Friday, August 3, 2018

ಮಲೆನಾಡಿನ ಒಂದು ಮೋಜಿನ ಪ್ರಸಂಗ

          ಅದೆಷ್ಟು ತಮಾಷೆಯ ಘಟನೆಗಳು ನಡೆಯುತ್ತಿರುತ್ತವೆ/ನಡೆದಿವೆ ಈ ಮಲೆನಾಡಿನಲ್ಲಿ. ಅಂತಹವುಗಳಲ್ಲಿ ಇದೂ ಒಂದು. ಅಂದಾಜು ಮೂರುವರೆ ದಶಕಗಳ ಹಿಂದೆ ನಡೆದ ಘಟನೆ. ಕೊಚ್ಚವಳ್ಳಿ  ಶೃಂಗೇರಿಯಿಂದ ಐದು ಆರು ಕಿ.ಮೀ  ದೂರದಲ್ಲಿನ ಚಿಕ್ಕಹಳ್ಳಿ. ಮೂರು ನಾಲ್ಕು ಮನೆಗಳಿರುವ  ಚಿಕ್ಕ ಊರು. ಮಲೆನಾಡಿನ ಊರುಗಳೇ ಹಾಗೆ. ಊರೆಂದರೆ ಕೆಲವೇ ಕೆಲವು ಮನೆಗಳು. ಅವೂ ಒಂದು ಅಲ್ಲಿ ಇನ್ನೊಂದು ಇಲ್ಲಿ. ನಡುವೆ ತೋಟ. ಇಂತಾ ಕೊಚ್ಚವಳ್ಳಿಯಲ್ಲಿ   ಒಂದಿಷ್ಟು ಅಡಿಕೆತೋಟ ಹೊಂದಿ, ಭತ್ತ ಬೆಳೆದು ಕೃಷಿ ಮಾಡಿಕೊಂಡು ವಾಸಿಸುತ್ತಿರುವ ಶೇಷಯ್ಯನೇ ಈ ಕಥೆಯ ಕಥಾನಾಯಕ.
              ಅಂದಾಜು ಅರವತ್ತು ವರ್ಷದ, ಬೊಜ್ಜಎಂಬುದೇ ಇಲ್ಲದ, ಸಣಕಲು ಶರೀರದ, ತೆಳ್ಳಗೆ ಎತ್ತರವಿದ್ದ, ಸ್ವಲ್ಪ ಮುಂಬುಹಲ್ಲಿನ ಶೇಷಯ್ಯ ಒಬ್ಬ ನಿರುಪ್ರದವಿ ಜೀವಿ. ದಿನವಿಡೀ ಶ್ರಮದ ಕೆಲಸ, ಸಂಜೆ ಶೃಂಗೇರಿಗೆ ತಿರುಗಾಟ. ಪರಿಚಯದ ಅಂಗಡಿಯ ಕಟ್ಟೆಯ ಮೇಲೆ ಕೂತು ಒಂದಿಷ್ಟು ಹೊಗೆಸೊಪ್ಪು, ಸಾಧ್ಯವಾದಷ್ಟು ಪಟ್ಟಾಂಗ, ಕೊನೆಗೆ ಒಂದಿಷ್ಟು ಸಾಮಾನು ಕಟ್ಟಿಸಿಕೊಂಡು ರಾತ್ರಿ ಮನೆಗೆ - ರಾತ್ರಿ ೭:೩೦ ರ ಕನ್ನಡ ವಾರ್ತೆಯ ಸಮಯಕ್ಕೆ ಊಟಕ್ಕೆ ಹಾಜರ್ - ಹೀಗಿತ್ತು ಶೇಷಯ್ಯನ ದಿನಚರಿ. ನೆಂಟರಿಷ್ಟರ ಮನೆಯಲ್ಲಿ ಏನಾದರೂ ಊಟದಮನೆಯಿದ್ದರೆ ಹೋಗಿ ಊಟಮಾಡಿ ಅಪರಾತ್ರಿಯವರೆಗೆ ಇಸ್ಪೀಟು ಜಪ್ಪುವುದು ಅವರ ಪ್ರಿಯ ಹವ್ಯಾಸ. (ಅಂದಿನ ದಿನಗಳಲ್ಲಿ ಹೊಗೆಸೊಪ್ಪು ಹಾಗೂ ಇಸ್ಪೀಟು ಅನೇಕ ಮಲೆನಾಡಿನ ಗಂಡಸರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಕೆಲವೊಮ್ಮೆ ಯಾವ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇವೆಂದೂ ಗೊತ್ತಿಲ್ಲದೇ, ಸಹಇಸ್ಪೀಟಿಗರೊಂದಿಗೆ ಹೋಗಿ ಉಪ್ಪರಿಗೆಯ ಮೇಲಿನ ಮೂಲೆಯ ರೂಮಿನಲ್ಲೋ, ಹೊರಗಡೆ ದೂರದ ಜಗಲಿಯಲ್ಲೋ ಕೂತು ಹಗಲೂ ರಾತ್ರಿ ಇಸ್ಪೀಟ್ ಆಡುತ್ತಿದ್ದರು!!! ಐದಾರು ಜನ ಸುತ್ತ ಕುಳಿತುಕೊಂಡು ರಮ್ಮಿ ಆಡುವ ಒಂದು ಗುಂಪಿಗೆ  'ಮಂಡಲ' ಎಂದು ಹೆಸರು. ಯಾರದ್ದಾದರೂ ಮನೆಯಲ್ಲಿ ಒಂದು ಕಾರ್ಯಕ್ರಮವಿದ್ದರೆ ಇಂತಹ ಅನೇಕ ಮಂಡಲಗಳಿರುತ್ತಿದ್ದವು. ರಾತ್ರಿ ಊಟಕ್ಕೆ ಕರೆದಾಗ ಕರೆದ ಕೂಡಲೇ ಬಾರದಿರುವುದು, ಆಗಾಗ್ಯೆ ಕಾಫೀ ಟೀ ಸರಬರಾಜು ಮಾಡಬೇಕಾಗಿರುವುದು, ಬೆಳಿಗ್ಗೆ ಅವರೆಲ್ಲ ಎದ್ದು ಹೋದ ಮೇಲೆ ಕೂತಜಾಗದಲ್ಲೆಲ್ಲಾ  ಬಿದ್ದಿರುತ್ತಿದ್ದ ಬೀಡಿ ಸಿಗರೇಟು ತುಂಡುಗಳು, ಎಲೆ ಅಡಿಕೆ ಚೂರು ಕ್ಲೀನ್ ಮಾಡುವುದು - ಇವೇ ಮೊದಲಾದ ಕಾರಣಗಳಿಂದ ಮಲೆನಾಡ ಮಹಿಳೆಯರು ಈ ಇಸ್ಪೀಟ್ ಆಟಕ್ಕೆ ಯಾವತ್ತೂ ವಿರೋಧ).
            ಶೇಷಯ್ಯನವರಿಗೆ (ಜನ್ಮಜಾತವಾಗಿ) ಇದ್ದ ಒಂದೇ ಊನವೆಂದರೆ ಉಗ್ಗು. ಮಾತನ್ನು ಶುರುಮಾಡುವಾಗ ತಡವರಿಸುವುದು. ಒಮ್ಮೊಮ್ಮೆ ಅದು ತಮಾಷೆಗೂ ಕಾರಣವಾಗುತ್ತಿತ್ತು. ಒಮ್ಮೆ ಹೀಗೆ ಆಗಿತ್ತು - ಘಟ್ಟದ ಕೆಳಗಿನ ಹೆಬ್ರಿಯಲ್ಲಿ ನಡೆಯಲಿರುವ ಮಗಳ ಮದುವೆಗೆ ಹೋಗಲು ಯಾವ ವೆಹಿಕಲ್ ವ್ಯವಸ್ಥೆ ಮಾಡಿದ್ದೀರಿ ಎಂದು ಸಂಜೆಯ ಕಟ್ಟೆ ಪುರಾಣದಲ್ಲಿ ಒಬ್ಬರು ಕೇಳಿದಾಗ ಅವರು ಕೊಟ್ಟ ಉತ್ತರ  - ಅಂಗೈಯಲ್ಲಿ ಹೊಗೆಸೊಪ್ಪು ತಿಕ್ಕುತ್ತಾ - "ಬಬಬಸ್ಸಾದ್ರ್ ಬಸ್, ಜೀಜೀಜೀಪಾದ್ರ್ ಜೀಪ್, ಮುಮುಮುಟ್ಟಾದೋರಾದ್ರ್ ಮುಟ್ಟಾದೋರ್, ಹತ್ಕೊಂಡ್ ಹೋಗ್ತಿರೋದು." ಅಂಗಡಿಯಲ್ಲಿದ್ದವರಿಗೆಲ್ಲಾ ಆಶ್ಚರ್ಯ. ಒಬ್ಬರು ಕೇಳಿಯೇ ಬಿಟ್ಟರು.
           "ಅದೇನದು ಮುಟ್ಟದೊರನ್ ಹತ್ಕಂಡ್ ಹೋಗೋದು?"
             ಬಾಯಿಗೆ ಹಾಕಿಕೊಂಡ ಹೊಗೆಸೊಪ್ಪಿನ ಉಂಡೆ ಹೀರುತ್ತಾ ಶೇಷಯ್ಯ ಕತ್ತು  ಹಿಂದೆ ಮಾಡಿ ತಲೆ ಎತ್ತಿ "ಅದೇ ಮುಮುಟ್ಟಾದೊರ್ - ಮುಟ್ಟಡೊರ್ - ಮುಟಾಡಾರ್ - ಬಾಡ್ಗೆದು". ಶೇಷಯ್ಯ  ಮುಟ್ಟಾದೊರ್ ಅಂದಿದ್ದು ಮೂವತ್ತು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಮೆಟಡಾರ್ ಎಂಬ ವಾಹನ!!! ಕೊಚ್ಚವಳ್ಳಿ  ಶೇಷಯ್ಯನದ್ದು ಲೆಕ್ಕವಿಲ್ಲದಷ್ಟು ಇಂತಾ ಕಥೆಗಳಿವೆ. ಅವುಗಳಲ್ಲಿ ಅತಿ ಸ್ವಾರಸ್ಯವಾದ ಕಥೆಯೇ ನಾನು ಮುಂದೆ ಹೇಳಲಿರುವುದು.
