Wednesday, October 24, 2012

ಕೆನಡಾದ ಆಲ್ಬೆರ್ಟಾ. ಇಲ್ಲಿ ಮರಳು ಹಿಂಡಿದರೆ ಕಪ್ಪು ಚಿನ್ನ !!!!!



          ಕನ್ನಡ ಕೋಟ್ಯಾದಿಪತಿ ನಡೆಯುತ್ತಿದೆ. ನೀವು ಪುನೀತ್ ರಾಜ್ ಕುಮಾರ್ ಎದುರು ಕೂತಿದ್ದೀರಿ. ಪ್ರಶ್ನೆ ತೂರಿಬರುತ್ತದೆ - ಪ್ರಪಂಚದ ಅತ್ಯಂತ ದೊಡ್ಡ ತೈಲ ನಿಕ್ಷೇಪ ಎಲ್ಲಿದೆ?  ನಾಲ್ಕು ಸಂಭಾವ್ಯ ಉತ್ತರಗಳು ಮೂಡುವ ಮೊದಲೇ ನೀವು ಉತ್ತರಿಸುತ್ತೀರಿ – ಮಿಡ್ಲ್ ಈಸ್ಟ್ . ಹೌದು. ಸೌದಿ ಅರೇಬಿಯಾ, ಕುವೈತ್, ಏಮನ್ ಹಾಗು ಅರಬ್ ಎಮಿರೇಟ್ಸ್ – ಮೊದಲಾದ ತೈಲದ ದುಡ್ಡಿನ ಮೇಲೇ ಕೂತಿರುವ ದೇಶಗಳಿರುವ ಮದ್ಯಪ್ರಾಚ್ಯ (ಮಿಡ್ಲ್ ಈಸ್ಟ್) – ಪ್ರಪಂಚದ ಅತಿದೊಡ್ಡ ತೈಲ ನಿಕ್ಷೇಪವಿರುವ ಪ್ರದೇಶ. ತೈಲ (ಹಾಗೂ ಅದರ ಉಪಯೋಗ) ಗೊತ್ತಾದಲ್ಲಿಂದ ಬಿಲಿಯನ್ ಗಟ್ಟಲೆ ಬ್ಯಾರಲ್ ತೈಲ ಅಲ್ಲಿನ ತೈಲಬಾವಿಗಳಿಂದ ತೆಗೆಯಲ್ಪಟ್ಟಿದೆ/ತೆಗೆಯಲ್ಪಡುತ್ತಿದೆ. ಹಾಗಾದರೆ ಈಗ ನನ್ನ ಪ್ರಶ್ನೆ- ಪ್ರಪಂಚದ ಎರೆಡನೇ ಅತಿದೊಡ್ಡ ತೈಲ ನಿಕ್ಷೇಪ ಯಾವುದು? ಎಲ್ಲಿದೆ?? ಯಾವುದಿರಬಹುದು? ರಷ್ಯಾದ – ಲಕ್ಷಾಂತರ ಬ್ಯಾರಲ್ ತೈಲ/ಅನಿಲವನ್ನು ದಿನನಿತ್ಯ ತೆಗೆದು ಯೂರೋಪ್ ದೇಶಗಳಿಗೆ ಪಂಪ್ ಮಾಡುವ – ಖಾಂಟಿ-ಮಾನ್ಸಿ ಪ್ರದೇಶವೇ? ಅಥವಾ ಕಪ್ಪು ಸಮುದ್ರದ ಸುತ್ತಮುತ್ತಲಿನ ಸೋವಿಯತ್ ಒಕ್ಕೂಟದಿಂದ ಹೊರಬಂದ ಹೊಸಹೊಸ ದೇಶಗಳೇ?? ಅಥವಾ ಆಫ್ರಿಕಾದ ನೈಜಿರಿಯಾದಲ್ಲಿನ ನೈಜರ್ ನದಿಯ ಡೆಲ್ಟಾವೇ???  ಊಹೂ೦. ಇದ್ಯಾವುದೂ ಅಲ್ಲ. ಪ್ರಪಂಚದ ಎರೆಡನೇ ಅತಿ ದೊಡ್ಡ ತೈಲ ನಿಕ್ಷೇಪವಿರುವುದು ಕೆನಡಾದ ಪಶ್ಚಿಮದ ಆಲ್ಬೆರ್ಟಾ ಪ್ರದೇಶದಲ್ಲಿ. ಬೇರೆಡೆಗಳಲ್ಲೆಲ್ಲಾ ನೆಲದಾಳಕ್ಕೆ ರಂದ್ರ ಕೊರೆದು, ಮೊದಲು ಸಿಗುವ ಗ್ಯಾಸನ್ನು ತೆಗೆದು ಅನಂತರ ತೈಲವನ್ನು ಪಂಪ್ ಮಾಡಿ ತೆಗೆಯಬೇಕು.(ಕೆಲವು ದಶಕಗಳ ಹಿಂದೆ ತೈಲಬಾವಿ ಕೊರೆವಾಗ ಮೊದಲು ಸಿಗುವ ಗ್ಯಾಸನ್ನು ಬೆಂಕಿಕೊಟ್ಟು ಉರಿಸಿ ಅದು ಖಾಲಿಯಾದಮೇಲೆ ತೈಲ ತೆಗೆಯುತ್ತಿದ್ದರಂತೆ!!!)  ಆದರೆ ಆಲ್ಬೆರ್ಟಾದಲ್ಲಿ – ನಂಬಿದರೆ ನಂಬಿ ಬಿಟ್ಟರೆ ಬಿಡಿ – ಸಾವಿರ ಸಾವಿರ ಕಿ.ಮೀ ಪ್ರದೇಶದಲ್ಲಿ – ಭೂಮಿಯ ಮೇಲ್ಮೈಯಲ್ಲೇ ತೈಲ ಅಡಗಿ ಕೂತಿದೆ -  ಮರಳಿನೊಡನೆ ಸೇರಿಕೊಂಡು – ಟಾರ್ ರೂಪದಲ್ಲಿ!!! ಈ ಅಚ್ಚರಿಯನ್ನು ನಿಮಗೆ ತಿಳಿಸುವ ಉದ್ದೇಶವೇ ಈ ಬ್ಲಾಗ್ ಲೇಖನ (ಕೆಲವರಿಗೆ ಬೋರಾಗಬಹುದು!!!).
            ಕೆನಡಾ ನಿಮಗೇ ಗೊತ್ತಿರುವಂತೆ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. (ವಿಸ್ತೀರ್ಣಕ್ಕೆ ಹೋಲಿಸಿದರೆ) ಜನಸಂಖ್ಯೆ ಕಡಿಮೆ. ಚಳಿಗಾಲದಲ್ಲಿ ಹಿಮಮುಚ್ಚುವ ಹಾಗೂ ಜವುಗಿನಿಂದ ಕೂಡಿದ ಕೆನಡಾದ ಪಶ್ಚಿಮದ ಆಲ್ಬೆರ್ಟಾ ಪ್ರಾಂತ್ಯದ ಹೆಚ್ಚಿನಭಾಗ ವ್ಯವಸಾಯಕ್ಕೆ ಅನುಪಯುಕ್ತ. ಎತ್ತರೆತ್ತರ ಮರಗಳ ಕಾಡು, ಜವುಗು ನೆಲ ಹಾಗೂ ಸರೋವರಗಳಿಂದ ಕೂಡಿದೆ. ಆದರೆ ನೆಲಮಟ್ಟದಿಂದ ಕೆಲವೇ ಅಡಿಗಳ ಕೆಳಗೆ ಮರಳು ಮಿಶ್ರಿತ ಭೂಮಿಯಿದೆ. ಈ ನೆಲದಡಿಯ ಮರಳಿನಲ್ಲಿ – ಕೆಲವೊಂದು ಸ್ಥಳದಲ್ಲಿ – ೧೦% ಗಿಂತಲೂ ಹೆಚ್ಚು ಪೆಟ್ರೋಲ್ (ಬಿಟುಮಿನ್=ಟಾರ್ ರೂಪದಲ್ಲಿ) ಬೆರೆತಿದೆ!!! ಆ ಪ್ರಾಂತ್ಯದಲ್ಲಿ ಕೆಲವು ಸಾವಿರ ಕಿಲೋಮೀಟರ್ ಅಂತಹದೇ ತೈಲಮಿಶ್ರಿತ ಮರಳಿದೆ. ಅಲ್ಲಿ ತೈಲಮಿಶ್ರಿತ ಮರಳಿರುವುದೂ, ಅದನ್ನು ಸಂಸ್ಕರಿಸಿ ಪೆಟ್ರೋಲಿಯಂ ಪಡೆಯಬಹುದೆಂಬುದೂ ಹಲವಾರು ದಶಕಗಳ ಹಿಂದೆಯೇ ವಿಜ್ಞಾನಿಗಳಿಗೆ ಗೊತ್ತಿದ್ದಿದ್ದೆ. ಆದರೆ ಸಂಸ್ಕರಣೆ ಖರ್ಚೇ ಹೆಚ್ಚುಬರುತ್ತದೆಂದು ತೈಲಕಂಪನಿಗಳು ಅತ್ತ ಗಮನಕೊಟ್ಟಿರಲಿಲ್ಲ. ಆದರೆ – (ಅಮೇರಿಕಾ ವ್ಯಾಖ್ಯಾನಿಸುವಂತೆ!!!) ಯಾವಾಗ ಚೀನಾ ಹಾಗೂ ಭಾರತದ ಜನರುಗಳಲ್ಲಿ ನಾಕು ಕಾಸು ಸೇರಲು ಪ್ರಾರಂಭವಾಯಿತೋ – ಪ್ರಪಂಚದ ತೈಲಮಾರುಕಟ್ಟೆಯ ಚಿತ್ರಣವೇ ಉಹಿಸಲಾಗದಂತೆ ಬದಲಾಯಿತು. ಒಂದು ದಶಕದೀಚೆಗೆ ಪೆಟ್ರೋಲಿಯಂ ಬೆಲೆ ಇದ್ದಕ್ಕಿದ್ದಂತೆ ಹೆಚ್ಚಾಗಲಾರಂಬಿಸಿತು. ಆಗ ತೈಲಕಂಪನಿಗಳ ಕಣ್ಣುಬಿದ್ದಿದ್ದೇ ಕೆನಡಾದ ಆಲ್ಬೆರ್ಟಾ. ತೈಲಶೋಧನೆಯ ಖರ್ಚೇ ಇಲ್ಲದ (ನೆಲದಾಳದ ತೈಲಸಂಗ್ರಾಹ ಶೋಧಿಸಲು ತೈಲ ಕಂಪನಿಗಳು ಮಿಲಿಯನ್ ಗಟ್ಟಲೆ ಡಾಲರ್ ಖರ್ಚುಮಾಡುತ್ತವೆ. ಅಷ್ಟು ಖರ್ಚು ಮಾಡಿದರೂ ನೆಲದಾಳದಲ್ಲಿ ತೈಲ ಸಿಕ್ಕೇಬಿಡುತ್ತದೆ ಅಥವಾ ಇಂತಿಷ್ಟೇ ತೈಲ ಸಿಗುತ್ತದೆಯೆಂದು ಹೇಳಲಾಗುವುದಿಲ್ಲ!!) – ಕೇವಲ ಸಂಸ್ಕರಣೆಯ ಖರ್ಚುಮಾತ್ರವಿರುವ – ಆಲ್ಬೆರ್ಟಾಕ್ಕೆ ತೈಲಕಂಪನಿಗಳು ಲಗ್ಗೆಯಿಟ್ಟಿದ್ದು ಆಶ್ಚರ್ಯವೇನಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ೬೫ ಡಾಲರ್/ಬ್ಯಾರಲ್ ಹೆಚ್ಚಿದ್ದರೆ ಮಾತ್ರ ಗಣಿಗಾರಿಕೆ ಲಾಭವಂತೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ತೈಲಬೆಲೆ ಎಂದೂ ಅದಕ್ಕಿಂತ ಕೆಳಗೆ ಬರುವ ಲಕ್ಷಣಗಳೇ ಇಲ್ಲ!! ಆದ್ದರಿಂದ ಆಲ್ಬೆರ್ಟಾದಲ್ಲಿ ಮರಳು ತೈಲ ಗಣಿಗಾರಿಕೆ ನಿರಂತರ.
             ಪಾಶ್ಚಿಮಾತ್ಯರು ಏನೇ ಮಾಡುವುದಾದರೂ ಮಾನವಶ್ರಮ ಅತೀ ಕಡಿಮೆ ಅಗತ್ಯತೆ ಬರುವಹಾಗೆ ಹಾಗೂ ಯಂತ್ರಗಳೇ ಹೆಚ್ಚಿನ ಎಲ್ಲಾ ಕೆಲಸಮಾಡುವಂತೆ ಯೋಜನೆಗಳನ್ನು ಹಾಕಿಕೊಂಡೇ ಕೆಲಸ ಪ್ರಾರಂಬಿಸಿ ಮಾಡುತ್ತಾರೆ. ಈ ತೈಲ ಮಿಶ್ರಿತ ಮರಳ ಗಣಿಗಾರಿಕೆನೂ ಹಾಗೆನೇ. ನಾನು ಮೊದಲೇ ಹೇಳಿದೆ. ದೊಡ್ದಮರಗಳ ಕಾಡು ಹಾಗೂ ಹಸಿರು ಹುಲ್ಲುಗಾವಲಿರುವ ಜವುಗು ನೆಲದ ಕೆಳಗೆ ತೈಲ ಮಿಶ್ರಿತ ಮರಳಿದೆಯೆಂದು.(ನಾವೆಲ್ಲಾ ತೋಟದಲ್ಲಿ ಬೆಳೆದ ಕಳೆಯನ್ನು ಕತ್ತರಿಸುವಂತೆ) ಹಾರ್ವೆಸ್ಟರ್ ಗಳೆಂಬ ಯಂತ್ರಗಳು ಮರಗಳನ್ನು ಕ್ಷಣಾರ್ದದಲ್ಲಿ ಕತ್ತರಿಸಿ ಬಿಸಾಡುತ್ತವೆ!! ಅವುಗಳ ಬೇರುಗಳು ಹಾಗೂ ಸ್ವಲ್ಪ ಮಣ್ಣೂ ಇರುವ ಭೂಮಿಯ ಮೆಲ್ಪದರವನ್ನು ಕಿತ್ತು ಎಳೆಯಲಾಗುತ್ತದೆ!!! 
ಕ್ಯಾಟರ್ಪಿಲ್ಲರ್ 797B
            ಅನಂತರ ಸಿಗುವುದೇ ಟಾರಿನ ವಾಸನೆಯಿರುವ, ಜಿಗುಟು ಜಿಗುಟಾದ, ಕಪ್ಪು ಬಣ್ಣದ ತೈಲಮಿಶ್ರಿತ  ಮರಳು. ಈಗ ಅರ್ಥ್ ಮೂವರ್ಸ್ (ಸಾಮಾನ್ಯ ಆಡುಭಾಷೆಯಲ್ಲಿ ಜೇಸಿಬಿ!!) ಗಳ ಸರದಿ. ಅಂತಹ ಮರಳನ್ನ ಕಿತ್ತು ದೊಡ್ಡ ದೊಡ್ಡ ಗುಪ್ಪೆಹಾಕುತ್ತವೆ. ಅರ್ಥ್ ಮೂವರ್ ಗಳೇ ನಾಲ್ಕೈದು ಮಹಡಿಗಳಷ್ಟು ಎತ್ತರವಿರುತ್ತವೆ!! ಇನ್ನು ಮರಳಗುಪ್ಪೆಗಳು ಚಿಕ್ಕಬೆಟ್ಟದಂತೆಯೇ ಇರುತ್ತವೆ. ಅನಂತರ ಈ ತೈಲ ಮಿಶ್ರಿತ ಮರಳನ್ನು ಟ್ರಕ್ ಗಳಿಗೆ ಲೋಡ್ ಮಾಡುವುದು. ಟ್ರಕ್ ಗಳೆಂದರೆ ಅಂತಿಂತಾ ಟ್ರಕ್ ಗಳಲ್ಲ. ಪ್ರಪಂಚದ ಅತೀ ದೊಡ್ಡ ಟ್ರಕ್ ಗಳು – ಕ್ಯಾಟರ್ಪಿಲ್ಲರ್ 797B – ಅದರ ಚಕ್ರಗಳೇ ಎರಡಾಳೆತ್ತರ ಇರುತ್ತವೆ – ಅರ್ಥ್ ಮೂವರ್ ಗಳ ಬಕೆಟ್ ಗಳು ಆ ಮರಳಿನ ಬೆಟ್ಟಕ್ಕೆ ಚುಚ್ಚಿ (ಒಂದು ಬಕೆಟ್ ನಲ್ಲೇ ಕೆಲವು ಟನ್ ಮರಳು ಬರುತ್ತದೆ!!!) – ಅಂತಹಾ ಟ್ರಕ್ ಗಳಿಗೆ ಮರಳು ಲೋಡ್ ಮಾಡುತ್ತವೆ. ಟನ್ ಗಟ್ಟಲೆ ಮರಳನ್ನ ಹೊತ್ತ ಟ್ರಕ್ ಗಳು ನೆಲ ನಡುಗಿಸುತ್ತ ನಿದಾನವಾಗಿ ತಲುಪುವುದೇ ಕ್ರಷರ್ ಗಳೆಡೆ. ಎರೆಡು ಟನ್ ಗಳಷ್ಟು ತೈಲಮಿಶ್ರಿತ ಮರಳನ್ನ ಸಂಸ್ಕರಿಸಿದರೆ ಸಿಗುವುದು ಒಂದು ಬ್ಯಾರಲ್ (=೧೫೯ ಲೀಟರ್) ಪೆಟ್ರೋಲಿಯಂ (ಪೆಟ್ರೋಲ್ ಅಲ್ಲ. ಪೆಟ್ರೋಲ್ ಬೇರೆ ಪೆಟ್ರೋಲಿಯಂ ಬೇರೆ. ಪೆಟ್ರೋಲ್ ಪೆಟ್ರೋಲಿಯಂನ ಸಾವಿರಾರು ಉತ್ಪನ್ನಗಳಲ್ಲಿ ಒಂದು ಅಷ್ಟೇ!!!).
