Monday, November 16, 2009

ಮಲೆನಾಡಿನ ಮದ್ಯದಿಂದ (ವಿನೋದ ಪ್ರಸಂಗಗಳು)

ಮಲೆನಾಡಿನ ಪ್ರತಿ ಹಳ್ಳಿಯಲ್ಲೂ ಅನೇಕ ಸ್ವಾರಸ್ಯಕರ ಘಟನೆಗಳು ನಡಿಯುತ್ತಲೆ ಇರುತ್ತದೆ. ಕೆಲವೊಂದು ಕಥೆಗಳನ್ನು ಇಲ್ಲಿ ಹೇಳುತ್ತೇನೆ.


ರಮೇಶ ರಾಯರು ನಮ್ಮ ಪಕ್ಕದ ಊರಿನ ಒಬ್ಬ ವ್ಯವಸಾಯಗಾರರು. ವಿನೋದ ಪ್ರವೃತ್ತಿಯ ಗಂಭೀರ ನಿಲುವಿನ ಮನುಷ್ಯ. ಯಾರದ್ದಾದ್ರ ತಲೆಗೆ ಏನಾರು ಹುಳಬಿಟ್ಟು ಅವರು ಮಂಗ ಆಗುವುದನ್ನ ದೂರದಿಂದ ನೋಡುತ್ತಿರುತ್ತಾರೆ. ಗಂಭೀರ ವದನರಾಗಿ ವಿಷಯಗಳನ್ನು ಹೇಳುತ್ತಿದ್ದಾರೆ ಯಾರಾದರು ಅದನ್ನು ನಂಬಲೇಬೇಕು.


ಸದಾಶಿವ ಭಟ್ಟರು ಅದೇ ಊರಿನ ಮತ್ತೊಬ್ಬ ಚಿಕ್ಕ ವ್ಯವಸಾಯಗಾರರು. ಲೋಕಜ್ಞಾನ ಸ್ವಲ್ಪ ಕಡಿಮೆ. ಹಿತ್ತಾಳಿ ಕಿವಿ. ಸ್ವಲ್ಪ ದುಡ್ಡಿನಾಸೆ. ರಮೇಶ ರಾಯರಿಂದ ಆಗಾಗ್ಗೆ ಮಂಗ ಆಗುತ್ತಿರುತ್ತಾರೆ. ಆದರೂ ಮತ್ತೆ ಮತ್ತೆ ರಾಯರು ಹೇಳಿದ್ದನ್ನೇ ನಂಬುತ್ತಾರೆ.





ಮಲೆನಾಡಿನಲ್ಲಿ ಸಾದಾರಣವಾಗಿ ಒಂದು ಬೆಳೆ ಮಾತ್ರ ಬತ್ತ ಬೆಳೆಯುತ್ತಾರೆ. ಮಳೆಗಾಲದ ಪ್ರಾರಂಭದೊಡನೆ ಗದ್ದೆ ಕೆಲಸ ಶುರುವಾಗುತ್ತದೆ. ಬೆಸಿಗೆಯಲ್ಲೆಲ್ಲ ಅಲ್ಲಿ ದನಗಳು ಮೇಯುತ್ತಿರುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಎಲ್ಲರು ಗದ್ದೆಗೆ ತಾತ್ಕಾಲಿಕ ಬೇಲಿ ಮಾಡುತ್ತಾರೆ. ಈ ರೀತಿ ಬೇಲಿ ಮಾಡಲು ಚಿಗುರು ಗೂಟ ಬಳಸುತ್ತಾರೆ.

ಒಮ್ಮೆ ಸದಾಶಿವ ಬಟ್ಟರು ರಮೇಶ ರಾಯರ ಜೊತೆ ಮಾತನಾಡುತ್ತಿರುವಾಗ ಮಳೆ ನೀರು ಒಳಗೆ ಸೇರಿ ಚಿಗುರು ಗೂಟ ಕೊಳೆತು ಹೋಗುವ ತಮ್ಮ ಸಮಸ್ಯೆ ಹೇಳಿಕೊಂಡರು. ಇಪ್ಪತ್ತು ವರ್ಷದ ಕೆಳಗೆ ಪ್ಲಾಸ್ಟಿಕ್ ಕವರ್ ಗಳು ಈಗಿನಂತೆ ಬೇಕಾಬಿಟ್ಟಿ ಸಿಗುತ್ತಿರಲಿಲ್ಲ.

"ಚಿಗರು ಗೂಟಕ್ಕೆ ಪ್ಲಾಸ್ಟಿಕ್ ಕವರ್ ಹುಡ್ಕೊದೆ ದೊಡ್ಡ್ ಪ್ರಾಬ್ಲಂ ಆಗಿದೆ ರಾಯರೇ. ಏನ್ ಮಾಡೋದು ತಲೆಗೆ ಹೊಳಿತಾ ಇಲ್ಲ."

ರಾಯರು - "ಅದಕ್ ಯಾಕ್ ಅಷ್ಟು ಯೋಚನೆ ಮಾಡ್ತೀರಿ ಭಟ್ರೇ. ಗೌರ್ಮೆಂಟ್ ಆಸ್ಪತ್ರೆಲೆ ಅಂತಾ ಕವರ್ ಸಿಗುತ್ತೆ. ರಬ್ಬರಿಂದು. ಒಂಚೂರು ನೀರ್ ಹೋಗೋಲ್ಲ. ನಾವೆಲ್ಲ ಅದನ್ನೇ ಉಪಯೋಗಿಸೋದು. ಚಿಗುರು ಗೂಟಕ್ಕೆ ಹಾಕೋದು ಸುಲಭ. ಕಟ್ಟೋ ತಾಪತ್ರಯನು ಇಲ್ಲ. ಡಾಕ್ಟ್ರು ಒಬ್ಬರೇ ಇದ್ದಾಗ ಹೋಗಿ ಕೇಳಿ. ಎರಡ್ ಮೂರ್ ಮಾತ್ರ ಕೊಡ್ತಾರೆ. ಒತ್ತಾಯ ಮಾಡಿದ್ರೆ ನಿಮಗೆ ಬೇಕಾದಷ್ಟು ಕೊಡ್ತಾರೆ."


ಭಟ್ಟರು ಮಾರನೆ ದಿನ ಮಧ್ಯಾನ ಸಮಯಕ್ಕೆ ಗೌರ್ಮೆಂಟ್ ಆಸ್ಪತ್ರೆಗೆ ಹೋದರು. (ಆಸ್ಪತ್ರೆ ಅಂದರೆ ಪಿ.ಹೆಚ್.ಸಿ) ಪೇಷೆಂಟ್ ಎಲ್ಲಾ ಕಾಲಿಯಾಗುತಂಕ ಕಾದು ಡಾಕ್ಟರರು ಒಬ್ಬರೇ ಆದಾಗ ನಿದಾನವಾಗಿ ಸಮೀಪಿಸಿ ಕೇಳಿಯೇ ಬಿಟ್ಟರು.

"ಗೂಟಕ್ಕೆ ಹಾಕು ರಬ್ಬರಿನ ಕವರ್ ಇಲ್ಲಿ ಫ್ರೀ ಕೊಡ್ತಿರಂತಲ. ನಂಗು ಬೇಕಿತ್ತು."

ಅರವತ್ತರ ಆಸುಪಾಸಿನ ತಲೆ ಹಣ್ಣಾದ ಬಟ್ಟರು ಸಂಕೋಚದಿಂದ ನಿರೋದ್ಹ್ ಕೇಳಿದ್ದು ಡಾಕ್ಟರಿಗೆ ದಂಗು ಬಡಿದಂತಾಯಿತು. ಹೋಗಲಿ ಮುದುಕ ಎಂದು ಮೂರರ ಒಂದು ಕವರ್ ಕೊಟ್ಟರೆ ಭಟ್ಟರು "ಇಸ್ಟ್ ಯಾವ್ ಮೂಲೆಗೂ ಸಾಕಾಗಲ್ಲ. ತುಂಬಾ ಬೇಕು." ಅಂತಾ ಗಲಾಟೆನೇ ಎಬ್ಸಿದ್ರು.


