Monday, February 1, 2010

ಮಲೆನಾಡಿನ ಮದ್ಯದಿಂದ (ವಿನೋದ ಪ್ರಸಂಗಗಳು) - 3

ಬೆಳಿಗ್ಗೆ ಮುಂಚೆ ಸವಿ ನಿದ್ದೆಯಿಂದ ಎದ್ದು ಬರುತ್ತಿದ್ದಂತೆ ಬಸವನ ಆಡಿಸುವವನ ವಾಲಗದ ‘ಪೆ-ಪೆ-ಪ್ಯಾ’ ಶಬ್ದ, ಕಟ್ಟಿಹಾಕಿದ ದೊಡ್ಡ ದನಿಯ ನಾಯಿಗಳ ಬೊಗಳುವಿಕೆಯ ಪ್ರತ್ಯುತ್ತರ-ಕೇಳಿದಾಗ ಬಾಲಭಟ್ರಿಗೆ ಹ್ಯಾಗಾಗಿರಬೇಡ? ಅದಕ್ಕಿಂತ ಹೆಚ್ಹಾಗಿ ಬಸವನ ಆಡಿಸುವವನು “ನಿವ್ ಸುಮ್ನಿರಿ, ಹೋಗಿ. ನಿಮ್ಮಣ್ಣನ ಕರೀರಿ” ಅಂದಾಗ ಎಷ್ಟು ಸಿಟ್ಟು ಬಂದಿರಬೇಡ? ಬನ್ನಿ, ಮೊದಲಿಂದ ಓದಿ.


ರಮೇಶರಾಯರು ನಮ್ಮ ಪಕ್ಕದ ಊರಿನ ವ್ಯವಸಾಯಗಾರರು. ಒಳ್ಳೆಯ ಮನುಷ್ಯ. ನೋಡಲು ತುಂಬಾ ಗಂಭೀರರಾಗಿ ಕಾಣುತ್ತಾರೆ. ಆದರೆ ವಿನೋದ ಪ್ರವೃತ್ತಿಯ ಮನುಷ್ಯ. (ಅವರ ಬಗ್ಗೆ ನನ್ನ ಹಿಂದಿನ ಬ್ಲಾಗಿನಲ್ಲಿ ಓದಿ). ಒಮ್ಮೆ ಬೈಕ್ ನಲ್ಲಿ ರಮೇಶರಾಯರು ಕೊಪ್ಪಕ್ಕೆ ಹೋಗುತ್ತಿರುವಾಗ ಕುಂಚೂರು ಘಾಟಿಲಿ ಒಬ್ಬ ಬಸವನ ಆಡಿಸುವವನು ಎತ್ತಿನ ಜೊತೆ ಹೋಗುತ್ತಿದ್ದುದ್ದನ್ನು ಕಂಡು ಬೈಕನ್ನು ಗಕ್ಕನೆ ನಿಲ್ಲಿಸಿದರು.


“ಪುಣ್ಯಾತ್ಮ ಮಹಾರಾಯ. ಅಂತೂ ಸಿಕ್ಕಿದಿಯಲ್ಲ. ಒಬ್ಬ ಬಸವನ ಆಡಿಸುವವನು ಕಾಣದೆ ಎಷ್ಟ್ ದಿನ ಆಗಿತ್ತು. ದೇವರ ದಯೆ. ಇಲ್ಲಾಂತೊಂದ್ ಹೇಳ್ಬೇಡ “-ಅಂತ ರಾಯರು ಹೇಳಿದಾಗ ಬಸವನ ಆಡಿಸುವವನು ಕಕ್ಕಾಬಿಕ್ಕಿಯಾಗಿ ಕೇಳಿದ-“ಏನ್ ಹೇಳಿ ಸ್ವಾಮಿ? “. ಅದಕ್ಕೆ ರಾಯರು “ನಮ್ಮಮ್ಮ ಒಂದ್ ಹರಕೆ ಬಸವನ ಆಟ ಆಡಿಸ್ತೀನಿ ಅಂತಾ ಹೇಳ್ಕಂಡಿದ್ಲಂತೆ ಕಣಯ್ಯಾ.ಎಷ್ಟೋ ವರ್ಷದ್ ಕೆಳಗೆ ನನ್ನ್ ಮಗಳಿಗೆ ವಾಂತಿ ಬೇದಿ ಆದಾಗ್ ಹೇಳ್ಕಂಡಿದ್ದಂತೆ. ಮರ್ತೆ ಹೋಗಿತ್ ನೋಡ್. ಹೋದ್ ತಿಂಗ್ಳು ಮಗಳಿಗೆ ಟೈಫೈಡ್ ಆದಾಗ್ ಮತ್ ಜ್ಞಾಪಕ ಮಾಡ್ಕೊಂಡು ಹೇಳಿದ್ಲು. ಒಂದ್ ಹರಕೆ ಬಸವನಾಟ ಆಗ್ಬೇಕ್. ಯಾವತ್ ಬರ್ತಿ ಹೇಳ್ “ ಎಂದು ದಪ್ಪ ದನಿಯಲ್ಲಿ ನಿಧಾನವಾಗಿ ಹೇಳಿದರು.


