Wednesday, May 16, 2012

ಬಲ್ಲಾಳರಾಯನದುರ್ಗದ ಮೇಲೆ ದನ ಮೇಯಿಸುವ ಲಕ್ಷ್ಮಣಗೌಡ.........

          ಬಾಳೆಹೊನ್ನೂರಿನಲ್ಲಿ ಬೆಳಗಿನ ತಿಂಡಿ ತಿಂದು – ಸ್ವಲ್ಪವೂ ನೇರವಿಲ್ಲದ, ಅಂಕು ಡೊಂಕಾದ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಸಾಗುತ್ತಾ ಸಾಗುತ್ತಾ – ಮಾಗುಂಡಿ, ಬಾಳೂರು, ಜಾವಳಿ, ಕೆಳಗೂರು ದಾಟಿ ಸುಂಕಸಾಲೆಯೆಂಬ ಚಿಕ್ಕ ಊರಿನಲ್ಲಿ ಬಲಕ್ಕೆ ತಿರುಗಿ ಒಂದಿಷ್ಟು ಕಿಲೋಮೀಟರು ಸಾಗಿದರೆ ಆ ದೊಡ್ಡ ದೇವಸ್ಥಾನ ಸಿಗುತ್ತದೆ. ಆಚೆ ಈಚೆ ಕಾಫಿ ಎಸ್ಟೇಟುಗಳು, ಬೆಟ್ಟ ಗುಡ್ಡಗಳು - ಬೈಕಿನಲ್ಲಿ ಆ ರಸ್ತೆಯಲ್ಲಿ ಸಾಗುವುದು ನಿಜಕ್ಕೂ ಮಜಾ!!! ಆ ದೇವಸ್ಥಾನ ಬಲ್ಲಾಳರಾಯನದುರ್ಗ ಚಾರಣದ ಮೊದಲ ಮೆಟ್ಟಿಲು (ಬೇಸ್ ಪಾಯಿಂಟ್). ದೇವಸ್ಥಾನದ ಎದುರೊಂದು ಕೊಳ – ದಡದಲ್ಲಿ ಟಿಂಗ್ ಟಿಂಗ್ ಎಂದು ಗಂಟೆಶಬ್ದಮಾಡುತ್ತಾ ಮೂರ್ನಾಕು ದನಗಳು ಮೇಯುತ್ತಿದ್ದವು.ಅಲ್ಲೆಲ್ಲೋ ಹಕ್ಕಿಯೊಂದು ಇಂಪಾಗಿ ಕೂಗುತ್ತಿತ್ತು. ಆ ಶಬ್ದಗಳನ್ನು ಬಿಟ್ಟರೆ ನೀರವ ನಿಶಬ್ದ ವಾತಾವರಣ. ಅರ್ಚಕರು ಅಲ್ಲೇ ಎಲ್ಲೋ ಹೋಗಿದ್ದರು. ಹಣ್ಣುಕಾಯಿ ಮಾಡಿಸಲು ಅರ್ಚಕರ ದಾರಿ ಕಾಯುತ್ತಿದ್ದ ಅರವತ್ತು ಎಪ್ಪತ್ತು ವರ್ಷದ ಸ್ಥಳೀಯ ರಾಮೇಗೌಡನನ್ನು ಮಾತಿಗೆ ಎಳೆದೆವು. ಅಲ್ಲಿಂದ ಮುಂದೆ ಬೆಟ್ಟದ ಮೇಲೆ ಹೋಗುವುದು ಹೇಗೆ ಹಾಗೂ ಎಷ್ಟುದೂರ ಎಂದು ಕೇಳುವುದು ನಮ್ಮ ಉದ್ದೇಶವಾಗಿತ್ತು. ಹೀಗೆ ಹೋಗಿ, ಹೀಗೆ ಹೋಗಿ ಎಂದು ದಾರಿ ಹೇಳಿದ ರಾಮೇಗೌಡರು ಬೆಟ್ಟದ ಮೇಲೆ ನೀರು ಇದೆಯಾ? ಎಂಬ ನಮ್ಮ ಪ್ರಶ್ನೆಗೆ ಉತ್ತರವಾಗಿ – ಹೊ ಇದೆ. ಅಲ್ ಲಕ್ಷ್ಮಣಗೌಡ ಇದಾನೆ. ಅವ್ನ್ ಕೇಳಿ. ಹೇಳ್ತಾನೆ ಎಂದರು.
