Monday, July 4, 2011

ಕ್ರಯೋನಿಕ್ಸ್: ಕಾಯುತಿವೆ ಹೆಣಗಳು. ಮರುಹುಟ್ಟಿಗಾಗಿ!!!!!!!!


                   ಅಮೇರಿಕಾ ಸಂಯುಕ್ತ ಸಂಸ್ಥಾನದ ಆ ನಗರವೊಂದರಲ್ಲಿ – ಹೊರಗಿನಿಂದ ತೀರಾ ಸಾದಾರಣವಾಗಿ ಕಾಣುವ ಆ ಕಟ್ಟಡವೊಂದರ ಒಳಗೆ - ಕೇವಲ ಯಂತ್ರಗಳ ಗುಯ್ ಗುಟ್ಟುವಿಕೆ ಸದ್ದಿನ ಆ ಗಂಭೀರ ಪರಿಸರದಲ್ಲಿ – ಮೈನಸ್ ೧೯೬ ಡಿಗ್ರೀಯ ದ್ರವರೂಪ ಸಾರಜನಕದ ಅತಿ ಶೀತ ವಾತಾವರಣದ ಆ ಪ್ರತಿಯೊಂದು ಕೋಶದೊಳಗೆ – ಹೌದು ನಿಜ(!!!!) – ಕಾಯುತಿವೆ ದೇಹಗಳು. ಮರುಹುಟ್ಟಿಗಾಗಿ!!!! ಹಾಗೆ ದೇಹಗಳನ್ನು ಆ ರೀತಿ ಕಾಪಿಡಲು – ಪ್ರಾಣ ಆ ದೇಹದಿಂದ ಹೋಗುವುದಕ್ಕಿಂತ ತುಂಬಾ ಮೊದಲೇ – ಆ ದೇಹ ಹೊಂದಿದ್ದ ವ್ಯಕ್ತಿಗಳಿಗೂ ಹಾಗೂ ಆ ಸಂಸ್ಥೆಗೂ ಒಪ್ಪಂದವಾಗಿ ಹಣಸಂದಾಯವಾಗಿದೆ!!. ಅದರಂತೆ ಅವುಗಳನ್ನು (ಆ ದೇಹಗಳನ್ನು) ಸಂರಕ್ಷಿಸಿಡಲಾಗಿದೆ. ಸರಿ. ಪ್ರಾಣ ಹೋದ ದೇಹಗಳನ್ನು ಮಣ್ಣುಮಾಡುವುದು ಬಿಟ್ಟು ಅಲ್ಲೇಕೆ ಅತಿ ಶೀತದಲ್ಲಿ ಸಂರಕ್ಷಿಡಲಾಗಿದೆ?? ಕ್ರಯೋನಿಕ್ಸ್ ಅಂದರೆ ಎನು??? ಈ ಎಲ್ಲಾ ಕೌತುಕಮಯ ವಿಷಯವನ್ನು ನಿಮ್ಮ ಮುಂದಿಡುವುದೇ ಈ ಬ್ಲಾಗ್ ಬರಹದ ಉದ್ದೇಶ. ಆ ದೇಹಗಳು ಮರುಹುಟ್ಟು ಪಡೆಯಬಹುದೇ ಎಂಬ ಪ್ರಶ್ನೆಗೆ ಮಾತ್ರ ಕಾಲವೇ ಉತ್ತರ ಹೇಳಬೇಕು.
ದ್ರವಸಾರಜನಕದ ಕೋಶ 

