Sunday, January 9, 2011

ಗಗನಚುಕ್ಕಿಗಿಂತ ಭರಚುಕ್ಕಿನೇ ಮಜಾ!!!!!!

                       ಈ ಲೇಖನವನ್ನು ಪ್ರವಾಸಕ್ಕೆ ಹೋಗಿಬಂದವರ ಕೊರೆತ ಎಂದು ಪರಿಗಣಿಸಿ ಓದದೆ ಹೋದರೆ ನೀವೂ ಮುಂದೆ ನಾನು ಹಿಂದೆ (ಮೂರು ಬಾರಿ) ಮಾಡಿದ ತಪ್ಪನ್ನು ಮಾಡುವ ಸಂಭವವೇ ಹೆಚ್ಚೆಂದು ನನ್ನನಿಸಿಕೆ. ಹಿಂದೆ (ಹತ್ತು ವರ್ಷದಲ್ಲಿ) ಮೂರು ಬಾರಿ ನಾನು ಶಿವನಸಮುದ್ರಕ್ಕೆ ಹೋಗಿದ್ದೆ. ಕೇವಲ ಗಗನಚುಕ್ಕಿಯನ್ನು ಮಾತ್ರ ನೋಡಿ ಹಿಂದಿರುಗಿದ್ದೆ. ನಾನೀಗ ಬರೆದಂತಹ ಲೇಖನವನ್ನು ನಾನು ಹಿಂದೆಂದೆಲ್ಲಾದರೂ ಓದಿದ್ದರೆ ಅಥವಾ ಭರಚುಕ್ಕಿಯ ಚಿತ್ರಗಳನ್ನು ನೋಡಿದ್ದರೆ-ಇದು ನಿಜ-ನಿಜಕ್ಕೂ ಭರಚುಕ್ಕಿಯನ್ನು ಅಂದು ಬಿಡುತ್ತಿರಲಿಲ್ಲ!!!! ಜಲಪಾತ ಪ್ರವಾಸಕ್ಕೆ ಹೋಗಿಬಂದಮೇಲೆ-ಅನುಭವವನ್ನು ಅನೇಕರೊಂದಿಗೆ ಹಂಚಿಕೊಂಡಾಗ-ನನ್ನ ಗಮನಕ್ಕೆ ಬಂದಿದ್ದು-(ನನ್ನ ಕೆಲವು ಪರಿಚಿತರು ಮಾಡಿದಂತೆ) ಕೇವಲ ಗಗನಚುಕ್ಕಿಯನ್ನು ಮಾತ್ರ ನೋಡಿ ವಾಪಸ್ ಬರುತ್ತಾರೆ. ನನ್ನನಿಸಿಕೆಯಂತೆ ನಿಜವಾದ ಮಜಾ ಇರುವುದು ಭರಚುಕ್ಕಿಯಲ್ಲೇ!!!! 
                       ಸಾದಾರಣ ಬೆಂಗಳೂರು ಮೈಸೂರಿನಿಂದ ಹೊರಡುವ ಮಂದಿ (ಮೊದಲು ಸಿಗುವ) ಗಗನಚುಕ್ಕಿ ತಲುಪುತ್ತಿರುವಷ್ಟರಲ್ಲೇ ಹೈರಾಣರಾಗಿರುತ್ತಾರೆ. ಎರಡು ಮೂರು ಘಂಟೆಗಳ ಸತತ ಪ್ರಯಾಣ ಹಾಗೂ ಮಳವಳ್ಳಿ ಮದ್ದೂರು ಮದ್ಯೆ ಇರುವ ಕೆಟ್ಟ ರಸ್ತೆ ನಮ್ಮನ್ನು ಸುಸ್ತಾಗಿಸುತ್ತವೆ. ಮಳವಳ್ಳಿಯಿಂದ ಹೋಗುವಾಗ ಹೆದ್ದಾರಿಯಿಂದ ಎಡಕ್ಕೆ ಮೊದಲು ಸಿಗುವುದು ಗಗನಚುಕ್ಕಿ. ನಿಜಕ್ಕೂ ಸುಂದರ ದೃಶ್ಯ.ಇಲ್ಲಿ ಎರಡು ಕವಲಾಗಿ ದುಮ್ಮಿಕ್ಕುವ ಕಾವೇರಿಯ ಮೊದಲ ಕವಲು ನೋಡಲು ರುದ್ರರಮಣೀಯ. ಆದರೆ ಅಜ್ಜ್ಯಮ್ಮಂದಿರ ತರ (ದೂರದಲ್ಲೇ ಕೂತು) ಜಲಪಾತ ನೋಡಬೇಕು!!!! ಕೆಳಗೆಲ್ಲೂ ಹೋಗಿ ಹತ್ತಿರದಿಂದ ನೋಡುವಂತಿಲ್ಲ. ಮುಳ್ಳುತಂತಿಯ ಬೇಲಿ ಬೇರೆ. (ಏಳೆಂಟು ವರ್ಷದ ಕೆಳಗೆ ಹೋದಾಗ ಸ್ವಲ್ಪ ಕೆಳಗಿಳಿದು ಹೋಗಿ ಹತ್ತಿರದಿಂದ ನೋಡಿದ ನೆನಪು. ಅಮೇರಿಕಾ ಅಥವಾ ಆಸ್ಟ್ರೇಲಿಯ ಅಥವಾ ಯುರೋಪಾಗಿದ್ದರೆ ಜಲಪಾತದ ಬುಡದಿಂದ, ಎದುರಿನಿಂದ, ಬದಿಯಿಂದ, ಹಿಂದಿಂದ, ನೆತ್ತಿಯಿಂದ ಹಾಗೂ ದುಡ್ಡಿದ್ದವರಿಗೆ ಆಕಾಶದಿಂದಲೂ ನೋಡುವ ವ್ಯವಸ್ಥೆಯಿರುತ್ತದೆಂದು ಕೇಳಿದ್ದ ನನಗೆ ನಿಜಕ್ಕೂ ಬೇಜಾರಾಯಿತು).
ಗಗನಚುಕ್ಕಿಯ ಒಂದು ಕವಲು
ಗಗನಚುಕ್ಕಿಯ ಎರಡೂ ಕವಲುಗಳು
ಜಿಯಾಗ್ರಫಿ ವಿದ್ಯಾರ್ಥಿಗಳಿಗೆ ಬಯಲು ಪಾಠಶಾಲೆ??? 