ಅದಾಗಿ ಕೆಲವು ತಿಂಗಳವರೆಗೂ ಊರು ಮನೇಲಿ ಭಟ್ಟರು ಗೌರ್ಮೆಂಟ್ ಆಸ್ಪತ್ರೇಲಿ ನಿರೋದ್ಹ್ ಕೇಳಿದ್ದೆ ಸುದ್ದಿ. ರಮೇಶ ರಾಯರ ಇಂತಹ ಇನ್ನು ಸುಮಾರು ಕಥೆಗಳಿವೆ.

Wednesday, October 21, 2009

ಮನೆಯಂಗಳದಲ್ಲಿ ಸಾವಿನ ಬಲೆ.






ನಿಜಕ್ಕೂ ಹೌದು. ನಮ್ಮ ಮನೆಯಂಗಳದಲ್ಲಿ ನೂರಾರು ಜೀವಿಗಳನ್ನು ಕೊಲ್ಲಲು ಸಾವಿನ ಬಲೆಗಳ ಸರಣಿಯೇ ಸಿದ್ದವಾಗಿದೆ.




ಇಂದು ಬೆಳಗಿನ ಜಾವ ಮನೆ ಮುಂದಿನ ಅಂಗಳದಲ್ಲಿನ ಸೈಕಾಸ್ ಗಿಡದಲ್ಲಿ ಕಂಡ ಚಿತ್ರ ಇದು. ಒಂದಲ್ಲ ಎರಡಲ್ಲ ನೂರಕ್ಕೂ ಹೆಚ್ಚು ಬಲೆಗಳು.

ಬೆಳಗಿನ ಎಳೆ ಬಿಸಿಲಿನಲ್ಲಿ ಇಬ್ಬನಿ ಕೂತ ಬಲೆಗಳು ಮಿರಿ ಮಿರಿ ಮಿಂಚುತ್ತಿದ್ದವು. ಒಂದೊಂದು ಒಂದೊಂದು ತರ. ಈ ಚಿತ್ರದಲ್ಲಿ ಕಾಣುವ ಬಲೆ ಟೊಪ್ಪಿ ತರ ಕಾಣುವುದಿಲ್ಲವಾ?



ಬಹುಷಃ ಜೇಡ ಮತ್ತು ಕೀಟ ಇವುಗಳಿಗೆ ಇಲ್ಲಿ (ಈ ಸೈಕಾಸ್ ಗಿಡದಲ್ಲಿ) ಅಂತಿಮ ಯುದ್ದ ನಡಿಯುತ್ತಿದೆ ಎಂದು ಕಾಣುತ್ತದೆ. ಹೇಗಾದರು ಮಾಡಿ ಕೀಟಗಳನ್ನೆಲ್ಲ ಸಾಯಿಸಲು ಈ ಜೇಡಗಳು ಗಿಡದ ಸಂದಿ ಮೂಲೆಯಲ್ಲೂ ಬಲೆ ಕಟ್ಟಿ ಕಾಯುತ್ತಿವೆ.




Wednesday, October 14, 2009

ಮಕ್ಕಳಾಟ


ಮಕ್ಕಳಾಟ ಎಷ್ಟು ನಗು ಬರುತ್ತದೆ. ಅವಕ್ಕೆ ಮಣ್ಣೇ ಸರ್ವಸ್ವ. ಕೆಸರು ಕಂಡ ಕೂಡಲೇ ಎಲ್ಲ ಮರೆಯುತ್ತಾರೆ. ಆಟಾ, ಆಟಾ.




"ಏಯ್ ಏನ್ ಮಾಡ್ತಿದ್ದಿರಿ?"

"ಏನಿಲ್ಲ ಹೀಗೆ ಆಟ ಆಡ್ತಾ ಇದ್ದಿವಿ"






"ಕೆಸರಲ್ಲಿ ಆಡ್ತಿದ್ದಿರ?, ತಂದೆ ಕೋಲು. ತಡಿರಿ."
(ಅಳು ಮುಖ )
"ಬೇಡಾ"



"ನಿನೂ ಕೆಸರು ಆಡ್ತಿದ್ಯಾ ?"


