Friday, September 13, 2013

ಆನೆಯ ದಂತಗಳ ಗಣಿಗಾರಿಕೆ!!!!!!!!!!

                     ಅವೊಂದಿಷ್ಟು ದ್ವೀಪಗಳು.ಆ ಪ್ರದೇಶಗಳು ಉತ್ತರ ದ್ರುವಕ್ಕೆ ಸನಿಹದಲ್ಲಿವೆ. ಆದ್ದರಿಂದ ನಡು ಬೇಸಿಗೆಯಲ್ಲಿ ಅಲ್ಲಿ ಸೂರ್ಯ ಮುಳುಗುವುದೇ ಇಲ್ಲ!! ಹಿಮಚ್ಚಾದಿತ ಪ್ರದೇಶ. ಬೇಸಿಗೆಯಲ್ಲಿ ಹಿಮಕರಗಿ ಅಲ್ಲಲ್ಲಿ ನೆಲವೂ ಕಾಣಿಸುತ್ತಿರುತ್ತದೆ. ಹಿಮಕರಡಿಗಳು,ಸೀಲ್ ಗಳು ಹಾಗೂ ಒಂದಿಷ್ಟು ಹಕ್ಕಿಗಳು–ಇವುಗಳನ್ನು ಬಿಟ್ಟರೆ ಹಿಮಾವೃತ ಬೆಟ್ಟಗುಡ್ಡಗಳ ನಿರ್ಜನ ವಾಸ ಅಯೋಗ್ಯ ಪ್ರದೇಶ ಅದು. ಆದರೂ ಪ್ರತೀವರ್ಷ ಬೇಸಿಗೆಯಲ್ಲಿ ಹತ್ತಾರು/ನೂರಾರು ಜನ ಬಂದು, ತಾತ್ಕಾಲಿಕವಾಗಿ (ಅಲ್ಲಲ್ಲಿ) ಮಾಡಿಕೊಂಡ ಬಂಕರ್ ಗಳಲ್ಲಿ ವಾಸಿಸುತ್ತಾರೆ. ಹಗಲು–ರಾತ್ರಿಗಳ ವ್ಯತ್ಯಾಸವಿಲ್ಲದ ಆ ಪ್ರದೇಶದಲ್ಲಿ, ಸ್ವಲ್ಪಹೊತ್ತು ವಿಶ್ರಾಂತಿ ತೆಗೆದುಕೊಳ್ಳುತ್ತಾ, ಇನ್ನುಳಿದ ಸಮಯ ಹಿಮನದಿಗಳು ಹರಿದ/ಕೊರೆದ ಜಾಗಗಳಲ್ಲಿ, ಬೆಟ್ಟಗಳ ನಡುವಿನ ಕಣಿವೆಗಳಲ್ಲಿ, ತೀರಪ್ರದೇಶದ ಕೊರಕಲುಗಳಲ್ಲಿ, ಓಡಾಡುತ್ತ ಹುಡುಕುವಿಕೆಯಲ್ಲಿ ನಿರತರಾಗಿರುತ್ತಾರೆ. ಹೆಂಡತಿ-ಮಕ್ಕಳನ್ನು ಊರಿನಲ್ಲಿ ಬಿಟ್ಟುಬಂದು ಆ ನಿರ್ಜನ ಪ್ರದೇಶದಲ್ಲಿ ಅವರು ಹುಡುಕುತ್ತಿರುವುದಾದರೂ ಏನು? ಅವರು ಹುಡುಕುತ್ತಿರುವ ಆ ವಸ್ತು–ಸರಿಯಾದ್ದು ಒಂದೇ ಒಂದು ಸಿಕ್ಕಿದರೂ–ನೂರಾರು ಕಿ.ಮೀ. ದೂರದಲ್ಲಿರುವ ಆತನ ಸಂಸಾರ–ಒಂದು ಕ್ರೂರ ಚಳಿಗಾಲ ಕಳೆಯಲು ಸಾಕು!!!!  ಹಾಗಾದರೆ ಅವೇನು???– ಈ ಪ್ರಶ್ನೆಗೆ ಉತ್ತರವೇ ಈ ಲೇಖನದ ಶೀರ್ಷಿಕೆ.
                       ಹೌದು. ನಂಬಲು ಕಷ್ಟವಾಗುವ ನೈಜತೆ. ರಷ್ಯಾದ ಹಿಮಚ್ಚಾದಿತ ಸೈಬೀರಿಯಾದ ಉತ್ತರದ ತೀರದಲ್ಲಿ, ಅದರಾಚೆಯಿರುವ ನ್ಯೂ ಸೈಬೀರಿಯಾ ದ್ವೀಪಗಳ ಹಿಮನದಿಯ ಕೊರಕಲುಗಳಲ್ಲಿ, ಆ ದ್ವೀಪದ ತೀರಗಳಲ್ಲಿ ಅವರು ಹುಡುಕುತ್ತಿರುವುದು ಆನೆಯ ದಂತಗಳನ್ನ!!! ಅವರ ಅದೃಷ್ಟ ಚನ್ನಾಗಿದ್ದರೆ–ದಿನನಿತ್ಯದ ಅಲೆದಾಟದಲ್ಲಿ ಒಂದುದಿನ–ಒಂದಿಷ್ಟು ಆನೆಯ ಮೂಳೆಗಳು ಹಾಗೂ ಜೊತೆಗೆ–ಹಿಮಮಣ್ಣಿನ (permafrost)ನಡುವೆಅವರ ಪಾಲಿನ ಭಾಗ್ಯದ ನಿಧಿ–ಆ ಆನೆಯದಂತಗಳ ದರ್ಶನವಾಗಬಹುದು!!! ಹಿಮಕೆಸರುಮಣ್ಣಿನಿಂದ ನಿದಾನವಾಗಿ ಬೇರ್ಪಡಿಸಿ ತೆಗೆದು ಸಂಗ್ರಹಿಸಿ ಆ ದಂತಗಳನ್ನು–ದೂರದ ಮಾರುಕಟ್ಟೆಯಲ್ಲಿ ಮಾರಿದರೆ–ಅವರಿಗೆ ಸಿಗುವುದು–ಆ ದಂತಗಳು ಅತ್ಯುತ್ತಮ ಉದ್ದ ಹಾಗು ಮೈಇದ್ದರೆ–ಸಾವಿರಾರು ಪೌಂಡ್ ಹಣ!!!! ಸರಿ. ಹಿಮಕರಡಿ ಹಾಗೂ ಇತರ ಸಣ್ಣಪುಟ್ಟ ಪ್ರಾಣಿಗಳು ಮಾತ್ರ ಇರುವ, ಹಿಮತುಂಬಿದ ಆ ಪ್ರದೇಶಗಳಲ್ಲಿ ನೆಲದಡಿ ಆನೆಯ ದಂತ ಸಿಗುವುದಾದರೂ ಹೇಗೆ?? ಈಗ ಆನೆಗಳೇ ವಾಸಿಸದಿರುವ ಆ ಥಂಡಿ ಜಾಗದಲ್ಲಿ ದಂತಗಳು ಮಣ್ಣೊಳಗಿರುವುದು ಹೇಗೆ ಸಾದ್ಯ?? (ಆನೆಗಳು ಆಫ್ರಿಕಾ ಹಾಗು ಏಷ್ಯಾದ ಉಷ್ಣವಲಯದಲ್ಲಿ ಜೀವಿಸುತ್ತವೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ). ಈ ಕುತೂಹಲಕ್ಕೆ ಉತ್ತರವೇ ಲೇಖನದ ಮುಂದಿನ ಸಾಲುಗಳು.  

                             ಭೂಖಂಡಗಳ ಚಿತ್ರಣ (ನೆಲ ಮತ್ತು ಸಾಗರಗಳ ಎಲ್ಲೆ) ಸದಾ ಬದಲಾಗುತ್ತಿರುತ್ತದೆ. ಇಪ್ಪತ್ತು ಮೂವತ್ತು ಸಾವಿರ ವರ್ಷಗಳಿಗೊಮ್ಮೆ (ನಿಖರ ಕಾರಣ ಗೊತ್ತಿಲ್ಲದೇ) ಧ್ರುವಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಹಿಮ ಶೇಖರಗೊಳ್ಳಲಾರಂಭಿಸುತ್ತದೆ. ಸಾಗರಗಳ ಮಟ್ಟ ಕೆಳಕ್ಕೆಹೋಗುತ್ತದೆ. ಅದನ್ನೇ ಹಿಮಯುಗ ಎಂದು ಕರೆಯುತ್ತಾರೆ. ಕೆಲವು ಸಾವಿರ ವರ್ಷಗಳ ನಂತರ ಧ್ರುವಗಳಲ್ಲಿ ಹಿಮ ಶೇಖರವಾಗುವುದು ಕಡಿಮೆಯಾಗಿ ಕರಗುವಿಕೆ ಹೆಚ್ಚಾಗುತ್ತದೆ. ಆಗ ಸಮುದ್ರಗಳ ಮಟ್ಟ ಏರಲಾರಂಬಿಸುತ್ತದೆ. (ಈ ರೀತಿ ಅದೆಷ್ಟೋ ಬಾರಿ ಆಗಿಹೋಗಿವೆ!!!). ಕೊನೆಯ ಹಿಮಯುಗದಲ್ಲಿ-ಸಮುದ್ರ ನೀರಿನ ಮಟ್ಟ ಕಡಿಮೆಯಿದ್ದಾಗ-ಮೊದಲ ಪ್ಯಾರದಲ್ಲಿ ಉಲ್ಲೇಖಿಸಿದ ದ್ವೀಪಗಳು (ನ್ಯೂ ಸೈಬಿರಿಯನ್ ದ್ವೀಪಗಳು)-ಇಂದು ಸಮುದ್ರತಡಿಯಿಂದ ನೂರಾರು ಕಿ.ಮೀ. ದೂರದಲ್ಲಿದ್ದರೂ-ಅಂದು ಸೈಬೀರಿಯಾದ ಭಾಗವೇ ಆಗಿದ್ದವು. ಅಮೇರಿಕಾ ಎಷ್ಯಾಗಳ ನಡುವೆ ನೆಲ ಸಂಪರ್ಕವೂ ಇತ್ತು. ಇಂದಿನ ಇಂಗ್ಲೆಂಡ್ ಮತ್ತು ಫ್ರಾನ್ಸ್ ನ ನಡುವೆ ಡಾಗ್ಗರ್ ಲ್ಯಾಂಡ್ ಎಂಬ ಭೂಪ್ರದೇಶವೂ ಇತ್ತು!!!  (ಲೋಥಾಲ್ ಹಾಗೂ ದ್ವಾರಕೆಗಳಲ್ಲಿ ಸಮುದ್ರದಡಿ ಜನವಸತಿ ಅವಶೇಷಗಳು ಸಿಕ್ಕಿರಲು ಕಾರಣ ಈಗ ನಿಮಗೆ ಗೊತ್ತಾಗಿರಬಹುದು!!)  ಆ ಎಲ್ಲಾ ಜಾಗಗಳಲ್ಲಿ-ಅಂದರೆ, ಸೈಬೀರಿಯಾ, ಅಲಾಸ್ಕಾ ಹಾಗೂ ಉತ್ತರ ಕೆನಡಾಗಳಲ್ಲಿ-ಅಂದಾಜು ಹದಿನೈದು ಸಾವಿರ ವರ್ಷಗಳ ಹಿಂದೆ-ದೈತ್ಯಗಾತ್ರದ ಆ ಪ್ರಾಣಿಗಳು-ಬಹುಷಃ ಡೈನೋಸಾರಸ್ ಗಳ ನಂತರ ಈ ಜಗತ್ತು ಕಂಡ ಅತಿದೊಡ್ಡ ನಡೆದಾಡುವ ಜೀವಿಗಳು-ಇಂದಿನ ಆನೆಗಳಿಗಿಂತ ಎತ್ತರವೂ ದೊಡ್ದವೂ ಆದ ಆ ಪ್ರಾಣಿಗಳು-ಓಡಾಡಿಕೊಂಡು ಮೆಯಿದಾಡುತ್ತಿದ್ದವು. ಅವೇ ವೂಲೀ ಮ್ಯಾಮತ್ ಗಳು!!!! ನಾಯಿಗಳಲ್ಲಿ ಉದ್ದುದ್ದ ರೋಮದ ಜೂಲುನಾಯಿಗಳಿದ್ದಂತೆ, ಮೈಮೇಲೆ ಕಂಬಳಿಯ ಮೇಲೆ ಕಂಬಳಿಯನ್ನು ಹೊದ್ದುಕೊಂಡಂತೆ ಉದ್ದುದ್ದ ರೋಮದ ಆ ಆನೆಗಳೇ ಜೂಲಾನೆಗಳು!!! ಇಂದಿನ ಇಂಗ್ಲೀಶ್ ನಲ್ಲಿ ಅತೀ ದೊಡ್ಡದನ್ನು ವರ್ಣಿಸುವಾಗ ಮ್ಯಾಮತ್ ಎಂಬ ಪದ ಬಳಕೆಯಲ್ಲಿದೆ. (ಆದರೆ ಸೈಬೀರಿಯಾದಿಂದನೂ ದೂರದಲ್ಲಿರುವ ವ್ರಾಂಗಲ್ ದ್ವೀಪಗಳಲ್ಲಿ ಮಾತ್ರ ದೊಡ್ಡ ಮ್ಯಾಮತ್ ಗಳನ್ನೇ ಹೋಲುವ-ಮೈತುಂಬಾ ಜೂಲಿರುವ-ಆದರೆ ಚಿಕ್ಕ ಗಾತ್ರದ ಪಿಗ್ಮಿ ಮ್ಯಾಮತ್ ಗಳಿದ್ದವಂತೆ!!!)

                     ದ್ರುವದ ಹಿಮಹಾಸುಗಳ ಕರಗುವಿಕೆ, ಸಮುದ್ರ ಮಟ್ಟದಲ್ಲಿ ಏರಿಕೆ, ಅದರಿಂದಾಗಿ ಮೇಯುವ ಹುಲ್ಲುಗಾವಲಿನ ವಿಸ್ತೀರ್ಣ ಕಡಿಮೆಯಾಗುವಿಕೆ, ಅವೆಲ್ಲದಕ್ಕಿಂತ ಹೆಚ್ಚಾಗಿ (ಬಹುಶಃ)ಮಾಂಸಕ್ಕಾಗಿ ಆದಿಮಾನವರಿಂದ ಹತ್ಯೆ–ಇವೆ ಮೊದಲಾದ ಕಾರಣಗಳಿಂದಾಗಿ ಮ್ಯಾಮತ್ ಗಳು ಅಳಿವಾದವು. ತೀರಾ ಇತ್ತೀಚಿನವರೆಗೂ ಅಂದರೆ ಸುಮಾರು ಮೂರುವರೆ ಸಾವಿರ ವರ್ಷಗಳ ಹಿಂದಿನವರೆಗೂ ಅವು ಬದುಕ್ಕಿದ್ದವಂತೆ!!! ಉತ್ತರ ಸೈಬೀರಿಯಾದಲ್ಲಿ ಅವುಗಳ ದಂತ, ಮೂಳೆಗಳು ನೆಲದಲ್ಲಿ ಆಗಾಗ್ಯೆ ಕಾಣಿಸಿಕೊಳ್ಳುತ್ತಿರುತ್ತದೆ. ಆ ದಂತಗಳಿಗೋಸ್ಕರ ಜನರ ಹುಡುಕಾಟ. ಚಳಿಗಾಲ ಮುಗಿದ ನಂತರ ಸರಕಾರದ ಅಧಿಕೃತ ಪರವಾನಗಿಯೊಂದಿಗೆ ಬಂದು  ಬಂಕರುಗಳಲ್ಲಿ ನೆಲೆಸುವ ದಂತ ಅನ್ವೇಷಕರು–ಕತ್ತಲೆಯೇ (ಸರಿಯಾಗಿ) ಆಗದ ಆ ಪ್ರದೇಶಗಳಲ್ಲಿ–ಸಾಧ್ಯವಾದಷ್ಟು ಸಮಯ–ನಿರ್ಜನ ಪ್ರದೇಶಗಳಲ್ಲಿ, ನದಿ ಹರಿದು ಉಂಟಾದ ಕೊರಕಲುಗಳಲ್ಲಿ–ಹಿಮಮಣ್ಣಿನ ನಡುವೆ–ದಂತಗಳಿಗಾಗಿ ಹುಡುಕಾಡುತ್ತಾರೆ. ಹಿಮಮಣ್ಣಿನ ನಡುವೆ ಚೂರುಪಾರು ದಂತದ ದರ್ಶನವಾದರೂ ಸಬ್ಬಲ್ಲು-ಪಿಕಾಸಿಗಳಿಂದ ನಿದಾನವಾಗಿ ಹಿಮಮಣ್ಣಿನಿಂದ ಬೇರ್ಪಡಿಸಿ, ತೊಳೆದು ಸಂಗ್ರಹಿಸುತ್ತಾರೆ. ಮೊದಲೇ ಹೇಳಿದೆ-ಮ್ಯಾಮತ್ ಗಳು ಇಂದಿನ ಆನೆಗಳಿಗಿಂತ ತುಂಬಾ ದೊಡ್ಡದಿದ್ದವು. ಅಂತೆಯೇ ಅವುಗಳ ದಂತಗಳೂ ಕೂಡ. ಸಾಕಷ್ಟು ಉದ್ದದ ಹಾಗೂ ಭಾರದ ಒಂದು (ಒಂದೇ ಒಂದು) ದಂತ-ಉಸಿರು ಬಿಗಿಹಿಡಿದು ಓದಿ-ಅನ್ವೇಷಕನನ್ನು $60,000 ಹೆಚ್ಚು ಶ್ರೀಮಂತನನ್ನಾಗಿಸುತ್ತದೆ!!!!!  
             ಆನೆಯ ದಂತಗಳ ಗಣಿಗಾರಿಕೆ ಸೈಬೀರಿಯಾಕ್ಕೆ ಹೊಸತೇನಲ್ಲ. ಎಂದೆಂದೂ ಅದು ನಿಷೇದಿತವೂ ಆಗಿರಲಿಲ್ಲ. ಶತಮಾನಗಳಿಂದ ನಡೆದುಕೊಂಡುಬಂದಿದೆ. ತ್ಸಾರ್ ದೊರೆಗಳ ಕಾಲದಿಂದಲೂ ಯೂರೋಪಿನ ಇತರ ಭಾಗಗಳಿಗೆ ಅವ್ಯಾಹತವಾಗಿ ದಂತಗಳ ಸಾಗಣಿಕೆ ನಡೆದಿದೆ. ಆದರೆ ಈಗಿನ ಸೈಬೀರಿಯನ್ನರಿಗೆ ಈ ಉದ್ಯೋಗ, ಈ ಹುಡುಕಾಟ ಹೊಸತೆ!!! ಕಳೆದ ಶತಮಾನದ ಪ್ರಾರಂಭದಲ್ಲಿ ರಷ್ಯಾದಲ್ಲಿ ಕಮ್ಯುನಿಸಂ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಸೈಬೀರಿಯಾನೂ ಬದಲಾಯಿತು. ಸ್ಟಾಲಿನ್ ಕಾಲದಲ್ಲಿ ಬಲವಂತದ ಕೃಷಿ ಹಾಗೂ ಉದ್ಯೋಗಗಳು ಸೃಷ್ಟಿಯಾದವು. ದಂತಹುಡುಕಾಟ ನಿಂತೇಹೋಯಿತು. ಅಲ್ಲಿ ಏನು ನಡೆಯುತ್ತಿದೆಯೆಂಬುದು ಹೊರಪ್ರಪಂಚಕ್ಕೆ ಗೊತ್ತೇ ಆಗುತ್ತಿರಲಿಲ್ಲ. ಆದರೆ ಶತಮಾನದ ಅಂತ್ಯದಲ್ಲಿ ಹೊಸಗಾಳಿ ಬೀಸಿ ಯು.ಎಸ್.ಎಸ್.ಆರ್ ಅನೇಕ ದೇಶಗಳಾಗಿ ಹರಿದುಹಂಚಿ ಹೋದನಂತರ ಸೈಬೀರಿಯನ್ನರು ಸಂಕಷ್ಟಕ್ಕೀಡಾದರು. ಆಗ ಪಶ್ಚಿಮ ಸೈಬೀರಿಯಾದ ಅನೇಕಜನ ಕಂಡುಕೊಂಡ ಹೊಸ (ಹಳೆ) ಉದ್ಯೋಗವೇ ಮ್ಯಾಮತ್ ದಂತಗಳ ಅನ್ವೇಷಣೆ!!! (ಮುಂದೊಂದು ದಿನ ಈ ವೃತ್ತಿ ಮಾಡಬೇಕಾಗುತ್ತದೆಯೆಂಬ ಕಲ್ಪನೆಯೇ ಇಂದು ಈ ವೃತ್ತಿ ಮಾಡುತ್ತಿರುವವರಿಗೆ ಹಿಂದೆ (ಯು.ಎಸ್.ಎಸ್.ಆರ್ ಕಾಲದಲ್ಲಿ) ಇರಲಿಲ್ಲ!!!). ಅದೇ ಸಮಯದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಆನೆಯ ದಂತಗಳ ಸಾಗಣೆ ಮತ್ತು ಮಾರಾಟಕ್ಕೆ ನಿರ್ಬಂದ ಹೇರಿದ್ದು-ಅಧಿಕೃತ ಹಾಗು ನಿಷೇದಿತವಲ್ಲದ ಮ್ಯಾಮತ್ ದಂತಗಳ ಬೆಲೆಯನ್ನು ಅದೆಷ್ಟೋ ಪಟ್ಟು ಹೆಚ್ಚಿಸಿತು. ತುಂಬಾ ಹಿಂದೆ ಮ್ಯಾಮತ್ ದಂತಗಳು ಯುರೋಪ್ ದಿಕ್ಕಿನಲ್ಲಿ ಸಾಗುತ್ತಿದ್ದರೆ-ಎರಡು ದಶಕಗಳೀಚೆ ಚೀನಾದಲ್ಲಾದ ಮಹತ್ತರ ಬದಲಾವಣೆಗಳಿಂದಾಗಿ-ಈಗ ಹಾಂಗ್ ಕಾಂಗ್ ದಾರಿ ಹಿಡಿದಿವೆ ಹಾಗೂ ಮ್ಯಾಮತ್ ದಂತಗಳ ಬೆಲೆಯನ್ನು ಮತ್ತೂ ಹೆಚ್ಚಿಸಿವೆ!!!!

                    ಹಿಂದೆಯೂ ಅಷ್ಟೇ, ಇಂದೂ ಅಷ್ಟೇ. ಆನೆ ದಂತಗಳಿಂದ ತಯಾರಿಸಿದ ಸ್ಮರಣಿಕೆಗಳಿಗೆ ತುಂಬಾ ಬೆಲೆ. ಆನೆಗಳ ದಂತಗಳ ಸಾಗಣಿಕೆ ನಿಷೇದವಾದಮೇಲಂತೂ ದಂತಗಳ ಚಿಕ್ಕಪುಟ್ಟ ಮೂರ್ತಿಗಳಿಗೂ ಡಾಲರ್ ಗಟ್ಟಲೆ ಬೆಲೆ. ಹಾಂಗ್ ಕಾಂಗ್ ಸೇರುವ ಮ್ಯಾಮತ್ ದಂತಗಳು-ಕುಶಲಕರ್ಮಿಗಳಿಂದ  ಸುಂದರವಾಗಿ ಕೊರೆಯಲ್ಪಟ್ಟು (ಕೆಲವೊಮ್ಮೆ ತಿಂಗಳುಗಟ್ಟಲೆ!!!)-ಕೊನೆಗೆ ಸೇರುವುದು-ಚೀನಾದ ಹೊಸ ಶ್ರೀಮಂತರ ಮನೆಗಳ ಸಂಗ್ರಹಾಲಯಕ್ಕೆ-ಹಾಗೂ ಕಂಪನಿಗಳ ಕಛೇರಿಗಳ ಸೌಂದರ್ಯವರ್ಧನೆಗೆ!!!! (ಅದು ಚೈನಾದ ಸಂಪ್ರದಾಯ ಕೂಡ). ಯೋಗ್ಯ ಹಾಗು ಗಟ್ಟಿಮುಟ್ಟಾದ ಉದ್ದನೆಯ ಮ್ಯಾಮತ್ ದಂತದಲ್ಲಿ-ಪಕ್ಕದ ಚಿತ್ರದಲ್ಲಿ ತೋರಿಸಿದಂತಹ-ಸಂಪೂರ್ಣ ಉದ್ದದಲ್ಲಿ ಸಾಲು ಸಾಲು ಮೂರ್ತಿಗಳು/ಪ್ರಾಣಿಗಳು ಇರುವ ಕೆತ್ತನೆಗಳು (ಅವುಗಳನ್ನು ಪೂರ್ಣಗೊಳಿಸಲು ಕೆಲವೊಮ್ಮೆ ನಾಲ್ಕೈದು ವರ್ಷಗಳೇ ಬೇಕಾಗಬಹುದು!!!)-ಹತ್ತು ದಶಲಕ್ಷ ಡಾಲರ್ ಗಳವರೆಗೂ ಮಾರಾಟವಾಗುತ್ತವೆ!!!!! ಅದಕ್ಕೇ ಸೈಬೀರಿಯಾದ ಮ್ಯಾಮತ್ ದಂತಗಳಿಗೆ ಅಷ್ಟೊಂದು ಬೆಲೆ.