                   ಮನುಷ್ಯರ ಆಯಸ್ಸು ನಮಗೆಲ್ಲಾ ಗೊತ್ತಿರುವಂತೆ ಹೆಚ್ಚೆಂದರೆ ೧೨೦ ವರ್ಷ. ಅದೆಷ್ಟೇ ಶಕ್ತಿಶಾಲಿ ವ್ಯಕ್ತಿಯಾದರೂ ಒಂದಲ್ಲಾ ಒಂದು ದಿನ ಸಾಯಲೇ ಬೇಕು. ಸತ್ತಮೇಲೆ ಒಂದೇ ಮಣ್ಣು ಇಲ್ಲಾ ಬೂದಿಯಾಗಬೇಕು. ಹೀಗೆಂದು ನಾವೆಲ್ಲಾ ತಿಳಿದುಕೊಂಡಿದ್ದೇವೆ. ಆದರೆ ಎಲ್ಲರೂ ಹೀಗೆ ತಿಳಿದುಕೊಂಡಿಲ್ಲ!! ಈ ಪ್ರಪಂಚದಲ್ಲಿ-ಕೆಲವೇ ಕೆಲವು ಮಂದಿ ಮಾತ್ರ-ಮುಂದೆಂದೋ ಒಂದು ದಿನ ವಿಜ್ಞಾನ ಮುಂದುವರೆದು-ಮರಣ ಹೊಂದಿದರೂ ಕೊಳೆಯಲು ಬಿಡದೆ ದೇಹವನ್ನು ಸುಸ್ಥಿತಿಯಲ್ಲಿಟ್ಟಿದ್ದರೆ-ಭವಿಷ್ಯದಲ್ಲಿ ಮುಂದೆಂದಾದರೂ ಮರುಜೀವ ಪಡೆಯಬಹುದೆಂದು ನಂಬಿದ್ದಾರೆ!!!!! ಅವರೇ ಕ್ರಯೋನಿಸ್ಟ್ ಗಳು (ಅತಿಶೀತದೇಹಸಂರಕ್ಷಕವಾದಿಗಳು-ಎಂದು ಕರೆಯಬಹುದೇನೋ!!!). ಹಾಗೆ ದೇಹವನ್ನು (ಅಥವಾ ಅಂಗಾಗಗಳನ್ನು) ಸಾವಿನ ನಂತರ ಕೊಳೆಯದಂತೆ ಅತಿಶೀತದಲ್ಲಿ ಸಂರಕ್ಷಿಸಿಡುವ ವಿದಾನವೇ ಕ್ರಯೋನಿಕ್ಸ್!!!
            ಆ ರೀತಿ ಸಾವನ್ನು ತಾತ್ಕಾಲಿಕವೆಂದು ಸ್ವೀಕರಿಸಿ ಮುಂದೆಂದೋ ಬದುಕುವ ಕನಸುಕಂಡವರು ಸಾವಿರಾರುಜನ ಇರಬಹುದು. ಆದರೆ ಆ ದಿಕ್ಕಿನಲ್ಲಿ ಪ್ರಯತ್ನ ಮಾಡಿದವನು ಮಾತ್ರ ಭೌತಶಾಸ್ತ್ರದ ಆ ಪ್ರೊಫೆಸರ್. ಆತನ ಹೆಸರೇ ರಾಬರ್ಟ್ ಚೆಸ್ಟರ್ ವಿಲ್ಸನ್ ಎಟಿಂಜರ್. ಈ ವಿಷಯದ ಬಗ್ಗೆ ಪ್ರಾಸ್ಪೆಕ್ಟಾಫ್ ಇಮ್ಮೊರ್ಟಾಲಿಟಿ (Prospect of Immortality)ಎಂಬ ಮಹಾ ಪ್ರಬಂದ ಬರೆದ ಈ ಕನಸುಗಾರ ಅದನ್ನು ಕಾರ್ಯರೂಪಕ್ಕೂ ತಂದ. ಆತನ ಕನಸಿನ ಫಲವೇ ೧೯೭೬ ರಲ್ಲಿ ಡೆಟ್ರಾಯಿಟ್ ಹೊರವಲಯದಲ್ಲಿ ಸ್ಥಾಪಿತವಾದ ಇಂತಹ ದೇಹಗಳನ್ನು ಭವಿಷ್ಯಕ್ಕಾಗಿ ಸಂರಕ್ಷಿಸಿಡುವ ಕ್ರಯೋನಿಕ್ಸ್ ಇನ್ಸ್ಟಿಟ್ಯುಟ್. ಎಟಿಂಜರ್ ದೇಹಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿಡುವ ಆ ಕೇಂದ್ರ ತೆರೆದಮೇಲೆ ಆದ ಮೊದಲ ಗಿರಾಕಿಯೇ ಆತನ ಅಮ್ಮ!!! ಹೌದು. ದ್ರವರೂಪ ಸಾರಜನಕದ ಆ ಕೋಶದೊಳಗೆ ಮೊತ್ತಮೊದಲು