Friday, September 13, 2013

ಆನೆಯ ದಂತಗಳ ಗಣಿಗಾರಿಕೆ!!!!!!!!!!

                     ಅವೊಂದಿಷ್ಟು ದ್ವೀಪಗಳು.ಆ ಪ್ರದೇಶಗಳು ಉತ್ತರ ದ್ರುವಕ್ಕೆ ಸನಿಹದಲ್ಲಿವೆ. ಆದ್ದರಿಂದ ನಡು ಬೇಸಿಗೆಯಲ್ಲಿ ಅಲ್ಲಿ ಸೂರ್ಯ ಮುಳುಗುವುದೇ ಇಲ್ಲ!! ಹಿಮಚ್ಚಾದಿತ ಪ್ರದೇಶ. ಬೇಸಿಗೆಯಲ್ಲಿ ಹಿಮಕರಗಿ ಅಲ್ಲಲ್ಲಿ ನೆಲವೂ ಕಾಣಿಸುತ್ತಿರುತ್ತದೆ. ಹಿಮಕರಡಿಗಳು,ಸೀಲ್ ಗಳು ಹಾಗೂ ಒಂದಿಷ್ಟು ಹಕ್ಕಿಗಳು–ಇವುಗಳನ್ನು ಬಿಟ್ಟರೆ ಹಿಮಾವೃತ ಬೆಟ್ಟಗುಡ್ಡಗಳ ನಿರ್ಜನ ವಾಸ ಅಯೋಗ್ಯ ಪ್ರದೇಶ ಅದು. ಆದರೂ ಪ್ರತೀವರ್ಷ ಬೇಸಿಗೆಯಲ್ಲಿ ಹತ್ತಾರು/ನೂರಾರು ಜನ ಬಂದು, ತಾತ್ಕಾಲಿಕವಾಗಿ (ಅಲ್ಲಲ್ಲಿ) ಮಾಡಿಕೊಂಡ ಬಂಕರ್ ಗಳಲ್ಲಿ ವಾಸಿಸುತ್ತಾರೆ. ಹಗಲು–ರಾತ್ರಿಗಳ ವ್ಯತ್ಯಾಸವಿಲ್ಲದ ಆ ಪ್ರದೇಶದಲ್ಲಿ, ಸ್ವಲ್ಪಹೊತ್ತು ವಿಶ್ರಾಂತಿ ತೆಗೆದುಕೊಳ್ಳುತ್ತಾ, ಇನ್ನುಳಿದ ಸಮಯ ಹಿಮನದಿಗಳು ಹರಿದ/ಕೊರೆದ ಜಾಗಗಳಲ್ಲಿ, ಬೆಟ್ಟಗಳ ನಡುವಿನ ಕಣಿವೆಗಳಲ್ಲಿ, ತೀರಪ್ರದೇಶದ ಕೊರಕಲುಗಳಲ್ಲಿ, ಓಡಾಡುತ್ತ ಹುಡುಕುವಿಕೆಯಲ್ಲಿ ನಿರತರಾಗಿರುತ್ತಾರೆ. ಹೆಂಡತಿ-ಮಕ್ಕಳನ್ನು ಊರಿನಲ್ಲಿ ಬಿಟ್ಟುಬಂದು ಆ ನಿರ್ಜನ ಪ್ರದೇಶದಲ್ಲಿ ಅವರು ಹುಡುಕುತ್ತಿರುವುದಾದರೂ ಏನು? ಅವರು ಹುಡುಕುತ್ತಿರುವ ಆ ವಸ್ತು–ಸರಿಯಾದ್ದು ಒಂದೇ ಒಂದು ಸಿಕ್ಕಿದರೂ–ನೂರಾರು ಕಿ.ಮೀ. ದೂರದಲ್ಲಿರುವ ಆತನ ಸಂಸಾರ–ಒಂದು ಕ್ರೂರ ಚಳಿಗಾಲ ಕಳೆಯಲು ಸಾಕು!!!!  ಹಾಗಾದರೆ ಅವೇನು???– ಈ ಪ್ರಶ್ನೆಗೆ ಉತ್ತರವೇ ಈ ಲೇಖನದ ಶೀರ್ಷಿಕೆ.
                       ಹೌದು. ನಂಬಲು ಕಷ್ಟವಾಗುವ ನೈಜತೆ. ರಷ್ಯಾದ ಹಿಮಚ್ಚಾದಿತ ಸೈಬೀರಿಯಾದ ಉತ್ತರದ ತೀರದಲ್ಲಿ, ಅದರಾಚೆಯಿರುವ ನ್ಯೂ ಸೈಬೀರಿಯಾ ದ್ವೀಪಗಳ ಹಿಮನದಿಯ ಕೊರಕಲುಗಳಲ್ಲಿ, ಆ ದ್ವೀಪದ ತೀರಗಳಲ್ಲಿ ಅವರು ಹುಡುಕುತ್ತಿರುವುದು ಆನೆಯ ದಂತಗಳನ್ನ!!! ಅವರ ಅದೃಷ್ಟ ಚನ್ನಾಗಿದ್ದರೆ–ದಿನನಿತ್ಯದ ಅಲೆದಾಟದಲ್ಲಿ ಒಂದುದಿನ–ಒಂದಿಷ್ಟು ಆನೆಯ ಮೂಳೆಗಳು ಹಾಗೂ ಜೊತೆಗೆ–ಹಿಮಮಣ್ಣಿನ (permafrost)ನಡುವೆಅವರ ಪಾಲಿನ ಭಾಗ್ಯದ ನಿಧಿ–ಆ ಆನೆಯದಂತಗಳ ದರ್ಶನವಾಗಬಹುದು!!! ಹಿಮಕೆಸರುಮಣ್ಣಿನಿಂದ ನಿದಾನವಾಗಿ ಬೇರ್ಪಡಿಸಿ ತೆಗೆದು ಸಂಗ್ರಹಿಸಿ ಆ ದಂತಗಳನ್ನು–ದೂರದ ಮಾರುಕಟ್ಟೆಯಲ್ಲಿ ಮಾರಿದರೆ–ಅವರಿಗೆ ಸಿಗುವುದು–ಆ ದಂತಗಳು ಅತ್ಯುತ್ತಮ ಉದ್ದ ಹಾಗು ಮೈಇದ್ದರೆ–ಸಾವಿರಾರು ಪೌಂಡ್ ಹಣ!!!! ಸರಿ. ಹಿಮಕರಡಿ ಹಾಗೂ ಇತರ ಸಣ್ಣಪುಟ್ಟ ಪ್ರಾಣಿಗಳು ಮಾತ್ರ ಇರುವ, ಹಿಮತುಂಬಿದ ಆ ಪ್ರದೇಶಗಳಲ್ಲಿ ನೆಲದಡಿ ಆನೆಯ ದಂತ ಸಿಗುವುದಾದರೂ ಹೇಗೆ?? ಈಗ ಆನೆಗಳೇ ವಾಸಿಸದಿರುವ ಆ ಥಂಡಿ ಜಾಗದಲ್ಲಿ ದಂತಗಳು ಮಣ್ಣೊಳಗಿರುವುದು ಹೇಗೆ ಸಾದ್ಯ?? (ಆನೆಗಳು ಆಫ್ರಿಕಾ ಹಾಗು ಏಷ್ಯಾದ ಉಷ್ಣವಲಯದಲ್ಲಿ ಜೀವಿಸುತ್ತವೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ). ಈ ಕುತೂಹಲಕ್ಕೆ ಉತ್ತರವೇ ಲೇಖನದ ಮುಂದಿನ ಸಾಲುಗಳು.  