               ಮಳೆಗಾಲ ಶುರುವಾಗುತ್ತಿದ್ದಂತೆ ಮಾಲೆನಾಡಿಗೂ ಚುರುಕು ಮುಟ್ಟುತ್ತದೆ. ಅಡಿಕೆ ತೋಟದ ಕಪ್ಪು - ಉದಿ, ತೋಟಕ್ಕೆ ಔಷಧಿ ಸಿಂಪಡಿಸುವುದು, ಗದ್ದೆ ಕೆಲಸ - ಒಂದೇ ಎರಡೇ. ಶೇಷಯ್ಯನಿಗೂ ಒಂದಿಷ್ಟು ಜಮೀನಿತ್ತು. ಎರಡು ಮೂರು ಎಕರೆ ಅಡಿಕೆ ತೋಟ, ಮೂರು ನಾಕು ಎಕರೆ ಭತ್ತದ ಗದ್ದೆ. ಮೊದಲೆಲ್ಲ ಮಲೆನಾಡಿನಲ್ಲಿ ಗದ್ದೆ ಸಾಗುವಳಿ ನಡೆಯುತ್ತಿತ್ತು. (ಇಂದು ಮಲೆನಾಡಿನಲ್ಲಿ ಭತ್ತದ ಗದ್ದೆ ಸಾಗುವಳಿ ತುಂಬಾ ಕಡಿಮೆಯಾಗಿದೆ. ಐದರಲ್ಲಿ ಒಂದು ಭಾಗಕ್ಕೆ ಇಳಿದಿರಬಹುದು. ಭತ್ತದ ಗದ್ದೆಗಳೆಲ್ಲಾ ಒಂದೇ ಕಾಫೀ ಅಡಿಕೆ ತೋಟ ಇಲ್ಲಾ ಅಕೇಶಿಯಾ ನೀಲಗಿರಿ ಪ್ಲಾಂಟೇಷನ್ ಆಗಿವೆ). ಮೊದಲು ಅಗೇಡಿ ಸಿದ್ದಪಡಿಸಿ ಭತ್ತದ ಸಸಿಗಳನ್ನು ಮಾಡಿಕೊಂಡು ಒಂದು ರೌಂಡ್ ಅಡಿಕೆ ಕೊನೆಗಳಿಗೆ (ಶಿಲಿಂದ್ರ ನಾಶಕ ) ಔಷಧಿ ಹೊಡೆದ ನಂತರ ಗದ್ದೆ ಸಾಗುವಳಿ.
                ಶೇಷಯ್ಯನದ್ದೂ  ಗದ್ದೆ ಸಾಗುವಳಿ ನಡೆಯುತ್ತಿತ್ತು. ಗದ್ದೆ ಸಾಗುವಳಿ ಕೆಲಸಗಳೇ ಮಜಾ. ಮೋಡ/ಮಳೆಯ ವಾತಾವರಣ. ಬಿಸಿಲು ನೂರಕ್ಕೆ ನೂರು ಇರುವುದಿಲ್ಲ. ಮುಂಗಾರು ಮುಂಚಿನ ಮಳೆಗೆ ಗದ್ದೆಯಲ್ಲಿ ಹಸಿರು ಹುಲ್ಲು ಬೆಳೆದಿರುತ್ತದೆ. ಗದ್ದೆಗೆ ಗೊಬ್ಬರ ಹಾಕುವುದು, ಗದ್ದೆ ಅಂಚಿನ ಬದಿಯ ಕಳೆಗಿಡಗಳನ್ನು ಸವರುವುದು (=ಅಡೆ ಸೌರುವುದು). ಮಣ್ಣು ಮೆದುವಾದ ಮೇಲೆ (ಎತ್ತು ಅಥವಾ ಟಿಲ್ಲರ್ ಬಳಸಿ) ಹೂಟಿ ಮಾಡುವುದು. ಈಗ ಹಸಿರು ಗದ್ದೆ ಮಣ್ಣು ಅಡಿಮೇಲಾಗಿ ಕೆಂಪು/ಮಣ್ಣುಬಣ್ಣ ಆಗುತ್ತದೆ. ಅನಂತರ ಹಾರೆ ಉಪಯೋಗಿಸಿ ಗದ್ದೆಯ ಅಂಚು(ತುದಿ)ಗಳನ್ನು ಟ್ರಿಮ್ ಮಾಡುವುದು (=ಅಂಚು ಕೆತ್ತುವುದು/ಇಡುವುದು). ಮತ್ತೊಮ್ಮೆ ಟಿಲ್ಲರ್/ಎತ್ತು ಬಳಸಿ ಮಣ್ಣನ್ನು ಸಂಪೂರ್ಣ ಕೆಸರು ಮಾಡುವುದು. ಆಮೇಲೆ ನಳ್ಳಿ ಹೊಡೆದು ಆ ಕೆಸರನ್ನು ಸಮತಟ್ಟು ಮಾಡುವುದು. ಬೇರೆಕಡೆ(ಅಗಡಿ)ಯಲ್ಲಿ ಒತ್ತೊತ್ತಾಗಿ ಬೆಳೆಸಿಟ್ಟ ಭತ್ತದ ಸಸಿಗಳನ್ನ ಕಿತ್ತು ತಂದು ಅದರ ತಲೆ ಕತ್ತರಿಸಿ, ಆ ಕೆಸರು ಗದ್ದೆಯಲ್ಲಿ ನೆಡುವುದು. ಇದಕ್ಕೆ ಮಲೆನಾಡಿನಲ್ಲಿ ನೆಟ್ಟಿ ಅನ್ನುತ್ತಾರೆ. (ಬೇರೆಕಡೆ ನಾಟಿ ಅನ್ನುತ್ತಾರೆ). ಇಷ್ಟೆಲ್ಲಾ ಕೆಲಸಗಳಲ್ಲಿ  ಹೂಟಿ ,ಅಂಚು ಕೆತ್ತುವುದು, ಸಸಿ ಹೋರುವುದು - ಸಾಧಾರಣವಾಗಿ ಗಂಡಸರ ಕೆಲಸ. ಅಡೆ ಸವರುವುದು, ಸಸಿ ಕೀಳುವುದು ಹಾಗೂ ನೆಟ್ಟಿ ನೆಡುವುದು ಹೆಂಗಸರ ಕೆಲಸ. ಇದನ್ನೆಲ್ಲಾ ಓದುವಾಗ ಕೆಲವರಿಗೆ ಹಿಂದಿನದೆಲ್ಲಾ ನೆನಪಾಗಬಹುದು.
               ಶೇಷಯ್ಯನದ್ದೂ  ಗದ್ದೆ ಸಾಗುವಳಿ ಶುರುವಾಗಿತ್ತು. ಅಂಚು, ಹೂಟಿ ನಡೆದು ನೆಟ್ಟಿ ಶುರುವಾಗಿತ್ತು. ಹತ್ತಾರು ಕಾರ್ಮಿಕರ ಮನೆಗೆ ತೆರಳಿ (ಇಲ್ಲಿ ತೆರಳಿ ಅಂದರೆ ಹೇಳಿಕಳುಹಿಸಿ ಎಂದರ್ಥ. ಮೊದಲೆಲ್ಲಾ ಹೇಳಿಕಳುಹಿಸಿದರೂ ಜನ ಕೆಲಸಕ್ಕೆ ಬರುತ್ತಿದ್ದರು. ಇಂದು ಮನೆಗೇ ಹೋಗಿ ಕರೆದರೂ - "ಹೋಗಿ ಅಯ್ಯ ಬರುತ್ತೇನೆ" - ಎಂದು ಹೇಳಿ ಕೈ ಕೊಡುತ್ತಾರೆ!!!) ನೆಟ್ಟಿ ದಿನಕ್ಕೆ ಒಂದಿಷ್ಟು ಹೆಣ್ಣಾಳು ರೆಡಿಮಾಡಿಕೊಂಡಿದ್ದರು. ಕೆಲಸ ಮಾಡುವವರು ಜಾಸ್ತಿಯಿದ್ದರೆ ಕೆಲಸ ಸರಿಯಾಗಿ ಆಗುವುದಿಲ್ಲ. ಇದು ಎಲ್ಲಾ ವ್ಯವಸಾಯಗಾರರಿಗೂ ಅನುಭವಕ್ಕೆ ಬಂದ ವಿಷಯ. ಆದ್ದರಿಂದ ಶೇಷಯ್ಯನೇ ಮುಂದೆನಿಂತು ಮುತವರ್ಜಿಯಿಂದ ಕೆಲಸ ನೋಡಿಕೊಳ್ಳುತ್ತಿದ್ದರು. ಕೆಲಸದಲ್ಲಿ ಕಳ್ಳತನ ಮಾಡುವವರನ್ನು ಆಗಾಗ್ಯೆ ಎಚ್ಚರಿಸುತ್ತಲೇ ಇದ್ದರು.
