Wednesday, October 24, 2012

ಕೆನಡಾದ ಆಲ್ಬೆರ್ಟಾ. ಇಲ್ಲಿ ಮರಳು ಹಿಂಡಿದರೆ ಕಪ್ಪು ಚಿನ್ನ !!!!!



          ಕನ್ನಡ ಕೋಟ್ಯಾದಿಪತಿ ನಡೆಯುತ್ತಿದೆ. ನೀವು ಪುನೀತ್ ರಾಜ್ ಕುಮಾರ್ ಎದುರು ಕೂತಿದ್ದೀರಿ. ಪ್ರಶ್ನೆ ತೂರಿಬರುತ್ತದೆ - ಪ್ರಪಂಚದ ಅತ್ಯಂತ ದೊಡ್ಡ ತೈಲ ನಿಕ್ಷೇಪ ಎಲ್ಲಿದೆ?  ನಾಲ್ಕು ಸಂಭಾವ್ಯ ಉತ್ತರಗಳು ಮೂಡುವ ಮೊದಲೇ ನೀವು ಉತ್ತರಿಸುತ್ತೀರಿ – ಮಿಡ್ಲ್ ಈಸ್ಟ್ . ಹೌದು. ಸೌದಿ ಅರೇಬಿಯಾ, ಕುವೈತ್, ಏಮನ್ ಹಾಗು ಅರಬ್ ಎಮಿರೇಟ್ಸ್ – ಮೊದಲಾದ ತೈಲದ ದುಡ್ಡಿನ ಮೇಲೇ ಕೂತಿರುವ ದೇಶಗಳಿರುವ ಮದ್ಯಪ್ರಾಚ್ಯ (ಮಿಡ್ಲ್ ಈಸ್ಟ್) – ಪ್ರಪಂಚದ ಅತಿದೊಡ್ಡ ತೈಲ ನಿಕ್ಷೇಪವಿರುವ ಪ್ರದೇಶ. ತೈಲ (ಹಾಗೂ ಅದರ ಉಪಯೋಗ) ಗೊತ್ತಾದಲ್ಲಿಂದ ಬಿಲಿಯನ್ ಗಟ್ಟಲೆ ಬ್ಯಾರಲ್ ತೈಲ ಅಲ್ಲಿನ ತೈಲಬಾವಿಗಳಿಂದ ತೆಗೆಯಲ್ಪಟ್ಟಿದೆ/ತೆಗೆಯಲ್ಪಡುತ್ತಿದೆ. ಹಾಗಾದರೆ ಈಗ ನನ್ನ ಪ್ರಶ್ನೆ- ಪ್ರಪಂಚದ ಎರೆಡನೇ ಅತಿದೊಡ್ಡ ತೈಲ ನಿಕ್ಷೇಪ ಯಾವುದು? ಎಲ್ಲಿದೆ?? ಯಾವುದಿರಬಹುದು? ರಷ್ಯಾದ – ಲಕ್ಷಾಂತರ ಬ್ಯಾರಲ್ ತೈಲ/ಅನಿಲವನ್ನು ದಿನನಿತ್ಯ ತೆಗೆದು ಯೂರೋಪ್ ದೇಶಗಳಿಗೆ ಪಂಪ್ ಮಾಡುವ – ಖಾಂಟಿ-ಮಾನ್ಸಿ ಪ್ರದೇಶವೇ? ಅಥವಾ ಕಪ್ಪು ಸಮುದ್ರದ ಸುತ್ತಮುತ್ತಲಿನ ಸೋವಿಯತ್ ಒಕ್ಕೂಟದಿಂದ ಹೊರಬಂದ ಹೊಸಹೊಸ ದೇಶಗಳೇ?? ಅಥವಾ ಆಫ್ರಿಕಾದ ನೈಜಿರಿಯಾದಲ್ಲಿನ ನೈಜರ್ ನದಿಯ ಡೆಲ್ಟಾವೇ???  