           ಇನ್ನೊಂದು ಮಜಾ ವಿಷಯವೇನೆಂದರೆ (ಅನೇಕ ಕ್ಷೇತ್ರಗಳ) ವಿಜ್ಞಾನಿಗಳು ಸೈಬಿರಿಯಾದ ಮ್ಯಾಮತ್ ದಂತ ಅನ್ವೇಷಕರೊಂದಿಗೆ ಕೈಜೋಡಿಸಿರುವುದು!!! ದಂತ ಹುಡುಕುಗಾರರು ಹುಡುಕಾಟದಲ್ಲಿ ತಮಗೆ ಸಿಗುವ ಆಸಕ್ತಿದಾಯಕ ಮಾಹಿತಿಯನ್ನು ತಳಿಶಾಸ್ತ್ರತಜ್ಞರು, ಜೀವಶಾಸ್ತ್ರವಿಜ್ಞಾನಿಗಳು, ಭೂಶಾಸ್ತ್ರಜ್ಞರು, ಪಳೆಯಳಿಕೆ ತಜ್ಞರು-ಮೊದಲಾದವರೊಂದಿಗೆ ಹಂಚಿಕೊಳ್ಳುತ್ತಾರೆ!!! ಆಸಕ್ತಿದಾಯಕವೆಂದೆನಿಸಿದರೆ ಅವರೂ ಅಲ್ಲಿಗೆ ಲಗ್ಗೆಯಿಡುತ್ತಾರೆ. ಅವರಿಗೂ ಅಲ್ಲಿ ಹೊಸಹೊಸ ವಿಷಯಗಳು ದೊರೆಯುತ್ತವೆ!!! ದಂತಹುಡುಕುಗಾರರಿಗೆ ಕೆಲವೊಮ್ಮೆ ದಂತಗಳ ಜೊತೆ ಮ್ಯಾಮತ್ ಗಳ ದೇಹವೂ ಕಾಣಿಸಿಕೊಳ್ಳುವುದುಂಟು!!! ಅತಿಶೀತವಾತಾವರಣ ಅವನ್ನು ಕೆಡದಂತೆ ಸಂರಕ್ಷಿಸಿರುತ್ತದೆ. ಅವರು ಕೂಡಲೇ ವಿಜ್ಞಾನಿಗಳಿಗೆ ಮಾಹಿತಿ ತಿಳಿಸುತ್ತಾರೆ. ಪ್ರಯೋಗಶಾಲೆಗೆ ದೇಹ ರವಾನೆಯಾಗುತ್ತದೆ!!!(ಕ್ರೇನ್/ದೋಣಿ/ಅಥವಾ ಹೆಲಿಕ್ಯಾಪ್ಟರ್ ಮೂಲಕ). ಹಿಂದೊಮ್ಮೆ ಸಿಕ್ಕ ಮರಿಮ್ಯಾಮತ್ ಹೊಟ್ಟೆಯಲ್ಲಿ ಅದು ತಿಂದ ಹುಲ್ಲಿನ ತುಂಡುಗಳು ಸಿಕ್ಕಿದ್ದವಂತೆ!!! ಇತ್ತೀಚೆಗಷ್ಟೇ ಸಿಕ್ಕ ಹೆಣ್ಣು ಮ್ಯಾಮತ್ ದೇಹವನ್ನು ಕ್ರೇನ್ ನಲ್ಲಿ ಎತ್ತುವಾಗ ಹೊಟ್ಟೆಯಿಂದ ರಕ್ತ ಸುರಿಯಿತಂತೆ!!! ಇಷ್ಟಕ್ಕೂ ಸತ್ತ ಮ್ಯಾಮತ್ ದೇಹಗಳನ್ನು ಕಟ್ಟಿಕೊಂಡು ಅವರಿಗೆನಾಗಬೇಕು ಎಂದು ನಮಗೆನಿಮಗೆ ಅನಿಸಬಹುದು. ಅಲ್ಲೇ ಇರುವುದು ಸ್ವಾರಸ್ಯ. ತಳಿತಜ್ಞರಿಗೆ ಜೀವಂತ ಮ್ಯಾಮತ್ ಪುನರ್ಸೃಷ್ಟಿಸುವ ಹೊಂಗನಸು!!!! ಸಾಕಷ್ಟು ಸುಸ್ತಿತಿಯಲ್ಲಿರುವ ಡಿ.ಏನ್.ಎ. ಗಳನ್ನು ಆ ಮ್ಯಾಮತ್ ಗಳ ಕಳೇಬರದಿಂದ ಸಂಸ್ಕರಿಸಲು ಸಾದ್ಯವಾದರೆ-ಈಗಿನ ಆನೆಗಳ ಗರ್ಭಕೋಶದಲ್ಲಿ-ಮರಿಮ್ಯಾಮತ್ ಗಳನ್ನ ಸೃಷ್ಟಿಸುವ ಪ್ರಯತ್ನ. (ಗಂಡು ಮ್ಯಾಮತ್ ದೇಹಗಳ ವ್ರುಷಣಗಳಲ್ಲಿ ವೀರ್ಯಾಣುಗಳು ಸಿಕ್ಕರೂ ಪುನರ್ಸೃಷ್ಟಿ ಸಾದ್ಯ). ಬಹುಶಃ ಮುಂದೊಂದು ದಿನ ನಮ್ಮ ಮೊಮ್ಮಕ್ಕಳ ಕೈಹಿಡಿದುಕೊಂಡು ಮೃಗಾಲಯಗಳಲ್ಲಿ ದೈತ್ಯ ಮ್ಯಾಮತ್ ಗಳು ನಡೆದಾಡುವುದನ್ನು ನೋಡಬಹುದು. ಅವುಗಳ ಘೀಳಿಡುವಿಕೆಯಿಂದ ರೋಮಾಂಚನಗೊಳ್ಳಬಹುದು!!!! (ಅಂದು ಈ ಬ್ಲಾಗ್ ಬರಹವನ್ನು ನೀವು ಇನ್ನೊಮ್ಮೆ ಜ್ಞಾಪಿಸಿಕೊಳ್ಳುತ್ತೀರಿ).
                       ನನ್ನ ಬ್ಲಾಗ್ ಬರಹಗಳ ಶೀರ್ಷಿಕೆ ಹಾಗೂ ನಿರೂಪಣೆಗಳಲ್ಲಿ ವೈವಿದ್ಯತೆಯಿದ್ದರೂ ಬರಹಗಳ ಕೊನೆ ಮಾತ್ರ ಒಂದೇರೀತಿ!!! ಈ ವಿಚಾರಗಳು ನಿಮಗೆ ಗೊತ್ತಿದ್ದವೇ ಅಥವಾ ಹೊಸವೇ ಎಂದು ತಿಳಿಯುವ ಕುತೂಹಲ. ನಿಮ್ಮ ಕಾಮೆಂಟ್ ಗಳು ನಾವು ತಿದ್ದಿಕೊಳ್ಳುವ ಸಲಹೆಗಳಾಗಿರಬಹುದು ಅಥವಾ ಬರವಣಿಗೆಯನ್ನು ಉತ್ತೇಜಿಸುವ ಟಾನಿಕ್ ಕೂಡ ಆಗಿರಬಹುದು. ನಿಮ್ಮನಿಸಿಕೆ ತಪ್ಪದೆ ಬರೆಯಿರಿ. ದಾವಂತದ ಪ್ರಪಂಚದಲ್ಲಿ ಅನಿಸಿಕೆ ಬರೆಯಲು ಸಮಯವಿಲ್ಲದಿದ್ದರೆ (ಬ್ಲಾಗ್ ಬರಹ ಹಿಡಿಸಿದರೆ) +1 ಒತ್ತಿ. (ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಯೋಗ್ಯವೆಂದೆನಿಸಿದರೆ ಫೆಸ್ ಬುಕ್ ನಲ್ಲೂ ಶೇರ್ ಮಾಡಿಕೊಳ್ಳಬಹುದು). 

Friday, April 19, 2013

ಜೇಬಿನಲ್ಲಿ ಸಾವಿರ ರುಪಾಯಿಯ ಎರಡು ನೋಟುಗಳನ್ನಿಟ್ಟುಕೊಂಡು ನಾರ್ವೆಗೆ ಹೋದ ಸೀನ ಪಟ್ಟ ಪಜೀತಿ !!!

                     ಅದೆಷ್ಟು ತಮಾಷೆಯ ಘಟನೆಗಳು ಸಂಭವಿಸುತ್ತಿರುತ್ತವೆ ಸುತ್ತಮುತ್ತ. ಅವುಗಳಲ್ಲಿ ಇದೂ ಒಂದು. ಸೀನ ಆಲಿಯಾಸ್ ಶ್ರೀನಿವಾಸ ನಮ್ಮೂರ ನಿವಾಸಿ. ದಲಿತ ಸಂಘರ್ಷ ಸಮಿತಿಯ ಅದ್ಯಾವುದೋ ಒಂದು ಬಣದ ತಾಲೂಕು ಮಟ್ಟದ ಪದಾಧಿಕಾರಿ. ಆದರೆ ಪ್ರಾಮಾಣಿಕ ಮನುಷ್ಯ. ಯಾರಿಗೂ ಕೇಡು ಬಯಸದ ಒಳ್ಳೆಯ ಮನುಷ್ಯ. ರೋಲ್ ಕಾಲ್ ಗೀಲ್ ಕಾಲ್ ಗಳಿಂದ ದೂರ. ಈಗ ಲೇಖನದ ಶೀರ್ಷಿಕೆಯತ್ತ ಬರೋಣ. ಅರೆ!! ಕೇವಲ ಸಾವಿರ ರುಪಾಯಿಯ ಎರಡು ನೋಟುಗಳನ್ನು – ಅಂದರೆ ಎರಡು ಸಾವಿರ ರುಪಾಯಿಗಳನ್ನು ಜೋಬಿನಲ್ಲಿಟ್ಟುಕೊಂಡು - ಸೀನ ಅದ್ಹೇಗೆ ನಾರ್ವೆ ದೇಶಕ್ಕೆ ಹೋಗಿಬಂದ ಎಂಬುದು ನಿಮ್ಮ ಪ್ರಶ್ನೆಯಲ್ಲವೇ? ಊಹೂ. ಸೀನ ಹೋಗಿದ್ದು ನಾರ್ವೆ ದೇಶಕ್ಕಲ್ಲ. ನಮ್ಮ ಹಳ್ಳಿಯ ಸಮೀಪ ನಾರ್ವೆ ಎಂಬ ಪುಟ್ಟ ಊರಿದೆ. (ಪುಟ್ಟ ಊರು = ಒಂದು ಹೈಸ್ಕೂಲ್, ಒಂದು ಬ್ಯಾಂಕ್, ಎರಡು ಮೂರು ದೇವಸ್ಥಾನಗಳು, ಒಂದು ಮಸೀದಿ, ಒಂದು ಟೆಲಿಫೋನ್ ಎಕ್ಸ್ ಚೇಂಜ್, ಮೊಬೈಲ್ ಟವರ್ (ಬಿ.ಎಸ್.ಏನ್.ಎಲ್.ಎಂದು ಹೇಳುವ ಅವಶ್ಯಕತೆಯಿಲ್ಲವೇನೋ!!), ಕಟಿಂಗ್ ಶಾಪ್, ಒಂದಿಷ್ಟು ಅಂಗಡಿ ಹಾಗು ಮನೆಗಳು. ಸಂಜೆ ಗಂಡಸರುಗಳೆಲ್ಲಾ ಸೇರಿ ಪಟಾಕಿಹೊಡೆಯುವ ಸ್ಥಳ). ಆ ನಾರ್ವೆಗೇ ಸೀನ ಹೋಗಿದ್ದು – ಸಾವಿರ ರುಪಾಯಿಯ ಎರಡು ನೋಟುಗಳೊಂದಿಗೆ. ಈ ಲೇಖನದ ಕೊನೆಯಲ್ಲಿ ನಿಮಗೆ ಆಶ್ಚರ್ಯವಾಗಬಹುದು – ನಡೆದ ಘಟನಾವಳಿಗಳಲ್ಲಿ ಯಾರಿಗೂ ನಷ್ಟವಾಗಲಿಲ್ಲ - ಬದಲಾಗಿ ಎಲ್ಲರಿಗೂ ಲಾಭವೇ ಆಯಿತೆಂದು!!! ಸಾವಿರ ರುಪಾಯಿಯ ಎರಡು ನೋಟುಗಳೊಂದಿಗೆ ನಾರ್ವೆಗೆ ಹೋಗಿ ಸೀನ ಏನು ಪಜೀತಿಪಟ್ಟ ಎಂಬುದರ ವಿವರಣೆಯೇ ಲೇಖನದ ಮುಂದಿನ ಭಾಗ. 