         ಕ್ಯಾಟರ್ಪಿಲ್ಲರ್ ಗಳು ತಮ್ಮ ಬೆನ್ನ ಮೇಲಿನ ತೈಲಮರಳನ್ನು ಸುರಿಯುವುದು ಕ್ರಷರ್ ಗಳ ಒಡಲಿಗೆ!!! ಪ್ರತಿ ಘಂಟೆಗೇ ಸಾವಿರಾರು ಟನ್ ಮರಳು/ಪುಟ್ಟ ಬಂಡೆ ಕಲ್ಲುಗಳನ್ನ ಮಹಾಕ್ರಷರ್ ಗಳು ಪುಡಿಗಟ್ಟುತ್ತವೆ!! ನಂತರದ ಹೆಜ್ಜೆ ತೈಲ ಮಿಶ್ರಿತ ಪುಡಿಮರಳನ್ನು ಬಿಸಿನೀರು, ಕಾಸ್ಟಿಕ್ ಸೋಡಾ ಹಾಗೂ ಸಾಲ್ವೆಂಟ್ (ಬೇರೆ ಬೇರೆ ಇತರ ರಾಸಾಯನಿಕಗಳು) ಗಳಿಂದ ತೊಳೆಯುವುದು. ಈ ಹಂತದಲ್ಲಿ ಪುಡಿಮರಳು ಹಾಗೂ ನೀರು ಮಿಶ್ರಿತ ಟಾರ್(ಬಿಟುಮಿನ್) ಬೇರೆಯಾಗುತ್ತವೆ. ಮುಂದಿನ ಹಂತ – ಮಹಾ ಸೆಪರೇಟರ್ ಗಳಲ್ಲಿ ನೀರು ಹಾಗೂ ಟಾರ್ ಬೇರೆಮಾಡುವುದು. ಅನೇಕ ರಾಸಾಯನಿಕಗಳು ಬೆರೆತ ಈ ನೀರನ್ನು ಮೈಲಿಗಟ್ಟಲೆ ವಿಸ್ತಾರದ ಇಂಗುಗುಂಡಿಗೆ ಪಂಪ್ ಮಾಡಲಾಗುತ್ತದೆ. ಇತ್ತ ಟಾರನ್ನು ಅತಿ ಉಷ್ಣಾಂಶದಲ್ಲಿ ಬಿಸಿಮಾಡಿ – ಅದಕ್ಕೆ ಜಲಜನಕ/ಕೆಲವು ರಾಸಾಯನಿಕ ಸೇರಿಸಿ – ನೆಲದಾಳದಲ್ಲಿ ಸಿಗುವ ಪೆಟ್ರೋಲಿಯಂ ಗೆ  ಸಾಕಷ್ಟು ಸನಿಹದ – ಪೆಟ್ರೋಲಿಯಂ ಸಿದ್ದವಾಗುತ್ತದೆ. ಹಗಲು ರಾತ್ರಿಯೆನ್ನದೆ ದಿನದ ಇಪ್ಪತ್ನಾಕು ಘಂಟೆ ಇದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಲೇ ಇರುತ್ತದೆ!!!. ( ಈ ಪೆಟ್ರೋಲಿಯಂನಿಂದ   ಪೆಟ್ರೋಲ್/ಡೀಸಲ್/ಕೆರೋಸಿನ್/ಅಲ್ಲದೇ ಅದೆಷ್ಟೋ ಸಾವಿರ ಉತ್ಪನ್ನಗಳು – ಅವುಗಳನ್ನು ಬೇರೆ ಮಾಡುವುದು – ಅದೇ ಒಂದು ಬೇರೆ ತಾಂತ್ರಿಕತೆ – ಅವು ಆಗುವುದು – (ಸಾದಾರಣವಾಗಿ) ಪೆಟ್ರೋಲಿಯಂ ತಲಪುವ ದೇಶಗಳಲ್ಲಿ. ಪ್ರಪಂಚದಲ್ಲಿ – ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಹೆಚ್ಚು ಸಾಗಣೆಯಾಗುವ ಸರಕೆಂದರೆ ಪೆಟ್ರೋಲಿಯಂ!!! (ಎರಡನೇ ಸ್ಥಾನ ಕಾಫಿಯಂತೆ)).
           ಈ ರೀತಿ ಪೆಟ್ರೋಲಿಯಂ ಪಡೆಯಲು ಭೂಮಿ ತೆರುವ ಬೆಲೆ?? – ಹಸಿರು/ಮರಗಳ ನಾಶ – ಭೂಮಿಯ ಮೇಲ್ಪದರ ಕಿತ್ತೊಗೆಯುವಿಕೆ – ಮರಳಿನಿಂದ ತೈಲ ಬೇರ್ಪಡಿಸಲು ಸಾವಿರ ಸಾವಿರ ಲೀಟರ್ ಶುದ್ದನೀರಿನ ಬಳಕೆ – ಬಿಟುಮಿನ್ ನಿಂದ ಬೇರ್ಪಡಿಸಿದ ಗಂದಕ ಮೊದಲಾದ ರಾಸಾಯನಿಕ ಬೆರೆತ ತಾಜ್ಯ ನೀರನ್ನು ನಿಲ್ಲಿಸಲು ಮೈಲಿಗಟ್ಟಲೆ ವಿಸ್ತಾರದ ಇಂಗುಗುಂಡಿಗಳ ನಿರ್ಮಾಣ – ಬಿಟುಮಿನನ್ನು ಪೆಟ್ರೋಲಿಯಂ ಆಗಿ ಪರಿವರ್ತಿಸುವಾಗ ವಾತಾವರಣ ಸೇರುವ ಅಗಾದಪ್ರಮಾಣದ ಕಾರ್ಬನ್ ಡಯಾಕ್ಸೈಡ್ – ತೈಲ ಮಿಶ್ರಿತ ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ಹೊಸ ನಗರಗಳ ದಿಡೀರ್ ನಿರ್ಮಾಣ – ಅಸೀಮ ಉದ್ಯೋಗಾವಕಾಶ – (ಹಿಂದೆ ಚಿನ್ನ ಸಿಗುವ ಪ್ರದೇಶಗಳಿಗೆ ನಡೆಯುತ್ತಿದ್ದಂತೆ) ಮುಖ್ಯ ಭೂಭಾಗದಿಂದ ಜನರ ವಲಸೆ – ಕೈ ತುಂಬಾ ಓಡಾಡುವ ದುಡ್ಡು – ನಗರಗಳಲ್ಲಿ ಕಾನೂನು ವ್ಯವಸ್ಥೆಯ ಸಮಸ್ಯೆ. ಒಂದೇ? ಎರಡೇ?? ಆದರೆ ಡಾಲರ್ ಮುಂದೆ ಎಲ್ಲವೂ ನಗಣ್ಯ!!! ಸದ್ಯಕ್ಕಂತೂ ತೈಲಮರಳ ಗಣಿಗಾರಿಕೆ ನಿಲ್ಲುವ ಯಾವ ಸೂಚನೆಗಳೂ ಇಲ್ಲ!!! ಅಂತರಿಕ್ಷದಿಂದ ಟೆಲಿಸ್ಕೋಪ್ ಮೂಲಕ ವೀಕ್ಷಿಸಿದರೂ ತೈಲಮರಳು ಗಣಿಗಾರಿಕೆಗೆ  ನೆಲ ಜರುಗಿಸಿದ್ದು ಕಾಣುತ್ತದಂತೆ!!! ಸಹಜವಾಗಿಯೇ ವಿಶ್ವದಾದ್ಯಂತ ಮುಖ್ಯವಾಗಿ ಉತ್ತರ ಅಮೆರಿಕಾದಾದ್ಯಂತ ಗ್ರೀನ್ ಪೀಸ್ ಮೊದಲಾದ ಸಂಸ್ಥೆಗಳ ವಿರೋದ. ಕೆನಡಾದಿಂದ ಸಾಕಷ್ಟು ಪೆಟ್ರೋಲಿಯಂ ಆಮದು ಮಾಡಿಕೊಳ್ಳುವ ಪಕ್ಕದ ಅಮೇರಿಕ (ಯು.ಎಸ್.ಎ) – ಪರಿಸರಹಾನಿಯನ್ನು ಖಂಡಿಸಿ – ಆಲ್ಬೆರ್ಟಾದ ತೈಲಮರಳಿನ ಪೆಟ್ರೋಲಿಯಂ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಆದರೇನಂತೆ ಪೆಟ್ರೋಲಿಯಂ ಕೊಳ್ಳುವ ದೇಶಗಳಿಗೆ ಪ್ರಪಂಚದಲ್ಲಿ ಬರಗಾಲವೇ?? ತೈಲಮರಳಿನಿಂದ ಪೆಟ್ರೋಲಿಯಂ ತಯಾರಿಸುವ ಕಂಪನಿಗಳು ಮಿಲಿಯನ್ ಗಟ್ಟಲೆ ಡಾಲರ್ ಲಾಭಮಾಡಿಕೊಳ್ಳುತ್ತಿವೆ. ಹೊಸಹೊಸ ದೈತ್ಯ ತೈಲಕಂಪನಿಗಳು ಕಾಲೂರಲು ಆಸಕ್ತಿವಹಿಸಿವೆ. ಸರ್ಕಾರಕ್ಕೆ ಕೋಟಿಗಟ್ಟಲೆ ಡಾಲರ್ ತೆರಿಗೆ ಹರಿದುಬರುತ್ತಿದೆ. ಕಿತ್ತುಬಿಸಾಡಿದ ಮರಳಿನಮೇಲೆ ಗಿಡ ಮತ್ತೆ ನೆಡುತ್ತೇವೆ ಎಂದು ತೈಲಕಂಪನಿಗಳೂ ಹಾಗೂ ಅಂತಹ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತೇವೆ ಮತ್ತು ಕಾರ್ಬನ್ ಡಯಾಕ್ಸೈಡ್ ಕಡಿಮೆ ಹೊರಬರುವಂತೆ ತಾಂತ್ರಿಕತೆ ಅಭಿವೃದ್ದಿಪಡಿಸುತ್ತೇವೆ ಎಂದು ಸರ್ಕಾರ ಹೇಳಿಕೆಗಳನ್ನು ನೀಡಿ ವಿರೋದಿಸುವವರನ್ನು ಬಾಯಿಮುಚ್ಚಿಸಲು ಪ್ರಯತ್ನಿಸುತ್ತಲೇ ಇವೆ. 
           ಆಟ ಶುರುವಾಗಿದೆಯಷ್ಟೇ. ಉತ್ತುಂಗ (ಪೀಕ್) ಮುಟ್ಟಿಲ್ಲ!!! ಅಮೇರಿಕಾ ಆಲ್ಬೆರ್ಟಾದ ಪೆಟ್ರೋಲಿಯಂ ನಿಷೇದಿಸಿದರೇನಂತೆ? ಕೆನಡಾದ ಪಶ್ಚಿಮತೀರದಾಚೆ – ವಿಶಾಲ ಶಾಂತ ಸಾಗರದ (ಪೆಸಿಪಿಕ್ ಓಶನ್) ಇನ್ನೊಂದು ಮಗ್ಗುಲಲ್ಲಿ – ತೀರುವ ಲಕ್ಷಣಗಳೇ ಕಾಣದ ಬಾಯಾರಿಕೆಯ – ಜಗತ್ತಿನ ನಾಳಿನ ದೊಡ್ಡಣ್ಣ – ಚೀನಾ ಕೂತಿದೆ. (ಚೀನಾಕ್ಕೆ ಬಾಯಾರಿಕೆ/ಹಸಿವು ಶುರುವಾದರೆ ಪರಿಣಾಮ ದೂರದಲ್ಲೆಲ್ಲೋ ಆಗಬಹುದು. ಒಲೆಂಪಿಕ್ಸ್ ಸಮಯದಲ್ಲಿ ಬಳ್ಳಾರಿ ಮಣ್ಣಿಗೆ ಬೆಲೆ ಬಂದಿದ್ದು ಜ್ಞಾಪಿಸಿಕೊಳ್ಳಿ). ಆಲ್ಬೆರ್ಟಾದ ತೈಲಮರಳಿನ ಪೆಟ್ರೋಲಿಯಂನ್ನು - ಏಷ್ಯಾದ ರಾಷ್ಟ್ರಗಳಿಗೆ ರಪ್ತುಮಾಡುವ ಉದ್ದೇಶದಿಂದ – ಆಲ್ಬೆರ್ಟಾದಿಂದ ಶುರುವಾಗಿ – ರಾಖೀ ಪರ್ವತಗಳನ್ನು ಹತ್ತಿಳಿದು – ಕೆನಡಾದ ಪಶ್ಚಿಮ ತೀರದವರೆಗೆ ಸಾಗುವ – ೧೧೭೭ ಕಿ.ಮೀ. ಉದ್ದದ(!!!) – ನಾದ್ರನ್ ಗೆಟ್ ವೇ ಪೈಪ್ ಲೈನ್ ಗೆ ನೀಲಿನಕಾಶೆ ಸಿದ್ದವಾಗಿದೆ. ಇನ್ನೂ ಯೋಜನೆಯ ಹಂತದಲ್ಲಿರುವ – ಜೋಡಿ ಕೊಳವೆಗಳ – ಒಂದು, ಪೆಟ್ರೋಲಿಯಂ ಸಾಗಿಸಲು – ಇನ್ನೊಂದು, ಕಂಡೆನ್ಸೆಟ್ (ಪೆಟ್ರೋಲಿಯಂ ತೆಳುಮಾಡಲು ಬಳಸುವ ರಾಸಾಯನಿಕಗಳು) ಅನ್ನು ಸಮುದ್ರ ತೀರದಿಂದ ಆಲ್ಬೆರ್ಟಾಕ್ಕೆ ಸಾಗಿಸಲು – ನಾದ್ರನ್ ಗೆಟ್ ವೇ ಪೈಪ್ ಲೈನ್ ಸಿದ್ದವಾದರೆ – ತೈಲಮರಳ ಗಣಿಗಾರಿಕೆ ಇನ್ನಿಲ್ಲದ ವೇಗ ಪಡೆಯುವುದರಲ್ಲಿ ಸಂಶಯವೇ ಇಲ್ಲ. ಈಗಾಗಲೇ ಸರ್ವೇ ಹಾಗೂ ನೀಲಿನಕಾಶೆ ತಯಾರಿಸಲು ಲಕ್ಷಾಂತರ ಡಾಲರ್ ವಿನಿಯೋಗಿಸಲ್ಪಟ್ಟ ಈ ಪೈಪ್ ಲೈನ್ ಗೆ ಅನುಮತಿ ದೊರೆತರೆ – ಕೆನಡಾದ ಪಶ್ಚಿಮ ತೀರದ ಕಿಟಿಮತ್ ನಲ್ಲಿ ಅಗಾದ ಪ್ರಮಾಣದ ತೈಲಸಂಗ್ರಾಹಕಗಳು ಹಾಗೂ ಪೆಟ್ರೋಲಿಯಂನ್ನು ಏಷ್ಯಾಕ್ಕೆ ಸಾಗಿಸಲು – ಮಾನವ ಹಿಂದೆಂದೂ ಕಂಡುಕೇಳರಿಯದ ಅತೀ ದೊಡ್ಡ ತೈಲವಾಹಕಹಡಗುಗಳು(ಆಯಿಲ್ ಟ್ಯಾಂಕರ್) ತಯಾರಾಗುತ್ತವೆ. ಪಶ್ಚಿಮ ತೀರದಲ್ಲಿ ಆಯಿಲ್ ಟ್ಯಾಂಕರ್ ಗಳ ತೇಲಾಟ ಹೆಚ್ಚಲಿದೆ. ಅಂತಹ ಬೃಹತ್ ತೈಲವಾಹಕ ಹಡಗುಗಳಲ್ಲಿ ಒಂದು – ಸಹಜ ಅಪಘಾತಕ್ಕೀಡಾಗಿ ಸಮುದ್ರದ ಒಡಲು ಸೇರಿದರೂ – ಅದರಿಂದ ವರ್ಷಾನುಗಟ್ಟಲೆ ನಿದಾನವಾಗಿ ಹೊರಬರುವ ತೈಲ – ಸಮುದ್ರಜೀವಿಗಳನ್ನು ಸಾಯಿಸುವುದಲ್ಲದೆ – ಸಮುದ್ರದ ಮಲ್ಮೈ ಹಾಗೂ ಅಲೆಗಳೊಂದಿಗೆ ದಡಸೇರುವ ಅಂಟಂಟು ತೈಲ – ಸೀಲ್ ಗಳು/ಮೀನು ಹಿಡಿಯಲು ಸಮುದ್ರ ನುಗ್ಗುವ ಕಡಲಹಕ್ಕಿಗಳು ಮತ್ತೆ ರೆಕ್ಕೆಬಿಚ್ಚಿಕೊಳ್ಳಲಾಗದಂತೆ ನರಳಿ ಸಾಯುವುದಕ್ಕೆ ಕಾರಣವಾಗುತ್ತದೆ. (ಹಿಂದೆಲ್ಲಾ ಇದು ಆಗಿದೆ). ಸಹಜವಾಗಿಯೇ ಕೆನಡಾದ ಪಶ್ಚಿಮ ತೀರದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಈ ಉದ್ದೇಶಿತ ಪೈಪ್ ಲೈನ್ ಗೆ ಸಾಕಷ್ಟು ವಿರೋದ ವ್ಯಕ್ತವಾಗುತ್ತಿದೆ. ತಮ್ಮ ನೆಲ/ಜಲದಲ್ಲಿ ಇದು ಸಾಗುವುದರಿಂದ (ಪೈಪ್ ಲೈನ್ ಎಲ್ಲಾದರೂ ಲೀಕ್ ಆದರೆ ಜಲಮಾಲಿನ್ಯವಾಗಬಹುದೆಂದು) ಅಲ್ಲಿನ ಮೂಲ ಇಂಡಿಯನ್ನರಿಂದಲೂ ಪ್ರತಿರೋದ ಶುರುವಾಗಿದೆ. ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ, ಆರ್ಥಿಕ ಚಿತ್ರಣವೇ ಬದಲಾಗುತ್ತದೆ, ಬ್ರಿಟಿಷ್ ಕೊಲಂಬಿಯಾ ಮತ್ತೂ ಆರ್ಥಿಕವಾಗಿ ಬಲಾಡ್ಯವಾಗುತ್ತದೆ – ಎಂದು ಕಂಪನಿಗಳು ಹೇಳಿಕೊಳ್ಳುತ್ತಿವೆ. (ಈ ಬ್ಲಾಗ್ ಲೇಖನವನ್ನು ಪ್ರಕಟಿಸಿದ ದಿನ (೨೪/೧೦/೨೦೧೨) ಸಂಜೆ ನೀವು ಓದುತ್ತಿದ್ದರೆ - ಅತ್ತ ಭೂಮಿಯ ಇನ್ನೊಂದು ಮಗ್ಗುಲಿನಲ್ಲಿ – ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ – ದೊಡ್ಡಪ್ರತಿಭಟನೆ ನಡೆಯುತ್ತಿರುತ್ತದೆ!! ಕೆನಡಾದ ಕನ್ನಡಿಗರ್ಯಾರಾದರು ಈ ಬ್ಲಾಗ್ ಲೇಖನ ಓದಿದರೆ ಅಲ್ಲಿ ನಡೆಯುತ್ತಿರುವ ವಿಷಯಗಳನ್ನು ಕಾಮೆಂಟಿಸಿ ).