ಊಹೂ೦. ಇದ್ಯಾವುದೂ ಅಲ್ಲ. ಪ್ರಪಂಚದ ಎರೆಡನೇ ಅತಿ ದೊಡ್ಡ ತೈಲ ನಿಕ್ಷೇಪವಿರುವುದು ಕೆನಡಾದ ಪಶ್ಚಿಮದ ಆಲ್ಬೆರ್ಟಾ ಪ್ರದೇಶದಲ್ಲಿ. ಬೇರೆಡೆಗಳಲ್ಲೆಲ್ಲಾ ನೆಲದಾಳಕ್ಕೆ ರಂದ್ರ ಕೊರೆದು, ಮೊದಲು ಸಿಗುವ ಗ್ಯಾಸನ್ನು ತೆಗೆದು ಅನಂತರ ತೈಲವನ್ನು ಪಂಪ್ ಮಾಡಿ ತೆಗೆಯಬೇಕು.(ಕೆಲವು ದಶಕಗಳ ಹಿಂದೆ ತೈಲಬಾವಿ ಕೊರೆವಾಗ ಮೊದಲು ಸಿಗುವ ಗ್ಯಾಸನ್ನು ಬೆಂಕಿಕೊಟ್ಟು ಉರಿಸಿ ಅದು ಖಾಲಿಯಾದಮೇಲೆ ತೈಲ ತೆಗೆಯುತ್ತಿದ್ದರಂತೆ!!!)  ಆದರೆ ಆಲ್ಬೆರ್ಟಾದಲ್ಲಿ – ನಂಬಿದರೆ ನಂಬಿ ಬಿಟ್ಟರೆ ಬಿಡಿ – ಸಾವಿರ ಸಾವಿರ ಕಿ.ಮೀ ಪ್ರದೇಶದಲ್ಲಿ – ಭೂಮಿಯ ಮೇಲ್ಮೈಯಲ್ಲೇ ತೈಲ ಅಡಗಿ ಕೂತಿದೆ -  ಮರಳಿನೊಡನೆ ಸೇರಿಕೊಂಡು – ಟಾರ್ ರೂಪದಲ್ಲಿ!!! ಈ ಅಚ್ಚರಿಯನ್ನು ನಿಮಗೆ ತಿಳಿಸುವ ಉದ್ದೇಶವೇ ಈ ಬ್ಲಾಗ್ ಲೇಖನ (ಕೆಲವರಿಗೆ ಬೋರಾಗಬಹುದು!!!).
            ಕೆನಡಾ ನಿಮಗೇ ಗೊತ್ತಿರುವಂತೆ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. (ವಿಸ್ತೀರ್ಣಕ್ಕೆ ಹೋಲಿಸಿದರೆ) ಜನಸಂಖ್ಯೆ ಕಡಿಮೆ. ಚಳಿಗಾಲದಲ್ಲಿ ಹಿಮಮುಚ್ಚುವ ಹಾಗೂ ಜವುಗಿನಿಂದ ಕೂಡಿದ ಕೆನಡಾದ ಪಶ್ಚಿಮದ ಆಲ್ಬೆರ್ಟಾ ಪ್ರಾಂತ್ಯದ ಹೆಚ್ಚಿನಭಾಗ ವ್ಯವಸಾಯಕ್ಕೆ ಅನುಪಯುಕ್ತ. ಎತ್ತರೆತ್ತರ ಮರಗಳ ಕಾಡು, ಜವುಗು ನೆಲ ಹಾಗೂ ಸರೋವರಗಳಿಂದ ಕೂಡಿದೆ. ಆದರೆ ನೆಲಮಟ್ಟದಿಂದ ಕೆಲವೇ ಅಡಿಗಳ ಕೆಳಗೆ ಮರಳು ಮಿಶ್ರಿತ ಭೂಮಿಯಿದೆ. ಈ ನೆಲದಡಿಯ ಮರಳಿನಲ್ಲಿ – ಕೆಲವೊಂದು ಸ್ಥಳದಲ್ಲಿ – ೧೦% ಗಿಂತಲೂ ಹೆಚ್ಚು ಪೆಟ್ರೋಲ್ (ಬಿಟುಮಿನ್=ಟಾರ್ ರೂಪದಲ್ಲಿ) ಬೆರೆತಿದೆ!!! ಆ ಪ್ರಾಂತ್ಯದಲ್ಲಿ ಕೆಲವು ಸಾವಿರ ಕಿಲೋಮೀಟರ್ ಅಂತಹದೇ ತೈಲಮಿಶ್ರಿತ ಮರಳಿದೆ. ಅಲ್ಲಿ ತೈಲಮಿಶ್ರಿತ ಮರಳಿರುವುದೂ, ಅದನ್ನು ಸಂಸ್ಕರಿಸಿ ಪೆಟ್ರೋಲಿಯಂ ಪಡೆಯಬಹುದೆಂಬುದೂ ಹಲವಾರು ದಶಕಗಳ ಹಿಂದೆಯೇ ವಿಜ್ಞಾನಿಗಳಿಗೆ ಗೊತ್ತಿದ್ದಿದ್ದೆ. ಆದರೆ ಸಂಸ್ಕರಣೆ ಖರ್ಚೇ ಹೆಚ್ಚುಬರುತ್ತದೆಂದು ತೈಲಕಂಪನಿಗಳು ಅತ್ತ ಗಮನಕೊಟ್ಟಿರಲಿಲ್ಲ. ಆದರೆ – (ಅಮೇರಿಕಾ ವ್ಯಾಖ್ಯಾನಿಸುವಂತೆ!!!) ಯಾವಾಗ ಚೀನಾ ಹಾಗೂ ಭಾರತದ ಜನರುಗಳಲ್ಲಿ ನಾಕು ಕಾಸು ಸೇರಲು ಪ್ರಾರಂಭವಾಯಿತೋ – ಪ್ರಪಂಚದ ತೈಲಮಾರುಕಟ್ಟೆಯ ಚಿತ್ರಣವೇ ಉಹಿಸಲಾಗದಂತೆ ಬದಲಾಯಿತು. ಒಂದು ದಶಕದೀಚೆಗೆ ಪೆಟ್ರೋಲಿಯಂ ಬೆಲೆ ಇದ್ದಕ್ಕಿದ್ದಂತೆ ಹೆಚ್ಚಾಗಲಾರಂಬಿಸಿತು. ಆಗ ತೈಲಕಂಪನಿಗಳ ಕಣ್ಣುಬಿದ್ದಿದ್ದೇ ಕೆನಡಾದ ಆಲ್ಬೆರ್ಟಾ. ತೈಲಶೋಧನೆಯ ಖರ್ಚೇ ಇಲ್ಲದ (ನೆಲದಾಳದ ತೈಲಸಂಗ್ರಾಹ ಶೋಧಿಸಲು ತೈಲ ಕಂಪನಿಗಳು ಮಿಲಿಯನ್ ಗಟ್ಟಲೆ ಡಾಲರ್ ಖರ್ಚುಮಾಡುತ್ತವೆ. ಅಷ್ಟು ಖರ್ಚು ಮಾಡಿದರೂ ನೆಲದಾಳದಲ್ಲಿ ತೈಲ ಸಿಕ್ಕೇಬಿಡುತ್ತದೆ ಅಥವಾ ಇಂತಿಷ್ಟೇ ತೈಲ ಸಿಗುತ್ತದೆಯೆಂದು ಹೇಳಲಾಗುವುದಿಲ್ಲ!!) – ಕೇವಲ ಸಂಸ್ಕರಣೆಯ ಖರ್ಚುಮಾತ್ರವಿರುವ – ಆಲ್ಬೆರ್ಟಾಕ್ಕೆ ತೈಲಕಂಪನಿಗಳು ಲಗ್ಗೆಯಿಟ್ಟಿದ್ದು ಆಶ್ಚರ್ಯವೇನಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ೬೫ ಡಾಲರ್/ಬ್ಯಾರಲ್ ಹೆಚ್ಚಿದ್ದರೆ ಮಾತ್ರ ಗಣಿಗಾರಿಕೆ ಲಾಭವಂತೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ತೈಲಬೆಲೆ ಎಂದೂ ಅದಕ್ಕಿಂತ ಕೆಳಗೆ ಬರುವ ಲಕ್ಷಣಗಳೇ ಇಲ್ಲ!! ಆದ್ದರಿಂದ ಆಲ್ಬೆರ್ಟಾದಲ್ಲಿ ಮರಳು ತೈಲ ಗಣಿಗಾರಿಕೆ ನಿರಂತರ.
