Friday, August 3, 2018

ಮಲೆನಾಡಿನ ಒಂದು ಮೋಜಿನ ಪ್ರಸಂಗ

          ಅದೆಷ್ಟು ತಮಾಷೆಯ ಘಟನೆಗಳು ನಡೆಯುತ್ತಿರುತ್ತವೆ/ನಡೆದಿವೆ ಈ ಮಲೆನಾಡಿನಲ್ಲಿ. ಅಂತಹವುಗಳಲ್ಲಿ ಇದೂ ಒಂದು. ಅಂದಾಜು ಮೂರುವರೆ ದಶಕಗಳ ಹಿಂದೆ ನಡೆದ ಘಟನೆ. ಕೊಚ್ಚವಳ್ಳಿ  ಶೃಂಗೇರಿಯಿಂದ ಐದು ಆರು ಕಿ.ಮೀ  ದೂರದಲ್ಲಿನ ಚಿಕ್ಕಹಳ್ಳಿ. ಮೂರು ನಾಲ್ಕು ಮನೆಗಳಿರುವ  ಚಿಕ್ಕ ಊರು. ಮಲೆನಾಡಿನ ಊರುಗಳೇ ಹಾಗೆ. ಊರೆಂದರೆ ಕೆಲವೇ ಕೆಲವು ಮನೆಗಳು. ಅವೂ ಒಂದು ಅಲ್ಲಿ ಇನ್ನೊಂದು ಇಲ್ಲಿ. ನಡುವೆ ತೋಟ. ಇಂತಾ ಕೊಚ್ಚವಳ್ಳಿಯಲ್ಲಿ   ಒಂದಿಷ್ಟು ಅಡಿಕೆತೋಟ ಹೊಂದಿ, ಭತ್ತ ಬೆಳೆದು ಕೃಷಿ ಮಾಡಿಕೊಂಡು ವಾಸಿಸುತ್ತಿರುವ ಶೇಷಯ್ಯನೇ ಈ ಕಥೆಯ ಕಥಾನಾಯಕ.
              ಅಂದಾಜು ಅರವತ್ತು ವರ್ಷದ, ಬೊಜ್ಜಎಂಬುದೇ ಇಲ್ಲದ, ಸಣಕಲು ಶರೀರದ, ತೆಳ್ಳಗೆ ಎತ್ತರವಿದ್ದ, ಸ್ವಲ್ಪ ಮುಂಬುಹಲ್ಲಿನ ಶೇಷಯ್ಯ ಒಬ್ಬ ನಿರುಪ್ರದವಿ ಜೀವಿ. ದಿನವಿಡೀ ಶ್ರಮದ ಕೆಲಸ, ಸಂಜೆ ಶೃಂಗೇರಿಗೆ ತಿರುಗಾಟ. ಪರಿಚಯದ ಅಂಗಡಿಯ ಕಟ್ಟೆಯ ಮೇಲೆ ಕೂತು ಒಂದಿಷ್ಟು ಹೊಗೆಸೊಪ್ಪು, ಸಾಧ್ಯವಾದಷ್ಟು ಪಟ್ಟಾಂಗ, ಕೊನೆಗೆ ಒಂದಿಷ್ಟು ಸಾಮಾನು ಕಟ್ಟಿಸಿಕೊಂಡು ರಾತ್ರಿ ಮನೆಗೆ - ರಾತ್ರಿ ೭:೩೦ ರ ಕನ್ನಡ ವಾರ್ತೆಯ ಸಮಯಕ್ಕೆ ಊಟಕ್ಕೆ ಹಾಜರ್ - ಹೀಗಿತ್ತು ಶೇಷಯ್ಯನ ದಿನಚರಿ. ನೆಂಟರಿಷ್ಟರ ಮನೆಯಲ್ಲಿ ಏನಾದರೂ ಊಟದಮನೆಯಿದ್ದರೆ ಹೋಗಿ ಊಟಮಾಡಿ ಅಪರಾತ್ರಿಯವರೆಗೆ ಇಸ್ಪೀಟು ಜಪ್ಪುವುದು ಅವರ ಪ್ರಿಯ ಹವ್ಯಾಸ. (ಅಂದಿನ ದಿನಗಳಲ್ಲಿ ಹೊಗೆಸೊಪ್ಪು ಹಾಗೂ ಇಸ್ಪೀಟು ಅನೇಕ ಮಲೆನಾಡಿನ ಗಂಡಸರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಕೆಲವೊಮ್ಮೆ ಯಾವ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇವೆಂದೂ ಗೊತ್ತಿಲ್ಲದೇ, ಸಹಇಸ್ಪೀಟಿಗರೊಂದಿಗೆ ಹೋಗಿ ಉಪ್ಪರಿಗೆಯ ಮೇಲಿನ ಮೂಲೆಯ ರೂಮಿನಲ್ಲೋ, ಹೊರಗಡೆ ದೂರದ ಜಗಲಿಯಲ್ಲೋ ಕೂತು ಹಗಲೂ ರಾತ್ರಿ ಇಸ್ಪೀಟ್ ಆಡುತ್ತಿದ್ದರು!!! ಐದಾರು ಜನ ಸುತ್ತ ಕುಳಿತುಕೊಂಡು ರಮ್ಮಿ ಆಡುವ ಒಂದು ಗುಂಪಿಗೆ  'ಮಂಡಲ' ಎಂದು ಹೆಸರು. ಯಾರದ್ದಾದರೂ ಮನೆಯಲ್ಲಿ ಒಂದು ಕಾರ್ಯಕ್ರಮವಿದ್ದರೆ ಇಂತಹ ಅನೇಕ ಮಂಡಲಗಳಿರುತ್ತಿದ್ದವು. ರಾತ್ರಿ ಊಟಕ್ಕೆ ಕರೆದಾಗ ಕರೆದ ಕೂಡಲೇ ಬಾರದಿರುವುದು, ಆಗಾಗ್ಯೆ ಕಾಫೀ ಟೀ ಸರಬರಾಜು ಮಾಡಬೇಕಾಗಿರುವುದು, ಬೆಳಿಗ್ಗೆ ಅವರೆಲ್ಲ ಎದ್ದು ಹೋದ ಮೇಲೆ ಕೂತಜಾಗದಲ್ಲೆಲ್ಲಾ  ಬಿದ್ದಿರುತ್ತಿದ್ದ ಬೀಡಿ ಸಿಗರೇಟು ತುಂಡುಗಳು, ಎಲೆ ಅಡಿಕೆ ಚೂರು ಕ್ಲೀನ್ ಮಾಡುವುದು - ಇವೇ ಮೊದಲಾದ ಕಾರಣಗಳಿಂದ ಮಲೆನಾಡ ಮಹಿಳೆಯರು ಈ ಇಸ್ಪೀಟ್ ಆಟಕ್ಕೆ ಯಾವತ್ತೂ ವಿರೋಧ).
            ಶೇಷಯ್ಯನವರಿಗೆ (ಜನ್ಮಜಾತವಾಗಿ) ಇದ್ದ ಒಂದೇ ಊನವೆಂದರೆ ಉಗ್ಗು. ಮಾತನ್ನು ಶುರುಮಾಡುವಾಗ ತಡವರಿಸುವುದು. ಒಮ್ಮೊಮ್ಮೆ ಅದು ತಮಾಷೆಗೂ ಕಾರಣವಾಗುತ್ತಿತ್ತು. ಒಮ್ಮೆ ಹೀಗೆ ಆಗಿತ್ತು - ಘಟ್ಟದ ಕೆಳಗಿನ ಹೆಬ್ರಿಯಲ್ಲಿ ನಡೆಯಲಿರುವ ಮಗಳ ಮದುವೆಗೆ ಹೋಗಲು ಯಾವ ವೆಹಿಕಲ್ ವ್ಯವಸ್ಥೆ ಮಾಡಿದ್ದೀರಿ ಎಂದು ಸಂಜೆಯ ಕಟ್ಟೆ ಪುರಾಣದಲ್ಲಿ ಒಬ್ಬರು ಕೇಳಿದಾಗ ಅವರು ಕೊಟ್ಟ ಉತ್ತರ  - ಅಂಗೈಯಲ್ಲಿ ಹೊಗೆಸೊಪ್ಪು ತಿಕ್ಕುತ್ತಾ - "ಬಬಬಸ್ಸಾದ್ರ್ ಬಸ್, ಜೀಜೀಜೀಪಾದ್ರ್ ಜೀಪ್, ಮುಮುಮುಟ್ಟಾದೋರಾದ್ರ್ ಮುಟ್ಟಾದೋರ್, ಹತ್ಕೊಂಡ್ ಹೋಗ್ತಿರೋದು." ಅಂಗಡಿಯಲ್ಲಿದ್ದವರಿಗೆಲ್ಲಾ ಆಶ್ಚರ್ಯ. ಒಬ್ಬರು ಕೇಳಿಯೇ ಬಿಟ್ಟರು.
           "ಅದೇನದು ಮುಟ್ಟದೊರನ್ ಹತ್ಕಂಡ್ ಹೋಗೋದು?"
             ಬಾಯಿಗೆ ಹಾಕಿಕೊಂಡ ಹೊಗೆಸೊಪ್ಪಿನ ಉಂಡೆ ಹೀರುತ್ತಾ ಶೇಷಯ್ಯ ಕತ್ತು  ಹಿಂದೆ ಮಾಡಿ ತಲೆ ಎತ್ತಿ "ಅದೇ ಮುಮುಟ್ಟಾದೊರ್ - ಮುಟ್ಟಡೊರ್ - ಮುಟಾಡಾರ್ - ಬಾಡ್ಗೆದು". ಶೇಷಯ್ಯ  ಮುಟ್ಟಾದೊರ್ ಅಂದಿದ್ದು ಮೂವತ್ತು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಮೆಟಡಾರ್ ಎಂಬ ವಾಹನ!!! ಕೊಚ್ಚವಳ್ಳಿ  ಶೇಷಯ್ಯನದ್ದು ಲೆಕ್ಕವಿಲ್ಲದಷ್ಟು ಇಂತಾ ಕಥೆಗಳಿವೆ. ಅವುಗಳಲ್ಲಿ ಅತಿ ಸ್ವಾರಸ್ಯವಾದ ಕಥೆಯೇ ನಾನು ಮುಂದೆ ಹೇಳಲಿರುವುದು.
               ಮಳೆಗಾಲ ಶುರುವಾಗುತ್ತಿದ್ದಂತೆ ಮಾಲೆನಾಡಿಗೂ ಚುರುಕು ಮುಟ್ಟುತ್ತದೆ. ಅಡಿಕೆ ತೋಟದ ಕಪ್ಪು - ಉದಿ, ತೋಟಕ್ಕೆ ಔಷಧಿ ಸಿಂಪಡಿಸುವುದು, ಗದ್ದೆ ಕೆಲಸ - ಒಂದೇ ಎರಡೇ. ಶೇಷಯ್ಯನಿಗೂ ಒಂದಿಷ್ಟು ಜಮೀನಿತ್ತು. ಎರಡು ಮೂರು ಎಕರೆ ಅಡಿಕೆ ತೋಟ, ಮೂರು ನಾಕು ಎಕರೆ ಭತ್ತದ ಗದ್ದೆ. ಮೊದಲೆಲ್ಲ ಮಲೆನಾಡಿನಲ್ಲಿ ಗದ್ದೆ ಸಾಗುವಳಿ ನಡೆಯುತ್ತಿತ್ತು. (ಇಂದು ಮಲೆನಾಡಿನಲ್ಲಿ ಭತ್ತದ ಗದ್ದೆ ಸಾಗುವಳಿ ತುಂಬಾ ಕಡಿಮೆಯಾಗಿದೆ. ಐದರಲ್ಲಿ ಒಂದು ಭಾಗಕ್ಕೆ ಇಳಿದಿರಬಹುದು. ಭತ್ತದ ಗದ್ದೆಗಳೆಲ್ಲಾ ಒಂದೇ ಕಾಫೀ ಅಡಿಕೆ ತೋಟ ಇಲ್ಲಾ ಅಕೇಶಿಯಾ ನೀಲಗಿರಿ ಪ್ಲಾಂಟೇಷನ್ ಆಗಿವೆ). ಮೊದಲು ಅಗೇಡಿ ಸಿದ್ದಪಡಿಸಿ ಭತ್ತದ ಸಸಿಗಳನ್ನು ಮಾಡಿಕೊಂಡು ಒಂದು ರೌಂಡ್ ಅಡಿಕೆ ಕೊನೆಗಳಿಗೆ (ಶಿಲಿಂದ್ರ ನಾಶಕ ) ಔಷಧಿ ಹೊಡೆದ ನಂತರ ಗದ್ದೆ ಸಾಗುವಳಿ.
                ಶೇಷಯ್ಯನದ್ದೂ  ಗದ್ದೆ ಸಾಗುವಳಿ ನಡೆಯುತ್ತಿತ್ತು. ಗದ್ದೆ ಸಾಗುವಳಿ ಕೆಲಸಗಳೇ ಮಜಾ. ಮೋಡ/ಮಳೆಯ ವಾತಾವರಣ. ಬಿಸಿಲು ನೂರಕ್ಕೆ ನೂರು ಇರುವುದಿಲ್ಲ. ಮುಂಗಾರು ಮುಂಚಿನ ಮಳೆಗೆ ಗದ್ದೆಯಲ್ಲಿ ಹಸಿರು ಹುಲ್ಲು ಬೆಳೆದಿರುತ್ತದೆ. ಗದ್ದೆಗೆ ಗೊಬ್ಬರ ಹಾಕುವುದು, ಗದ್ದೆ ಅಂಚಿನ ಬದಿಯ ಕಳೆಗಿಡಗಳನ್ನು ಸವರುವುದು (=ಅಡೆ ಸೌರುವುದು). ಮಣ್ಣು ಮೆದುವಾದ ಮೇಲೆ (ಎತ್ತು ಅಥವಾ ಟಿಲ್ಲರ್ ಬಳಸಿ) ಹೂಟಿ ಮಾಡುವುದು. ಈಗ ಹಸಿರು ಗದ್ದೆ ಮಣ್ಣು ಅಡಿಮೇಲಾಗಿ ಕೆಂಪು/ಮಣ್ಣುಬಣ್ಣ ಆಗುತ್ತದೆ. ಅನಂತರ ಹಾರೆ ಉಪಯೋಗಿಸಿ ಗದ್ದೆಯ ಅಂಚು(ತುದಿ)ಗಳನ್ನು ಟ್ರಿಮ್ ಮಾಡುವುದು (=ಅಂಚು ಕೆತ್ತುವುದು/ಇಡುವುದು). ಮತ್ತೊಮ್ಮೆ ಟಿಲ್ಲರ್/ಎತ್ತು ಬಳಸಿ ಮಣ್ಣನ್ನು ಸಂಪೂರ್ಣ ಕೆಸರು ಮಾಡುವುದು. ಆಮೇಲೆ ನಳ್ಳಿ ಹೊಡೆದು ಆ ಕೆಸರನ್ನು ಸಮತಟ್ಟು ಮಾಡುವುದು. ಬೇರೆಕಡೆ(ಅಗಡಿ)ಯಲ್ಲಿ ಒತ್ತೊತ್ತಾಗಿ ಬೆಳೆಸಿಟ್ಟ ಭತ್ತದ ಸಸಿಗಳನ್ನ ಕಿತ್ತು ತಂದು ಅದರ ತಲೆ ಕತ್ತರಿಸಿ, ಆ ಕೆಸರು ಗದ್ದೆಯಲ್ಲಿ ನೆಡುವುದು. ಇದಕ್ಕೆ ಮಲೆನಾಡಿನಲ್ಲಿ ನೆಟ್ಟಿ ಅನ್ನುತ್ತಾರೆ. (ಬೇರೆಕಡೆ ನಾಟಿ ಅನ್ನುತ್ತಾರೆ). ಇಷ್ಟೆಲ್ಲಾ ಕೆಲಸಗಳಲ್ಲಿ  ಹೂಟಿ ,ಅಂಚು ಕೆತ್ತುವುದು, ಸಸಿ ಹೋರುವುದು - ಸಾಧಾರಣವಾಗಿ ಗಂಡಸರ ಕೆಲಸ. ಅಡೆ ಸವರುವುದು, ಸಸಿ ಕೀಳುವುದು ಹಾಗೂ ನೆಟ್ಟಿ ನೆಡುವುದು ಹೆಂಗಸರ ಕೆಲಸ. ಇದನ್ನೆಲ್ಲಾ ಓದುವಾಗ ಕೆಲವರಿಗೆ ಹಿಂದಿನದೆಲ್ಲಾ ನೆನಪಾಗಬಹುದು.
               ಶೇಷಯ್ಯನದ್ದೂ  ಗದ್ದೆ ಸಾಗುವಳಿ ಶುರುವಾಗಿತ್ತು. ಅಂಚು, ಹೂಟಿ ನಡೆದು ನೆಟ್ಟಿ ಶುರುವಾಗಿತ್ತು. ಹತ್ತಾರು ಕಾರ್ಮಿಕರ ಮನೆಗೆ ತೆರಳಿ (ಇಲ್ಲಿ ತೆರಳಿ ಅಂದರೆ ಹೇಳಿಕಳುಹಿಸಿ ಎಂದರ್ಥ. ಮೊದಲೆಲ್ಲಾ ಹೇಳಿಕಳುಹಿಸಿದರೂ ಜನ ಕೆಲಸಕ್ಕೆ ಬರುತ್ತಿದ್ದರು. ಇಂದು ಮನೆಗೇ ಹೋಗಿ ಕರೆದರೂ - "ಹೋಗಿ ಅಯ್ಯ ಬರುತ್ತೇನೆ" - ಎಂದು ಹೇಳಿ ಕೈ ಕೊಡುತ್ತಾರೆ!!!) ನೆಟ್ಟಿ ದಿನಕ್ಕೆ ಒಂದಿಷ್ಟು ಹೆಣ್ಣಾಳು ರೆಡಿಮಾಡಿಕೊಂಡಿದ್ದರು. ಕೆಲಸ ಮಾಡುವವರು ಜಾಸ್ತಿಯಿದ್ದರೆ ಕೆಲಸ ಸರಿಯಾಗಿ ಆಗುವುದಿಲ್ಲ. ಇದು ಎಲ್ಲಾ ವ್ಯವಸಾಯಗಾರರಿಗೂ ಅನುಭವಕ್ಕೆ ಬಂದ ವಿಷಯ. ಆದ್ದರಿಂದ ಶೇಷಯ್ಯನೇ ಮುಂದೆನಿಂತು ಮುತವರ್ಜಿಯಿಂದ ಕೆಲಸ ನೋಡಿಕೊಳ್ಳುತ್ತಿದ್ದರು. ಕೆಲಸದಲ್ಲಿ ಕಳ್ಳತನ ಮಾಡುವವರನ್ನು ಆಗಾಗ್ಯೆ ಎಚ್ಚರಿಸುತ್ತಲೇ ಇದ್ದರು.
                ನೆಟ್ಟಿಮಾಡುವವರಿಗೆ ಹನ್ನೊಂದುವರೆ ಹೊತ್ತಿಗೆ ಒಂದು ಕಾಫೀ ಸಮಾರಾಧನೆಯಿರುತ್ತದೆ. (ಕಾಫೀ ಎಂದರೆ ಕಪ್ಪು ಡಿಕಾಕ್ಷನ್ನಿಗೆ ಹಾಲು ತೋರಿಸಿರುತ್ತಾರೆ. ಬಿಸಿಯಿದ್ದರೆ ಸರಿ. ಕೆಲಸಗಾರರಿಗೆ ಆ ಮಳೆಯಲ್ಲಿ ಜೀವಾಮೃತ). ಕಾಫಿಯಾದಮೇಲೆ ಒಂದು ರೌಂಡ್ ಎಲೆ ಅಡಿಕೆ/ಹೊಗೆಸೊಪ್ಪು ಕಾರ್ಯಕ್ರಮವಿರುತ್ತದೆ. ಶೇಷಯ್ಯ ಇನ್ನೂ ನೆಟ್ಟಿ ಮಾಡಬೇಕಾದ ಜಾಗಕ್ಕೆ ಸಸಿಯ ಕಟ್ಟುಗಳ್ಳನ್ನು ಅಲ್ಲಲ್ಲಿ ಹಾಕಿ, ಪಕ್ಕದಲ್ಲೇ ಕೂಗಳತೆ ದೂರದಲ್ಲೇ ಇದ್ದ ಮನೆಗೆ ಹೊರಡುತ್ತಾರೆ. ಕಾಫೀಬ್ರೇಕ್ ಆದಮೇಲೆ ಕೆಲಸ ಹಿಡಿಸಿಯೇ ಹೊರಡಬೇಕು. ಇಲ್ಲಾಂದ್ರೆ ಕಥೆ ಮುಗೀತು. ಕೂತವರು ಏಳೋದೇ ಇಲ್ಲ!!! ಕೆಲಸಗಾರರ ಹಾಗೂ ಕೆಲಸಕೊಡುವವರ ಜಾಣತನ ಬರೆಯುತ್ತಾ ಹೋದರೆ ಅದೇ ಒಂದು ದೊಡ್ಡ ಕಥೆ.
                  ಮನೆಗೆ ಹೋಗಿ ಒಂದು ರೌಂಡ್ ಕಾಫೀ ಮುಗಿಸಿ ಶೇಷಯ್ಯ ಸ್ನಾನಕ್ಕೆ ಹೋಗುತ್ತಾರೆ. ಆಗಿನ ಕಾಲದ ಸ್ನಾನದ ವ್ಯವಸ್ಥೆಯೇ ಮಜಾ. ಹಂಡೆ. ಹಂಡೆಯಲ್ಲಿ ಸದಾ ಹಬೆಯಾಡುತ್ತಿರುವ ಬಿಸಿನೀರು. ಅಡಿಕೆಮರದ  ದೋಣಿಯಲ್ಲಿ (U ಶೇಪಿನ ಖಾಂಡದ ಬಾಗ) ಹರಿದು ಬರುವ ತಣ್ಣೀರು (ಮಲೆನಾಡು ಭಾಷೆಯಲ್ಲಿ ವಾಗುಂದೆ ನೀರು). ನಲ್ಲಿ/ಗಿಲ್ಲಿ ಕೆಲವೇ ಕೆಲವರ ಮನೆಯಲ್ಲಿ. (ಕೆಲವು ಶ್ರೀಮಂತರ ಮನೆಯಲ್ಲಿ ಅಪರೂಪದ ಅತಿಥಿಗಳು ಪೇಟೆಯಿಂದ ಬಂದಾಗ - ಲೋಕಲ್ ಬಾತ್ ಟಬ್ - ಕಡಾಯ ಸ್ನಾನದ ಗಮ್ಮತ್ತಿರುತ್ತಿತ್ತು. ಸೊಂಟಕ್ಕೆ ತೆಳು ಟವಲ್ ಸುತ್ತಿಕೊಂಡು, ಹಂಡೆಯಿಂದ ಬಿಸಿನೀರು ತೋಡಿ ತಾಮ್ರದ ಸಣ್ಣ ಕಡಾಯಿಗೆ ಹಾಕಿಕೊಂಡು, ಅದಕ್ಕೆ ತಣ್ಣೀರು ಸೇರಿಸಿ ನೀರು ಹದಮಾಡಿಕೊಂಡು, 'ಶಿವ ಶಿವಾ' ಎನ್ನುತ್ತಾ ಶೇಷಯ್ಯ ಇತ್ತ ಸ್ನಾನ ಶುರುಮಾಡುತ್ತಿದ್ದಂತೆ ಅತ್ತ ----------
                                          ------ಅತ್ತ ಗದ್ದೆಯಲ್ಲಿ----
                    ನೆಟ್ಟಿ  ನೆಡುವ ಹೆಂಗಸರ ಜಗಳ ಶುರುವಾಗಿದೆ!!!! ಹೆಂಗಸರ ಜಗಳ ಮಹಾಯುದ್ಧಕ್ಕೆ ಸಮ. ಚಿಕ್ಕಪುಟ್ಟ ವಿಷಯಕ್ಕೆ ಶುರುವಾಗುವ ಜಗಳ ಜೋರಾಗಿ ಕೆಟ್ಟಕೆಟ್ಟದಾಗಿ ಬೈದುಕೊಳ್ಳುವುದರಲ್ಲಿ ಕೆಲವೊಮ್ಮೆ ಪೆಟ್ಟಿನಲ್ಲಿ ಕೊನೆಯಾಗುತ್ತದೆ. ಇಲ್ಲೂ ಹೀಗೇ ಆಗಿದೆ. ಜಗಳಕ್ಕೆ ಕಾರಣವಾಗುವ 'ಚಿಕ್ಕಪುಟ್ಟ ವಿಷಯ' ಯಾವುದು ಬೇಕಾದರೂ ಆಗಬಹುದು. ಜಿಲ್ಲಾ ಕೇಂದ್ರದಲ್ಲಿ ಊರ ಹುಡುಗಿ ಯಾರದ್ದೋ ಜೊತೆ ಸಿನೆಮಾ ಟಾಕೀಸ್ ಪಕ್ಕ ಕಾಣಿಸಿಕೊಂಡಿದ್ದು ಊರಿನವರ್ಯಾರೋ ನೋಡಿದ್ದು, ಇನ್ಯಾರದ್ದೋ ಬೆಳೆದ ಹುಡುಗಿ ಇರುವ ಮನೆಗೆ ಇನ್ಯಾರೋ ಹುಡುಗ/ಗಂಡಸು ಏನೋ ನೆಪ ಎತ್ತಿ ಪದೇಪದೇ ಹೋಗುವುದು, ಯಾರೋ ಸೊಸೆ ಅತ್ತೆಗೆ ಕಾಟ ಕೊಡುವುದು - ಯಾವುದೇ ಘಟನೆಯನ್ನು ತಾವು ನೋಡಿದ್ದಾಗಿ ಹೇಳುವುದಿಲ್ಲ. ಯಾರೋ ಹೇಳುತ್ತಿದ್ದರು ಎಂದು ಹೇಳಿ 'ನಮಗ್ಯಾಕ್  ಇನ್ನೊಬ್ರ ವಿಷ್ಯಾ?' ಎಂದು ತೇಲಿಸಿ ಹೇಳುತ್ತಾರೆ. ಆ ಮಾತಿನಲ್ಲಿ ಯಾರನ್ನೋ ಚುಚ್ಚುವ ಒಳ ಉದ್ದೇಶ ಇರುತ್ತದೆ. ಅವರು ಸುಮ್ಮನಿರುತ್ತಾರಾ? ಇವರ ನೆಂಟರ ಯಾವುದೋ ಹುಳುಕನ್ನು ಹೆಸರು ಹೇಳದೇ ಎತ್ತುತ್ತಾರೆ. ಮೊದಲು ದೂರದ ಸಂಬಂದಿಕರ ವಿಷಯದಲ್ಲಿ ಹರಿದಾಡುವ ಜಗಳ ಕೊನೆಗೆ ಕಾಲಬುಡಕ್ಕೇ ಬರುತ್ತದೆ.
                 'ನೀ ಬೋಸುಡಿ', 'ನೀ ಹಡಬೆ', 'ನೀ ರಂಡೆ' - ಎಂದು ಹೆಂಗಸರು ಪರಸ್ಪರ ಕೂಗಾಡುವುದು ಬಚ್ಚಲಮನೆಯಲ್ಲಿ ಸ್ನಾನಮಾಡುತ್ತಿದ್ದ ಶೇಷಯ್ಯನ ಕಿವಿಗೆ ಬಿದ್ದಿದೆ. ಈ ರೀತಿ ಜಗಳ ನಡೆಯುತ್ತಿರುವಾಗ ನೆಟ್ಟಿ ನೆಡುವ ಕೆಲಸ ಯಾವ ವೇಗದಲ್ಲಿ ನಡೆಯುತ್ತಿರುತ್ತದೆಯೆಂಬುದು ಅರಿಯದವರಷ್ಟು ದಡ್ಡರೇನಲ್ಲ ಶೇಷಯ್ಯ. ಜಗಳ ಇಬ್ಬರ ನಡುವೆ ನಡೆಯುತ್ತಿದ್ದರೂ - ಉಳಿದ ಹತ್ತಾರು ಜನ ನೆಟ್ಟಿ ನೆಡುವವರು - ಒಂದೆರೆಡು ನಟ್ಟಿ  ನೆಡುವುದು, ಜಗಳ ಆಲೇಸುತ್ತಾ ನಿಲ್ಲುವುದು - ಹೀಗೆಯೇ ನಡೆಯುತ್ತಿದೆ. ಅವರಿಗೆ ಸಂಬಳಕೊಡುವ ಶೇಷಯ್ಯನಿಗೆ ಎಷ್ಟು ಉರಿಯುತ್ತಿರಬೇಡ?
                  ಮಣಮಣ ಮಂತ್ರ ಹೇಳುತ್ತಾ ಸ್ನಾನಮಾಡುತ್ತಿದ್ದ ಶೇಷಯ್ಯ, 'ಎಲ ಎಲಾ  ಹಾಹಾಹಾಳಾದವರಾ, ತತತತಡಿರಿ ಬಂದೆ,ಬಂದೆ' ಎಂದು ಹೇಳುತ್ತಾ ಗಡಿಬಿಡಿಯಲ್ಲಿ ಸ್ನಾನ ಮುಗಿಸಿದ್ದಾರೆ. ಗಡಿಬಿಡಿಯಲ್ಲೇ ಮೈವರೆಸಿಕೊಂಡು, ಕೌಪೀನವನ್ನು ಉಡಿದಾರಕ್ಕೆ ಸುತ್ತಿ, (ಹಿಂದೆಲ್ಲಾ (ಈಗಲೂ ಕೆಲವರು) ವಯಸ್ಸಾದವರು ಎಲಾಸ್ಟಿಕ್ ರೆಡಿಮೇಡ್ ಕಾಚ ಹಾಕಿಕೊಳ್ಳುತ್ತಿರಲಿಲ್ಲ. ಬದಲಾಗಿ, ಸೊಂಟದ ಸುತ್ತ ಕಟ್ಟಿರುವ ಲೋಹದ ತೆಳು ಉಡಿದಾರಕ್ಕೆ ಉದ್ದದ ಬಟ್ಟೆಯನ್ನು ಒಂದೆರೆಡು ಪದರ ಮಾಡಿ ಮುಂಬಾಗ ಹಾಗು ಹಿಂಬಾಗಕ್ಕೆ ಕಾಚದ ತರ ಸಪೋರ್ಟ್ ಬರುವಂತೆ ಸುತ್ತುತ್ತಾರೆ), ಮೈ ಒರೆಸಿಕೊಂಡು ತೆಳು ಟವೆಲ್ಲನ್ನೇ ಸೊಂಟಕ್ಕೆ ಸುತ್ತಿಕೊಂಡು-----
                                                               'ಪಪಪಪರ್ದೇಶಿಗಳು, ಇಇಇಇವತ್ತಿಗೇ ನೆಟ್ಟಿ ಮುಗಿಸ್ಬೇಕು ಅಂತ್ ನೋಡಿದ್ರೆ ಗಲಾಟೆ ಮಾಡ್ತಿದಾವೆ. ಬಬಬಬಂದೆ.ಬಂದೇ' ಎನ್ನುತ್ತಾ ಬಿರಬಿರನೆ ಉದ್ದುದ್ದ ಕಾಲು ಹಾಕುತ್ತಾ, ಸಟಸಟ ಕೈಬೀಸುತ್ತಾ, ಗಡಿಬಿಡಿಯಲ್ಲಿ ಬಚ್ಚಲಮನೆಯಿಂದ ಗದ್ದೆಯ ಕಡೆ ಓಡೋಡುತ್ತಾ ಹೊರಟರು. ಮದ್ಯ ಸಿಕ್ಕ ತಡಮೆಯನ್ನು ಸರಕ್ಕನೆ ದಾಟಿದರು. (ಈ ತಡಮೆ ಎಂಬ ಪದಕ್ಕೆ ಅರ್ಥ ಮಲೆನಾಡಿಗರನ್ನು ಬಿಟ್ಟು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಮಲೆನಾಡಿನಲ್ಲಿ ಅವರವರ ಮನೆಪಕ್ಕ ಅವರವರ ಜಮೀನು ಇರುವುದರಿಂದ ಬೇಲಿಯ ಅಗತ್ಯತೆ ಹೆಚ್ಚು. ೩೬೫ ದಿನ ಜಾನುವಾರುಗಳನ್ನು ತಪ್ಪಿಸಲು ಅಡಿಕೆ ತೋಟಕ್ಕೇ ಬೇರೆ ಬೇಲಿ, ವರ್ಷಕ್ಕೆ ಮೂರ್ನಾಲ್ಕು ತಿಂಗಳು ಮಾತ್ರ ಜಾನುವಾರುಗಳಿಂದ ತಪ್ಪಿಸಲು ಗದ್ದೆಗೇ ಬೇರೆ ಬೇಲಿ - ಹೀಗೆಲ್ಲಾ ಇರುತ್ತದೆ. ಜಮೀನೆಲ್ಲಾ ಒಂದುಸುತ್ತು ಬರಬೇಕಾದರೆ ಒಂದೆರೆಡು ಕಡೆಯೆಲ್ಲಾದರೂ ಬೇಲಿ ದಾಟಲೇಬೇಕು. ಅಂದಾಜು ಐದು ಅಡಿ ಎತ್ತರವಿರುವ ಈ ಬೇಲಿಗಳನ್ನು ಸರಾಗವಾಗಿ ದಾಟಲು ಮಲೆನಾಡಿಗರು ಮಾಡಿಕೊಂಡಿರುವ ವ್ಯವಸ್ಥೆಯೇ ತಡಮೆ (ಮತ್ತು ಉಣುಗೋಲು). ಅರ್ಧ ಅಡಿ ಎತ್ತರದ ಕಲ್ಲು ಮೊದಲ ಮೆಟ್ಟಿಲು, ಅದನ್ನು ಹತ್ತಿ, ಒಂದೂವರೆ ಅಡಿ ಎತ್ತರದಲ್ಲಿ, ಮೂರು ಅಡಿಕೆಮರದ ಖಾಂಡವನ್ನು ಅಡ್ಡಡ್ಡ ಒಟ್ಟಿಗೆ ಜೋಡಿಸಿದ ಚಿಕ್ಕ ಅಟ್ಟಳಿಗೆ, ಅದನ್ನು ಹತ್ತಿ, ಈಗ ಬೇಲಿ ಎತ್ತರ ಕಡಿಮೆಯಾಗಿರುತ್ತದೆ, ಅನಂತರ ಆಚೆ ದಾಟುವುದು,ಬೇಲಿಯ ಇನ್ನೊಂದು ಕಡೆಯಲ್ಲೂ ಇದೇ ರೀತಿ ವ್ಯವಸ್ಥೆ. ಅಲ್ಲಿ ಇಳಿಯುವುದು. ಇದಕ್ಕೆ 'ತಡಮೆ' ಅನ್ನುತ್ತಾರೆ).
                    ಸೀದಾ ನೆಟ್ಟಿ ನೆಡುತ್ತಿದ್ದ ಗದ್ದೆಯ ಪಕ್ಕಕ್ಕೇ ಸರಸರನೆ ಓಡಿಹೋಗಿ ನಿಂತು ಸಿಟ್ಟಿನಿಂದ ಗಟ್ಟಿ ದನಿಯಲ್ಲಿ ಅಬ್ಬರಸಿದರು - "ಎಎಎಲಾ  ಎಲಾ ನಿಮ್ಮ, ನೆಟ್ಟಿನೆಡಿ ಅಂದ್ರೆ ಪುರಾಣ ಹೊಡಿತಿದ್ದೀರಲ್ಲಾ, ಅಬ್ಬಾ ನಿಮ್ ಸೊಕ್ಕೇ". ಅಲ್ಲಿಯವರೆಗೂ ನೆಟ್ಟಿ ನೀಡುತ್ತಾ ಹಾಗೂ ಜಗಳವಾಡುತ್ತಿದ್ದ ಹೆಂಗಸರು - ಒಮ್ಮೆ ತಿರುಗಿ - ಕೂಗುತ್ತಾ ಬಯ್ಯುತ್ತಾ ಬರುತ್ತಿದ್ದ ಶೇಷಯ್ಯನ ಕಡೆ ನೋಡಿ - ನೆಟ್ಟಿ ನೆಡಲು ಕಯ್ಯಲ್ಲಿ ಹಿಡಿದುಕೊಂಡಿದ್ದ ಭತ್ತದ ಸಸಿಗಳನ್ನು ಅಲ್ಲೇ ಬಿಸಾಡಿ - ಎದ್ದೆವೋ ಬಿದ್ದೆವೋ ಎಂದು ಸೀದಾ ಗದ್ದೆಯಿಂದ ಓಟ ಕಿತ್ತು - ಪಕ್ಕದ ಅಡಿಕೆತೋಟಕ್ಕೆ ಹೋಗಿ - ಮುಖ ಆ ಕಡೆ ತಿರುಗಿಸಿ ಮುಸಿಮುಸಿ ನಗುತ್ತಾ ನಿಂತರು!!!!
                   ಯಾಕೆ ಹಾಗೆ ಮಾಡಿದರು? ಅಲ್ಲಿರುವುದೇ ಸ್ವಾರಸ್ಯ.
                    ಸಿಟ್ಟಿನಿಂದ ವೇಗವಾಗಿ ಗದ್ದೆಗೆ ಹೋಗುವ ಸಮಯದಲ್ಲಿ - ಕಾಲೆತ್ತಿ ತಡಮೆ ದಾಟುವಾಗ - ಶೇಷಯ್ಯ ಸೊಂಟಕ್ಕೆ ಸುತ್ತಿಕೊಂಡಿದ್ದ ಟವೆಲ್ ಜೊತೆಗೆ ಕೌಪೀನ - ಎರಡೂ ಕೂಡ - ಬೇಲಿಯ ಗೂಟಕ್ಕೆ ಸಿಕ್ಕಿಹಾಕಿಕೊಂಡಿದೆ. ಆ ಗಡಿಬಿಡಿಯಲ್ಲಿ ಸಿಟ್ಟಿನಲ್ಲಿ ಶೇಷಯ್ಯ ಅದನ್ನು ಗಮನಿಸಿಯೇ ಇಲ್ಲ!!!!! ಬರಿಮಯ್ಯಲ್ಲಿ ದುರದುಂಡೇಶ್ವರನಾಗಿ ಶೇಷಯ್ಯ ನೆಟ್ಟಿ ನೆಡುವ ಹೆಂಗಸರಿಗೆ ದರ್ಶನ ನೀಡಿದ್ದಾರೆ!!!!! ಪಾಪ. ನಮ್ಮ ಮಲೆನಾಡ ಹೆಂಗಸರು ಗದ್ದೆಯಿಂದ ಓಡಿಹೋಗದೆ ಇನ್ನೇನು ಮಾಡಿಯಾರು!!!!!
                     ಮಲೆನಾಡಿನಲ್ಲಿ ಇನ್ನೂ ಸ್ವಾರಸ್ಯದ ಅದೆಷ್ಟೋ ಜನ ಆಗಿಹೋಗಿದ್ದಾರೆ. ರೋಚಕ ಅದೆಷ್ಟೋ ಕಥೆಗಳಿವೆ. ಮುಂದೆಂದಾದರೂ ಒಮ್ಮೆ ಅವನ್ನ ಹೇಳುವೆ. ಬರಹಗಳಿಗೆ ಟಾನಿಕ್ ಎಂದರೆ ನಿಮ್ಮ ಕಾಮೆಂಟುಗಳು. ಕಾಯುತ್ತಿರುವೆ ನಿಮ್ಮ ಕಾಮೆಂಟುಗಳಿಗೆ. ತುಂಬಾ ಇಷ್ಟವಾದರೆ Face Book ನಲ್ಲಿ ಹಂಚಿಕೊಳ್ಳಿ.
           
