಷ ಬೆಳಕಿನವರ್ಷದಷ್ಟು ವಿಸ್ತಾರವಿದೆ. ನಕ್ಷತ್ರಗಳೋ ಅಂದಾಜು ಒಂದು ಟ್ರಿಲಿಯನ್!!! (1 ಟ್ರಿಲಿಯನ್=1,000,000,000,000). ಲೋಕಲ್ ಗ್ರೂಪ್ ನಲ್ಲಿರುವ ಗ್ಯಾಲಕ್ಸಿಗಳು ಕೇಂದ್ರದ ಸುತ್ತ ಸುತ್ತುತ್ತಿರುತ್ತವೆ. (ಹಾಗೆ ಸುತ್ತುತ್ತಿರುವ ಆಂಡ್ರೋಮಿಡ ಗ್ಯಾಲಕ್ಸಿ ನಮ್ಮ ಆಕಾಶಗಂಗೆ ಸನಿಹಕ್ಕೆ ಬರುತ್ತಿದೆಯಂತೆ. ಮೂರುವರೆ ಬಿಲಿಯನ್ ವರ್ಷಗಳ ನಂತರ ಅವೆರಡೂ ಒಂದಕ್ಕೊಂದು ಕೂಡಿಕೊಂಡು ಒಂದೇ ಬೃಹತ್ ಗ್ಯಾಲಕ್ಸಿಯಾಗುತ್ತದಂತೆ!!!). ಅಬ್ಬಾ. ಅದೆಷ್ಟು ನಕ್ಷತ್ರಗಳು! 
ಲೋಕಲ್ ಗ್ರೂಪ್ ಗ್ಯಾಲಕ್ಸಿ ಗುಚ್ಛ
                ನಮ್ಮ ಆಕಾಶಗಂಗೆ ಹಾಗೂ ಐವತ್ತಕ್ಕೂ ಹೆಚ್ಚು ಗ್ಯಾಲಕ್ಸಿಗಳಿರುವ ಈ ಲೋಕಲ್ ಗ್ರೂಪ್ ಎಂಬ ಗ್ಯಾಲಕ್ಸಿ ಗುಚ್ಛವು ವರ್ಗೋ ಮಹಾ ಗ್ಯಾಲಕ್ಸಿ ಗುಚ್ಛದ ಒಂದು ಭಾಗವಷ್ಟೇ. ನಮ್ಮ ಲೋಕಲ್ ಗ್ರುಪ್ ಅಲ್ಲದೆ ಅಂದಾಜು ನೂರು ಗ್ಯಾಲಕ್ಸಿ ಗುಚ್ಛಗಳು ಈ ಮಹಾ ಗುಚ್ಛದಲ್ಲಿ ಸೇರಿದೆ. ಅಂದರೆ ಅಂದಾಜು ನೂರಾಹತ್ತು ದಶಲಕ್ಷ ಬೆಳಕಿನವರ್ಷ ಅಗಲವಿರುವ ಈ ಮಹಾ ಗುಚ್ಛದಲ್ಲಿ ಕೆಲವು ಸಾವಿರ ಗ್ಯಾಲಕ್ಸಿಗಳಿವೆ!!! ಆಶ್ಚರ್ಯ ಇಷ್ಟಕ್ಕೆ ನಿಲ್ಲುವುದಿಲ್ಲ. ಸಾವಿರಾರು ಗ್ಯಾಲಕ್ಸಿಗಳನ್ನ ಹೊಂದಿರುವ ವರ್ಗೋ ಮಹಾಗುಚ್ಛವು ಲಾನಿಯಾಕಿಯಾ ಎಂಬ ಬೃಹತ್ ಗ್ಯಾಲಕ್ಸಿಗುಚ್ಛ ದ ಒಂದು ಭಾಗವಷ್ಟೇ!!!! ಅಂದಾಜು 1,00,000 ಗ್ಯಾಲಕ್ಸಿಗಳು ಈ ಲಾನಿಯಾಕಿಯಾ ಬೃಹತ್ ಗ್ಯಾಲಕ್ಸಿ ಗುಚ್ಛದಲ್ಲಿದೆ!!!! ಇದರ ಅಗಲ 52,00,00,000 ಬೆಳಕಿನ ವರ್ಷಗಳಷ್ಟು (ಒಂದು ಬೆಳಕಿನ ವರ್ಷ=ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರ=10,00,00,00,00,000 ಕಿ.ಮೀ).  ವಿಶ್ವದ ಅಘಾದತೆಯ ಈ ವಿವರಗಳನ್ನ ಬಿಚ್ಚಿಟ್ಟರೂ ಇವೆಲ್ಲವೂ ವಿಶ್ವದ ಅತಿಚಿಕ್ಕ ಭಾಗವೊಂದರ ವಿವರಣೆಯಷ್ಟೇ!!!!! ನಮ್ಮ ವಿಶ್ವದಲ್ಲಿ ಲಾನಿಯಾಕಿಯಾದಂತಹ ಅದೆಷ್ಟೋ  ಬೃಹತ್ ಗ್ಯಾಲಕ್ಸಿಗುಚ್ಛಗಳಿವೆ. ಈ ವಿಶಾಲ ವಿಶ್ವದಲ್ಲಿ ಅವು ಎಳೆಗಳು ಹಾಗೂ ಪದರಗಳಂತಿವೆ. ಮದ್ಯ ಖಾಲಿಜಾಗ (=ಸಂಪೂರ್ಣ ಖಾಲಿಜಾಗ ಅಲ್ಲ. ವಿರಳವಾಗಿ ಗ್ಯಾಲಕ್ಸಿಗಳಿರುತ್ತವೆ) ಹೊಂದಿರುವ ಈ ಗ್ಯಾಲಾಕ್ಸಿ ಎಳೆಗಳು ಈ ವಿಶ್ವದ ಅತಿದೊಡ್ಡ ರಚನೆಗಳು!!!!!