                             ಭೂಖಂಡಗಳ ಚಿತ್ರಣ (ನೆಲ ಮತ್ತು ಸಾಗರಗಳ ಎಲ್ಲೆ) ಸದಾ ಬದಲಾಗುತ್ತಿರುತ್ತದೆ. ಇಪ್ಪತ್ತು ಮೂವತ್ತು ಸಾವಿರ ವರ್ಷಗಳಿಗೊಮ್ಮೆ (ನಿಖರ ಕಾರಣ ಗೊತ್ತಿಲ್ಲದೇ) ಧ್ರುವಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಹಿಮ ಶೇಖರಗೊಳ್ಳಲಾರಂಭಿಸುತ್ತದೆ. ಸಾಗರಗಳ ಮಟ್ಟ ಕೆಳಕ್ಕೆಹೋಗುತ್ತದೆ. ಅದನ್ನೇ ಹಿಮಯುಗ ಎಂದು ಕರೆಯುತ್ತಾರೆ. ಕೆಲವು ಸಾವಿರ ವರ್ಷಗಳ ನಂತರ ಧ್ರುವಗಳಲ್ಲಿ ಹಿಮ ಶೇಖರವಾಗುವುದು ಕಡಿಮೆಯಾಗಿ ಕರಗುವಿಕೆ ಹೆಚ್ಚಾಗುತ್ತದೆ. ಆಗ ಸಮುದ್ರಗಳ ಮಟ್ಟ ಏರಲಾರಂಬಿಸುತ್ತದೆ. (ಈ ರೀತಿ ಅದೆಷ್ಟೋ ಬಾರಿ ಆಗಿಹೋಗಿವೆ!!!). ಕೊನೆಯ ಹಿಮಯುಗದಲ್ಲಿ-ಸಮುದ್ರ ನೀರಿನ ಮಟ್ಟ ಕಡಿಮೆಯಿದ್ದಾಗ-ಮೊದಲ ಪ್ಯಾರದಲ್ಲಿ ಉಲ್ಲೇಖಿಸಿದ ದ್ವೀಪಗಳು (ನ್ಯೂ ಸೈಬಿರಿಯನ್ ದ್ವೀಪಗಳು)-ಇಂದು ಸಮುದ್ರತಡಿಯಿಂದ ನೂರಾರು ಕಿ.ಮೀ. ದೂರದಲ್ಲಿದ್ದರೂ-ಅಂದು ಸೈಬೀರಿಯಾದ ಭಾಗವೇ ಆಗಿದ್ದವು. ಅಮೇರಿಕಾ ಎಷ್ಯಾಗಳ ನಡುವೆ ನೆಲ ಸಂಪರ್ಕವೂ ಇತ್ತು. ಇಂದಿನ ಇಂಗ್ಲೆಂಡ್ ಮತ್ತು ಫ್ರಾನ್ಸ್ ನ ನಡುವೆ ಡಾಗ್ಗರ್ ಲ್ಯಾಂಡ್ ಎಂಬ ಭೂಪ್ರದೇಶವೂ ಇತ್ತು!!!  (ಲೋಥಾಲ್ ಹಾಗೂ ದ್ವಾರಕೆಗಳಲ್ಲಿ ಸಮುದ್ರದಡಿ ಜನವಸತಿ ಅವಶೇಷಗಳು ಸಿಕ್ಕಿರಲು ಕಾರಣ ಈಗ ನಿಮಗೆ ಗೊತ್ತಾಗಿರಬಹುದು!!)  ಆ ಎಲ್ಲಾ ಜಾಗಗಳಲ್ಲಿ-ಅಂದರೆ, ಸೈಬೀರಿಯಾ, ಅಲಾಸ್ಕಾ ಹಾಗೂ ಉತ್ತರ ಕೆನಡಾಗಳಲ್ಲಿ-ಅಂದಾಜು ಹದಿನೈದು ಸಾವಿರ ವರ್ಷಗಳ ಹಿಂದೆ-ದೈತ್ಯಗಾತ್ರದ ಆ ಪ್ರಾಣಿಗಳು-ಬಹುಷಃ ಡೈನೋಸಾರಸ್ ಗಳ ನಂತರ ಈ ಜಗತ್ತು ಕಂಡ ಅತಿದೊಡ್ಡ ನಡೆದಾಡುವ ಜೀವಿಗಳು-ಇಂದಿನ ಆನೆಗಳಿಗಿಂತ ಎತ್ತರವೂ ದೊಡ್ದವೂ ಆದ ಆ ಪ್ರಾಣಿಗಳು-ಓಡಾಡಿಕೊಂಡು ಮೆಯಿದಾಡುತ್ತಿದ್ದವು. ಅವೇ ವೂಲೀ ಮ್ಯಾಮತ್ ಗಳು!!!! ನಾಯಿಗಳಲ್ಲಿ ಉದ್ದುದ್ದ ರೋಮದ ಜೂಲುನಾಯಿಗಳಿದ್ದಂತೆ, ಮೈಮೇಲೆ ಕಂಬಳಿಯ ಮೇಲೆ ಕಂಬಳಿಯನ್ನು ಹೊದ್ದುಕೊಂಡಂತೆ ಉದ್ದುದ್ದ ರೋಮದ ಆ ಆನೆಗಳೇ ಜೂಲಾನೆಗಳು!!! ಇಂದಿನ ಇಂಗ್ಲೀಶ್ ನಲ್ಲಿ ಅತೀ ದೊಡ್ಡದನ್ನು ವರ್ಣಿಸುವಾಗ ಮ್ಯಾಮತ್ ಎಂಬ ಪದ ಬಳಕೆಯಲ್ಲಿದೆ. (ಆದರೆ ಸೈಬೀರಿಯಾದಿಂದನೂ ದೂರದಲ್ಲಿರುವ ವ್ರಾಂಗಲ್ ದ್ವೀಪಗಳಲ್ಲಿ ಮಾತ್ರ ದೊಡ್ಡ ಮ್ಯಾಮತ್ ಗಳನ್ನೇ ಹೋಲುವ-ಮೈತುಂಬಾ ಜೂಲಿರುವ-ಆದರೆ ಚಿಕ್ಕ ಗಾತ್ರದ ಪಿಗ್ಮಿ ಮ್ಯಾಮತ್ ಗಳಿದ್ದವಂತೆ!!!)