"ಅಣ್ಣನ ಜೊತೆ ಬಂದೆಯಷ್ಟೇ, ನನ್ದೆನ್ ತಪ್ಪಿಲ್ಲ."






"ಆಗ್ಲಿ. ಆಗಿದ್ದಾಯ್ತು. ಬನ್ನಿ. ಪೈಪಲ್ಲಿ ಸ್ನಾನ ಮಾಡಿ"
(ನಗುಮುಖ)




ಅರ್ಧ ಘಂಟೆ ಅಣ್ಣ ತಮ್ಮ ನಿರಾಟ ಆಡಿದರು.

baalya nijakku sundara.

Friday, August 7, 2009

ಕರ್ನಾಟಕವನ್ನು ಒಡೆಯೋಣ !!!!!.

ಅರೆ !! ಇದೇನಪ್ಪ !!! ಈ ಥರ ಹೇಳ್ತಿದ್ದಾರೆ ಅಂತಾ ಆಶ್ಚರ್ಯನಾ ? ಈ ಲೇಖನ ಪೂರ್ತಿ ಓದಿದಮೇಲೆ ನಿಮ್ಮ ಅಭಿಪ್ರಾಯ ಹೇಳಿ. (ದಯವಿಟ್ಟು ಈ ಲೇಖನವನ್ನ ವಾಟಾಳ್ ನಾಗರಾಜ್ ಗೆ ಕೊಡಬೇಡಿ. ನನ್ನ ತಿಥಿ ಮಾಡ್ತಾರೆ.)

'ಚಿಕ್ಕ ರಾಜ್ಯ, ಚೊಕ್ಕ ರಾಜ್ಯ' ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ನಾಲ್ಕೈದು ವರ್ಷಗಳಿಂದ 'India Today' ವಾರ ಪತ್ರಿಕೆ ಭಾರತದ ರಾಜ್ಯಗಳಿಗೆ ranking ನೀಡುತ್ತಿದೆ. ಆಡಳಿತ, ಆರೋಗ್ಯ, ಕೃಷಿ, ಕಾನೂನು ವ್ಯವಸ್ಥೆ-ಮೊದಲಾದ ವಿಷಯಗಳಲ್ಲಿ ರಾಜ್ಯಗಳ ಸಾದನೆಯ ಮೇಲೆ ಈ ranking ನೀಡಲಾಗುತ್ತದೆ. ಮೇಲಿನ rank ಗಳೆಲ್ಲಾ ಸಣ್ಣ ರಾಜ್ಯಗಳ ಪಾಲಾಗುವುದನ್ನು ಗಮನಿಸಿದ ಪತ್ರಿಕೆ ಈಗ ದೊಡ್ಡ ರಾಜ್ಯಗಳಿಗೆ ಬೇರೆ ಚಿಕ್ಕ ರಾಜ್ಯಗಳಿಗೆ ಬೇರೆ ranking ನೀಡುತ್ತಿದೆ.

ಆಡಳಿತ, ಕಾನೂನು ವ್ಯವಸ್ಥೆ ಪಾಲನೆ-ಇವೆಲ್ಲ ದೊಡ್ಡ ರಾಜ್ಯಗಳಲ್ಲಿ ತುಂಬಾ ಕಷ್ಟ. ರಾಜ ಎಲ್ಲೋ; ಪ್ರಜೆಗಳು ಎಲ್ಲೋ. ಉತ್ತರ ಪ್ರದೇಶವನ್ನೇ ನೋಡಿ. 70 ಕ್ಕೂ ಹೆಚ್ಚು ಜಿಲ್ಲೆಗಳು. ಮಾಯಾವತಿ ಎಷ್ಟು ಜಿಲ್ಲಾಧಿಕಾರಿಗಳ ಹೆಸರು ಜ್ಞಾಪಕ ಇಟ್ಟುಕೊಳ್ಳಲು ಸಾದ್ಯ?
ಆಡಳಿತ ಯಂತ್ರ ಹಳ್ಳ ಹಿಡಿಯುತ್ತೆ. ಅದೇ 10 ರಿಂದ 12 ಜಿಲ್ಲೆಗಳ ಚಿಕ್ಕ ರಾಜ್ಯಗಳಾದರೆ ಆಡಳಿತ ಸುಲಭ.