ವರ್ಗೋ ಮಹಾ ಗ್ಯಾಲಕ್ಸಿ ಗುಚ್ಛ
ಲಾನಿಯಾಕಿಯಾ ಬೃಹತ್ ಗ್ಯಾಲಕ್ಸಿಗುಚ್ಛ 
                 ಅಲ್ಲಿಗೆ ಮುಗಿಯಿತೇ ಈ ವಿಶ್ವದ ವಿವರಣೆ? ಊಹೂ. ಮಿಲಿಯನ್ ಗಟ್ಟಲೆ ಗ್ಯಾಲಾಕ್ಸಿಗಳು ಹಾಗೂ ಟ್ರಿಲಿಯನ್ ಟ್ರಿಲಿಯನ್ ಗಟ್ಟಲೆ ನಕ್ಷತ್ರಗಳಲ್ಲದೆ ನೆಬ್ಯುಲಾಗಳಿವೆ. ನೆಬ್ಯುಲಾಗಳೆಂದರೆ ಗ್ಯಾಲಕ್ಸಿಗಳಲ್ಲಿ ಕೆಲವೆಡೆ ನಕ್ಷತ್ರಗಳ ನಡುವಣ ಇರುವ ಅಂತರಿಕ್ಷದೂಳಿನ ಮೋಡ. ನಕ್ಷತ್ರಗಳು ಹುಟ್ಟುವ ತಾಣ. ಕೆಲವೊಮ್ಮೆ ನೂರಾರು ಬೆಳಕಿನವರ್ಷಗಳಷ್ಟು ವಿಸ್ತಾರವಾಗಿರುತ್ತವೆ. ನೆಬ್ಯುಲಾಗಳಲ್ಲಿ ಕೆಲವೊಂದುಕಡೆ ಗುರುತ್ವಾಕರ್ಷಣ ಕೇಂದ್ರವೊಂದು ಸೃಷ್ಟಿಯಾಗಿ, ಅದರ ಸುತ್ತ ಜಲಜನಕ,ಹೀಲಿಯಂ, ದೂಳುಗಳು ಸುತ್ತಲಾರಂಬಿಸಿ, ಒತ್ತಡ ಹೆಚ್ಚಾದಾಗ ಪರಮಾಣು ವಿದಳನದಿಂದ ಶಕ್ತಿ ಉತ್ಪತ್ತಿಯಾಗಿ ತಾರೆಗಳು ಜನ್ಮತಾಳುತ್ತವೆ. (ಅದರ ಸುತ್ತ ಸುತ್ತುವ ಒಂದಿಷ್ಟು ದೂಳುಗಳು ಗ್ರಹಗಳಾಗುತ್ತವೆ. ನಾವೂ ಹಿಂದೊಮ್ಮೆ ಈ ನೆಬ್ಯುಲಾ ದೂಳಿನ ಒಂದು ಭಾಗ. ಗುರು, ಶನಿ ಹಾಗು ಯುರೇನಸ್ ಗ್ರಹಗಳು ಇನ್ನೂ ಗಟ್ಟಿಯಾಗಿಲ್ಲ. ಬರೀ ಅನಿಲದ ಉಂಡೆಗಳು).