                     ದ್ರುವದ ಹಿಮಹಾಸುಗಳ ಕರಗುವಿಕೆ, ಸಮುದ್ರ ಮಟ್ಟದಲ್ಲಿ ಏರಿಕೆ, ಅದರಿಂದಾಗಿ ಮೇಯುವ ಹುಲ್ಲುಗಾವಲಿನ ವಿಸ್ತೀರ್ಣ ಕಡಿಮೆಯಾಗುವಿಕೆ, ಅವೆಲ್ಲದಕ್ಕಿಂತ ಹೆಚ್ಚಾಗಿ (ಬಹುಶಃ)ಮಾಂಸಕ್ಕಾಗಿ ಆದಿಮಾನವರಿಂದ ಹತ್ಯೆ–ಇವೆ ಮೊದಲಾದ ಕಾರಣಗಳಿಂದಾಗಿ ಮ್ಯಾಮತ್ ಗಳು ಅಳಿವಾದವು. ತೀರಾ ಇತ್ತೀಚಿನವರೆಗೂ ಅಂದರೆ ಸುಮಾರು ಮೂರುವರೆ ಸಾವಿರ ವರ್ಷಗಳ ಹಿಂದಿನವರೆಗೂ ಅವು ಬದುಕ್ಕಿದ್ದವಂತೆ!!! ಉತ್ತರ ಸೈಬೀರಿಯಾದಲ್ಲಿ ಅವುಗಳ ದಂತ, ಮೂಳೆಗಳು ನೆಲದಲ್ಲಿ ಆಗಾಗ್ಯೆ ಕಾಣಿಸಿಕೊಳ್ಳುತ್ತಿರುತ್ತದೆ. ಆ ದಂತಗಳಿಗೋಸ್ಕರ ಜನರ ಹುಡುಕಾಟ. ಚಳಿಗಾಲ ಮುಗಿದ ನಂತರ ಸರಕಾರದ ಅಧಿಕೃತ ಪರವಾನಗಿಯೊಂದಿಗೆ ಬಂದು  ಬಂಕರುಗಳಲ್ಲಿ ನೆಲೆಸುವ ದಂತ ಅನ್ವೇಷಕರು–ಕತ್ತಲೆಯೇ (ಸರಿಯಾಗಿ) ಆಗದ ಆ ಪ್ರದೇಶಗಳಲ್ಲಿ–ಸಾಧ್ಯವಾದಷ್ಟು ಸಮಯ–ನಿರ್ಜನ ಪ್ರದೇಶಗಳಲ್ಲಿ, ನದಿ ಹರಿದು ಉಂಟಾದ ಕೊರಕಲುಗಳಲ್ಲಿ–ಹಿಮಮಣ್ಣಿನ ನಡುವೆ–ದಂತಗಳಿಗಾಗಿ ಹುಡುಕಾಡುತ್ತಾರೆ. ಹಿಮಮಣ್ಣಿನ ನಡುವೆ ಚೂರುಪಾರು ದಂತದ ದರ್ಶನವಾದರೂ ಸಬ್ಬಲ್ಲು-ಪಿಕಾಸಿಗಳಿಂದ ನಿದಾನವಾಗಿ ಹಿಮಮಣ್ಣಿನಿಂದ ಬೇರ್ಪಡಿಸಿ, ತೊಳೆದು ಸಂಗ್ರಹಿಸುತ್ತಾರೆ. ಮೊದಲೇ ಹೇಳಿದೆ-ಮ್ಯಾಮತ್ ಗಳು ಇಂದಿನ ಆನೆಗಳಿಗಿಂತ ತುಂಬಾ ದೊಡ್ಡದಿದ್ದವು. ಅಂತೆಯೇ ಅವುಗಳ ದಂತಗಳೂ ಕೂಡ. ಸಾಕಷ್ಟು ಉದ್ದದ ಹಾಗೂ ಭಾರದ ಒಂದು (ಒಂದೇ ಒಂದು) ದಂತ-ಉಸಿರು ಬಿಗಿಹಿಡಿದು ಓದಿ-ಅನ್ವೇಷಕನನ್ನು $60,000 ಹೆಚ್ಚು ಶ್ರೀಮಂತನನ್ನಾಗಿಸುತ್ತದೆ!!!!!  