          ಲಕ್ಷ್ಮಣಗೌಡ ಬೆಟ್ಟದ್ ಮೇಲೆ ಏನ್ ಮಾಡ್ತಾನೆ?- ನಾವು. ರಾಮೇಗೌಡರು – ದನಾ ಮೇಯ್ಸ್ತಾ ಇರ್ತಾನೆ. ವಾರಕ್ಕೊಂದ್ ಸಲಾ ಮನೆಗ್ ಬರ್ತಾನೆ. ಉಳುದ್ ಟೈಮ್ ಬೆಟ್ಟದ್ ಮೇಲೇ ಇರ್ತಾನೆ ಅಂದರು. ಬಲ್ಲಾಳರಾಯನದುರ್ಗದ ಬೆಟ್ಟ ನೋಡುವ ಕುತೂಹಲಕ್ಕಿಂತ ನಮಗೀಗ – ವಾರಕ್ಕೊಮ್ಮೆ ಮನೆಗೆ ಬಂದು ಅಕ್ಕಿ ಸಾಮಾನು ತಗಂಡ್ ಹೋಗಿ – ಒಬ್ಬಂಟಿಯಾಗಿಯೇ ಬೆಟ್ಟದ ಮೇಲೆ ದನಮೇಯ್ಸ್ತಾ ದಿನಕಳೆಯುವ – ಲಕ್ಷ್ಮಣಗೌಡನನ್ನು ನೋಡುವ ಹಾಗೂ ಆತನ ಅನುಭವಗಳನ್ನು ಕೇಳುವ ಕುತೂಹಲವೇ ಹೆಚ್ಚಾಯಿತು. (ನೂರಾರು ದನಗಳ ಮದ್ಯೆ ಒಬ್ಬಂಟಿ ಎಂಬ ಭಾವನೆ ತನಗೆ ಕಾಡುವುದಿಲ್ಲ ಎಂದು ಮೇಲೆಹೋಗಿ ಮಾತಾಡಿಸುತ್ತಿದ್ದಾಗ ಲಕ್ಷ್ಮಣಗೌಡ ಹೇಳಿದ).
ಬೆಟ್ಟಕ್ಕೆ ದಾರಿ 
               ದೇವಸ್ಥಾನದಿಂದ ಸ್ವಲ್ಪ ಮುಂದೆ ಎಸ್ಟೇಟ್ ಒಂದಕ್ಕೆ ಹೋಗುವ ದಾರಿಯಲ್ಲೇ ಮುಂದೆ ಸಾಗಿ ಬಲಕ್ಕೆ ಕಾಣುವ (ದನಗಳು ಓಡಾಡುವ ತರದ) ಚಿಕ್ಕ ಕಾಲುದಾರಿಯಲ್ಲಿ ಒಂದಿಷ್ಟು ದೂರ ಸಾಗಿದರೆ ಕಾಡು ಕೊನೆಯಾಗಿ ಹುಲ್ಲು ಹಾಗು ಅಲ್ಲಲ್ಲಿ ಬಂಡೆಕಲ್ಲುಗಳಿರುವ ದಾರಿ ಸಿಗುತ್ತದೆ. ಹೆಂಗಸರು ಮಕ್ಕಳೂ ಆರಾಮವಾಗಿ (=ತುಂಬಾ ಕಷ್ಟಪಡದೇ) ನಡೆದು ಹೋಗಬಹುದು. ದೇವಸ್ಥಾನದಿಂದ ಬೆಟ್ಟದ ತಲೆಗೆ ಎರಡು ಮೂರು ಗಂಟೆಗಳ ದಾರಿಯಷ್ಟೆ. ಕಾಡು ಕೊನೆಯಾಗುತ್ತಿರುವಂತೆಯೇ ಪ್ರಕೃತಿ ಸೌಂದರ್ಯ ಅನಾವರಣಗೊಳ್ಳಲಾರಂಬಿಸುತ್ತದೆ. ಒಂದು ಬದಿ ಆಳದಲ್ಲಿ ದಕ್ಷಿಣಕನ್ನಡ ಜಿಲ್ಲೆ. ಮತ್ತೊಂದು ಬದಿ ನಮ್ಮ ಚಿಕ್ಕಮಗಳೂರು ಜಿಲ್ಲೆ. ಬೆಟ್ಟದ ಮೇಲೆ ಹಿಂದ್ಯಾವುದೋ ಒಂದು ಕಾಲದಲ್ಲಿ ಯಾರೋ ಒಬ್ಬ ಪಾಳೆಗಾರನೋ ಯಾರೋ (ಆತನ ಹೆಸರು ಬಲ್ಲಾಳರಾಯ ಇರಬಹುದು. ಈ ಬ್ಲಾಗ್ ಲೇಖನ ಓದಿದವರು ಯಾರಾದರೂ ಗೊತ್ತಿದ್ದವರು ತಿಳಿಸಿದರೆ ಅನುಕೂಲ) ಕಟ್ಟಿದ ಕೋಟೆಯ ಅವಶೇಷಗಳಿವೆ. ವೀಕ್ಷಣೆಗೆ ಮಾಡಿದ ಬುರುಜುಗಳೂ ಅರ್ದ ಜರಿದು ಬಿದ್ದ ಸ್ಥಿತಿಯಲ್ಲಿವೆ.
ಬೆಟ್ಟದ ಮೇಲೆ!!!