ಬಸವನಾಡಿಸುವವನಿಗೆ ಖುಷಿಯೋ ಖುಷಿ. “ಆಯ್ತು ಸ್ವಾಮಿ. ಅದಕ್ಕೇನ್. ನಿಮ್ಮನೆ ಎಲ್ಲಿ ಹೇಳಿ. ನಿವ್ ಹೇಳಿದ್ಡಿವಸ ಬರ್ತೀನಿ. “ ಅಂದ. ರಮೇಶ ರಾಯರು ಐವತ್ತರ ನೋಟೊಂದನ್ನು ಅವನ ಕೈ ಮೇಲೆ ಹಾಕುತ್ತಾ ಕೊಪ್ಪಾ-ಜಯಪುರ ಮುಖ್ಯ ರಸ್ತೆಯಿಂದ ಸ್ವಲ್ಪವೇ ಒಳಗಿದ್ದ ಮನೆಯ ವಿಳಾಸ ನೀಡಿ- “ಆಮೇಲಿಂದ್ ಹರಕೆ ಆಟ ಆದ್ಮೇಲ್ ಕೊಡ್ತಿನಿ. ನಾಡಿದ್ ಸೋಮವಾರ ಒಳ್ಳೇ ದಿನ. ಬೆಳಿಗ್ಗೆ ಮುಂಚೆ ಆರೂವರೆಗೆ ಬಾ” ಅಂದು ಬೈಕ್ ಹತ್ತಿ ಹೊರಟರು. ಹೊರಟವರು ಮತ್ತೆ ಬೈಕ್ ತಿರುಗಿಸಿ ಬಂದು ನಿಧಾನವಾಗಿ “ಮನೇಲ್ ನಂಜೊತೆ ನನ್ನ ತಮ್ಮನೂ ಇದ್ದಾನೆ. ಅವನಿಗೆ ಇದೆಲ್ಲಾ ನಂಬಿಕೆಯಿಲ್ಲ್ಲ.ನಿನ್ ಬಂದಾಗ ಅವನೇ ಎಲ್ಲಾದ್ರು ಮೊದ್ಲು ಸಿಕ್ಕಿ ಬೈದರೆ ಬೇಜಾರ್ ಮಾಡ್ಕೋಬೇಡ. ನನ್ ಕರಿಯಕ್ ಹೇಳು.“-ಎಂದು ಕಿವಿಯಲ್ಲಿ ಅರುಹಿ ಹೋದರು.