ಈಗಲ್ ನೆಬ್ಯುಲಾ
                 ಅಬ್ಬಾ! ಎಷ್ಟು ಅಗಾದ!! ಎಷ್ಟು ವಿಶಾಲ!!! ಆದರೆ ನಿಮಗೆ ಕಾದಿದೆ ಆಶ್ಚರ್ಯ. ಈ ಮೇಲಿನ ವಿವರಣೆಗಳು-ಬಿಲಿಯನ್,ಟ್ರಿಲಿಯನ್ ಎಂಬ ಅಂಕೆಸಂಖ್ಯೆಗಳು ಮತ್ತು ಆ ಹೆಸರುಗಳನ್ನು ಬಿಟ್ಟರೆ-ಈ ವಿಶ್ವದಲ್ಲಿ ಲೆಕ್ಕವಿಲ್ಲದಷ್ಟು ನಕ್ಷತ್ರಗಳಿರುವ ವಿಷಯ-ಬಹುಶಃ ನಿಮಗೆಲ್ಲರಿಗೂ ಗೊತ್ತಿರುವಂತದೇ. ಆದರೆ ಇತ್ತೀಚೆಗೆ ನನಗೆ ಗೊತ್ತಾದ ವಿಷಯ-ಗೊತ್ತಾಗಿ ಅತಿ ಆಶ್ಚರ್ಯಪಟ್ಟ ವಿಷಯ-ಅದೇನೆಂದರೆ- ಕಾಣುವ, ಹೊಳೆಯುವ ರಾಶಿ ರಾಶಿ ಗ್ಯಾಲಕ್ಸಿಗಳು, ಲೆಕ್ಕವಿಲ್ಲದಷ್ಟು ನಕ್ಷತ್ರಗಳು, ನೆಬ್ಯೂಲಾಗಳು-ಇವುಗಳಲ್ಲದೆ ವಿದ್ಯುತ್ಕಾಂತೀಯ ತರಂಗಗಳನ್ನ ಸೂಸುವ ಕಪ್ಪು ರಂದ್ರಗಳು (=ಅವಸಾನಗೊಂಡ ಬೃಹತ್ ತಾರೆಗಳು), ಹೌದೋ ಅಲ್ಲವೋ ಎಂದು ಮಿನುಗುವ ಕುಬ್ಜ ತಾರೆಗಳು-ಇವನ್ನೆಲ್ಲ ವೈಟ್ ಮ್ಯಾಟರ್(ಬಿಳಿ ವಸ್ತು) ಎಂದು ಕರೆಯುತ್ತಾರೆ-ಇವೆಲ್ಲವನ್ನು ಒಟ್ಟುಸೆರಿಸಿದರೂ-ಉಸಿರು ಬಿಗಿಹಿಡಿದು ಓದಿ-ಇಡೀ ವಿಶ್ವದ ಒಟ್ಟು ಪರಿಮಾಣದ ಕೇವಲ 5% ಅಷ್ಟೇ!!!!!!!!. ಮಿನುಗುವ, ಬೆಳಕುಸೂಸುವ ಈ ವೈಟ್ ಮ್ಯಾಟರ್ನ ಅದೆಷ್ಟೋ ಪಟ್ಟು ಅವ್ಯಕ್ತ ವಸ್ತು, ಅವ್ಯಕ್ತ ಶಕ್ತಿ ಈ ವಿಶ್ವದಲ್ಲಿದೆ. ಅದೇ ಡಾರ್ಕ್ ಮ್ಯಾಟರ್ (ಕಪ್ಪು ವಸ್ತು) ಮತ್ತು ಡಾರ್ಕ್ ಎನರ್ಜಿ (ಕಪ್ಪು ಶಕ್ತಿ). ಅದನ್ನ ಸಂಕ್ಷಿಪ್ತವಾಗಿ ವಿವರಿಸುವುದೇ ಈ ಬ್ಲಾಗ್ ಲೇಖನದ ಉದ್ದೇಶ.
                 ಏನಿದು ಕಪ್ಪು ವಸ್ತು??? ವಿಜ್ಞಾನಿಗಳಿಗೆ ಇನ್ನೂ ಒಗಟಾಗಿದೆ. ಗಣಿತಸಿದ್ದಾಂತಪ್ರಕಾರ ಇರಲೇ ಬೇಕು. ಆದರೆ ಇಲ್ಲಿಯವರೆಗೆ ಪ್ರಾಯೋಗಿಕವಾಗಿ ಸಿದ್ದಪಡಿಸಲಾಗಿಲ್ಲ. ನಮ್ಮ ಸೂರ್ಯನು ಆಕಾಶಗಂಗೆಯ ಕೇಂದ್ರದ ಸುತ್ತ ಅಸಾದಾರಣ ವೇಗದಲ್ಲಿ ಸುತ್ತುತ್ತಿದ್ದಾನೆ ಎಂದು ಹಿಂದೆಯೇ ಹೇಳಿದ್ದೇನೆ. ಗ್ಯಾಲಕ್ಸಿಗಳೂ ಕೂಡ ಒಂದು ಗುಚ್ಛದ ಕೇಂದ್ರದ ಸುತ್ತ ಅಪರಿಮಿತ ವೇಗದಲ್ಲಿ ಸುತ್ತುತ್ತಿವೆ. ಗಣಿತಸಿದ್ದಾಂತಗಳ ಪ್ರಕಾರ ಆ ವೇಗಕ್ಕೆ ಅವೆಲ್ಲೋ ಹೊಗಿರಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಆದುದರಿಂದ-ಅನುಮಾನವಿಲ್ಲದೆ ಎಲ್ಲಾ ಖಗೋಳವಿಜ್ಞಾನಿಗಳ ಅಭಿಪ್ರಾಯ-ಬೃಹತ್ ಪ್ರಮಾಣದ ಅಗೋಚರ ದ್ರವ್ಯರಾಶಿ(Mass)ಯೂ-ಬಿಳಿ ವಸ್ತು ಜೊತೆಗೆ ಇರಲೇಬೇಕು. ವಿಜ್ಞಾನಿಗಳ ಗಣಿತದ ಲೆಕ್ಕಾಚಾರದ ಅಂದಾಜಿನಂತೆ ಬಿಳಿ ವಸ್ತುವಿನ ಐದಾರುಪಟ್ಟು (ಅಂದಾಜು ವಿಶ್ವದ ಒಟ್ಟು ಪರಿಮಾಣದ 26%) ಇರುವ ಈ ಅಗೋಚರ ದ್ರವ್ಯರಾಶಿಯೇ ಕಪ್ಪು ವಸ್ತು(ಡಾರ್ಕ್ ಮ್ಯಾಟರ್)!! ಮಾಮೂಲಿ ಪರಮಾಣು ರಚನೆಗೆ ಹೊರತಾಗಿರುವ ಈ ಅಗೋಚರ ಕಣಗಳು-ಕೆಲವು ವಿಜ್ಞಾನಿಗಳ ಅಂದಾಜಿನಂತೆ-ಪ್ರತಿ ಸೆಕೆಂಡಿಗೂ ನಮ್ಮೆಲ್ಲರ ದೇಹದ ಮೂಲಕ-ಕೋಟ್ಯಾಂತರ ಸಂಖ್ಯೆಯಲ್ಲಿ ಹಾದುಹೋಗುತ್ತಿದೆ. ಪ್ರಾಯೋಗಿಕವಾಗಿ ಡಾರ್ಕ್ ಮ್ಯಾಟರ್ ಇರುವಿಕೆಯನ್ನು ಸಾಬೀತುಪಡಿಸಲು ವಿಜ್ಞಾನಿಗಳು ಹರಸಾಹಸಪಡುತ್ತಿದ್ದಾರೆ. ಬಾಹ್ಯಾಕಾಶದ  ಅಂತರಾಷ್ಟ್ರೀಯ ಅಂತರಿಕ್ಷ ತಾಣದಲ್ಲಿನ ಆಲ್ಪಾ ಕಾಂತೀಯ ಸ್ಪೆಕ್ಟ್ರೋಮೀಟರ್ ಹಾಗೂ ಇನ್ಯಾವುದೋ ಸಾವಿರಾರು ಅಡಿ ಆಳದ ಗಣಿಯಲ್ಲಿ ಏನೋ ಡಿಟೆಕ್ಟರ್-ಊಹೂ. ಇನ್ನೂ ಸಿಕ್ಕಿಲ್ಲ. ಫ್ರಾನ್ಸ್ ನ ನೆಲದಾಳದ ಸುರಂಗದಲ್ಲಿ ಈ ವರ್ಷ ನಡೆಯಲಿರುವ  ಪ್ರಯೋಗಗಳಲ್ಲಿ ಒಂದಾದರೂ ಕಪ್ಪು ವಸ್ತುಕಣವನ್ನು ಪತ್ತೆಹಚ್ಚುವ  ಗುರಿ ಹೊಂದಿದ್ದಾರೆ ವಿಜ್ಞಾನಿಗಳು.  
                ಇನ್ನು ಕಪ್ಪುಶಕ್ತಿ(ಡಾರ್ಕ್ ಎನರ್ಜಿ) ಬಗ್ಗೆ. ಇದು ಕಪ್ಪುವಸ್ತುಗಿಂತ ನಿಗೂಡ!!! ಕೆಲವು ವಿಜ್ಞಾನಿಗಳ ಪ್ರಕಾರ ಭೌತಶಾಸ್ತ್ರದ ಅತಿದೊಡ್ಡ ಸಮಸ್ಯೆ’. ಕೆಲವರ ಪ್ರಕಾರ ಡಾರ್ಕ್ ಎನರ್ಜಿಯು ಮನುಕುಲದ ವಿಜ್ಞಾನಕ್ಕೇ ಮಹಾನ್ ಒಗಟು!!! ಆದರೆ ಇರುವುದು ಹೌದೇಹೌದು. ಏನು ಆದಾರ? ಆದಾರ ಇಲ್ಲಿದೆ-ಬಹುಶಃ ನಿಮಗೆ ಗೊತ್ತಿರಬಹುದು. ವಿಶ್ವ ಹಿಗ್ಗುತ್ತಿದೆ. ಪ್ರತಿ ಗ್ಯಾಲಾಕ್ಸಿಗಳೂ ಪರಸ್ಪರ ದೂರ ಸರಿಯುತ್ತಿವೆ. 