         ಬಲ್ಲಾಳರಾಯನದುರ್ಗ ಬೆಟ್ಟದ ವಿಶೇಷವೇನೆಂದರೆ ಅದು ಇತರ ಕೆಲವು ನಮ್ಮ ಪಶ್ಚಿಮಘಟ್ಟದ ಬೆಟ್ಟಗಳಂತೆ ಚೂಪಾಗಿಲ್ಲ. ಮುಳ್ಳಯ್ಯನಗಿರಿ, ಕೊಡಚಾದ್ರಿ ಹಾಗೂ ಮೇರ್ತಿ ಮೊದಲಾದ ಬೆಟ್ಟಗಳ ತುದಿ ಚೂಪು. ಶಿಖರಾಗ್ರದಲ್ಲಿ ವಿಸ್ತಾರದ ಜಾಗವಿರುವುದಿಲ್ಲ. ಆದರೆ ಕುದ್ರೆಮುಖ ಹಾಗಲ್ಲ. ಬೆಟ್ಟದಮೇಲೆನೇ ವಿಸ್ತಾರವಾದ ಜಾಗವಿದ್ದು ಐದಾರು ಸಾವಿರ ಅಡಿ ಎತ್ತರದಲ್ಲಿ ದಟ್ಟಕಾಡು, ತೊರೆ ಹಾಗೂ ಜಲಪಾತವಿದೆ. ಬಲಾಳರಾಯನದುರ್ಗ ಬೆಟ್ಟವೂ ಕುದುರೆಮುಖಬೆಟ್ಟದಂತೆ. ಬೆಟ್ಟದ ಮೇಲೆ ಕುದ್ರೆಮುಖ ಬೆಟ್ಟದ ಮೇಲಿಗಿಂತಲೂ ಕಿಲೋಮೀಟರ್ ಗಟ್ಟಲೆ ವಿಸ್ತಾರವಾದ ಜಾಗವಿದೆ. (ಹತ್ತುವ ಮೊದಲು ಕೆಳಗಿನಿಂದ ಬೆಟ್ಟ ನೋಡಿದಾಗ ಅದು ಗಮನಕ್ಕೆ ಬರುವುದಿಲ್ಲ). ಬೆಟ್ಟದ ಮೇಲ್ಬಾಗ ತಲುಪುತ್ತಿದ್ದಂತೆ ಅದ್ಭುತ ಸೌಂದರ್ಯ ಅನಾವರಣಗೊಳ್ಳುತ್ತದೆ!!! ಚಿಕ್ಕಮಗಳೂರು ಜಿಲ್ಲೆಕಡೆ (ನಾವು ಬಂದ ಕಡೆ) ಕೋಟೆಯ ಬುರುಜು ಹಾಗು ಮುಂದೆ ಪ್ರಪಾತ. ಇನ್ನೊಂದುಕಡೆ ಚಿಕ್ಕಪುಟ್ಟ ರಾಶಿರಾಶಿ ಬೋಳು ಬೆಟ್ಟಗಳು. ಅವುಗಳ ಮೇಲೆ ಹಸಿರು ಎಳೆಹುಲ್ಲಿನ ಹೊದಿಕೆ. (ಡಿಸೆಂಬರ್ ನಿಂದ ಮಾರ್ಚಿ ಕೊನೆಯವರೆಗೆ ಬಹುಶಃ ಒಣಗಿದ ಹುಲ್ಲಿನ ಹೊದಿಕೆಯಿರುತ್ತದೇನೋ). ಆ ಚಿಕ್ಕಪುಟ್ಟ ಬೆಟ್ಟಗುಡ್ಡಗಳ ಮದ್ಯದಲ್ಲಿ ಶೋಲಾ ಕಾಡು. ನಾಕೈದಾರು ಚಿಕ್ಕ ಗುಡ್ಡಗಳು ಸೇರುವಲ್ಲಿ ಒತ್ತೊತ್ತಾಗಿ ಮರಗಳಿರುವ ರತ್ನಗಂಬಳಿ ಹಾಸಿದಂತೆ ದಟ್ಟಕಾಡು. ಅಂತಾ ಜಾಗದಲ್ಲಿ ಚಿಕ್ಕ ನೀರಿನ ಹರಿವು. ಒಂದೆರಡು ಘಂಟೆ ನಡೆದು ಬೆಟ್ಟದ ಮೇಲೆಯೇ ಇರುವ ಆ ಚಿಕ್ಕಪುಟ್ಟ ಗುಡ್ಡಗಳು ಹಾಗು ಶೋಲಾ ಕಾಡುಗಳನ್ನು ದಾಟಿ ದೂರದಲ್ಲಿ ಸ್ವಲ್ಪ ಎತ್ತರದಲ್ಲಿ ಕಾಣುವ ಬೆಟ್ಟವನ್ನು ಹತ್ತಿದರೆ-ಬಹುಶಃ ಬಾರೀ ಪ್ರಪಾತ ಹಾಗು ಅಲ್ಲಿಂದಾಚೆ ದಕ್ಷಿಣಕನ್ನಡ ಕಾಣಬಹುದು. ಒಂದು ರಾತ್ರಿ ಬೆಟ್ಟದ ಮೇಲೆ ತಂಗಿದರೆ ಎಲ್ಲಾ ನೋಡಬಹುದೇನೋ. ಮಳೆಗಾಲದ ನಂತರದ ಅಕ್ಟೋಬರ್ ತಿಂಗಳಲ್ಲಿ ಬೆಟ್ಟಹತ್ತಿದರೆಬೆಟ್ಟದಮೇಲಿನ ಶೋಲಾ ಕಾಡಿನ ನಡುವೆ ಹರಿಯುವ (ಮಳೆಯಿಂದ ಮೈದುಂಬಿಕೊಂಡಿರುವ) ತೋರೆಯನ್ನೇ ಅನುಸರಿಸಿ ನಡೆದರೆ – ಆ ತೊರೆ ದಕ್ಷಿಣಕನ್ನಡದಕಡೆ ಆಳದ ಜಲಪಾತವಾಗಿ ಬೀಳುವ ಭಯಂಕರ ದೃಶ್ಯ ಕಾಣಬಹುದೆನ್ನಿಸುತ್ತದೆ!! (ಆ ಕಡೆಯಿಂದ ಅದಕ್ಕೊಂದು ಹೆಸರೂ ಇರಬಹುದು!!!). ನಾನು ಎಷ್ಟೇ ಹೇಳಿದರೂ ಎಂದೆಂದೂ ಅದು ನೀವೇ ಹೋಗಿ ನೋಡಿದಂತಾಗುವುದಿಲ್ಲ. ಆದರೆ ಆ ದೃಶ್ಯಾವಳಿಯ ಒಂದಿಷ್ಟು ಫೋಟೋಗಳನ್ನ – ಹೆಚ್ಚಿನವು (ಬದಿಯಲ್ಲಿ ಒಂದೆರಡು ಹಿತನುಡಿ ಬರೆದು) ಗೋಡೆಗೆ ದೊಡ್ಡದಾಗಿ ಅಂಟಿಸುವ ಪೋಸ್ಟರ್ ಗಳಿಗೆ ಹೇಳಿಮಾಡಿಸಿದಂತಿವೆ – ಅವುಗಳನ್ನು ನನ್ನ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಮೆಸ್ಮರೈಸಿಂಗ್ ಮಲ್ನಾಡ್ ಎಂಬ ಆಲ್ಬಮ್ಮಲ್ಲಿ ಹಾಕಿದ್ದೀನಿ. ಅವುಗಳನ್ನು ನೋಡಲು ಇಲ್ಲಿಕ್ಲಿಕ್ಕಿಸಿ. (ಪುರುಸೊತ್ತಿದ್ದರೆ ಕಾಮೆಂಟಿಸಿ).
ಬೆಟ್ಟದ ಮೇಲೆ-ಮತ್ತೊಂದು ದೃಶ್ಯ 

        ಬೆಟ್ಟದ ತಲೆ ಮುಟ್ಟಿದಾಗ ಮದ್ಯಾಹ್ನ ಒಂದು ಘಂಟೆ. ಮೇಲ್ಬಾಗದಲ್ಲಿ, ನೆಲದಿಂದ ಐದಾರು ಅಡಿ ಎತ್ತರದ, ಸುತ್ತಲೂ ಕಲ್ಲುಮೇಲೆ ಕಲ್ಲು ಪೇರಿಸಿ ಕಟ್ಟಿದ ಮುರುಕು ಗೋಡೆಯಿರುವ ವಿಶಾಲವಾದ ಅವಶೇಷವಿದೆ. ಮೂರ್ನಾಲ್ಕು ಮೆಟ್ಟಿಲೇರಿ – ಅಡ್ಡಲಾಗಿದ್ದ ಮರದ ಗಳ ಸೊಪ್ಪು (ಹೆಬ್ಬಾಗಿಲು??) ಬದಿಗೆ ಸರಿಸಿ ಒಳಗೆ ಹೋದಾಗ ನಮಗೆ ಕಾಣಿಸಿದ್ದೇ ಕೋಟೆಯ ಆಸ್ಥಾನ-ಈಗ ದನದ ಲಾಯ!!! ರಾತ್ರಿ ದನಗಳನ್ನು ಒಟ್ಟುವ ಜಾಗ. ಇನ್ನೂ ಮುಂದೆ ಮತ್ತೊಂದು ಮುರುಕು ಗೋಡೆ ದಾಟಿದಾಗ ನಮಗೆ ಕಂಡಿದ್ದೇ – ಎರಡು ಜೊತೆ ಬಡಿಗೆಗಳನ್ನ ತಲೆಕೆಳಗಾದ ವಿ ಆಕಾರದಲ್ಲಿ ಹತ್ತು ಅಡಿ ದೂರದಲ್ಲಿ ಹುಗಿದು, ನಾಕೈದು ಅಡಿ ಎತ್ತರದಲ್ಲಿ ಅದಕ್ಕೊಂದು ಮರದ ಗಳ ಅಡ್ಡ ಇಟ್ಟು, ಅದರ ಮೇಲೆ ನೀಲಿ ಟಾರ್ಪಲ್ ಹಾಸಿ ಮಾಡಿದ – ದುರ್ಗದ (ತಾತ್ಕಾಲಿಕ) ಅಧಿಪತಿ ಲಕ್ಷ್ಮಣ ಗೌಡನ ಅಂತಃಪುರ!!!(ಜೊತೆಗೆ ಅಡಿಗೆ ಕೋಣೆ ಹಾಗೂ ಊಟದ ಹಾಲ್). ಆದರೆ ಎಲ್ಲಿ ಲಕ್ಷ್ಮಣಗೌಡ? ಎಲ್ಲಿ ದನಗಳು?? ಹೊರಗೆಬಂದು ನೋಡಿದಾಗ ವಿಶಾಲ ಬೆಟ್ಟದಮೇಲೆ ದೂರದಲ್ಲೆಲ್ಲೋ ಹಸಿರ ನಡುವೆ ಕಪ್ಪು ಬಿಳಿ ಚುಕ್ಕಿಗಳ ತರ ದನಗಳು!!  