        ಇನ್ನು ಪೆಟ್ರೋಲಿಯಂ ಹಾಗೂ ಅದರ ಉತ್ಪನ್ನಗಳಬಗ್ಗೆ ಅರಿವು ಮೂಡಿಸಲು ಒಂದು ಪ್ಯಾರವನ್ನು ಈ ಲೇಖನದೊಂದಿಗೆ ಸೇರಿಸುವುದು ಅವಶ್ಯವೆಂದನಿಸುತ್ತದೆ. ಇಂದು ನಾವು ತೆಗೆಯುವ ಪೆಟ್ರೋಲಿಯಂ - ಹಿಂದ್ಯಾವುದೋ ಒಂದು ಕಾಲದಲ್ಲಿ ಅದೆಷ್ಟೋ ಲಕ್ಷವರ್ಷಗಳ ಕೆಳಗೆ – ಅಗಾದ ಪ್ರಮಾಣದಲ್ಲಿ  ಸತ್ತು ಮಣ್ಣಾದ ಆಲ್ಗೆ/ಪ್ರಾಣಿ ಹಾಗೂ ಸಸ್ಯಗಳ ಅವಶೇಷ!!! ಅತೀ ಒತ್ತಡಕ್ಕೆ ಸಿಕ್ಕಿ ಕಪ್ಪು ಜಿಗುಟು ದ್ರವದಂತಿರುವ ಸಾವಯವ ಪದಾರ್ಥ. ಗ್ಯಾಸ್ ಕೂಡ ಅವೇ. ತೈಲಬಾವಿಗಳಲ್ಲಿ ಮೊದಲು ಗ್ಯಾಸ್ ದೊರೆಯುತ್ತವೆ. ಮೇಲೆತ್ತುವ ಪೆಟ್ರೋಲಿಯಂನ್ನು (ರಿಫೈನರಿಗಳಲ್ಲಿ) ಅಂಶಿಕ ಬಟ್ಟಿಇಳಿಸುವಿಕೆಯಲ್ಲಿ ಬಟ್ಟಿಯಿಳಿಸಿದಾಗ ಸಾವಿರಾರು ಉತ್ಪನ್ನಗಳು ದೊರೆಯುತ್ತವೆ. ಪೆಟ್ರೋಲ್/ಡೀಸಲ್/ಏವಿಯೇಶನ್ ಪೆಟ್ರೋಲ್/ಸಿಮೆಎಣ್ಣೆ ಕೊನೆಯಲ್ಲಿ ಟಾರ್!!!– ಇನ್ನೂ ಅನೇಕ. ಪೆಟ್ರೋಲಿಯಂ ಉತ್ಪನ್ನಗಳು ಮಾನವನ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿವೆ. ಅವುಗಳಿಲ್ಲದ ಜೀವನವನ್ನು ಊಹಿಸಲೂ ಸಾದ್ಯವಿಲ್ಲ!!! ಪ್ಲಾಸ್ಟಿಕ್/ವ್ಯಾಸಲಿನ್/ಬಣ್ಣಗಳು/ಯುರಿಯಾ ಮೊದಲಾದ ಗೊಬ್ಬರಗಳು/ಸೌಂದರ್ಯ ಪ್ರಸಾದನಗಳು/ಔಷದಿಗಳು/ಗ್ರೀಸ್/ಆಯಿಲ್ – ದಿನನಿತ್ಯವೂ ಉಪಯೋಗಿಸುತ್ತೇವೆ. ಅವೆಲ್ಲವೂ ಆರ್ಗ್ಯಾನಿಕ್!!!!
       ನಾನು ಈ ಲೇಖನದಲ್ಲಿ ವಿವರಿಸಿದ ವಿಷಯ ನಿಮಗೆ ಹಿಂದೆ ಗೊತ್ತಿತ್ತೇ? ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದರೆ ಸಂತೋಷ. ಲೇಖನದಲ್ಲಿನ ತಪ್ಪು/ಒಪ್ಪುಗಳನ್ನು ಕಾಮೆಂಟಿಸಿದರೆ ತಿದ್ದಿಕೊಳ್ಳಲು ಅನುಕೂಲ!! (ಬರಹಗಾರರಿಗೆ ಕಾಮೆಂಟ್ ಗಳು ಟಾನಿಕ್ ಇದ್ದಂತೆ). ಲೇಖನ ಮೆಚ್ಚುಗೆಯಾಗಿ ಕಾಮೆಂಟಿಸಲು  ಪುರುಸೋತ್ತಾಗದಿದ್ದರೆ ಪರವಾಗಿಲ್ಲ – ಕೆಳಗೆ +1 ರ ಮೇಲೆ ಕ್ಲಿಕ್ ಮಾಡಬಹುದು!!!

        

Wednesday, May 16, 2012

ಬಲ್ಲಾಳರಾಯನದುರ್ಗದ ಮೇಲೆ ದನ ಮೇಯಿಸುವ ಲಕ್ಷ್ಮಣಗೌಡ.........

          ಬಾಳೆಹೊನ್ನೂರಿನಲ್ಲಿ ಬೆಳಗಿನ ತಿಂಡಿ ತಿಂದು – ಸ್ವಲ್ಪವೂ ನೇರವಿಲ್ಲದ, ಅಂಕು ಡೊಂಕಾದ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಸಾಗುತ್ತಾ ಸಾಗುತ್ತಾ – ಮಾಗುಂಡಿ, ಬಾಳೂರು, ಜಾವಳಿ, ಕೆಳಗೂರು ದಾಟಿ ಸುಂಕಸಾಲೆಯೆಂಬ ಚಿಕ್ಕ ಊರಿನಲ್ಲಿ ಬಲಕ್ಕೆ ತಿರುಗಿ ಒಂದಿಷ್ಟು ಕಿಲೋಮೀಟರು ಸಾಗಿದರೆ ಆ ದೊಡ್ಡ ದೇವಸ್ಥಾನ ಸಿಗುತ್ತದೆ. ಆಚೆ ಈಚೆ ಕಾಫಿ ಎಸ್ಟೇಟುಗಳು, ಬೆಟ್ಟ ಗುಡ್ಡಗಳು - ಬೈಕಿನಲ್ಲಿ ಆ ರಸ್ತೆಯಲ್ಲಿ ಸಾಗುವುದು ನಿಜಕ್ಕೂ ಮಜಾ!!! ಆ ದೇವಸ್ಥಾನ ಬಲ್ಲಾಳರಾಯನದುರ್ಗ ಚಾರಣದ ಮೊದಲ ಮೆಟ್ಟಿಲು (ಬೇಸ್ ಪಾಯಿಂಟ್). ದೇವಸ್ಥಾನದ ಎದುರೊಂದು ಕೊಳ – ದಡದಲ್ಲಿ ಟಿಂಗ್ ಟಿಂಗ್ ಎಂದು ಗಂಟೆಶಬ್ದಮಾಡುತ್ತಾ ಮೂರ್ನಾಕು ದನಗಳು ಮೇಯುತ್ತಿದ್ದವು.ಅಲ್ಲೆಲ್ಲೋ ಹಕ್ಕಿಯೊಂದು ಇಂಪಾಗಿ ಕೂಗುತ್ತಿತ್ತು. ಆ ಶಬ್ದಗಳನ್ನು ಬಿಟ್ಟರೆ ನೀರವ ನಿಶಬ್ದ ವಾತಾವರಣ. ಅರ್ಚಕರು ಅಲ್ಲೇ ಎಲ್ಲೋ ಹೋಗಿದ್ದರು. ಹಣ್ಣುಕಾಯಿ ಮಾಡಿಸಲು ಅರ್ಚಕರ ದಾರಿ ಕಾಯುತ್ತಿದ್ದ ಅರವತ್ತು ಎಪ್ಪತ್ತು ವರ್ಷದ ಸ್ಥಳೀಯ ರಾಮೇಗೌಡನನ್ನು ಮಾತಿಗೆ ಎಳೆದೆವು. ಅಲ್ಲಿಂದ ಮುಂದೆ ಬೆಟ್ಟದ ಮೇಲೆ ಹೋಗುವುದು ಹೇಗೆ ಹಾಗೂ ಎಷ್ಟುದೂರ ಎಂದು ಕೇಳುವುದು ನಮ್ಮ ಉದ್ದೇಶವಾಗಿತ್ತು. ಹೀಗೆ ಹೋಗಿ, ಹೀಗೆ ಹೋಗಿ ಎಂದು ದಾರಿ ಹೇಳಿದ ರಾಮೇಗೌಡರು ಬೆಟ್ಟದ ಮೇಲೆ ನೀರು ಇದೆಯಾ? ಎಂಬ ನಮ್ಮ ಪ್ರಶ್ನೆಗೆ ಉತ್ತರವಾಗಿ – ಹೊ ಇದೆ. ಅಲ್ ಲಕ್ಷ್ಮಣಗೌಡ ಇದಾನೆ. ಅವ್ನ್ ಕೇಳಿ. ಹೇಳ್ತಾನೆ ಎಂದರು.
          ಲಕ್ಷ್ಮಣಗೌಡ ಬೆಟ್ಟದ್ ಮೇಲೆ ಏನ್ ಮಾಡ್ತಾನೆ?- ನಾವು. ರಾಮೇಗೌಡರು – ದನಾ ಮೇಯ್ಸ್ತಾ ಇರ್ತಾನೆ. ವಾರಕ್ಕೊಂದ್ ಸಲಾ ಮನೆಗ್ ಬರ್ತಾನೆ. ಉಳುದ್ ಟೈಮ್ ಬೆಟ್ಟದ್ ಮೇಲೇ ಇರ್ತಾನೆ ಅಂದರು. ಬಲ್ಲಾಳರಾಯನದುರ್ಗದ ಬೆಟ್ಟ ನೋಡುವ ಕುತೂಹಲಕ್ಕಿಂತ ನಮಗೀಗ – ವಾರಕ್ಕೊಮ್ಮೆ ಮನೆಗೆ ಬಂದು ಅಕ್ಕಿ ಸಾಮಾನು ತಗಂಡ್ ಹೋಗಿ – ಒಬ್ಬಂಟಿಯಾಗಿಯೇ ಬೆಟ್ಟದ ಮೇಲೆ ದನಮೇಯ್ಸ್ತಾ ದಿನಕಳೆಯುವ – ಲಕ್ಷ್ಮಣಗೌಡನನ್ನು ನೋಡುವ ಹಾಗೂ ಆತನ ಅನುಭವಗಳನ್ನು ಕೇಳುವ ಕುತೂಹಲವೇ ಹೆಚ್ಚಾಯಿತು. (ನೂರಾರು ದನಗಳ ಮದ್ಯೆ ಒಬ್ಬಂಟಿ ಎಂಬ ಭಾವನೆ ತನಗೆ ಕಾಡುವುದಿಲ್ಲ ಎಂದು ಮೇಲೆಹೋಗಿ ಮಾತಾಡಿಸುತ್ತಿದ್ದಾಗ ಲಕ್ಷ್ಮಣಗೌಡ ಹೇಳಿದ).
ಬೆಟ್ಟಕ್ಕೆ ದಾರಿ 
               ದೇವಸ್ಥಾನದಿಂದ ಸ್ವಲ್ಪ ಮುಂದೆ ಎಸ್ಟೇಟ್ ಒಂದಕ್ಕೆ ಹೋಗುವ ದಾರಿಯಲ್ಲೇ ಮುಂದೆ ಸಾಗಿ ಬಲಕ್ಕೆ ಕಾಣುವ (ದನಗಳು ಓಡಾಡುವ ತರದ) ಚಿಕ್ಕ ಕಾಲುದಾರಿಯಲ್ಲಿ ಒಂದಿಷ್ಟು ದೂರ ಸಾಗಿದರೆ ಕಾಡು ಕೊನೆಯಾಗಿ ಹುಲ್ಲು ಹಾಗು ಅಲ್ಲಲ್ಲಿ ಬಂಡೆಕಲ್ಲುಗಳಿರುವ ದಾರಿ ಸಿಗುತ್ತದೆ. ಹೆಂಗಸರು ಮಕ್ಕಳೂ ಆರಾಮವಾಗಿ (=ತುಂಬಾ ಕಷ್ಟಪಡದೇ) ನಡೆದು ಹೋಗಬಹುದು. ದೇವಸ್ಥಾನದಿಂದ ಬೆಟ್ಟದ ತಲೆಗೆ ಎರಡು ಮೂರು ಗಂಟೆಗಳ ದಾರಿಯಷ್ಟೆ. ಕಾಡು ಕೊನೆಯಾಗುತ್ತಿರುವಂತೆಯೇ ಪ್ರಕೃತಿ ಸೌಂದರ್ಯ ಅನಾವರಣಗೊಳ್ಳಲಾರಂಬಿಸುತ್ತದೆ. ಒಂದು ಬದಿ ಆಳದಲ್ಲಿ ದಕ್ಷಿಣಕನ್ನಡ ಜಿಲ್ಲೆ. ಮತ್ತೊಂದು ಬದಿ ನಮ್ಮ ಚಿಕ್ಕಮಗಳೂರು ಜಿಲ್ಲೆ. ಬೆಟ್ಟದ ಮೇಲೆ ಹಿಂದ್ಯಾವುದೋ ಒಂದು ಕಾಲದಲ್ಲಿ ಯಾರೋ ಒಬ್ಬ ಪಾಳೆಗಾರನೋ ಯಾರೋ (ಆತನ ಹೆಸರು ಬಲ್ಲಾಳರಾಯ ಇರಬಹುದು. ಈ ಬ್ಲಾಗ್ ಲೇಖನ ಓದಿದವರು ಯಾರಾದರೂ ಗೊತ್ತಿದ್ದವರು ತಿಳಿಸಿದರೆ ಅನುಕೂಲ) ಕಟ್ಟಿದ ಕೋಟೆಯ ಅವಶೇಷಗಳಿವೆ. ವೀಕ್ಷಣೆಗೆ ಮಾಡಿದ ಬುರುಜುಗಳೂ ಅರ್ದ ಜರಿದು ಬಿದ್ದ ಸ್ಥಿತಿಯಲ್ಲಿವೆ.
ಬೆಟ್ಟದ ಮೇಲೆ!!!