             ಆನೆಯ ದಂತಗಳ ಗಣಿಗಾರಿಕೆ ಸೈಬೀರಿಯಾಕ್ಕೆ ಹೊಸತೇನಲ್ಲ. ಎಂದೆಂದೂ ಅದು ನಿಷೇದಿತವೂ ಆಗಿರಲಿಲ್ಲ. ಶತಮಾನಗಳಿಂದ ನಡೆದುಕೊಂಡುಬಂದಿದೆ. ತ್ಸಾರ್ ದೊರೆಗಳ ಕಾಲದಿಂದಲೂ ಯೂರೋಪಿನ ಇತರ ಭಾಗಗಳಿಗೆ ಅವ್ಯಾಹತವಾಗಿ ದಂತಗಳ ಸಾಗಣಿಕೆ ನಡೆದಿದೆ. ಆದರೆ ಈಗಿನ ಸೈಬೀರಿಯನ್ನರಿಗೆ ಈ ಉದ್ಯೋಗ, ಈ ಹುಡುಕಾಟ ಹೊಸತೆ!!! ಕಳೆದ ಶತಮಾನದ ಪ್ರಾರಂಭದಲ್ಲಿ ರಷ್ಯಾದಲ್ಲಿ ಕಮ್ಯುನಿಸಂ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಸೈಬೀರಿಯಾನೂ ಬದಲಾಯಿತು. ಸ್ಟಾಲಿನ್ ಕಾಲದಲ್ಲಿ ಬಲವಂತದ ಕೃಷಿ ಹಾಗೂ ಉದ್ಯೋಗಗಳು ಸೃಷ್ಟಿಯಾದವು. ದಂತಹುಡುಕಾಟ ನಿಂತೇಹೋಯಿತು. ಅಲ್ಲಿ ಏನು ನಡೆಯುತ್ತಿದೆಯೆಂಬುದು ಹೊರಪ್ರಪಂಚಕ್ಕೆ ಗೊತ್ತೇ ಆಗುತ್ತಿರಲಿಲ್ಲ. ಆದರೆ ಶತಮಾನದ ಅಂತ್ಯದಲ್ಲಿ ಹೊಸಗಾಳಿ ಬೀಸಿ ಯು.ಎಸ್.ಎಸ್.ಆರ್ ಅನೇಕ ದೇಶಗಳಾಗಿ ಹರಿದುಹಂಚಿ ಹೋದನಂತರ ಸೈಬೀರಿಯನ್ನರು ಸಂಕಷ್ಟಕ್ಕೀಡಾದರು. ಆಗ ಪಶ್ಚಿಮ ಸೈಬೀರಿಯಾದ ಅನೇಕಜನ ಕಂಡುಕೊಂಡ ಹೊಸ (ಹಳೆ) ಉದ್ಯೋಗವೇ ಮ್ಯಾಮತ್ ದಂತಗಳ ಅನ್ವೇಷಣೆ!!! (ಮುಂದೊಂದು ದಿನ ಈ ವೃತ್ತಿ ಮಾಡಬೇಕಾಗುತ್ತದೆಯೆಂಬ ಕಲ್ಪನೆಯೇ ಇಂದು ಈ ವೃತ್ತಿ ಮಾಡುತ್ತಿರುವವರಿಗೆ ಹಿಂದೆ (ಯು.ಎಸ್.ಎಸ್.ಆರ್ ಕಾಲದಲ್ಲಿ) ಇರಲಿಲ್ಲ!!!). ಅದೇ ಸಮಯದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಆನೆಯ ದಂತಗಳ ಸಾಗಣೆ ಮತ್ತು ಮಾರಾಟಕ್ಕೆ ನಿರ್ಬಂದ ಹೇರಿದ್ದು-ಅಧಿಕೃತ ಹಾಗು ನಿಷೇದಿತವಲ್ಲದ ಮ್ಯಾಮತ್ ದಂತಗಳ ಬೆಲೆಯನ್ನು ಅದೆಷ್ಟೋ ಪಟ್ಟು ಹೆಚ್ಚಿಸಿತು. ತುಂಬಾ ಹಿಂದೆ ಮ್ಯಾಮತ್ ದಂತಗಳು ಯುರೋಪ್ ದಿಕ್ಕಿನಲ್ಲಿ ಸಾಗುತ್ತಿದ್ದರೆ-ಎರಡು ದಶಕಗಳೀಚೆ ಚೀನಾದಲ್ಲಾದ ಮಹತ್ತರ ಬದಲಾವಣೆಗಳಿಂದಾಗಿ-ಈಗ ಹಾಂಗ್ ಕಾಂಗ್ ದಾರಿ ಹಿಡಿದಿವೆ ಹಾಗೂ ಮ್ಯಾಮತ್ ದಂತಗಳ ಬೆಲೆಯನ್ನು ಮತ್ತೂ ಹೆಚ್ಚಿಸಿವೆ!!!!

                    ಹಿಂದೆಯೂ ಅಷ್ಟೇ, ಇಂದೂ ಅಷ್ಟೇ. ಆನೆ ದಂತಗಳಿಂದ ತಯಾರಿಸಿದ ಸ್ಮರಣಿಕೆಗಳಿಗೆ ತುಂಬಾ ಬೆಲೆ. ಆನೆಗಳ ದಂತಗಳ ಸಾಗಣಿಕೆ ನಿಷೇದವಾದಮೇಲಂತೂ ದಂತಗಳ ಚಿಕ್ಕಪುಟ್ಟ ಮೂರ್ತಿಗಳಿಗೂ ಡಾಲರ್ ಗಟ್ಟಲೆ ಬೆಲೆ. ಹಾಂಗ್ ಕಾಂಗ್ ಸೇರುವ ಮ್ಯಾಮತ್ ದಂತಗಳು-ಕುಶಲಕರ್ಮಿಗಳಿಂದ  ಸುಂದರವಾಗಿ ಕೊರೆಯಲ್ಪಟ್ಟು (ಕೆಲವೊಮ್ಮೆ ತಿಂಗಳುಗಟ್ಟಲೆ!!!)-ಕೊನೆಗೆ ಸೇರುವುದು-ಚೀನಾದ ಹೊಸ ಶ್ರೀಮಂತರ ಮನೆಗಳ ಸಂಗ್ರಹಾಲಯಕ್ಕೆ-ಹಾಗೂ ಕಂಪನಿಗಳ ಕಛೇರಿಗಳ ಸೌಂದರ್ಯವರ್ಧನೆಗೆ!!!! (ಅದು ಚೈನಾದ ಸಂಪ್ರದಾಯ ಕೂಡ). ಯೋಗ್ಯ ಹಾಗು ಗಟ್ಟಿಮುಟ್ಟಾದ ಉದ್ದನೆಯ ಮ್ಯಾಮತ್ ದಂತದಲ್ಲಿ-ಪಕ್ಕದ ಚಿತ್ರದಲ್ಲಿ ತೋರಿಸಿದಂತಹ-ಸಂಪೂರ್ಣ ಉದ್ದದಲ್ಲಿ ಸಾಲು ಸಾಲು ಮೂರ್ತಿಗಳು/ಪ್ರಾಣಿಗಳು ಇರುವ ಕೆತ್ತನೆಗಳು (ಅವುಗಳನ್ನು ಪೂರ್ಣಗೊಳಿಸಲು ಕೆಲವೊಮ್ಮೆ ನಾಲ್ಕೈದು ವರ್ಷಗಳೇ ಬೇಕಾಗಬಹುದು!!!)-ಹತ್ತು ದಶಲಕ್ಷ ಡಾಲರ್ ಗಳವರೆಗೂ ಮಾರಾಟವಾಗುತ್ತವೆ!!!!! ಅದಕ್ಕೇ ಸೈಬೀರಿಯಾದ ಮ್ಯಾಮತ್ ದಂತಗಳಿಗೆ ಅಷ್ಟೊಂದು ಬೆಲೆ.