                ನೆಟ್ಟಿಮಾಡುವವರಿಗೆ ಹನ್ನೊಂದುವರೆ ಹೊತ್ತಿಗೆ ಒಂದು ಕಾಫೀ ಸಮಾರಾಧನೆಯಿರುತ್ತದೆ. (ಕಾಫೀ ಎಂದರೆ ಕಪ್ಪು ಡಿಕಾಕ್ಷನ್ನಿಗೆ ಹಾಲು ತೋರಿಸಿರುತ್ತಾರೆ. ಬಿಸಿಯಿದ್ದರೆ ಸರಿ. ಕೆಲಸಗಾರರಿಗೆ ಆ ಮಳೆಯಲ್ಲಿ ಜೀವಾಮೃತ). ಕಾಫಿಯಾದಮೇಲೆ ಒಂದು ರೌಂಡ್ ಎಲೆ ಅಡಿಕೆ/ಹೊಗೆಸೊಪ್ಪು ಕಾರ್ಯಕ್ರಮವಿರುತ್ತದೆ. ಶೇಷಯ್ಯ ಇನ್ನೂ ನೆಟ್ಟಿ ಮಾಡಬೇಕಾದ ಜಾಗಕ್ಕೆ ಸಸಿಯ ಕಟ್ಟುಗಳ್ಳನ್ನು ಅಲ್ಲಲ್ಲಿ ಹಾಕಿ, ಪಕ್ಕದಲ್ಲೇ ಕೂಗಳತೆ ದೂರದಲ್ಲೇ ಇದ್ದ ಮನೆಗೆ ಹೊರಡುತ್ತಾರೆ. ಕಾಫೀಬ್ರೇಕ್ ಆದಮೇಲೆ ಕೆಲಸ ಹಿಡಿಸಿಯೇ ಹೊರಡಬೇಕು. ಇಲ್ಲಾಂದ್ರೆ ಕಥೆ ಮುಗೀತು. ಕೂತವರು ಏಳೋದೇ ಇಲ್ಲ!!! ಕೆಲಸಗಾರರ ಹಾಗೂ ಕೆಲಸಕೊಡುವವರ ಜಾಣತನ ಬರೆಯುತ್ತಾ ಹೋದರೆ ಅದೇ ಒಂದು ದೊಡ್ಡ ಕಥೆ.
                  ಮನೆಗೆ ಹೋಗಿ ಒಂದು ರೌಂಡ್ ಕಾಫೀ ಮುಗಿಸಿ ಶೇಷಯ್ಯ ಸ್ನಾನಕ್ಕೆ ಹೋಗುತ್ತಾರೆ. ಆಗಿನ ಕಾಲದ ಸ್ನಾನದ ವ್ಯವಸ್ಥೆಯೇ ಮಜಾ. ಹಂಡೆ. ಹಂಡೆಯಲ್ಲಿ ಸದಾ ಹಬೆಯಾಡುತ್ತಿರುವ ಬಿಸಿನೀರು. ಅಡಿಕೆಮರದ  ದೋಣಿಯಲ್ಲಿ (U ಶೇಪಿನ ಖಾಂಡದ ಬಾಗ) ಹರಿದು ಬರುವ ತಣ್ಣೀರು (ಮಲೆನಾಡು ಭಾಷೆಯಲ್ಲಿ ವಾಗುಂದೆ ನೀರು). ನಲ್ಲಿ/ಗಿಲ್ಲಿ ಕೆಲವೇ ಕೆಲವರ ಮನೆಯಲ್ಲಿ. (ಕೆಲವು ಶ್ರೀಮಂತರ ಮನೆಯಲ್ಲಿ ಅಪರೂಪದ ಅತಿಥಿಗಳು ಪೇಟೆಯಿಂದ ಬಂದಾಗ - ಲೋಕಲ್ ಬಾತ್ ಟಬ್ - ಕಡಾಯ ಸ್ನಾನದ ಗಮ್ಮತ್ತಿರುತ್ತಿತ್ತು. ಸೊಂಟಕ್ಕೆ ತೆಳು ಟವಲ್ ಸುತ್ತಿಕೊಂಡು, ಹಂಡೆಯಿಂದ ಬಿಸಿನೀರು ತೋಡಿ ತಾಮ್ರದ ಸಣ್ಣ ಕಡಾಯಿಗೆ ಹಾಕಿಕೊಂಡು, ಅದಕ್ಕೆ ತಣ್ಣೀರು ಸೇರಿಸಿ ನೀರು ಹದಮಾಡಿಕೊಂಡು, 'ಶಿವ ಶಿವಾ' ಎನ್ನುತ್ತಾ ಶೇಷಯ್ಯ ಇತ್ತ ಸ್ನಾನ ಶುರುಮಾಡುತ್ತಿದ್ದಂತೆ ಅತ್ತ ----------
                                          ------ಅತ್ತ ಗದ್ದೆಯಲ್ಲಿ----