ಕರ್ನಾಟಕದಲ್ಲಿ ನೋಡಿ. ರಾಜಧಾನಿಯಿಂದ ದೂರವಿರುವ ಉತ್ತರ ಕರ್ನಾಟಕ ಹಿಂದುಳಿದಿದೆ. ಬೀದರ್ ನಿಂದ ಬೆಂಗಳೂರು ಎಷ್ಟು ದೂರ. ಅಲ್ಲಿ ನಡೆಯುವ ಅಭಿವೃದ್ದಿ ಕಾರ್ಯಗಳ ನಿಗವಹಿಸುವುದು ಯಾರು? ಉತ್ತರ ಕರ್ನಾಟಕದಿಂದ ಆರಿಸಿ ಬರುವ ಜನ ಪ್ರತಿನಿದಿಗಳು ಬೆಂಗಳುರಲ್ಲೂ ತಮ್ಮ ಆಸ್ತಿ ಅಭಿವೃದ್ದಿ ಮಾಡಿಕೊಳ್ಳುತ್ತಾರೆಯೇ ವಿನಃ ಸ್ವಕ್ಷೇತ್ರ ಮರೆಯುತ್ತಾರೆ. ಉತ್ತರ ಕರ್ನಾಟಕಕ್ಕೆ ಮಲತಾಯಿ ದೋರಣೆ ಮಾಡುತ್ತಾರೆಂದು ಬೊಬ್ಬಿಡುತ್ತಾರೆ.

ಭಾರತದ ದೊಡ್ಡ ರಾಜ್ಯಗಳನ್ನೆಲ್ಲ ಒಡೆದು ಚಿಕ್ಕ ರಾಜ್ಯಗಳನ್ನಾಗಿ ಯಾಕೆ ಮಾಡಬಾರದು? ಉತ್ತರ ಪ್ರದೇಶವನ್ನು 4 ರಾಜ್ಯಗಳನ್ನಾಗಿ ಮಾಡಬಹುದು. ತಮಿಳು ನಾಡು, ಅಂದ್ರ 3 ಚಿಕ್ಕ ರಾಜ್ಯಗಳನ್ನಾಗಿ ಒಡೆಯಬಹುದು. ಕೇರಳವನ್ನು 2 ರಾಜ್ಯಗಳನ್ನಾಗಿ ಮಾಡಬಹುದು. 50 ರಾಜ್ಯಗಳಾಗಲಿ. ಏನೀಗ?

ಅದೇ ರೀತಿ ಕರ್ನಾಟಕವನ್ನು ಕೂಡ ಮೂರು ಚಿಕ್ಕ ರಾಜ್ಯಗಳಾಗಿ ಒಡೆಯಬಹುದು.
ಉತ್ತರ ಕರ್ನಾಟಕ
ದಕ್ಷಿಣ ಕರ್ನಾಟಕ
ಮಲೆನಾಡು ಮತ್ತು ಕರಾವಳಿ ಕರ್ನಾಟಕ.
ಜವಾಬ್ದಾರಿ ಬೆನ್ನಮೇಲೆ ಬಿದ್ದರೆ ಎಲ್ಲ ಮುಂದೆ ಬರುತ್ತಾರೆ. ಇಲ್ಲದಿದ್ದರೆ ಎಲ್ಲಿರುತ್ತಾರೋ ಅಲ್ಲೇ ಇರುತ್ತಾರೆ.

ನಿವೆನಂತಿರಿ? ಉತ್ತರ ಕರ್ನಾಟಕ ಮತ್ತು ಮಲೆನಾಡು ಮತ್ತು ಕರಾವಳಿ ಕರ್ನಾಟಕಕ್ಕೆ ರಾಜಧಾನಿಗಳು ಯಾವುದು ಆಗಲಿ?