       ಬೆಟ್ಟ ಹತ್ತಿ ಸುಸ್ತಾದ ನಾವೆಲ್ಲಾ – ಅಲ್ಲೇ ಸಮೀಪದ ಶೋಲಾ ಕಾಡಿನ ಮರದನೆರಳಿನಲ್ಲಿ – ಬುತ್ತಿ ಬಿಚ್ಚಿ ಸಮಾ ತಿಂದು – ಬೆಟ್ಟ ಸುತ್ತಲು ಮದ್ಯಾಹ್ನದ ಬಿಸಲಿನ ಉರಿ ಕಡಿಮೆಯಾಗಲೆಂದು – ನೆಲಕ್ಕೆ ಬೆನ್ನುಕೊಟ್ಟು ಮಲಗಿದ ನಮ್ಮನ್ನೆಲ್ಲ – ಸಂಜೆ ನಾಕುಗಂಟೆಹೊತ್ತಿಗೆ ಎಬ್ಬಿಸಿದ್ದು – ಟಿಣಿ ಟಿಣಿ ಗಂಟೆ ಶಬ್ದ ಹಾಗೂ , ಆಆ, ಹೋಯ್, ಬಾ, ಬಾಬಾ ಎಂಬ ಶಬ್ದಗಳು!! ಬೆಟ್ಟಹೇಗಿರುತ್ತೆ ಎಂಬ ಒಂದು ಕುತೂಹಲ ತಣಿಸಿಕೊಂಡಿದ್ದ ನಮಗೆ ನಮ್ಮ ಮತ್ತೊಂದು ಕುತೂಹಲದ ಕೇಂದ್ರ ಲಕ್ಷ್ಮಣಗೌಡನೇ ನಮ್ಮೆದುರಿದ್ದ!!! ಸಾದಾರಣ ಮೈಕಟ್ಟಿನ ಅಂದಾಜು ಐವತ್ತು ವರ್ಷದ ಸಾಮಾನ್ಯ ಎತ್ತರದ ಮನುಷ್ಯನೇ ಈ ಲಕ್ಷ್ಮಣಗೌಡ. ನಾವು ತಿಂದುಂಡು ಮಿಕ್ಕಿದ್ದ ಚಪಾತಿ ಪಲ್ಯ ಮೊಸರನ್ನು (ಬಿಸಾಡುವ ಬದಲು) ಆತನ ಕೈಮೇಲೆ ಹಾಕಿ ಮಾತಿಗೆಳೆದೆವು. ಸಹಜವಾಗಿಯೇ ಆತನೂ ತನ್ನಬಗ್ಗೆ ಹೇಳಿಕೊಳ್ಳಲಾರಂಬಿಸಿದ.
           ಲಕ್ಷ್ಮಣಗೌಡ ಬಲ್ಲಾಳರಾಯನ ದುರ್ಗದ ಬೆಟ್ಟದಬುಡದ ಒಂದು ಹಳ್ಳಿಯ ಒಬ್ಬ ಸಾದಾರಣ ರೈತ. ಮನೆಮಠ ಇದೆ.ಮದುವೆಯಾಗಿ ದೊಡ್ಡ ಮಕ್ಕಳುಗಳೂ ಇದ್ದಾರೆ. ಮಗ ಒಬ್ಬ ಉಜಿರೆಯಲ್ಲಿ ಕೆಲಸಮಾಡುತ್ತಿದ್ದಾನಂತೆ. ಕೃಷಿಕಾರ್ಯಗಳೆಲ್ಲಾ ಮುಗಿದು ಜೊತೆಗೆ (ಕೆಳಗೆ ಕಾಡಿನಲ್ಲಿ) ದನಗಳಿಗೆ ಮೇವೂ ಕಡಿಮೆಯಾದಾಗ – ಪ್ರತಿವರ್ಷ ಪೆಬ್ರವರಿ ಮಾರ್ಚ್ ಹೊತ್ತಿಗೆ – ತನ್ನಮನೆ ಎತ್ತುದನಗಳು ಜೊತೆಗೆ ಊರವರ ಹಾಗೂ ನೆಂಟರ ಎತ್ತುದನ ಎಮ್ಮೆಗಳನ್ನೂ – ಈ ಲಕ್ಷ್ಮಣಗೌಡ ಬೆಟ್ಟದಮೇಲೆ ಹೊಡೆದುಕೊಂಡು ಬರುತ್ತಾನೆ. ನಾನಾಗಲೇ ಹೇಳಿದೆ ಬೆಟ್ಟದ ಮೇಲೆ ವಿಸ್ತಾರವಾದ ಹುಲ್ಲುಗಾವಲಿನ ಬಯಲುಪ್ರದೇಶ ಹಾಗೂ ನೀರಿದೆಯೆಂದು. ದನಗಳಿಗೆ ಯಥೇಚ್ಛ ಮೇವು!!! ಪರರ ದನಗಳನ್ನು ಮೇಯಿಸಲು ಒಂದು ಬಾಲಕ್ಕೆ(=ಜಾನುವಾರಿಗೆ) ಇಂತಿಷ್ಟು ಎಂದು ದುಡ್ಡು ಕೊಡುತ್ತಾರಂತೆ. ಮಳೆಗಾಲ ಆರಂಬವಾಗುತ್ತಿದ್ದಂತೆಯೇ ಜಾನುವಾರುಗಳು ಹಾಗೂ ಲಕ್ಷ್ಮಣಗೌಡ ಕೆಳಗಿಳಿದು ಹಳ್ಳಿ ಸೇರುತ್ತಾರೆ. ಮೂರ್ನಾಕು ತಿಂಗಳು ಲಕ್ಷ್ಮಣಗೌಡನ ವಾಸ ಬೆಟ್ಟದಮೇಲೆನೇ. ವಾರಕ್ಕೊಮ್ಮೆ ಕೆಳಗಿಳಿದು ಹೋಗಿ ಅಕ್ಕಿ ಉಪ್ಪು ತರುತ್ತಾನೆ.
           ಹಾಗಂತ ಈ ದನಮೆಯಿಸಲು ಬೆಟ್ಟಹತ್ತಿ ಇರುವುದು ತಲಾಂತರದಿಂದ ಬಂದ ಸಂಪ್ರದಾಯವೇನಲ್ಲ. ಮೊದಲೆಲ್ಲಾ ದನಗಳನ್ನ ಬೆಟ್ಟದಮೇಲೆ ಹೊಡೆದುಬಂದುಬಿಡುತ್ತಿದ್ದರಂತೆ. ಮೂರ್ನಾಲ್ಕು ತಿಂಗಳು ಬಿಟ್ಟು ಮಳೆಗಾಲದ ಪ್ರಾರಂಬದಲ್ಲಿ ಎರಡನೇ ಬಾರಿ ಬೆಟ್ಟದಮೇಲೆ ಹೋಗಿ ವಾಪಸ್ ಹೊಡಕೊಂಡು ಬರ್ತಿದ್ರಂತೆ. ಆದ್ರೆ ಈಗ – ಎಂದು ಲಕ್ಷ್ಮಣಗೌಡ ಅನ್ನುತ್ತಿದ್ದಂತೆ ನಮ್ಮಲ್ಲೊಬ್ಬ ಕೇಳಿದ – ಏನು? ಹುಲಿಕಾಟನಾ??. ಊಹೂಂ. ಹುಲಿಯಾದರೆ ಬಿಡಿ. ಎಲ್ಲೋ ಅಪ್ರೂಪಕ್ ತಿನ್ನುತ್ತೆ. ನಮಗ್ ಹೆಚ್ಚಾಗಿ ಕನ್ನಡ್ ಜಿಲ್ಲೆಯಿಂದ ಬೆಟ್ಟಹತ್ತಿ ಬರುವ ಬೇರಿಗಳ ಕಾಟ!!! ಒಳ್ಳೇ ಜನ್ವಾರ್ ಗಳನ್ನೇ ಮಾಯಮಾಡ್ತಾರೆ – ಅಂದ ಲಕ್ಷ್ಮಣಗೌಡ. (ಬೇರಿ=ಬ್ಯಾರಿ=ಮುಸ್ಲಿಮ್ಮರ ಒಂದು ಪಂಗಡ). ಅದಕ್ಕಾಗಿ ಈಗ ಬೆಟ್ಟದಮೇಲೇನೇ ಹಗಲೂ ರಾತ್ರಿ ಎನ್ನದೇ ಇದ್ದು ದನಕಾಯುತ್ತಾರೆ.