                    ನೆಟ್ಟಿ  ನೆಡುವ ಹೆಂಗಸರ ಜಗಳ ಶುರುವಾಗಿದೆ!!!! ಹೆಂಗಸರ ಜಗಳ ಮಹಾಯುದ್ಧಕ್ಕೆ ಸಮ. ಚಿಕ್ಕಪುಟ್ಟ ವಿಷಯಕ್ಕೆ ಶುರುವಾಗುವ ಜಗಳ ಜೋರಾಗಿ ಕೆಟ್ಟಕೆಟ್ಟದಾಗಿ ಬೈದುಕೊಳ್ಳುವುದರಲ್ಲಿ ಕೆಲವೊಮ್ಮೆ ಪೆಟ್ಟಿನಲ್ಲಿ ಕೊನೆಯಾಗುತ್ತದೆ. ಇಲ್ಲೂ ಹೀಗೇ ಆಗಿದೆ. ಜಗಳಕ್ಕೆ ಕಾರಣವಾಗುವ 'ಚಿಕ್ಕಪುಟ್ಟ ವಿಷಯ' ಯಾವುದು ಬೇಕಾದರೂ ಆಗಬಹುದು. ಜಿಲ್ಲಾ ಕೇಂದ್ರದಲ್ಲಿ ಊರ ಹುಡುಗಿ ಯಾರದ್ದೋ ಜೊತೆ ಸಿನೆಮಾ ಟಾಕೀಸ್ ಪಕ್ಕ ಕಾಣಿಸಿಕೊಂಡಿದ್ದು ಊರಿನವರ್ಯಾರೋ ನೋಡಿದ್ದು, ಇನ್ಯಾರದ್ದೋ ಬೆಳೆದ ಹುಡುಗಿ ಇರುವ ಮನೆಗೆ ಇನ್ಯಾರೋ ಹುಡುಗ/ಗಂಡಸು ಏನೋ ನೆಪ ಎತ್ತಿ ಪದೇಪದೇ ಹೋಗುವುದು, ಯಾರೋ ಸೊಸೆ ಅತ್ತೆಗೆ ಕಾಟ ಕೊಡುವುದು - ಯಾವುದೇ ಘಟನೆಯನ್ನು ತಾವು ನೋಡಿದ್ದಾಗಿ ಹೇಳುವುದಿಲ್ಲ. ಯಾರೋ ಹೇಳುತ್ತಿದ್ದರು ಎಂದು ಹೇಳಿ 'ನಮಗ್ಯಾಕ್  ಇನ್ನೊಬ್ರ ವಿಷ್ಯಾ?' ಎಂದು ತೇಲಿಸಿ ಹೇಳುತ್ತಾರೆ. ಆ ಮಾತಿನಲ್ಲಿ ಯಾರನ್ನೋ ಚುಚ್ಚುವ ಒಳ ಉದ್ದೇಶ ಇರುತ್ತದೆ. ಅವರು ಸುಮ್ಮನಿರುತ್ತಾರಾ? ಇವರ ನೆಂಟರ ಯಾವುದೋ ಹುಳುಕನ್ನು ಹೆಸರು ಹೇಳದೇ ಎತ್ತುತ್ತಾರೆ. ಮೊದಲು ದೂರದ ಸಂಬಂದಿಕರ ವಿಷಯದಲ್ಲಿ ಹರಿದಾಡುವ ಜಗಳ ಕೊನೆಗೆ ಕಾಲಬುಡಕ್ಕೇ ಬರುತ್ತದೆ.
                 'ನೀ ಬೋಸುಡಿ', 'ನೀ ಹಡಬೆ', 'ನೀ ರಂಡೆ' - ಎಂದು ಹೆಂಗಸರು ಪರಸ್ಪರ ಕೂಗಾಡುವುದು ಬಚ್ಚಲಮನೆಯಲ್ಲಿ ಸ್ನಾನಮಾಡುತ್ತಿದ್ದ ಶೇಷಯ್ಯನ ಕಿವಿಗೆ ಬಿದ್ದಿದೆ. ಈ ರೀತಿ ಜಗಳ ನಡೆಯುತ್ತಿರುವಾಗ ನೆಟ್ಟಿ ನೆಡುವ ಕೆಲಸ ಯಾವ ವೇಗದಲ್ಲಿ ನಡೆಯುತ್ತಿರುತ್ತದೆಯೆಂಬುದು ಅರಿಯದವರಷ್ಟು ದಡ್ಡರೇನಲ್ಲ ಶೇಷಯ್ಯ. ಜಗಳ ಇಬ್ಬರ ನಡುವೆ ನಡೆಯುತ್ತಿದ್ದರೂ - ಉಳಿದ ಹತ್ತಾರು ಜನ ನೆಟ್ಟಿ ನೆಡುವವರು - ಒಂದೆರೆಡು ನಟ್ಟಿ  ನೆಡುವುದು, ಜಗಳ ಆಲೇಸುತ್ತಾ ನಿಲ್ಲುವುದು - ಹೀಗೆಯೇ ನಡೆಯುತ್ತಿದೆ. ಅವರಿಗೆ ಸಂಬಳಕೊಡುವ ಶೇಷಯ್ಯನಿಗೆ ಎಷ್ಟು ಉರಿಯುತ್ತಿರಬೇಡ?