ಸಂರಕ್ಷಿಸಿಟ್ಟಿದ್ದು ಎಟಿಂಜರ್ ಸತ್ತ ತನ್ನ ತಾಯಿಯನ್ನ!!! ಇಂದು ಆಕೆಯ ದೇಹದ ಜೊತೆಗೆ ಎಟಿಂಜರ್ನ ಮೊದಲ ಹಾಗೂ ಎರಡನೆಯ ಹೆಂಡತಿಯರ ದೇಹಗಳೂ ಹಾಗೂ ೯೨ ಇತರೆ ದೇಹಗಳೂ ದ್ರವಸಾರಜನಕದ ಅತಿಶೀತ ಕೊಶಗಳಲ್ಲಿ ಕೆಡದೇ ಆ ಕೇಂದ್ರದಲ್ಲಿ ಸಂರಕ್ಷಿಸಲ್ಪಟ್ಟಿದೆ. ಕೇವಲ ಮನುಷ್ಯವರದ್ದೊಂದೇ ಅಲ್ಲ, ೬೪ ನಾಯಿ-ಬೆಕ್ಕು ಮೊದಲಾದ ಮುದ್ದಿನ ಪ್ರಾಣಿಗಳ ದೇಹ ಅಲ್ಲದೇ ೧೬೦ ಮನುಷ್ಯರ ಅಂಗಾಂಗಗಳನ್ನು ಅಲ್ಲಿ ಸಂರಕ್ಷಿಸಿಡಲಾಗಿದೆ. (ನೀವು ಓದುತ್ತಿರುವ ದಿನದ ಲೆಕ್ಕ ಬೇರೆಯೇ (ಹೆಚ್ಚು) ಇರಬಹುದು. ತಿಳಿಯುವ ಕುತೂಹಲವಿದ್ದರೆ ಇಲ್ಲಿ ಕ್ಲಿಕ್ಕಿಸಿ). ಇಲ್ಲಿ ಮಜಾ ಏನೆಂದರೆ ೯೨ ವರ್ಷದ ಆ ಪುಣ್ಯಾತ್ಮ ಎಟಿಂಜರ್ ಇನ್ನೂ ಬದುಕಿಯೇ ಇದ್ದಾನೆ.  
        ಇವರಿಗೆಲ್ಲ ತಲೆಕೆಟ್ಟಿದೆಯೇ? ಕಾನೂನು ಇದನ್ನು ಒಪ್ಪುತ್ತದೆಯೇ?? ಜೇಬು ತುಂಬಾ ದುಡ್ಡಿದ್ದು ಸಂಸಾರದಲ್ಲಿ ಮುನಿಸಿಕೊಂಡು ಮುಂದೊಮ್ಮೆ ಹುಟ್ಟುವ ಬಯಕೆಯ ಧನಿಕರೆ?? ಇಲ್ಲ. ಜೀವ ಇರುವಾಗ ಸಾವಿರಾರು ಡಾಲರ್ ತೆತ್ತು ತಮ್ಮ ದೇಹವನ್ನು ಶೈತ್ಯದಲ್ಲಿ ಸಂರಕ್ಷಿಸಿರುವ ಹಾಗೂ ಹಾಗೂ ಹಣ ಪಾವತಿಸಿ ಮುಂಗಡವಾಗಿ ಅಲ್ಲಿ ಸ್ಥಳ ಕಾದಿರಿಸಿರುವ ಅನೇಕ ಜನ ತಮ್ಮತಮ್ಮ ಕ್ಷೇತ್ರದಲ್ಲಿ ಮೆದಾವಿಗಳೇ!!! ಅಮೇರಿಕಾ (ಯು.ಎಸ್.ಎ) ಮತ್ತು ರಷ್ಯಾಗಳಲ್ಲಿ ಮಾತ್ರ ಹೆಣಗಳನ್ನು ಈ ರೀತಿ ಇಡಲು ಕಾನೂನಿನ ಒಪ್ಪಿಗೆ ಇದೆ. ಅದಕ್ಕೇ ಯುರೋಪಿನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಜರ್ಮನಿಯ ಕ್ರಯೋನಿಸ್ಟ್ ಗಳು ಅಮೆರಿಕಾದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಹತ್ತಿರ ಹತ್ತಿರ ಒಂದೂಕಾಲು ಲಕ್ಷ ಯುರೋಸಮಗ್ರ ದೇಹಶೀತಲೀಕರಣ ಸೌಲಭ್ಯಕ್ಕೆ ಸಹಿಮಾಡಿದರೆ-ಸಾವು ಸಮೀಪಿಸುತ್ತಿರುವಂತೆಯೇ ರಕ್ತ ತೆಳುಮಾಡುವ ರಾಸಾಯನಿಕ ಹಾಗೂ ವೈಟಮಿನ್ ಇ ಗಳನ್ನು ರಕ್ತನಾಳಗಳೊಳಗೆ ತಳ್ಳುವುದು-ಒಮ್ಮೆ ಸಾವು ಅಧಿಕೃತವಾಗಿ ಧೃಡಪಟ್ಟನಂತರ ದೇಹವನ್ನು ಶೀತಲೀಕರಿಸುವುದು-ಅದೇ ಸಮಯದಲ್ಲಿ ರಕ್ತವನ್ನು ಬದಲಾಯಿಸಿ ಅದರ ಸ್ಥಾನದಲ್ಲಿ ಸಂರಕ್ಷಣಾ ದ್ರಾವಣವನ್ನು ರಕ್ತನಾಳದಲ್ಲಿ ತುಂಬುವುದು-ಕೊನೆಯಲ್ಲಿ ದ್ರವರೂಪ ಸಾರಜನಕ ಕೋಶದಲ್ಲಿ ಸಂರಕ್ಷಿಸಿಡುವುದು-ಎಲ್ಲವೂ ಸೇರಿ ಬರುತ್ತದೆ!!! (ಒಮ್ಮೆಲೇ ಅಷ್ಟು ಹಣ ತೆರಲು ಆಗದಿದ್ದರೆ ವಿಮೆಯಂತೆ ಕಂತುಗಳಲ್ಲಿ ಕಟ್ಟಬಹುದಂತೆ) ಎಂಥಾ ಆಶ್ಚರ್ಯ!!!!! (‘ದ್ರವರೂಪದ ಸಾರಜನಕ- ಹಾಗೆಂದರೇನು?? ಎಂಬುವುದು ನಿಮ್ಮ ಪ್ರಶ್ನೆಯಾಗಿದ್ದರೆ- ನೀವು ವ್ಯವಸಾಯ ವೃತ್ತಿಯವರಾಗಿದ್ದು ನಿಮ್ಮ ಮನೆಯಲ್ಲಿ ದನಕರುಗಳಿದ್ದರೆ-ದನಗಳಿಗೆ ಕೃತಕ ಗರ್ಭದಾರಣೆ ಮಾಡಿಸುತ್ತಿದ್ದರೆ-ಕೃತಕ ಗರ್ಭದಾರಣೆ ಮಾಡಿಸಲು ಬಂದವರನ್ನು ಕೇಳಿದರೆ-ಅವರು ಹೇಳುತ್ತಾರೆ ಅದರ ಉಪಯೋಗ ಹಾಗೂ ಪ್ರಾಮುಖ್ಯತೆ).
     ಮುಂದೆಂದಾದರೂ ಒಂದು ದಿನ ಆ ದೇಹಗಳು ಜೀವಪಡೆದು ಎದ್ದು ನಡೆಯುತ್ತವೆಯೇ? ಇದು ಸಾದ್ಯವೇ?? ಇವತ್ತು ಈ ಪರಿಕಲ್ಪನೆ ನಂಬಲೇ ಕಷ್ಟವಾಗುತ್ತದೆಯಲ್ಲವೆ. ಹಾಗಾದರೆ ಅತಿಶೀತದಲ್ಲಿ ದೇಹಗಳ ಸಂರಕ್ಷಣೆ (ಹಾಗು ಮುಂದೆ ಅದರ ಉಪಯೋಗ) ಅಸಾದ್ಯವೆ? ಅಥವಾ ಕಷ್ಟಸಾದ್ಯವೆ? ನಿಸರ್ಗದಲ್ಲಿ ಲಕ್ಷಾಂತರ ವರ್ಷಗಳಿಂದ-ಅನೇಕ ಪ್ರಾಣಿಗಳು-ಅತಿ ಶೀತ ವಾತಾವರಣಕ್ಕೆ ಮೊದಲೇ ಸಜ್ಜಾಗಿ-ತನ್ನೆಲ್ಲಾ ಚಟುವಟಿಕೆಗಳನ್ನು ನಿಲ್ಲಿಸಿ-ಅನೇಕ ತಿಂಗಳುಗಳ ಹಿಮಚಳಿಯನ್ನು ನಿದ್ರಿಸಿ ಕಳೆಯುತ್ತವೆ.(ಹೈಬರ್ನೆಶನ್-ಎಂದು ಕರೆಯುತ್ತಾರೆ). ನಾನು-ಅತಿಶೀತವಾತಾವರಣದಲ್ಲಿ ಜೀವವನ್ನು ಸಂರಕ್ಷಿಸಿಡುವ ಬಗ್ಗೆ ಮುಂದೆ ಕೊಡಲಿರುವ ಉದಾಹರಣೆ-ಕೆಲವು ದಶಕಗಳ ಹಿಂದೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲವೆಂಬುದನ್ನು-ಆ ಉದಾಹರಣೆ ಓದಿದಮೇಲೆ ನೀವೇ ಒಪ್ಪುತ್ತೀರಿ.