         ಬಲ್ಲಾಳರಾಯನದುರ್ಗ ಬೆಟ್ಟದ ವಿಶೇಷವೇನೆಂದರೆ ಅದು ಇತರ ಕೆಲವು ನಮ್ಮ ಪಶ್ಚಿಮಘಟ್ಟದ ಬೆಟ್ಟಗಳಂತೆ ಚೂಪಾಗಿಲ್ಲ. ಮುಳ್ಳಯ್ಯನಗಿರಿ, ಕೊಡಚಾದ್ರಿ ಹಾಗೂ ಮೇರ್ತಿ ಮೊದಲಾದ ಬೆಟ್ಟಗಳ ತುದಿ ಚೂಪು. ಶಿಖರಾಗ್ರದಲ್ಲಿ ವಿಸ್ತಾರದ ಜಾಗವಿರುವುದಿಲ್ಲ. ಆದರೆ ಕುದ್ರೆಮುಖ ಹಾಗಲ್ಲ. ಬೆಟ್ಟದಮೇಲೆನೇ ವಿಸ್ತಾರವಾದ ಜಾಗವಿದ್ದು ಐದಾರು ಸಾವಿರ ಅಡಿ ಎತ್ತರದಲ್ಲಿ ದಟ್ಟಕಾಡು, ತೊರೆ ಹಾಗೂ ಜಲಪಾತವಿದೆ. ಬಲಾಳರಾಯನದುರ್ಗ ಬೆಟ್ಟವೂ ಕುದುರೆಮುಖಬೆಟ್ಟದಂತೆ. ಬೆಟ್ಟದ ಮೇಲೆ ಕುದ್ರೆಮುಖ ಬೆಟ್ಟದ ಮೇಲಿಗಿಂತಲೂ ಕಿಲೋಮೀಟರ್ ಗಟ್ಟಲೆ ವಿಸ್ತಾರವಾದ ಜಾಗವಿದೆ. (ಹತ್ತುವ ಮೊದಲು ಕೆಳಗಿನಿಂದ ಬೆಟ್ಟ ನೋಡಿದಾಗ ಅದು ಗಮನಕ್ಕೆ ಬರುವುದಿಲ್ಲ). ಬೆಟ್ಟದ ಮೇಲ್ಬಾಗ ತಲುಪುತ್ತಿದ್ದಂತೆ ಅದ್ಭುತ ಸೌಂದರ್ಯ ಅನಾವರಣಗೊಳ್ಳುತ್ತದೆ!!! ಚಿಕ್ಕಮಗಳೂರು ಜಿಲ್ಲೆಕಡೆ (ನಾವು ಬಂದ ಕಡೆ) ಕೋಟೆಯ ಬುರುಜು ಹಾಗು ಮುಂದೆ ಪ್ರಪಾತ. ಇನ್ನೊಂದುಕಡೆ ಚಿಕ್ಕಪುಟ್ಟ ರಾಶಿರಾಶಿ ಬೋಳು ಬೆಟ್ಟಗಳು. ಅವುಗಳ ಮೇಲೆ ಹಸಿರು ಎಳೆಹುಲ್ಲಿನ ಹೊದಿಕೆ. (ಡಿಸೆಂಬರ್ ನಿಂದ ಮಾರ್ಚಿ ಕೊನೆಯವರೆಗೆ ಬಹುಶಃ ಒಣಗಿದ ಹುಲ್ಲಿನ ಹೊದಿಕೆಯಿರುತ್ತದೇನೋ). ಆ ಚಿಕ್ಕಪುಟ್ಟ ಬೆಟ್ಟಗುಡ್ಡಗಳ ಮದ್ಯದಲ್ಲಿ ಶೋಲಾ ಕಾಡು. ನಾಕೈದಾರು ಚಿಕ್ಕ ಗುಡ್ಡಗಳು ಸೇರುವಲ್ಲಿ ಒತ್ತೊತ್ತಾಗಿ ಮರಗಳಿರುವ ರತ್ನಗಂಬಳಿ ಹಾಸಿದಂತೆ ದಟ್ಟಕಾಡು. ಅಂತಾ ಜಾಗದಲ್ಲಿ ಚಿಕ್ಕ ನೀರಿನ ಹರಿವು. ಒಂದೆರಡು ಘಂಟೆ ನಡೆದು ಬೆಟ್ಟದ ಮೇಲೆಯೇ ಇರುವ ಆ ಚಿಕ್ಕಪುಟ್ಟ ಗುಡ್ಡಗಳು ಹಾಗು ಶೋಲಾ ಕಾಡುಗಳನ್ನು ದಾಟಿ ದೂರದಲ್ಲಿ ಸ್ವಲ್ಪ ಎತ್ತರದಲ್ಲಿ ಕಾಣುವ ಬೆಟ್ಟವನ್ನು ಹತ್ತಿದರೆ-ಬಹುಶಃ ಬಾರೀ ಪ್ರಪಾತ ಹಾಗು ಅಲ್ಲಿಂದಾಚೆ ದಕ್ಷಿಣಕನ್ನಡ ಕಾಣಬಹುದು. ಒಂದು ರಾತ್ರಿ ಬೆಟ್ಟದ ಮೇಲೆ ತಂಗಿದರೆ ಎಲ್ಲಾ ನೋಡಬಹುದೇನೋ. ಮಳೆಗಾಲದ ನಂತರದ ಅಕ್ಟೋಬರ್ ತಿಂಗಳಲ್ಲಿ ಬೆಟ್ಟಹತ್ತಿದರೆಬೆಟ್ಟದಮೇಲಿನ ಶೋಲಾ ಕಾಡಿನ ನಡುವೆ ಹರಿಯುವ (ಮಳೆಯಿಂದ ಮೈದುಂಬಿಕೊಂಡಿರುವ) ತೋರೆಯನ್ನೇ ಅನುಸರಿಸಿ ನಡೆದರೆ – ಆ ತೊರೆ ದಕ್ಷಿಣಕನ್ನಡದಕಡೆ ಆಳದ ಜಲಪಾತವಾಗಿ ಬೀಳುವ ಭಯಂಕರ ದೃಶ್ಯ ಕಾಣಬಹುದೆನ್ನಿಸುತ್ತದೆ!! (ಆ ಕಡೆಯಿಂದ ಅದಕ್ಕೊಂದು ಹೆಸರೂ ಇರಬಹುದು!!!). ನಾನು ಎಷ್ಟೇ ಹೇಳಿದರೂ ಎಂದೆಂದೂ ಅದು ನೀವೇ ಹೋಗಿ ನೋಡಿದಂತಾಗುವುದಿಲ್ಲ. ಆದರೆ ಆ ದೃಶ್ಯಾವಳಿಯ ಒಂದಿಷ್ಟು ಫೋಟೋಗಳನ್ನ – ಹೆಚ್ಚಿನವು (ಬದಿಯಲ್ಲಿ ಒಂದೆರಡು ಹಿತನುಡಿ ಬರೆದು) ಗೋಡೆಗೆ ದೊಡ್ಡದಾಗಿ ಅಂಟಿಸುವ ಪೋಸ್ಟರ್ ಗಳಿಗೆ ಹೇಳಿಮಾಡಿಸಿದಂತಿವೆ – ಅವುಗಳನ್ನು ನನ್ನ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಮೆಸ್ಮರೈಸಿಂಗ್ ಮಲ್ನಾಡ್ ಎಂಬ ಆಲ್ಬಮ್ಮಲ್ಲಿ ಹಾಕಿದ್ದೀನಿ. ಅವುಗಳನ್ನು ನೋಡಲು ಇಲ್ಲಿಕ್ಲಿಕ್ಕಿಸಿ. (ಪುರುಸೊತ್ತಿದ್ದರೆ ಕಾಮೆಂಟಿಸಿ).
ಬೆಟ್ಟದ ಮೇಲೆ-ಮತ್ತೊಂದು ದೃಶ್ಯ 

        ಬೆಟ್ಟದ ತಲೆ ಮುಟ್ಟಿದಾಗ ಮದ್ಯಾಹ್ನ ಒಂದು ಘಂಟೆ. ಮೇಲ್ಬಾಗದಲ್ಲಿ, ನೆಲದಿಂದ ಐದಾರು ಅಡಿ ಎತ್ತರದ, ಸುತ್ತಲೂ ಕಲ್ಲುಮೇಲೆ ಕಲ್ಲು ಪೇರಿಸಿ ಕಟ್ಟಿದ ಮುರುಕು ಗೋಡೆಯಿರುವ ವಿಶಾಲವಾದ ಅವಶೇಷವಿದೆ. ಮೂರ್ನಾಲ್ಕು ಮೆಟ್ಟಿಲೇರಿ – ಅಡ್ಡಲಾಗಿದ್ದ ಮರದ ಗಳ ಸೊಪ್ಪು (ಹೆಬ್ಬಾಗಿಲು??) ಬದಿಗೆ ಸರಿಸಿ ಒಳಗೆ ಹೋದಾಗ ನಮಗೆ ಕಾಣಿಸಿದ್ದೇ ಕೋಟೆಯ ಆಸ್ಥಾನ-ಈಗ ದನದ ಲಾಯ!!! ರಾತ್ರಿ ದನಗಳನ್ನು ಒಟ್ಟುವ ಜಾಗ. ಇನ್ನೂ ಮುಂದೆ ಮತ್ತೊಂದು ಮುರುಕು ಗೋಡೆ ದಾಟಿದಾಗ ನಮಗೆ ಕಂಡಿದ್ದೇ – ಎರಡು ಜೊತೆ ಬಡಿಗೆಗಳನ್ನ ತಲೆಕೆಳಗಾದ ವಿ ಆಕಾರದಲ್ಲಿ ಹತ್ತು ಅಡಿ ದೂರದಲ್ಲಿ ಹುಗಿದು, ನಾಕೈದು ಅಡಿ ಎತ್ತರದಲ್ಲಿ ಅದಕ್ಕೊಂದು ಮರದ ಗಳ ಅಡ್ಡ ಇಟ್ಟು, ಅದರ ಮೇಲೆ ನೀಲಿ ಟಾರ್ಪಲ್ ಹಾಸಿ ಮಾಡಿದ – ದುರ್ಗದ (ತಾತ್ಕಾಲಿಕ) ಅಧಿಪತಿ ಲಕ್ಷ್ಮಣ ಗೌಡನ ಅಂತಃಪುರ!!!(ಜೊತೆಗೆ ಅಡಿಗೆ ಕೋಣೆ ಹಾಗೂ ಊಟದ ಹಾಲ್). ಆದರೆ ಎಲ್ಲಿ ಲಕ್ಷ್ಮಣಗೌಡ? ಎಲ್ಲಿ ದನಗಳು?? ಹೊರಗೆಬಂದು ನೋಡಿದಾಗ ವಿಶಾಲ ಬೆಟ್ಟದಮೇಲೆ ದೂರದಲ್ಲೆಲ್ಲೋ ಹಸಿರ ನಡುವೆ ಕಪ್ಪು ಬಿಳಿ ಚುಕ್ಕಿಗಳ ತರ ದನಗಳು!!  
       ಬೆಟ್ಟ ಹತ್ತಿ ಸುಸ್ತಾದ ನಾವೆಲ್ಲಾ – ಅಲ್ಲೇ ಸಮೀಪದ ಶೋಲಾ ಕಾಡಿನ ಮರದನೆರಳಿನಲ್ಲಿ – ಬುತ್ತಿ ಬಿಚ್ಚಿ ಸಮಾ ತಿಂದು – ಬೆಟ್ಟ ಸುತ್ತಲು ಮದ್ಯಾಹ್ನದ ಬಿಸಲಿನ ಉರಿ ಕಡಿಮೆಯಾಗಲೆಂದು – ನೆಲಕ್ಕೆ ಬೆನ್ನುಕೊಟ್ಟು ಮಲಗಿದ ನಮ್ಮನ್ನೆಲ್ಲ – ಸಂಜೆ ನಾಕುಗಂಟೆಹೊತ್ತಿಗೆ ಎಬ್ಬಿಸಿದ್ದು – ಟಿಣಿ ಟಿಣಿ ಗಂಟೆ ಶಬ್ದ ಹಾಗೂ , ಆಆ, ಹೋಯ್, ಬಾ, ಬಾಬಾ ಎಂಬ ಶಬ್ದಗಳು!! ಬೆಟ್ಟಹೇಗಿರುತ್ತೆ ಎಂಬ ಒಂದು ಕುತೂಹಲ ತಣಿಸಿಕೊಂಡಿದ್ದ ನಮಗೆ ನಮ್ಮ ಮತ್ತೊಂದು ಕುತೂಹಲದ ಕೇಂದ್ರ ಲಕ್ಷ್ಮಣಗೌಡನೇ ನಮ್ಮೆದುರಿದ್ದ!!! ಸಾದಾರಣ ಮೈಕಟ್ಟಿನ ಅಂದಾಜು ಐವತ್ತು ವರ್ಷದ ಸಾಮಾನ್ಯ ಎತ್ತರದ ಮನುಷ್ಯನೇ ಈ ಲಕ್ಷ್ಮಣಗೌಡ. ನಾವು ತಿಂದುಂಡು ಮಿಕ್ಕಿದ್ದ ಚಪಾತಿ ಪಲ್ಯ ಮೊಸರನ್ನು (ಬಿಸಾಡುವ ಬದಲು) ಆತನ ಕೈಮೇಲೆ ಹಾಕಿ ಮಾತಿಗೆಳೆದೆವು. ಸಹಜವಾಗಿಯೇ ಆತನೂ ತನ್ನಬಗ್ಗೆ ಹೇಳಿಕೊಳ್ಳಲಾರಂಬಿಸಿದ.
           ಲಕ್ಷ್ಮಣಗೌಡ ಬಲ್ಲಾಳರಾಯನ ದುರ್ಗದ ಬೆಟ್ಟದಬುಡದ ಒಂದು ಹಳ್ಳಿಯ ಒಬ್ಬ ಸಾದಾರಣ ರೈತ. ಮನೆಮಠ ಇದೆ.ಮದುವೆಯಾಗಿ ದೊಡ್ಡ ಮಕ್ಕಳುಗಳೂ ಇದ್ದಾರೆ. ಮಗ ಒಬ್ಬ ಉಜಿರೆಯಲ್ಲಿ ಕೆಲಸಮಾಡುತ್ತಿದ್ದಾನಂತೆ. ಕೃಷಿಕಾರ್ಯಗಳೆಲ್ಲಾ ಮುಗಿದು ಜೊತೆಗೆ (ಕೆಳಗೆ ಕಾಡಿನಲ್ಲಿ) ದನಗಳಿಗೆ ಮೇವೂ ಕಡಿಮೆಯಾದಾಗ – ಪ್ರತಿವರ್ಷ ಪೆಬ್ರವರಿ ಮಾರ್ಚ್ ಹೊತ್ತಿಗೆ – ತನ್ನಮನೆ ಎತ್ತುದನಗಳು ಜೊತೆಗೆ ಊರವರ ಹಾಗೂ ನೆಂಟರ ಎತ್ತುದನ ಎಮ್ಮೆಗಳನ್ನೂ – ಈ ಲಕ್ಷ್ಮಣಗೌಡ ಬೆಟ್ಟದಮೇಲೆ ಹೊಡೆದುಕೊಂಡು ಬರುತ್ತಾನೆ. ನಾನಾಗಲೇ ಹೇಳಿದೆ ಬೆಟ್ಟದ ಮೇಲೆ ವಿಸ್ತಾರವಾದ ಹುಲ್ಲುಗಾವಲಿನ ಬಯಲುಪ್ರದೇಶ ಹಾಗೂ ನೀರಿದೆಯೆಂದು. ದನಗಳಿಗೆ ಯಥೇಚ್ಛ ಮೇವು!!! ಪರರ ದನಗಳನ್ನು ಮೇಯಿಸಲು ಒಂದು ಬಾಲಕ್ಕೆ(=ಜಾನುವಾರಿಗೆ) ಇಂತಿಷ್ಟು ಎಂದು ದುಡ್ಡು ಕೊಡುತ್ತಾರಂತೆ. ಮಳೆಗಾಲ ಆರಂಬವಾಗುತ್ತಿದ್ದಂತೆಯೇ ಜಾನುವಾರುಗಳು ಹಾಗೂ ಲಕ್ಷ್ಮಣಗೌಡ ಕೆಳಗಿಳಿದು ಹಳ್ಳಿ ಸೇರುತ್ತಾರೆ. ಮೂರ್ನಾಕು ತಿಂಗಳು ಲಕ್ಷ್ಮಣಗೌಡನ ವಾಸ ಬೆಟ್ಟದಮೇಲೆನೇ. ವಾರಕ್ಕೊಮ್ಮೆ ಕೆಳಗಿಳಿದು ಹೋಗಿ ಅಕ್ಕಿ ಉಪ್ಪು ತರುತ್ತಾನೆ.
           ಹಾಗಂತ ಈ ದನಮೆಯಿಸಲು ಬೆಟ್ಟಹತ್ತಿ ಇರುವುದು ತಲಾಂತರದಿಂದ ಬಂದ ಸಂಪ್ರದಾಯವೇನಲ್ಲ. ಮೊದಲೆಲ್ಲಾ ದನಗಳನ್ನ ಬೆಟ್ಟದಮೇಲೆ ಹೊಡೆದುಬಂದುಬಿಡುತ್ತಿದ್ದರಂತೆ. ಮೂರ್ನಾಲ್ಕು ತಿಂಗಳು ಬಿಟ್ಟು ಮಳೆಗಾಲದ ಪ್ರಾರಂಬದಲ್ಲಿ ಎರಡನೇ ಬಾರಿ ಬೆಟ್ಟದಮೇಲೆ ಹೋಗಿ ವಾಪಸ್ ಹೊಡಕೊಂಡು ಬರ್ತಿದ್ರಂತೆ. ಆದ್ರೆ ಈಗ – ಎಂದು ಲಕ್ಷ್ಮಣಗೌಡ ಅನ್ನುತ್ತಿದ್ದಂತೆ ನಮ್ಮಲ್ಲೊಬ್ಬ ಕೇಳಿದ – ಏನು? ಹುಲಿಕಾಟನಾ??. ಊಹೂಂ. ಹುಲಿಯಾದರೆ ಬಿಡಿ. ಎಲ್ಲೋ ಅಪ್ರೂಪಕ್ ತಿನ್ನುತ್ತೆ. ನಮಗ್ ಹೆಚ್ಚಾಗಿ ಕನ್ನಡ್ ಜಿಲ್ಲೆಯಿಂದ ಬೆಟ್ಟಹತ್ತಿ ಬರುವ ಬೇರಿಗಳ ಕಾಟ!!! ಒಳ್ಳೇ ಜನ್ವಾರ್ ಗಳನ್ನೇ ಮಾಯಮಾಡ್ತಾರೆ – ಅಂದ ಲಕ್ಷ್ಮಣಗೌಡ. (ಬೇರಿ=ಬ್ಯಾರಿ=ಮುಸ್ಲಿಮ್ಮರ ಒಂದು ಪಂಗಡ). ಅದಕ್ಕಾಗಿ ಈಗ ಬೆಟ್ಟದಮೇಲೇನೇ ಹಗಲೂ ರಾತ್ರಿ ಎನ್ನದೇ ಇದ್ದು ದನಕಾಯುತ್ತಾರೆ.
