Friday, January 8, 2010

ಮಲೆನಾಡಿನ ಮಧ್ಯದಿಂದ (ವಿನೋದ ಪ್ರಸಂಗಗಳು)-2

ಇದು ಅನೇಕ ವರ್ಷದ ಕೆಳಗೆ ಮಲೆನಾಡಿನಲ್ಲಿ ನಡೆದ ಸಂಗತಿ. ಶಾಮ ಭಟ್ಟರು ಶೃಂಗೇರಿಯ ಒಬ್ಬ ಪಟಾಪಟಿ ಬ್ರಾಹ್ಮಣ. ಮಾತುಗಾರಿಕೆಯಲ್ಲಿ ಎತ್ತಿದ ಕೈ. ತೋರು ಬೆರಳು ಮತ್ತು ಮಧ್ಯದ ಬೆರಳ ಮಧ್ಯೆ ಬ್ರಿಸ್ಟಾಲ್ ಸಿಗರೆಟ್ ಹಚ್ಚಿ ಹಿಡಿದು ಕೈಯ್ಯನ್ನು ಮುಷ್ಟಿಮಾಡಿ ಸಿಗರೇಟನ್ನು ತುಟಿಗೆ ತಾಗಿಸದೆ ಮುಷ್ಟಿಯ ಮೇಲ್ತುದಿಯಿಂದಲೇ ಸಿಗರೇಟು ಎಳೆಯುತ್ತಾ ಪ್ರತಿಯೊಂದು ವಿಷಯದ ಬಗ್ಗೆ ಅವರಾಡುವ ಪಟಾಪಟಿ ಮಾತು ಕೇಳಲು (ಹಾಗು ನೋಡಲು) ಚಂದ.

ಆಗ ಉತ್ತರದಲ್ಲೆಲ್ಲೋ ಸೋತು ಬಂದಿದ್ದ ಇಂದಿರಾ ಗಾಂಧಿ ಮರುಜನ್ಮ ಪಡೆಯಲು ನಿಂತಿದ್ದು ನಮ್ಮ ಚಿಕ್ಕಮಗಳೂರು ಕ್ಷೇತ್ರದಲ್ಲೆ. ತುರ್ತು ಪರಿಸ್ತಿತಿಯ ಕಟ್ಟಾ ವಿರೋಧಿಯಾಗಿದ್ದ ಭಟ್ಟರಿಗೆ ನೇರವಾಗಿ ಇಂದಿರಾಗೇ ಬುದ್ದಿ ಕಲಿಸಲು ಸಿಕ್ಕಿದ ಸದಾವಕಾಶ. ದಿನಕ್ಕೊಂದು ಹೊಸ ಸುದ್ದಿ. ಭಟ್ಟರಿಗೆ ಉಮೆದವೋ ಉಮೇದ. ಪಟಾಪಟಿಗೆ ಕೊನೆಯೇ ಇಲ್ಲ. ಆಕೆಗೆ ಬುದ್ದಿ ಕಲಿಸಲು ಇದೇ ಒಳ್ಳೆ ಅವಕಾಶ, ಪ್ರತಿಯೊಬ್ಬರೂ ಸೋಮಾರಿತನ ಬಿಟ್ಟು ಓಟು ಹಾಕಿ ಎಂದು ಭಟ್ಟರು ಎಲ್ಲರಿಗೂ ಹೇಳಿದ್ದೇ ಹೇಳಿದ್ದು.

ಕೊನೆಗೂ ಆ ದಿನ ಬಂದೇಬಿಟ್ಟಿತು. ಭಟ್ಟರು ಸ್ನಾನ ಪೂಜೆ ಎಲ್ಲಾ ಪೂರೈಸಿ ಹತ್ತು ಘಂಟೆ ಹೊತ್ತಿಗೆ ಓಟ್ ಹಾಕಲು ಭೂತ್ ಪಕ್ಕ ಬಂದರು. ಒಂದೈದು ನಿಮಿಷ ಸ್ನೇಹಿತರ ಜೊತೆ ಹರಟೆಹೊಡೆದು ಕ್ಯೂ ಸ್ವಲ್ಪ ಕರಗಿದಮೇಲೆ ಓಟ್ ಹಾಕಲು ಒಳ ನಡೆದರು. ಆದರೆ ಯಾವನೋ ಪಕಡಾ ಒಬ್ಬ ಇವರ ಓಟನ್ನ ಆಗಲೇ ಹಾಕಿಯಾಗಿತ್ತು. (ಎಲೆಕ್ಷನ್ ಕಾರ್ಡ್ ಇಲ್ಲದ ಆ ದಿನಗಳಲ್ಲಿ ಯಾರದ್ದೋ ಓಟು ಯಾರೋ ಹಾಕುವುದು ಮಾಮೂಲು). ‘ನಿಮ್ಮ ಓಟು ಆಗಿದೇರಿ’ ಅಂದಾಗ ಭಟ್ಟರಿಗೆ ಹ್ಯಾಗಾಗಿರಬ್ಯಾಡ?