                   ನಾರ್ವೆಯಲ್ಲಿ ಅಂಗಡಿಯೊಂದರಲ್ಲಿ ಒಂದಿಷ್ಟು ಸಾಮಾನು ಕಟ್ಟಿಸಿ ಸಾವಿರದ ಒಂದು ನೋಟನ್ನು ಕೊಟ್ಟ ಸೀನ. ಆದರೆ ಅಂಗಡಿಯವರಿಂದ ಚಿಲ್ಲರೆ ಇಲ್ಲ ಎಂದುತ್ತರ ಬರುತ್ತದೆ. ಕಟ್ಟಿಸಿದ ಸಾಮಾನು ಅಲ್ಲೇ ಬಿಟ್ಟು ಸೀನ ಸಾವಿರ ರುಪಾಯಿಯ ನೋಟಿಗೆ ಚಿಲ್ಲರೆ ಹುಡುಕುತ್ತಾ ಹೊರಟ. ಪಕ್ಕದ ಅಂಗಡಿಗಳು, ಮೇಲೆ ಕೆಳಗೆ, ಎಲ್ಲಿ ಹೋದರೂ ಸೀನನಿಗೆ ಚಿಲ್ಲರೆ ಹುಟ್ಟಲಿಲ್ಲ. ಏನಪ್ಪಾ ಮಾಡುದು ಎಂದು ತಲೆ ಕೆರೆದುಕೊಳ್ಳುತ್ತಾ ನಿಂತಿದ್ದ ಸೀನನಿಗೆ ಎದುರಾದವನೇ ಆನಂದಪ್ಪ. ಸೀನ ಎಷ್ಟಾದರೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಯಲ್ಲವೇ, ಯಾವುದೋ ಒಂದು ಪ್ರತಿಭಟನೆಯಲ್ಲಿ ಭಾಗವಹಿಸಿದಾಗ ಅಲ್ಲಿ ಹಿಂದೆಂದೋ ಆನಂದಪ್ಪನನ್ನು ನೋಡಿದ ಪರಿಚಯ. ಅರೆ! ಏನು ಇಲ್ಲಿ? ಏನು ವಿಷ್ಯಾ?? – ಎಂಬ ಆನಂದಪ್ಪನ ಪ್ರಶ್ನೆಗೆ ಉತ್ತರವಾಗಿ ಸೀನ ನಡೆದದ್ದು – ಎಲ್ಲೂ ಸಾವಿರ ರುಪಾಯಿಗೆ ಚಿಲ್ಲರೆ ಹುಟ್ಟದಿದ್ದ ವಿಷಯ - ಹೇಳಿದ. ಅದುಕ್ಯಾಕ್ ತಲೆ ಕೆಡ್ಸ್ಕಂತೀರಿ?? ಕೊಡಿ ಆ ನೋಟು. ನಾನೀಗ್ ತರ್ತೀನಿ ಚಿಲ್ರೆ – ಎಂದು ಆ ನೋಟು ಇಸ್ಕಂಡ್ ಆನಂದಪ್ಪ ಮಾಯವಾದ!!!!
                  ಇಷ್ಟಕ್ಕೂ ಆನಂದಪ್ಪ ನಾರ್ವೆಕಡೆಯವನು ಎಂಬುದೊಂದು ಬಿಟ್ಟರೆ ಆತನ ಮನೆ ನಾರ್ವೆ ಪಕ್ಕ ಯಾವ ಹಳ್ಳಿಯಲ್ಲಿ ಎಂದಾಗಲಿ, ನಿಜ ಹೇಳಬೇಕೆಂದರೆ ಆತನ ಹೆಸರಾಗಲೀ ಸೀನನಿಗೆ ಗೊತ್ತಿರಲಿಲ್ಲ!!! ಮೂರ್ನಾಕು ಬಾರಿ ನೋಡಿದ ಮುಖಪರಿಚಯವಷ್ಟೇ. ಐದು-ಹತ್ತು-ಇಪ್ಪತ್ತು ನಿಮಿಷಗಳಾದರೂ ಆನಂದಪ್ಪನ ಸುಳಿವೇ ಇಲ್ಲ!!! ಇಷ್ಟರವರೆಗೂ ಸಾವಿರ ರುಪಾಯಿಗೆ ಚಿಲ್ಲರೆ ಹುಡುಕುತ್ತಿದ್ದ ಸೀನ – ಚಿಲ್ಲರೆ ತರುತ್ತೇನೆಂದು ಸಾವಿರ ರುಪಾಯಿ ನೋಟು ತೆಗೆದುಕೊಂಡು ಹೋದ ಆನಂದಪ್ಪನನ್ನು ಹುಡುಕಿಕೊಂಡು – ಮತ್ತೆ ನಾರ್ವೆ ಮೇಲೆ ಕೆಳಗೆ ಒಂದೆರೆಡು ಬಾರಿ ಓಡಾಡಿದ. ಊಹೂ. ಆನಂದಪ್ಪ ನಾಪತ್ತೆ!!!!. ಇದೊಳ್ಳೆ ಪಜೀತಿಯಾಯ್ತಲ್ಲಾ ಅಂತಾ ತಲೆಕೆರೆದುಕೊಳ್ಳುತ್ತಾ ನಿಂತ ಸೀನ.
                  ಟೈಲರ್ ಅಂಗಡಿಯಲ್ಲಿ ಕುಳಿತು ಬಟ್ಟೆ ಹುಲಿಯುತ್ತಿದ್ದ ಟೈಲರ್ ಚಂದ್ರು – ಸೀನ ಬಂದು ಚಿಲ್ಲರೆ ಕೇಳಿದ್ದು – ಅನಂತರ ಮೇಲೆ ಕೆಳಗೆ ಓಡಾಡುತ್ತಿದ್ದಿದ್ದು – ಆನಂದಪ್ಪನ ಜೊತೆ ಏನೋ ಮಾತಾಡುತ್ತಿದ್ದಿದ್ದು – ಮತ್ತೆ ಮೇಲೆ ಕೆಳಗೆ ಓಡಾಡಿದ್ದು – ಕೊನೆಗೆ ತಲೆಕೆರೆದುಕೊಳ್ಳುತ್ತಾ ನಿಂತಿದ್ದು – ಎಲ್ಲಾ ಗಮನಿಸುತ್ತಿದ್ದವನು – ಕುತೂಹಲ ತಡೆಯಲಾರದೆ ಸೀನನನ್ನು ಕರೆದು ಏನಾಯಿತೆಂದು ಕೇಳಿದ. (ಜನಸಂಖ್ಯೆ ಕಡಿಮೆಯಿರುವ ಹಳ್ಳಿಗಳಲ್ಲಿ ಜನ, ಬಸ್ ಸ್ಟ್ಯಾಂಡ್/ರಸ್ತೆಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು  ಕುತೂಹಲದಿಂದ ಗಮನಿಸುತ್ತಿರುತ್ತಾರೆ). ಸೀನ ನಡೆದಿದ್ದೆಲ್ಲಾ ಹೇಳಿ ನನ್ನ ಜೊತೆ ಸ್ವಲ್ಪಹೊತ್ತಿನ ಮುಂಚೆ ಮಾತಾಡುತ್ತಿದ್ದು ಚಿಲ್ಲರೆ ತರುತ್ತೇನೆಂದು ಸಾವಿರ ರುಪಾಯಿ ನೋಟು ತಗಂಡು ಹೋಗಿದ್ದು ನೋಡಿದ್ರಲಾ. ಯಾರವನು?’ ಎಂದು ಕೇಳಿದ.
                     ಯಾರು? ಅವನಾ?? ನಿಮ್ ಜೊತೆ ಮಾತಾಡ್ತಿದ್ನಲಾ ಅವನ್ ಸಾವಿರ ರುಪಾಯಿ ನೋಟ್ ಚಿಲ್ರೆ ತರ್ತೀನಿ ಅಂತ ತಗಂಡ್ ಹೋದ್ನಾ??  ಹಾಗಾದ್ರೆ ಸಾವಿರ ರುಪಾಯಿ ಕಥೆ ಮುಗೀತು. ಅವನ್ ಆನಂದಪ್ಪ. ದೊಡ್ಡ ಕುಡುಕ!! ಹಗಲೊತ್ತಲ್ಲೇ  ಟೈಟ್. – ಎಂದು ಟೈಲರ್ ಚಂದ್ರು ಹೇಳಿದಾಗ ಸೀನನ ತಲೆಮೇಲೆ ಆಕಾಶನೇ ಬಿದ್ದಂತಾಯಿತು. ಸಾವಿರ ರುಪಾಯಿ ಕೈಬಿಟ್ಟಂತೆಯೇ ಎಂದುಕೊಂಡ. ಅಷ್ಟರಲ್ಲೇ ಆಕಡೆಯಲ್ಲೆಲ್ಲಿಂದಲೋ ಇಬ್ಬರು ಯುವಕರು ಬೈಕ್ ನಲ್ಲಿ ಟೈಲರ್ ಅಂಗಡಿಕಡೆ ಬಂದರು. ಅವರನ್ನು ಟೈಲರ್ ಚಂದ್ರು ಕೇಳಿದ – ಅಲ್ಲೆಲ್ಲಾದರೂ ಆನಂದಪ್ಪ ಕಂಡನಾ?. ಉತ್ತರ ಬಂತು – ಯಾರ್ ಆ ಎಣ್ಣೆ ಪಾರ್ಟಿ ಆನಂದಪ್ಪನಾ? ಬರುವ ಹೊತ್ತಿಗೆ ಈಗ ನೋಡಿದ್ವು. ಐದ್ ನಿಮಿಷದ ಕೆಳಗೆ ಗೌಡರ ಅಂಗಡಿ ಮುಂದೆ ನಿಂತಿದ್ದ. ಏನಕ್ ಆನಂದಪ್ಪನ ಕೇಳ್ತಿದ್ದೀರಿ? ಏನ್ ಕಥೆ??. ಟೈಲರ್ ಚಂದ್ರು ನಡೆದ ಕಥೆ ಹೇಳಿದ. ಕೂಡಲೇ ಗೌಡರ ಅಂಗಡಿಗೆ ಫೋನ್ ಹಚ್ಚಲಾಯಿತು. ಗೌಡರ ಅಂಗಡಿಯೆಂದರೆ ಊರಿನ ಸ್ವಲ್ಪ ಹೊರಗಿದ್ದ ಅಣ್ಣೆಗೌಡರ ದಿನಸಿ ಕಂ ಎಣ್ಣೆ ಅಂಗಡಿ. (ಮೊದಲೆಲ್ಲ ಊರಿಗೊಂದು ಸರಾಯಿಯ ಕೊಟ್ಟೆ (ಪಾಕೀಟು -ಆಡುಭಾಷೆಯಲ್ಲಿ )  ಮಾರುವ ಅಂಗಡಿಯಿರುತ್ತಿತ್ತು. ಆದರೆ ಸರ್ಕಾರ ಸರಾಯಿ ವ್ಯವಸ್ತೆ ತೆಗೆದುಹಾಕಿದಮೇಲೆ – ಹಳ್ಳಿಗಳಲ್ಲಿ ಅನೇಕ ದಿನಸಿ ಅಂಗಡಿಗಳು – ಸಂಜೆ ದಿನಸಿ ಸಾಮಾನಲ್ಲದೆ ಎಣ್ಣೆ ಬಾಟಲಿ ಮಾರಾಟದಲ್ಲಿ ತೊಡಗಿವೆ!!! ಆ ಅಂಗಡಿಗಳಲ್ಲಿ ಕೂಲಿಕಾರ್ಮಿಕರ ಜೇಬಿನ ಬಾರ ಬೇಗ ಕಡಿಮೆಯಾಗುತ್ತವೆ!!! ಆದರೆ ಕಾಫಿ ಬೆಲೆ ಚನ್ನಾಗಿರುವುದರಿಂದ (ಸ್ವಲ್ಪ ಕೆಲಸಮಾಡಿದರೆ) ಜೇಬು ಮತ್ತೆ ಬಾರವಾಗುತ್ತಿರುತ್ತದೆ). ಅತ್ತ ಫೋನ್ ನಲ್ಲಿ ಮಾತಾಡಿದ ಗೌಡರು ಹೌದು. ಆನಂದಪ್ಪ ಬಂದಿದ್ದ. ಹಳೆ ಬಾಕಿ ತೀರ್ಸಿ,ಇನ್ನೂ ಎರಡು ಕ್ವಾರ್ಟರ್ ಬಾಟಲಿ ತಗಂಡ್ ಈಗತಾನೆ ಅಂಗಡಿಯಿಂದ ಹೋದ ಎಂದರು.
                   ನಡೆದಿದ್ದಿಷ್ಟೇ. ಚಿಲ್ಲರೆ ತರುತ್ತೇನೆಂದು ಸಾವಿರ ರುಪಾಯಿ ನೋಟು ತೆಗೆದುಕೊಂಡು ಹೋದ ಆನಂದಪ್ಪ – ಊರಿನಿಂದ ಸ್ವಲ್ಪ ಹೊರಗಿದ್ದ  ಗೌಡರ ಎಣ್ಣೆ ಕಂ ದಿನಸಿ ಅಂಗಡಿಗೆ ಹೋಗಿದ್ದಾನೆ. ಸಾವಿರ ರುಪಾಯಿ ನೋಟು ಗೌಡರಿಗೆ ಕೊಟ್ಟಿದ್ದಾನೆ. (ಹಿಂದೆ ಎಣ್ಣೆ ಹೊಡೆಯಲು ಮಾಡಿದ) ಆನಂದಪ್ಪನ ಹಿಂದಿನ ಬಾಕಿ – ನೂರಾ ನೂರೈವತ್ತಾ ರುಪಾಯಿಯನ್ನು ಗೌಡರು ಮುರಿದುಕೊಂಡು ಉಳಿದ ಚಿಲ್ಲರೆ ಕೊಟ್ಟಿದ್ದಾರೆ. ಭಂಡ ಆನಂದಪ್ಪ ಆ ಚಿಲ್ಲರೆಯಲ್ಲಿ ಮತ್ತೆರೆಡು ಕ್ವಾರ್ಟರ್ ಬಾಟಲಿ ಕೊಂಡುಕೊಂಡು ಜೇಬಿಗಿಳಿಸಿದ್ದಾನೆ. ಉಳಿದ ದುಡ್ಡನ್ನೂ ತನ್ನ ಹತ್ರನೇ ಇಟ್ಟುಕೊಂಡಿದ್ದಾನೆ!!!