         ಎಷ್ಟೆಂದರೂ ಕೋಟೆಯ ಜಾಗ. ಹಿಂದೆಲ್ಲಾ ಹೆಣಗಳು ಬಿದ್ದಿರಬಹುದು. ದೆವ್ವಭೂತಗಳ ಕಾಟವೇನಾದರೂ ಬೆಟ್ಟದಮೇಲೆ ಇದೆಯಾ ಎಂದು ತಿಳಿಯುವ ಕುತೂಹಲ ನಮ್ಮಲ್ಲೊಬ್ಬನಿಗೆ. ಹೇಗೂ ಲಕ್ಷ್ಮಣಗೌಡ ಒಬ್ಬನೇ ಇರುತ್ತಾನಲ್ಲ. ದೆವ್ವಭೂತಗಳ ಜೊತೆಗೆ ಮೋಹಿನಿಯ ಕಾಟವೆನಾದರೂ ಎಂದಾದರೂ ಕಂಡುಬಂದಿತ್ತೆ?? – ಎಂದು ಕೇಳಿದೆವು. ನಸುನಗುತ್ತ ಅಲ್ಲಗಳೆದ ಲಕ್ಷ್ಮಣಗೌಡ. ಆದರೆ ಸ್ವಾರಸ್ಯವೆಂದರೆ – ಸ್ವಲ್ಪದೂರದಲ್ಲಿ ಕಾಣುವ ಶೋಲಾಕಾಡು ತೋರಿಸಿ – ಅಲ್ಲೊಂದು ಹಳೆ ಕೆರೆ ಇರುವುದಾಗಿಯೂ – ಅದೀಗ ಮುಚ್ಚಿಹೋದಂತೆಯೇ ಆಗಿರುವುದಾಗಿಯು – ಆದರೆ ಆಗೀಗ ರಾತ್ರಿ ಗಂಟೆಗಳು (ಮಂಗಳಾರತಿಯ ಸಮಯದಲ್ಲಿ) ಹೊಡೆದಂತೆ ಶಬ್ದಗಳು ಕೇಳಿಸುವುದಾಗಿ ಹೇಳಿದ!!!! ಚಂದದ ಈ ಜಾಗದಲ್ಲಿ ಸಿನೆಮಾ ಶೂಟಿಂಗ್ ನಡೆದಿದ್ಯಾ ಎಂದು ಕೇಳಿದ್ದಕ್ಕೆ – ಅವತ್ಯಾರೋ ಸಿನೆಮಾದವ್ರು ನೋಡ್ಕಂಡ್ ಹೋಗಕ್ಕ್ ಬಂದಿದ್ರು. ಮತ್ ಬರ್ಲಾ ಎಂದ. (ಸಹಜನೆ – ಚಿಕ್ಕಮಗಳೂರಿಂದ ಗಿರಿಕಡೆ ಹೋದರೆ ಟಾರ್ ರಸ್ತೆ ಬುಡದಲ್ಲೇ ಇಲ್ಲಿನಷ್ಟೇ ಚಂದದ ಜಾಗಗಳಿರುವಾಗ ನಟನಟಿಯರ ದಂಡು ಕಷ್ಟಪಟ್ಟು ಬೆಟ್ಟಹತ್ತಿ ಯಾಕೆ ಬರ್ತಾರೆ? ಅಲ್ವಾ).
        ಪಕ್ಕದ ಫೋಟೋದಲ್ಲಿ ಕಾಣುವ-ಹಾರೆಯಿಂದ ಗದ್ದೆಯ ಅಂಚನ್ನ ಕತ್ತಿರಿಸಿದಂತೆ ಕಾಣುವ ಪ್ರಪಾತದ ಬಗ್ಗೆ-ಲಕ್ಷ್ಮಣಗೌಡ ಹೇಳಿದ ವಿಷಯ ರೋಮಾಂಚನಕರ!!! ನಾವು ಕುಳಿತಲ್ಲಿ ದೂರದಿಂದ ಕಾಣುತ್ತಿದ್ದ-ಮೇಲೊಂದಿಷ್ಟು ಕಾಡು ಹುಲ್ಲುಗಾವಲು ಹಾಗೂ ಮತ್ತೊಂದು ಬದಿ ಆಳದ ಪ್ರಪಾತವಿದ್ದ-ಆ ಬೆಟ್ಟದ ಮೇಲೆ ಮೇಯುತ್ತಿದ್ದ ಎರಡು ದನಗಳು-ಒಂದನ್ನೊಂದು ದೂಕಿಕೊಂಡು ಜಗಳವಾಡುತ್ತಿದ್ದವಂತೆ. ಲಕ್ಷ್ಮಣಗೌಡ ನೋಡುತ್ತಿರುವಂತೆಯೇ ಹಿಂದೆಹಿಂದೆ ಬಂದ ಒಂದು ದನ ಕಾಲುಜಾರಿ ಉರುಳಿ ಉರುಳಿ ಆ ಪ್ರಪಾತಕ್ಕೆ ಬಿತ್ತಂತೆ!! ಸಾವಿರಾರು ಅಡಿ ಆಳಕ್ಕೆ ಕಲ್ಲಿನ ಮೇಲೆ ಬಿದ್ದ ಹೊಡೆತಕ್ಕೆ ದನ ಚೂರುಚೂರಾಗಿ ಪಚ್ಚಿ ಅದೆಷ್ಟೋ ದೂರ ಎಸೆಯಲ್ಪಟ್ಟಿತಂತೆ!!! ಇಂತಹ ಅದೆಷ್ಟೋ ಕಥೆಗಳನ್ನ ಅವನ ಬಾಯಿಂದ ಹೊರಡಿಸಬಹುದಾಗಿತ್ತು. ಆದರೆ ಬೆಟ್ಟದಮೇಲೆ ಒಂದು ಸಣ್ಣಸುತ್ತು ಹಾಕಿ ಸೂರ್ಯಾಸ್ತ ನೋಡಿ ಕೆಳಗೆ ಹೊರೆಟೆವು. ಘಟ್ಟದಂಚಿನ ಜಾಗಗಳಿಂದ ಸೂರ್ಯಾಸ್ತ ಸಮುದ್ರದೆಡೆ ಬಯಲುಜಾಗದಲ್ಲಿ ಆಗುವುದು ಸಾದಾರಣ. ಆದರೆ ಘಟ್ಟದಂಚಿನ ಬಲ್ಲಾಳರಾಯನದುರ್ಗದಲ್ಲಿ ಮಾತ್ರ ಸೂರ್ಯಾಸ್ತ, ಎದುರು ಕಾಣುವ ಎತ್ತರದ ಕುದ್ರೆಮುಖ ಬೆಟ್ಟದ ಹಿಂದೆ ಆಗುತ್ತದೆ. (ಅಂದರೆ ಕುದ್ರೆಮುಖ ಹಾಗೂ ಬಲ್ಲಾಳರಾಯನಬೆಟ್ಟಗಳು ಪಶ್ಚಿಮ-ಪೂರ್ವದಲ್ಲಿವೆ. ಪಶ್ಚಿಮಘಟ್ಟದ ಇತರ ಶಿಖರಾಗ್ರಗಳಂತೆ ಉತ್ತರ-ದಕ್ಷಿಣದಲಿಲ್ಲ. ಅವೆರಡು ಬೆಟ್ಟಗಳ ನಡುವೆ ದಕ್ಷಿಣಕನ್ನಡಜಿಲ್ಲೆ ಒಂದಿಷ್ಟು ಒಳಚಾಚಿದೆ. ಆ ಭಾಗದ ಜನರಿಗೆ ಒಂದುಬದಿ ಎತ್ತರದ ಕುದ್ರೆಮುಖ, ಮತ್ತೊಂದು ಬದಿ ಬಲ್ಲಾಳರಾಯನದುರ್ಗ-ಎರಡೂ ಚಂದಾಗಿ ಕಾಣಬಹುದು!!!).
         ನಾವು ಹೋಗಿದ್ದು ಹೋದವರ್ಷ. ಈ ವರ್ಷನೂ ಮುಂಗಾರುಪೂರ್ವದ ರೇವತಿ ಹಾಗೂ ಅಶ್ವಿನಿ ಮಳೆಗಳು ಸಾಕಷ್ಟು ಆಗಿವೆ. ಬಲ್ಲಾಳರಾಯನಬೆಟ್ಟದಮೇಲೆನೂ ಹಸಿರು ನಳನಳಿಸುತ್ತಿರಬಹುದು. ಹೋಗಲು ಸಮಯ ಪ್ರಶಸ್ತವಾಗಿದೆ. (ಜೂನ್ ಮೊದಲವಾರದಲ್ಲಿ ಮುಂಗಾರು ಪ್ರಾರಂಭವಾದರೆ ಏನೂ ಕಾಣುವುದಿಲ್ಲ. ಮಂಜು ಮುಸುಕು). ರಾತ್ರಿ ಹೊರಟರೆ ಬೆಳಿಗ್ಗೆ ಕಳಸ ತಲುಪಿಸಲು ಬಸ್ಸುಗಳೂ ಇವೆ. ಎಲ್ಲಿಗಾದರೂ ಹೋಗಲು ನಿಮ್ಮ ಮನಸಿನಲ್ಲೂ ತುಡಿತವಿರಬಹುದು. ಇನ್ಯಾಕೆ ತಡ? ಬೆಟ್ಟಕ್ಕೆ ಹೋಗಿ. ಲಕ್ಷ್ಮಣಗೌಡನನ್ನು ಕಾಣಿ. ನಿನ್ನಬಗ್ಗೆ (ಹೊಗಳಿ) ಇಂಟರ್ನೆಟ್ ನಲ್ಲಿ ಯಾರೋ ಒಬ್ಬರು ಬರೆದಿದ್ದಾರೆ. ಅದನ್ನು ಪ್ರಪಂಚಾದ್ಯಂತ ಜನ ನೋಡಬಹುದು ಅಂತ ಹೇಳಿ. ಶುಭಪ್ರಯಾಣ!!!!
        ಈ ಲೇಖನ ಓದಿದ ಗುರುತಾಗಿ (ಸಮಯವಿದ್ದರೆ) ಕಾಮೆಂಟಿಸಿ. ಕಾಮೆಂಟ್ ಗಳು ಬರವಣಿಗೆಗಳನ್ನು ತಿದ್ದಿಕೊಳ್ಳಲು (ಹಾಗೂ ಹರಿದುಬರಲು) ಅವಶ್ಯಕ!! ಲೇಖನ ಇಷ್ಟಪಟ್ಟಿದ್ದು ಕಾಮೆಂಟಿಸಲು ಸಮಯವಿಲ್ಲದಿದ್ದರೆ +1 ರ ಮೇಲೆ ಕ್ಲಿಕ್ ಮಾಡಿ.    
           

Friday, February 17, 2012

ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳ ಮೋಹಕ ಪ್ರಪಂಚ !!!!

            ನಾಲ್ಕು ತಿಂಗಳ ಹಿಂದೆ ನಡೆದ ಘಟನೆ. ಅಂದು ರಶ್ ಇತ್ತು. ಆ ಸಮಯದಲ್ಲಿ ಆ ಪರಿಚಿತರು ಏನೋ ಕೇಳಲು ಬಂದರು. ಅದೇ ಸಮಯದಲ್ಲಿ ಅವರ ಮೊಬೈಲಿಗೊಂದು ಕರೆ ಬಂತು. ಹೊರತೆಗೆದು ಮಾತನಾಡಲಾರಂಬಿಸಿದರು. ತಿಂಗಳ ಹಿಂದಷ್ಟೇ (ಜಾವಾ ಇರುವ) ಡಬಲ್ ಸಿಮ್ ನ ಮೈಕ್ರೋಮ್ಯಾಕ್ಸ್ ಮೊಬೈಲ್ ತಗಂಡಿದ್ದ ನನ್ನ ಕಣ್ಣು ಸಹಜವಾಗಿಯೇ ಅವರ ಮೊಬೈಲ್ ಮೇಲೆ ಬಿತ್ತು. ಅನಂತರ ನಡೆದಿದ್ದು ಕೇವಲ ಒಂದೆರಡು ನಿಮಿಷಗಳ ಮಾತುಕತೆ. ಆಂಡ್ರೋಯ್ಡ್ ಸ್ಮಾರ್ಟ್ ಫೋನ್,ಜಿ.ಪಿ.ಎಸ್, ಇಂಟರ್ನೆಟ್ ಹಾಗೂ ಆಂಡ್ರೋಯ್ಡ್ ಅಪ್ಪ್ಲಿಕೇಶನ್ ಗಳ ಬಗ್ಗೆ ಅವರ ಚಿಕ್ಕ ವಿವರಣೆ-(ಹಾಗೂ ಆ ಸಂಬಂದ ಅನಂತರ ವಿಕಿಪೀಡಿಯಾದಲ್ಲಿ ನಾನು ಸಂಗ್ರಹಿಸಿದ ಮಾಹಿತಿ)–ಮೊಬೈಲ್ ಫೋನ್ ಗಳ ಬಗ್ಗೆ ಹಿಂದಿನ ನನ್ನೆಲ್ಲಾ ಅಭಿಪ್ರಾಯಗಳನ್ನು ಬದಲಾಯಿಸಿತು!!!  ತಿಂಗಳ ಹಿಂದಷ್ಟೇ ತಗಂಡ ನನ್ನ ಸಾದಾರಣ ಫೋನನ್ನು–ದುಡ್ಡು ಎಂದಾದರು ಕಂತಿನ ಮೇಲಾದರೂ ಕೊಡು ಎಂದು ಹೇಳಿ-ಹೆಂಡತಿಗೆ ಹೊಸ ಮೊಬೈಲ್ ಒಂದರ ಹುಡುಕಾಟದಲ್ಲಿದ್ದ ನನ್ನ ಸ್ನೇಹಿತನ ಕೈ ಮೇಲೆ ಹಾಕಿ–ಸ್ಮಾರ್ಟ್ ಫೋನ್ ಗಳ ಹುಡುಕಾಟದಲ್ಲಿ ಅಂತರ್ಜಾಲದಲ್ಲಿ ಮುಳುಗಿದೆ!!! ಹಾಗಾದರೆ ಸ್ಮಾರ್ಟ್ ಫೋನ್ ಗಳೆಂದರೇನು? ಆಂಡ್ರೋಯ್ಡ್ ಅಂದರೆ ಏನು?? ಅವುಗಳಿಗೂ ಸಾದಾರಣ ಫೋನ್ ಗಳಿಗೂ ಇರುವ ವ್ಯತ್ಯಾಸಗಳೇನು??? –ಎಂಬುದು ನಿಮ್ಮ ಪ್ರಶ್ನೆಗಳಾಗಿದ್ದರೆ ಅದಕ್ಕೆ ಉತ್ತರವೇ ಈ ಬ್ಲಾಗ್ ಬರಹ. ಸ್ಮಾರ್ಟ್ ಫೋನ್ ಗಳ ಜನಪ್ರಿಯತೆ ರಾಕೆಟ್ ಗತಿಯಲ್ಲಿ ಏರುತ್ತಿದೆ. ಅನೇಕರಿಗೆ ಮುಂದಿನ ನನ್ನ ಬರವಣಿಗೆ ಅತೀ ಸಾದಾರಣ ಹಾಗೂ ಗೊತ್ತಿದ್ದಿದ್ದೆ ವಿಷಯವೇ ಎಂದನ್ನಿಸಿದರೂ ಕೆಲವರಿಗಾದರೂ ಸ್ಮಾರ್ಟ್ ಫೋನ್ ಗಳ ಬಗ್ಗೆ (ಪರಿಚಿತರೊಂದಿಗಿನ ಒಂದೆರಡು ನಿಮಿಷಗಳ ಮಾತುಕತೆಯಲ್ಲಿ) ನನಗಾದಂತೆ ಜ್ಞಾನೋದಯವಾಗಬಹುದು!!! (ಇಂತಹ ಬರಹವೊಂದನ್ನು ಯಾವುದಾದರೊಂದು ಬ್ಲಾಗ್ ನಲ್ಲಿ ಹಿಂದೆಂದಾದರೂ ಓದಿದ್ದರೆ ಅಂದೇ ಸ್ಮಾರ್ಟ್ ಫೋನ್ ಕೊಳ್ಳುವ ನಿರ್ದಾರ ಮಾಡುತ್ತಿದ್ದನೇನೋ). (ಆಂಡ್ರೋಯ್ಡ್ – ಈ ಪದದ ಮೊದಲ ಅಕ್ಷರವನ್ನು apple ನ ಮೊದಲ ಅಕ್ಷರದಂತೆ ದಯವಿಟ್ಟು ಓದಿಕೊಳ್ಳಿ).
             ಪ್ರಪಂಚಾದ್ಯಂತ ಇಂದು ಇರುವ ಕೋಟ್ಯಾನುಕೋಟಿ ಮೊಬೈಲ್ ಗಳನ್ನು ಮುಖ್ಯವಾಗಿ ಎರಡು ವಿದಗಳನ್ನಾಗಿ ವಿಂಗಡಿಸಬಹುದು. ಒಂದು ಸಾದಾರಣ ಫೋನುಗಳು. ಮತ್ತೊಂದು ಸ್ಮಾರ್ಟ್ ಫೋನುಗಳು. ಸಾದಾರಣ ಮೊಬೈಲ್ ಗಳ ಬಗ್ಗೆ ಎಲ್ಲರಿಗೂ ಗೊತ್ತಿವೆ. ಆದರೆ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವ ಸ್ಮಾರ್ಟ್ ಫೋನ್ ಗಳ ಬಗ್ಗೆ ಹೆಚ್ಚಿನ ಜನಸಾಮಾನ್ಯರಿಗೆ ಹೆಚ್ಚು ಮಾಹಿತಿಯಿಲ್ಲವೆಂಬುದು ನನ್ನ ಅನುಭವ. ಸ್ಮಾರ್ಟ್ ಫೋನ್ ಗಳು ಸಾದಾರಣ ಫೋನ್ ಗಳಿಗಿಂತ ಹೇಗೆ ಭಿನ್ನವೆಂದರೆ ಅವು ಚಿಕ್ಕ ಕಂಪ್ಯೂಟರ್ ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಕಂಪ್ಯೂಟರ್ ಗಳಲ್ಲಿ ಇಂತಿಷ್ಟು ಶಕ್ತಿಯ ಪ್ರೊಸೆಸರ್, ಇಂತಿಷ್ಟು ಸ್ಮರಣಶಕ್ತಿಯ ರಾಂ ಇರುವಂತೆ ಈ ಸ್ಮಾರ್ಟ್ ಫೋನ್ ಗಳಲ್ಲೂ ಇರುತ್ತವೆ. ಹೇಗೆ ಕಂಪ್ಯೂಟರ್ ಗಳಲ್ಲಿ ವಿಂಡೋಸ್ (ಹೆಚ್ಚಿನ ಜನ ಉಪಯೋಗಿಸುವುದು),ಲಿನೆಕ್ಸ್ ಎಂಬೆಲ್ಲಾ  ಕಾರ್ಯತಂತ್ರ ವ್ಯವಸ್ಥೆ ಇರುವಂತೆ ಸ್ಮಾರ್ಟ್ ಫೋನ್ ಗಳಲ್ಲೂ ಒಂದು ಕಾರ್ಯತಂತ್ರವ್ಯವಸ್ಥೆಯಿರುತ್ತದೆ.