                          

Tuesday, March 17, 2015

ಡಾರ್ಕ್ ಮ್ಯಾಟರ್(??) ಹಾಗೂ ಡಾರ್ಕ್ ಎನರ್ಜಿಯ (???) ವಿಸ್ಮಯವೀ ವಿಶ್ವ!!!!

            ಈ ಬರಹ ಅನೇಕರಿಗೆ ಸಖತ್ ಬೋರ್ ಮಗಾ ಅನ್ನಿಸಬಹುದು! ಆದರೆ ನಿಮ್ಮಲ್ಲಿ ಕೆಲವರಿಗಾದರೂ-ಕೊನೆಯವರೆಗೂ ತಾಳ್ಮೆಯಿಂದ ಈ ಲೇಖನ ಓದಿದಮೇಲೆ-ವರ್ಷದಲ್ಲಿ ಮೂರ್ನಾಕುಬಾರಿಯಾದರೂ-ಕತ್ತೆತ್ತಿ ರಾತ್ರಿ ಮಿನುಗುತ್ತಿರುವ ನಕ್ಷತ್ರಗಳನ್ನ ನೋಡಿದಾಗ-ನನ್ನ ಈ ಬ್ಲಾಗ್ ಬರಹ ಮತ್ತೊಮ್ಮೆ ಖಂಡಿತಾ ಜ್ಞಾಪಕಕ್ಕೆ ಬರುತ್ತದೆ. ಒಂದೈದು ನಿಮಿಷ ನಿಮ್ಮನ್ನು ಯೋಚನೆಗೀಡು ಮಾಡುತ್ತದೆ.ಅದೇ ಸಮಯದಲ್ಲಿ, ಈ ಬರಹವನ್ನು ಜೊತೆಗಿರುವವರ ಜೊತೆಗೂ ಹಂಚಿಕೊಂಡು ಅವರೆಲ್ಲರೂ ಒಂದೈದು ನಿಮಿಷ  ಯೋಚಿಸುವಂತಾಗುತ್ತದೆ. 
ಆಂಡ್ರೋಮಿಡ ಗ್ಯಾಲಕ್ಸಿ
             ಈ ವಿಶ್ವವನ್ನೊಮ್ಮೆ ನೋಡಲು ಪ್ರಯತ್ನಪಡುವ. ಅಗಾಧ ಜಲರಾಶಿಯ ನಮ್ಮ ಈ ಭೂಮಿ. ಅದರಾಚೆ ಗ್ರಹಗಳು. ಭೂಮಿಗಿಂತ ಎಷ್ಟೋ ಪಟ್ಟು ದೊಡ್ಡ ಗುರು,ಶನಿ,ಯುರೇನಸ್ ಗ್ರಹಗಳು. ಭೂಮಿಗಿಂತ ಅದೆಷ್ಟೋ ಪಟ್ಟು ದೊಡ್ದವಿರುವ, ಬೆಂಕಿಯ ಕುಲುಮೆಯಂತಿರುವ ಸೂರ್ಯ. ಇವೆಲ್ಲಾ ಸೇರಿ ಸೌರವ್ಯೂಹ. ಆಚೆ? ಈ ಸೂರ್ಯನು ಆಕಾಶಗಂಗೆ (Milky way) ಎಂಬ ಗ್ಯಾಲಕ್ಸಿಯಲ್ಲಿ ಯಕಶ್ಚಿತ್ ಒಂದು ನಕ್ಷತ್ರ!! ಅಂದಾಜು ಒಂದು ಲಕ್ಷ ಬೆಳಕಿನವರ್ಷ ಅಗಲವಿರುವ ಸಿಂಬೆಯಾಕಾರದ ನಮ್ಮ ಗ್ಯಾಲಾಕ್ಸಿಯಲ್ಲಿ ಅಂದಾಜು ಎರಡುನೂರು ಬಿಲಿಯನ್ ಗೂ ಹೆಚ್ಚು ನಕ್ಷತ್ರಗಳಿವೆ!!! ಗ್ಯಾಲಕ್ಸಿ ಕೇಂದ್ರದ ಸುತ್ತ ಅಸಾದಾರಣಾ ವೇಗದಲ್ಲಿ ನಾಲ್ಕು ಬಾಹುಗಳು ಸುತ್ತುತ್ತಿವೆ. (ಕೆಲವೊಮ್ಮೆ ರಾತ್ರಿಯಲ್ಲಿ ವಿದ್ಯುತ್ ಬೆಳಕು ಕಡಿಮೆಯಿರುವ ಜಾಗಗಳಲ್ಲಿ ಅದರ ಒಂದು ಬಾಹು ಒತ್ತೊತ್ತಾದ ನಕ್ಷತ್ರಗಳ ಪಟ್ಟಿಯಂತೆ ಕಾಣುತ್ತದೆ. ಅದಕ್ಕೇ ನಮ್ಮ ಗ್ಯಾಲಕ್ಸಿಗೆ ಮಿಲ್ಕಿ ವೆ ಎಂದು ಹೆಸರು).  ಅಬ್ಬಾ!!! ಆಕಾಶಗಂಗೆಯಾಚೆ??
ಆಕಾಶಗಂಗೆ ಗ್ಯಾಲಕ್ಸಿ
             ನಮ್ಮ ಆಕಾಶಗಂಗೆ ಗ್ಯಾಲಕ್ಸಿಯಿರುವುದು ಲೋಕಲ್ ಗ್ರೂಪ್ ಎಂಬ 54ಕ್ಕೂ ಹೆಚ್ಚು ಗ್ಯಾಲಕ್ಸಿಗಳಿರುವ ಗ್ಯಾಲಕ್ಸಿ ಗುಚ್ಛದಲ್ಲಿ. ಈ ಗ್ಯಾಲಕ್ಸಿ ಗುಚ್ಛದಲ್ಲಿ ಎರಡು ನೂರು ಬಿಲಿಯನ್ಗೂ (1ಬಿಲಿಯನ್=1,000,000,000) ಹೆಚ್ಚು ನಕ್ಷತ್ರಗಳಿರುವ  ನಮ್ಮ ಆಕಾಶಗಂಗೆ ಗ್ಯಾಲಕ್ಸಿಯಲ್ಲದೆ  ಕೇವಲ 40-50 ಬಿಲಿಯನ್ ನಕ್ಷತ್ರಗಳಿರುವ ಅನೇಕ ಚಿಕ್ಕಪುಟ್ಟ ಗ್ಯಾಲಕ್ಸಿಗಳಿವೆ. ಇದೇ ಗುಚ್ಛದ ಇನ್ನೊಂದು ದೊಡ್ಡ ಗ್ಯಾಲಕ್ಸಿ ಆಂಡ್ರೋಮಿಡ’. ಇದು ನಮ್ಮ ಆಕಾಶಗಂಗೆ ಗ್ಯಾಲಕ್ಸಿಗಿಂತಾ ದೊಡ್ಡದು. ಅಂದಾಜು ಎರಡು ಲಕ್ಷ ಬೆಳಕಿನವರ್ಷದಷ್ಟು ವಿಸ್ತಾರವಿದೆ. ನಕ್ಷತ್ರಗಳೋ ಅಂದಾಜು ಒಂದು ಟ್ರಿಲಿಯನ್!!! (1 ಟ್ರಿಲಿಯನ್=1,000,000,000,000). ಲೋಕಲ್ ಗ್ರೂಪ್ ನಲ್ಲಿರುವ ಗ್ಯಾಲಕ್ಸಿಗಳು ಕೇಂದ್ರದ ಸುತ್ತ ಸುತ್ತುತ್ತಿರುತ್ತವೆ. (ಹಾಗೆ ಸುತ್ತುತ್ತಿರುವ ಆಂಡ್ರೋಮಿಡ ಗ್ಯಾಲಕ್ಸಿ ನಮ್ಮ ಆಕಾಶಗಂಗೆ ಸನಿಹಕ್ಕೆ ಬರುತ್ತಿದೆಯಂತೆ. ಮೂರುವರೆ ಬಿಲಿಯನ್ ವರ್ಷಗಳ ನಂತರ ಅವೆರಡೂ ಒಂದಕ್ಕೊಂದು ಕೂಡಿಕೊಂಡು ಒಂದೇ ಬೃಹತ್ ಗ್ಯಾಲಕ್ಸಿಯಾಗುತ್ತದಂತೆ!!!). ಅಬ್ಬಾ. ಅದೆಷ್ಟು ನಕ್ಷತ್ರಗಳು! 
ಲೋಕಲ್ ಗ್ರೂಪ್ ಗ್ಯಾಲಕ್ಸಿ ಗುಚ್ಛ
                ನಮ್ಮ ಆಕಾಶಗಂಗೆ ಹಾಗೂ ಐವತ್ತಕ್ಕೂ ಹೆಚ್ಚು ಗ್ಯಾಲಕ್ಸಿಗಳಿರುವ ಈ ಲೋಕಲ್ ಗ್ರೂಪ್ ಎಂಬ ಗ್ಯಾಲಕ್ಸಿ ಗುಚ್ಛವು ವರ್ಗೋ ಮಹಾ ಗ್ಯಾಲಕ್ಸಿ ಗುಚ್ಛದ ಒಂದು ಭಾಗವಷ್ಟೇ. ನಮ್ಮ ಲೋಕಲ್ ಗ್ರುಪ್ ಅಲ್ಲದೆ ಅಂದಾಜು ನೂರು ಗ್ಯಾಲಕ್ಸಿ ಗುಚ್ಛಗಳು ಈ ಮಹಾ ಗುಚ್ಛದಲ್ಲಿ ಸೇರಿದೆ. ಅಂದರೆ ಅಂದಾಜು ನೂರಾಹತ್ತು ದಶಲಕ್ಷ ಬೆಳಕಿನವರ್ಷ ಅಗಲವಿರುವ ಈ ಮಹಾ ಗುಚ್ಛದಲ್ಲಿ ಕೆಲವು ಸಾವಿರ ಗ್ಯಾಲಕ್ಸಿಗಳಿವೆ!!! ಆಶ್ಚರ್ಯ ಇಷ್ಟಕ್ಕೆ ನಿಲ್ಲುವುದಿಲ್ಲ. ಸಾವಿರಾರು ಗ್ಯಾಲಕ್ಸಿಗಳನ್ನ ಹೊಂದಿರುವ ವರ್ಗೋ ಮಹಾಗುಚ್ಛವು ಲಾನಿಯಾಕಿಯಾ ಎಂಬ ಬೃಹತ್ ಗ್ಯಾಲಕ್ಸಿಗುಚ್ಛ ದ ಒಂದು ಭಾಗವಷ್ಟೇ!!!! ಅಂದಾಜು 1,00,000 ಗ್ಯಾಲಕ್ಸಿಗಳು ಈ ಲಾನಿಯಾಕಿಯಾ ಬೃಹತ್ ಗ್ಯಾಲಕ್ಸಿ ಗುಚ್ಛದಲ್ಲಿದೆ!!!! ಇದರ ಅಗಲ 52,00,00,000 ಬೆಳಕಿನ ವರ್ಷಗಳಷ್ಟು (ಒಂದು ಬೆಳಕಿನ ವರ್ಷ=ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರ=10,00,00,00,00,000 ಕಿ.ಮೀ).  ವಿಶ್ವದ ಅಘಾದತೆಯ ಈ ವಿವರಗಳನ್ನ ಬಿಚ್ಚಿಟ್ಟರೂ ಇವೆಲ್ಲವೂ ವಿಶ್ವದ ಅತಿಚಿಕ್ಕ ಭಾಗವೊಂದರ ವಿವರಣೆಯಷ್ಟೇ!!!!! ನಮ್ಮ ವಿಶ್ವದಲ್ಲಿ ಲಾನಿಯಾಕಿಯಾದಂತಹ ಅದೆಷ್ಟೋ  ಬೃಹತ್ ಗ್ಯಾಲಕ್ಸಿಗುಚ್ಛಗಳಿವೆ. ಈ ವಿಶಾಲ ವಿಶ್ವದಲ್ಲಿ ಅವು ಎಳೆಗಳು ಹಾಗೂ ಪದರಗಳಂತಿವೆ. ಮದ್ಯ ಖಾಲಿಜಾಗ (=ಸಂಪೂರ್ಣ ಖಾಲಿಜಾಗ ಅಲ್ಲ. ವಿರಳವಾಗಿ ಗ್ಯಾಲಕ್ಸಿಗಳಿರುತ್ತವೆ) ಹೊಂದಿರುವ ಈ ಗ್ಯಾಲಾಕ್ಸಿ ಎಳೆಗಳು ಈ ವಿಶ್ವದ ಅತಿದೊಡ್ಡ ರಚನೆಗಳು!!!!!
ವರ್ಗೋ ಮಹಾ ಗ್ಯಾಲಕ್ಸಿ ಗುಚ್ಛ
ಲಾನಿಯಾಕಿಯಾ ಬೃಹತ್ ಗ್ಯಾಲಕ್ಸಿಗುಚ್ಛ 
                 ಅಲ್ಲಿಗೆ ಮುಗಿಯಿತೇ ಈ ವಿಶ್ವದ ವಿವರಣೆ? ಊಹೂ. ಮಿಲಿಯನ್ ಗಟ್ಟಲೆ ಗ್ಯಾಲಾಕ್ಸಿಗಳು ಹಾಗೂ ಟ್ರಿಲಿಯನ್ ಟ್ರಿಲಿಯನ್ ಗಟ್ಟಲೆ ನಕ್ಷತ್ರಗಳಲ್ಲದೆ ನೆಬ್ಯುಲಾಗಳಿವೆ. ನೆಬ್ಯುಲಾಗಳೆಂದರೆ ಗ್ಯಾಲಕ್ಸಿಗಳಲ್ಲಿ ಕೆಲವೆಡೆ ನಕ್ಷತ್ರಗಳ ನಡುವಣ ಇರುವ ಅಂತರಿಕ್ಷದೂಳಿನ ಮೋಡ. ನಕ್ಷತ್ರಗಳು ಹುಟ್ಟುವ ತಾಣ. ಕೆಲವೊಮ್ಮೆ ನೂರಾರು ಬೆಳಕಿನವರ್ಷಗಳಷ್ಟು ವಿಸ್ತಾರವಾಗಿರುತ್ತವೆ. ನೆಬ್ಯುಲಾಗಳಲ್ಲಿ ಕೆಲವೊಂದುಕಡೆ ಗುರುತ್ವಾಕರ್ಷಣ ಕೇಂದ್ರವೊಂದು ಸೃಷ್ಟಿಯಾಗಿ, ಅದರ ಸುತ್ತ ಜಲಜನಕ,ಹೀಲಿಯಂ, ದೂಳುಗಳು ಸುತ್ತಲಾರಂಬಿಸಿ, ಒತ್ತಡ ಹೆಚ್ಚಾದಾಗ ಪರಮಾಣು ವಿದಳನದಿಂದ ಶಕ್ತಿ ಉತ್ಪತ್ತಿಯಾಗಿ ತಾರೆಗಳು ಜನ್ಮತಾಳುತ್ತವೆ. (ಅದರ ಸುತ್ತ ಸುತ್ತುವ ಒಂದಿಷ್ಟು ದೂಳುಗಳು ಗ್ರಹಗಳಾಗುತ್ತವೆ. ನಾವೂ ಹಿಂದೊಮ್ಮೆ ಈ ನೆಬ್ಯುಲಾ ದೂಳಿನ ಒಂದು ಭಾಗ. ಗುರು, ಶನಿ ಹಾಗು ಯುರೇನಸ್ ಗ್ರಹಗಳು ಇನ್ನೂ ಗಟ್ಟಿಯಾಗಿಲ್ಲ. ಬರೀ ಅನಿಲದ ಉಂಡೆಗಳು).
ಈಗಲ್ ನೆಬ್ಯುಲಾ
                 ಅಬ್ಬಾ! ಎಷ್ಟು ಅಗಾದ!! ಎಷ್ಟು ವಿಶಾಲ!!! ಆದರೆ ನಿಮಗೆ ಕಾದಿದೆ ಆಶ್ಚರ್ಯ. ಈ ಮೇಲಿನ ವಿವರಣೆಗಳು-ಬಿಲಿಯನ್,ಟ್ರಿಲಿಯನ್ ಎಂಬ ಅಂಕೆಸಂಖ್ಯೆಗಳು ಮತ್ತು ಆ ಹೆಸರುಗಳನ್ನು ಬಿಟ್ಟರೆ-ಈ ವಿಶ್ವದಲ್ಲಿ ಲೆಕ್ಕವಿಲ್ಲದಷ್ಟು ನಕ್ಷತ್ರಗಳಿರುವ ವಿಷಯ-ಬಹುಶಃ ನಿಮಗೆಲ್ಲರಿಗೂ ಗೊತ್ತಿರುವಂತದೇ. ಆದರೆ ಇತ್ತೀಚೆಗೆ ನನಗೆ ಗೊತ್ತಾದ ವಿಷಯ-ಗೊತ್ತಾಗಿ ಅತಿ ಆಶ್ಚರ್ಯಪಟ್ಟ ವಿಷಯ-ಅದೇನೆಂದರೆ- ಕಾಣುವ, ಹೊಳೆಯುವ ರಾಶಿ ರಾಶಿ ಗ್ಯಾಲಕ್ಸಿಗಳು, ಲೆಕ್ಕವಿಲ್ಲದಷ್ಟು ನಕ್ಷತ್ರಗಳು, ನೆಬ್ಯೂಲಾಗಳು-ಇವುಗಳಲ್ಲದೆ ವಿದ್ಯುತ್ಕಾಂತೀಯ ತರಂಗಗಳನ್ನ ಸೂಸುವ ಕಪ್ಪು ರಂದ್ರಗಳು (=ಅವಸಾನಗೊಂಡ ಬೃಹತ್ ತಾರೆಗಳು), ಹೌದೋ ಅಲ್ಲವೋ ಎಂದು ಮಿನುಗುವ ಕುಬ್ಜ ತಾರೆಗಳು-ಇವನ್ನೆಲ್ಲ ವೈಟ್ ಮ್ಯಾಟರ್(ಬಿಳಿ ವಸ್ತು) ಎಂದು ಕರೆಯುತ್ತಾರೆ-ಇವೆಲ್ಲವನ್ನು ಒಟ್ಟುಸೆರಿಸಿದರೂ-ಉಸಿರು ಬಿಗಿಹಿಡಿದು ಓದಿ-ಇಡೀ ವಿಶ್ವದ ಒಟ್ಟು ಪರಿಮಾಣದ ಕೇವಲ 5% ಅಷ್ಟೇ!!!!!!!!. ಮಿನುಗುವ, ಬೆಳಕುಸೂಸುವ ಈ ವೈಟ್ ಮ್ಯಾಟರ್ನ ಅದೆಷ್ಟೋ ಪಟ್ಟು ಅವ್ಯಕ್ತ ವಸ್ತು, ಅವ್ಯಕ್ತ ಶಕ್ತಿ ಈ ವಿಶ್ವದಲ್ಲಿದೆ. ಅದೇ ಡಾರ್ಕ್ ಮ್ಯಾಟರ್ (ಕಪ್ಪು ವಸ್ತು) ಮತ್ತು ಡಾರ್ಕ್ ಎನರ್ಜಿ (ಕಪ್ಪು ಶಕ್ತಿ). ಅದನ್ನ ಸಂಕ್ಷಿಪ್ತವಾಗಿ ವಿವರಿಸುವುದೇ ಈ ಬ್ಲಾಗ್ ಲೇಖನದ ಉದ್ದೇಶ.
                 ಏನಿದು ಕಪ್ಪು ವಸ್ತು??? ವಿಜ್ಞಾನಿಗಳಿಗೆ ಇನ್ನೂ ಒಗಟಾಗಿದೆ. ಗಣಿತಸಿದ್ದಾಂತಪ್ರಕಾರ ಇರಲೇ ಬೇಕು. ಆದರೆ ಇಲ್ಲಿಯವರೆಗೆ ಪ್ರಾಯೋಗಿಕವಾಗಿ ಸಿದ್ದಪಡಿಸಲಾಗಿಲ್ಲ. ನಮ್ಮ ಸೂರ್ಯನು ಆಕಾಶಗಂಗೆಯ ಕೇಂದ್ರದ ಸುತ್ತ ಅಸಾದಾರಣ ವೇಗದಲ್ಲಿ ಸುತ್ತುತ್ತಿದ್ದಾನೆ ಎಂದು ಹಿಂದೆಯೇ ಹೇಳಿದ್ದೇನೆ. ಗ್ಯಾಲಕ್ಸಿಗಳೂ ಕೂಡ ಒಂದು ಗುಚ್ಛದ ಕೇಂದ್ರದ ಸುತ್ತ ಅಪರಿಮಿತ ವೇಗದಲ್ಲಿ ಸುತ್ತುತ್ತಿವೆ. ಗಣಿತಸಿದ್ದಾಂತಗಳ ಪ್ರಕಾರ ಆ ವೇಗಕ್ಕೆ ಅವೆಲ್ಲೋ ಹೊಗಿರಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಆದುದರಿಂದ-ಅನುಮಾನವಿಲ್ಲದೆ ಎಲ್ಲಾ ಖಗೋಳವಿಜ್ಞಾನಿಗಳ ಅಭಿಪ್ರಾಯ-ಬೃಹತ್ ಪ್ರಮಾಣದ ಅಗೋಚರ ದ್ರವ್ಯರಾಶಿ(Mass)ಯೂ-ಬಿಳಿ ವಸ್ತು ಜೊತೆಗೆ ಇರಲೇಬೇಕು. ವಿಜ್ಞಾನಿಗಳ ಗಣಿತದ ಲೆಕ್ಕಾಚಾರದ ಅಂದಾಜಿನಂತೆ ಬಿಳಿ ವಸ್ತುವಿನ ಐದಾರುಪಟ್ಟು (ಅಂದಾಜು ವಿಶ್ವದ ಒಟ್ಟು ಪರಿಮಾಣದ 26%) ಇರುವ ಈ ಅಗೋಚರ ದ್ರವ್ಯರಾಶಿಯೇ ಕಪ್ಪು ವಸ್ತು(ಡಾರ್ಕ್ ಮ್ಯಾಟರ್)!! ಮಾಮೂಲಿ ಪರಮಾಣು ರಚನೆಗೆ ಹೊರತಾಗಿರುವ ಈ ಅಗೋಚರ ಕಣಗಳು-ಕೆಲವು ವಿಜ್ಞಾನಿಗಳ ಅಂದಾಜಿನಂತೆ-ಪ್ರತಿ ಸೆಕೆಂಡಿಗೂ ನಮ್ಮೆಲ್ಲರ ದೇಹದ ಮೂಲಕ-ಕೋಟ್ಯಾಂತರ ಸಂಖ್ಯೆಯಲ್ಲಿ ಹಾದುಹೋಗುತ್ತಿದೆ. ಪ್ರಾಯೋಗಿಕವಾಗಿ ಡಾರ್ಕ್ ಮ್ಯಾಟರ್ ಇರುವಿಕೆಯನ್ನು ಸಾಬೀತುಪಡಿಸಲು ವಿಜ್ಞಾನಿಗಳು ಹರಸಾಹಸಪಡುತ್ತಿದ್ದಾರೆ. ಬಾಹ್ಯಾಕಾಶದ  ಅಂತರಾಷ್ಟ್ರೀಯ ಅಂತರಿಕ್ಷ ತಾಣದಲ್ಲಿನ ಆಲ್ಪಾ ಕಾಂತೀಯ ಸ್ಪೆಕ್ಟ್ರೋಮೀಟರ್ ಹಾಗೂ ಇನ್ಯಾವುದೋ ಸಾವಿರಾರು ಅಡಿ ಆಳದ ಗಣಿಯಲ್ಲಿ ಏನೋ ಡಿಟೆಕ್ಟರ್-ಊಹೂ. ಇನ್ನೂ ಸಿಕ್ಕಿಲ್ಲ. ಫ್ರಾನ್ಸ್ ನ ನೆಲದಾಳದ ಸುರಂಗದಲ್ಲಿ ಈ ವರ್ಷ ನಡೆಯಲಿರುವ  ಪ್ರಯೋಗಗಳಲ್ಲಿ ಒಂದಾದರೂ ಕಪ್ಪು ವಸ್ತುಕಣವನ್ನು ಪತ್ತೆಹಚ್ಚುವ  ಗುರಿ ಹೊಂದಿದ್ದಾರೆ ವಿಜ್ಞಾನಿಗಳು.  
                ಇನ್ನು ಕಪ್ಪುಶಕ್ತಿ(ಡಾರ್ಕ್ ಎನರ್ಜಿ) ಬಗ್ಗೆ. ಇದು ಕಪ್ಪುವಸ್ತುಗಿಂತ ನಿಗೂಡ!!! ಕೆಲವು ವಿಜ್ಞಾನಿಗಳ ಪ್ರಕಾರ ಭೌತಶಾಸ್ತ್ರದ ಅತಿದೊಡ್ಡ ಸಮಸ್ಯೆ’. ಕೆಲವರ ಪ್ರಕಾರ ಡಾರ್ಕ್ ಎನರ್ಜಿಯು ಮನುಕುಲದ ವಿಜ್ಞಾನಕ್ಕೇ ಮಹಾನ್ ಒಗಟು!!! ಆದರೆ ಇರುವುದು ಹೌದೇಹೌದು. ಏನು ಆದಾರ? ಆದಾರ ಇಲ್ಲಿದೆ-ಬಹುಶಃ ನಿಮಗೆ ಗೊತ್ತಿರಬಹುದು. ವಿಶ್ವ ಹಿಗ್ಗುತ್ತಿದೆ. ಪ್ರತಿ ಗ್ಯಾಲಾಕ್ಸಿಗಳೂ ಪರಸ್ಪರ ದೂರ ಸರಿಯುತ್ತಿವೆ. 5% ಇರುವ ವೈಟ್ ಮ್ಯಾಟರ್ ಹಾಗೂ ಅದರ ಐದಾರು ಪಟ್ಟು ಇರುವ ಬ್ಲಾಕ್ ಮ್ಯಾಟರ್ ಗಳು ಅವುಗಳ ದ್ರವ್ಯರಾಶಿ ಹಾಗೂ ದ್ರವ್ಯರಾಶಿಯಿಂದಾಗುವ ಗುರುತ್ವಾಕರ್ಷಣ ಬಲ-ಇವುಗಳಿಂದಾಗಿ ವಿಶ್ವ ಇನ್ನೂ ಕುಗ್ಗಬೇಕಿತ್ತು. ಆದರೆ ತದ್ವಿರುದ್ದ ನಡೆಯುತ್ತಿದೆ!!! ಕಾರಣ ಅವ್ಯಕ್ತ ಶಕ್ತಿ. ಗ್ಯಾಲಕ್ಸಿಗಳನ್ನು ಪರಸ್ಪರ ದೂರತಳ್ಳುತ್ತ ವಿಶ್ವದ ಹಿಗ್ಗುವಿಕೆಗೆ ಕಾರಣವಾಗಿರುವ ಆ ಶಕ್ತಿಯೇ ಡಾರ್ಕ್ ಎನರ್ಜಿ!!!!  ಆದುದರಿಂದ-ಡಾರ್ಕ್ ಎನರ್ಜಿ ಬಗ್ಗೆ ವಿಜ್ಞಾನಿಗಳ ಸದ್ಯದ ವಿವರಣೆ ಎಂದರೆ-ಅವ್ಯಕ್ತ ಅಸಾದಾರಣ ಶಕ್ತಿ. ಯಾವುದು ಈ ವಿಶ್ವದ ಹಿಗ್ಗುವಿಕೆಗೆ ಕಾರಣವಾಗುತ್ತಿದೆಯೋ ಅದು. ಇನ್ನೂ ಒಂದು ವಿಷಯ ವಿಜ್ಞಾನಿಗಳ ಗಮನಕ್ಕೆ ಬಂದಿದೆ. ಅದೇನೆಂದರೆ ವಿಶ್ವ ಇದ್ದಕ್ಕಿದ್ದಂತೆ ಇತ್ತೀಚಿನ (ಮಿಲಿಯನ್/ಬಿಲಿಯನ್) ವರ್ಷಗಳಲ್ಲಿ ವೇಗವಾಗಿ ಹಿಗ್ಗುತ್ತಿದೆ. ಅಂದರೆ ವಿಶ್ವದಲ್ಲಿ ಡಾರ್ಕ್ ಎನರ್ಜಿ ಪರಿಮಾಣ ಹೆಚ್ಚುತ್ತಿದೆ. ವಿಜ್ಞಾನಿಗಳ ಅಂದಾಜಿನಂತೆ ವಿಶ್ವದ ಒಟ್ಟು ಪರಿಮಾಣದ 68%!!!!
                ಅಸ್ಪಷ್ಟ ಕಪ್ಪು ಶಕ್ತಿಯ ಬಗ್ಗೆ ಸ್ವಲ್ಪವಾದರೂ ಅರಿತುಕೊಳ್ಳುವ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಕಪ್ಪು ಶಕ್ತಿಯಿಂದಾಗುತ್ತಿರುವ ವಿಶ್ವದ ಹಿಗ್ಗುವಿಕೆಯ ಪ್ರಮಾಣವನ್ನು ಲೆಕ್ಕಹಾಕುವ  ಪ್ರಯತ್ನದಲ್ಲಿದ್ದಾರೆ. ಮಹಾ ಸ್ಫೋಟದಿಂದ ಈ ವಿಶ್ವ 13.8 ಬಿಲಿಯನ್ ವರ್ಷದ ಹಿಂದೆ ಸೃಷ್ಟಿಯಾಯಿತು. ಅನಂತರದಿಂದ ಅಸ್ಪಷ್ಟ ಗುರಿಯತ್ತ ಹಿಗ್ಗುತ್ತಲೇ ಇದೆ. ಇತ್ತೀಚೆಗೆ ಹಿಗ್ಗುವಿಕೆಯ ವೇಗ ಹೆಚ್ಚುತ್ತಿದೆ. ಬೇರೆ ಬೇರೆ ಕಾಲಘಟ್ಟದಲ್ಲಿ (ಅಂದರೆ 1,2,3 ಇದೇರೀತಿ ಕೆಲ ಬಿಲಿಯನ್ ವರ್ಷಗಳ ಹಿಂದೆ) ಹಿಗ್ಗುವಿಕೆಯ ವೇಗ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ ವಿಜ್ಞಾನಿಗಳು. ತುಂಬಾ ಹಿಂದೆ ವಿಶ್ವದ ಹಿಗ್ಗುವಿಕೆ ಎಷ್ಟಿತ್ತು? ಅನಂತರ ಎಷ್ಟು? ಈಗ ಎಷ್ಟು?-ಎಂಬುದನ್ನು ಅರಿತರೆ ವಿಶ್ವದ ಮೇಲಾಗುತ್ತಿರುವ ಕಪ್ಪು ಶಕ್ತಿಯ ಪ್ರಮಾಣ ಸ್ವಲ್ಪವಾದರೂ ತಿಳಿಯಬಹುದು. ಆದರೆ ಹಿಂದಿನದನ್ನು ತಿಳಿಯುವುದು ಹೇಗೆ??
               ನಮ್ಮಗಳ ವಿಷಯದಲ್ಲಿ ಹಿಂದಿನದನ್ನು ತಿಳಿಯುವುದು ಎಂದರೆ ಹಿಂದೆ ದಾಖಲಾದ ಸಂಗತಿಗಳನ್ನು(ಉದಾ-ಶಾಸನ,ಬರವಣಿಗೆ,ನೆಲದಾಳದಲ್ಲಿ ದೊರೆತ ವಸ್ತುಗಳು-ಇತ್ಯಾದಿ) ತಿರುವಿಹಾಕಿ ಒಂದು ಅಭಿಪ್ರಾಯಕ್ಕೆ ಬರುವುದು ಎಂದರ್ಥವಷ್ಟೇ. ಆದರೆ ಈ ಅಂತರಿಕ್ಷದ ವಿಷಯದಲ್ಲಿ ಒಂದು ಮಜಾ ಇದೆ. ಇಲ್ಲಿ ಹಿಂದೆ ನಡೆದಿದ್ದನ್ನು ತಿಳಿಯುವುದು ಎಂದರೆ ದೂರ ನೋಡುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಎಂದರ್ಥ!!! ನಾವೇ ಈಗ ರಾತ್ರಿ ಹೊರಗೆ ಬಂದು ತಲೆಯೆತ್ತಿ ಆಕಾಶ ನೋಡುತ್ತಿದ್ದೇವೆಂದುಕೊಳ್ಳೋಣ. ನಮಗೆ ಕಾಣುವುದು ಎಂದಿನ ಆಕಾಶ? ಹಾಗೆಂದರೆ?? ಚಂದ್ರ ಹಾಗೂ ಗ್ರಹಗಳನ್ನ ಬಿಟ್ಟರೆ ನಮಗೆ ಕಾಣುವ ಆಕಾಶ ಹಿಂದ್ಯಾವುದೋ ಒಂದು ಕಾಲದ್ದು. ಹಿಂದೆಂದೋ ಆ ನಕ್ಷತ್ರಗಳಿಂದ ಹೊರಟ ಬೆಳಕನ್ನು ನಾವಿಂದು ನೋಡುತ್ತಿರುವುದು. ಅತೀ ಹತ್ತಿರದ ನಕ್ಷತ್ರವೂ ನಾಲ್ಕೂವರೆ ಬೆಳಕಿನವರ್ಷ ದೂರದಲ್ಲಿದೆ. ಹೆಚ್ಚಿನ ನಕ್ಷತ್ರಗಳು ಸಾವಿರಾರು ಬೆಳಕಿನವರ್ಷಗಳ ದೂರದಲ್ಲಿವೆ. ಅಂದರೆ ನಾವು ವರ್ತಮಾನ ಕಾಲದಲ್ಲಿದ್ದರೂ ಭೂತಕಾಲದಲ್ಲಿ ನಡೆದ ಘಟನೆಗಳನ್ನು ನೋಡುತ್ತಿರುತ್ತೇವೆ!!! ಎಷ್ಟೊಂದು ಸೋಜಿಗ!!!! ಇದರರ್ಥ ಅತಿ ದೂರದ್ದನ್ನ  ನೋಡುವ ಸಾಮರ್ಥ್ಯ ಬೆಳೆಸಿಕೊಂಡರೆ ಹಿಂದೆ ನಡೆದಿದ್ದು ಕಾಣುತ್ತದೆ. ಅಂದರಿಷ್ಟೇ-ನಮ್ಮಿಂದ ಎರಡು ಬಿಲಿಯನ್ ಬೆಳಕಿನವರ್ಷ ದೂರದಲ್ಲಿರುವ ಕೆಲವು ಗ್ಯಾಲಕ್ಸಿಗಳನ್ನ ಸತತವಾಗಿ ಅಭ್ಯಸಿಸಿದರೆ ಎರಡು ಬಿಲಿಯನ್ ವರ್ಷಗಳ ಹಿಂದಿನ ವಿಶ್ವದ ಹಿಗ್ಗುವಿಕೆಯ ಪ್ರಮಾಣ ಗೊತ್ತಾಗುತ್ತದೆ. ಇನ್ನೂ ಹಿಂದಿನ ವಿಶ್ವದ ಸ್ಥಿತಿ ತಿಳಿಯಬೇಕಾದರೆ ಮತ್ತೂ ದೂರದ ಗ್ಯಾಲಕ್ಸಿಗಳನ್ನ ನೋಡಬೇಕು!! ಈ ದೂರ ನೋಡುವಿಕೆ
ಬರಿಗಣ್ಣಿನಿಂದ ಎಂದೂ ಅಸಾದ್ಯ. ಇದಕ್ಕಾಗಿಯೇ ದೂರದ ಗ್ಯಾಲಕ್ಸಿಗಳನ್ನ ಗುರುತಿಸಲು, ಅಧ್ಯಯನಮಾಡಲು ಅನೇಕ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಚಿಲಿಯ ಬೆಟ್ಟದ ಮೇಲಿನ ಟೆಲಿಸ್ಕೊಪ್ ಮೇಲೆ ಸ್ಥಾಪಿತವಾಗಿರುವ 570 ಮೆಗಾಪಿಕ್ಸೆಲ್ ಕ್ಯಾಮರಾದಿಂದ 300 ಮಿಲಿಯನ್ ಗ್ಯಾಲಕ್ಸಿಗಳನ್ನ ಅಭ್ಯಸಿಸುವ ಕೆಲಸ ಶುರುವಾಗಿದೆ. ಬಹುಶಃ ಇನ್ನೈದು ವರ್ಷದ ಈ ಕಾರ್ಯ ಮುಗಿಯುವುದರಲ್ಲಿ ಎಂಟು ಬಿಲಿಯನ್ ವರ್ಷಗಳ ಹಿಂದಿನ ವಿಶ್ವ ತೆರೆದುಕೊಳ್ಳಬಹುದು. ಅದೇ ಚಿಲಿಯ ಪಕ್ಕದ ಬೆಟ್ಟದ ಮೇಲೆ-ಅನೇಕ ದೇಶಗಳು ಒಟ್ಟುಸೇರಿ-ಸ್ಥಾಪಿಸಲಾಗುತ್ತಿರುವ ಸರಣಿ ಟೆಲಿಸ್ಕೊಪ್ ವ್ಯವಸ್ಥೆಯಲ್ಲೂ ದೂರದ ಗ್ಯಾಲಕ್ಸಿಗಳನ್ನ ಕಾಣುವ ಯೋಜನೆಯಿದೆ. ಈಗಿನ್ನೂ ಸಿದ್ದವಾಗುತ್ತಿರುವ, 2020ರಲ್ಲಿ ಸ್ಥಾಪಿತವಾಗಲಿರುವ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಹೊಸ ಟೆಲಿಸ್ಕೊಪ್ ಹತ್ತು ಬಿಲಿಯನ್ ವರ್ಷಗಳ ಹಿಂದಿನ ಇತಿಹಾಸ ಕೆದಕಬಲ್ಲದಂತೆ!!! ಇನ್ನೊಂದು ಹತ್ತಿಪತ್ತು ವರ್ಷದಲ್ಲಿ ಕಪ್ಪು ಶಕ್ತಿಯ ಬಗ್ಗೆ ಒಂದಿಷ್ಟಾದರೂ ಗೊತ್ತಾಗಬಹುದು.
ಚಿಲಿಯ ಟೆಲಿಸ್ಕೋಪ್ ನ ಡಾರ್ಕ್ ಎನರ್ಜಿ ಸರ್ವೇ ಯ ಕ್ಯಾಮರಾದಿಂದ ತೆಗೆದ ದೂರದ ಗ್ಯಾಲಕ್ಸಿಯ ಒಂದು ಚಿತ್ರ     
            ಬರಹದ ಶೀರ್ಷಿಕೆ ಹಾಗೂ ವಿಷಯ ಏನೇ ಇರಲಿ, ನನ್ನ ಬ್ಲಾಗ್ ಬರಹಗಳ ಕೊನೆ ಮಾತ್ರ ಒಂದೇ ತರ ಇರುತ್ತದೆ. ಬರಹದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿದುಕೊಳ್ಳುವ ಕುತೂಹಲ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ಇಷ್ಟವಾಗಿದ್ದು ಕಾಮೆಂಟ್ ಬರೆಯಲು ಪುರುಸೊತ್ತಿಲ್ಲದಿದ್ದರೆ +1 ರ ಮೇಲೆ ಕ್ಲಿಕ್ಕಿಸಿ. ತುಂಬಾ ಇಷ್ಟವಾದರೆ ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವ ಅವಕಾಶವೂ ಕೆಳಗಿದೆ. ನಿಮ್ಮ ಕಾಮೆಂಟ್ ಗಳು, ಬರಹದಲ್ಲಿ ತಪ್ಪುಗಳಿದ್ದರೆ ತಿಳಿದುಕೊಳ್ಳಲು(ಹಾಗೂ ತಿದ್ದಿಕೊಳ್ಳಲು) ನಮಗವಕಾಶ.   
              