           ಇನ್ನೊಂದು ಮಜಾ ವಿಷಯವೇನೆಂದರೆ (ಅನೇಕ ಕ್ಷೇತ್ರಗಳ) ವಿಜ್ಞಾನಿಗಳು ಸೈಬಿರಿಯಾದ ಮ್ಯಾಮತ್ ದಂತ ಅನ್ವೇಷಕರೊಂದಿಗೆ ಕೈಜೋಡಿಸಿರುವುದು!!! ದಂತ ಹುಡುಕುಗಾರರು ಹುಡುಕಾಟದಲ್ಲಿ ತಮಗೆ ಸಿಗುವ ಆಸಕ್ತಿದಾಯಕ ಮಾಹಿತಿಯನ್ನು ತಳಿಶಾಸ್ತ್ರತಜ್ಞರು, ಜೀವಶಾಸ್ತ್ರವಿಜ್ಞಾನಿಗಳು, ಭೂಶಾಸ್ತ್ರಜ್ಞರು, ಪಳೆಯಳಿಕೆ ತಜ್ಞರು-ಮೊದಲಾದವರೊಂದಿಗೆ ಹಂಚಿಕೊಳ್ಳುತ್ತಾರೆ!!! ಆಸಕ್ತಿದಾಯಕವೆಂದೆನಿಸಿದರೆ ಅವರೂ ಅಲ್ಲಿಗೆ ಲಗ್ಗೆಯಿಡುತ್ತಾರೆ. ಅವರಿಗೂ ಅಲ್ಲಿ ಹೊಸಹೊಸ ವಿಷಯಗಳು ದೊರೆಯುತ್ತವೆ!!! ದಂತಹುಡುಕುಗಾರರಿಗೆ ಕೆಲವೊಮ್ಮೆ ದಂತಗಳ ಜೊತೆ ಮ್ಯಾಮತ್ ಗಳ ದೇಹವೂ ಕಾಣಿಸಿಕೊಳ್ಳುವುದುಂಟು!!! ಅತಿಶೀತವಾತಾವರಣ ಅವನ್ನು ಕೆಡದಂತೆ ಸಂರಕ್ಷಿಸಿರುತ್ತದೆ. ಅವರು ಕೂಡಲೇ ವಿಜ್ಞಾನಿಗಳಿಗೆ ಮಾಹಿತಿ ತಿಳಿಸುತ್ತಾರೆ. ಪ್ರಯೋಗಶಾಲೆಗೆ ದೇಹ ರವಾನೆಯಾಗುತ್ತದೆ!!!(ಕ್ರೇನ್/ದೋಣಿ/ಅಥವಾ ಹೆಲಿಕ್ಯಾಪ್ಟರ್ ಮೂಲಕ). ಹಿಂದೊಮ್ಮೆ ಸಿಕ್ಕ ಮರಿಮ್ಯಾಮತ್ ಹೊಟ್ಟೆಯಲ್ಲಿ ಅದು ತಿಂದ ಹುಲ್ಲಿನ ತುಂಡುಗಳು ಸಿಕ್ಕಿದ್ದವಂತೆ!!! ಇತ್ತೀಚೆಗಷ್ಟೇ ಸಿಕ್ಕ ಹೆಣ್ಣು ಮ್ಯಾಮತ್ ದೇಹವನ್ನು ಕ್ರೇನ್ ನಲ್ಲಿ ಎತ್ತುವಾಗ ಹೊಟ್ಟೆಯಿಂದ ರಕ್ತ ಸುರಿಯಿತಂತೆ!!! ಇಷ್ಟಕ್ಕೂ ಸತ್ತ ಮ್ಯಾಮತ್ ದೇಹಗಳನ್ನು ಕಟ್ಟಿಕೊಂಡು ಅವರಿಗೆನಾಗಬೇಕು ಎಂದು ನಮಗೆನಿಮಗೆ ಅನಿಸಬಹುದು. ಅಲ್ಲೇ ಇರುವುದು ಸ್ವಾರಸ್ಯ. ತಳಿತಜ್ಞರಿಗೆ ಜೀವಂತ ಮ್ಯಾಮತ್ ಪುನರ್ಸೃಷ್ಟಿಸುವ ಹೊಂಗನಸು!!!! ಸಾಕಷ್ಟು ಸುಸ್ತಿತಿಯಲ್ಲಿರುವ ಡಿ.