ಕೆಂಡ ಮಂಡಲರಾದ ಭಟ್ಟರು ಹೊರಗೆ ಬಂದರು. ಭ್ರಷ್ಟ ವ್ಯವಸ್ತೆಯ ಬಗ್ಗೆ ದೊಡ್ಡ ಭಾಷಣವನ್ನೇ ಶುರುಮಾಡಿದರು. ತಮ್ಮ ಎಂದಿನ ಶೈಲಿಯಲ್ಲಿ ಎಲ್ಲರನ್ನೂ ಟೀಕಿಸಲು ಶುರುಮಾಡಿದರು. ಹತ್ತು ನಿಮಿಷಕ್ಕೂ ಹೆಚ್ಚು ಇದು ನಡೆಯಿತು. ಹಾಗೆಯೇ ಅವರ ವಾಗ್ಜ್ಹರಿ ಗಂಟೆಗಟ್ಟಲೆ ಮುಂದುವರಿಯುತ್ತಿತ್ತೇನೋ. ಆದರೆ ಅಷ್ಟರಲ್ಲೇ ಅಲ್ಲಿದ್ದ ಒಬ್ಬ- “ ಭಟ್ರೇ, ಇಲ್ ಬಿಡಿ. ಪರವಾಗಿಲ್ಲ. ನಿಮ್ಮ ಬದ್ಲ್ ಇನ್ನೊಬ್ಬ ಓಟ್ ಹಾಕಿದ. ನೀವು ಇಲ್ಲೇ ಕೂಗಾಡ್ತಾ ಇರಿ. ನಿಮ್ ಮನೇಲಿ ಹೀಗೆ ಆದ್ರೆ ಏನ್ ಕಥೆ ? ಮೊದ್ಲು ಮನೆಗೆ ಹೋಗಿ” ಎಂದ. ಅಲ್ಲಿದ್ದವರೆಲ್ಲ ಗೊಳ್ಳೆಂದು ನಕ್ಕರು.

ಭಟ್ಟರ ಸಿಟ್ಟು ಇಳಿಯಲು ಕೆಲವು ಸಿಗರೇಟು ಬೇಕಾಯಿತು.

10 comments:

  1. ನಿಜಕ್ಕೂ ನಿಮ್ಮ ಲೇಖನ ತುಂಬಾ ಸೊಗಸಾಗಿದೆ.

    ReplyDelete
  2. ಹಹಹಹ
    ನಗು ತಡೆಯೋಕೆ ಆಗ್ತಾ ಇಲ್ಲ
    ತುಂಬಾ ಚೆನ್ನಾಗಿ ಬರೆದಿದ್ದಿರಾ

    ReplyDelete
  3. ಹ್ಹಾ..ಹ್ಹಾ...!!
    ನಗು ತಡೆದು ಕೊಳ್ಳಿಕ್ಕೆ ಆಗ್ತಾ ಇಲ್ಲ...!!

    ನಗಿಸಿದ್ದಕ್ಕೆ ಥ್ಯಾಂಕ್ಸು...!

    ReplyDelete
  4. ಜಗದೀಶ್ ಅವರಿಗೆ ಧನ್ಯವಾದ.
    ಪ್ರಖ್ಯಾತ ಬ್ಲಾಗಿರಾದ ಸಾಗರದಾಚೆಯ ಇಂಚರ ಹಾಗು ಸಿಮೆಂಟು ಮರಳಿನ ಮಧ್ಯೆ ಇವರಿಗೂ ಬ್ಲಾಗ್ ಲೋಕದಲ್ಲಿ ಕಣ್ಣು ಬಿಡುತ್ತಿರುವ ನಮ್ಮ ಬ್ಲಾಗ್ ಓದಿ ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದ.

    ReplyDelete
  5. ಬಹಳ ಚೆನ್ನಾಗಿದೆ ಶಾಂಭಟ್ರ ಕತೆ!

    ReplyDelete
  6. ಧನ್ಯವಾದಗಳು ಗೌತಂ ಹೆಗ್ಡೆ ಹಾಗು ಭಾವಜೀವಿ ಅವರಿಗೆ.

    ReplyDelete
  7. chennaagive......... nagu barisiddakke thankssssss

    ReplyDelete
  8. ಚೆನ್ನಾಗಿದೆ. ನಾವೂ ಇಂತಹ ಅನೇಕ ಘಟನೆಗಳನ್ನು ನೋಡಿರುತ್ತೇವೆ ಇಲ್ಲ ಕೇಳಿರುತ್ತೇವೆ, ಆದರೆ ಅದನ್ನು ಸ್ವಾರಸ್ಯಕರವಾಗಿ ಹೇಳುವುದು/ನಿರೂಪಿಸುವುದು ಒಂದು ಕಲೆ

    ReplyDelete