         ಸರಿ. ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳೆಂದರೇನು? ಇದಕ್ಕೆ ಉತ್ತರ – ಈ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಲಾಗಿರುವ ಆಪರೇಟಿಂಗ್ ಸಿಸ್ಟಂ ಆದಾರದ ಮೇಲೆ ಅವುಗಳನ್ನು ಪುನಃ ವಿಂಗಡಿಸಬಹುದು. ಆಪಲ್ ಐಫೋನ್ ಗಳು ಆಪಲ್ ನವರದ್ದೇ ಆಪರೇಟಿಂಗ್ ಸಿಸ್ಟಂ ಹೊಂದಿದ್ದರೆ ನೋಕಿಯಾ ಸ್ಮಾರ್ಟ್ ಫೋನ್, ಬ್ಲಾಕ್ ಬೆರಿ ಫೋನ್ ಗಳು ತಮ್ಮದೇ ಆಪರೇಟಿಂಗ್ ಸಿಸ್ಟಂ (ಸಿಂಬಯಾನ್/ಬ್ಲಾಕ್ ಬೆರಿ) ಹೊಂದಿವೆ. ಮೈಕ್ರೋಸಾಫ್ಟ್ ನವರದ್ದೇ ವಿಂಡೋಸ್ ಮೊಬೈಲ್ ಎಂಬ ಆಪರೇಟಿಂಗ್ ಸಿಸ್ಟಂ ಇದೆ. ಪ್ರಪಂಚದ ಒಟ್ಟು ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ರಾಜನಾದರೂ ಸ್ಮಾರ್ಟ್ ಫೋನ್ ವಿಷಯದಲ್ಲಿ ಸ್ವಲ್ಪ ಹಿಂದೆನೇ. ಇನ್ನು ಗೂಗಲ್ ನವರ ಮುಕ್ತ (ಲಿನಕ್ಸ್ ತರಹ) ಆಪರೇಟಿಂಗ್ ಸಿಸ್ಟಮ್ಮೆ ಆಂಡ್ರೋಯ್ಡ್. ಈ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್ ಫೋನ್ ಗಳೇ ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳು. ಇಂದು (((9((ಹಾಗೂ ಇನ್ನು) ಹೆಚ್ಚು ಚಲಾವಣೆಯಲ್ಲಿರುವ ನಾಣ್ಯ!!! ಗೂಗಲ್ ನವರದ್ದು ಯಾವತ್ತೂ ಮುಕ್ತ ಹಾಗೂ ಬಳಕೆದಾರ ಸ್ನೇಹಿ. ಸ್ಯಾಮ್ಸಂಗ್, ಎಲ್.ಜಿ, ಹೆಚ್.ಟಿ.ಸಿ, ಸೋನಿ ಎರಿಕ್ಸನ್ ಮೊದಲಾದ ಕಂಪನಿಗಳು ಆಂಡ್ರೋಯ್ಡ್ ಆಪರೇಟಿಂಗ್ ಸಿಸ್ಟಂ ಇರುವ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಆಪಲ್ ನವರ ಐಫೋನ್ ಗಳು ಅತ್ತ್ಯುತ್ತಮವಾಗಿದ್ದರೂ ಕೂಡ ಅವುಗಳ ಬೆಲೆಯೂ ಅಷ್ಟೇ ಹೆಚ್ಚು. (ಹೋಲಿಸಿದಾಗ) ಕಡಿಮೆ ಬೆಲೆ ಹಾಗೂ ಬಳಕೆದಾರ ಸ್ನೇಹಿಯಾಗಿರುವ ಆಂಡ್ರೋಯ್ಡ್ ಫೋನ್ ಗಳ ಮೇಲೆ ಜನ ಮುಗಿದುಬೀಳುತ್ತಿದ್ದಾರೆ. ಇಂಟರ್ನೆಟ್ ನಿಂದ ಇಳಿಸಿಕೊಳ್ಳಬಹುದಾದ–ಅಂತರ್ಜಾಲದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿರುವ–ಅಪ್ಪ್ಲಿಕೇಶನ್ ಗಳೆಂಬ ಸಾಫ್ಟ್ ವೇರ್ ಗಳು (ಆಪ್ಸ್)–ಎಲ್ಲಾ ಸ್ಮಾರ್ಟ್ ಫೋನ್ ಗಳ ನಿಜವಾದ ಆಕರ್ಷಣೆ. ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಅನೇಕ ಉಪಯುಕ್ತ ಅಪ್ಲಿಕೇಶನ್ ಗಳು ಉಚಿತ!!! ಲೇಖನದ ಮುಂದಿನ ಭಾಗದಲ್ಲಿ–ಮೊಬೈಲ್ ಫೋನ್ ಗಳನ್ನು ಜನೋಪಯೋಗೆ ವಸ್ತುಗಳನ್ನಾಗಿ ಮಾಡುವ–ಅಂತರ್ಜಾಲದ ಆಂಡ್ರೋಯ್ಡ್ ಮಾರುಕಟ್ಟೆಯಲ್ಲಿ ಸಾವಿರ ಸಂಖ್ಯೆಗಳಲ್ಲಿರುವ ಅಪ್ಪ್ಲಿಕೆಶನ್ ಗಳಲ್ಲಿ–ಕೆಲವೊಂದನ್ನು ನಿಮಗೆ ವಿವರಿಸಲಿದ್ದೇನೆ. ಈ ವಿವರಣೆಗಳು ಮಾಮೂಲಿ ಮೊಬೈಲ್ ಗಳಿಗಿಂತ (ಆಂಡ್ರೋಯ್ಡ್) ಸ್ಮಾರ್ಟ್ ಫೋನ್ ಗಳು ಹೇಗೆ ಬಿನ್ನವೆಂಬುದು ನಿಮಗೇ ಗಮನಕ್ಕೆ ತರುತ್ತವೆ.
                ಮೇಲ್ ವ್ಯವಸ್ಥೆ – ಕಂಪ್ಯೂಟರ್ ಗಳಲ್ಲಿ ಎಂ.ಎಸ್. ಆಫಿಸ್ ಔಟ್ಲುಕ್ ಇರುವಂತೆ ಸ್ಮಾರ್ಟ್ ಫೋನ್ ಗಳಲ್ಲೂ ಮೇಲ್ ಕಳಿಸಲು ಹಾಗೂ ಸ್ವೀಕರಿಸಲು ವ್ಯವಸ್ತೆಯಿದೆ. ಒಮ್ಮೆ ಕಾನ್ಫಿಗರ್ ಮಾಡಿದರೆ ಸಾಕು. ನಿಮ್ಮ ಮೇಲ್ ಗಳು ನಿಮ್ಮ ಮೇಲ್ ಅಕೌಂಟ್ ನಿಂದ (ಜಿ ಮೈಲ್/ಯಾಹೂ ಇತ್ಯಾದಿ) ಮೊಬೈಲ್ ಗೇ ಆ ಕ್ಷಣದಲ್ಲಿ ಬಂದು ಬೀಳುತ್ತವೆ!!! ಎಸ್.ಎಂ.ಎಸ್ ತರ ಸಣ್ಣ ಶಬ್ದದೊಂದಿಗೆ. (ನಿಮ್ಮ ಜಿ ಮೈಲ್/ಯಾಹೂ ಅಕೌಂಟ್ ನ ಸೆಟ್ಟಿಂಗ್ ನಲ್ಲಿ POP/IMAP ಎನಾಬಲ್ ಮಾಡಿ ಸೇವ್ ಮಾಡಿರಬೇಕು). ಮೇಲ್ ಗಳನ್ನು ನೋಡಲು ಕಂಪ್ಯೂಟರ್ ಮೊರೆ ಹೋಗುವ ಅವಶ್ಯಕತೆಯಿಲ್ಲ. ಮೊಬೈಲ್ ಉಪಯೋಗಿಸಿ ನೀವು ತೆಗೆದ ಫೋಟೋಗಳನ್ನೂ ಕ್ಷಣಾರ್ದದಲ್ಲಿ ಮೇಲ್ ಮಾಡಬಹುದು. ಆಂಡ್ರೋಯ್ಡ್ ಫೋನ್ ಗಳಲ್ಲಿ ಜಿ ಮೈಲ್ ಎಂಬ ಅಪ್ಪ್ಲಿಕೆಶನ್ನೇ ಇದೆ.
            ಗೂಗ್ಲ್ ಸ್ಕೈ ಮ್ಯಾಪ್ – ಸೂರ್ಯ ಆಗಷ್ಟೇ ಮುಳುಗಿ ಕತ್ತಲಾವರಿಸುತ್ತಿರುವಂತೆ ಚಂದ್ರನ ಪಕ್ಕ ಹೊಳೆಯುವ ಆಕಾಶಕಾಯವೊಂದು ಕಾಣಿಸಲಾರಂಬಿಸುತ್ತದೆ. ನೀವು ಸ್ನೇಹಿತರೊಂದಿಗೆ ನಿಂತಿದ್ದೀರಿ. ಆ ಆಕಾಶಕಾಯ ಯಾವುದೆಂದು ಚರ್ಚೆನಡೆಯುತ್ತಿದೆ – ಗುರುನೋ,ಶುಕ್ರನೋ,ಶನಿಯೋ ಅಥವಾ ಮತ್ತಾವುದೋ ನಕ್ಷತ್ರವೋ ಎಂದು. ಈಗ ನಿಮ್ಮ ಜೇಬಿನಿಂದ ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಹೊರಬರುತ್ತದೆ. ಗೂಗ್ಲ್ ಸ್ಕೈ ಮ್ಯಾಪ್ ಅಪ್ಲಿಕೇಶನ್ ಕ್ಲಿಕ್ ಮಾಡ್ತೀರಿ. ಟವರ್ ಲೋಕೇಶನ್ ಆದಾರದಲ್ಲಿ ನೀವಿರುವ ಸ್ಥಳ ತಿಳಿದುಕೊಂಡು ಆ ಅಪ್ಲಿಕೇಶನ್ ನಿಮ್ಮ ಮೊಬೈಲ್ ಸ್ಕ್ರೀನ್ ನಲ್ಲಿ ನಿಮ್ಮ ಸುತ್ತ ಕಾಣುವ ಗ್ರಹನಕ್ಷತ್ರಗಳನ್ನು ಮೂಡಿಸುತ್ತದೆ!!! ಸ್ಮಾರ್ಟ್ ಫೋನನ್ನು ಚಂದ್ರನತ್ತ ಹಿಡಿದರೆ ಸಾಕು. ಚಂದ್ರ ಹಾಗೂ ಆ ಆಕಾಶಕಾಯ ಯಾವುದೆಂದು (ಇಂಗ್ಲೀಷ್ ನಲ್ಲಿ) ಸ್ಕ್ರೀನ್ ನಲ್ಲಿ ಮೂಡಿರುತ್ತದೆ. ವಾವ್!!! ಎಷ್ಟೊಂದು ಅದ್ಬುತ ಅಲ್ವಾ?? ಸ್ಮಾರ್ಟ್ ಫೋನ್ ಗಳು ನಿಮ್ಮನ್ನು ಮತ್ತಷ್ಟು ಸ್ಮಾರ್ಟ್ ಮಾಡುತ್ತವೆ!!!
          ಜಿ.ಪಿ.ಎಸ್, ಗೂಗ್ಲ್ ಮ್ಯಾಪ್ ಹಾಗೂ ಇವಕ್ಕೆ ಸಂಬಂದಿತ ಅಪ್ಲಿಕೇಶನ್ ಗಳು ಜೇಬಿನಿಂದ ಸ್ಮಾರ್ಟ್ ಫೋನ್ ತೆಗೆದು ಜಿ.ಪಿ.ಎಸ್ ಆನ್ ಮಾಡಿ ಗೂಗ್ಲ್ ಮ್ಯಾಪ್ ಅಪ್ಲಿಕೇಶನನ್ನ ಬೆರಳಿಂದ ಮುಟ್ತೀರಿ. ಈಗ ಮೊಬೈಲ್ ನ ಪರದೆಯಮೇಲೆ (ಟವರ್ ಆದಾರದಮೇಲೆ ನೀವಿರುವ ಜಾಗ ತಿಳಿದುಕೊಂಡು) ನೀವಿರುವ ಜಾಗದ ಮ್ಯಾಪ್ ಮೂಡಲಾರಂಬಿಸುತ್ತದೆ. ಮನೆಮುಂದೆ ನಿಂತಿದ್ದಾರೆ ಮನೆ ಮಾಡು,ಅಂಗಳ, ರಸ್ತೆ ಕಾಣಲಾರಂಬಿಸುತ್ತದೆ. ಈಗ ಪರದೆಯಮೇಲೆ ಬಾಣದ ತುದಿಯ ಆಕಾರದ ಸಣ್ಣ ನೀಲಿ ಬಣ್ಣದ ಗುರುತು ಮೂಡುತ್ತದೆ. ಅದೇ ನಿಮ್ಮ ಸ್ಮಾರ್ಟ್ ಫೋನ್ (ಗುರುತು)!!! ಫೋನ್ ಹಿಡಿದುಕೊಂಡು ನೀವು ಗೇಟಿನತ್ತ ನಡೆಯುತ್ತಿದ್ದಂತೆ ಆ ಬಾಣದ ಗುರುತೂ ಸ್ಕ್ರೀನ್ ಮೇಲಿನ ಮ್ಯಾಪಿನಲ್ಲಿ ಚಲಿಸಲಾರಂಭಿಸುತ್ತದೆ!!! ಬೈಕೋ ಕಾರೋ ಹತ್ತಿ ವೇಗವಾಗಿ ಹೋಗುತ್ತಿದ್ದರೆ ಪರದೆಯಲ್ಲಿ ಕಾಣುವ ರಸ್ತೆಯ ಮ್ಯಾಪಿನಲ್ಲಿ ಆ ಗುರುತೂ ಅಷ್ಟೇ ವೇಗವಾಗಿ ಚಲಿಸುತ್ತಿರುತ್ತದೆ!!! ಇದೇ ಜಿ.ಪಿ.ಎಸ್ ವ್ಯವಸ್ಥೆ. ಜಿ.ಪಿ.ಎಸ್ ಎಂದರೆ ನಾವು (ಜಿ.ಪಿ.ಎಸ್ ಇರುವ ಉಪಕರಣ ಹಿಡಿದವರು) ಪ್ರಪಂಚದ ಎಲ್ಲೇ ಇದ್ದರೂ ನಾವಿರುವ ಖಚಿತ ಸ್ಥಳವನ್ನು ನಮ್ಮ ಉಪಕರಣದಲ್ಲಿ ತೋರಿಸುವ ವ್ಯವಸ್ಥೆ. ಹೆಚ್ಚಿನ ಸ್ಮಾರ್ಟ್ ಫೋನ್ ಗಳಲ್ಲಿ ಜಿ.ಪಿ.ಎಸ್ ರಿಸೀವರ್ ಇರುತ್ತವೆ. ನಗರದೊಳಗಾಗಲಿ ಕಾಡಿನಲ್ಲಾಗಲಿ ನಾವು ಕಳೆದುಹೋಗುವ ಸಂಭವ ಕಡಿಮೆ. ಇನ್ನೂ ಆಶ್ಚರ್ಯವೆಂದರೆ ಜಿ.ಪಿ.ಎಸ್ ವ್ಯವಸ್ಥೆಗೆ ಮೊಬೈಲ್ ನೆಟ್ ವರ್ಕ್ ಸಿಗ್ನಲ್ ಅಗತ್ಯತೆ ಇಲ್ಲದೇ ಇರುವುದು!!! (ಆದರೆ ಗೂಗ್ಲ್ ಮ್ಯಾಪ್ ತೆರೆದುಕೊಳ್ಳಲು ನೆಟ್ ವರ್ಕ್ ಬೇಕು. ಆದರೆ ಒಮ್ಮೆ ನೆಟ್ ವರ್ಕ್ ಇದ್ದಾಗ ನಮ್ಮ ಸುತ್ತಮುತ್ತಲಿನ ಒಂದಿಷ್ಟು ಜಾಗದ ಮ್ಯಾಪ್ ಫೋನ್ ನ ಕೆಷೆಯಲ್ಲಿ ಸಂಗ್ರಹವಾಗಿರುತ್ತದೆ. ಕೂಡಲೇ ನೆಟ್ ವರ್ಕ್ ಸಿಗ್ನಲ್ ಇಲ್ಲದ ಜಾಗಕ್ಕೆ ನಾವು ಹೋದರೂ ಜಾಗದ ಮ್ಯಾಪ್ ಸ್ಕ್ರೀನ್ ನಲ್ಲಿ ಇದ್ದೇ ಇರುತ್ತದೆ!!) ನಡುರಾತ್ರಿಯಲ್ಲಾಗಲಿ ಚಾರಣ ಮಾಡುತ್ತಾ ಕಾಡೊಳಗೆ ದಾರಿ ತಪ್ಪಿದ್ದರೆ ಜಿ.ಪಿ.ಎಸ್ ಇರುವ ಸ್ಮಾರ್ಟ್ ಫೋನ್ ಇದ್ದರೆ ಅಲೆದಾಟ ತಪ್ಪುತ್ತದೆ. ಸರಿದಾರಿಗೆ ಸುಲಭವಾಗಿ ಬರಬಹುದು. ಈ ಜಿ.ಪಿ.ಎಸ್ ಗೆ ಸಂಬಂದಿಸಿದಂತೆ ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳಿಗಾಗಿ (ಮೈ ಟ್ರಾಕ್, ಜಿ.ಪಿ.ಎಸ್ ಎಸ್ಸೇನ್ಶಿಯಲ್ ನಂತಹ) ಅನೇಕ ಅಪ್ಲಿಕೇಶನ್ ಗಳಿವೆ. ಅವುಗಳನ್ನು ಆನ್ ಮಾಡಿ ಫೋನನ್ನು ಜೇಬಿನಲ್ಲಿಟ್ಟುಕೊಂಡು ಜಮೀನಿಗೆ ಒಂದು ಸುತ್ತು ಬಂದರೆ ಜಮೀನಿನ ಮ್ಯಾಪ್ ರೆಡಿ!!! ಸ್ಮಾರ್ಟ್ ಫೋನ್ ಗಳಿದ್ದರೆ (ನಗರಗಳಲ್ಲಿ) ನೇವಿಗೇಶನ್ ಗೇ ಅನೇಕ ಅಪ್ಲಿಕೇಶನ್ ಗಳಿವೆ. ರಾತ್ರಿ ಕೊಲ್ಲೂರಿನಿಂದ ಶೃಂಗೇರಿಕಡೆ ಹೊರಟು–ಮದ್ಯದಲ್ಲೆಲ್ಲಾದರೂ (ಅಪರಾತ್ರಿಯಲ್ಲಿ)-ಸಾಗುತ್ತಿರುವ ದಾರಿ ಸರಿಯೇ ತಪ್ಪೇ ಎಂದು ಅನುಮಾನ ಬಂದರೆ-ಈ ನೇವಿಗೇಶನ್ ಅಪ್ಲಿಕೇಶನ್ ಉಪಯೋಗಿಸಿ–ದಾರಿ ಸರಿಯಾದದ್ದಾಗಿದೆಯೇ ಹಾಗೂ ಶೃಂಗೇರಿ ಎಷ್ಟು ದೂರದಲ್ಲಿದೆ ಹಾಗು ಎಷ್ಟು ಸಮಯದ ದಾರಿ ಎಂಬುದನ್ನು ಕಂಡುಕೊಳ್ಳಬಹುದು!!!! ನಿಜಕ್ಕೂ ಈ ಜಿ.ಪಿ.ಎಸ್ ವ್ಯವಸ್ಥೆ ಅತ್ಯದ್ಭುತ.