        ಇಂದು ವೀರ್ಯಾಣು ಹಾಗೂ ಅಂಡಾಣು ಬ್ಯಾಂಕುಗಳು ಎಲ್ಲಾ (ಸಾದಾರಣ ದೊಡ್ಡ) ಊರುಗಳಲ್ಲೂ ಇವೆ. ವೀರ್ಯಾಣು ಹಾಗೂ ಅಂಡಾಣುಗಳನ್ನು ಎಂದೋ ತೆಗೆದು ಅತಿಶೀತವಾತಾವರಣದಲ್ಲಿ ಸಂರಕ್ಷಿಸಿಟ್ಟಿರುತ್ತಾರೆ. ಅಗತ್ಯಬಿದ್ದಾಗ ಅಗತ್ಯವಿದ್ದವರಿಗೆ ಅದನ್ನು ವರ್ಗಾಯಿಸುತ್ತಾರೆ. ಕೃತಕಗರ್ಭದಾರಣೆಯಿಂದ ಮಗು ಹುಟ್ಟುವುದು ಇಂದು ಅತ್ಯಾಶ್ಚರ್ಯದ ವಿಷಯವೇ ಅಲ್ಲ. ಅತಿಶೀತವಾತಾವರಣದಲ್ಲಿ ವೀರ್ಯಾಣುಗಳು (ಅಂದರೆ ಜೀವ) ಹಾಳಾಗದೆ ಇರುತ್ತವೆ ಎಂಬುದೂ ಅಷ್ಟೇ ಸತ್ಯ!!! ಸ್ಟೆಮ್ ಸೆಲ್ ಗಳಿಗೂ ಬ್ಯಾಂಕ್ ಬಂದಿದೆ. ಇಂದು ಪರಿಹಾರವೇ ಇಲ್ಲದ ಅನೇಕ ಆರೋಗ್ಯಕ್ಕೆ ಸಂಬಂದಪಟ್ಟ ಸಮಸ್ಯೆಗಳಿಗೆ ಮುಂದೆ ಈ ಸ್ಟೆಮ್ ಸೆಲ್ ಗಳು ದಾರಿಯಾಗಲಿವೆ. ಇವೆಲ್ಲಾ ಸಂಗತಿಗಳು ಕೆಲವು ದಶಕಗಳ ಹಿಂದೆ ಕಲ್ಪಿಸಿಕೊಳ್ಳಲೂ ಸಾದ್ಯವಿರಲಿಲ್ಲವಲ್ಲವೆ?
     ಈ ಅತಿಶೀತದೇಹಸಂರಕ್ಷಣೆ ಬಗ್ಗೆ ನಮ್ಮದೇನೆ ಕುತೂಹಲವಿದ್ದರೆ ಅದು ಕುತೂಹಲವಷ್ಟೇ. ನಮ್ಮದೇನೆ ಪ್ರಶ್ನೆಗಳಿದ್ದರೂ ಅವು ಕೇವಲ ಪ್ರಶ್ನೆಗಳಷ್ಟೇ. ಆ ಕುತೂಹಲಗಳಿಗೆ ಆ ಪ್ರಶ್ನೆಗಳಿಗೆ ಸದ್ಯಕ್ಕಂತೂ ಸಮರ್ಪಕ ಉತ್ತರ ಸಿಗುವ ಸಂಬವವಿಲ್ಲ. ಅವು ಪ್ರಶ್ನೆಗಳಾಗಿ ನಮ್ಮಲ್ಲಿಯೇ ಉಳಿಯುತ್ತವೆ. ಕಾಲವೇ ಅವಕ್ಕೆ ಉತ್ತರಹೇಳಬೇಕು. ಆ ಕಾಲವನ್ನು ನಮ್ಮ ಕ್ಷಣಿಕ ಜೀವಿತಾವದಿಯಲ್ಲಿ ನಾವು ಕಾಣುತ್ತೇವೆಯೇ ಎಂಬುದನ್ನೂ ಕಾಲವೇ ಉತ್ತರಿಸಬೇಕು!! ಒಂದಂತೂ ನಿಜ.   ಒಂದಿಷ್ಟು ಮನುಷ್ಯರು-ಆ ಮನುಷ್ಯರ ಚಿತ್ರ ವಿಚಿತ್ರ ಆಸೆಗಳು-ಆ ಆಸೆಗಳನ್ನು ಪೂರೈಸಲು ಎಷ್ಟಾದರೂ ದುಡ್ಡು ಚೆಲ್ಲುವ ಅವರ ಮನೋಭಾವ-ಆ ಮನೋಭಾವವನ್ನೇ ಬಂಡವಾಳವನ್ನಾಗಿಸಿ ದುಡ್ಡುಮಾಡುವ ಒಂದಿಷ್ಟು ಮಂದಿ. ಒಟ್ಟಾರೆ ಈ ಪ್ರಪಂಚವೇ ವಿಚಿತ್ರ.
     ಕ್ರಯೋನಿಕ್ಸ್ ಬಗ್ಗೆ ಈ ಮೊದಲೇ ನಿಮಗೆ ಗೊತ್ತಿತ್ತೆ? ಅಥವಾ ನಿಮಗೂ ಇದೊಂದು ಹೊಸ ವಿಷಯವೇ? ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ. (ಈ ಲೇಖನ ನಿಮಗೆ ಮೆಚ್ಚುಗೆಯಾಗಿದ್ದು ಕಾಮೆಂಟ್ ಬರೆಯಲು ಪುರುಸೊತ್ತಿಲ್ಲದಿದ್ದರೆ   (ಈ ಪ್ಯಾರದ) ಕೆಳಗೆ +1 ರ ಮೇಲೆ ಕ್ಲಿಕ್ ಮಾಡಬಹುದು!!)