                  ಮಣಮಣ ಮಂತ್ರ ಹೇಳುತ್ತಾ ಸ್ನಾನಮಾಡುತ್ತಿದ್ದ ಶೇಷಯ್ಯ, 'ಎಲ ಎಲಾ  ಹಾಹಾಹಾಳಾದವರಾ, ತತತತಡಿರಿ ಬಂದೆ,ಬಂದೆ' ಎಂದು ಹೇಳುತ್ತಾ ಗಡಿಬಿಡಿಯಲ್ಲಿ ಸ್ನಾನ ಮುಗಿಸಿದ್ದಾರೆ. ಗಡಿಬಿಡಿಯಲ್ಲೇ ಮೈವರೆಸಿಕೊಂಡು, ಕೌಪೀನವನ್ನು ಉಡಿದಾರಕ್ಕೆ ಸುತ್ತಿ, (ಹಿಂದೆಲ್ಲಾ (ಈಗಲೂ ಕೆಲವರು) ವಯಸ್ಸಾದವರು ಎಲಾಸ್ಟಿಕ್ ರೆಡಿಮೇಡ್ ಕಾಚ ಹಾಕಿಕೊಳ್ಳುತ್ತಿರಲಿಲ್ಲ. ಬದಲಾಗಿ, ಸೊಂಟದ ಸುತ್ತ ಕಟ್ಟಿರುವ ಲೋಹದ ತೆಳು ಉಡಿದಾರಕ್ಕೆ ಉದ್ದದ ಬಟ್ಟೆಯನ್ನು ಒಂದೆರೆಡು ಪದರ ಮಾಡಿ ಮುಂಬಾಗ ಹಾಗು ಹಿಂಬಾಗಕ್ಕೆ ಕಾಚದ ತರ ಸಪೋರ್ಟ್ ಬರುವಂತೆ ಸುತ್ತುತ್ತಾರೆ), ಮೈ ಒರೆಸಿಕೊಂಡು ತೆಳು ಟವೆಲ್ಲನ್ನೇ ಸೊಂಟಕ್ಕೆ ಸುತ್ತಿಕೊಂಡು-----
                                                               'ಪಪಪಪರ್ದೇಶಿಗಳು, ಇಇಇಇವತ್ತಿಗೇ ನೆಟ್ಟಿ ಮುಗಿಸ್ಬೇಕು ಅಂತ್ ನೋಡಿದ್ರೆ ಗಲಾಟೆ ಮಾಡ್ತಿದಾವೆ. ಬಬಬಬಂದೆ.ಬಂದೇ' ಎನ್ನುತ್ತಾ ಬಿರಬಿರನೆ ಉದ್ದುದ್ದ ಕಾಲು ಹಾಕುತ್ತಾ, ಸಟಸಟ ಕೈಬೀಸುತ್ತಾ, ಗಡಿಬಿಡಿಯಲ್ಲಿ ಬಚ್ಚಲಮನೆಯಿಂದ ಗದ್ದೆಯ ಕಡೆ ಓಡೋಡುತ್ತಾ ಹೊರಟರು. ಮದ್ಯ ಸಿಕ್ಕ ತಡಮೆಯನ್ನು ಸರಕ್ಕನೆ ದಾಟಿದರು. (ಈ ತಡಮೆ ಎಂಬ ಪದಕ್ಕೆ ಅರ್ಥ ಮಲೆನಾಡಿಗರನ್ನು ಬಿಟ್ಟು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಮಲೆನಾಡಿನಲ್ಲಿ ಅವರವರ ಮನೆಪಕ್ಕ ಅವರವರ ಜಮೀನು ಇರುವುದರಿಂದ ಬೇಲಿಯ ಅಗತ್ಯತೆ ಹೆಚ್ಚು. ೩೬೫ ದಿನ ಜಾನುವಾರುಗಳನ್ನು ತಪ್ಪಿಸಲು ಅಡಿಕೆ ತೋಟಕ್ಕೇ ಬೇರೆ ಬೇಲಿ, ವರ್ಷಕ್ಕೆ ಮೂರ್ನಾಲ್ಕು ತಿಂಗಳು ಮಾತ್ರ ಜಾನುವಾರುಗಳಿಂದ ತಪ್ಪಿಸಲು ಗದ್ದೆಗೇ ಬೇರೆ ಬೇಲಿ - ಹೀಗೆಲ್ಲಾ ಇರುತ್ತದೆ. ಜಮೀನೆಲ್ಲಾ ಒಂದುಸುತ್ತು ಬರಬೇಕಾದರೆ ಒಂದೆರೆಡು ಕಡೆಯೆಲ್ಲಾದರೂ ಬೇಲಿ ದಾಟಲೇಬೇಕು. ಅಂದಾಜು ಐದು ಅಡಿ ಎತ್ತರವಿರುವ ಈ ಬೇಲಿಗಳನ್ನು ಸರಾಗವಾಗಿ ದಾಟಲು ಮಲೆನಾಡಿಗರು ಮಾಡಿಕೊಂಡಿರುವ ವ್ಯವಸ್ಥೆಯೇ ತಡಮೆ (ಮತ್ತು ಉಣುಗೋಲು). ಅರ್ಧ ಅಡಿ ಎತ್ತರದ ಕಲ್ಲು ಮೊದಲ ಮೆಟ್ಟಿಲು, ಅದನ್ನು ಹತ್ತಿ, ಒಂದೂವರೆ ಅಡಿ ಎತ್ತರದಲ್ಲಿ, ಮೂರು ಅಡಿಕೆಮರದ ಖಾಂಡವನ್ನು ಅಡ್ಡಡ್ಡ ಒಟ್ಟಿಗೆ ಜೋಡಿಸಿದ ಚಿಕ್ಕ ಅಟ್ಟಳಿಗೆ, ಅದನ್ನು ಹತ್ತಿ, ಈಗ ಬೇಲಿ ಎತ್ತರ ಕಡಿಮೆಯಾಗಿರುತ್ತದೆ, ಅನಂತರ ಆಚೆ ದಾಟುವುದು,ಬೇಲಿಯ ಇನ್ನೊಂದು ಕಡೆಯಲ್ಲೂ ಇದೇ ರೀತಿ ವ್ಯವಸ್ಥೆ. ಅಲ್ಲಿ ಇಳಿಯುವುದು. ಇದಕ್ಕೆ 'ತಡಮೆ' ಅನ್ನುತ್ತಾರೆ).