5% ಇರುವ ವೈಟ್ ಮ್ಯಾಟರ್ ಹಾಗೂ ಅದರ ಐದಾರು ಪಟ್ಟು ಇರುವ ಬ್ಲಾಕ್ ಮ್ಯಾಟರ್ ಗಳು ಅವುಗಳ ದ್ರವ್ಯರಾಶಿ ಹಾಗೂ ದ್ರವ್ಯರಾಶಿಯಿಂದಾಗುವ ಗುರುತ್ವಾಕರ್ಷಣ ಬಲ-ಇವುಗಳಿಂದಾಗಿ ವಿಶ್ವ ಇನ್ನೂ ಕುಗ್ಗಬೇಕಿತ್ತು. ಆದರೆ ತದ್ವಿರುದ್ದ ನಡೆಯುತ್ತಿದೆ!!! ಕಾರಣ ಅವ್ಯಕ್ತ ಶಕ್ತಿ. ಗ್ಯಾಲಕ್ಸಿಗಳನ್ನು ಪರಸ್ಪರ ದೂರತಳ್ಳುತ್ತ ವಿಶ್ವದ ಹಿಗ್ಗುವಿಕೆಗೆ ಕಾರಣವಾಗಿರುವ ಆ ಶಕ್ತಿಯೇ ಡಾರ್ಕ್ ಎನರ್ಜಿ!!!!  ಆದುದರಿಂದ-ಡಾರ್ಕ್ ಎನರ್ಜಿ ಬಗ್ಗೆ ವಿಜ್ಞಾನಿಗಳ ಸದ್ಯದ ವಿವರಣೆ ಎಂದರೆ-ಅವ್ಯಕ್ತ ಅಸಾದಾರಣ ಶಕ್ತಿ. ಯಾವುದು ಈ ವಿಶ್ವದ ಹಿಗ್ಗುವಿಕೆಗೆ ಕಾರಣವಾಗುತ್ತಿದೆಯೋ ಅದು. ಇನ್ನೂ ಒಂದು ವಿಷಯ ವಿಜ್ಞಾನಿಗಳ ಗಮನಕ್ಕೆ ಬಂದಿದೆ. ಅದೇನೆಂದರೆ ವಿಶ್ವ ಇದ್ದಕ್ಕಿದ್ದಂತೆ ಇತ್ತೀಚಿನ (ಮಿಲಿಯನ್/ಬಿಲಿಯನ್) ವರ್ಷಗಳಲ್ಲಿ ವೇಗವಾಗಿ ಹಿಗ್ಗುತ್ತಿದೆ. ಅಂದರೆ ವಿಶ್ವದಲ್ಲಿ ಡಾರ್ಕ್ ಎನರ್ಜಿ ಪರಿಮಾಣ ಹೆಚ್ಚುತ್ತಿದೆ. ವಿಜ್ಞಾನಿಗಳ ಅಂದಾಜಿನಂತೆ ವಿಶ್ವದ ಒಟ್ಟು ಪರಿಮಾಣದ 68%!!!!
                ಅಸ್ಪಷ್ಟ ಕಪ್ಪು ಶಕ್ತಿಯ ಬಗ್ಗೆ ಸ್ವಲ್ಪವಾದರೂ ಅರಿತುಕೊಳ್ಳುವ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಕಪ್ಪು ಶಕ್ತಿಯಿಂದಾಗುತ್ತಿರುವ ವಿಶ್ವದ ಹಿಗ್ಗುವಿಕೆಯ ಪ್ರಮಾಣವನ್ನು ಲೆಕ್ಕಹಾಕುವ  ಪ್ರಯತ್ನದಲ್ಲಿದ್ದಾರೆ. ಮಹಾ ಸ್ಫೋಟದಿಂದ ಈ ವಿಶ್ವ 13.8 ಬಿಲಿಯನ್ ವರ್ಷದ ಹಿಂದೆ ಸೃಷ್ಟಿಯಾಯಿತು. ಅನಂತರದಿಂದ ಅಸ್ಪಷ್ಟ ಗುರಿಯತ್ತ ಹಿಗ್ಗುತ್ತಲೇ ಇದೆ. ಇತ್ತೀಚೆಗೆ ಹಿಗ್ಗುವಿಕೆಯ ವೇಗ ಹೆಚ್ಚುತ್ತಿದೆ. ಬೇರೆ ಬೇರೆ ಕಾಲಘಟ್ಟದಲ್ಲಿ (ಅಂದರೆ 1,2,3 ಇದೇರೀತಿ ಕೆಲ ಬಿಲಿಯನ್ ವರ್ಷಗಳ ಹಿಂದೆ) ಹಿಗ್ಗುವಿಕೆಯ ವೇಗ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ ವಿಜ್ಞಾನಿಗಳು. ತುಂಬಾ ಹಿಂದೆ ವಿಶ್ವದ ಹಿಗ್ಗುವಿಕೆ ಎಷ್ಟಿತ್ತು? ಅನಂತರ ಎಷ್ಟು? ಈಗ ಎಷ್ಟು?-ಎಂಬುದನ್ನು ಅರಿತರೆ ವಿಶ್ವದ ಮೇಲಾಗುತ್ತಿರುವ ಕಪ್ಪು ಶಕ್ತಿಯ ಪ್ರಮಾಣ ಸ್ವಲ್ಪವಾದರೂ ತಿಳಿಯಬಹುದು. ಆದರೆ ಹಿಂದಿನದನ್ನು ತಿಳಿಯುವುದು ಹೇಗೆ??
               ನಮ್ಮಗಳ ವಿಷಯದಲ್ಲಿ ಹಿಂದಿನದನ್ನು ತಿಳಿಯುವುದು ಎಂದರೆ ಹಿಂದೆ ದಾಖಲಾದ ಸಂಗತಿಗಳನ್ನು(ಉದಾ-ಶಾಸನ,ಬರವಣಿಗೆ,ನೆಲದಾಳದಲ್ಲಿ ದೊರೆತ ವಸ್ತುಗಳು-ಇತ್ಯಾದಿ) ತಿರುವಿಹಾಕಿ ಒಂದು ಅಭಿಪ್ರಾಯಕ್ಕೆ ಬರುವುದು ಎಂದರ್ಥವಷ್ಟೇ. ಆದರೆ ಈ ಅಂತರಿಕ್ಷದ ವಿಷಯದಲ್ಲಿ ಒಂದು ಮಜಾ ಇದೆ. ಇಲ್ಲಿ ಹಿಂದೆ ನಡೆದಿದ್ದನ್ನು ತಿಳಿಯುವುದು ಎಂದರೆ ದೂರ ನೋಡುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಎಂದರ್ಥ!!! ನಾವೇ ಈಗ ರಾತ್ರಿ ಹೊರಗೆ ಬಂದು ತಲೆಯೆತ್ತಿ ಆಕಾಶ ನೋಡುತ್ತಿದ್ದೇವೆಂದುಕೊಳ್ಳೋಣ. ನಮಗೆ ಕಾಣುವುದು ಎಂದಿನ ಆಕಾಶ? ಹಾಗೆಂದರೆ?? ಚಂದ್ರ ಹಾಗೂ ಗ್ರಹಗಳನ್ನ ಬಿಟ್ಟರೆ ನಮಗೆ ಕಾಣುವ ಆಕಾಶ ಹಿಂದ್ಯಾವುದೋ ಒಂದು ಕಾಲದ್ದು. ಹಿಂದೆಂದೋ ಆ ನಕ್ಷತ್ರಗಳಿಂದ ಹೊರಟ ಬೆಳಕನ್ನು ನಾವಿಂದು ನೋಡುತ್ತಿರುವುದು. ಅತೀ ಹತ್ತಿರದ ನಕ್ಷತ್ರವೂ ನಾಲ್ಕೂವರೆ ಬೆಳಕಿನವರ್ಷ ದೂರದಲ್ಲಿದೆ. ಹೆಚ್ಚಿನ ನಕ್ಷತ್ರಗಳು ಸಾವಿರಾರು ಬೆಳಕಿನವರ್ಷಗಳ ದೂರದಲ್ಲಿವೆ. ಅಂದರೆ ನಾವು ವರ್ತಮಾನ ಕಾಲದಲ್ಲಿದ್ದರೂ ಭೂತಕಾಲದಲ್ಲಿ ನಡೆದ ಘಟನೆಗಳನ್ನು ನೋಡುತ್ತಿರುತ್ತೇವೆ!!! ಎಷ್ಟೊಂದು ಸೋಜಿಗ!!!! ಇದರರ್ಥ ಅತಿ ದೂರದ್ದನ್ನ  ನೋಡುವ ಸಾಮರ್ಥ್ಯ ಬೆಳೆಸಿಕೊಂಡರೆ ಹಿಂದೆ ನಡೆದಿದ್ದು ಕಾಣುತ್ತದೆ. ಅಂದರಿಷ್ಟೇ-ನಮ್ಮಿಂದ ಎರಡು ಬಿಲಿಯನ್ ಬೆಳಕಿನವರ್ಷ ದೂರದಲ್ಲಿರುವ ಕೆಲವು ಗ್ಯಾಲಕ್ಸಿಗಳನ್ನ ಸತತವಾಗಿ ಅಭ್ಯಸಿಸಿದರೆ ಎರಡು ಬಿಲಿಯನ್ ವರ್ಷಗಳ ಹಿಂದಿನ ವಿಶ್ವದ ಹಿಗ್ಗುವಿಕೆಯ ಪ್ರಮಾಣ ಗೊತ್ತಾಗುತ್ತದೆ. ಇನ್ನೂ ಹಿಂದಿನ ವಿಶ್ವದ ಸ್ಥಿತಿ ತಿಳಿಯಬೇಕಾದರೆ ಮತ್ತೂ ದೂರದ ಗ್ಯಾಲಕ್ಸಿಗಳನ್ನ ನೋಡಬೇಕು!! ಈ ದೂರ ನೋಡುವಿಕೆ
ಬರಿಗಣ್ಣಿನಿಂದ ಎಂದೂ ಅಸಾದ್ಯ. ಇದಕ್ಕಾಗಿಯೇ ದೂರದ ಗ್ಯಾಲಕ್ಸಿಗಳನ್ನ ಗುರುತಿಸಲು, ಅಧ್ಯಯನಮಾಡಲು ಅನೇಕ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಚಿಲಿಯ ಬೆಟ್ಟದ ಮೇಲಿನ ಟೆಲಿಸ್ಕೊಪ್ ಮೇಲೆ ಸ್ಥಾಪಿತವಾಗಿರುವ 570 ಮೆಗಾಪಿಕ್ಸೆಲ್ ಕ್ಯಾಮರಾದಿಂದ 300 ಮಿಲಿಯನ್ ಗ್ಯಾಲಕ್ಸಿಗಳನ್ನ ಅಭ್ಯಸಿಸುವ ಕೆಲಸ ಶುರುವಾಗಿದೆ. ಬಹುಶಃ ಇನ್ನೈದು ವರ್ಷದ ಈ ಕಾರ್ಯ ಮುಗಿಯುವುದರಲ್ಲಿ ಎಂಟು ಬಿಲಿಯನ್ ವರ್ಷಗಳ ಹಿಂದಿನ ವಿಶ್ವ ತೆರೆದುಕೊಳ್ಳಬಹುದು. ಅದೇ ಚಿಲಿಯ ಪಕ್ಕದ ಬೆಟ್ಟದ ಮೇಲೆ-ಅನೇಕ ದೇಶಗಳು ಒಟ್ಟುಸೇರಿ-ಸ್ಥಾಪಿಸಲಾಗುತ್ತಿರುವ ಸರಣಿ ಟೆಲಿಸ್ಕೊಪ್ ವ್ಯವಸ್ಥೆಯಲ್ಲೂ ದೂರದ ಗ್ಯಾಲಕ್ಸಿಗಳನ್ನ ಕಾಣುವ ಯೋಜನೆಯಿದೆ. ಈಗಿನ್ನೂ ಸಿದ್ದವಾಗುತ್ತಿರುವ, 2020ರಲ್ಲಿ ಸ್ಥಾಪಿತವಾಗಲಿರುವ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಹೊಸ ಟೆಲಿಸ್ಕೊಪ್ ಹತ್ತು ಬಿಲಿಯನ್ ವರ್ಷಗಳ ಹಿಂದಿನ ಇತಿಹಾಸ ಕೆದಕಬಲ್ಲದಂತೆ!!! ಇನ್ನೊಂದು ಹತ್ತಿಪತ್ತು ವರ್ಷದಲ್ಲಿ ಕಪ್ಪು ಶಕ್ತಿಯ ಬಗ್ಗೆ ಒಂದಿಷ್ಟಾದರೂ ಗೊತ್ತಾಗಬಹುದು.
ಚಿಲಿಯ ಟೆಲಿಸ್ಕೋಪ್ ನ ಡಾರ್ಕ್ ಎನರ್ಜಿ ಸರ್ವೇ ಯ ಕ್ಯಾಮರಾದಿಂದ ತೆಗೆದ ದೂರದ ಗ್ಯಾಲಕ್ಸಿಯ ಒಂದು ಚಿತ್ರ     
            ಬರಹದ ಶೀರ್ಷಿಕೆ ಹಾಗೂ ವಿಷಯ ಏನೇ ಇರಲಿ, ನನ್ನ ಬ್ಲಾಗ್ ಬರಹಗಳ ಕೊನೆ ಮಾತ್ರ ಒಂದೇ ತರ ಇರುತ್ತದೆ. ಬರಹದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿದುಕೊಳ್ಳುವ ಕುತೂಹಲ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ಇಷ್ಟವಾಗಿದ್ದು ಕಾಮೆಂಟ್ ಬರೆಯಲು ಪುರುಸೊತ್ತಿಲ್ಲದಿದ್ದರೆ +1 ರ ಮೇಲೆ ಕ್ಲಿಕ್ಕಿಸಿ. ತುಂಬಾ ಇಷ್ಟವಾದರೆ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವ ಅವಕಾಶವೂ ಕೆಳಗಿದೆ. ನಿಮ್ಮ ಕಾಮೆಂಟ್ ಗಳು, ಬರಹದಲ್ಲಿ ತಪ್ಪುಗಳಿದ್ದರೆ ತಿಳಿದುಕೊಳ್ಳಲು(ಹಾಗೂ ತಿದ್ದಿಕೊಳ್ಳಲು) ನಮಗವಕಾಶ.   
              

8 comments:

  1. ಸುಬ್ರಹ್ಮಣ್ಯರೆ,
    ತುಂಬ ಸಂತೋಷವಾಯಿತು. ವಿಜ್ಞಾನವನ್ನು ಸರಳವಾಗಿ ತಿಳಿಸುವ ಕಲೆ ಎಲ್ಲರಿಗೂ ಬರುವದಿಲ್ಲ. ಸಾಮಾನ್ಯ ಓದುಗನಿಗೂ ಅರ್ಥವಾಗುವಂತೆ ವಿಶ್ವರಚನೆಯ ಬಗೆಗೆ ತಿಳಿಸಿದ್ದೀರಿ. ಓದುತ್ತಿದ್ದಂತೆ ಖುಶಿ ಹಾಗು ಕೌತುಕ ಹೆಚ್ಚುತ್ತ ಹೋಗುತ್ತಿತ್ತು. ಲಲಿತಾಸಹಸ್ರನಾಮದ ಒಂದು ಸಾಲು ನೆನಪಾಯಿತು: ‘ಅನೇಕಕೋಟಿಬ್ರಹ್ಮಾಂಡ ಜನನೀ, ದಿವ್ಯವಿಗ್ರಹಾ’!