             ಪಾಶ್ಚಿಮಾತ್ಯರು ಏನೇ ಮಾಡುವುದಾದರೂ ಮಾನವಶ್ರಮ ಅತೀ ಕಡಿಮೆ ಅಗತ್ಯತೆ ಬರುವಹಾಗೆ ಹಾಗೂ ಯಂತ್ರಗಳೇ ಹೆಚ್ಚಿನ ಎಲ್ಲಾ ಕೆಲಸಮಾಡುವಂತೆ ಯೋಜನೆಗಳನ್ನು ಹಾಕಿಕೊಂಡೇ ಕೆಲಸ ಪ್ರಾರಂಬಿಸಿ ಮಾಡುತ್ತಾರೆ. ಈ ತೈಲ ಮಿಶ್ರಿತ ಮರಳ ಗಣಿಗಾರಿಕೆನೂ ಹಾಗೆನೇ. ನಾನು ಮೊದಲೇ ಹೇಳಿದೆ. ದೊಡ್ದಮರಗಳ ಕಾಡು ಹಾಗೂ ಹಸಿರು ಹುಲ್ಲುಗಾವಲಿರುವ ಜವುಗು ನೆಲದ ಕೆಳಗೆ ತೈಲ ಮಿಶ್ರಿತ ಮರಳಿದೆಯೆಂದು.(ನಾವೆಲ್ಲಾ ತೋಟದಲ್ಲಿ ಬೆಳೆದ ಕಳೆಯನ್ನು ಕತ್ತರಿಸುವಂತೆ) ಹಾರ್ವೆಸ್ಟರ್ ಗಳೆಂಬ ಯಂತ್ರಗಳು ಮರಗಳನ್ನು ಕ್ಷಣಾರ್ದದಲ್ಲಿ ಕತ್ತರಿಸಿ ಬಿಸಾಡುತ್ತವೆ!! ಅವುಗಳ ಬೇರುಗಳು ಹಾಗೂ ಸ್ವಲ್ಪ ಮಣ್ಣೂ ಇರುವ ಭೂಮಿಯ ಮೆಲ್ಪದರವನ್ನು ಕಿತ್ತು ಎಳೆಯಲಾಗುತ್ತದೆ!!! 
ಕ್ಯಾಟರ್ಪಿಲ್ಲರ್ 797B
            ಅನಂತರ ಸಿಗುವುದೇ ಟಾರಿನ ವಾಸನೆಯಿರುವ, ಜಿಗುಟು ಜಿಗುಟಾದ, ಕಪ್ಪು ಬಣ್ಣದ ತೈಲಮಿಶ್ರಿತ  ಮರಳು. ಈಗ ಅರ್ಥ್ ಮೂವರ್ಸ್ (ಸಾಮಾನ್ಯ ಆಡುಭಾಷೆಯಲ್ಲಿ ಜೇಸಿಬಿ!!) ಗಳ ಸರದಿ. ಅಂತಹ ಮರಳನ್ನ ಕಿತ್ತು ದೊಡ್ಡ ದೊಡ್ಡ ಗುಪ್ಪೆಹಾಕುತ್ತವೆ. ಅರ್ಥ್ ಮೂವರ್ ಗಳೇ ನಾಲ್ಕೈದು ಮಹಡಿಗಳಷ್ಟು ಎತ್ತರವಿರುತ್ತವೆ!! ಇನ್ನು ಮರಳಗುಪ್ಪೆಗಳು ಚಿಕ್ಕಬೆಟ್ಟದಂತೆಯೇ ಇರುತ್ತವೆ. ಅನಂತರ ಈ ತೈಲ ಮಿಶ್ರಿತ ಮರಳನ್ನು ಟ್ರಕ್ ಗಳಿಗೆ ಲೋಡ್ ಮಾಡುವುದು. ಟ್ರಕ್ ಗಳೆಂದರೆ ಅಂತಿಂತಾ ಟ್ರಕ್ ಗಳಲ್ಲ. ಪ್ರಪಂಚದ ಅತೀ ದೊಡ್ಡ ಟ್ರಕ್ ಗಳು – ಕ್ಯಾಟರ್ಪಿಲ್ಲರ್ 797B – ಅದರ ಚಕ್ರಗಳೇ ಎರಡಾಳೆತ್ತರ ಇರುತ್ತವೆ – ಅರ್ಥ್ ಮೂವರ್ ಗಳ ಬಕೆಟ್ ಗಳು ಆ ಮರಳಿನ ಬೆಟ್ಟಕ್ಕೆ ಚುಚ್ಚಿ (ಒಂದು ಬಕೆಟ್ ನಲ್ಲೇ ಕೆಲವು ಟನ್ ಮರಳು ಬರುತ್ತದೆ!!!) – ಅಂತಹಾ ಟ್ರಕ್ ಗಳಿಗೆ ಮರಳು ಲೋಡ್ ಮಾಡುತ್ತವೆ. ಟನ್ ಗಟ್ಟಲೆ ಮರಳನ್ನ ಹೊತ್ತ ಟ್ರಕ್ ಗಳು ನೆಲ ನಡುಗಿಸುತ್ತ ನಿದಾನವಾಗಿ ತಲುಪುವುದೇ ಕ್ರಷರ್ ಗಳೆಡೆ. ಎರೆಡು ಟನ್ ಗಳಷ್ಟು ತೈಲಮಿಶ್ರಿತ ಮರಳನ್ನ ಸಂಸ್ಕರಿಸಿದರೆ ಸಿಗುವುದು ಒಂದು ಬ್ಯಾರಲ್ (=೧೫೯ ಲೀಟರ್) ಪೆಟ್ರೋಲಿಯಂ (ಪೆಟ್ರೋಲ್ ಅಲ್ಲ. ಪೆಟ್ರೋಲ್ ಬೇರೆ ಪೆಟ್ರೋಲಿಯಂ ಬೇರೆ. ಪೆಟ್ರೋಲ್ ಪೆಟ್ರೋಲಿಯಂನ ಸಾವಿರಾರು ಉತ್ಪನ್ನಗಳಲ್ಲಿ ಒಂದು ಅಷ್ಟೇ!!!).
         ಕ್ಯಾಟರ್ಪಿಲ್ಲರ್ ಗಳು ತಮ್ಮ ಬೆನ್ನ ಮೇಲಿನ ತೈಲಮರಳನ್ನು ಸುರಿಯುವುದು ಕ್ರಷರ್ ಗಳ ಒಡಲಿಗೆ!!! ಪ್ರತಿ ಘಂಟೆಗೇ ಸಾವಿರಾರು ಟನ್ ಮರಳು/ಪುಟ್ಟ ಬಂಡೆ ಕಲ್ಲುಗಳನ್ನ ಮಹಾಕ್ರಷರ್ ಗಳು ಪುಡಿಗಟ್ಟುತ್ತವೆ!! ನಂತರದ ಹೆಜ್ಜೆ ತೈಲ ಮಿಶ್ರಿತ ಪುಡಿಮರಳನ್ನು ಬಿಸಿನೀರು, ಕಾಸ್ಟಿಕ್ ಸೋಡಾ ಹಾಗೂ ಸಾಲ್ವೆಂಟ್ (ಬೇರೆ ಬೇರೆ ಇತರ ರಾಸಾಯನಿಕಗಳು) ಗಳಿಂದ ತೊಳೆಯುವುದು. ಈ ಹಂತದಲ್ಲಿ ಪುಡಿಮರಳು ಹಾಗೂ ನೀರು ಮಿಶ್ರಿತ ಟಾರ್(ಬಿಟುಮಿನ್) ಬೇರೆಯಾಗುತ್ತವೆ. ಮುಂದಿನ ಹಂತ – ಮಹಾ ಸೆಪರೇಟರ್ ಗಳಲ್ಲಿ ನೀರು ಹಾಗೂ ಟಾರ್ ಬೇರೆಮಾಡುವುದು. ಅನೇಕ ರಾಸಾಯನಿಕಗಳು ಬೆರೆತ ಈ ನೀರನ್ನು ಮೈಲಿಗಟ್ಟಲೆ ವಿಸ್ತಾರದ ಇಂಗುಗುಂಡಿಗೆ ಪಂಪ್ ಮಾಡಲಾಗುತ್ತದೆ. ಇತ್ತ ಟಾರನ್ನು ಅತಿ ಉಷ್ಣಾಂಶದಲ್ಲಿ ಬಿಸಿಮಾಡಿ – ಅದಕ್ಕೆ ಜಲಜನಕ/ಕೆಲವು ರಾಸಾಯನಿಕ ಸೇರಿಸಿ – ನೆಲದಾಳದಲ್ಲಿ ಸಿಗುವ ಪೆಟ್ರೋಲಿಯಂ ಗೆ  ಸಾಕಷ್ಟು ಸನಿಹದ – ಪೆಟ್ರೋಲಿಯಂ ಸಿದ್ದವಾಗುತ್ತದೆ. ಹಗಲು ರಾತ್ರಿಯೆನ್ನದೆ ದಿನದ ಇಪ್ಪತ್ನಾಕು ಘಂಟೆ ಇದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಲೇ ಇರುತ್ತದೆ!!!. ( ಈ ಪೆಟ್ರೋಲಿಯಂನಿಂದ   ಪೆಟ್ರೋಲ್/ಡೀಸಲ್/ಕೆರೋಸಿನ್/ಅಲ್ಲದೇ ಅದೆಷ್ಟೋ ಸಾವಿರ ಉತ್ಪನ್ನಗಳು – ಅವುಗಳನ್ನು ಬೇರೆ ಮಾಡುವುದು – ಅದೇ ಒಂದು ಬೇರೆ ತಾಂತ್ರಿಕತೆ – ಅವು ಆಗುವುದು – (ಸಾದಾರಣವಾಗಿ) ಪೆಟ್ರೋಲಿಯಂ ತಲಪುವ ದೇಶಗಳಲ್ಲಿ. ಪ್ರಪಂಚದಲ್ಲಿ – ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಹೆಚ್ಚು ಸಾಗಣೆಯಾಗುವ ಸರಕೆಂದರೆ ಪೆಟ್ರೋಲಿಯಂ!!! (ಎರಡನೇ ಸ್ಥಾನ ಕಾಫಿಯಂತೆ)).
           ಈ ರೀತಿ ಪೆಟ್ರೋಲಿಯಂ ಪಡೆಯಲು ಭೂಮಿ ತೆರುವ ಬೆಲೆ?? – ಹಸಿರು/ಮರಗಳ ನಾಶ – ಭೂಮಿಯ ಮೇಲ್ಪದರ ಕಿತ್ತೊಗೆಯುವಿಕೆ – ಮರಳಿನಿಂದ ತೈಲ ಬೇರ್ಪಡಿಸಲು ಸಾವಿರ ಸಾವಿರ ಲೀಟರ್ ಶುದ್ದನೀರಿನ ಬಳಕೆ – ಬಿಟುಮಿನ್ ನಿಂದ ಬೇರ್ಪಡಿಸಿದ ಗಂದಕ ಮೊದಲಾದ ರಾಸಾಯನಿಕ ಬೆರೆತ ತಾಜ್ಯ ನೀರನ್ನು ನಿಲ್ಲಿಸಲು ಮೈಲಿಗಟ್ಟಲೆ ವಿಸ್ತಾರದ ಇಂಗುಗುಂಡಿಗಳ ನಿರ್ಮಾಣ – ಬಿಟುಮಿನನ್ನು ಪೆಟ್ರೋಲಿಯಂ ಆಗಿ ಪರಿವರ್ತಿಸುವಾಗ ವಾತಾವರಣ ಸೇರುವ ಅಗಾದಪ್ರಮಾಣದ ಕಾರ್ಬನ್ ಡಯಾಕ್ಸೈಡ್ – ತೈಲ ಮಿಶ್ರಿತ ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ಹೊಸ ನಗರಗಳ ದಿಡೀರ್ ನಿರ್ಮಾಣ – ಅಸೀಮ ಉದ್ಯೋಗಾವಕಾಶ – (ಹಿಂದೆ ಚಿನ್ನ ಸಿಗುವ ಪ್ರದೇಶಗಳಿಗೆ ನಡೆಯುತ್ತಿದ್ದಂತೆ) ಮುಖ್ಯ ಭೂಭಾಗದಿಂದ ಜನರ ವಲಸೆ – ಕೈ ತುಂಬಾ ಓಡಾಡುವ ದುಡ್ಡು – ನಗರಗಳಲ್ಲಿ ಕಾನೂನು ವ್ಯವಸ್ಥೆಯ ಸಮಸ್ಯೆ. ಒಂದೇ? ಎರಡೇ?? ಆದರೆ ಡಾಲರ್ ಮುಂದೆ ಎಲ್ಲವೂ ನಗಣ್ಯ!!! ಸದ್ಯಕ್ಕಂತೂ ತೈಲಮರಳ ಗಣಿಗಾರಿಕೆ ನಿಲ್ಲುವ ಯಾವ ಸೂಚನೆಗಳೂ ಇಲ್ಲ!!! ಅಂತರಿಕ್ಷದಿಂದ ಟೆಲಿಸ್ಕೋಪ್ ಮೂಲಕ ವೀಕ್ಷಿಸಿದರೂ ತೈಲಮರಳು ಗಣಿಗಾರಿಕೆಗೆ  ನೆಲ ಜರುಗಿಸಿದ್ದು ಕಾಣುತ್ತದಂತೆ!!! ಸಹಜವಾಗಿಯೇ ವಿಶ್ವದಾದ್ಯಂತ ಮುಖ್ಯವಾಗಿ ಉತ್ತರ ಅಮೆರಿಕಾದಾದ್ಯಂತ ಗ್ರೀನ್ ಪೀಸ್ ಮೊದಲಾದ ಸಂಸ್ಥೆಗಳ ವಿರೋದ. ಕೆನಡಾದಿಂದ ಸಾಕಷ್ಟು ಪೆಟ್ರೋಲಿಯಂ ಆಮದು ಮಾಡಿಕೊಳ್ಳುವ ಪಕ್ಕದ ಅಮೇರಿಕ (ಯು.ಎಸ್.ಎ) – ಪರಿಸರಹಾನಿಯನ್ನು ಖಂಡಿಸಿ – ಆಲ್ಬೆರ್ಟಾದ ತೈಲಮರಳಿನ ಪೆಟ್ರೋಲಿಯಂ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಆದರೇನಂತೆ ಪೆಟ್ರೋಲಿಯಂ ಕೊಳ್ಳುವ ದೇಶಗಳಿಗೆ ಪ್ರಪಂಚದಲ್ಲಿ ಬರಗಾಲವೇ?? ತೈಲಮರಳಿನಿಂದ ಪೆಟ್ರೋಲಿಯಂ ತಯಾರಿಸುವ ಕಂಪನಿಗಳು ಮಿಲಿಯನ್ ಗಟ್ಟಲೆ ಡಾಲರ್ ಲಾಭಮಾಡಿಕೊಳ್ಳುತ್ತಿವೆ. ಹೊಸಹೊಸ ದೈತ್ಯ ತೈಲಕಂಪನಿಗಳು ಕಾಲೂರಲು ಆಸಕ್ತಿವಹಿಸಿವೆ. ಸರ್ಕಾರಕ್ಕೆ ಕೋಟಿಗಟ್ಟಲೆ ಡಾಲರ್ ತೆರಿಗೆ ಹರಿದುಬರುತ್ತಿದೆ. ಕಿತ್ತುಬಿಸಾಡಿದ ಮರಳಿನಮೇಲೆ ಗಿಡ ಮತ್ತೆ ನೆಡುತ್ತೇವೆ ಎಂದು ತೈಲಕಂಪನಿಗಳೂ ಹಾಗೂ ಅಂತಹ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತೇವೆ ಮತ್ತು ಕಾರ್ಬನ್ ಡಯಾಕ್ಸೈಡ್ ಕಡಿಮೆ ಹೊರಬರುವಂತೆ ತಾಂತ್ರಿಕತೆ ಅಭಿವೃದ್ದಿಪಡಿಸುತ್ತೇವೆ ಎಂದು ಸರ್ಕಾರ ಹೇಳಿಕೆಗಳನ್ನು ನೀಡಿ ವಿರೋದಿಸುವವರನ್ನು ಬಾಯಿಮುಚ್ಚಿಸಲು ಪ್ರಯತ್ನಿಸುತ್ತಲೇ ಇವೆ. 