                       ಇನ್ನು ಇದೇ ಜಾಗದಿಂದ ಎದುರು ಕಾಣುವ ಗಗನಚುಕ್ಕಿಯ ಇನ್ನೊಂದು ಕವಲು. ಕೆಲವರ ಪಾಲಿಗೆ ಅದೇ ಭರಚುಕ್ಕಿ!!! ಅಲ್ಲೊಂದು ಮುಸ್ಲಿಂ ದರ್ಗಾ ಇದೆ. ಇಲ್ಲಿ ಕಾವೇರಿ ಎರಡು ಮೂರು ಹಂತದಲ್ಲಿ ಬಳುಕುತ್ತಾ ದುಮುಕುತ್ತಾಳೆ. (ಮೊದಲ ಬಾರಿಗೆ ಹೋದವರು ಕೂತು) ಗಗನಚುಕ್ಕಿ ನೋಡಿಯಾದಮೇಲೆ ಹೂ. ಮುಗೀತು. ಭರಚುಕ್ಕಿ ಎಲ್ಲಿ? ಎಂದು ಅದು-ಇದು ಮಾರಾಟಮಾಡುವವರನ್ನು ಕೇಳಿದಾಗ ಬರುವ ಉತ್ತರ-ಹದಿನಾರು ಹದಿನೇಳು ಕಿ.ಮೀ.!!! ಹೌದು. ಕಣ್ಣೆದುರು ಕಾಣುವ ಆ ದರ್ಗಾವೂ ವಾಹನದಲ್ಲಿ ಹೋಗುವುದಾದರೆ ಅಷ್ಟೇ ದೂರ. ಪುನಹ ಮುಖ್ಯರಸ್ತೆಗೆ ಬಂದು-ಕೊಳ್ಳೇಗಾಲ ದಿಕ್ಕಿನಲ್ಲೇ ಮುಂದುವರೆದು-ಕಾವೇರಿ ಕವಲೊಡೆಯುವುದಕ್ಕೆ ಮೊದಲು ಇರುವ ಸೇತುವೆ ದಾಟಿ-ಪುನಹ ಎಡಕ್ಕೆ ತಿರುಗಿ-(ಭರಚುಕ್ಕಿಯೆಡೆ ಸಾಗುವ) ಕಾವೇರಿಯ ಕವಲಿಗೆ ಕಟ್ಟಿದ ಸೇತುವೆ ದಾಟಿ-ನಡುಗುಡ್ಡೆಗೆ ಬರಬೇಕು.(ಮದ್ಯರಂಗ??). ಅಲ್ಲಿದೆ ದರ್ಗಾ. ಅದಕ್ಕೆ ಸ್ವಲ್ಪ ಆಚೆ ಇರುವುದೇ ಭರಚುಕ್ಕಿ. ವಿವರಣೆ ಕೇಳಿಯೇ ಗಾಬರಿಯಾಗುವ (ಕೆಲವು) ಪ್ರವಾಸಿಗರು ಅಲ್ಲಿ ಹೋದ್ರುನೂ ಇಷ್ಟೇ ಎಂದು ತಮ್ಮಲ್ಲೇ ಹೇಳಿಕೊಂಡು ಶಿವನಸಮುದ್ರಕ್ಕೆ ಟಾಟಾ ಮಾಡಿ ತಲಕಾಡು ಕಡೆ ತೆರೆಳುತ್ತಾರೆ!!! ಆದ್ರೆ ನಿಜವಾದ ಮಜಾ ಇರುವುದು ಭರಚುಕ್ಕಿಯಲ್ಲೇ. ಏನಿದೆ ಅಲ್ಲಿ ಮಜಾ??  
ಹುರ್ರಾ!!!!!!!!