                 ಆನಂದಪ್ಪನ ಸುಳಿವು ಸಿಕ್ಕಿದ್ದೇ ತಡ, ಒಂದು ಕ್ಷಣವೂ ಸಮಯ ವ್ಯರ್ಥಮಾಡದೆ ಬೈಕಿನಲ್ಲಿ ಬಂದ ಆ ಯುವಕರು ಸೀನನನ್ನು ಮದ್ಯದಲ್ಲಿ ಕೂರಿಸಿಕೊಂಡು ಸೀದಾ ಗೌಡರ ಅಂಗಡಿಯ ದಿಕ್ಕಿಗೆ ಬೈಕ್ ತಿರುಗಿಸಿದರು. ಗೌಡರ ಅಂಗಡಿಯಿಂದ ಸ್ವಲ್ಪಮುಂದೆ ತೂರಾಡುತ್ತಾ  ಕಾಲೆಳೆದುಕೊಂಡು ಹೋಗುತ್ತಿದ್ದ ಆನಂದಪ್ಪ ಕಂಡ. ಸೀನನಿಗೆ ಜೀವ ಬಂದಂತಾಯಿತು. ಇವರು ಕಾಣುತ್ತಿದ್ದಂತೆ ಆನಂದಪ್ಪ ರಸ್ತೆ ಬಿಟ್ಟು ಓಡಲಾರಂಬಿಸಿದ. ಆದರೆ ಬೈಕಿನಲ್ಲಿ ಬಂದ ಆ ಯುವಕರು – ಆನಂದಪ್ಪನನ್ನು ಬೆನ್ನಟ್ಟಿ ಹೋಗಿ ಎಳೆದು ತಂದರು. ಎಣ್ಣೆಮತ್ತಿನ ಆನಂದಪ್ಪ ಕೈ ಮುಗಿದು ಪೆಚ್ಚುಮೊರೆ ಮಾಡಿಕೊಂಡು ನಿಂತ. ಒಂದೆರೆಡು ಧರ್ಮದೇಟುಗಳು ಬಿದ್ದವು. ಜೇಬು ಜಪ್ತಿಮಾಡಿದಾಗ ಆರುನೂರು ಚಿಲ್ಲರೆ ರೂಪಾಯಿಗಳು ಸಿಕ್ಕವು. ಜೊತೆಗೆರೆಡು ಎಣ್ಣೆ ಬಾಟಲಿಗಳು. ಯುವಕರು ಅವನ್ನೆಲ್ಲ ಸೀನನ ಕೈಮೇಲೆ ಹಾಕಿದರು. ಅಬ್ಬ. ಇಷ್ಟಾದರೂ ಸಿಕ್ತಲ್ಲಾ ಎಂದು ಸಾವಿರ ರುಪಾಯಿ ಕಳೆದುಕೊಂಡು ಚಿಂತಾಕ್ರಾಂತನಾಗಿದ್ದ ಸೀನ ನಿರಾಳ ಮನದಿಂದ ಆರನೂರು ಚಿಲ್ಲರೆ ರುಪಾಯಿಗಳನ್ನು ಜೇಬಿಗಿಳಿಸಿದ. ಆದರೆ ಎರಡು ಬಾಟಲಿಗಳು. ಸೀನ ಎಣ್ಣೆಹಾಕುವ ವ್ಯಕ್ತಿಯಲ್ಲ. ಆನಂದಪ್ಪನ ಸುಳಿವುಕೊಟ್ಟು, ಫೋನ್ ಮಾಡಿ, ಬೈಕಿನಲ್ಲಿ ಕರೆದುಕೊಂಡು ಹೋಗಿ ಅವನನ್ನು ಹಿಡಿಯಲು ನೆರವಾದ ಆ ಇಬ್ಬರು ಯುವಕರಿಗೆ ಸೀನ ಆ ಎರಡು ಬಾಟಲಿಗಳನ್ನ ನೀಡಿದ!!!
                 ನಾನು ಲೇಖನದ ಮೊದಲಪ್ಯಾರಾದಲ್ಲೇ ಹೇಳಿದೆ – ನಡೆದ ಘಟನಾವಳಿಗಳಲ್ಲಿ ಯಾರಿಗೂ ನಷ್ಟವಾಗಲಿಲ್ಲ. ಬದಲಾಗಿ ಲಾಭವೇ ಆಯಿತೆಂದು. ಸೀನನ ವಿಷಯಕ್ಕೇ ಬರೋಣ. ಆತನಿಗೇ ಸ್ವಲ್ಪ ನಷ್ಟವಾದಂತನಿಸಿದರೂ ಸಾವಿರ ರುಪಾಯಿ ಲಾಸಾಗುವುದು ತಪ್ಪಿ ಆರುನೂರು ಚಿಲ್ಲರೆ ರುಪಾಯಿ ವಾಪಸ್ ಸಿಕ್ಕಿದ್ದರಿಂದ ಸಂತೋಷಪಟ್ಟ!  ಆನಂದಪ್ಪನಿಗೆ? ಗೌಡರ ಅಂಗಡಿಯಲ್ಲಿ ಹಳೆಬಾಕಿ ಚುಕ್ತವಾದ ಲಾಭ!!  ಇನ್ನು ಗೌಡರಿಗೆ – ಹಳೆಬಾಕಿ ತೀರಿಸದೆ ತಲೆತಪ್ಪಿಸಿ ಓಡಾಡುತ್ತಿದ್ದ ಆನಂದಪ್ಪ ಬಾಕಿ ತೀರಿಸಿದ ಲಾಭ!!! ಸಹಾಯ ಮಾಡಿದ ಆ ಇಬ್ಬರು ಯುವಕರಿಗೆ – ಒಂದೊಂದು ಎಣ್ಣೆಬಾಟಲಿ ಸಿಕ್ಕಿದ ಲಾಭ!!!!  ಓದುಗರರಾದ ನಿಮಗೂ ಮನರಂಜನೆಯ ಲಾಭವಾಗಿದೆಯೆಂದು ಅಂದುಕೊಳ್ಳುತ್ತೇನೆ. (ಕಾಮೆಂಟಿಸಿದರೆ/+1 ರ ಮೇಲೆ ಕ್ಲಿಕ್ ಮಾಡಿದರೆ ಗೊತ್ತಾಗುತ್ತೆ).  

                       

Friday, March 1, 2013

ನೆಲದಾಳದಲ್ಲಿ ಸುರಂಗಗಳ ಮೂಲಕ ವ್ಯಾಪಾರ ವಹಿವಾಟು !!!!!


          ಲೇಖನದ ಈ ಶೀರ್ಷಿಕೆಯೇ ನಿಮ್ಮಲ್ಲಿ (ಕೆಲವರಿಗಾದರೂ) ಕುತೂಹಲ ಹುಟ್ಟಿಸಬಹುದು!!! ದೇಶ ದೇಶಗಳ ನಡುವಣ ವ್ಯಾಪಾರ ವಹಿವಾಟು ಹಡಗು/ಬಂದರುಗಳ ಮೂಲಕ ಅಥವ ಟ್ರಕ್/ರೈಲು/ಚೆಕ್ ಪೋಸ್ಟ್ ಗಳ ಮೂಲಕ ಅಥವಾ ವಿಮಾನಗಳ ಮೂಲಕ ನಡೆಯುತ್ತದೆಂಬುದು ನಿಮಗೆಲ್ಲಾ ಗೊತ್ತಿರುವ ವಿಷಯವೇ. ಆದರೆ – ದೇಶ ದೇಶದ ಮದ್ಯದ ಗಡಿಯಲ್ಲಿ - ನೆಲದಿಂದ ಅರವತ್ತು ಎಪ್ಪತ್ತು ಅಡಿಗಳಾಳದಲ್ಲಿ – ಸ್ವಲ್ಪ ನಡು ಬಗ್ಗಿಸಿ ಹೋಗಬಹುದಾದ ದೂಳು ತುಂಬಿದ ಅರೆಗತ್ತಲೆಯ ಸುರಂಗಗಳ ಮೂಲಕ - ಮುಖಕ್ಕೊಂದು ಬಟ್ಟೆ ಸುತ್ತಿಕೊಂಡು – ವಾರದಲ್ಲಿ ಆರುದಿನ ಹಗಲೂ ರಾತ್ರಿ (ಬಹುಶಃ ಶುಕ್ರವಾರ ಅಲ್ಲದಿದ್ದರೆ ನೀವೀಗ ಈ ಲೇಖನ ಓದುತ್ತಿರುವ ಸಮಯದಲ್ಲೂ) ನಡೆಯುತ್ತಿರುವ – ವಾರ್ಷಿಕ ಕೆಲವು ದಶಲಕ್ಷ ಡಾಲರುಗಳ – ಸಾಮಾನು ಸರಂಜಾಮುಗಳ ವ್ಯಾಪಾರ ವಹಿವಾಟಿನ ಬಗ್ಗೆ ನೀವು ಕೇಳಿರುವ ಸಂಭವ ಕಡಿಮೆ. (ಬಹುಶಃ) ಈ ವ್ಯವಸ್ತೆ ಪ್ರಪಂಚದ ಅತಿದೊಡ್ಡ ಕಳ್ಳಸಾಗಾಣಿಕಾ ವ್ಯವಸ್ತೆ!!! ಈ ಆಶ್ಚರ್ಯಕರ, ಕುತೂಹಲಬರಿತ ಹಾಗೂ ಸ್ವಾರಸ್ಯಕರ ವಿಷಯದ ಬಗ್ಗೆ ನಿಮಗೆ ತಿಳಿಸುವುದೇ ಈ ಬ್ಲಾಗ್ ಬರಹದ ಉದ್ದೇಶ. ಆದರೆ ಅದಕ್ಕೆ ಪೂರ್ವಭಾವಿಯಾಗಿ ಚರಿತ್ರೆಯ ಪುಟಗಳಲ್ಲಿ ಹಿಮ್ಮುಖ ಪಯಣ. 
             ಬೈಬಲ್ಲಿನ ಹಳೆಯ ಒಡಂಬಡಿಕೆಗಳ ಪ್ರಕಾರ ಇಸ್ರೇಲ್ ಎಂಬುದು ಯಹೂದಿಗಳಿಗೆ ದೇವರೇ ನೀಡಿದ ಭೂಬಾಗ. ಗುಲಾಮರಂತೆ ಈಜಿಪ್ಟಿನಲ್ಲಿ ಬಾಳುತ್ತಿದ್ದ ಯಹೂದಿಗಳು ಗುಂಪುಕಟ್ಟಿಕೊಂಡು ಮೋಸಸ್ ನ ನೇತೃತ್ವದಲ್ಲಿ ಈಜಿಪ್ಟ್ ನಿಂದ (ತಮ್ಮ ಮೂಲ ನೆಲೆ ಕಡೆ) ಹೊರಟಾಗ ಬೆಟ್ಟವೊಂದರಮೇಲೆ ಮೋಸಸ್ ನಿಗೆ ಕಾಣಿಸಿಕೊಳ್ಳುವ ದೇವರು (God) ಯಹೂದಿಗಳಿಗೆ ಇಸ್ರೇಲ್ ಪ್ರದೇಶವನ್ನು ನೀಡುತ್ತಾನೆ. ಯಹೂದಿಗಳು ನೆಲಸುತ್ತಾರೆ. ನಗರ/ದೇವಾಲಯಗಳನ್ನು ಕಟ್ಟಿಕೊಳ್ಳುತ್ತಾರೆ. ಕ್ರಿಸ್ತನ ಹುಟ್ಟು, ಬದುಕು ಹಾಗೂ ಸಾವು – ಎಲ್ಲಾ ಸಂಭವಿಸುವುದು ಇಸ್ರೇಲಲ್ಲೇ. ಆದರೆ ಕ್ರಿಶ್ಚಿಯಾನಿಟಿ ಹಾಗೂ ನಂತರದಲ್ಲಿ ಇಸ್ಲಾಂ ಪ್ರವರ್ದಮಾನಕ್ಕೆ ಬರುತ್ತಿದ್ದಂತೆ ಯಹೂದಿಗಳು ನೆಲಕಚ್ಚುತ್ತಾರೆ. ನಗರಗಳು/ಬೃಹತ್ ದೇವಾಲಯಗಳು ನೆಲಸಮವಾಗುತ್ತದೆ. (ಈಗಲೂ ಸಾವಿರ ವರ್ಷಗಳ ನಂತರವೂ ಅಳಿದುಳಿದ ದೇವಾಲಯದ ಗೋಡೆಯ ಮುಂದೆ ಯಹೂದಿಗಳು ತಮ್ಮ ಗೋಳು ತೋಡಿಕೊಳ್ಳುವುದು ಸಂಪ್ರದಾಯವಂತೆ!!!). ತಮ್ಮ ತಾಯ್ನಾಡಿನಲ್ಲೇ ನೆಲೆ ಕಳೆದುಕೊಳ್ಳುತ್ತಾರೆ. ಆದರೆ ಹುಟ್ಟು ಸಾಹಸಿಗಳೂ, (ಬಹುಶಃ ನಮ್ಮ ಕೊಂಕಣಿಗಳಂತೆ) ಕುಶಲ ವ್ಯಾಪಾರಿಗಳೂ ಆದ ಯಹೂದಿಗಳು ಪ್ರಪಂಚಾದ್ಯಂತ ಹರಡಿಕೊಳ್ಳುತ್ತಾರೆ. ಇಸ್ರೇಲ್ ಪ್ಯಾಲಸ್ತೀನಿಯರ (=ಅರಬ್ ಮುಸ್ಲಿಮರು) ಕೈವಶವಾಗುತ್ತದೆ.