Friday, September 13, 2013

ಆನೆಯ ದಂತಗಳ ಗಣಿಗಾರಿಕೆ!!!!!!!!!!

                     ಅವೊಂದಿಷ್ಟು ದ್ವೀಪಗಳು.ಆ ಪ್ರದೇಶಗಳು ಉತ್ತರ ದ್ರುವಕ್ಕೆ ಸನಿಹದಲ್ಲಿವೆ. ಆದ್ದರಿಂದ ನಡು ಬೇಸಿಗೆಯಲ್ಲಿ ಅಲ್ಲಿ ಸೂರ್ಯ ಮುಳುಗುವುದೇ ಇಲ್ಲ!! ಹಿಮಚ್ಚಾದಿತ ಪ್ರದೇಶ. ಬೇಸಿಗೆಯಲ್ಲಿ ಹಿಮಕರಗಿ ಅಲ್ಲಲ್ಲಿ ನೆಲವೂ ಕಾಣಿಸುತ್ತಿರುತ್ತದೆ. ಹಿಮಕರಡಿಗಳು,ಸೀಲ್ ಗಳು ಹಾಗೂ ಒಂದಿಷ್ಟು ಹಕ್ಕಿಗಳು–ಇವುಗಳನ್ನು ಬಿಟ್ಟರೆ ಹಿಮಾವೃತ ಬೆಟ್ಟಗುಡ್ಡಗಳ ನಿರ್ಜನ ವಾಸ ಅಯೋಗ್ಯ ಪ್ರದೇಶ ಅದು. ಆದರೂ ಪ್ರತೀವರ್ಷ ಬೇಸಿಗೆಯಲ್ಲಿ ಹತ್ತಾರು/ನೂರಾರು ಜನ ಬಂದು, ತಾತ್ಕಾಲಿಕವಾಗಿ (ಅಲ್ಲಲ್ಲಿ) ಮಾಡಿಕೊಂಡ ಬಂಕರ್ ಗಳಲ್ಲಿ ವಾಸಿಸುತ್ತಾರೆ. ಹಗಲು–ರಾತ್ರಿಗಳ ವ್ಯತ್ಯಾಸವಿಲ್ಲದ ಆ ಪ್ರದೇಶದಲ್ಲಿ, ಸ್ವಲ್ಪಹೊತ್ತು ವಿಶ್ರಾಂತಿ ತೆಗೆದುಕೊಳ್ಳುತ್ತಾ, ಇನ್ನುಳಿದ ಸಮಯ ಹಿಮನದಿಗಳು ಹರಿದ/ಕೊರೆದ ಜಾಗಗಳಲ್ಲಿ, ಬೆಟ್ಟಗಳ ನಡುವಿನ ಕಣಿವೆಗಳಲ್ಲಿ, ತೀರಪ್ರದೇಶದ ಕೊರಕಲುಗಳಲ್ಲಿ, ಓಡಾಡುತ್ತ ಹುಡುಕುವಿಕೆಯಲ್ಲಿ ನಿರತರಾಗಿರುತ್ತಾರೆ. ಹೆಂಡತಿ-ಮಕ್ಕಳನ್ನು ಊರಿನಲ್ಲಿ ಬಿಟ್ಟುಬಂದು ಆ ನಿರ್ಜನ ಪ್ರದೇಶದಲ್ಲಿ ಅವರು ಹುಡುಕುತ್ತಿರುವುದಾದರೂ ಏನು? ಅವರು ಹುಡುಕುತ್ತಿರುವ ಆ ವಸ್ತು–ಸರಿಯಾದ್ದು ಒಂದೇ ಒಂದು ಸಿಕ್ಕಿದರೂ–ನೂರಾರು ಕಿ.ಮೀ. ದೂರದಲ್ಲಿರುವ ಆತನ ಸಂಸಾರ–ಒಂದು ಕ್ರೂರ ಚಳಿಗಾಲ ಕಳೆಯಲು ಸಾಕು!!!!  ಹಾಗಾದರೆ ಅವೇನು???– ಈ ಪ್ರಶ್ನೆಗೆ ಉತ್ತರವೇ ಈ ಲೇಖನದ ಶೀರ್ಷಿಕೆ.
                       ಹೌದು. ನಂಬಲು ಕಷ್ಟವಾಗುವ ನೈಜತೆ. ರಷ್ಯಾದ ಹಿಮಚ್ಚಾದಿತ ಸೈಬೀರಿಯಾದ ಉತ್ತರದ ತೀರದಲ್ಲಿ, ಅದರಾಚೆಯಿರುವ ನ್ಯೂ ಸೈಬೀರಿಯಾ ದ್ವೀಪಗಳ ಹಿಮನದಿಯ ಕೊರಕಲುಗಳಲ್ಲಿ, ಆ ದ್ವೀಪದ ತೀರಗಳಲ್ಲಿ ಅವರು ಹುಡುಕುತ್ತಿರುವುದು ಆನೆಯ ದಂತಗಳನ್ನ!!! ಅವರ ಅದೃಷ್ಟ ಚನ್ನಾಗಿದ್ದರೆ–ದಿನನಿತ್ಯದ ಅಲೆದಾಟದಲ್ಲಿ ಒಂದುದಿನ–ಒಂದಿಷ್ಟು ಆನೆಯ ಮೂಳೆಗಳು ಹಾಗೂ ಜೊತೆಗೆ–ಹಿಮಮಣ್ಣಿನ (permafrost)ನಡುವೆಅವರ ಪಾಲಿನ ಭಾಗ್ಯದ ನಿಧಿ–ಆ ಆನೆಯದಂತಗಳ ದರ್ಶನವಾಗಬಹುದು!!! ಹಿಮಕೆಸರುಮಣ್ಣಿನಿಂದ ನಿದಾನವಾಗಿ ಬೇರ್ಪಡಿಸಿ ತೆಗೆದು ಸಂಗ್ರಹಿಸಿ ಆ ದಂತಗಳನ್ನು–ದೂರದ ಮಾರುಕಟ್ಟೆಯಲ್ಲಿ ಮಾರಿದರೆ–ಅವರಿಗೆ ಸಿಗುವುದು–ಆ ದಂತಗಳು ಅತ್ಯುತ್ತಮ ಉದ್ದ ಹಾಗು ಮೈಇದ್ದರೆ–ಸಾವಿರಾರು ಪೌಂಡ್ ಹಣ!!!! ಸರಿ. ಹಿಮಕರಡಿ ಹಾಗೂ ಇತರ ಸಣ್ಣಪುಟ್ಟ ಪ್ರಾಣಿಗಳು ಮಾತ್ರ ಇರುವ, ಹಿಮತುಂಬಿದ ಆ ಪ್ರದೇಶಗಳಲ್ಲಿ ನೆಲದಡಿ ಆನೆಯ ದಂತ ಸಿಗುವುದಾದರೂ ಹೇಗೆ?? ಈಗ ಆನೆಗಳೇ ವಾಸಿಸದಿರುವ ಆ ಥಂಡಿ ಜಾಗದಲ್ಲಿ ದಂತಗಳು ಮಣ್ಣೊಳಗಿರುವುದು ಹೇಗೆ ಸಾದ್ಯ?? (ಆನೆಗಳು ಆಫ್ರಿಕಾ ಹಾಗು ಏಷ್ಯಾದ ಉಷ್ಣವಲಯದಲ್ಲಿ ಜೀವಿಸುತ್ತವೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ). ಈ ಕುತೂಹಲಕ್ಕೆ ಉತ್ತರವೇ ಲೇಖನದ ಮುಂದಿನ ಸಾಲುಗಳು.  

                             ಭೂಖಂಡಗಳ ಚಿತ್ರಣ (ನೆಲ ಮತ್ತು ಸಾಗರಗಳ ಎಲ್ಲೆ) ಸದಾ ಬದಲಾಗುತ್ತಿರುತ್ತದೆ. ಇಪ್ಪತ್ತು ಮೂವತ್ತು ಸಾವಿರ ವರ್ಷಗಳಿಗೊಮ್ಮೆ (ನಿಖರ ಕಾರಣ ಗೊತ್ತಿಲ್ಲದೇ) ಧ್ರುವಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಹಿಮ ಶೇಖರಗೊಳ್ಳಲಾರಂಭಿಸುತ್ತದೆ. ಸಾಗರಗಳ ಮಟ್ಟ ಕೆಳಕ್ಕೆಹೋಗುತ್ತದೆ. ಅದನ್ನೇ ಹಿಮಯುಗ ಎಂದು ಕರೆಯುತ್ತಾರೆ. ಕೆಲವು ಸಾವಿರ ವರ್ಷಗಳ ನಂತರ ಧ್ರುವಗಳಲ್ಲಿ ಹಿಮ ಶೇಖರವಾಗುವುದು ಕಡಿಮೆಯಾಗಿ ಕರಗುವಿಕೆ ಹೆಚ್ಚಾಗುತ್ತದೆ. ಆಗ ಸಮುದ್ರಗಳ ಮಟ್ಟ ಏರಲಾರಂಬಿಸುತ್ತದೆ. (ಈ ರೀತಿ ಅದೆಷ್ಟೋ ಬಾರಿ ಆಗಿಹೋಗಿವೆ!!!). ಕೊನೆಯ ಹಿಮಯುಗದಲ್ಲಿ-ಸಮುದ್ರ ನೀರಿನ ಮಟ್ಟ ಕಡಿಮೆಯಿದ್ದಾಗ-ಮೊದಲ ಪ್ಯಾರದಲ್ಲಿ ಉಲ್ಲೇಖಿಸಿದ ದ್ವೀಪಗಳು (ನ್ಯೂ ಸೈಬಿರಿಯನ್ ದ್ವೀಪಗಳು)-ಇಂದು ಸಮುದ್ರತಡಿಯಿಂದ ನೂರಾರು ಕಿ.ಮೀ. ದೂರದಲ್ಲಿದ್ದರೂ-ಅಂದು ಸೈಬೀರಿಯಾದ ಭಾಗವೇ ಆಗಿದ್ದವು. ಅಮೇರಿಕಾ ಎಷ್ಯಾಗಳ ನಡುವೆ ನೆಲ ಸಂಪರ್ಕವೂ ಇತ್ತು. ಇಂದಿನ ಇಂಗ್ಲೆಂಡ್ ಮತ್ತು ಫ್ರಾನ್ಸ್ ನ ನಡುವೆ ಡಾಗ್ಗರ್ ಲ್ಯಾಂಡ್ ಎಂಬ ಭೂಪ್ರದೇಶವೂ ಇತ್ತು!!!  (ಲೋಥಾಲ್ ಹಾಗೂ ದ್ವಾರಕೆಗಳಲ್ಲಿ ಸಮುದ್ರದಡಿ ಜನವಸತಿ ಅವಶೇಷಗಳು ಸಿಕ್ಕಿರಲು ಕಾರಣ ಈಗ ನಿಮಗೆ ಗೊತ್ತಾಗಿರಬಹುದು!!)  ಆ ಎಲ್ಲಾ ಜಾಗಗಳಲ್ಲಿ-ಅಂದರೆ, ಸೈಬೀರಿಯಾ, ಅಲಾಸ್ಕಾ ಹಾಗೂ ಉತ್ತರ ಕೆನಡಾಗಳಲ್ಲಿ-ಅಂದಾಜು ಹದಿನೈದು ಸಾವಿರ ವರ್ಷಗಳ ಹಿಂದೆ-ದೈತ್ಯಗಾತ್ರದ ಆ ಪ್ರಾಣಿಗಳು-ಬಹುಷಃ ಡೈನೋಸಾರಸ್ ಗಳ ನಂತರ ಈ ಜಗತ್ತು ಕಂಡ ಅತಿದೊಡ್ಡ ನಡೆದಾಡುವ ಜೀವಿಗಳು-ಇಂದಿನ ಆನೆಗಳಿಗಿಂತ ಎತ್ತರವೂ ದೊಡ್ದವೂ ಆದ ಆ ಪ್ರಾಣಿಗಳು-ಓಡಾಡಿಕೊಂಡು ಮೆಯಿದಾಡುತ್ತಿದ್ದವು. ಅವೇ ವೂಲೀ ಮ್ಯಾಮತ್ ಗಳು!!!! ನಾಯಿಗಳಲ್ಲಿ ಉದ್ದುದ್ದ ರೋಮದ ಜೂಲುನಾಯಿಗಳಿದ್ದಂತೆ, ಮೈಮೇಲೆ ಕಂಬಳಿಯ ಮೇಲೆ ಕಂಬಳಿಯನ್ನು ಹೊದ್ದುಕೊಂಡಂತೆ ಉದ್ದುದ್ದ ರೋಮದ ಆ ಆನೆಗಳೇ ಜೂಲಾನೆಗಳು!!! ಇಂದಿನ ಇಂಗ್ಲೀಶ್ ನಲ್ಲಿ ಅತೀ ದೊಡ್ಡದನ್ನು ವರ್ಣಿಸುವಾಗ ಮ್ಯಾಮತ್ ಎಂಬ ಪದ ಬಳಕೆಯಲ್ಲಿದೆ. (ಆದರೆ ಸೈಬೀರಿಯಾದಿಂದನೂ ದೂರದಲ್ಲಿರುವ ವ್ರಾಂಗಲ್ ದ್ವೀಪಗಳಲ್ಲಿ ಮಾತ್ರ ದೊಡ್ಡ ಮ್ಯಾಮತ್ ಗಳನ್ನೇ ಹೋಲುವ-ಮೈತುಂಬಾ ಜೂಲಿರುವ-ಆದರೆ ಚಿಕ್ಕ ಗಾತ್ರದ ಪಿಗ್ಮಿ ಮ್ಯಾಮತ್ ಗಳಿದ್ದವಂತೆ!!!)