       ಅಕ್ಕ್ಯುವೆದರ್ ಥೇನ್ ಚಂಡಮಾರುತ ಬರುವುದಕ್ಕೆ ನಾಲ್ಕೈದು ದಿನ ಮೊದಲು. ಸಮಾ ಚಳಿ ಬಾರಿಸುತಿತ್ತು. ಚಳಿ ಬಗ್ಗೆನೇ ಎಲ್ಲರ ಮಾತು. ಸ್ಮಾರ್ಟ್ ಫೋನ್ ಹೊರತೆಗೆದು ಏನೋ ನೋಡಿ ನಾನೆಂದೆ-‘ಮೂರ್ನಾಲ್ಕು ದಿನಗಳಲ್ಲಿ ಮೋಡಗಳ ಆಗಮನವಾಗಲಿದೆ. ಚಳಿ ಕಡಿಮೆಯಾಗಲಿದೆ–ಎಂದು. ನನ್ನ ಭವಿಷ್ಯವಾಣಿ ನಿಜವಾಗಿತ್ತು!! ಮೋಡಗಳ ಆಗಮನವಾಗಿ ಚಳಿ ಹಿಂದೇಟು ಹಾಕಿತ್ತು!!! ಎಲ್ಲರಿಗೂ ಆಶ್ಚರ್ಯ. ಅಂದು ನನ್ನಿಂದ ಆ ಭವಿಷ್ಯವಾಣಿ ಬರಲು ಕಾರಣವಾಗಿದ್ದು ಅಕ್ಕ್ಯುವೆದರ್ ಅಪ್ಲಿಕೇಶನ್. ಅಂತರಜಾಲದಲ್ಲಿ ಬಹು ಪ್ರಸಿದ್ದ ಅಕ್ಕ್ಯುವೆದರ್.ಕಾಂ ನವರ (ಉಚಿತ) ಅಪ್ಲಿಕೇಶನ್. (ನಾನು ಗಮನಿಸಿದಂತೆ) ನಾಲ್ಕೈದು ದಿನಗಳೊಳಗಿನ ಹವಾಮಾನ ಮನ್ಸೂಚನೆ ನೂರಕ್ಕೆ ಎಂಬತ್ತರಷ್ಟು ಸರಿ. ನಗರವಾಸಿಗಳಿಗೆ ಹವಾಮಾನ ಮನ್ಸೂಚನೆ ಅಷ್ಟು ಅಗತ್ಯವೆನ್ನಿಸದಿದ್ದರೂ ರೈತರಿಗೆ ಅಂತಹ ಮನ್ಸೂಚನೆಗಳು ಅತ್ಯಮೂಲ್ಯ.
     ಗ್ಲಿಂಪ್ಸ್ – ಉದಾಹರಣೆ ೧ – ತಂದೆ:- (ದೂರದ್ಯಾವುದೋ ಒಂದು ಊರಿನಲ್ಲಿ ಓದುತ್ತಿರುವ ಮಗನನ್ನುದ್ದೇಶಿಸಿ ಫೋನಿನಲ್ಲಿ) ಏನ್ ಮಾಡ್ತಿದ್ದಿ ಮಗನೇ? ಚನ್ನಾಗಿ ಓದ್ಕಂತಿದ್ದ್ಯಾ?. ಮಗನ ಉತ್ತರ :- ಹೂ ಅಪ್ಪ. ಹಾಸ್ಟಲಲ್ಲೇ ಕುಂತ್ಕಂಡ್ ಓದ್ತಿದ್ದೀನಿ. ಸತ್ಯ :- ಸಿನೆಮಾ ಟಾಕೀಸ್ ಎದುರುಗಡೆ ಕ್ಯೂನಲ್ಲಿ ನಿಂತಿರ್ತಾನೆ!!!
  ಉದಾಹರಣೆ ೨ – ಹೆಂಡತಿ :- (ರಾತ್ರಿಯಾದರೂ ಇನ್ನೂ ಆಪೀಸಿನಿಂದ ಮನೆಗೆ ಬಾರದ ಗಂಡನಿಗೆ ಫೋನಿನಲ್ಲಿ) ರೀ, ಎಲ್ ಎನ್ಮಾಡ್ತಿದ್ದೀರೀ?. ಗಂಡನ ಉತ್ತರ :- ಆಫೀಸಲ್ಲೇ ಇದ್ದೀನಿ. ಇಂಪಾರ್ಟೆಂಟ್ ಮೀಟಿಂಗ್ ಇದೆ. ಇನ್ನೇನ್ ಬಂದ್ಬಿಡ್ತೀನಿ. ಸತ್ಯ :- ಯಾವ್ದೋ ಹೋಟ್ಲಲ್ (ಯಾರೊಂದಿಗೋ) ದೋಸೆ ಮೆಲ್ತಿರ್ತಾನೆ!!!
 ಉದಾಹರಣೆ ೩ – ಮಾಲೀಕ :- (ಯಾವುದೋ ಕೆಲಸಕ್ಕೆ ದೂರದ ಊರಿಗೆ ಕಳಿಸಿದ ಕೆಲಸಗಾರನನ್ನುದ್ದೇಶಿಸಿ ಫೋನಿನಲ್ಲಿ) ಎಲ್ಲಿದ್ದಿ? ಹೋದ್ ಕೆಲಸ ಆಯ್ತಾ?. ಕೆಲಸಗಾರನ ಉತ್ತರ :- ಇಲ್ಲಾ ಸಾರ್. ಇಲ್ಲೇ ಇದ್ದೀನಿ. ಕೆಲಸ ಮುಗ್ಸಿ ನಾಳೆ ಬರ್ತೀನಿ. ಸತ್ಯ :- ಮನೆಗೆ ಹೋಗಿ ಮುಸುಕೆಳಕೊಂಡ್ ಮಲಗಿರ್ತಾನೆ!!
           ತಾವೀಗಿರುವ ಸ್ಥಳದ ಬಗ್ಗೆ ಜನ ಸುಳ್ಳು ಹೇಳಲು ಮುಖ್ಯ ಕಾರಣ ದೂರದಲ್ಲಿದ್ದು ಕೇಳುತ್ತಿರುವವರಿಗೆ ಅದು ಗೊತ್ತಾಗುವುದಿಲ್ಲವೆಂಬುದು. ಅಂತಹ ಸುಳ್ಳಾಟಕ್ಕೆಲ್ಲ ಕಡಿವಾಣ ಹಾಕುವ ಒಂದು ಅಪ್ಲಿಕೇಶನ್ ಸ್ಮಾರ್ಟ್ ಫೋನ್ ಗಳಲ್ಲಿವೆಯೆಂದರೆ ನಿಜಕ್ಕೂ ನಿಮಗೆ ನಂಬಲು ಕಷ್ಟವಾಗಬಹುದು. ಅದೇ ಗ್ಲಿಂಪ್ಸ್ ಎಂಬ ಅಪ್ಲಿಕೇಶನ್!!! ಜಿ.ಪಿ.ಎಸ್. ಆನ್ ಮಾಡಿ ಈ ಗ್ಲಿಂಪ್ಸ್ ಅನ್ನು ಲಾಂಚ್ ಮಾಡುತ್ತಿದ್ದಂತೆಯೇ ತೆರೆಯಮೇಲೆ (ಗೂಗ್ಲ್) ಮ್ಯಾಪ್ ಹಾಗೂ ಅದರಲ್ಲಿ ನಾವಿರುವ ಸ್ಥಳ (ಮಿನುಗುವ ಸಣ್ಣ ಗುರುತಿನಂತೆ) ಕಾಣಿಸಿಕೊಳ್ಳುತ್ತದೆ. ಈ ಲೊಕೇಶನನ್ನು ನಾವು ಯಾರಿಗಾದರೂ ಎಸ್.ಎಂ.ಎಸ್/ಈ ಮೇಲ್ ಮಾಡಬಹುದು. (ಫೇಸ್ ಬುಕ್/ಟ್ವಿಟ್ಟರಲ್ಲೂ ಶೇರ್ ಮಾಡಬಹುದು). ಎಸ್.ಎಂ.ಎಸ್/ಈ ಮೇಲ್ ಗಳು ಕೂಡಲೇ ತಲುಪುತ್ತವಷ್ಟೇ. ಅವರು ಆ ಎಸ್.ಎಂ.ಎಸ್/ಈ ಮೇಲ್ ತೆರೆದರೆ ಅಲ್ಲಿ (ಗೂಗ್ಲ್) ಮ್ಯಾಪ್ ತೆರೆದುಕೊಂಡು ನಮ್ಮ ಲೊಕೇಶನ್ ಕಾಣಿಸುತ್ತದೆ. ಮೇಲಿನ ಉದಾಹರಣೆಗಳಲ್ಲಿ (ಸ್ಮಾರ್ಟ್ ಫೋನ್ ಉಪಯೋಗಿಸಲ್ಪಡುತ್ತಿದ್ದು) ತಂದೆ/ಹೆಣ್ತಿ/ಮಾಲೀಕ ಹೌದಾ. ಎಲ್ಲಿ ಒಂದು ಗ್ಲಿಂಪ್ಸ್ ಮೆಸ್ಸೇಜ್ ಕಳಿಸಿ ನೋಡುವ”- ಅಂದರೆ ಮಗ/ಗಂಡ/ಕೆಲಸಗಾರನ ನಿಜಸ್ಥಳ ಗೊತ್ತಾಗುತ್ತದೆ!! ಈ ಅಪ್ಲಿಕೇಶನನ್ನು ಅನೆಕಕಡೆ ಉಪಯೋಗಿಸಬಹುದೆಂದು ನನ್ನನಿಸಿಕೆ. ರಾತ್ರಿ ಬೀಟ್ ಪೋಲಿಸ್ ನವರು ಠಾಣೆಗೆ ಆಗಾಗ್ಯೆ ಈ ಮೇಲ್/ಎಸ್.ಎಂ.ಎಸ್ ಕಳಿಸುವ ವ್ಯವಸ್ಥೆ ಮಾಡಬಹುದು.
         ಯೂಟ್ಯೂಬ್ – ಅಂತರ್ಜಾಲದ ಯೂಟ್ಯೂಬ್ ನಲ್ಲಿರುವ ಸಾವಿರ ಸಾವಿರ ವಿಡಿಯೋಗಳು ಸ್ಮಾರ್ಟ್ ಫೋನ್ ನಲ್ಲಿ ನಿಮ್ಮ ಕೈಯ್ಯಲ್ಲಿ!! ಯೂಟ್ಯೂಬ್ ಅಪ್ಲಿಕೇಶನ್ ಮಹಿಮೆ. ಕೊಲವೆರಿ ಹಾಡಿನ ಬಗ್ಗೆ ಪೇಪರಲ್ಲಿ ಓದಿದ ನಾನು ಕೂಡಲೇ ಯೂಟ್ಯೂಬ್ ಅಪ್ಲಿಕೇಶನನ್ನು ಸ್ಮಾರ್ಟ್ ಫೋನಲ್ಲಿ ಕ್ಲಿಕ್ಕಿಸಿ ಆ ಕೂಡಲೇ ಆ ಹಾಡು ನೋಡಿದೆ!!
        ಟಾಕಿಂಗ್ ಟಾಮ್ – ಮೇಲೆಲ್ಲಾ ನಾನು ಹೇಳಿದ ಅಪ್ಲಿಕೇಶನ್ ಗಳು ಕೆಲವರ ಸ್ಮಾರ್ಟ್ ಫೋನಲ್ಲಿ ಇರಬಹುದು ಅಥವಾ ಕೆಲವರದ್ದರಲ್ಲಿ ಇಲ್ಲದೇ ಇರಬಹುದು. ಆದರೆ (ಬಹುಶಃ) ಪ್ರತಿಯೊಂದು ಆಂಡ್ರೋಯ್ಡ್ ಸ್ಮಾರ್ಟ್ ಫೋನಲ್ಲಿ ಇದ್ದೇಇರಬಹುದಾದ ಅಪ್ಲಿಕೇಶನ್ನೇ ಮಾತಾಡುವ ತುಂಟ ಬೆಕ್ಕು ಟಾಕಿಂಗ್ ಟಾಮ್!!! ಟಾಕಿಂಗ್ ಟಾಮ್ ಅಪ್ಲಿಕೇಶನ್ ಲಾಂಚ್ ಮಾಡುತ್ತಿದ್ದಂತೆ ತೆರೆಯಮೇಲೆ ಬೆಕ್ಕೊಂದು ಪ್ರತ್ಯಕ್ಷವಾಗಿ ಆಕಳಿಸಲಾರಂಬಿಸುತ್ತದೆ. ನಾವು ಮಾತು ಶುರುಮಾಡುತ್ತಿದ್ದಂತೆ-ಕತ್ತನ್ನು ಪಕ್ಕಕ್ಕೆ ಹೊರಳಿಸಿ ಕಣ್ಣು ಮಿಟುಕಿಸುತ್ತಾ-ಕಿವಿ ಹಿಂದೆ ಅಂಗೈಯನ್ನು ಅಗಲಮಾಡಿ ಹಿಡಿದು-ನಮ್ಮ ಮಾತನ್ನೇ ಆಲಿಸಲಾರಂಬಿಸುತ್ತದೆ. ನಮ್ಮ ಮಾತು ಮುಗಿಸುತ್ತಿದ್ದಂತೆ ನಾವು ಏನು ಮಾತಾಡಿದ್ದೆವೋ ಅದನ್ನೇ ತನ್ನದೇ ಧ್ವನಿಯಲ್ಲಿ (ಸ್ಪಷ್ಟವಾಗಿ) ಒದರುತ್ತದೆ!!! ಪಟಪಟ ಮಾತಾಡುವ ಹೆಂಗಸರ ಮದ್ಯ ಹಿಡಿದರಂತೂ ಹೇಳಿದ್ದೇ ಹೇಳುತ್ತಲಾ ನೋಡೇ ಎಂದು ಬಿದ್ದುಬಿದ್ದು ನೆಗಾಡುತ್ತಾರೆ. ಅದು ಪುನರಾವರ್ತಿಸುವ ನಮ್ಮ ಮಾತುಗಳನ್ನು ರೆಕಾರ್ಡ್ ಮಾಡಿ ಫೇಸ್ ಬುಕ್/ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಬಹುದು. ಅದಕ್ಕೂ ಮಜಾವೆಂದರೆ-ಪರದೆಯ ಮೇಲೆ ಕಾಣುವ ಆ ಬೆಕ್ಕನ್ನ-ಬೆರಳಿನಿಂದ ಮುಟ್ಟುತ್ತಿದ್ದಂತೆ-ಅದು ಮಾಡುವ ಶಬ್ದಗಳು!!! ತಲೆಯನ್ನ ನಾಲ್ಕೈದುಸಲ ಮುಟ್ಟಿದರೆ ದಡ್ ಅಂತ ಅಡ್ಡನೇ ಬೀಳ್ತದೆ. ಹಾಲಿನ ಕ್ಯಾನ್ ಮುಟ್ಟಿ ಒಂದಿಷ್ಟು ಹಾಲು ಹಾಕಬಹುದು. ಗಟಗಟನೆ ಕುಡಿದು ಬಾಯಿ ಒರಸಿಕೊಳ್ಳುತ್ತದೆ. ಶುದ್ದ ಮನರಂಜನೆ. ಮಾತಾಡುವ ಇಂತಾ ಹಲವಾರು ಪ್ರಾಣಿಗಳು ಆಂಡ್ರೋಯ್ಡ್ ಮಾರುಕಟ್ಟೆಯಲ್ಲಿದ್ದರೂ ಅತಿಹೆಚ್ಚು ಡೌನ್ ಲೋಡ್ ಆಗುತ್ತಿರುವ ಅಪ್ಲಿಕೇಶನ್ ಇದು.