10 comments:

  1. ಸುಬ್ರಮಣ್ಯರೆ,
    ಈ ಲೇಖನಕ್ಕಾಗಿ ತುಂಬಾ ಧನ್ಯವಾದಗಳು. ಕ್ರಯೋನಿಕ್ಸದ ಬಗೆಗೆ ನನಗೆ ಮೊದಲು ಗೊತ್ತಿರಲಿಲ್ಲ. ಇದನ್ನು ವಿಜ್ಞಾನದ ಪ್ರಗತಿ ಎನ್ನಬೇಕೊ ಅಥವಾ ಉಳ್ಳವರ ತೆವಲು ಎನ್ನಬೇಕೊ ತಿಳಿಯದು! ಏನೆ ಆದರೂ, ಇದು ಸ್ವಾರಸ್ಯಕರ ವಿಷಯ. ನಮ್ಮ ಜೊತೆಗೆ ಈ ಮಾಹಿತಿಯನ್ನು ಸರಾಗ ಶೈಲಿಯಲ್ಲಿ ಹಂಚಿಕೊಂಡದ್ದಕ್ಕಾಗಿ ನಿಮಗೆ ಧನ್ಯವಾದಗಳು.

    ReplyDelete
  2. ಇದರ ಬಗ್ಗೆ ಓದಿದ್ದೆ... ಚೆನ್ನಾಗಿದೆ.