    ReplyDelete
  2. ಅಗಾಧ ವಿಶ್ವ ! ಇಷ್ಟ ಆಯ್ತು , ಮಾಹಿತಿಯುಕ್ತ ಲೇಖನ

    ReplyDelete
  3. ನಮ್ಮೆಲ್ಲರ ಪ್ರೀತಿಯ ಬ್ಲಾಗಿಗ ಮೈಸೂರಿನ ನಿಮ್ಮೊಳಗೊಬ್ಬ ಬಾಲು ಅವರ ಮೂಲಕ ಇಂತಹ ಮಾಹಿತಿಪೂರ್ಣ ಬ್ಲಾಗಿನ ಪರಿಚಯವಾಯಿತು.

    ವಿಜ್ಞಾನದ ವಿಚಾರಗಳನ್ನು ಸರಳಾತಿಸರಳ ಭಾಷೆಯ ಮುಖೇನ ನಮ್ಮ ಮುಂದಿಡುವ ಸುಬ್ರಹ್ಮಣ್ಯರ ಭಾಷಾ ಬಳಕೆ ಮೊದಲು ಮನಸ್ಸಿಗೆ ಸಹ್ಯವೆನಿಸುತ್ತದೆ.

    ಪ್ರಸ್ತುತ ಬರಹದ ವಸ್ತು, ‘ಡಾರ್ಕ್ ಮ್ಯಾಟರ್’ (ಕಪ್ಪು ವಸ್ತು) ಮತ್ತು ‘ಡಾರ್ಕ್ ಎನರ್ಜಿ’ (ಕಪ್ಪು ಶಕ್ತಿ). ಇವು ಅಷ್ಟು ಸಲೀಸಾಗಿ ನನ್ನಂತಹ ಮೂಢನ ಅರಿವಿಗೆ ತರಬಹುದಾದ ವಿಚಾರವಲ್ಲ. ತಮ್ಮ ಸುಲಭ ಬರಹವು ನನಗೆ ಅರ್ಥಮಾಡಿಕೊಳ್ಳಲು ಸಹಕಾರಿಯಾಗುವಂತಿದೆ.

    ವಿಜ್ಞಾನ ಸಂಬಂಧಿ ಬರಹಗಳನ್ನು ಮತ್ತಷ್ಟು ಆಪ್ತರಾಗಿಸಿದ ತಮ್ಮ ಶ್ರಮಕ್ಕೆ ಶತ ಕೋಟಿ ನಮಸ್ಕಾರಗಳು. ಉಳಿದ ಬರಹಗಳನ್ನೂ ನಾನು ಖಂಡಿತ ಓದುವೆ.

    ಫೇಸ್ ಬುಕ್ಕಿನ 3K - ಕನ್ನಡ ಕವಿತೆ ಕವನ ಗುಂಪಿನಲ್ಲಿ ಈ ಬರಹವನ್ನು ಹೆಮ್ಮೆಯಿಂದ ಹಂಚಿಕೊಂಡಿದ್ದೇನೆ.
    ಕಥನ:
    https://www.facebook.com/photo.php?fbid=946097885434661&set=gm.1563336117259204&type=1&theater

    ReplyDelete
  4. ಸಖತ್ ಬರಹ :-) ಎಸ್ಸೆಸ್ಸೆಲ್ಸಿಯಲ್ಲಿ ಓದುವಾಗ ಕಪ್ಪುರಂದ್ರಗಳು, ಡಾರ್ಕ್ ಮ್ಯಾಟರ್ ಅಂತೆಲ್ಲಾ ವಿಷಯಗಳು ಬಂದು ಅದರ ಬಗ್ಗೆ ತಡಕಿದ್ದು ನೆನಪಾಯ್ತು.. ಕಪ್ಪು ರಂಧ್ರದಿಂದ ಒಂದು ಬೆಳಕಿನ ಕಣ ಕೂಡಾ ಈಚೆ ಬರಲಾರದು ಅಂದ್ರೆ ಕಪ್ಪು ರಂಧ್ರಗಳಿವೆ ಅಂತ ಗೊತ್ತಾಗೋದು ಹೇಗೆ ಅಂತ ಅಂದು ಕಾಡಿದ ಪ್ರಶ್ನೆ ನಂತರ ಆ ವಿಷಯದ ಹಲವು ಮಜಲುಗಳನ್ನು ತಿಳಿಯಲು ಸಹಾಯಮಾಡಿದ್ದನ್ನು ನೆನಪಿಸಿತು ಈ ಲೇಖನ. ಸಖತ್ತಾದ ಮಾಹಿತಿಗೆ ವಂದನೆಗಳು :-)

    ReplyDelete
  5. Kannada news live tv on mobile
    tv9 Public Kannada News Live - Android Apps on Google Play (https://play.google.com/store/apps/details?id=com.quick.kannadanew)

    ReplyDelete