         ಸ್ಮಾರ್ಟ್ ಫೋನ್ ಗಳನ್ನು ಜನೋಪಯೋಗಿ ಮಾಡುವ ಇಂತಹ ಹತ್ತಾರು ಅಲ್ಲ ನೂರಾರು ಅಲ್ಲ ಸಾವಿರಾರು ಅಪ್ಲಿಕೇಶನ್ ಗಳು ಅಂತರ್ಜಾಲದಲ್ಲಿವೆ. ಯಾವುದೋ ಇಂಗ್ಲೀಷ್ ಪದದ ಅರ್ಥ ಗೊತ್ತಾಗಲಿಲ್ಲವೆಂದುಕೊಳ್ಳಿ. ಕೂಡಲೇ ಜೇಬಿನಿಂದ ಸ್ಮಾರ್ಟ್ ಫೋನ್ ತೆಗೆದು ಡಿಕ್ಷನರಿ ತೆರೆದು ನೋಡಬಹುದು. ಪ್ರಪಂಚಾದ್ಯಂತ ನಡೆಯುತ್ತಿರುವ ಘಟನೆಗಳನ್ನ ನಿಮಗೆ ಆ ಕೂಡಲೇ ತಿಳಿಸಲು ನೂರಾರು ಅಪ್ಲಿಕೇಶನ್ ಗಳಿವೆ. (ಎಲ್ಲಾ ಇಂಗ್ಲಿಷ್ ನ್ಯೂಸ್ ಚಾನಲ್ ಗಳ ಅಪ್ಲಿಕೇಶನ್ ಗಳಿವೆ. ‘ನ್ಯೂಸ್ ಹಂಟ್ ಅಪ್ಲಿಕೇಶನ್ ನಲ್ಲಿ ಕನ್ನಡ ದಿನಪತ್ರಿಕೆಗಳನ್ನು ಓದಬಹುದು). ನೂರಾರು ಆಟದ ಅಪ್ಲಿಕೇಶನ್ ಗಳಿವೆ. ಅಡಿಗೆಗೆ ಸಂಬಂದಪಟ್ಟವು, ರಸಿಕರ ಮನತಣಿಸುವಂತವು(!!!), ನಾವು ಮಾಡುವ ಉದ್ಯೋಗಗಳಿಗೆ ಸಂಬಂದಿಸಿದ್ದಂತವು (ಇವು ನಿಜಕ್ಕೂ ತುಂಬಾ ಅನುಕೂಲ), ಬಿ.ಎಂ.ಟಿ.ಸಿ ಬಸ್ಸಿನ ವೆಳಾಪಟ್ಟಿ ತಿಳಿಸುವಂತವು, ರೈಲ್ವೆ ವಿಮಾನ ವೆಳಾಪಟ್ಟಿ ತಿಳಿಸುವಂತವು, ಬಾರ್ ಕೋಡ್ ಓದುವಂತವು – ಇನ್ನೂ ಏನೇನಿವೆ ಎಂಬುದನ್ನು ನೀವೇ ನೋಡಲು ಇಲ್ಲಿ ಕ್ಲಿಕ್ಕಿಸಿ ಹಾಗೂ ಬೇಕಾದ್ದನ್ನು ಹುಡುಕಿ. ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗಿ ಮುಂದಿನ ಹತ್ತು ವರ್ಷಗಳಲ್ಲಿ ಅಪ್ಲಿಕೇಶನ್ (ಆಪ್ಸ್) ಎಂಬುದು ಹೆಚ್ಚಿನ ಎಲ್ಲರಿಗೂ ತಿಳಿದಿರುವ ಸರ್ವೇಸಾಮಾನ್ಯ ಪದವಾಗಬಹುದು. ಪತ್ರಿಕೆಗಳ ಒಂದು ಕಾಲಮ್ಮನ್ನು (ಹೊಸ) ಅಪ್ಲಿಕೇಶನ್ ಗಳ ಗುಣಾವಗುಣಗಳನ್ನು ವಿವರಿಸುವುದಕ್ಕೇ ಮೀಸಲಾಗಿಡುವ ದಿನಗಳು ದೂರವಿಲ್ಲ. ಸಂಸ್ಥೆಯೊಂದು (ಖಾಸಗಿ/ಸರ್ಕಾರಿ/ಶೈಕ್ಷಣಿಕ/ಧಾರ್ಮಿಕ/ಸಹಕಾರಿ-ಇತ್ಯಾದಿ) ತನ್ನ ಗ್ರಾಹಕರಿಗೆ ನೀಡುವ ಮಾಹಿತಿ/ಸೇವೆಗಳ ಮಾಹಿತಿಯನ್ನು ಅಪ್ಲಿಕೇಶನ್ ರೂಪದಲ್ಲಿ ಮೊಬೈಲ್ ಗೇ ನೀಡುವ ದಿನಗಳು ದೂರವಿಲ್ಲವೆಂದೆನಿಸುತ್ತದೆ. ಉದಾಹರಣೆಗೆ (ಮುಂದೊಂದು ಕಾಲದಲ್ಲಿ ಬರಬಹುದಾದ) ಕರ್ನಾಟಕ ಟೂರಿಸಂ ಅಪ್ಲಿಕೇಶನನ್ನು ಸ್ಮಾರ್ಟ್ ಫೋನಿಗೆ ಇಳಿಸಿಕೊಂಡು ಸುತ್ತಾಡಕ್ಕೆ ಹೋಗಬಹುದು!! ಜಿ.ಪಿ.ಎಸ್. ಉಪಯೋಗಿಸಿ ನೀವಿರುವ ಸ್ಥಳವನ್ನು ನಿಮ್ಮ ಮೊಬೈಲ್ ಮ್ಯಾಪಿನಲ್ಲೇ ತೋರಿಸಿ ಸುತ್ತಮುತ್ತ ಇರುವ ನೋಡುವ ಸ್ಥಳಗಳ ಮಾಹಿತಿಯನ್ನು ಹಾಗೂ ತಲುಪಲು ಸರಿಯಾದ ದಾರಿಯನ್ನು ಆ ಅಪ್ಲಿಕೇಶನ್ ನಿಮಗೆ ತಿಳಿಸಬಹುದು!!!
       ಎಲ್ಲಾ ಸರಿ. ಆಗಿಂದಲೇ ಸ್ಮಾರ್ಟ್ ಫೋನ್ ಗಳ ಬಗ್ಗೆ ಹೊಗಳುತ್ತಲೇ ಇದ್ದೀರಿ, ಅವುಗಳ ಬಗ್ಗೆ ಋಣಾತ್ಮಕ ಅಂಶಗಳು ಯಾವುವೂ ಇಲ್ವೆ??–ಎಂಬ ಪ್ರಶ್ನೆ ಸಹಜವಾಗಿಯೇ ನಿಮ್ಮ ತಲೆಯಲ್ಲಿ ಇಷ್ಟೊತ್ತಿಗಾಗಲೇ ಮೂಡಿರಬಹುದು. ಅದಕ್ಕೆ ಉತ್ತರವೇ ಲೇಖನದ ಈ ಪ್ಯಾರ. ಸ್ಮಾರ್ಟ್ ಫೋನ್ ಗಳಲ್ಲಿ ಎರಡು ಮುಖ್ಯ ನೆಗಿಟಿವ್ ಪಾಯಿಂಟ್ ಗಳಿವೆ. ಒಂದು ಅವುಗಳ ಬೆಲೆ. (ನೋಕಿಯಾ/ಎಲ್.ಜಿ/ಸ್ಯಾಮ್ಸಂಗ್ ನಂತಹ) ದೊಡ್ಡ ಕಂಪನಿಗಳನ್ನು ಬಿಡಿ. ಕಡಿಮೆ ಬೆಲೆಗಳ ಮೊಬೈಲ್ ತಯಾರಿಸುವ ಮೈಕ್ರೋಮ್ಯಾಕ್ಸ್ ನಂತಹ ಕಂಪನಿಗಳ ಸ್ಮಾರ್ಟ್ ಫೋನ್ ಗಳ ಬೆಲೆ (ಸಾದಾರಣವಾಗಿ) ಏಳು ಸಾವಿರ ರುಪಾಯಿಗಳ ಮೇಲೇ. ತುಂಬಾ ಸಾದಾರಣ ಕ್ಯಾಮರಾವಿರುವ (2 MP)-ಸ್ವಲ್ಪ ಇತ್ತೀಚಿನ ಆಂಡ್ರೋಯ್ಡ್ ವರ್ಷನ್ (ಜಿಂಜರ್ ಬ್ರೆಡ್) ಇರುವ-ಸಾದಾರಣ ಅಳತೆಯ ಪರದೆಯಿರುವ-ಸ್ವಲ್ಪ ಉತ್ತಮ ಪ್ರೊಸೆಸರ್ (೮೩೦ Mhz) ಇರುವ-ಹೆಚ್ಚಿನ ಬೆಲೆಯ ಸ್ಮಾರ್ಟ್ ಫೋನ್ ನಲ್ಲಿರುವ ಹೆಚ್ಚಿನ ಎಲ್ಲಾ ಉಪಯೋಗಗಳಿರುವ- ಹಾಗೂ ಆ ಕಾರಣಗಳಿಂದಾಗಿ ಇಂದು ಮಾರುಕಟ್ಟೆಯಲ್ಲಿ ಬಿಸಿದೋಸೆಯಂತೆ ಖಾಲಿಯಾಗುತ್ತಿರುವ-ಸ್ಯಾಮ್ಸಂಗ್ ನವರ ಗ್ಯಾಲಕ್ಸಿ ವೈ ಸ್ಮಾರ್ಟ್ ಫೋನ್ ಬೆಲೆಯೂ ಏಳುಸಾವಿರ ರೂ ಗಳ ಆಚೆನೇ. (ಅದೇ ಸ್ಯಾಮ್ಸಂಗ್ ನವರ ಗ್ಯಾಲಕ್ಸಿ S-2 ಬೆಲೆ ೨೯೦೦೦ !!!). ಇನ್ನೊಂದು ನೆಗಿಟಿವ್ ಪಾಯಿಂಟ್ ಅವುಗಳ ಕಡಿಮೆ ಅವದಿಯ ಬ್ಯಾಟರಿ ಬಾಳಿಕೆ. (ಮತ್ತೆಮತ್ತೆ ಮಾಡಬೇಕೆನಿಸುವ) ಅನೇಕ ಮಂಗಾಟಗಳಿಗೆ ತುಂಬಾ ಅವಕಾಶಗಳಿರುವುದರಿಂದ-ಮೊಬೈಲಿನ ಕೇವಲ ಮಾತನಾಡುವುದಕ್ಕಿಂತ ಬೇರೆ ಉಪಯೋಗಗಳೇ ಹೆಚ್ಚು ಹೆಚ್ಚು ಇರುವುದರಿಂದ-ಬ್ಯಾಟರಿಯ ಬಳಕೆಯೂ ಹೆಚ್ಚು. ಮಾಮೂಲಿ ಮೊಬೈಲಿಗಿಂತ ಹೆಚ್ಚುಬಾರಿ ಚಾರ್ಜ್ ಮಾಡ್ಬೇಕಾಗುತ್ತೆ. ಇನ್ನೊಂದು ವಿಷಯ. ನಾಳೆನೇ ನೀವು ಮಾಮೂಲಿ ಮೊಬೈಲ್ ಬದಲಾಯಿಸಿ ಹೊಸ ಸ್ಮಾರ್ಟ್ ಫೋನ್ ತಗಂಡರೆ, ಉಪಯೋಗಿಸುವ ಮೊದಲು ಒಂದು ಇಂಟರ್ನೆಟ್ ಡಾಟಾ ಪ್ಲಾನ್ ತಗಣುವುದು ಒಳ್ಳೆಯದು. (ಬಿ.ಎಸ್.ಏನ್.ಎಲ್ ನವರದ್ದು ೫೭ ಹಾಗೂ ೯೬ ರೂಗಳ/ತಿಂಗಳಿಗೆ ಪ್ಲಾನ್-2Gಗೆ-ಇದೆ). ಇಲ್ಲದಿದ್ದರೆ ನಿಮ್ಮ ಕರೆನ್ಸಿ (ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಗಳನ್ನು ಉಪಯೋಗಿಸಿದಂತೆಲ್ಲಾ) ನೀರಿನಂತೆ ಖಾಲಿಯಾಗಲಾರಂಬಿಸಿ ನನ್ನನ್ನು ಬೈದುಕೊಳ್ಳುತ್ತೀರಿ.
       ಈ ಲೇಖನ-ಮೊಬೈಲ್ ಗಳು ಕೇವಲ ಪರಸ್ಪರ ಮಾತಾಡಲು (ಮಾತ್ರ) ಇರುವುವು-ಎಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ-ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆಯೆಂಬುದು ನನ್ನನಿಸಿಕೆ. ಇನ್ನುಮುಂದಾದರೂ ನೀವು-ನಾಲ್ಕಾರು ಜನ ಒಟ್ಟುಸೇರಿ ಮಾತಾಡುತ್ತಿರುವಾಗ-ನೆಂಟರಿಷ್ಟರ ಹುಡುಗನೊಬ್ಬ/ಸ್ನೇಹಿತನೊಬ್ಬ ಅದೆಷ್ಟೋ ಸಾವಿರ ರೂಪಾಯಿಯ ಮೊಬೈಲ್ ತಗಂಡ-ಎಂಬ ಮಾತು ಬಂದಾಗ-ಚಿನ್ನದ ಉಂಗುರಗಳನ್ನು ಬೆರಳುಗಳಿಗೆ ಹಾಕಿದ ಕೈಯ್ಯಿಂದ-ಜೋಬಿನಿಂದ ನೋಕಿಯಾ (ಯಾವುದೋ ನಂಬರಿನ) ಹಳೆ ಸೆಟ್ ಹೊರತೆಗೆದು-ನಾನಿನ್ನೂ ಉಪಯೋಗಿಸುತ್ತಿರುದು ಇದನ್ನೇ-ಎಂದು (ಸಾವಿರಾರು ರೂಪಾಯಿ ಮೊಬೈಲನ್ನು ಕೊಂಡವರನ್ನು ಟೀಕೆ ಮಾಡುವ ದಾಟಿಯಲ್ಲಿ) ಹೇಳಲಾರಿರೆಂದು ಭಾವಿಸುತ್ತೇನೆ.(ನನಗಾದ ಅನುಭವ !!!)
         (ಯಾವುದೇ ಒಂದು) ಮೊಬೈಲಿನ ಬಳಕೆ ನನಗೆ ತೀರಾ ಇತ್ತೀಚಿನದು. ಕೇವಲ ಒಂದೂ ಮುಕ್ಕಾಲು ವರ್ಷವಾಯಿತಷ್ಟೇ(ಬೆಟ್ಟ-ಗುಡ್ಡಗಳ ಹಳ್ಳಿಗಾಡಿಗಳಲ್ಲಿನ ನೆಟ್ವರ್ಕ್ ಸಮಸ್ಯೆಯೇ ಇದಕ್ಕೆ ಕಾರಣ). ಅದಲ್ಲದೆ ಈ (ಮೊಬೈಲ್ ಗಳಿಗೆ ಸಂಬಂದಿಸಿದ) ತಾಂತ್ರಿಕತೆ ನಾನು ಓದಿದ ವಿಷಯವೂ ಅಲ್ಲ ಹಾಗು ನನ್ನ ಕಾರ್ಯಕ್ಷೇತ್ರವೂ ಅಲ್ಲ. (ನನ್ನ ಕಾರ್ಯಕ್ಷೇತ್ರ ಯಾವುದೆಂಬ ಸಹಜ ಕುತೂಹಲ ನಿಮ್ಮ ಮನದಲ್ಲಿ ಮೂಡಿದರೆ ಅದಕ್ಕೆ ಉತ್ತರ ನನ್ನ ಈ ಎರಡು ಹಿಂದಿನ ಬ್ಲಾಗ್ ಬರಹಗಳು-ಬರಹ೧ ಹಾಗು ಬರಹ ೨). ಈ ಎರಡು ಕಾರಣಗಳೇ ಸಾಕು ಒಂದಿಷ್ಟು ತಪ್ಪುಗಳು ಈ ಲೇಖನದಲ್ಲಿ ನುಸಿಳಿರಲು. ಈ ಲೇಖನವನ್ನು ಓದಿದ ವಿಷಯಕ್ಕೆ ಸಂಬಂದಪಟ್ಟ ತಂತ್ರಜ್ಞರು ಅವುಗಳನ್ನು (ಕಾಮೆಂಟ್ ನಲ್ಲಿ ಬರೆಯುವ ಮೂಲಕ) ನನ್ನ ಗಮನಕ್ಕೆ ತಂದರೆ ನನಗೆ ನನ್ನ ತಪ್ಪುಗಳ ಅರಿವಾಗಿ ತಿಳುವಳಿಕೆ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ. ನಾನು ಆರಂಬದಲ್ಲೇ ಬರೆದಿದ್ದೇನೆ. ಈ ಸ್ಮಾರ್ಟ್ ಫೋನುಗಳ ಬಗ್ಗೆ ವಿವರಣೆ ಕೆಲವರಿಗೆ ತೀರಾ ಸಾಮಾನ್ಯ ಹಾಗು ಗೊತ್ತಿದ್ದಿದ್ದೇ ಎಂದನಿಸಿದರೂ ಕೆಲವರಿಗಾದರೂ ಆಶ್ಚರ್ಯವಾಗಬಹುದು. ಸ್ಮಾರ್ಟ್ ಫೋನುಗಳ ಬಗ್ಗೆ ನಿಮಗೆ ಗೊತ್ತಿತ್ತೇ? ಅಥವಾ ಜ್ಞಾನೋದಯವಾಗಲ್ಪಡುತ್ತಿದೆಯೇ?? ನೀವು ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಉಪಯೋಗಿಸುವವರಾಗಿದ್ದಾರೆ ಒಂದಿಷ್ಟು ಆಸಕ್ತಿದಾಯಕ ಆಪ್ಸ್ ಗಳನ್ನ ಹಂಚಿಕೊಳ್ಳಬಹುದು. (ಕಾಮೆಂಟ್ ರೂಪದಲ್ಲಿ) ಓದುಗರ ಅಭಿಪ್ರಾಯಗಳಿಗೆ ಸದಾ ಸ್ವಾಗತ. (ಲೇಖನ ಮೆಚ್ಚುಗೆಯಾಗಿದ್ದು ಕಾಮೆಂಟ್ ಬರೆಯಲು ಪುರುಸೊತ್ತಿಲ್ಲದಿದ್ದರೆ ಕೆಳಗೆ +1 ರ ಮೇಲೆ ಕ್ಲಿಕ್ಕಿಸಬಹುದು).