                     ದ್ರುವದ ಹಿಮಹಾಸುಗಳ ಕರಗುವಿಕೆ, ಸಮುದ್ರ ಮಟ್ಟದಲ್ಲಿ ಏರಿಕೆ, ಅದರಿಂದಾಗಿ ಮೇಯುವ ಹುಲ್ಲುಗಾವಲಿನ ವಿಸ್ತೀರ್ಣ ಕಡಿಮೆಯಾಗುವಿಕೆ, ಅವೆಲ್ಲದಕ್ಕಿಂತ ಹೆಚ್ಚಾಗಿ (ಬಹುಶಃ)ಮಾಂಸಕ್ಕಾಗಿ ಆದಿಮಾನವರಿಂದ ಹತ್ಯೆ–ಇವೆ ಮೊದಲಾದ ಕಾರಣಗಳಿಂದಾಗಿ ಮ್ಯಾಮತ್ ಗಳು ಅಳಿವಾದವು. ತೀರಾ ಇತ್ತೀಚಿನವರೆಗೂ ಅಂದರೆ ಸುಮಾರು ಮೂರುವರೆ ಸಾವಿರ ವರ್ಷಗಳ ಹಿಂದಿನವರೆಗೂ ಅವು ಬದುಕ್ಕಿದ್ದವಂತೆ!!! ಉತ್ತರ ಸೈಬೀರಿಯಾದಲ್ಲಿ ಅವುಗಳ ದಂತ, ಮೂಳೆಗಳು ನೆಲದಲ್ಲಿ ಆಗಾಗ್ಯೆ ಕಾಣಿಸಿಕೊಳ್ಳುತ್ತಿರುತ್ತದೆ. ಆ ದಂತಗಳಿಗೋಸ್ಕರ ಜನರ ಹುಡುಕಾಟ. ಚಳಿಗಾಲ ಮುಗಿದ ನಂತರ ಸರಕಾರದ ಅಧಿಕೃತ ಪರವಾನಗಿಯೊಂದಿಗೆ ಬಂದು  ಬಂಕರುಗಳಲ್ಲಿ ನೆಲೆಸುವ ದಂತ ಅನ್ವೇಷಕರು–ಕತ್ತಲೆಯೇ (ಸರಿಯಾಗಿ) ಆಗದ ಆ ಪ್ರದೇಶಗಳಲ್ಲಿ–ಸಾಧ್ಯವಾದಷ್ಟು ಸಮಯ–ನಿರ್ಜನ ಪ್ರದೇಶಗಳಲ್ಲಿ, ನದಿ ಹರಿದು ಉಂಟಾದ ಕೊರಕಲುಗಳಲ್ಲಿ–ಹಿಮಮಣ್ಣಿನ ನಡುವೆ–ದಂತಗಳಿಗಾಗಿ ಹುಡುಕಾಡುತ್ತಾರೆ. ಹಿಮಮಣ್ಣಿನ ನಡುವೆ ಚೂರುಪಾರು ದಂತದ ದರ್ಶನವಾದರೂ ಸಬ್ಬಲ್ಲು-ಪಿಕಾಸಿಗಳಿಂದ ನಿದಾನವಾಗಿ ಹಿಮಮಣ್ಣಿನಿಂದ ಬೇರ್ಪಡಿಸಿ, ತೊಳೆದು ಸಂಗ್ರಹಿಸುತ್ತಾರೆ. ಮೊದಲೇ ಹೇಳಿದೆ-ಮ್ಯಾಮತ್ ಗಳು ಇಂದಿನ ಆನೆಗಳಿಗಿಂತ ತುಂಬಾ ದೊಡ್ಡದಿದ್ದವು. ಅಂತೆಯೇ ಅವುಗಳ ದಂತಗಳೂ ಕೂಡ. ಸಾಕಷ್ಟು ಉದ್ದದ ಹಾಗೂ ಭಾರದ ಒಂದು (ಒಂದೇ ಒಂದು) ದಂತ-ಉಸಿರು ಬಿಗಿಹಿಡಿದು ಓದಿ-ಅನ್ವೇಷಕನನ್ನು $60,000 ಹೆಚ್ಚು ಶ್ರೀಮಂತನನ್ನಾಗಿಸುತ್ತದೆ!!!!!  
             ಆನೆಯ ದಂತಗಳ ಗಣಿಗಾರಿಕೆ ಸೈಬೀರಿಯಾಕ್ಕೆ ಹೊಸತೇನಲ್ಲ. ಎಂದೆಂದೂ ಅದು ನಿಷೇದಿತವೂ ಆಗಿರಲಿಲ್ಲ. ಶತಮಾನಗಳಿಂದ ನಡೆದುಕೊಂಡುಬಂದಿದೆ. ತ್ಸಾರ್ ದೊರೆಗಳ ಕಾಲದಿಂದಲೂ ಯೂರೋಪಿನ ಇತರ ಭಾಗಗಳಿಗೆ ಅವ್ಯಾಹತವಾಗಿ ದಂತಗಳ ಸಾಗಣಿಕೆ ನಡೆದಿದೆ. ಆದರೆ ಈಗಿನ ಸೈಬೀರಿಯನ್ನರಿಗೆ ಈ ಉದ್ಯೋಗ, ಈ ಹುಡುಕಾಟ ಹೊಸತೆ!!! ಕಳೆದ ಶತಮಾನದ ಪ್ರಾರಂಭದಲ್ಲಿ ರಷ್ಯಾದಲ್ಲಿ ಕಮ್ಯುನಿಸಂ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಸೈಬೀರಿಯಾನೂ ಬದಲಾಯಿತು. ಸ್ಟಾಲಿನ್ ಕಾಲದಲ್ಲಿ ಬಲವಂತದ ಕೃಷಿ ಹಾಗೂ ಉದ್ಯೋಗಗಳು ಸೃಷ್ಟಿಯಾದವು. ದಂತಹುಡುಕಾಟ ನಿಂತೇಹೋಯಿತು. ಅಲ್ಲಿ ಏನು ನಡೆಯುತ್ತಿದೆಯೆಂಬುದು ಹೊರಪ್ರಪಂಚಕ್ಕೆ ಗೊತ್ತೇ ಆಗುತ್ತಿರಲಿಲ್ಲ. ಆದರೆ ಶತಮಾನದ ಅಂತ್ಯದಲ್ಲಿ ಹೊಸಗಾಳಿ ಬೀಸಿ ಯು.ಎಸ್.ಎಸ್.ಆರ್ ಅನೇಕ ದೇಶಗಳಾಗಿ ಹರಿದುಹಂಚಿ ಹೋದನಂತರ ಸೈಬೀರಿಯನ್ನರು ಸಂಕಷ್ಟಕ್ಕೀಡಾದರು. ಆಗ ಪಶ್ಚಿಮ ಸೈಬೀರಿಯಾದ ಅನೇಕಜನ ಕಂಡುಕೊಂಡ ಹೊಸ (ಹಳೆ) ಉದ್ಯೋಗವೇ ಮ್ಯಾಮತ್ ದಂತಗಳ ಅನ್ವೇಷಣೆ!!! (ಮುಂದೊಂದು ದಿನ ಈ ವೃತ್ತಿ ಮಾಡಬೇಕಾಗುತ್ತದೆಯೆಂಬ ಕಲ್ಪನೆಯೇ ಇಂದು ಈ ವೃತ್ತಿ ಮಾಡುತ್ತಿರುವವರಿಗೆ ಹಿಂದೆ (ಯು.ಎಸ್.ಎಸ್.ಆರ್ ಕಾಲದಲ್ಲಿ) ಇರಲಿಲ್ಲ!!!). ಅದೇ ಸಮಯದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಆನೆಯ ದಂತಗಳ ಸಾಗಣೆ ಮತ್ತು ಮಾರಾಟಕ್ಕೆ ನಿರ್ಬಂದ ಹೇರಿದ್ದು-ಅಧಿಕೃತ ಹಾಗು ನಿಷೇದಿತವಲ್ಲದ ಮ್ಯಾಮತ್ ದಂತಗಳ ಬೆಲೆಯನ್ನು ಅದೆಷ್ಟೋ ಪಟ್ಟು ಹೆಚ್ಚಿಸಿತು. ತುಂಬಾ ಹಿಂದೆ ಮ್ಯಾಮತ್ ದಂತಗಳು ಯುರೋಪ್ ದಿಕ್ಕಿನಲ್ಲಿ ಸಾಗುತ್ತಿದ್ದರೆ-ಎರಡು ದಶಕಗಳೀಚೆ ಚೀನಾದಲ್ಲಾದ ಮಹತ್ತರ ಬದಲಾವಣೆಗಳಿಂದಾಗಿ-ಈಗ ಹಾಂಗ್ ಕಾಂಗ್ ದಾರಿ ಹಿಡಿದಿವೆ ಹಾಗೂ ಮ್ಯಾಮತ್ ದಂತಗಳ ಬೆಲೆಯನ್ನು ಮತ್ತೂ ಹೆಚ್ಚಿಸಿವೆ!!!!

                    ಹಿಂದೆಯೂ ಅಷ್ಟೇ, ಇಂದೂ ಅಷ್ಟೇ. ಆನೆ ದಂತಗಳಿಂದ ತಯಾರಿಸಿದ ಸ್ಮರಣಿಕೆಗಳಿಗೆ ತುಂಬಾ ಬೆಲೆ. ಆನೆಗಳ ದಂತಗಳ ಸಾಗಣಿಕೆ ನಿಷೇದವಾದಮೇಲಂತೂ ದಂತಗಳ ಚಿಕ್ಕಪುಟ್ಟ ಮೂರ್ತಿಗಳಿಗೂ ಡಾಲರ್ ಗಟ್ಟಲೆ ಬೆಲೆ. ಹಾಂಗ್ ಕಾಂಗ್ ಸೇರುವ ಮ್ಯಾಮತ್ ದಂತಗಳು-ಕುಶಲಕರ್ಮಿಗಳಿಂದ  ಸುಂದರವಾಗಿ ಕೊರೆಯಲ್ಪಟ್ಟು (ಕೆಲವೊಮ್ಮೆ ತಿಂಗಳುಗಟ್ಟಲೆ!!!)-ಕೊನೆಗೆ ಸೇರುವುದು-ಚೀನಾದ ಹೊಸ ಶ್ರೀಮಂತರ ಮನೆಗಳ ಸಂಗ್ರಹಾಲಯಕ್ಕೆ-ಹಾಗೂ ಕಂಪನಿಗಳ ಕಛೇರಿಗಳ ಸೌಂದರ್ಯವರ್ಧನೆಗೆ!!!! (ಅದು ಚೈನಾದ ಸಂಪ್ರದಾಯ ಕೂಡ). ಯೋಗ್ಯ ಹಾಗು ಗಟ್ಟಿಮುಟ್ಟಾದ ಉದ್ದನೆಯ ಮ್ಯಾಮತ್ ದಂತದಲ್ಲಿ-ಪಕ್ಕದ ಚಿತ್ರದಲ್ಲಿ ತೋರಿಸಿದಂತಹ-ಸಂಪೂರ್ಣ ಉದ್ದದಲ್ಲಿ ಸಾಲು ಸಾಲು ಮೂರ್ತಿಗಳು/ಪ್ರಾಣಿಗಳು ಇರುವ ಕೆತ್ತನೆಗಳು (ಅವುಗಳನ್ನು ಪೂರ್ಣಗೊಳಿಸಲು ಕೆಲವೊಮ್ಮೆ ನಾಲ್ಕೈದು ವರ್ಷಗಳೇ ಬೇಕಾಗಬಹುದು!!!)-ಹತ್ತು ದಶಲಕ್ಷ ಡಾಲರ್ ಗಳವರೆಗೂ ಮಾರಾಟವಾಗುತ್ತವೆ!!!!! ಅದಕ್ಕೇ ಸೈಬೀರಿಯಾದ ಮ್ಯಾಮತ್ ದಂತಗಳಿಗೆ ಅಷ್ಟೊಂದು ಬೆಲೆ.

           ಇನ್ನೊಂದು ಮಜಾ ವಿಷಯವೇನೆಂದರೆ (ಅನೇಕ ಕ್ಷೇತ್ರಗಳ) ವಿಜ್ಞಾನಿಗಳು ಸೈಬಿರಿಯಾದ ಮ್ಯಾಮತ್ ದಂತ ಅನ್ವೇಷಕರೊಂದಿಗೆ ಕೈಜೋಡಿಸಿರುವುದು!!! ದಂತ ಹುಡುಕುಗಾರರು ಹುಡುಕಾಟದಲ್ಲಿ ತಮಗೆ ಸಿಗುವ ಆಸಕ್ತಿದಾಯಕ ಮಾಹಿತಿಯನ್ನು ತಳಿಶಾಸ್ತ್ರತಜ್ಞರು, ಜೀವಶಾಸ್ತ್ರವಿಜ್ಞಾನಿಗಳು, ಭೂಶಾಸ್ತ್ರಜ್ಞರು, ಪಳೆಯಳಿಕೆ ತಜ್ಞರು-ಮೊದಲಾದವರೊಂದಿಗೆ ಹಂಚಿಕೊಳ್ಳುತ್ತಾರೆ!!! ಆಸಕ್ತಿದಾಯಕವೆಂದೆನಿಸಿದರೆ ಅವರೂ ಅಲ್ಲಿಗೆ ಲಗ್ಗೆಯಿಡುತ್ತಾರೆ. ಅವರಿಗೂ ಅಲ್ಲಿ ಹೊಸಹೊಸ ವಿಷಯಗಳು ದೊರೆಯುತ್ತವೆ!!! ದಂತಹುಡುಕುಗಾರರಿಗೆ ಕೆಲವೊಮ್ಮೆ ದಂತಗಳ ಜೊತೆ ಮ್ಯಾಮತ್ ಗಳ ದೇಹವೂ ಕಾಣಿಸಿಕೊಳ್ಳುವುದುಂಟು!!! ಅತಿಶೀತವಾತಾವರಣ ಅವನ್ನು ಕೆಡದಂತೆ ಸಂರಕ್ಷಿಸಿರುತ್ತದೆ. ಅವರು ಕೂಡಲೇ ವಿಜ್ಞಾನಿಗಳಿಗೆ ಮಾಹಿತಿ ತಿಳಿಸುತ್ತಾರೆ. ಪ್ರಯೋಗಶಾಲೆಗೆ ದೇಹ ರವಾನೆಯಾಗುತ್ತದೆ!!!(ಕ್ರೇನ್/ದೋಣಿ/ಅಥವಾ ಹೆಲಿಕ್ಯಾಪ್ಟರ್ ಮೂಲಕ). ಹಿಂದೊಮ್ಮೆ ಸಿಕ್ಕ ಮರಿಮ್ಯಾಮತ್ ಹೊಟ್ಟೆಯಲ್ಲಿ ಅದು ತಿಂದ ಹುಲ್ಲಿನ ತುಂಡುಗಳು ಸಿಕ್ಕಿದ್ದವಂತೆ!!! ಇತ್ತೀಚೆಗಷ್ಟೇ ಸಿಕ್ಕ ಹೆಣ್ಣು ಮ್ಯಾಮತ್ ದೇಹವನ್ನು ಕ್ರೇನ್ ನಲ್ಲಿ ಎತ್ತುವಾಗ ಹೊಟ್ಟೆಯಿಂದ ರಕ್ತ ಸುರಿಯಿತಂತೆ!!! ಇಷ್ಟಕ್ಕೂ ಸತ್ತ ಮ್ಯಾಮತ್ ದೇಹಗಳನ್ನು ಕಟ್ಟಿಕೊಂಡು ಅವರಿಗೆನಾಗಬೇಕು ಎಂದು ನಮಗೆನಿಮಗೆ ಅನಿಸಬಹುದು. ಅಲ್ಲೇ ಇರುವುದು ಸ್ವಾರಸ್ಯ. ತಳಿತಜ್ಞರಿಗೆ ಜೀವಂತ ಮ್ಯಾಮತ್ ಪುನರ್ಸೃಷ್ಟಿಸುವ ಹೊಂಗನಸು!!!! ಸಾಕಷ್ಟು ಸುಸ್ತಿತಿಯಲ್ಲಿರುವ ಡಿ.ಏನ್.ಎ. ಗಳನ್ನು ಆ ಮ್ಯಾಮತ್ ಗಳ ಕಳೇಬರದಿಂದ ಸಂಸ್ಕರಿಸಲು ಸಾದ್ಯವಾದರೆ-ಈಗಿನ ಆನೆಗಳ ಗರ್ಭಕೋಶದಲ್ಲಿ-ಮರಿಮ್ಯಾಮತ್ ಗಳನ್ನ ಸೃಷ್ಟಿಸುವ ಪ್ರಯತ್ನ. (ಗಂಡು ಮ್ಯಾಮತ್ ದೇಹಗಳ ವ್ರುಷಣಗಳಲ್ಲಿ ವೀರ್ಯಾಣುಗಳು ಸಿಕ್ಕರೂ ಪುನರ್ಸೃಷ್ಟಿ ಸಾದ್ಯ). ಬಹುಶಃ ಮುಂದೊಂದು ದಿನ ನಮ್ಮ ಮೊಮ್ಮಕ್ಕಳ ಕೈಹಿಡಿದುಕೊಂಡು ಮೃಗಾಲಯಗಳಲ್ಲಿ ದೈತ್ಯ ಮ್ಯಾಮತ್ ಗಳು ನಡೆದಾಡುವುದನ್ನು ನೋಡಬಹುದು. ಅವುಗಳ ಘೀಳಿಡುವಿಕೆಯಿಂದ ರೋಮಾಂಚನಗೊಳ್ಳಬಹುದು!!!! (ಅಂದು ಈ ಬ್ಲಾಗ್ ಬರಹವನ್ನು ನೀವು ಇನ್ನೊಮ್ಮೆ ಜ್ಞಾಪಿಸಿಕೊಳ್ಳುತ್ತೀರಿ).
                       ನನ್ನ ಬ್ಲಾಗ್ ಬರಹಗಳ ಶೀರ್ಷಿಕೆ ಹಾಗೂ ನಿರೂಪಣೆಗಳಲ್ಲಿ ವೈವಿದ್ಯತೆಯಿದ್ದರೂ ಬರಹಗಳ ಕೊನೆ ಮಾತ್ರ ಒಂದೇರೀತಿ!!! ಈ ವಿಚಾರಗಳು ನಿಮಗೆ ಗೊತ್ತಿದ್ದವೇ ಅಥವಾ ಹೊಸವೇ ಎಂದು ತಿಳಿಯುವ ಕುತೂಹಲ. ನಿಮ್ಮ ಕಾಮೆಂಟ್ ಗಳು ನಾವು ತಿದ್ದಿಕೊಳ್ಳುವ ಸಲಹೆಗಳಾಗಿರಬಹುದು ಅಥವಾ ಬರವಣಿಗೆಯನ್ನು ಉತ್ತೇಜಿಸುವ ಟಾನಿಕ್ ಕೂಡ ಆಗಿರಬಹುದು. ನಿಮ್ಮನಿಸಿಕೆ ತಪ್ಪದೆ ಬರೆಯಿರಿ. ದಾವಂತದ ಪ್ರಪಂಚದಲ್ಲಿ ಅನಿಸಿಕೆ ಬರೆಯಲು ಸಮಯವಿಲ್ಲದಿದ್ದರೆ (ಬ್ಲಾಗ್ ಬರಹ ಹಿಡಿಸಿದರೆ) +1 ಒತ್ತಿ. (ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಯೋಗ್ಯವೆಂದೆನಿಸಿದರೆ ಫೆಸ್ ಬುಕ್ ನಲ್ಲೂ ಶೇರ್ ಮಾಡಿಕೊಳ್ಳಬಹುದು). 

Friday, April 19, 2013

ಜೇಬಿನಲ್ಲಿ ಸಾವಿರ ರುಪಾಯಿಯ ಎರಡು ನೋಟುಗಳನ್ನಿಟ್ಟುಕೊಂಡು ನಾರ್ವೆಗೆ ಹೋದ ಸೀನ ಪಟ್ಟ ಪಜೀತಿ !!!

                     ಅದೆಷ್ಟು ತಮಾಷೆಯ ಘಟನೆಗಳು ಸಂಭವಿಸುತ್ತಿರುತ್ತವೆ ಸುತ್ತಮುತ್ತ. ಅವುಗಳಲ್ಲಿ ಇದೂ ಒಂದು. ಸೀನ ಆಲಿಯಾಸ್ ಶ್ರೀನಿವಾಸ ನಮ್ಮೂರ ನಿವಾಸಿ. ದಲಿತ ಸಂಘರ್ಷ ಸಮಿತಿಯ ಅದ್ಯಾವುದೋ ಒಂದು ಬಣದ ತಾಲೂಕು ಮಟ್ಟದ ಪದಾಧಿಕಾರಿ. ಆದರೆ ಪ್ರಾಮಾಣಿಕ ಮನುಷ್ಯ. ಯಾರಿಗೂ ಕೇಡು ಬಯಸದ ಒಳ್ಳೆಯ ಮನುಷ್ಯ. ರೋಲ್ ಕಾಲ್ ಗೀಲ್ ಕಾಲ್ ಗಳಿಂದ ದೂರ. ಈಗ ಲೇಖನದ ಶೀರ್ಷಿಕೆಯತ್ತ ಬರೋಣ. ಅರೆ!! ಕೇವಲ ಸಾವಿರ ರುಪಾಯಿಯ ಎರಡು ನೋಟುಗಳನ್ನು – ಅಂದರೆ ಎರಡು ಸಾವಿರ ರುಪಾಯಿಗಳನ್ನು ಜೋಬಿನಲ್ಲಿಟ್ಟುಕೊಂಡು - ಸೀನ ಅದ್ಹೇಗೆ ನಾರ್ವೆ ದೇಶಕ್ಕೆ ಹೋಗಿಬಂದ ಎಂಬುದು ನಿಮ್ಮ ಪ್ರಶ್ನೆಯಲ್ಲವೇ? ಊಹೂ. ಸೀನ ಹೋಗಿದ್ದು ನಾರ್ವೆ ದೇಶಕ್ಕಲ್ಲ. ನಮ್ಮ ಹಳ್ಳಿಯ ಸಮೀಪ ನಾರ್ವೆ ಎಂಬ ಪುಟ್ಟ ಊರಿದೆ. (ಪುಟ್ಟ ಊರು = ಒಂದು ಹೈಸ್ಕೂಲ್, ಒಂದು ಬ್ಯಾಂಕ್, ಎರಡು ಮೂರು ದೇವಸ್ಥಾನಗಳು, ಒಂದು ಮಸೀದಿ, ಒಂದು ಟೆಲಿಫೋನ್ ಎಕ್ಸ್ ಚೇಂಜ್, ಮೊಬೈಲ್ ಟವರ್ (ಬಿ.ಎಸ್.ಏನ್.ಎಲ್.ಎಂದು ಹೇಳುವ ಅವಶ್ಯಕತೆಯಿಲ್ಲವೇನೋ!!), ಕಟಿಂಗ್ ಶಾಪ್, ಒಂದಿಷ್ಟು ಅಂಗಡಿ ಹಾಗು ಮನೆಗಳು. ಸಂಜೆ ಗಂಡಸರುಗಳೆಲ್ಲಾ ಸೇರಿ ಪಟಾಕಿಹೊಡೆಯುವ ಸ್ಥಳ). ಆ ನಾರ್ವೆಗೇ ಸೀನ ಹೋಗಿದ್ದು – ಸಾವಿರ ರುಪಾಯಿಯ ಎರಡು ನೋಟುಗಳೊಂದಿಗೆ. ಈ ಲೇಖನದ ಕೊನೆಯಲ್ಲಿ ನಿಮಗೆ ಆಶ್ಚರ್ಯವಾಗಬಹುದು – ನಡೆದ ಘಟನಾವಳಿಗಳಲ್ಲಿ ಯಾರಿಗೂ ನಷ್ಟವಾಗಲಿಲ್ಲ - ಬದಲಾಗಿ ಎಲ್ಲರಿಗೂ ಲಾಭವೇ ಆಯಿತೆಂದು!!! ಸಾವಿರ ರುಪಾಯಿಯ ಎರಡು ನೋಟುಗಳೊಂದಿಗೆ ನಾರ್ವೆಗೆ ಹೋಗಿ ಸೀನ ಏನು ಪಜೀತಿಪಟ್ಟ ಎಂಬುದರ ವಿವರಣೆಯೇ ಲೇಖನದ ಮುಂದಿನ ಭಾಗ. 
                   ನಾರ್ವೆಯಲ್ಲಿ ಅಂಗಡಿಯೊಂದರಲ್ಲಿ ಒಂದಿಷ್ಟು ಸಾಮಾನು ಕಟ್ಟಿಸಿ ಸಾವಿರದ ಒಂದು ನೋಟನ್ನು ಕೊಟ್ಟ ಸೀನ. ಆದರೆ ಅಂಗಡಿಯವರಿಂದ ಚಿಲ್ಲರೆ ಇಲ್ಲ ಎಂದುತ್ತರ ಬರುತ್ತದೆ. ಕಟ್ಟಿಸಿದ ಸಾಮಾನು ಅಲ್ಲೇ ಬಿಟ್ಟು ಸೀನ ಸಾವಿರ ರುಪಾಯಿಯ ನೋಟಿಗೆ ಚಿಲ್ಲರೆ ಹುಡುಕುತ್ತಾ ಹೊರಟ. ಪಕ್ಕದ ಅಂಗಡಿಗಳು, ಮೇಲೆ ಕೆಳಗೆ, ಎಲ್ಲಿ ಹೋದರೂ ಸೀನನಿಗೆ ಚಿಲ್ಲರೆ ಹುಟ್ಟಲಿಲ್ಲ. ಏನಪ್ಪಾ ಮಾಡುದು ಎಂದು ತಲೆ ಕೆರೆದುಕೊಳ್ಳುತ್ತಾ ನಿಂತಿದ್ದ ಸೀನನಿಗೆ ಎದುರಾದವನೇ ಆನಂದಪ್ಪ. ಸೀನ ಎಷ್ಟಾದರೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಯಲ್ಲವೇ, ಯಾವುದೋ ಒಂದು ಪ್ರತಿಭಟನೆಯಲ್ಲಿ ಭಾಗವಹಿಸಿದಾಗ ಅಲ್ಲಿ ಹಿಂದೆಂದೋ ಆನಂದಪ್ಪನನ್ನು ನೋಡಿದ ಪರಿಚಯ. ಅರೆ! ಏನು ಇಲ್ಲಿ? ಏನು ವಿಷ್ಯಾ?? – ಎಂಬ ಆನಂದಪ್ಪನ ಪ್ರಶ್ನೆಗೆ ಉತ್ತರವಾಗಿ ಸೀನ ನಡೆದದ್ದು – ಎಲ್ಲೂ ಸಾವಿರ ರುಪಾಯಿಗೆ ಚಿಲ್ಲರೆ ಹುಟ್ಟದಿದ್ದ ವಿಷಯ - ಹೇಳಿದ. ಅದುಕ್ಯಾಕ್ ತಲೆ ಕೆಡ್ಸ್ಕಂತೀರಿ?? ಕೊಡಿ ಆ ನೋಟು. ನಾನೀಗ್ ತರ್ತೀನಿ ಚಿಲ್ರೆ – ಎಂದು ಆ ನೋಟು ಇಸ್ಕಂಡ್ ಆನಂದಪ್ಪ ಮಾಯವಾದ!!!!
                  ಇಷ್ಟಕ್ಕೂ ಆನಂದಪ್ಪ ನಾರ್ವೆಕಡೆಯವನು ಎಂಬುದೊಂದು ಬಿಟ್ಟರೆ ಆತನ ಮನೆ ನಾರ್ವೆ ಪಕ್ಕ ಯಾವ ಹಳ್ಳಿಯಲ್ಲಿ ಎಂದಾಗಲಿ, ನಿಜ ಹೇಳಬೇಕೆಂದರೆ ಆತನ ಹೆಸರಾಗಲೀ ಸೀನನಿಗೆ ಗೊತ್ತಿರಲಿಲ್ಲ!!! ಮೂರ್ನಾಕು ಬಾರಿ ನೋಡಿದ ಮುಖಪರಿಚಯವಷ್ಟೇ. ಐದು-ಹತ್ತು-ಇಪ್ಪತ್ತು ನಿಮಿಷಗಳಾದರೂ ಆನಂದಪ್ಪನ ಸುಳಿವೇ ಇಲ್ಲ!!! ಇಷ್ಟರವರೆಗೂ ಸಾವಿರ ರುಪಾಯಿಗೆ ಚಿಲ್ಲರೆ ಹುಡುಕುತ್ತಿದ್ದ ಸೀನ – ಚಿಲ್ಲರೆ ತರುತ್ತೇನೆಂದು ಸಾವಿರ ರುಪಾಯಿ ನೋಟು ತೆಗೆದುಕೊಂಡು ಹೋದ ಆನಂದಪ್ಪನನ್ನು ಹುಡುಕಿಕೊಂಡು – ಮತ್ತೆ ನಾರ್ವೆ ಮೇಲೆ ಕೆಳಗೆ ಒಂದೆರೆಡು ಬಾರಿ ಓಡಾಡಿದ. ಊಹೂ. ಆನಂದಪ್ಪ ನಾಪತ್ತೆ!!!!. ಇದೊಳ್ಳೆ ಪಜೀತಿಯಾಯ್ತಲ್ಲಾ ಅಂತಾ ತಲೆಕೆರೆದುಕೊಳ್ಳುತ್ತಾ ನಿಂತ ಸೀನ.
                  ಟೈಲರ್ ಅಂಗಡಿಯಲ್ಲಿ ಕುಳಿತು ಬಟ್ಟೆ ಹುಲಿಯುತ್ತಿದ್ದ ಟೈಲರ್ ಚಂದ್ರು – ಸೀನ ಬಂದು ಚಿಲ್ಲರೆ ಕೇಳಿದ್ದು – ಅನಂತರ ಮೇಲೆ ಕೆಳಗೆ ಓಡಾಡುತ್ತಿದ್ದಿದ್ದು – ಆನಂದಪ್ಪನ ಜೊತೆ ಏನೋ ಮಾತಾಡುತ್ತಿದ್ದಿದ್ದು – ಮತ್ತೆ ಮೇಲೆ ಕೆಳಗೆ ಓಡಾಡಿದ್ದು – ಕೊನೆಗೆ ತಲೆಕೆರೆದುಕೊಳ್ಳುತ್ತಾ ನಿಂತಿದ್ದು – ಎಲ್ಲಾ ಗಮನಿಸುತ್ತಿದ್ದವನು – ಕುತೂಹಲ ತಡೆಯಲಾರದೆ ಸೀನನನ್ನು ಕರೆದು ಏನಾಯಿತೆಂದು ಕೇಳಿದ. (ಜನಸಂಖ್ಯೆ ಕಡಿಮೆಯಿರುವ ಹಳ್ಳಿಗಳಲ್ಲಿ ಜನ, ಬಸ್ ಸ್ಟ್ಯಾಂಡ್/ರಸ್ತೆಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು  ಕುತೂಹಲದಿಂದ ಗಮನಿಸುತ್ತಿರುತ್ತಾರೆ). ಸೀನ ನಡೆದಿದ್ದೆಲ್ಲಾ ಹೇಳಿ ನನ್ನ ಜೊತೆ ಸ್ವಲ್ಪಹೊತ್ತಿನ ಮುಂಚೆ ಮಾತಾಡುತ್ತಿದ್ದು ಚಿಲ್ಲರೆ ತರುತ್ತೇನೆಂದು ಸಾವಿರ ರುಪಾಯಿ ನೋಟು ತಗಂಡು ಹೋಗಿದ್ದು ನೋಡಿದ್ರಲಾ. ಯಾರವನು?’ ಎಂದು ಕೇಳಿದ.
                     ಯಾರು? ಅವನಾ?? ನಿಮ್ ಜೊತೆ ಮಾತಾಡ್ತಿದ್ನಲಾ ಅವನ್ ಸಾವಿರ ರುಪಾಯಿ ನೋಟ್ ಚಿಲ್ರೆ ತರ್ತೀನಿ ಅಂತ ತಗಂಡ್ ಹೋದ್ನಾ??  ಹಾಗಾದ್ರೆ ಸಾವಿರ ರುಪಾಯಿ ಕಥೆ ಮುಗೀತು. ಅವನ್ ಆನಂದಪ್ಪ. ದೊಡ್ಡ ಕುಡುಕ!! ಹಗಲೊತ್ತಲ್ಲೇ  ಟೈಟ್. – ಎಂದು ಟೈಲರ್ ಚಂದ್ರು ಹೇಳಿದಾಗ ಸೀನನ ತಲೆಮೇಲೆ ಆಕಾಶನೇ ಬಿದ್ದಂತಾಯಿತು. ಸಾವಿರ ರುಪಾಯಿ ಕೈಬಿಟ್ಟಂತೆಯೇ ಎಂದುಕೊಂಡ. ಅಷ್ಟರಲ್ಲೇ ಆಕಡೆಯಲ್ಲೆಲ್ಲಿಂದಲೋ ಇಬ್ಬರು ಯುವಕರು ಬೈಕ್ ನಲ್ಲಿ ಟೈಲರ್ ಅಂಗಡಿಕಡೆ ಬಂದರು. ಅವರನ್ನು ಟೈಲರ್ ಚಂದ್ರು ಕೇಳಿದ – ಅಲ್ಲೆಲ್ಲಾದರೂ ಆನಂದಪ್ಪ ಕಂಡನಾ?. ಉತ್ತರ ಬಂತು – ಯಾರ್ ಆ ಎಣ್ಣೆ ಪಾರ್ಟಿ ಆನಂದಪ್ಪನಾ? ಬರುವ ಹೊತ್ತಿಗೆ ಈಗ ನೋಡಿದ್ವು. ಐದ್ ನಿಮಿಷದ ಕೆಳಗೆ ಗೌಡರ ಅಂಗಡಿ ಮುಂದೆ ನಿಂತಿದ್ದ. ಏನಕ್ ಆನಂದಪ್ಪನ ಕೇಳ್ತಿದ್ದೀರಿ? ಏನ್ ಕಥೆ??. ಟೈಲರ್ ಚಂದ್ರು ನಡೆದ ಕಥೆ ಹೇಳಿದ. ಕೂಡಲೇ ಗೌಡರ ಅಂಗಡಿಗೆ ಫೋನ್ ಹಚ್ಚಲಾಯಿತು. ಗೌಡರ ಅಂಗಡಿಯೆಂದರೆ ಊರಿನ ಸ್ವಲ್ಪ ಹೊರಗಿದ್ದ ಅಣ್ಣೆಗೌಡರ ದಿನಸಿ ಕಂ ಎಣ್ಣೆ ಅಂಗಡಿ. (ಮೊದಲೆಲ್ಲ ಊರಿಗೊಂದು ಸರಾಯಿಯ ಕೊಟ್ಟೆ (ಪಾಕೀಟು -ಆಡುಭಾಷೆಯಲ್ಲಿ )  ಮಾರುವ ಅಂಗಡಿಯಿರುತ್ತಿತ್ತು. ಆದರೆ ಸರ್ಕಾರ ಸರಾಯಿ ವ್ಯವಸ್ತೆ ತೆಗೆದುಹಾಕಿದಮೇಲೆ – ಹಳ್ಳಿಗಳಲ್ಲಿ ಅನೇಕ ದಿನಸಿ ಅಂಗಡಿಗಳು – ಸಂಜೆ ದಿನಸಿ ಸಾಮಾನಲ್ಲದೆ ಎಣ್ಣೆ ಬಾಟಲಿ ಮಾರಾಟದಲ್ಲಿ ತೊಡಗಿವೆ!!! ಆ ಅಂಗಡಿಗಳಲ್ಲಿ ಕೂಲಿಕಾರ್ಮಿಕರ ಜೇಬಿನ ಬಾರ ಬೇಗ ಕಡಿಮೆಯಾಗುತ್ತವೆ!!! ಆದರೆ ಕಾಫಿ ಬೆಲೆ ಚನ್ನಾಗಿರುವುದರಿಂದ (ಸ್ವಲ್ಪ ಕೆಲಸಮಾಡಿದರೆ) ಜೇಬು ಮತ್ತೆ ಬಾರವಾಗುತ್ತಿರುತ್ತದೆ). ಅತ್ತ ಫೋನ್ ನಲ್ಲಿ ಮಾತಾಡಿದ ಗೌಡರು ಹೌದು. ಆನಂದಪ್ಪ ಬಂದಿದ್ದ. ಹಳೆ ಬಾಕಿ ತೀರ್ಸಿ,ಇನ್ನೂ ಎರಡು ಕ್ವಾರ್ಟರ್ ಬಾಟಲಿ ತಗಂಡ್ ಈಗತಾನೆ ಅಂಗಡಿಯಿಂದ ಹೋದ ಎಂದರು.
                   ನಡೆದಿದ್ದಿಷ್ಟೇ. ಚಿಲ್ಲರೆ ತರುತ್ತೇನೆಂದು ಸಾವಿರ ರುಪಾಯಿ ನೋಟು ತೆಗೆದುಕೊಂಡು ಹೋದ ಆನಂದಪ್ಪ – ಊರಿನಿಂದ ಸ್ವಲ್ಪ ಹೊರಗಿದ್ದ  ಗೌಡರ ಎಣ್ಣೆ ಕಂ ದಿನಸಿ ಅಂಗಡಿಗೆ ಹೋಗಿದ್ದಾನೆ. ಸಾವಿರ ರುಪಾಯಿ ನೋಟು ಗೌಡರಿಗೆ ಕೊಟ್ಟಿದ್ದಾನೆ. (ಹಿಂದೆ ಎಣ್ಣೆ ಹೊಡೆಯಲು ಮಾಡಿದ) ಆನಂದಪ್ಪನ ಹಿಂದಿನ ಬಾಕಿ – ನೂರಾ ನೂರೈವತ್ತಾ ರುಪಾಯಿಯನ್ನು ಗೌಡರು ಮುರಿದುಕೊಂಡು ಉಳಿದ ಚಿಲ್ಲರೆ ಕೊಟ್ಟಿದ್ದಾರೆ. ಭಂಡ ಆನಂದಪ್ಪ ಆ ಚಿಲ್ಲರೆಯಲ್ಲಿ ಮತ್ತೆರೆಡು ಕ್ವಾರ್ಟರ್ ಬಾಟಲಿ ಕೊಂಡುಕೊಂಡು ಜೇಬಿಗಿಳಿಸಿದ್ದಾನೆ. ಉಳಿದ ದುಡ್ಡನ್ನೂ ತನ್ನ ಹತ್ರನೇ ಇಟ್ಟುಕೊಂಡಿದ್ದಾನೆ!!!
                 ಆನಂದಪ್ಪನ ಸುಳಿವು ಸಿಕ್ಕಿದ್ದೇ ತಡ, ಒಂದು ಕ್ಷಣವೂ ಸಮಯ ವ್ಯರ್ಥಮಾಡದೆ ಬೈಕಿನಲ್ಲಿ ಬಂದ ಆ ಯುವಕರು ಸೀನನನ್ನು ಮದ್ಯದಲ್ಲಿ ಕೂರಿಸಿಕೊಂಡು ಸೀದಾ ಗೌಡರ ಅಂಗಡಿಯ ದಿಕ್ಕಿಗೆ ಬೈಕ್ ತಿರುಗಿಸಿದರು. ಗೌಡರ ಅಂಗಡಿಯಿಂದ ಸ್ವಲ್ಪಮುಂದೆ ತೂರಾಡುತ್ತಾ  ಕಾಲೆಳೆದುಕೊಂಡು ಹೋಗುತ್ತಿದ್ದ ಆನಂದಪ್ಪ ಕಂಡ. ಸೀನನಿಗೆ ಜೀವ ಬಂದಂತಾಯಿತು. ಇವರು ಕಾಣುತ್ತಿದ್ದಂತೆ ಆನಂದಪ್ಪ ರಸ್ತೆ ಬಿಟ್ಟು ಓಡಲಾರಂಬಿಸಿದ. ಆದರೆ ಬೈಕಿನಲ್ಲಿ ಬಂದ ಆ ಯುವಕರು – ಆನಂದಪ್ಪನನ್ನು ಬೆನ್ನಟ್ಟಿ ಹೋಗಿ ಎಳೆದು ತಂದರು. ಎಣ್ಣೆಮತ್ತಿನ ಆನಂದಪ್ಪ ಕೈ ಮುಗಿದು ಪೆಚ್ಚುಮೊರೆ ಮಾಡಿಕೊಂಡು ನಿಂತ. ಒಂದೆರೆಡು ಧರ್ಮದೇಟುಗಳು ಬಿದ್ದವು. ಜೇಬು ಜಪ್ತಿಮಾಡಿದಾಗ ಆರುನೂರು ಚಿಲ್ಲರೆ ರೂಪಾಯಿಗಳು ಸಿಕ್ಕವು. ಜೊತೆಗೆರೆಡು ಎಣ್ಣೆ ಬಾಟಲಿಗಳು. ಯುವಕರು ಅವನ್ನೆಲ್ಲ ಸೀನನ ಕೈಮೇಲೆ ಹಾಕಿದರು. ಅಬ್ಬ. ಇಷ್ಟಾದರೂ ಸಿಕ್ತಲ್ಲಾ ಎಂದು ಸಾವಿರ ರುಪಾಯಿ ಕಳೆದುಕೊಂಡು ಚಿಂತಾಕ್ರಾಂತನಾಗಿದ್ದ ಸೀನ ನಿರಾಳ ಮನದಿಂದ ಆರನೂರು ಚಿಲ್ಲರೆ ರುಪಾಯಿಗಳನ್ನು ಜೇಬಿಗಿಳಿಸಿದ. ಆದರೆ ಎರಡು ಬಾಟಲಿಗಳು. ಸೀನ ಎಣ್ಣೆಹಾಕುವ ವ್ಯಕ್ತಿಯಲ್ಲ. ಆನಂದಪ್ಪನ ಸುಳಿವುಕೊಟ್ಟು, ಫೋನ್ ಮಾಡಿ, ಬೈಕಿನಲ್ಲಿ ಕರೆದುಕೊಂಡು ಹೋಗಿ ಅವನನ್ನು ಹಿಡಿಯಲು ನೆರವಾದ ಆ ಇಬ್ಬರು ಯುವಕರಿಗೆ ಸೀನ ಆ ಎರಡು ಬಾಟಲಿಗಳನ್ನ ನೀಡಿದ!!!
                 ನಾನು ಲೇಖನದ ಮೊದಲಪ್ಯಾರಾದಲ್ಲೇ ಹೇಳಿದೆ – ನಡೆದ ಘಟನಾವಳಿಗಳಲ್ಲಿ ಯಾರಿಗೂ ನಷ್ಟವಾಗಲಿಲ್ಲ. ಬದಲಾಗಿ ಲಾಭವೇ ಆಯಿತೆಂದು. ಸೀನನ ವಿಷಯಕ್ಕೇ ಬರೋಣ. ಆತನಿಗೇ ಸ್ವಲ್ಪ ನಷ್ಟವಾದಂತನಿಸಿದರೂ ಸಾವಿರ ರುಪಾಯಿ ಲಾಸಾಗುವುದು ತಪ್ಪಿ ಆರುನೂರು ಚಿಲ್ಲರೆ ರುಪಾಯಿ ವಾಪಸ್ ಸಿಕ್ಕಿದ್ದರಿಂದ ಸಂತೋಷಪಟ್ಟ!  ಆನಂದಪ್ಪನಿಗೆ? ಗೌಡರ ಅಂಗಡಿಯಲ್ಲಿ ಹಳೆಬಾಕಿ ಚುಕ್ತವಾದ ಲಾಭ!!  ಇನ್ನು ಗೌಡರಿಗೆ – ಹಳೆಬಾಕಿ ತೀರಿಸದೆ ತಲೆತಪ್ಪಿಸಿ ಓಡಾಡುತ್ತಿದ್ದ ಆನಂದಪ್ಪ ಬಾಕಿ ತೀರಿಸಿದ ಲಾಭ!!! ಸಹಾಯ ಮಾಡಿದ ಆ ಇಬ್ಬರು ಯುವಕರಿಗೆ – ಒಂದೊಂದು ಎಣ್ಣೆಬಾಟಲಿ ಸಿಕ್ಕಿದ ಲಾಭ!!!!  ಓದುಗರರಾದ ನಿಮಗೂ ಮನರಂಜನೆಯ ಲಾಭವಾಗಿದೆಯೆಂದು ಅಂದುಕೊಳ್ಳುತ್ತೇನೆ. (ಕಾಮೆಂಟಿಸಿದರೆ/+1 ರ ಮೇಲೆ ಕ್ಲಿಕ್ ಮಾಡಿದರೆ ಗೊತ್ತಾಗುತ್ತೆ).  

                       

Friday, March 1, 2013

ನೆಲದಾಳದಲ್ಲಿ ಸುರಂಗಗಳ ಮೂಲಕ ವ್ಯಾಪಾರ ವಹಿವಾಟು !!!!!


          ಲೇಖನದ ಈ ಶೀರ್ಷಿಕೆಯೇ ನಿಮ್ಮಲ್ಲಿ (ಕೆಲವರಿಗಾದರೂ) ಕುತೂಹಲ ಹುಟ್ಟಿಸಬಹುದು!!! ದೇಶ ದೇಶಗಳ ನಡುವಣ ವ್ಯಾಪಾರ ವಹಿವಾಟು ಹಡಗು/ಬಂದರುಗಳ ಮೂಲಕ ಅಥವ ಟ್ರಕ್/ರೈಲು/ಚೆಕ್ ಪೋಸ್ಟ್ ಗಳ ಮೂಲಕ ಅಥವಾ ವಿಮಾನಗಳ ಮೂಲಕ ನಡೆಯುತ್ತದೆಂಬುದು ನಿಮಗೆಲ್ಲಾ ಗೊತ್ತಿರುವ ವಿಷಯವೇ. ಆದರೆ – ದೇಶ ದೇಶದ ಮದ್ಯದ ಗಡಿಯಲ್ಲಿ - ನೆಲದಿಂದ ಅರವತ್ತು ಎಪ್ಪತ್ತು ಅಡಿಗಳಾಳದಲ್ಲಿ – ಸ್ವಲ್ಪ ನಡು ಬಗ್ಗಿಸಿ ಹೋಗಬಹುದಾದ ದೂಳು ತುಂಬಿದ ಅರೆಗತ್ತಲೆಯ ಸುರಂಗಗಳ ಮೂಲಕ - ಮುಖಕ್ಕೊಂದು ಬಟ್ಟೆ ಸುತ್ತಿಕೊಂಡು – ವಾರದಲ್ಲಿ ಆರುದಿನ ಹಗಲೂ ರಾತ್ರಿ (ಬಹುಶಃ ಶುಕ್ರವಾರ ಅಲ್ಲದಿದ್ದರೆ ನೀವೀಗ ಈ ಲೇಖನ ಓದುತ್ತಿರುವ ಸಮಯದಲ್ಲೂ) ನಡೆಯುತ್ತಿರುವ – ವಾರ್ಷಿಕ ಕೆಲವು ದಶಲಕ್ಷ ಡಾಲರುಗಳ – ಸಾಮಾನು ಸರಂಜಾಮುಗಳ ವ್ಯಾಪಾರ ವಹಿವಾಟಿನ ಬಗ್ಗೆ ನೀವು ಕೇಳಿರುವ ಸಂಭವ ಕಡಿಮೆ. (ಬಹುಶಃ) ಈ ವ್ಯವಸ್ತೆ ಪ್ರಪಂಚದ ಅತಿದೊಡ್ಡ ಕಳ್ಳಸಾಗಾಣಿಕಾ ವ್ಯವಸ್ತೆ!!! ಈ ಆಶ್ಚರ್ಯಕರ, ಕುತೂಹಲಬರಿತ ಹಾಗೂ ಸ್ವಾರಸ್ಯಕರ ವಿಷಯದ ಬಗ್ಗೆ ನಿಮಗೆ ತಿಳಿಸುವುದೇ ಈ ಬ್ಲಾಗ್ ಬರಹದ ಉದ್ದೇಶ. ಆದರೆ ಅದಕ್ಕೆ ಪೂರ್ವಭಾವಿಯಾಗಿ ಚರಿತ್ರೆಯ ಪುಟಗಳಲ್ಲಿ ಹಿಮ್ಮುಖ ಪಯಣ. 
             ಬೈಬಲ್ಲಿನ ಹಳೆಯ ಒಡಂಬಡಿಕೆಗಳ ಪ್ರಕಾರ ಇಸ್ರೇಲ್ ಎಂಬುದು ಯಹೂದಿಗಳಿಗೆ ದೇವರೇ ನೀಡಿದ ಭೂಬಾಗ. ಗುಲಾಮರಂತೆ ಈಜಿಪ್ಟಿನಲ್ಲಿ ಬಾಳುತ್ತಿದ್ದ ಯಹೂದಿಗಳು ಗುಂಪುಕಟ್ಟಿಕೊಂಡು ಮೋಸಸ್ ನ ನೇತೃತ್ವದಲ್ಲಿ ಈಜಿಪ್ಟ್ ನಿಂದ (ತಮ್ಮ ಮೂಲ ನೆಲೆ ಕಡೆ) ಹೊರಟಾಗ ಬೆಟ್ಟವೊಂದರಮೇಲೆ ಮೋಸಸ್ ನಿಗೆ ಕಾಣಿಸಿಕೊಳ್ಳುವ ದೇವರು (God) ಯಹೂದಿಗಳಿಗೆ ಇಸ್ರೇಲ್ ಪ್ರದೇಶವನ್ನು ನೀಡುತ್ತಾನೆ. ಯಹೂದಿಗಳು ನೆಲಸುತ್ತಾರೆ. ನಗರ/ದೇವಾಲಯಗಳನ್ನು ಕಟ್ಟಿಕೊಳ್ಳುತ್ತಾರೆ. ಕ್ರಿಸ್ತನ ಹುಟ್ಟು, ಬದುಕು ಹಾಗೂ ಸಾವು – ಎಲ್ಲಾ ಸಂಭವಿಸುವುದು ಇಸ್ರೇಲಲ್ಲೇ. ಆದರೆ ಕ್ರಿಶ್ಚಿಯಾನಿಟಿ ಹಾಗೂ ನಂತರದಲ್ಲಿ ಇಸ್ಲಾಂ ಪ್ರವರ್ದಮಾನಕ್ಕೆ ಬರುತ್ತಿದ್ದಂತೆ ಯಹೂದಿಗಳು ನೆಲಕಚ್ಚುತ್ತಾರೆ. ನಗರಗಳು/ಬೃಹತ್ ದೇವಾಲಯಗಳು ನೆಲಸಮವಾಗುತ್ತದೆ. (ಈಗಲೂ ಸಾವಿರ ವರ್ಷಗಳ ನಂತರವೂ ಅಳಿದುಳಿದ ದೇವಾಲಯದ ಗೋಡೆಯ ಮುಂದೆ ಯಹೂದಿಗಳು ತಮ್ಮ ಗೋಳು ತೋಡಿಕೊಳ್ಳುವುದು ಸಂಪ್ರದಾಯವಂತೆ!!!). ತಮ್ಮ ತಾಯ್ನಾಡಿನಲ್ಲೇ ನೆಲೆ ಕಳೆದುಕೊಳ್ಳುತ್ತಾರೆ. ಆದರೆ ಹುಟ್ಟು ಸಾಹಸಿಗಳೂ, (ಬಹುಶಃ ನಮ್ಮ ಕೊಂಕಣಿಗಳಂತೆ) ಕುಶಲ ವ್ಯಾಪಾರಿಗಳೂ ಆದ ಯಹೂದಿಗಳು ಪ್ರಪಂಚಾದ್ಯಂತ ಹರಡಿಕೊಳ್ಳುತ್ತಾರೆ. ಇಸ್ರೇಲ್ ಪ್ಯಾಲಸ್ತೀನಿಯರ (=ಅರಬ್ ಮುಸ್ಲಿಮರು) ಕೈವಶವಾಗುತ್ತದೆ.
            ಆದರೆ ಎರಡನೇ ಮಹಾಯುದ್ದದ ನಂತರ ನಡೆಯುವ ಕೆಲವೊಂದು ಘಟನೆಗಳು ಮಧ್ಯಪ್ರಾಚ್ಯದ (Middle east) ಚಿತ್ರಣವನ್ನೇ ಬದಲಾಯಿಸುತ್ತದೆ. ಯುರೋಪಿನಲ್ಲಿ ಹಿಟ್ಲರ್ ನ ಜನಾಂಗೀಯ ದ್ವೇಷಕ್ಕೆ ಬಲಿಯಾಗಿ ಉಳಿದ ಯಹೂದಿಗಳು – ಸಾವಿರ ವರ್ಷದ ಕೆಳಗೆ ತಾವು ಬಿಡಬೇಕಾಗಿ ಬಂದ – ದೇವರೇ ಯಹೂದಿಗಳಿಗೆ ನೀಡಿದ ಭೂಬಾಗ – ಇಸ್ರೇಲ್ ನಲ್ಲಿ ನೆಲೆಕಂಡುಕೊಳ್ಳುವ ನಿರ್ದಾರ ತೆಗೆದುಕೊಳ್ಳುತ್ತಾರೆ. ಯುದ್ದದಲ್ಲಿ ಗೆದ್ದ ರಾಷ್ಟ್ರಗಳಾದ ಅಮೇರಿಕ ಹಾಗು ಬ್ರಿಟನ್ ಎಲ್ಲಾ ರೀತಿಯ ಸಹಕಾರ ನೀಡುತ್ತವೆ. ಪ್ರಪಂಚಾದ್ಯಂತ ನೆಲಸಿರುವ ಯಹೂದಿಗಳೂ ಇಸ್ರೇಲಿನೆಡೆ ಬರಲಾರಂಬಿಸುತ್ತಾರೆ. ಹೊಸ ವಸಾಹತುಗಳು ಕಟ್ಟಲ್ಪಡುತ್ತವೆ. ಒಂದೂವರೆ ಸಾವಿರ ವರ್ಷಗಳ ನಂತರ ಯಹೂದಿಗಳ ಹೊಸ ದೇಶ ಇಸ್ರೇಲ್ ಮತ್ತೆ ಅದೇ ಜಾಗದಲ್ಲಿ ತಲೆಯೆತ್ತುತ್ತದೆ!!!! ಆದರೆ ಆ ಕನಸು ನನಸಾಗಲು ಅವರು ಪಟ್ಟ (ಹಾಗೂ ಪಡುತ್ತಿರುವ) ಕಷ್ಟಗಳು ಒಂದೆರೆಡಲ್ಲ.
           ಯಹೂದಿಗಳು ಪ್ರಪಂಚಾದ್ಯಂತದಿಂದ ವಲಸೆಬಂದು – ಒಂದೂವರೆ ಸಾವಿರ ವರ್ಷಗಳ ಹಿಂದೆ ನಾವಿದ್ದ ಪ್ರದೇಶವೆಂದು - ಇಸ್ರೇಲ್ ನಲ್ಲಿ ತುಂಬಿಕೊಳ್ಳುತ್ತಿದ್ದಂತೆ – ಅನೇಕ ತಲೆಮಾರುಗಳಿಂದ ಆ ಜಾಗದಲ್ಲಿ ನೆಲೆಸಿದ್ದ ಪ್ಯಾಲಸ್ತೀನಿಯರು ಮೂಲೆಗುಂಪಾಗುತ್ತಾರೆ!!! ಲಕ್ಷಾಂತರ ಪ್ಯಾಲಸ್ತೀನಿಯರು ದೇಶಭ್ರಷ್ಟರಾಗಿ ಪಕ್ಕದ ದೇಶಗಳಿಗೆ ವಲಸೆಹೋಗಬೇಕಾಗುತ್ತದೆ. ಸಂಪೂರ್ಣ ಇಸ್ರೇಲ್ ಯಹೂದಿಗಳ ಕೈವಶವಾಗಿ ಪ್ಯಾಲಸ್ತೀನಿಯರು ಗಾಜಾ ಪಟ್ಟಿ ಹಾಗೂ ವೆಸ್ಟ್ ಬ್ಯಾಂಕ್ ಪ್ರದೇಶಕ್ಕೆ ತಳ್ಳಲ್ಪಡುತ್ತಾರೆ. ಸಹಜವಾಗೇ ಮುಸ್ಲಿಂ ಜಗತ್ತಲ್ಲಿ ಇಸ್ರೇಲ್ ವಿರುದ್ದ ಅಸಮದಾನ ಹೆಡೆಯೆತ್ತುತ್ತದೆ. (ಭಾರತವೂ ಮುಸ್ಲಿಂಮರ ತಾಳಕ್ಕೆ ಕುಣಿಯುವ ನಮ್ಮ ರಾಷ್ಟ್ರನಾಯಕರಿಂದಾಗಿ ಅನೇಕ ದಶಕಗಳ ಕಾಲ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂದ ಕಡಿದುಕೊಂಡಿತ್ತು. ಡೇವಿಸ್ ಕಪ್ ಟೆನಿಸ್ ಫೈನಲ್ ನಲ್ಲಿ ಎದುರಾಳಿ ಇಸ್ರೇಲ್ ಆದಾಗ ಆಡದೆ ಬಿಟ್ಟುಕೊಟ್ಟಿತ್ತು!!!). ಪ್ಯಾಲಸ್ತೀನಿಯರ ಉಗ್ರಗಾಮಿ ಸಂಘಟನೆಗಳು ಹುಟ್ಟಿಕೊಳ್ಳುತ್ತದೆ. ಸುತ್ತಮುತ್ತಲಿನ ಮುಸ್ಲಿಂ ದೇಶಗಳೊಡನೆ ಆಗತಾನೆ ಹುಟ್ಟಿದ ಇಸ್ರೇಲ್ ಯುದ್ದಮಾಡಬೇಕಾಗುತ್ತದೆ. ತಾನು ವಶಪಡಿಸಿಕೊಂಡ ಭೂಭಾಗದಲ್ಲಿ ಒಂದಿಷ್ಟನ್ನು ಈಜಿಪ್ಟ್ ಗೆ ಬಿಟ್ಟುಕೊಟ್ಟು ಶಾಂತಿ ಒಪ್ಪಂದ ಮಾಡಿಕೊಳ್ಳುವ ಇಸ್ರೇಲ್ ತನ್ನ ಸಮರ್ಥ ಮಿಲಿಟರಿ ಶಕ್ತಿಯಿಂದ ಇತರ ಮುಸ್ಲಿಂ ದೇಶಗಳನ್ನು ಎದುರಿಸುತ್ತದೆ!!! ಮಧ್ಯಪ್ರಾಚ್ಯ ಬೆಂಕಿಯ ಕುಲುಮೆಯಾಗುತ್ತದೆ. ವಿಶ್ವಸಂಸ್ಥೆಯ ಮದ್ಯಪ್ರವೇಶದೊಂದಿಗೆ ಶಾಂತಿಮಾತುಕತೆ ನಡೆದು ಆ ಪ್ರದೇಶದಲ್ಲಿ ಯಹೂದಿಯರಿಗೆ ಇಸ್ರೇಲ್ ಹಾಗೂ ಅರಬ್ ಮುಸ್ಲಿಮ್ಮರಿಗೆ ಗಾಜಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕ್ ಒಳಗೊಂಡ ಪ್ಯಾಲಸ್ತೈನ್ ಎಂಬ ಎರಡು ದೇಶಗಳನ್ನು ನಿರ್ಮಿಸುವ ಪ್ರಸ್ತಾಪವಾಗುತ್ತದೆ. ಯಹೂದಿಗಳು ಕೂಡಲೇ ಒಪ್ಪಿಕೊಳ್ಳುತ್ತಾರೆ. ಆದರೆ ಅರಾಫಾತ್ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದ ಪ್ಯಾಲಸ್ತೀನಿಯರು ಕೂಡಲೇ ಅಲ್ಲದಿದ್ದರೂ ಅನಂತರದಲ್ಲಿ ಒಪ್ಪಿಕೊಳ್ಳುವ ಅನಿವಾರ್ಯತೆ ಬರುತ್ತದೆ.
           ಆ ನೆಲದಲ್ಲಿ ಎರಡು ದೇಶಗಳು ನಿರ್ಮಾಣವಾದರೂ ಶಾಂತಿ ಮರೀಚಿಕೆಯಾಗುತ್ತದೆ. ಗಾಜಾ ಪಟ್ಟಿ ಹಾಗೂ ವೆಸ್ಟ್ ಬ್ಯಾಂಕ್ ನ ಮುಸ್ಲಿಂ ಯುವಕರು ಇಸ್ರೇಲ್ ಮೇಲೆ ಆಗಾಗ್ಯೆ ಆತ್ಮಾಹುತಿ ಭಯೋತ್ಪಾದಕದಾಳಿ ಮಾಡುತ್ತಲೇ ಇರುತ್ತಾರೆ. ಇಸ್ರೇಲ್ ತಕ್ಕ ಪ್ರತ್ಯುತ್ತರ – ಉಗ್ರಗಾಮಿ ನೆಲೆಗಳ ಮೇಲೆ ರಾಕೆಟ್(ಡ್ರೋಣ್) ದಾಳಿ ಮಾಡಿ ಸೆದೆಬಡಿಯುವ ಮೂಲಕ – ನೀಡುತ್ತದೆ. (ಭಾರತದಲ್ಲಿ – ಇಂತಹ ದಾಳಿಗಳಾದಾಗ – ಅಂತಹ ದಾಳಿಗಳನ್ನು ಭಾರತ ಸಮರ್ಥವಾಗಿ ಎದುರಿಸುತ್ತದೆ – ಎಂದು ನಮ್ಮ ನಾಯಕರು ಸದಾ ಹೇಳಿಕೆ ಕೊಡುತ್ತಾರೆ!!!). ಬಾಂಬ್ ದಾಳಿ ಹಾಗೂ ರಾಕೆಟ್ ದಾಳಿಗಳಲ್ಲಿ ಉದ್ದೇಶಿತ ಜನರ ಜೊತೆ ಎಷ್ಟೋಸಲ ಅಮಾಯಕರೂ ಬಲಿಯಾಗುತ್ತಾರೆ. (ಇತ್ತೀಚೆಗೆ ಕೆಲವು ತಿಂಗಳುಗಳ ಹಿಂದಷ್ಟೇ ಇಸ್ರೇಲ್ ರಾಕೆಟ್ ದಾಳಿಯಿಂದ ಸತ್ತ ತನ್ನ ಒಂದುವರ್ಷದ ಕಂದಮ್ಮನನ್ನು ಕೈಯ್ಯಲ್ಲಿ ಹಿಡಿದುಕೊಂಡು ರೋದಿಸುತ್ತಿದ್ದ ಪ್ಯಾಲಸ್ತೈನ್ ಬಿಬಿಸಿ ವರದಿಗಾರನ ಫೋಟೋ ನೀವು ನೋಡಿರಬಹುದು). ಆತ್ಮಹತ್ಯಾದಾಳಿ ತಡೆಯಲು ಇಸ್ರೇಲ್ ಜೆರುಸಲೇಮ್ ನಲ್ಲಿ ಮೈಲಿಗಟ್ಟಲೆ ಉದ್ದ ಗಡಿಯಲ್ಲಿ ಎರೆಡಾಳೆತ್ತರ ಕಾಂಕ್ರೆಟ್ ಗೋಡೆಯನ್ನೇ ನಿರ್ಮಿಸುತ್ತದೆ.
             ಇತ್ತ ಪ್ಯಾಲಸ್ತೈನ್ ನಲ್ಲಿ ಅಂತರ್ಯುದ್ದ ಶುರುವಾಗುತ್ತದೆ. ಇಸ್ರೇಲ್ ಅಸ್ತಿತ್ವವನ್ನು ಒಪ್ಪಿಕೊಳ್ಳುವ ಅರಾಫಾತ್ ಪಕ್ಷದ ವಿರುದ್ದ – ಬಿಸಿರಕ್ತದ ಮುಸ್ಲಿಂ ತರುಣರ – ಇಸ್ರೇಲ್ ಅನ್ನು ನಾಮಾವಶೇಷಮಾಡುವ ಉತ್ಸಾಹದ – ತೀವ್ರಉಗ್ರಗಾಮಿ ಸಂಘಟನೆ ಹಮಾಸ್ ಬಲಗೊಂಡು – ಪ್ಯಾಲಸ್ತೈನ್ (ಗಾಜಾ ಪಟ್ಟಿ) ಆಡಳಿತ ಹಮಾಸ್ ಕೈವಶವಾಗುತ್ತದೆ!!! (ಲಷ್ಕರ್-ಎ-ತೊಯ್ಬಾದಂತಹ  ಸಂಘಟನೆಗಳಿಗೆ ಪಾಕಿಸ್ತಾನದ ಆಡಳಿತ ಸಿಕ್ಕರೆ ಹೇಗಾಗಬಹುದೆಂದು ಊಹಿಸಿಕೊಳ್ಳಿ). ಇಸ್ರೇಲ್ ತಲೆನೋವು ಮತ್ತೂ ಹೆಚ್ಚಾಗುತ್ತದೆ.  ಉಗ್ರಗಾಮಿ ಸಂಘಟನೆ ಹಮಾಸ್ ನ ಕೈವಶವಾಗುವ ಗಾಜಾ ಪಟ್ಟಿ ಎಂದು ಕರೆಯಲ್ಪಡುವ ಪ್ರದೇಶ ಏನಂತಾ ವಿಸ್ತಾರವಾದ ಪ್ರದೇಶವೇನಲ್ಲ. ಇಸ್ರೇಲಿನ ಪಶ್ಚಿಮಕ್ಕೆ, ಮೆಡಿಟರೇನಿಯನ್ ಸಮುದ್ರಕ್ಕೆ ತಾಗಿದಂತ, ಭೂಪಟದಲ್ಲಿ ಒಂದು ಸ್ಕೇಲ್ ನ ಪಟ್ಟಿಯಂತೆ ಕಾಣುವ, ೪೦ ಕಿ.ಮೀ. ಉದ್ದ ಹಾಗು ಅಂದಾಜು ೬-೧೨ ಕಿ.ಮೀ. ಅಗಲದ ಚಿಕ್ಕ ಭೂಪ್ರದೇಶ!!! ಆದರೆ ಜನಸಂಖ್ಯೆ ವಿಪರೀತ. ಅಂದಾಜು ಹದಿನಾರು ಲಕ್ಷ!!! ಅವರಲ್ಲಿ ಅರ್ದಕ್ಕರ್ದ ಜನ ಇಸ್ರೇಲಿ ಮುನ್ನುಗ್ಗುವಿಕೆಗೆ ತಮ್ಮ ನೆಲೆ ಕಳೆದುಕೊಂಡ ನಿರಾಶ್ರಿತರು. ಸಹಜವಾಗಿಯೇ ಇಸ್ರೇಲಿಗರ ಮೇಲೆ ದ್ವೇಷ ಕುದಿಯುತ್ತಿರುತ್ತದೆ. ಶ್ರೀಮಂತ ಮುಸ್ಲಿಂ ದೇಶಗಳಿಂದ ಹಣ ಹರಿದುಬರುತ್ತಿರುತ್ತದೆ. ಇತ್ತ ನಿರುದ್ಯೋಗ ತಾಂಡವಾಡುತ್ತಿರುತ್ತದೆ. ಭಯೋತ್ಪಾದಕ ಉಗ್ರಗಾಮಿ ಸಂಘಟನೆಗಳು ಬೇರುಬಿಟ್ಟು ಹೆಮ್ಮರವಾಗಲು ಇದಕ್ಕಿಂತ ಉತ್ತಮ ಕಾರಣಗಳಿವೆಯೇ? ಪರಿಣಾಮ – ಸದಾ ಇಸ್ರೇಲ್ ಮೇಲೆ ಆತ್ಮಾಹುತಿದಾಳಿ, ಅಪಹರಣ, ರಾಕೆಟ್ ದಾಳಿ – ಇತ್ಯಾದಿ. ಇದಕ್ಕೆ ಗಾಜಾದಲ್ಲಿ ಈಗ ಆಡಳಿತದಲ್ಲಿ ಕೂತಿರುವ ಹಮಾಸ್ ನ ಸಂಪೂರ್ಣ ಬೆಂಬಲ.