ಸರಿ, ಆದ್ರೆ ರಮೇಶ ರಾಯರ ತಾಯಿ ಸತ್ತು ಯಾವುದೋ ಕಾಲವಾಗಿದೆ. ಮಗಳಿಗೆ ಟೈಫೈಡ್ ಬಂದಿದ್ದೂ ಸುಳ್ಳೇ. ಹರಕೆ ಆಟನು ಸುಳ್ಳೇ. ರಾಯರು ಬಸವನಾಡಿಸುವವನಿಗೆ ಹೇಳಿದ್ದೆಲ್ಲಾ ಸುಳ್ಳೇ. ನಮ್ಮನೆಗೆ ಬೆಳಿಗೆ ಮುಂಚೆನೇ ಬಾ ಎಂದು ಹೇಳಿ ಅವರು ಕೊಟ್ಟಿದ್ದು ತಮ್ಮ ಮನೆ ವಿಳಾಸವಲ್ಲ. ಬದಲಾಗಿ ರಸ್ತೆಯಿಂದ ಸ್ವಲ್ಪವೇ ಒಳಗಿದ್ದ ತನ್ನ ಸ್ನೇಹಿತ ಬಾಲಭಟ್ರ ಮನೆ ವಿಳಾಸವನ್ನ. ಬಾಲಭಟ್ರು ನಮ್ಮ ಪಕ್ಕದೂರಿನ ಜಮೀನ್ದಾರ್ರು. ಒಳ್ಳೇ ಮನುಷ್ಯ. ಮಾತು ಸ್ವಲ್ಪ ಖಡಕ್. ಒಳ್ಳೇ ಲಹರಿಲಿದ್ರೆ ಒಳ್ಳೇ ಮನುಷ್ಯ, ಸಿಟ್ ಬಂದ್ರೆ ಕೋಪಕ್ಕೆ ಕೆಂಪ್ ಕೆಂಪಾಗಿ ಜೋರ್ ಕೂಗ್ತಾರೆ.


ರಾಯರು ಹೇಳಿದ ದಿನ ಬಂತು. ಪಾಪ ಬಸವನಾಡಿಸುವವನಿಗೆ ಹೇಗ್ ಗೊತ್ತಾಗಬೇಕ್ ರಾಯರು ಹೇಳಿದ್ದು ಸುಳ್ಳುಂತ. ಆತನ ಸವಾರಿ ಬೆಳಿಗ್ಗೆ ಮುಂಚೆನೇ ಬಸವ ಮತ್ತು ವಾಲಗದ ಜೊತೆ ಬಾಲಭಟ್ರ ಮನೆಗೆ ಹೋಯಿತು. ಸಿಹಿನಿದ್ದೆಯಿಂದೆದ್ದು ಬಾಲಭಟ್ರು ಹಲ್ಲುಜ್ಜಿ ತ..ನ..ನಾ.. ಎಂದು ತಾಳಹಾಕುತ್ತಾ ಕಾಫಿ ಕುಡಿಯಲು ಬರುತ್ತಿದ್ದಂತೆ ಕಿಟಿಕಿಯಾಚೆಯಿಂದ ಬಸವನಾಡಿಸುವವನ ವಾದ್ಯದ ‘ಪೆ..ಪೆ..ಪ್ಪೇ’ ಶಬ್ದ ಗಟ್ಟಿಯಾಗಿ ಕಿವಿಮೇಲೆ ಬಿತ್ತು. ಅದಕ್ಕೆ ಉತ್ತರವೇನೋ ಎಂಬಂತೆ ಬಾಲಭಟ್ರು ಸಾಕಿದ್ದ ದೊಡ್ಡ ಗಾತ್ರದ ನಾಯಿಗಳ ಕರ್ಕಶ ಕೂಗಾಟ ಶುರುವಾಯಿತು. ಭಟ್ರಿಗೆ ಸಿಟ್ಟು ನೆತ್ತಿಗೇರಿತು. ಹೊರಗೆ ಬಂದು “ಎನೆಯ್ಯ ನಿಂದು? ಹೊತ್ತು ಗೊತ್ತು ಒಂದೂ ಇಲ್ವಾ? ಇನ್ನೂ ಸೂರ್ಯ ಸರಿಯಾಗಿ ಹುಟ್ಟಿಲ್ಲ. ಅಷ್ಟರಲ್ಲೆ ಬಂದು ವಾಲಗ ಊದ್ತಿ”. ಎಂದು ದಬಾಯಿಸಲು ಶುರುಮಾಡಿದರು. ಅದಕ್ಕೆ ಬಸವನವನು ತಣ್ಣಗೆ “ನೀವ್ ಸುಮ್ಕಿರಿ. ನಿಮ್ಮಣ್ಣನ ಕರೆಯಿರಿ”.ಎಂದಾಗ ಅಪ್ಪನಿಗೆ ಒಬ್ಬನೇ ಮಗನಾದ ಭಟ್ರಿಗೆ ಮಾತಾಡುಕ್ಕಾಗದಷ್ಟು ಸಿಟ್ಟು. “ಎಂತಂದಿ?” ಅಂತ ಕೇಳಿದರು. “ನಿಮ್ಮಣ್ಣ ಬೈಕಲ್ಲಿ ಹೋಗೋರು ಸಿಕ್ಕಿ ಹರಕೆ ಆಟ ಇದೆ; ಮುಂಚೆ ಬಾ ಎಂದ್ ಹೇಳಿದ್ದಕ್ಕೆ ನಾನ್ ಬಂದಿದ್ದು” ಎಂದು ಬಸವನವ ಹೇಳಿದ.