ಏನ್.ಎ. ಗಳನ್ನು ಆ ಮ್ಯಾಮತ್ ಗಳ ಕಳೇಬರದಿಂದ ಸಂಸ್ಕರಿಸಲು ಸಾದ್ಯವಾದರೆ-ಈಗಿನ ಆನೆಗಳ ಗರ್ಭಕೋಶದಲ್ಲಿ-ಮರಿಮ್ಯಾಮತ್ ಗಳನ್ನ ಸೃಷ್ಟಿಸುವ ಪ್ರಯತ್ನ. (ಗಂಡು ಮ್ಯಾಮತ್ ದೇಹಗಳ ವ್ರುಷಣಗಳಲ್ಲಿ ವೀರ್ಯಾಣುಗಳು ಸಿಕ್ಕರೂ ಪುನರ್ಸೃಷ್ಟಿ ಸಾದ್ಯ). ಬಹುಶಃ ಮುಂದೊಂದು ದಿನ ನಮ್ಮ ಮೊಮ್ಮಕ್ಕಳ ಕೈಹಿಡಿದುಕೊಂಡು ಮೃಗಾಲಯಗಳಲ್ಲಿ ದೈತ್ಯ ಮ್ಯಾಮತ್ ಗಳು ನಡೆದಾಡುವುದನ್ನು ನೋಡಬಹುದು. ಅವುಗಳ ಘೀಳಿಡುವಿಕೆಯಿಂದ ರೋಮಾಂಚನಗೊಳ್ಳಬಹುದು!!!! (ಅಂದು ಈ ಬ್ಲಾಗ್ ಬರಹವನ್ನು ನೀವು ಇನ್ನೊಮ್ಮೆ ಜ್ಞಾಪಿಸಿಕೊಳ್ಳುತ್ತೀರಿ).
                       ನನ್ನ ಬ್ಲಾಗ್ ಬರಹಗಳ ಶೀರ್ಷಿಕೆ ಹಾಗೂ ನಿರೂಪಣೆಗಳಲ್ಲಿ ವೈವಿದ್ಯತೆಯಿದ್ದರೂ ಬರಹಗಳ ಕೊನೆ ಮಾತ್ರ ಒಂದೇರೀತಿ!!! ಈ ವಿಚಾರಗಳು ನಿಮಗೆ ಗೊತ್ತಿದ್ದವೇ ಅಥವಾ ಹೊಸವೇ ಎಂದು ತಿಳಿಯುವ ಕುತೂಹಲ. ನಿಮ್ಮ ಕಾಮೆಂಟ್ ಗಳು ನಾವು ತಿದ್ದಿಕೊಳ್ಳುವ ಸಲಹೆಗಳಾಗಿರಬಹುದು ಅಥವಾ ಬರವಣಿಗೆಯನ್ನು ಉತ್ತೇಜಿಸುವ ಟಾನಿಕ್ ಕೂಡ ಆಗಿರಬಹುದು. ನಿಮ್ಮನಿಸಿಕೆ ತಪ್ಪದೆ ಬರೆಯಿರಿ. ದಾವಂತದ ಪ್ರಪಂಚದಲ್ಲಿ ಅನಿಸಿಕೆ ಬರೆಯಲು ಸಮಯವಿಲ್ಲದಿದ್ದರೆ (ಬ್ಲಾಗ್ ಬರಹ ಹಿಡಿಸಿದರೆ) +1 ಒತ್ತಿ. (ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಯೋಗ್ಯವೆಂದೆನಿಸಿದರೆ ಫೆಸ್ ಬುಕ್ ನಲ್ಲೂ ಶೇರ್ ಮಾಡಿಕೊಳ್ಳಬಹುದು).