             ಗಾಜಾಪಟ್ಟಿಯ ಪ್ಯಾಲಸ್ತೈನರಿಗೆ ಸರಿಯಾಗಿ ಬುದ್ದಿಕಲಿಸಲು ಇಸ್ರೇಲ್ ಮೆಡಿಟರೇನಿಯನ್ ಸಮುದ್ರದ ತೀರದುದ್ದಕ್ಕೂ ಸೇರಿದಂತೆ ಗಡಿಸುತ್ತಲೂ ದಿಗ್ಬಂದನ ಹಾಕುತ್ತದೆ. ಗಾಜಾನಗರಕ್ಕೆ ಹಡಗುಗಳ ಬರುವಿಕೆ ಸಂಪೂರ್ಣವಾಗಿ ನಿಲ್ಲುತ್ತದೆ. ಗಾಜಾ ಅಂತರಾಷ್ಟ್ರೀಯ ವಿಮಾನನಿಲ್ದಾಣ ಹಾಳುಬೀಳುತ್ತದೆ. ತನ್ನ ಗಡಿಯಲ್ಲಿ ಗಾಜಾದೊಳಕ್ಕೆ ಸರಕು ಸಾಗಾಣೆಗೆ ಒಂದೇ ಒಂದು ಚೆಕ್ ಪೋಸ್ಟನ್ನು ಮುಕ್ತವಾಗಿಡುವ ಇಸ್ರೇಲ್, ನೂರೆಂಟು ನಿಬಂದನೆಗಳಿಂದ ಆ ಚೆಕ್ ಪೋಸ್ಟ್ ಮೂಲಕ ಗಾಜಾದೊಳಗೆ ಸರಕುಗಳ ಸಾಗಣೆ ನಿದಾನವೂ, ಕಷ್ಟವೂ ಹಾಗು ತುಂಬಾ ಖರ್ಚಿನದೂ ಆಗುವಂತೆ ಮಾಡಿದೆ. ಯಾವಾಗ ಅಧಿಕೃತ ದಾರಿಗಳು ಕಷ್ಟಕರವಾಗುತ್ತವೋ ಆಗ ತೆರೆದುಕೊಳ್ಳುವುದು ಅನಧಿಕೃತ ದಾರಿಗಳು!!! (ನಿಮ್ಮ ಅನುಭವಕ್ಕೂ ಬಂದಿರಬಹುದು J). ಗಾಜಾಪಟ್ಟಿಯ ವಿಷಯದಲ್ಲಿ ಆಗಿರುವುದೂ ಅದೇ!!! ಗಾಜಾಪಟ್ಟಿಯ ಒಂದೂವರೆ ದಶಲಕ್ಷ ಜನರ ಅಗತ್ಯತೆಗಳ ತಡೆರಹಿತ ಸರಬರಾಜಿಗೆ ಕಂಡುಕೊಂಡಲ್ಪಟ್ಟ ಮಾರ್ಗವೇ ನೆಲದಾಳದ ಸುರಂಗಗಳು!!!
             ಗಾಜಾಪಟ್ಟಿಯ ಒಂದುಕಡೆ ಮೆಡಿಟರೇನಿಯನ್ ಸಮುದ್ರ ಹಾಗೂ ಮತ್ತೆಲ್ಲಾಕಡೆ ಸುತ್ತಲೂ ಇಸ್ರೇಲ್ ಇದ್ದರೂ ಪಕ್ಕದ ಈಜಿಪ್ಟ್ ನೊಂದಿಗೆ ಎಂಟತ್ತು ಕಿಲೋಮೀಟರ್ ಗಳಷ್ಟು ಉದ್ದದ ಗಡಿಯನ್ನು ಹೊಂದಿದೆ. ನಾನು ಹೇಳಹೊರಟಿರುವ ಸುರಂಗಗಳು ಇರುವುದು ಆ ಗಡಿಯ ಕೆಳಗೇ. ಕಯ್ಯಲ್ಲಿ ಬಂದೂಕು ಹಾಗೂ ಧರ್ಮದ ಪಿತ್ತ ನೆತ್ತಿಗೆರಿರುವ ಪ್ಯಾಲಸ್ತೈನ್ ಉಗ್ರರನ್ನು ಈಜಿಪ್ಟ್ ಆಡಳಿತಗಾರರೂ ಸ್ವಲ್ಪ ದೂರವೇ ಇಟ್ಟಿದ್ದಾರೆ. (ಸುಯೆಜ್ ಕಾಲುವೆ ದಡದಲ್ಲಿರುವ ಈಜಿಪ್ಟ್ ಪ್ರವಾಸೀತಾಣಗಳ ಮೇಲೆ ಮುಸ್ಲಿಂ ಉಗ್ರರ ದಾಳಿ ನಡೆದಿತ್ತು. ಅಷ್ಟಲ್ಲದೇ ಈಜಿಪ್ಟ್ ತಮ್ಮ ಶತ್ರು ಇಸ್ರೇಲ್ ಜೊತೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದುದು ಪ್ಯಾಲಸ್ತೈನ್ ನವರು ಹೇಗೆ ಸಹಿಸಿಯಾರು?). ಆದ್ದರಿಂದ ಈಜಿಪ್ಟ್ ಕೂಡ ತನ್ನ ಗಡಿಯನ್ನು (ಪ್ರವಾಸಿಗರ ಬರುವಿಕೆ ಹಾಗೂ ತೆರಳುವಿಕೆಗೆ ಒಂದು ಚೆಕ್ ಪೋಸ್ಟ್ ಬಿಟ್ಟು(ಜೇಬಲ್ಲಿ ದುಡ್ಡಿಟ್ಟುಕೊಂಡು ಓಡಾಡುವ ಪ್ರವಾಸಿಗರ ಕಿಮ್ಮತ್ತೆ ಅಂಥದ್ದು!!)) ಮುಚ್ಚಿದೆ!!! ಆದ್ದರಿಂದ ಪ್ಯಾಲಸ್ತೈನ್ ನವರ ದಿನನಿತ್ಯದ ಅಗತ್ಯತೆಗಳೂ ಸುರಂಗಗಳ ಮೂಲಕವೇ ಪುರೈಕೆಯಾಗಬೇಕು!!!!
ಸುರಂಗ ನಿರ್ಮಾಣ 
             ಒಂದಿಷ್ಟು ದುಡ್ಡು – ಹೊರದೇಶಗಳಲ್ಲಿ ದುಡಿಯುತ್ತಿರುವ ಕುಟುಂಬದ ಸದಸ್ಯರು ಕಳುಹಿಸಿದ ದುಡ್ಡೋ ಅಥವಾ ಶಾಂತಿಕಾಲದಲ್ಲಿ ಇಸ್ರೇಲ್ ಫಾರ್ಮ್ ಗಳಲ್ಲಿ ದುಡಿದಾಗ ಉಳಿಸಿಟ್ಟ ದುಡ್ಡೋ ಅಥವಾ ಸುರಂಗನಿರ್ಮಾಣಕ್ಕಾಗಿ ಸ್ನೇಹಿತರಿಂದ ಸಾಲ ಎತ್ತಿದ ದುಡ್ಡೋ – ಒಂದಿಷ್ಟು ದುಡ್ಡು ಒಟ್ಟುಮಾಡಿಕೊಂಡ ಒಂದಿಷ್ಟು ಜನ ಒಂದೆಡೆ ಸೇರಿ ಒಂದು ಬಿಸಿನೆಸ್ ಶುರುಮಾಡುತ್ತಾರೆ. ಅದೇ ಸುರಂಗ ನಿರ್ಮಾಣ!!! ಗಡಿಯಿಂದ ಕೆಲವೇ ಮೀಟರ್ ಗಳ ದೂರದಲ್ಲಿ, ಒಂದು ತಾತ್ಕಾಲಿಕ ಟೆಂಟ್ ನಿರ್ಮಾಣವಾಗುತ್ತದೆ. ಮೊದಲು ನಲವತ್ತೈವತ್ತು ಅಡಿ ಆಳ ಬಾವಿತರ ತೋಡುತ್ತಾರೆ. ಅನಂತರ ಅಡ್ಡಡ್ಡ ಕೊರೆಯುತ್ತಾರೆ. ನೆಲದಾಳದಲ್ಲಿಯೇ ಸುರಂಗ ನಿರ್ಬಂದಿತ ಗಡಿದಾಟುತ್ತದೆ!! ನಂತರ ಈಜಿಪ್ಟ್ ಕಡೆ ಮೇಲೆ ಹತ್ತಿಬರುವಂತೆ ಪುನಃ ಬಾವಿತರ ಕೊರೆಯುತ್ತಾರೆ!! ಅಲ್ಲಿಗೆ ಸ್ವಲ್ಪ ಬಗ್ಗಿ ನಡೆದುಕೊಂಡು ಸಾಗಬಹುದಾದ ಸುರಂಗ ರೆಡಿ. ಸುರಂಗ ನಿರ್ಮಾಣದ ಕೆಲಸ ಹಾಗೂ ಅದರ ನಿರ್ವಹಣೆ ಕೆಲಸ ಅತ್ಯಂತ ಅಪಾಯಕಾರಿಯದ್ದು. ಜಾರಿ ಬೀಳುವ ಮಣ್ಣು (ಕೆಲಸಗಾರರನ್ನು) ಹೂತೇ ಹಾಕಬಹುದು. ಶ್ವಾಸಕೋಶ ಸಂಬಂದಿತ ಕಾಯಿಲೆಗಳು ಸದಾ. ಆದರೂ ಅಂತರ್ಯುದ್ದ ಹಾಗೂ ಅಶಾಂತಿ ಪೀಡಿತ ಪ್ಯಾಲಸ್ತೈನ್ ನಲ್ಲಿ ಕೆಲಸಗಾರರಿಗೆನೂ ಬರಗಾಲವಿಲ್ಲ. ಟ್ಯುಶನ್ ಗೆ ದುಡ್ಡು ಹೊಂದಿಸಲು ಪ್ಯಾಲಸ್ತೈನ್ ಯುವಕರು ಈ ಅರೆಕಾಲಿಕ ಕೆಲಸಕ್ಕೆ ಸದಾ ಸಿದ್ದ!!! (ಉತ್ತಮ ಶಿಕ್ಷಣ ಪಡೆದು ಪ್ರಪಂಚದ ಬೇರೆಡೆ ತೆರಳಿ ಕೆಲಸಮಾಡಿ ಮನೆಗೂ ಸ್ವಲ್ಪ ದುಡ್ಡು ಕಳಿಸುವುದು – ಇದು ಅಂತರ್ಯುದ್ದಪೀಡಿತ/(ಹಾಲೀ ಅಥವಾ ಮಾಜಿ)ಕಮ್ಯುನಿಸ್ಟ್ ರಾಷ್ಟ್ರಗಳ ಯುವಕರ ಹೆಬ್ಬಯಕೆ). ಕೆಲವು ವರ್ಷಗಳ ಕೆಳಗೆ – ಸುರಂಗ ನಿರ್ಮಾಣ ಕಾರ್ಯ ಉತ್ತುಂಗದಲ್ಲಿದ್ದಾಗ – ನಂಬಿದರೆ ನಂಬಿ ಬಿಟ್ಟರೆ ಬಿಡಿ – ಹದಿನೈದು ಸಾವಿರಕ್ಕೂ ಹೆಚ್ಚು ಜನರಿಗೆ – ಪ್ರತ್ಯಕ್ಷ ಅಥವಾ ಪರೋಕ್ಷ ಕೆಲಸಕೊಡಲ್ಪಟ್ಟಿದೆ ಈ ವ್ಯವಸ್ತೆಯಿಂದ!!! ಇಂದು ಸುರಂಗಗಳು ಗಡಿಯಪಕ್ಕದಲ್ಲಿ ಎಲ್ಲೆಂದರಲ್ಲಿವೆ. (ಅಧಿಕೃತ ಪ್ರವಾಸೀ ಕೈಪಿಡಿಯಲ್ಲೂ ಉಲ್ಲೇಖವಿದೆಯಂತೆ!!).
            ಈ ಸುರಂಗಗಳ ಮೂಲಕ ಸಾಗಿಸಲ್ಪಡುವ ಸರಕುಗಳು – ನಿರೀಕ್ಷಿತ – ಬೆಂಗಳೂರಿನ ಕಾಲುಭಾಗದಷ್ಟಿನ ಜನಸಂಖ್ಯೆಗೆ ಬೇಕಾದ ಅಗತ್ಯತೆಗಳು. ಆಹಾರ ಧಾನ್ಯಗಳು, ಔಷಧಿಗಳು, ಪೆಟ್ರೋಲ್/ಗ್ಯಾಸ್ ಇತರೆ ಇಂಧನಗಳು, ಬಟ್ಟೆಬರೆಗಳು,ಕಂಪ್ಯೂಟರ್/ಟೀವಿ/ಮೊಬೈಲ್/ಇತರ ಎಲೆಕ್ಟ್ರಾನಿಕ್ ಉಪಕರಣಗಳು, ಅಪಾರ್ಟ್ ಮೆಂಟ್ ಹಾಗೂ ಇತರ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಿಮೆಂಟ್/ಜಲ್ಲಿ/ಉಕ್ಕು ಇತ್ಯಾದಿ ಪರಿಕರಗಳು, ಕುರಿಗಳು, ದನದ ಕರುಗಳು, ಹಣ್ಣುಹಂಪಲುಗಳು. ಒಂದೊಮ್ಮೆಯಂತೂ ಗಾಜಾ ಮೃಗಾಲಯಕ್ಕೆ ಬೇಕಾದ ಸಿಂಹವೊಂದನ್ನೂ (ಕಷ್ಟಪಟ್ಟು) ಸುರಂಗದ ಮೂಲಕ ಸಾಗಿಸಲಾಯಿತಂತೆ!!! ಗಾಜಾದ ಶ್ರೀಮಂತರ/ಅಧಿಕಾರಿಗಳ ಓಡಾಟಕ್ಕೆ ಹವಾನಿಯಂತ್ರಿತ ವಿ.ಐ.ಪಿ. ಸುರಂಗಗಳಿದ್ದಾವಂತೆ!!! ಆಡಳಿತದಲ್ಲಿರುವ ಹಮಾಸ್ ಸಂಘಟನೆಗೆ ಆಯುಧಗಳು ಹಾಗೂ ಹೊರಗಿನಿಂದ ದುಡ್ಡು ಕಳ್ಳಸಾಗಾಣಿಕೆಯಾಗುವುದು ಈ ಸುರಂಗಗಳ ಮೂಲಕವೇ!!! ಸುರಂಗಗಳ ಮೂಲಕ ಸಾಮಾನು ಸಾಗಿಸುವ ಸಾಗಾಟಗಾರರು ಸಾಗಿಸಲ್ಪಡುವ ಪ್ರತಿ ಸರಕಿಗೂ ಇಂತಿಷ್ಟೆಂದು ಸುರಂಗ ನಿರ್ವಾಹಕರಿಗೆ ಹಣ ಕೊಡಬೇಕು. ಅಷ್ಟೇ ಅಲ್ಲದೆ ಹಮಾಸ್ ಕೂಡಾ ಅದರಮೇಲೆ ತೆರಿಗೆ ವಿದಿಸುತ್ತದೆ. ಆ ತೆರಿಗೆಯೇ ವರ್ಷಕ್ಕೆ ಬರಾಬ್ಬರಿ ಏಳುನೂರು ದಶಲಕ್ಷ ಡಾಲರಿನಷ್ಟಾಗುತ್ತದೆಂದರೆ ಆ ವಹಿವಾಟಿನ ಅಗಾದತೆ ನಿಮ್ಮ ಕಲ್ಪನೆಗೆ ಬರಬಹುದು. ಈಗ ಬಹುಶಃ – ಲೇಖನದ ಪ್ರಾರಂಭದಲ್ಲಿ ನಾನು ಹೇಳಿದ ಮಾತು – ಈ ವ್ಯವಸ್ತೆ ಪ್ರಪಂಚದ ಅತಿದೊಡ್ಡ ಕಳ್ಳಸಾಗಾಣಿಕಾ ವ್ಯವಸ್ತೆ – ಎಂದು ನಾನು ಹೇಳಿದ್ದರಲ್ಲಿ ನಿಮಗೆ ಅನುಮಾನವೇ ಇರಲಿಕ್ಕಿಲ್ಲ.
          ಶಾಂತ ಕಾಲಘಟ್ಟದಲ್ಲಿ ಬದುಕುತ್ತಿರುವ ನಮಗೆ (ಕರ್ನಾಟಕದವರಿಗೆ) ಅಲ್ಲಿಯ ವಿಪ್ಲವಗಳು ಅರಿವಿಗೆ ಬರುವುದು ಸ್ವಲ್ಪಕಷ್ಟವೇ. ಅಲ್ಲಿನದು ದಿನನಿತ್ಯ ಸಂಘರ್ಷದ ಬದುಕು. ಪ್ರಪಂಚ ಏನೇಹೇಳಿದರೂ - ತನ್ನ ಸುರಕ್ಷತೆ ತನಗೆ ಮುಖ್ಯ ಎಂದು ಇಸ್ರೇಲ್ – ಪ್ಯಾಲಸ್ತೈನ್ ಮುಸ್ಲಿಮರ ಭಯೋತ್ಪಾದಕತೆ/ಮಾನವ ಬಾಂಬ್ ಗಳನ್ನು – ನಿರ್ದಾಕ್ಷಿಣ್ಯ ಕ್ರಮಗಳಿಂದ ಸಾಕಷ್ಟು ಹತ್ತಿಕ್ಕಿದೆ. (ಪ್ರಪಂಚದ ಅನೇಕ ದೇಶಗಳು ಗಾಜಾಕ್ಕೆ ಸಂಬಂದಪಟ್ಟಂತೆ ಇಸ್ರೇಲ್ ಕ್ರಮವನ್ನು ಖಂಡಿಸಿವೆ. ಬ್ರಿಟನ್ ಪ್ರದಾನಿ ಕ್ಯಾಮರೂನ್ ಅಂತೂ ಗಾಜಾಪಟ್ಟಿಯನ್ನು ಒಂದು ಬಂದೀಖಾನೆಗೆ ಹೋಲಿಸುತ್ತಾರೆ. ಇಸ್ರೇಲ್ ತಲೆಕೆಡಿಸಿಕೊಳ್ಳುತ್ತಿಲ್ಲ). ಜೆರುಸಲೇಮ್ ಸುತ್ತ ಎರಡಾಳೆತ್ತರ ಕಾಂಕ್ರೀಟ್ ಗೋಡೆ ಎಬ್ಬಿಸಿರುವ ಇಸ್ರೇಲ್ – (ನಿರುದ್ಯೋಗಿ) ಪ್ಯಾಲಸ್ತೈನಿಯರು ಬೆಳಿಗ್ಗೆ ಸರದಿಸಾಲಿನಲ್ಲಿ ನಿಂತು – ಹೆಂಡತಿಯಿದ್ದು ಮಕ್ಕಳೂ ಜೊತೆಗೆ ವಾಸಿಸುತ್ತಿರುವ ದಾಖಲೆಯ ಗುರುತಿನ ಚೀಟಿ ತೋರಿಸಿ – ಗೋಡೆಯೀಚೆಯ ಇಸ್ರೇಲಿ ಜಾಗಗಳಿಗೆ ಬಂದು ಕೆಲಸಮಾಡಿ ಸಂಪಾದನೆ ಮಾಡಿಕೊಂಡು – ಸಂಜೆ ವಾಪಸ್ ಗೋಡೆಯಾಚೆಯ ತಮ್ಮ ಮನೆಗಳಿಗೆ ಹೋಗುವ ಅನಿವಾರ್ಯತೆ ತಂದಿದೆ!!!! ಒಂದು ಪೆಟ್ಟು ತನಗೆ ಬಿದ್ದರೆ – ಹತ್ತು ಪೆಟ್ಟು ಹೊಡೆದು – ಅಂತರರಾಷ್ಟ್ರೀಯ ಸಮುದಾಯದ ಖಂಡನೆ ಹೆಚ್ಚಾದಾಗ – ಉದಾರತೆ ತೋರಿಸುವವರಂತೆ – ಹೊಡೆತ ನಿಲ್ಲಿಸುತ್ತದೆ ಇಸ್ರೇಲ್!!!! ಸುರಂಗಗಳು ಪ್ಯಾಲಸ್ತೈನ್ ನವರ ಪಾಲಿಗೆ ಇಸ್ರೇಲ್ ದೌರ್ಜನ್ಯಕ್ಕೆ ತಕ್ಕ ಪ್ರತ್ಯುತ್ತರ. ಜೀವನದ ನರನಾಡಿ.
           ನನ್ನ ಪ್ರತಿ ಬ್ಲಾಗ್ ಲೇಖನಗಳ ಕೊನೆಯಂತೆ ಈ ಲೇಖನದ್ದೂ. ಈ ಗಾಜಾಪಟ್ಟಿಯ ಕಳ್ಳಸಾಗಾಣಿಕಾ ಸುರಂಗಗಳ ಬಗ್ಗೆ, ಈ ವ್ಯವಹಾರ ವಹಿವಾಟಿನ ಬಗ್ಗೆ ನಿಮಗೆ ಗೊತ್ತಿತ್ತೆ? ಅಥವಾ ಈ ಲೇಖನದ ಮೂಲಕವೇ ಗೊತ್ತಾಗಿದ್ದೆ?? ನಿಮ್ಮಭಿಪ್ರಾಯಗಳಿಗೆ ಕಾತುರನಾಗಿದ್ದೇನೆ!!! ಕಾಮೆಂಟಿಸಿ. (ಕಾಮೆಂಟ್ ಮಾಡಲು ಪುರುಸೊತ್ತಿಲ್ಲದಿದ್ದರೆ +1 ರ ಮೇಲೆ ಕ್ಲಿಕ್ ಮಾಡಬಹುದು). ನಿಮ್ಮ ಕಾಮೆಂಟ್ ಗಳು ನಮ್ಮ ತಪ್ಪು ಒಪ್ಪುಗಳಿಗೆ ಕನ್ನಡಿ.