            ಆದರೆ ಎರಡನೇ ಮಹಾಯುದ್ದದ ನಂತರ ನಡೆಯುವ ಕೆಲವೊಂದು ಘಟನೆಗಳು ಮಧ್ಯಪ್ರಾಚ್ಯದ (Middle east) ಚಿತ್ರಣವನ್ನೇ ಬದಲಾಯಿಸುತ್ತದೆ. ಯುರೋಪಿನಲ್ಲಿ ಹಿಟ್ಲರ್ ನ ಜನಾಂಗೀಯ ದ್ವೇಷಕ್ಕೆ ಬಲಿಯಾಗಿ ಉಳಿದ ಯಹೂದಿಗಳು – ಸಾವಿರ ವರ್ಷದ ಕೆಳಗೆ ತಾವು ಬಿಡಬೇಕಾಗಿ ಬಂದ – ದೇವರೇ ಯಹೂದಿಗಳಿಗೆ ನೀಡಿದ ಭೂಬಾಗ – ಇಸ್ರೇಲ್ ನಲ್ಲಿ ನೆಲೆಕಂಡುಕೊಳ್ಳುವ ನಿರ್ದಾರ ತೆಗೆದುಕೊಳ್ಳುತ್ತಾರೆ. ಯುದ್ದದಲ್ಲಿ ಗೆದ್ದ ರಾಷ್ಟ್ರಗಳಾದ ಅಮೇರಿಕ ಹಾಗು ಬ್ರಿಟನ್ ಎಲ್ಲಾ ರೀತಿಯ ಸಹಕಾರ ನೀಡುತ್ತವೆ. ಪ್ರಪಂಚಾದ್ಯಂತ ನೆಲಸಿರುವ ಯಹೂದಿಗಳೂ ಇಸ್ರೇಲಿನೆಡೆ ಬರಲಾರಂಬಿಸುತ್ತಾರೆ. ಹೊಸ ವಸಾಹತುಗಳು ಕಟ್ಟಲ್ಪಡುತ್ತವೆ. ಒಂದೂವರೆ ಸಾವಿರ ವರ್ಷಗಳ ನಂತರ ಯಹೂದಿಗಳ ಹೊಸ ದೇಶ ಇಸ್ರೇಲ್ ಮತ್ತೆ ಅದೇ ಜಾಗದಲ್ಲಿ ತಲೆಯೆತ್ತುತ್ತದೆ!!!! ಆದರೆ ಆ ಕನಸು ನನಸಾಗಲು ಅವರು ಪಟ್ಟ (ಹಾಗೂ ಪಡುತ್ತಿರುವ) ಕಷ್ಟಗಳು ಒಂದೆರೆಡಲ್ಲ.
           ಯಹೂದಿಗಳು ಪ್ರಪಂಚಾದ್ಯಂತದಿಂದ ವಲಸೆಬಂದು – ಒಂದೂವರೆ ಸಾವಿರ ವರ್ಷಗಳ ಹಿಂದೆ ನಾವಿದ್ದ ಪ್ರದೇಶವೆಂದು - ಇಸ್ರೇಲ್ ನಲ್ಲಿ ತುಂಬಿಕೊಳ್ಳುತ್ತಿದ್ದಂತೆ – ಅನೇಕ ತಲೆಮಾರುಗಳಿಂದ ಆ ಜಾಗದಲ್ಲಿ ನೆಲೆಸಿದ್ದ ಪ್ಯಾಲಸ್ತೀನಿಯರು ಮೂಲೆಗುಂಪಾಗುತ್ತಾರೆ!!! ಲಕ್ಷಾಂತರ ಪ್ಯಾಲಸ್ತೀನಿಯರು ದೇಶಭ್ರಷ್ಟರಾಗಿ ಪಕ್ಕದ ದೇಶಗಳಿಗೆ ವಲಸೆಹೋಗಬೇಕಾಗುತ್ತದೆ. ಸಂಪೂರ್ಣ ಇಸ್ರೇಲ್ ಯಹೂದಿಗಳ ಕೈವಶವಾಗಿ ಪ್ಯಾಲಸ್ತೀನಿಯರು ಗಾಜಾ ಪಟ್ಟಿ ಹಾಗೂ ವೆಸ್ಟ್ ಬ್ಯಾಂಕ್ ಪ್ರದೇಶಕ್ಕೆ ತಳ್ಳಲ್ಪಡುತ್ತಾರೆ. ಸಹಜವಾಗೇ ಮುಸ್ಲಿಂ ಜಗತ್ತಲ್ಲಿ ಇಸ್ರೇಲ್ ವಿರುದ್ದ ಅಸಮದಾನ ಹೆಡೆಯೆತ್ತುತ್ತದೆ. (ಭಾರತವೂ ಮುಸ್ಲಿಂಮರ ತಾಳಕ್ಕೆ ಕುಣಿಯುವ ನಮ್ಮ ರಾಷ್ಟ್ರನಾಯಕರಿಂದಾಗಿ ಅನೇಕ ದಶಕಗಳ ಕಾಲ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂದ ಕಡಿದುಕೊಂಡಿತ್ತು. ಡೇವಿಸ್ ಕಪ್ ಟೆನಿಸ್ ಫೈನಲ್ ನಲ್ಲಿ ಎದುರಾಳಿ ಇಸ್ರೇಲ್ ಆದಾಗ ಆಡದೆ ಬಿಟ್ಟುಕೊಟ್ಟಿತ್ತು!!!). ಪ್ಯಾಲಸ್ತೀನಿಯರ ಉಗ್ರಗಾಮಿ ಸಂಘಟನೆಗಳು ಹುಟ್ಟಿಕೊಳ್ಳುತ್ತದೆ. ಸುತ್ತಮುತ್ತಲಿನ ಮುಸ್ಲಿಂ ದೇಶಗಳೊಡನೆ ಆಗತಾನೆ ಹುಟ್ಟಿದ ಇಸ್ರೇಲ್ ಯುದ್ದಮಾಡಬೇಕಾಗುತ್ತದೆ. ತಾನು ವಶಪಡಿಸಿಕೊಂಡ ಭೂಭಾಗದಲ್ಲಿ ಒಂದಿಷ್ಟನ್ನು ಈಜಿಪ್ಟ್ ಗೆ ಬಿಟ್ಟುಕೊಟ್ಟು ಶಾಂತಿ ಒಪ್ಪಂದ ಮಾಡಿಕೊಳ್ಳುವ ಇಸ್ರೇಲ್ ತನ್ನ ಸಮರ್ಥ ಮಿಲಿಟರಿ ಶಕ್ತಿಯಿಂದ ಇತರ ಮುಸ್ಲಿಂ ದೇಶಗಳನ್ನು ಎದುರಿಸುತ್ತದೆ!!! ಮಧ್ಯಪ್ರಾಚ್ಯ ಬೆಂಕಿಯ ಕುಲುಮೆಯಾಗುತ್ತದೆ. ವಿಶ್ವಸಂಸ್ಥೆಯ ಮದ್ಯಪ್ರವೇಶದೊಂದಿಗೆ ಶಾಂತಿಮಾತುಕತೆ ನಡೆದು ಆ ಪ್ರದೇಶದಲ್ಲಿ ಯಹೂದಿಯರಿಗೆ ಇಸ್ರೇಲ್ ಹಾಗೂ ಅರಬ್ ಮುಸ್ಲಿಮ್ಮರಿಗೆ ಗಾಜಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕ್ ಒಳಗೊಂಡ ಪ್ಯಾಲಸ್ತೈನ್ ಎಂಬ ಎರಡು ದೇಶಗಳನ್ನು ನಿರ್ಮಿಸುವ ಪ್ರಸ್ತಾಪವಾಗುತ್ತದೆ. ಯಹೂದಿಗಳು ಕೂಡಲೇ ಒಪ್ಪಿಕೊಳ್ಳುತ್ತಾರೆ. ಆದರೆ ಅರಾಫಾತ್ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದ ಪ್ಯಾಲಸ್ತೀನಿಯರು ಕೂಡಲೇ ಅಲ್ಲದಿದ್ದರೂ ಅನಂತರದಲ್ಲಿ ಒಪ್ಪಿಕೊಳ್ಳುವ ಅನಿವಾರ್ಯತೆ ಬರುತ್ತದೆ.
           ಆ ನೆಲದಲ್ಲಿ ಎರಡು ದೇಶಗಳು ನಿರ್ಮಾಣವಾದರೂ ಶಾಂತಿ ಮರೀಚಿಕೆಯಾಗುತ್ತದೆ. ಗಾಜಾ ಪಟ್ಟಿ ಹಾಗೂ ವೆಸ್ಟ್ ಬ್ಯಾಂಕ್ ನ ಮುಸ್ಲಿಂ ಯುವಕರು ಇಸ್ರೇಲ್ ಮೇಲೆ ಆಗಾಗ್ಯೆ ಆತ್ಮಾಹುತಿ ಭಯೋತ್ಪಾದಕದಾಳಿ ಮಾಡುತ್ತಲೇ ಇರುತ್ತಾರೆ. ಇಸ್ರೇಲ್ ತಕ್ಕ ಪ್ರತ್ಯುತ್ತರ – ಉಗ್ರಗಾಮಿ ನೆಲೆಗಳ ಮೇಲೆ ರಾಕೆಟ್(ಡ್ರೋಣ್) ದಾಳಿ ಮಾಡಿ ಸೆದೆಬಡಿಯುವ ಮೂಲಕ – ನೀಡುತ್ತದೆ. (ಭಾರತದಲ್ಲಿ – ಇಂತಹ ದಾಳಿಗಳಾದಾಗ – ಅಂತಹ ದಾಳಿಗಳನ್ನು ಭಾರತ ಸಮರ್ಥವಾಗಿ ಎದುರಿಸುತ್ತದೆ – ಎಂದು ನಮ್ಮ ನಾಯಕರು ಸದಾ ಹೇಳಿಕೆ ಕೊಡುತ್ತಾರೆ!!!). ಬಾಂಬ್ ದಾಳಿ ಹಾಗೂ ರಾಕೆಟ್ ದಾಳಿಗಳಲ್ಲಿ ಉದ್ದೇಶಿತ ಜನರ ಜೊತೆ ಎಷ್ಟೋಸಲ ಅಮಾಯಕರೂ ಬಲಿಯಾಗುತ್ತಾರೆ. (ಇತ್ತೀಚೆಗೆ ಕೆಲವು ತಿಂಗಳುಗಳ ಹಿಂದಷ್ಟೇ ಇಸ್ರೇಲ್ ರಾಕೆಟ್ ದಾಳಿಯಿಂದ ಸತ್ತ ತನ್ನ ಒಂದುವರ್ಷದ ಕಂದಮ್ಮನನ್ನು ಕೈಯ್ಯಲ್ಲಿ ಹಿಡಿದುಕೊಂಡು ರೋದಿಸುತ್ತಿದ್ದ ಪ್ಯಾಲಸ್ತೈನ್ ಬಿಬಿಸಿ ವರದಿಗಾರನ ಫೋಟೋ ನೀವು ನೋಡಿರಬಹುದು). ಆತ್ಮಹತ್ಯಾದಾಳಿ ತಡೆಯಲು ಇಸ್ರೇಲ್ ಜೆರುಸಲೇಮ್ ನಲ್ಲಿ ಮೈಲಿಗಟ್ಟಲೆ ಉದ್ದ ಗಡಿಯಲ್ಲಿ ಎರೆಡಾಳೆತ್ತರ ಕಾಂಕ್ರೆಟ್ ಗೋಡೆಯನ್ನೇ ನಿರ್ಮಿಸುತ್ತದೆ.
             ಇತ್ತ ಪ್ಯಾಲಸ್ತೈನ್ ನಲ್ಲಿ ಅಂತರ್ಯುದ್ದ ಶುರುವಾಗುತ್ತದೆ. ಇಸ್ರೇಲ್ ಅಸ್ತಿತ್ವವನ್ನು ಒಪ್ಪಿಕೊಳ್ಳುವ ಅರಾಫಾತ್ ಪಕ್ಷದ ವಿರುದ್ದ – ಬಿಸಿರಕ್ತದ ಮುಸ್ಲಿಂ ತರುಣರ – ಇಸ್ರೇಲ್ ಅನ್ನು ನಾಮಾವಶೇಷಮಾಡುವ ಉತ್ಸಾಹದ – ತೀವ್ರಉಗ್ರಗಾಮಿ ಸಂಘಟನೆ ಹಮಾಸ್ ಬಲಗೊಂಡು – ಪ್ಯಾಲಸ್ತೈನ್ (ಗಾಜಾ ಪಟ್ಟಿ) ಆಡಳಿತ ಹಮಾಸ್ ಕೈವಶವಾಗುತ್ತದೆ!!! (ಲಷ್ಕರ್-ಎ-ತೊಯ್ಬಾದಂತಹ  ಸಂಘಟನೆಗಳಿಗೆ ಪಾಕಿಸ್ತಾನದ ಆಡಳಿತ ಸಿಕ್ಕರೆ ಹೇಗಾಗಬಹುದೆಂದು ಊಹಿಸಿಕೊಳ್ಳಿ). ಇಸ್ರೇಲ್ ತಲೆನೋವು ಮತ್ತೂ ಹೆಚ್ಚಾಗುತ್ತದೆ.  ಉಗ್ರಗಾಮಿ ಸಂಘಟನೆ ಹಮಾಸ್ ನ ಕೈವಶವಾಗುವ ಗಾಜಾ ಪಟ್ಟಿ ಎಂದು ಕರೆಯಲ್ಪಡುವ ಪ್ರದೇಶ ಏನಂತಾ ವಿಸ್ತಾರವಾದ ಪ್ರದೇಶವೇನಲ್ಲ. ಇಸ್ರೇಲಿನ ಪಶ್ಚಿಮಕ್ಕೆ, ಮೆಡಿಟರೇನಿಯನ್ ಸಮುದ್ರಕ್ಕೆ ತಾಗಿದಂತ, ಭೂಪಟದಲ್ಲಿ ಒಂದು ಸ್ಕೇಲ್ ನ ಪಟ್ಟಿಯಂತೆ ಕಾಣುವ, ೪೦ ಕಿ.ಮೀ. ಉದ್ದ ಹಾಗು ಅಂದಾಜು ೬-೧೨ ಕಿ.ಮೀ. ಅಗಲದ ಚಿಕ್ಕ ಭೂಪ್ರದೇಶ!!! ಆದರೆ ಜನಸಂಖ್ಯೆ ವಿಪರೀತ. ಅಂದಾಜು ಹದಿನಾರು ಲಕ್ಷ!!! ಅವರಲ್ಲಿ ಅರ್ದಕ್ಕರ್ದ ಜನ ಇಸ್ರೇಲಿ ಮುನ್ನುಗ್ಗುವಿಕೆಗೆ ತಮ್ಮ ನೆಲೆ ಕಳೆದುಕೊಂಡ ನಿರಾಶ್ರಿತರು. ಸಹಜವಾಗಿಯೇ ಇಸ್ರೇಲಿಗರ ಮೇಲೆ ದ್ವೇಷ ಕುದಿಯುತ್ತಿರುತ್ತದೆ. ಶ್ರೀಮಂತ ಮುಸ್ಲಿಂ ದೇಶಗಳಿಂದ ಹಣ ಹರಿದುಬರುತ್ತಿರುತ್ತದೆ. ಇತ್ತ ನಿರುದ್ಯೋಗ ತಾಂಡವಾಡುತ್ತಿರುತ್ತದೆ. ಭಯೋತ್ಪಾದಕ ಉಗ್ರಗಾಮಿ ಸಂಘಟನೆಗಳು ಬೇರುಬಿಟ್ಟು ಹೆಮ್ಮರವಾಗಲು ಇದಕ್ಕಿಂತ ಉತ್ತಮ ಕಾರಣಗಳಿವೆಯೇ? ಪರಿಣಾಮ – ಸದಾ ಇಸ್ರೇಲ್ ಮೇಲೆ ಆತ್ಮಾಹುತಿದಾಳಿ, ಅಪಹರಣ, ರಾಕೆಟ್ ದಾಳಿ – ಇತ್ಯಾದಿ. ಇದಕ್ಕೆ ಗಾಜಾದಲ್ಲಿ ಈಗ ಆಡಳಿತದಲ್ಲಿ ಕೂತಿರುವ ಹಮಾಸ್ ನ ಸಂಪೂರ್ಣ ಬೆಂಬಲ.
             ಗಾಜಾಪಟ್ಟಿಯ ಪ್ಯಾಲಸ್ತೈನರಿಗೆ ಸರಿಯಾಗಿ ಬುದ್ದಿಕಲಿಸಲು ಇಸ್ರೇಲ್ ಮೆಡಿಟರೇನಿಯನ್ ಸಮುದ್ರದ ತೀರದುದ್ದಕ್ಕೂ ಸೇರಿದಂತೆ ಗಡಿಸುತ್ತಲೂ ದಿಗ್ಬಂದನ ಹಾಕುತ್ತದೆ. ಗಾಜಾನಗರಕ್ಕೆ ಹಡಗುಗಳ ಬರುವಿಕೆ ಸಂಪೂರ್ಣವಾಗಿ ನಿಲ್ಲುತ್ತದೆ. ಗಾಜಾ ಅಂತರಾಷ್ಟ್ರೀಯ ವಿಮಾನನಿಲ್ದಾಣ ಹಾಳುಬೀಳುತ್ತದೆ. ತನ್ನ ಗಡಿಯಲ್ಲಿ ಗಾಜಾದೊಳಕ್ಕೆ ಸರಕು ಸಾಗಾಣೆಗೆ ಒಂದೇ ಒಂದು ಚೆಕ್ ಪೋಸ್ಟನ್ನು ಮುಕ್ತವಾಗಿಡುವ ಇಸ್ರೇಲ್, ನೂರೆಂಟು ನಿಬಂದನೆಗಳಿಂದ ಆ ಚೆಕ್ ಪೋಸ್ಟ್ ಮೂಲಕ ಗಾಜಾದೊಳಗೆ ಸರಕುಗಳ ಸಾಗಣೆ ನಿದಾನವೂ, ಕಷ್ಟವೂ ಹಾಗು ತುಂಬಾ ಖರ್ಚಿನದೂ ಆಗುವಂತೆ ಮಾಡಿದೆ. ಯಾವಾಗ ಅಧಿಕೃತ ದಾರಿಗಳು ಕಷ್ಟಕರವಾಗುತ್ತವೋ ಆಗ ತೆರೆದುಕೊಳ್ಳುವುದು ಅನಧಿಕೃತ ದಾರಿಗಳು!!! (ನಿಮ್ಮ ಅನುಭವಕ್ಕೂ ಬಂದಿರಬಹುದು J). ಗಾಜಾಪಟ್ಟಿಯ ವಿಷಯದಲ್ಲಿ ಆಗಿರುವುದೂ ಅದೇ!!! ಗಾಜಾಪಟ್ಟಿಯ ಒಂದೂವರೆ ದಶಲಕ್ಷ ಜನರ ಅಗತ್ಯತೆಗಳ ತಡೆರಹಿತ ಸರಬರಾಜಿಗೆ ಕಂಡುಕೊಂಡಲ್ಪಟ್ಟ ಮಾರ್ಗವೇ ನೆಲದಾಳದ ಸುರಂಗಗಳು!!!
             ಗಾಜಾಪಟ್ಟಿಯ ಒಂದುಕಡೆ ಮೆಡಿಟರೇನಿಯನ್ ಸಮುದ್ರ ಹಾಗೂ ಮತ್ತೆಲ್ಲಾಕಡೆ ಸುತ್ತಲೂ ಇಸ್ರೇಲ್ ಇದ್ದರೂ ಪಕ್ಕದ ಈಜಿಪ್ಟ್ ನೊಂದಿಗೆ ಎಂಟತ್ತು ಕಿಲೋಮೀಟರ್ ಗಳಷ್ಟು ಉದ್ದದ ಗಡಿಯನ್ನು ಹೊಂದಿದೆ. ನಾನು ಹೇಳಹೊರಟಿರುವ ಸುರಂಗಗಳು ಇರುವುದು ಆ ಗಡಿಯ ಕೆಳಗೇ. ಕಯ್ಯಲ್ಲಿ ಬಂದೂಕು ಹಾಗೂ ಧರ್ಮದ ಪಿತ್ತ ನೆತ್ತಿಗೆರಿರುವ ಪ್ಯಾಲಸ್ತೈನ್ ಉಗ್ರರನ್ನು ಈಜಿಪ್ಟ್ ಆಡಳಿತಗಾರರೂ ಸ್ವಲ್ಪ ದೂರವೇ ಇಟ್ಟಿದ್ದಾರೆ. (ಸುಯೆಜ್ ಕಾಲುವೆ ದಡದಲ್ಲಿರುವ ಈಜಿಪ್ಟ್ ಪ್ರವಾಸೀತಾಣಗಳ ಮೇಲೆ ಮುಸ್ಲಿಂ ಉಗ್ರರ ದಾಳಿ ನಡೆದಿತ್ತು. ಅಷ್ಟಲ್ಲದೇ ಈಜಿಪ್ಟ್ ತಮ್ಮ ಶತ್ರು ಇಸ್ರೇಲ್ ಜೊತೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದುದು ಪ್ಯಾಲಸ್ತೈನ್ ನವರು ಹೇಗೆ ಸಹಿಸಿಯಾರು?). ಆದ್ದರಿಂದ ಈಜಿಪ್ಟ್ ಕೂಡ ತನ್ನ ಗಡಿಯನ್ನು (ಪ್ರವಾಸಿಗರ ಬರುವಿಕೆ ಹಾಗೂ ತೆರಳುವಿಕೆಗೆ ಒಂದು ಚೆಕ್ ಪೋಸ್ಟ್ ಬಿಟ್ಟು(ಜೇಬಲ್ಲಿ ದುಡ್ಡಿಟ್ಟುಕೊಂಡು ಓಡಾಡುವ ಪ್ರವಾಸಿಗರ ಕಿಮ್ಮತ್ತೆ ಅಂಥದ್ದು!!)) ಮುಚ್ಚಿದೆ!!! ಆದ್ದರಿಂದ ಪ್ಯಾಲಸ್ತೈನ್ ನವರ ದಿನನಿತ್ಯದ ಅಗತ್ಯತೆಗಳೂ ಸುರಂಗಗಳ ಮೂಲಕವೇ ಪುರೈಕೆಯಾಗಬೇಕು!!!!