         ಎಷ್ಟೆಂದರೂ ಕೋಟೆಯ ಜಾಗ. ಹಿಂದೆಲ್ಲಾ ಹೆಣಗಳು ಬಿದ್ದಿರಬಹುದು. ದೆವ್ವಭೂತಗಳ ಕಾಟವೇನಾದರೂ ಬೆಟ್ಟದಮೇಲೆ ಇದೆಯಾ ಎಂದು ತಿಳಿಯುವ ಕುತೂಹಲ ನಮ್ಮಲ್ಲೊಬ್ಬನಿಗೆ. ಹೇಗೂ ಲಕ್ಷ್ಮಣಗೌಡ ಒಬ್ಬನೇ ಇರುತ್ತಾನಲ್ಲ. ದೆವ್ವಭೂತಗಳ ಜೊತೆಗೆ ಮೋಹಿನಿಯ ಕಾಟವೆನಾದರೂ ಎಂದಾದರೂ ಕಂಡುಬಂದಿತ್ತೆ?? – ಎಂದು ಕೇಳಿದೆವು. ನಸುನಗುತ್ತ ಅಲ್ಲಗಳೆದ ಲಕ್ಷ್ಮಣಗೌಡ. ಆದರೆ ಸ್ವಾರಸ್ಯವೆಂದರೆ – ಸ್ವಲ್ಪದೂರದಲ್ಲಿ ಕಾಣುವ ಶೋಲಾಕಾಡು ತೋರಿಸಿ – ಅಲ್ಲೊಂದು ಹಳೆ ಕೆರೆ ಇರುವುದಾಗಿಯೂ – ಅದೀಗ ಮುಚ್ಚಿಹೋದಂತೆಯೇ ಆಗಿರುವುದಾಗಿಯು – ಆದರೆ ಆಗೀಗ ರಾತ್ರಿ ಗಂಟೆಗಳು (ಮಂಗಳಾರತಿಯ ಸಮಯದಲ್ಲಿ) ಹೊಡೆದಂತೆ ಶಬ್ದಗಳು ಕೇಳಿಸುವುದಾಗಿ ಹೇಳಿದ!!!! ಚಂದದ ಈ ಜಾಗದಲ್ಲಿ ಸಿನೆಮಾ ಶೂಟಿಂಗ್ ನಡೆದಿದ್ಯಾ ಎಂದು ಕೇಳಿದ್ದಕ್ಕೆ – ಅವತ್ಯಾರೋ ಸಿನೆಮಾದವ್ರು ನೋಡ್ಕಂಡ್ ಹೋಗಕ್ಕ್ ಬಂದಿದ್ರು. ಮತ್ ಬರ್ಲಾ ಎಂದ. (ಸಹಜನೆ – ಚಿಕ್ಕಮಗಳೂರಿಂದ ಗಿರಿಕಡೆ ಹೋದರೆ ಟಾರ್ ರಸ್ತೆ ಬುಡದಲ್ಲೇ ಇಲ್ಲಿನಷ್ಟೇ ಚಂದದ ಜಾಗಗಳಿರುವಾಗ ನಟನಟಿಯರ ದಂಡು ಕಷ್ಟಪಟ್ಟು ಬೆಟ್ಟಹತ್ತಿ ಯಾಕೆ ಬರ್ತಾರೆ? ಅಲ್ವಾ).
        ಪಕ್ಕದ ಫೋಟೋದಲ್ಲಿ ಕಾಣುವ-ಹಾರೆಯಿಂದ ಗದ್ದೆಯ ಅಂಚನ್ನ ಕತ್ತಿರಿಸಿದಂತೆ ಕಾಣುವ ಪ್ರಪಾತದ ಬಗ್ಗೆ-ಲಕ್ಷ್ಮಣಗೌಡ ಹೇಳಿದ ವಿಷಯ ರೋಮಾಂಚನಕರ!!! ನಾವು ಕುಳಿತಲ್ಲಿ ದೂರದಿಂದ ಕಾಣುತ್ತಿದ್ದ-ಮೇಲೊಂದಿಷ್ಟು ಕಾಡು ಹುಲ್ಲುಗಾವಲು ಹಾಗೂ ಮತ್ತೊಂದು ಬದಿ ಆಳದ ಪ್ರಪಾತವಿದ್ದ-ಆ ಬೆಟ್ಟದ ಮೇಲೆ ಮೇಯುತ್ತಿದ್ದ ಎರಡು ದನಗಳು-ಒಂದನ್ನೊಂದು ದೂಕಿಕೊಂಡು ಜಗಳವಾಡುತ್ತಿದ್ದವಂತೆ. ಲಕ್ಷ್ಮಣಗೌಡ ನೋಡುತ್ತಿರುವಂತೆಯೇ ಹಿಂದೆಹಿಂದೆ ಬಂದ ಒಂದು ದನ ಕಾಲುಜಾರಿ ಉರುಳಿ ಉರುಳಿ ಆ ಪ್ರಪಾತಕ್ಕೆ ಬಿತ್ತಂತೆ!! ಸಾವಿರಾರು ಅಡಿ ಆಳಕ್ಕೆ ಕಲ್ಲಿನ ಮೇಲೆ ಬಿದ್ದ ಹೊಡೆತಕ್ಕೆ ದನ ಚೂರುಚೂರಾಗಿ ಪಚ್ಚಿ ಅದೆಷ್ಟೋ ದೂರ ಎಸೆಯಲ್ಪಟ್ಟಿತಂತೆ!!! ಇಂತಹ ಅದೆಷ್ಟೋ ಕಥೆಗಳನ್ನ ಅವನ ಬಾಯಿಂದ ಹೊರಡಿಸಬಹುದಾಗಿತ್ತು. ಆದರೆ ಬೆಟ್ಟದಮೇಲೆ ಒಂದು ಸಣ್ಣಸುತ್ತು ಹಾಕಿ ಸೂರ್ಯಾಸ್ತ ನೋಡಿ ಕೆಳಗೆ ಹೊರೆಟೆವು. ಘಟ್ಟದಂಚಿನ ಜಾಗಗಳಿಂದ ಸೂರ್ಯಾಸ್ತ ಸಮುದ್ರದೆಡೆ ಬಯಲುಜಾಗದಲ್ಲಿ ಆಗುವುದು ಸಾದಾರಣ. ಆದರೆ ಘಟ್ಟದಂಚಿನ ಬಲ್ಲಾಳರಾಯನದುರ್ಗದಲ್ಲಿ ಮಾತ್ರ ಸೂರ್ಯಾಸ್ತ, ಎದುರು ಕಾಣುವ ಎತ್ತರದ ಕುದ್ರೆಮುಖ ಬೆಟ್ಟದ ಹಿಂದೆ ಆಗುತ್ತದೆ. (ಅಂದರೆ ಕುದ್ರೆಮುಖ ಹಾಗೂ ಬಲ್ಲಾಳರಾಯನಬೆಟ್ಟಗಳು ಪಶ್ಚಿಮ-ಪೂರ್ವದಲ್ಲಿವೆ. ಪಶ್ಚಿಮಘಟ್ಟದ ಇತರ ಶಿಖರಾಗ್ರಗಳಂತೆ ಉತ್ತರ-ದಕ್ಷಿಣದಲಿಲ್ಲ. ಅವೆರಡು ಬೆಟ್ಟಗಳ ನಡುವೆ ದಕ್ಷಿಣಕನ್ನಡಜಿಲ್ಲೆ ಒಂದಿಷ್ಟು ಒಳಚಾಚಿದೆ. ಆ ಭಾಗದ ಜನರಿಗೆ ಒಂದುಬದಿ ಎತ್ತರದ ಕುದ್ರೆಮುಖ, ಮತ್ತೊಂದು ಬದಿ ಬಲ್ಲಾಳರಾಯನದುರ್ಗ-ಎರಡೂ ಚಂದಾಗಿ ಕಾಣಬಹುದು!!!).
         ನಾವು ಹೋಗಿದ್ದು ಹೋದವರ್ಷ. ಈ ವರ್ಷನೂ ಮುಂಗಾರುಪೂರ್ವದ ರೇವತಿ ಹಾಗೂ ಅಶ್ವಿನಿ ಮಳೆಗಳು ಸಾಕಷ್ಟು ಆಗಿವೆ. ಬಲ್ಲಾಳರಾಯನಬೆಟ್ಟದಮೇಲೆನೂ ಹಸಿರು ನಳನಳಿಸುತ್ತಿರಬಹುದು. ಹೋಗಲು ಸಮಯ ಪ್ರಶಸ್ತವಾಗಿದೆ. (ಜೂನ್ ಮೊದಲವಾರದಲ್ಲಿ ಮುಂಗಾರು ಪ್ರಾರಂಭವಾದರೆ ಏನೂ ಕಾಣುವುದಿಲ್ಲ. ಮಂಜು ಮುಸುಕು). ರಾತ್ರಿ ಹೊರಟರೆ ಬೆಳಿಗ್ಗೆ ಕಳಸ ತಲುಪಿಸಲು ಬಸ್ಸುಗಳೂ ಇವೆ. ಎಲ್ಲಿಗಾದರೂ ಹೋಗಲು ನಿಮ್ಮ ಮನಸಿನಲ್ಲೂ ತುಡಿತವಿರಬಹುದು. ಇನ್ಯಾಕೆ ತಡ? ಬೆಟ್ಟಕ್ಕೆ ಹೋಗಿ. ಲಕ್ಷ್ಮಣಗೌಡನನ್ನು ಕಾಣಿ. ನಿನ್ನಬಗ್ಗೆ (ಹೊಗಳಿ) ಇಂಟರ್ನೆಟ್ ನಲ್ಲಿ ಯಾರೋ ಒಬ್ಬರು ಬರೆದಿದ್ದಾರೆ. ಅದನ್ನು ಪ್ರಪಂಚಾದ್ಯಂತ ಜನ ನೋಡಬಹುದು ಅಂತ ಹೇಳಿ. ಶುಭಪ್ರಯಾಣ!!!!
        ಈ ಲೇಖನ ಓದಿದ ಗುರುತಾಗಿ (ಸಮಯವಿದ್ದರೆ) ಕಾಮೆಂಟಿಸಿ. ಕಾಮೆಂಟ್ ಗಳು ಬರವಣಿಗೆಗಳನ್ನು ತಿದ್ದಿಕೊಳ್ಳಲು (ಹಾಗೂ ಹರಿದುಬರಲು) ಅವಶ್ಯಕ!! ಲೇಖನ ಇಷ್ಟಪಟ್ಟಿದ್ದು ಕಾಮೆಂಟಿಸಲು ಸಮಯವಿಲ್ಲದಿದ್ದರೆ +1 ರ ಮೇಲೆ ಕ್ಲಿಕ್ ಮಾಡಿ.