                                   ಸುತ್ತಿ ಬಳಸಿ ದರ್ಗಾ ತಲುಪಿ ಅಲ್ಲಿಂದ ಭರಚುಕ್ಕಿಯ ಇನ್ನೊಂದು ಕವಲು ನೋಡಿ ಸ್ವಲ್ಪ ಮುಂದೆ ಹೋದರೆ ಕಾಣುವುದೇ ಭರಚುಕ್ಕಿ. ಇದನ್ನು ಒಂದು ಜಲಪಾತ ಅನ್ನುವುದಕ್ಕಿಂತ ಎರಡು ಮೂರು ಹಂತಗಳಲ್ಲಿ ದುಮುಕುವ ಅನೇಕ ಜಲಪಾತಗಳ ಸಮೂಹ ಎನ್ನುವುದೇ ಸರಿ. ವಾಹನ ನಿಲ್ಲಿಸಿ ಒಂದಿಷ್ಟು ಮೆಟ್ಟಿಲು ಇಳಿದು ಸುಲಭವಾಗಿ ಜಲಪಾತದ ಬುಡಕ್ಕೇ ಹೋಗಬಹುದು. ಅತಿ ವಯಸ್ಸಾದ ಅಜ್ಜ್ಯಮ್ಮರನ್ನು ಬಿಟ್ಟು ಹೆಂಗಸರೂ ಚಿಕ್ಕಮಕ್ಕಳೂ ಕೂಡ ಕೆಳಕ್ಕಿಳಿಯಬಹುದು. ಜೋಗಾಕ್ಕೆ ಹೋಲಿಸಿದರೆ ಏನೇನೂ ಅಲ್ಲ.ಕೆಳಕ್ಕಿಳಿದಮೇಲೆ ಬನ್ನಿ ಮಜಾ!!! ಎಲ್ಲಿ ನೋಡಿದರೂ ಜುಳುಜುಳು ನೀರು. ಜಲಪಾತಗಳು!!! ಚಿಕ್ಕ ಮಕ್ಕಳೂ ನೀರಿಗೆ ತಲೆಯೊಡ್ಡಬಹುದು. ಈಜು ಬಲ್ಲವರು ಮನದಣಿಯೇ ಈಜಬಹುದು. ಬಂಡೆ ಮೇಲಿಂದ ನೀರಿನ ಹೊಂಡಕ್ಕೆ ಹಾರಿ ಮುಳುಗು ಹಾಕಬಹುದು. ನೀರಿಗಿಳಿಯುವ ಮನಸ್ಸಿಲ್ಲದೆ ನೀರೊಳಗೆ ಸಾಗುವ ಬಯಕೆಯಿದ್ದರೆ ನಿಮಗಾಗಿ ಉಕ್ಕಡಗಳಿವೆ. ಅದರಲ್ಲಿ ಕೂತು (ಲೈಫ್ ಜಾಕೆಟ್ ಇರುವುದಿಲ್ಲ. ಉಕ್ಕಡ ಮುಳುಗಿದರೆ ಈಜು ಬರದವರು ಗೋವಿಂದ!!!!) ನೀರಿನ ಮಡುವಿನ ಆಚೆಯಿರುವ ಜಲಪಾತದ ಬುಡಕ್ಕೂ ಹೋಗಬಹುದು. ಮಡುವಿನ ಮದ್ಯದಲ್ಲಿ (ಹುಟ್ಟು ಹಾಕುವವನ ಕೃಪೆಯಿಂದ) ಗರಗರನೆ ತಿರುಗುವ ಅನುಭವ ಪಡೆಯಬಹುದು. (ಇಲ್ಲಿ ಕಡಿಮೆ ಅಂದರೂ ಐವತ್ತು ಅಡಿ ಆಳವಿದೆಯಂತೆ!!!) ಹೇಳುವವರು-ಕೇಳುವವರು ಯಾರೂ ಇಲ್ಲ!!! ಮಜವೋ ಮಜಾ.ಅಷ್ಟು ದೂರದ (ಪ್ರಾಯಾಸದ) ಪ್ರಯಾಣ ಸಾರ್ಥಕ.
ಉಕ್ಕಡದ ಮಜಾ!!!!

           ಈಗ ನಿಮ್ಮನಿಸಿಕೆ ಹೇಳಿ-ಗಗನಚುಕ್ಕಿಗಿಂತ ಭರಚುಕ್ಕಿಯೇ ಮಜಾ ಎಂಬ ನನ್ನ ಹೇಳಿಕೆ ಸರಿಯೇ ತಪ್ಪೇ-ಅಂತ. (ಎರಡನ್ನೂ ನೋಡಿದವರ ಅಭಿಪ್ರಾಯ ಇಲ್ಲಿ ಪ್ರಸ್ತುತ) ಈ ಲೇಖನ ನಿಮ್ಮನ್ನು ಇನ್ನು ಮುಂದೆ ಶಿವನಸಮುದ್ರಕ್ಕೆ ಹೋದಾಗ ಭರಚುಕ್ಕಿಗೆ ಕರೆದೊಯ್ಯುತ್ತದೆಂದು ನನ್ನೆಣಿಕೆ.

21 comments:

  1. nimma abiprayakke nanna sahamatavide

    ReplyDelete
  2. ಗಗನಚುಕ್ಕಿ ಹಾಗು ಭರಚುಕ್ಕಿ ಜಲಪಾತಗಳನ್ನು ನಾನು ನೋಡಿಲ್ಲ. ನೀವು ಕೊಟ್ಟಿರುವ ಚಿತ್ರಗಳನ್ನು ನೋಡಿದರೆ, ಭರಚುಕ್ಕಿಯೇ ಹೆಚ್ಚು ಚೆನ್ನಾಗಿದೆ ಎಂದು ತೋರುವದು.