ಬೈಕ್ ನಿಲ್ಸಿ ಬರಕ್ಕೆ ಹೇಳಿದ್ರು ಅಂದಾಗ ಬಾಲಭಟ್ರಿಗೆ ಇದು ಯಾರ ಕಿತಾಪತಿಯಾಗಿರಬಹುದೆಂದು ಅಂದಾಜಿಗೆ ಬಂತು. ಸೀದಾ ರಮೆಶರಾಯರಿಗೆ ಫೋನ್ ಮಾಡಿ “ಏನಯ್ಯ ಇದ್ ನಿನ್ ಕತೆ? ಬಸವನಾಡಿಸುವವನನ್ನು ಇಷ್ಟ್ ಮುಂಚೆನೇ ನಮ್ಮನೆಗೆ ಕಳಿಸಿದ್ಯಲಯ್ಯ” ದಬಾಯಿಸಿ ಫೋನ್ ಮಾಡಿದರೆ ಆ ಫೋನನ್ನೇ ಕಾಯುತ್ತಿರುವರಂತೆ ಮನೆಯಲ್ಲಿ ಕೂತಿದ್ದ ರಮೇಶ ರಾಯರು “ಹಲೋ,ಹಲೋ, ಫೋನ್ ಸರಿಯಿಲ್ಲ.one way ಆಗಿದೆ. ನೀವ್ ಮಾತಾಡಿದ್ದು ಕೇಳ್ತಾ ಇಲ್ಲ ಮತ್ ಮಾಡಿ” ಎಂದು ಹೇಳಿ ಕೆಳಗಿಟ್ಟು ಹೊಟ್ಟೆ ಹಿಡಿದುಕೊಂಡು ನೆಗಾಡಿದರು.


( ವಿ.ಸೂ-ಕೆಂಪು ಬುದ್ದಿಯ ಓದುಗರ್ಯಾರಾದರು ಇದನ್ನು ಓದಿ ಮಲೆನಾಡಿನ ಜಮಿನ್ದಾರರುಗಳು ಬಡಪಾಯಿ ಬಸವನಾಡಿಸುವವನನ್ನು ಗೋಳು ಹೊಯಿದುಕೊಂಡರೆಂದು ತೀರ್ಮಾನಿಸಬೇಡಿ. ಸಿಟ್ಟು ಇಳಿದ ಮೇಲೆ ಭಾಲಭಟ್ರು ಅವನ ಜೋಳಿಗೆ ತುಂಬಿಸಿಯೇ ಕಳಿಸಿದರು)

3 comments:

  1. ಮಾಚಿ ಕೊಪ್ಪ ಸರ್
    ಸೂಪರ್
    ತುಂಬಾ ಚೆನ್ನಾಗಿ ಬರೆದಿದ್ದಿರ
    ನಕ್ಕು ನಕ್ಕು ಸುಸ್ತಾದೆ

    ReplyDelete
  2. ಚೆನ್ನಾಗಿದೆ.ನಗುಬರಹ..

    ReplyDelete
  3. ಧನ್ಯವಾದಗಳು ಸಾಗರದಾಚೆಯ ಇಂಚರ ಹಾಗೂ ಮನಮುಕ್ತಾ ರವರಿಗೆ.

    ReplyDelete