ಸುರಂಗ ನಿರ್ಮಾಣ 
             ಒಂದಿಷ್ಟು ದುಡ್ಡು – ಹೊರದೇಶಗಳಲ್ಲಿ ದುಡಿಯುತ್ತಿರುವ ಕುಟುಂಬದ ಸದಸ್ಯರು ಕಳುಹಿಸಿದ ದುಡ್ಡೋ ಅಥವಾ ಶಾಂತಿಕಾಲದಲ್ಲಿ ಇಸ್ರೇಲ್ ಫಾರ್ಮ್ ಗಳಲ್ಲಿ ದುಡಿದಾಗ ಉಳಿಸಿಟ್ಟ ದುಡ್ಡೋ ಅಥವಾ ಸುರಂಗನಿರ್ಮಾಣಕ್ಕಾಗಿ ಸ್ನೇಹಿತರಿಂದ ಸಾಲ ಎತ್ತಿದ ದುಡ್ಡೋ – ಒಂದಿಷ್ಟು ದುಡ್ಡು ಒಟ್ಟುಮಾಡಿಕೊಂಡ ಒಂದಿಷ್ಟು ಜನ ಒಂದೆಡೆ ಸೇರಿ ಒಂದು ಬಿಸಿನೆಸ್ ಶುರುಮಾಡುತ್ತಾರೆ. ಅದೇ ಸುರಂಗ ನಿರ್ಮಾಣ!!! ಗಡಿಯಿಂದ ಕೆಲವೇ ಮೀಟರ್ ಗಳ ದೂರದಲ್ಲಿ, ಒಂದು ತಾತ್ಕಾಲಿಕ ಟೆಂಟ್ ನಿರ್ಮಾಣವಾಗುತ್ತದೆ. ಮೊದಲು ನಲವತ್ತೈವತ್ತು ಅಡಿ ಆಳ ಬಾವಿತರ ತೋಡುತ್ತಾರೆ. ಅನಂತರ ಅಡ್ಡಡ್ಡ ಕೊರೆಯುತ್ತಾರೆ. ನೆಲದಾಳದಲ್ಲಿಯೇ ಸುರಂಗ ನಿರ್ಬಂದಿತ ಗಡಿದಾಟುತ್ತದೆ!! ನಂತರ ಈಜಿಪ್ಟ್ ಕಡೆ ಮೇಲೆ ಹತ್ತಿಬರುವಂತೆ ಪುನಃ ಬಾವಿತರ ಕೊರೆಯುತ್ತಾರೆ!! ಅಲ್ಲಿಗೆ ಸ್ವಲ್ಪ ಬಗ್ಗಿ ನಡೆದುಕೊಂಡು ಸಾಗಬಹುದಾದ ಸುರಂಗ ರೆಡಿ. ಸುರಂಗ ನಿರ್ಮಾಣದ ಕೆಲಸ ಹಾಗೂ ಅದರ ನಿರ್ವಹಣೆ ಕೆಲಸ ಅತ್ಯಂತ ಅಪಾಯಕಾರಿಯದ್ದು. ಜಾರಿ ಬೀಳುವ ಮಣ್ಣು (ಕೆಲಸಗಾರರನ್ನು) ಹೂತೇ ಹಾಕಬಹುದು. ಶ್ವಾಸಕೋಶ ಸಂಬಂದಿತ ಕಾಯಿಲೆಗಳು ಸದಾ. ಆದರೂ ಅಂತರ್ಯುದ್ದ ಹಾಗೂ ಅಶಾಂತಿ ಪೀಡಿತ ಪ್ಯಾಲಸ್ತೈನ್ ನಲ್ಲಿ ಕೆಲಸಗಾರರಿಗೆನೂ ಬರಗಾಲವಿಲ್ಲ. ಟ್ಯುಶನ್ ಗೆ ದುಡ್ಡು ಹೊಂದಿಸಲು ಪ್ಯಾಲಸ್ತೈನ್ ಯುವಕರು ಈ ಅರೆಕಾಲಿಕ ಕೆಲಸಕ್ಕೆ ಸದಾ ಸಿದ್ದ!!! (ಉತ್ತಮ ಶಿಕ್ಷಣ ಪಡೆದು ಪ್ರಪಂಚದ ಬೇರೆಡೆ ತೆರಳಿ ಕೆಲಸಮಾಡಿ ಮನೆಗೂ ಸ್ವಲ್ಪ ದುಡ್ಡು ಕಳಿಸುವುದು – ಇದು ಅಂತರ್ಯುದ್ದಪೀಡಿತ/(ಹಾಲೀ ಅಥವಾ ಮಾಜಿ)ಕಮ್ಯುನಿಸ್ಟ್ ರಾಷ್ಟ್ರಗಳ ಯುವಕರ ಹೆಬ್ಬಯಕೆ). ಕೆಲವು ವರ್ಷಗಳ ಕೆಳಗೆ – ಸುರಂಗ ನಿರ್ಮಾಣ ಕಾರ್ಯ ಉತ್ತುಂಗದಲ್ಲಿದ್ದಾಗ – ನಂಬಿದರೆ ನಂಬಿ ಬಿಟ್ಟರೆ ಬಿಡಿ – ಹದಿನೈದು ಸಾವಿರಕ್ಕೂ ಹೆಚ್ಚು ಜನರಿಗೆ – ಪ್ರತ್ಯಕ್ಷ ಅಥವಾ ಪರೋಕ್ಷ ಕೆಲಸಕೊಡಲ್ಪಟ್ಟಿದೆ ಈ ವ್ಯವಸ್ತೆಯಿಂದ!!! ಇಂದು ಸುರಂಗಗಳು ಗಡಿಯಪಕ್ಕದಲ್ಲಿ ಎಲ್ಲೆಂದರಲ್ಲಿವೆ. (ಅಧಿಕೃತ ಪ್ರವಾಸೀ ಕೈಪಿಡಿಯಲ್ಲೂ ಉಲ್ಲೇಖವಿದೆಯಂತೆ!!).
            ಈ ಸುರಂಗಗಳ ಮೂಲಕ ಸಾಗಿಸಲ್ಪಡುವ ಸರಕುಗಳು – ನಿರೀಕ್ಷಿತ – ಬೆಂಗಳೂರಿನ ಕಾಲುಭಾಗದಷ್ಟಿನ ಜನಸಂಖ್ಯೆಗೆ ಬೇಕಾದ ಅಗತ್ಯತೆಗಳು. ಆಹಾರ ಧಾನ್ಯಗಳು, ಔಷಧಿಗಳು, ಪೆಟ್ರೋಲ್/ಗ್ಯಾಸ್ ಇತರೆ ಇಂಧನಗಳು, ಬಟ್ಟೆಬರೆಗಳು,ಕಂಪ್ಯೂಟರ್/ಟೀವಿ/ಮೊಬೈಲ್/ಇತರ ಎಲೆಕ್ಟ್ರಾನಿಕ್ ಉಪಕರಣಗಳು, ಅಪಾರ್ಟ್ ಮೆಂಟ್ ಹಾಗೂ ಇತರ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಿಮೆಂಟ್/ಜಲ್ಲಿ/ಉಕ್ಕು ಇತ್ಯಾದಿ ಪರಿಕರಗಳು, ಕುರಿಗಳು, ದನದ ಕರುಗಳು, ಹಣ್ಣುಹಂಪಲುಗಳು. ಒಂದೊಮ್ಮೆಯಂತೂ ಗಾಜಾ ಮೃಗಾಲಯಕ್ಕೆ ಬೇಕಾದ ಸಿಂಹವೊಂದನ್ನೂ (ಕಷ್ಟಪಟ್ಟು) ಸುರಂಗದ ಮೂಲಕ ಸಾಗಿಸಲಾಯಿತಂತೆ!!! ಗಾಜಾದ ಶ್ರೀಮಂತರ/ಅಧಿಕಾರಿಗಳ ಓಡಾಟಕ್ಕೆ ಹವಾನಿಯಂತ್ರಿತ ವಿ.ಐ.ಪಿ. ಸುರಂಗಗಳಿದ್ದಾವಂತೆ!!! ಆಡಳಿತದಲ್ಲಿರುವ ಹಮಾಸ್ ಸಂಘಟನೆಗೆ ಆಯುಧಗಳು ಹಾಗೂ ಹೊರಗಿನಿಂದ ದುಡ್ಡು ಕಳ್ಳಸಾಗಾಣಿಕೆಯಾಗುವುದು ಈ ಸುರಂಗಗಳ ಮೂಲಕವೇ!!! ಸುರಂಗಗಳ ಮೂಲಕ ಸಾಮಾನು ಸಾಗಿಸುವ ಸಾಗಾಟಗಾರರು ಸಾಗಿಸಲ್ಪಡುವ ಪ್ರತಿ ಸರಕಿಗೂ ಇಂತಿಷ್ಟೆಂದು ಸುರಂಗ ನಿರ್ವಾಹಕರಿಗೆ ಹಣ ಕೊಡಬೇಕು. ಅಷ್ಟೇ ಅಲ್ಲದೆ ಹಮಾಸ್ ಕೂಡಾ ಅದರಮೇಲೆ ತೆರಿಗೆ ವಿದಿಸುತ್ತದೆ. ಆ ತೆರಿಗೆಯೇ ವರ್ಷಕ್ಕೆ ಬರಾಬ್ಬರಿ ಏಳುನೂರು ದಶಲಕ್ಷ ಡಾಲರಿನಷ್ಟಾಗುತ್ತದೆಂದರೆ ಆ ವಹಿವಾಟಿನ ಅಗಾದತೆ ನಿಮ್ಮ ಕಲ್ಪನೆಗೆ ಬರಬಹುದು. ಈಗ ಬಹುಶಃ – ಲೇಖನದ ಪ್ರಾರಂಭದಲ್ಲಿ ನಾನು ಹೇಳಿದ ಮಾತು – ಈ ವ್ಯವಸ್ತೆ ಪ್ರಪಂಚದ ಅತಿದೊಡ್ಡ ಕಳ್ಳಸಾಗಾಣಿಕಾ ವ್ಯವಸ್ತೆ – ಎಂದು ನಾನು ಹೇಳಿದ್ದರಲ್ಲಿ ನಿಮಗೆ ಅನುಮಾನವೇ ಇರಲಿಕ್ಕಿಲ್ಲ.
          ಶಾಂತ ಕಾಲಘಟ್ಟದಲ್ಲಿ ಬದುಕುತ್ತಿರುವ ನಮಗೆ (ಕರ್ನಾಟಕದವರಿಗೆ) ಅಲ್ಲಿಯ ವಿಪ್ಲವಗಳು ಅರಿವಿಗೆ ಬರುವುದು ಸ್ವಲ್ಪಕಷ್ಟವೇ. ಅಲ್ಲಿನದು ದಿನನಿತ್ಯ ಸಂಘರ್ಷದ ಬದುಕು. ಪ್ರಪಂಚ ಏನೇಹೇಳಿದರೂ - ತನ್ನ ಸುರಕ್ಷತೆ ತನಗೆ ಮುಖ್ಯ ಎಂದು ಇಸ್ರೇಲ್ – ಪ್ಯಾಲಸ್ತೈನ್ ಮುಸ್ಲಿಮರ ಭಯೋತ್ಪಾದಕತೆ/ಮಾನವ ಬಾಂಬ್ ಗಳನ್ನು – ನಿರ್ದಾಕ್ಷಿಣ್ಯ ಕ್ರಮಗಳಿಂದ ಸಾಕಷ್ಟು ಹತ್ತಿಕ್ಕಿದೆ. (ಪ್ರಪಂಚದ ಅನೇಕ ದೇಶಗಳು ಗಾಜಾಕ್ಕೆ ಸಂಬಂದಪಟ್ಟಂತೆ ಇಸ್ರೇಲ್ ಕ್ರಮವನ್ನು ಖಂಡಿಸಿವೆ. ಬ್ರಿಟನ್ ಪ್ರದಾನಿ ಕ್ಯಾಮರೂನ್ ಅಂತೂ ಗಾಜಾಪಟ್ಟಿಯನ್ನು ಒಂದು ಬಂದೀಖಾನೆಗೆ ಹೋಲಿಸುತ್ತಾರೆ. ಇಸ್ರೇಲ್ ತಲೆಕೆಡಿಸಿಕೊಳ್ಳುತ್ತಿಲ್ಲ). ಜೆರುಸಲೇಮ್ ಸುತ್ತ ಎರಡಾಳೆತ್ತರ ಕಾಂಕ್ರೀಟ್ ಗೋಡೆ ಎಬ್ಬಿಸಿರುವ ಇಸ್ರೇಲ್ – (ನಿರುದ್ಯೋಗಿ) ಪ್ಯಾಲಸ್ತೈನಿಯರು ಬೆಳಿಗ್ಗೆ ಸರದಿಸಾಲಿನಲ್ಲಿ ನಿಂತು – ಹೆಂಡತಿಯಿದ್ದು ಮಕ್ಕಳೂ ಜೊತೆಗೆ ವಾಸಿಸುತ್ತಿರುವ ದಾಖಲೆಯ ಗುರುತಿನ ಚೀಟಿ ತೋರಿಸಿ – ಗೋಡೆಯೀಚೆಯ ಇಸ್ರೇಲಿ ಜಾಗಗಳಿಗೆ ಬಂದು ಕೆಲಸಮಾಡಿ ಸಂಪಾದನೆ ಮಾಡಿಕೊಂಡು – ಸಂಜೆ ವಾಪಸ್ ಗೋಡೆಯಾಚೆಯ ತಮ್ಮ ಮನೆಗಳಿಗೆ ಹೋಗುವ ಅನಿವಾರ್ಯತೆ ತಂದಿದೆ!!!! ಒಂದು ಪೆಟ್ಟು ತನಗೆ ಬಿದ್ದರೆ – ಹತ್ತು ಪೆಟ್ಟು ಹೊಡೆದು – ಅಂತರರಾಷ್ಟ್ರೀಯ ಸಮುದಾಯದ ಖಂಡನೆ ಹೆಚ್ಚಾದಾಗ – ಉದಾರತೆ ತೋರಿಸುವವರಂತೆ – ಹೊಡೆತ ನಿಲ್ಲಿಸುತ್ತದೆ ಇಸ್ರೇಲ್!!!! ಸುರಂಗಗಳು ಪ್ಯಾಲಸ್ತೈನ್ ನವರ ಪಾಲಿಗೆ ಇಸ್ರೇಲ್ ದೌರ್ಜನ್ಯಕ್ಕೆ ತಕ್ಕ ಪ್ರತ್ಯುತ್ತರ. ಜೀವನದ ನರನಾಡಿ.
           ನನ್ನ ಪ್ರತಿ ಬ್ಲಾಗ್ ಲೇಖನಗಳ ಕೊನೆಯಂತೆ ಈ ಲೇಖನದ್ದೂ. ಈ ಗಾಜಾಪಟ್ಟಿಯ ಕಳ್ಳಸಾಗಾಣಿಕಾ ಸುರಂಗಗಳ ಬಗ್ಗೆ, ಈ ವ್ಯವಹಾರ ವಹಿವಾಟಿನ ಬಗ್ಗೆ ನಿಮಗೆ ಗೊತ್ತಿತ್ತೆ? ಅಥವಾ ಈ ಲೇಖನದ ಮೂಲಕವೇ ಗೊತ್ತಾಗಿದ್ದೆ?? ನಿಮ್ಮಭಿಪ್ರಾಯಗಳಿಗೆ ಕಾತುರನಾಗಿದ್ದೇನೆ!!! ಕಾಮೆಂಟಿಸಿ. (ಕಾಮೆಂಟ್ ಮಾಡಲು ಪುರುಸೊತ್ತಿಲ್ಲದಿದ್ದರೆ +1 ರ ಮೇಲೆ ಕ್ಲಿಕ್ ಮಾಡಬಹುದು). ನಿಮ್ಮ ಕಾಮೆಂಟ್ ಗಳು ನಮ್ಮ ತಪ್ಪು ಒಪ್ಪುಗಳಿಗೆ ಕನ್ನಡಿ.