                    ಸೀದಾ ನೆಟ್ಟಿ ನೆಡುತ್ತಿದ್ದ ಗದ್ದೆಯ ಪಕ್ಕಕ್ಕೇ ಸರಸರನೆ ಓಡಿಹೋಗಿ ನಿಂತು ಸಿಟ್ಟಿನಿಂದ ಗಟ್ಟಿ ದನಿಯಲ್ಲಿ ಅಬ್ಬರಸಿದರು - "ಎಎಎಲಾ  ಎಲಾ ನಿಮ್ಮ, ನೆಟ್ಟಿನೆಡಿ ಅಂದ್ರೆ ಪುರಾಣ ಹೊಡಿತಿದ್ದೀರಲ್ಲಾ, ಅಬ್ಬಾ ನಿಮ್ ಸೊಕ್ಕೇ". ಅಲ್ಲಿಯವರೆಗೂ ನೆಟ್ಟಿ ನೀಡುತ್ತಾ ಹಾಗೂ ಜಗಳವಾಡುತ್ತಿದ್ದ ಹೆಂಗಸರು - ಒಮ್ಮೆ ತಿರುಗಿ - ಕೂಗುತ್ತಾ ಬಯ್ಯುತ್ತಾ ಬರುತ್ತಿದ್ದ ಶೇಷಯ್ಯನ ಕಡೆ ನೋಡಿ - ನೆಟ್ಟಿ ನೆಡಲು ಕಯ್ಯಲ್ಲಿ ಹಿಡಿದುಕೊಂಡಿದ್ದ ಭತ್ತದ ಸಸಿಗಳನ್ನು ಅಲ್ಲೇ ಬಿಸಾಡಿ - ಎದ್ದೆವೋ ಬಿದ್ದೆವೋ ಎಂದು ಸೀದಾ ಗದ್ದೆಯಿಂದ ಓಟ ಕಿತ್ತು - ಪಕ್ಕದ ಅಡಿಕೆತೋಟಕ್ಕೆ ಹೋಗಿ - ಮುಖ ಆ ಕಡೆ ತಿರುಗಿಸಿ ಮುಸಿಮುಸಿ ನಗುತ್ತಾ ನಿಂತರು!!!!
                   ಯಾಕೆ ಹಾಗೆ ಮಾಡಿದರು? ಅಲ್ಲಿರುವುದೇ ಸ್ವಾರಸ್ಯ.
                    ಸಿಟ್ಟಿನಿಂದ ವೇಗವಾಗಿ ಗದ್ದೆಗೆ ಹೋಗುವ ಸಮಯದಲ್ಲಿ - ಕಾಲೆತ್ತಿ ತಡಮೆ ದಾಟುವಾಗ - ಶೇಷಯ್ಯ ಸೊಂಟಕ್ಕೆ ಸುತ್ತಿಕೊಂಡಿದ್ದ ಟವೆಲ್ ಜೊತೆಗೆ ಕೌಪೀನ - ಎರಡೂ ಕೂಡ - ಬೇಲಿಯ ಗೂಟಕ್ಕೆ ಸಿಕ್ಕಿಹಾಕಿಕೊಂಡಿದೆ. ಆ ಗಡಿಬಿಡಿಯಲ್ಲಿ ಸಿಟ್ಟಿನಲ್ಲಿ ಶೇಷಯ್ಯ ಅದನ್ನು ಗಮನಿಸಿಯೇ ಇಲ್ಲ!!!!! ಬರಿಮಯ್ಯಲ್ಲಿ ದುರದುಂಡೇಶ್ವರನಾಗಿ ಶೇಷಯ್ಯ ನೆಟ್ಟಿ ನೆಡುವ ಹೆಂಗಸರಿಗೆ ದರ್ಶನ ನೀಡಿದ್ದಾರೆ!!!!! ಪಾಪ. ನಮ್ಮ ಮಲೆನಾಡ ಹೆಂಗಸರು ಗದ್ದೆಯಿಂದ ಓಡಿಹೋಗದೆ ಇನ್ನೇನು ಮಾಡಿಯಾರು!!!!!
                     ಮಲೆನಾಡಿನಲ್ಲಿ ಇನ್ನೂ ಸ್ವಾರಸ್ಯದ ಅದೆಷ್ಟೋ ಜನ ಆಗಿಹೋಗಿದ್ದಾರೆ. ರೋಚಕ ಅದೆಷ್ಟೋ ಕಥೆಗಳಿವೆ. ಮುಂದೆಂದಾದರೂ ಒಮ್ಮೆ ಅವನ್ನ ಹೇಳುವೆ. ಬರಹಗಳಿಗೆ ಟಾನಿಕ್ ಎಂದರೆ ನಿಮ್ಮ ಕಾಮೆಂಟುಗಳು. ಕಾಯುತ್ತಿರುವೆ ನಿಮ್ಮ ಕಾಮೆಂಟುಗಳಿಗೆ. ತುಂಬಾ ಇಷ್ಟವಾದರೆ Face Book ನಲ್ಲಿ ಹಂಚಿಕೊಳ್ಳಿ.