    ReplyDelete
  3. sundara vivarane sir
    naavu hogiddevu kelavu varshada hinde
    nimma photogaly adbhuta

    ReplyDelete
  4. ನಾನೂ ನೋಡಿದ್ದೇನೆ ಸರ್. ಎರಡೂ ಚೆನ್ನಾಗಿವೆ. ಸ್ವಲ್ಪ ತಾಳ್ಮೆಯಿದ್ದರೆ ಭರಚುಕ್ಕಿಯ ಸೌಂದರ್ಯವನ್ನೂ ಸವಿಯಬಹುದು. ಚಿತ್ರಗಳು ಚೆನ್ನಾಗಿವೆ.

    ReplyDelete
  5. This comment has been removed by the author.

    ReplyDelete
  6. ಚಿತ್ರ-ಲೇಖನ ಚೆನ್ನಾಗಿದೆ ::)

    ReplyDelete
  7. ಗಗನಚುಕ್ಕಿ ಮತ್ತು ಭರಚುಕ್ಕಿ ಎರಡಕ್ಕೂ ಅದರದೇ ಆದ ಸೌಂದರ್ಯವಿದೆ .

    ReplyDelete
  8. ಈಗ ನಿಮ್ಮನಿಸಿಕೆ ಹೇಳಿ-ಗಗನಚುಕ್ಕಿಗಿಂತ ಭರಚುಕ್ಕಿಯೇ ಮಜಾ ಎಂಬ ನನ್ನ ಹೇಳಿಕೆ ಸರಿಯೇ ತಪ್ಪೇ-ಅಂತ. (ಎರಡನ್ನೂ ನೋಡಿದವರ ಅಭಿಪ್ರಾಯ ಇಲ್ಲಿ ಪ್ರಸ್ತುತ). ಈ ಲೇಖನ ನಿಮ್ಮನ್ನು ಇನ್ನು ಮುಂದೆ ಶಿವನಸಮುದ್ರಕ್ಕೆ ಹೋದಾಗ ಭರಚುಕ್ಕಿಗೆ ಕರೆದೊಯ್ಯುತ್ತದೆಂದು ನನ್ನೆಣಿಕೆ.ಎನ್ನುವ ಮಾತುಗಳೊಡನೆ ಮುಕ್ತಾಯವಾಗುವ ನಿಮ್ಮ ಲೇಖನ ಸುಂದರವಾಗಿದೆ ಗಗನಚುಕ್ಕಿಗಿಂತಾ ಭರಚುಕ್ಕಿ ಜಲಪಾತ ಮಜಾ ಹೌದು ಎನ್ನಿಸಿದರೂ ಸಣ್ಣ ವಯಸ್ಸಿನಿಂದಲೂಎರಡೂ ಜಲಪಾತಗಳನ್ನು ನೋಡಿದ ನನಗೆ ಅದರ ಭೀಕರತೆಯ ಅರಿವಿದೆ.ಭರಚುಕ್ಕಿ ಜಲಪಾತ ನೋಡಲು ಸುಂದರವಾಗಿ ಆಕರ್ಷಿಸಿದರೂ ಪ್ರಾಣ ತೆಗೆಯುವಲ್ಲಿ ಗಗನ ಚುಕ್ಕಿಯನ್ನು ಮೀರಿಸುತ್ತದೆ.ಪ್ರತಿವರ್ಷ ಇಲ್ಲಿ ಈಜಲು ಹೋಗಿ ಸುಲಿಗೆ ಸಿಕ್ಕಿ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ.ಇದಕ್ಕೆ ಜಲಪಾತ ಕಾರಣವಲ್ಲದಿದ್ದರೂ ಅತಿಯಾದ ಆತ್ಮವಿಶ್ವಾಸದಿಂದ ಗೊತ್ತಿಲ್ಲದ ಈ ಜಾಗದಲ್ಲಿ ಈಜಲು ತೆರಳುವುದು,ಕುಡಿತದ ಅಮಲಿನಲ್ಲಿ ಸುಳಿಗೆ ಸಿಕ್ಕಿ ಸಾಯುವುದು, ನಡದೇ ಇದೆ. ಆದಾಗ್ಯೂ ನಿಮ್ಮ ಲೇಖನ ಸುಂದರ ಚಿತ್ರಗಳನ್ನು ಹೊತ್ತು ತಂದು ಮುಧ ನೀಡಿದೆ.[ಮತ್ತೊಂದು ವಿಚಾರ ಮಳವಳ್ಳಿ ಇಂದ ನೀವು ಹೊರಟ ದಾರಿಯಲ್ಲಿ ಶಿಂಷಾ ಎಂಬ ಜಾಗದಲ್ಲಿ ಶಿಷಾ ನದಿಯ ಜಲಪಾತ ಇದೆ.ಇದರ ಬಗ್ಗೆ ಮುಂದೆ ಬರೆಯುವೆ ] ನಮ್ಮ ಊರಿನ ತಾಣಗಳಿಗೆ ನೀವು ಬಂದಿದ್ದು ನನಗೆ ಸಂತಸ ತಂದಿದೆ.ಜೈ.ಹೋ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  9. ಮನಸೆಳೆದ ಛಾಯಾಚಿತ್ರಗಳು.
    ನಿರೂಪಣೆ ಕೂಡ ಚೆನ್ನಾಗಿದೆ.

    ReplyDelete
  10. ನೀರಲ್ಲಿ ಆಡಲು ಅವಕಾಶ ಸಿಗುತ್ತದೆನ್ನುವ ಕಾರಣಕ್ಕೆ ಭರಚುಕ್ಕಿ ಹೆಚ್ಚು ಪ್ರಿಯ

    ReplyDelete
  11. ನನಗೂ ಎರಡು ವರ್ಷಗಳಿಂದ ಗಗನ ಚುಕ್ಕಿ ಭರ ಚುಕ್ಕಿ ಗೆ ಹೋಗಬೇಕೆಂಬ ಆಸೆ ಇನ್ನೂ ಈಡೇರಿಲ್ಲ... ನಿಮ್ಮ ಲೇಖನ ಓದಿದ ಮೇಲೆ ಕೂಡಲೇ ಹೊರಡಬೇಕೆಂಬ ಮನಸ್ಸಾಗಿದೆ... ಯಾವ ಸಮಯದಲ್ಲಿ ಹೋದರೆ ನೀರು ಚೆನ್ನಾಗಿರುತ್ತದೆ ತಿಳಿಸುವಿರಾ...

    ReplyDelete
  12. ಛಾಯಾಗ್ರಹಣ ನಿಷೇಧಿಸಿರುವ ಜಾಗವೆಂದು ನಾನು ಬರೆದಿರಲಿಲ್ಲ ನೀವು ಹೇಳಿಬಿಟ್ರಾ... ಮೊದ್ಲೇ ಆ ಪುಣ್ಯಾತ್ಮ ಇಂಟರ್ನೆಟ್ ಗೆ ಹಾಕಬೇಡಿ ಅಂದಿದ್ದ.... ಒಂದು ವರ್ಷ ಕಾದೆ ಮನ್ಸು ಕೇಳಲಿಲ್ಲ ಅದಕ್ಕೆ ಪೋಸ್ಟ್ ಮಾಡಿದೆ. ದಯವಿಟ್ಟು ನನ್ನ ಬ್ಲಾಗ್ ನಲ್ಲಿ ಅದರ ಹೆಸರು ತೆಗೆಯುವಿರಾ...??

    ReplyDelete
  13. ನಿಮ್ಮ ಬರಹ ತುಂಬಾ ಚೆನ್ನಾಗಿದೆ ಸರ್...
    ನಿಜವಾಗಿಯೂ ಆ ಎರಡೂ ಜಲಪಾತಗಳೂ ಸುಂದರವಾಗಿವೆ...