    ReplyDelete
  3. ಲೇಖನ ಸ್ವಾರಸ್ಯವಾಗಿ ಮೂಡಿಬಂದಿದೆ. ಹೊಸ ವಿಚಾರವನ್ನು ತಿಳಿಸಿದ್ದಕ್ಕೆ ನಿಮಗೆ ವಂದನೆಗಳು.

    ReplyDelete
  4. ನಿಜವಾಗಿಯೂ ತುಂಬಾ ಅಚ್ಚರಿ ಮೂಡಿಸಿತು! ಈ ಮೊದಲ ಇಂಥ ವಿಷಯ ಕೇಳಿರಲಿಲ್ಲ.. ಎಂಥ ಹುಚ್ಚು ಕೆಲ ಮಾನವರಿಗೆ! "ನಶ್ವರ ದೇಹ" ಎನ್ನುವ ಪದ ಮುಂದೆ ಬರಿ ನೆನಪಾಗಬಹುದೇ.. ಕಾಲವೇ ಉತ್ತರಿಸಬೇಕು! ಈ ವಿಷಯದ ಬಗ್ಗೆ ತಿಳಿಸಲು ನಿಮ್ಮ ಲೇಖನದ ಶ್ರಮ ಮೆಚ್ಚಬೇಕು!

    ReplyDelete
  5. ಸುಬ್ರಹ್ಮಣ್ಯ..
    ಈ ವಿಚಾರದ ಬಗ್ಗೆ ಕೆಲತಿ೦ಗಳುಗಳ ಮೊದಲು ಸುಧಾ ಪತ್ರಿಕೆಯಲ್ಲಿ ಓದಿದ್ದೆ.ಮತ್ತು ಇದರ ಜೊತೆಗೆ ಅನೇಕ ಸಮಸ್ಯೆಗಳೂ ಇವೆ..
    ಕ್ರಯೋನಿಕ್ಸ್ ನಲ್ಲಿ ಸ೦ರಕ್ಷೀಸಿಟ್ಟ ಮನುಶ್ಯರು ಯಾವುದಾದರೂ ಕ್ಯಾನ್ಸರ್ ಏಡ್ಸ್ ಮು೦ತಾದ ಭಯ೦ಕರ ಕಾಯಿಲೆಯಿ೦ದ ಸತ್ತಿದ್ದಲ್ಲಿ ಆ ದೇಹಕ್ಕೆ ಮತ್ತೆ ಜೀವ ಬ೦ದಾಗ ಆ ಕಾಯಿಲೆಗಳ ಕಥೆಯೇನು? ಅವೂ ಜೊತೆಗೆ ಬರುತ್ತವೆಯೇ.. ಅವರ ಹಿ೦ದಿನ ಪರಿಸರಕ್ಕೂ ನ೦ತರದ ಪರಿಸರಕ್ಕೂ ನೂರಾರು ವರ್ಷಗಳ ಅ೦ತರವಿರುತ್ತದೆಯಲ್ಲವೇ.. ಇದಕ್ಕೆಲ್ಲಾ ಪರಿಹಾರವೇನು.. ?
    ವಿಜ್ನಾನ ಮು೦ದುವರೆದ೦ತೆ ಸಮಸ್ಯೆಗಳು ಜೊತೆ ಜೊತೆಗೆ ಬರುತ್ತವೆ..

    ReplyDelete
  6. ನಂಗೊತ್ತಿತ್ತು. ಡಾಕ್ಟರ್ ಬರೆದ್ರೆ ಏನೋ ಹೊಸದು ಇರುತ್ತೇಂತ.

    ReplyDelete
  7. ಹೆಚ್ಚಿನ ಮಾಹಿತಿ-ರಾಬರ್ಟ್ ಚೆಸ್ಟರ್ ವಿಲ್ಸನ್ ಎಟಿಂಜರ್ ಮೊನ್ನೆ ಸತ್ತ. ಅವನ ಹೆಣವನ್ನೂ ಹಾಗೇ ಸಂರಕ್ಷಿಸಿ ಇಟ್ಟಿದ್ದಾರೆ!!!

    ReplyDelete
  8. ಕ್ರಯೋಜನಿಕ್ಸ್ ಬಗ್ಗೆ ಸ್ವಲ್ಪ ಗೊತ್ತಿತ್ತು. ಕ್ರಯೋನಿಕ್ಸ್ ಬಗ್ಗೆ ಗೊತ್ತಿರಲಿಲ್ಲ. ಲೇಖನ ತುಂಬಾ ಚೆನ್ನಾಗಿದೆ. ಅಭಿನಂದನೆಗಳು

    ReplyDelete
  9. ಅಮೆರಿಕಾದಲ್ಲಿ ಈರೀತಿ ದೇಹವನ್ನು ಮತ್ತೆ ಜೀವಬರಿಸುವ ಪ್ರಯತ್ನದಲ್ಲಿ ಕಾದಿರಿಸಿದ್ದಾರೆ ಎ೦ದು ಕೇಳಿದ್ದೆ. ಆದರೆ 'ಕ್ರಯೋನಿಕ್ಸ್' ಬಗ್ಗೆ ಇಷ್ಟು ವಿವರವಾಗಿ ತಿಳಿದಿರಲಿಲ್ಲ. ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

    ReplyDelete
  10. ಹೊಸ ವಿಚಾರ ಸರ್. ಹೇಳಿದ್ದಕ್ಕಾಗಿ ಧನ್ಯವಾದ..................

    ReplyDelete