    ReplyDelete
  14. ಎಲ್ಲವೂ ನೋಡುವವರ ಕಣ್ಣಲ್ಲಿ

    ReplyDelete
  15. ನಾನು ಎರಡನ್ನೂ ನೋಡಿದ್ದೇನೆ. ನನ್ನ ಪ್ರಕಾರ ಎರಡು ಇಷ್ಟವಾಗುತ್ತವೆ..

    ReplyDelete
  16. This comment has been removed by the author.

    ReplyDelete
  17. ನಿಮ್ಮ ಮಾತು ಅಕ್ಷರಶಃ ನಿಜ. ಗಗನಚುಕ್ಕಿಯದು ರುದ್ರಸೌಂದರ್ಯ. ಅದನ್ನು ನೋಡಿ ಸವಿಯುವುದಷ್ಟೇ, ಮುಟ್ಟುವಂತಿಲ್ಲ. ಆದರೆ ಭರಚುಕ್ಕಿಯದು ಹಾಗಲ್ಲ. ಅದು ನಿಮ್ಮನ್ನು ಆದಷ್ಟೂ ಬಳಿಗೆ, ಒಳಗೆ ಬರಮಾಡಿಕೊಳ್ಳುತ್ತದೆ. ಅಲ್ಲಿನ ಸೌಂದರ್ಯ ನಿಮ್ಮ ಕೈಗೆ ದಕ್ಕುವಂಥದ್ದು. ಹಾಗೆಂದು ಮೈಯೇನಾದರೂ ಮರೆತಿರೋ, ನೀವೇ ಹೇಳಿದಂತೆ, ಗೋವಿಂದ. ಅಂದಹಾಗೆ ಮತ್ತೊಂದು ಮರೆತಿರಿ. ಉಕ್ಕಡದಲ್ಲಿ ಕೂತು ಜಲಪಾತದ ಬುಡಮುಟ್ಟಿದ ಮೇಲೆ ಹಿಂದಿರುಗಿ ಬರುತ್ತಾ ಅರ್ಧ ಹರಿವಿನಲ್ಲಿ ಹಾಗೇ ಎಡಕ್ಕೆ ತಿರುಗಿ ಕೆಲವೇ ಮಾರು ಮುಂದುವರೆದರೆ ಜಲಪಾತದ ಮತ್ತೊಂದು ಟಿಸಿಲೊಡನೆ ನಿರ್ಮಿಸಿದ ದ್ವೀಪದಂಥಾ ಜಾಗವಿದೆ. ಅದಂತೂ ತೀರ ಪಕ್ಕದಲ್ಲೇ ಜಲಪಾತಗಳೆರಡು ದುಮುಕುವುದರಿಂದ ಆ ನೆಲದ ಭಾಗದಲ್ಲಿ ಯಾವಾಗಲೂ ಮಳೆಯೇ! ತುಸು ಬಿಸಿಲಿದ್ದರಂತೂ ಕಾಮನಬಿಲ್ಲು ಕುಣಿಯುವುದು ನಿಮ್ಮ ಮುಂದೆಯೇ. ಫೋಟೋ ತೆಗೆಯುವ ಹಂಬಲವನ್ನು ಹತ್ತಿಕ್ಕುವಂತೆಯೇ ಇಲ್ಲ, ಆದರೆ ಕ್ಯಾಮರ ನೆನೆದು ಹಾಳಾಗುವುದನ್ನೂ ತಡೆಯುವಂತಿಲ್ಲ.

    ಅಂದಹಾಗೆ ಅದು ಛಾಯಾಗ್ರಹಣ ನಿಷೇಧಿತ ಪ್ರದೇಶವೇ? ನನಗೆ ಗೊತ್ತಿರಲಿಲ್ಲ, ಯಾರೂ ಹೇಳಿರಲೂ ಇಲ್ಲ. ನನ್ನ ಬಳಿ ಹೊರೆ ಹೊರೆ ಚಿತ್ರಗಳಿವೆ, ದುರದೃಷ್ಟವಶಾತ್ ಅವೊಂದೂ digital ಅಲ್ಲ.

    ಸೊಗಸಾದ ಬರಹ.

    ReplyDelete