           ಆಟ ಶುರುವಾಗಿದೆಯಷ್ಟೇ. ಉತ್ತುಂಗ (ಪೀಕ್) ಮುಟ್ಟಿಲ್ಲ!!! ಅಮೇರಿಕಾ ಆಲ್ಬೆರ್ಟಾದ ಪೆಟ್ರೋಲಿಯಂ ನಿಷೇದಿಸಿದರೇನಂತೆ? ಕೆನಡಾದ ಪಶ್ಚಿಮತೀರದಾಚೆ – ವಿಶಾಲ ಶಾಂತ ಸಾಗರದ (ಪೆಸಿಪಿಕ್ ಓಶನ್) ಇನ್ನೊಂದು ಮಗ್ಗುಲಲ್ಲಿ – ತೀರುವ ಲಕ್ಷಣಗಳೇ ಕಾಣದ ಬಾಯಾರಿಕೆಯ – ಜಗತ್ತಿನ ನಾಳಿನ ದೊಡ್ಡಣ್ಣ – ಚೀನಾ ಕೂತಿದೆ. (ಚೀನಾಕ್ಕೆ ಬಾಯಾರಿಕೆ/ಹಸಿವು ಶುರುವಾದರೆ ಪರಿಣಾಮ ದೂರದಲ್ಲೆಲ್ಲೋ ಆಗಬಹುದು. ಒಲೆಂಪಿಕ್ಸ್ ಸಮಯದಲ್ಲಿ ಬಳ್ಳಾರಿ ಮಣ್ಣಿಗೆ ಬೆಲೆ ಬಂದಿದ್ದು ಜ್ಞಾಪಿಸಿಕೊಳ್ಳಿ). ಆಲ್ಬೆರ್ಟಾದ ತೈಲಮರಳಿನ ಪೆಟ್ರೋಲಿಯಂನ್ನು - ಏಷ್ಯಾದ ರಾಷ್ಟ್ರಗಳಿಗೆ ರಪ್ತುಮಾಡುವ ಉದ್ದೇಶದಿಂದ – ಆಲ್ಬೆರ್ಟಾದಿಂದ ಶುರುವಾಗಿ – ರಾಖೀ ಪರ್ವತಗಳನ್ನು ಹತ್ತಿಳಿದು – ಕೆನಡಾದ ಪಶ್ಚಿಮ ತೀರದವರೆಗೆ ಸಾಗುವ – ೧೧೭೭ ಕಿ.ಮೀ. ಉದ್ದದ(!!!) – ನಾದ್ರನ್ ಗೆಟ್ ವೇ ಪೈಪ್ ಲೈನ್ ಗೆ ನೀಲಿನಕಾಶೆ ಸಿದ್ದವಾಗಿದೆ. ಇನ್ನೂ ಯೋಜನೆಯ ಹಂತದಲ್ಲಿರುವ – ಜೋಡಿ ಕೊಳವೆಗಳ – ಒಂದು, ಪೆಟ್ರೋಲಿಯಂ ಸಾಗಿಸಲು – ಇನ್ನೊಂದು, ಕಂಡೆನ್ಸೆಟ್ (ಪೆಟ್ರೋಲಿಯಂ ತೆಳುಮಾಡಲು ಬಳಸುವ ರಾಸಾಯನಿಕಗಳು) ಅನ್ನು ಸಮುದ್ರ ತೀರದಿಂದ ಆಲ್ಬೆರ್ಟಾಕ್ಕೆ ಸಾಗಿಸಲು – ನಾದ್ರನ್ ಗೆಟ್ ವೇ ಪೈಪ್ ಲೈನ್ ಸಿದ್ದವಾದರೆ – ತೈಲಮರಳ ಗಣಿಗಾರಿಕೆ ಇನ್ನಿಲ್ಲದ ವೇಗ ಪಡೆಯುವುದರಲ್ಲಿ ಸಂಶಯವೇ ಇಲ್ಲ. ಈಗಾಗಲೇ ಸರ್ವೇ ಹಾಗೂ ನೀಲಿನಕಾಶೆ ತಯಾರಿಸಲು ಲಕ್ಷಾಂತರ ಡಾಲರ್ ವಿನಿಯೋಗಿಸಲ್ಪಟ್ಟ ಈ ಪೈಪ್ ಲೈನ್ ಗೆ ಅನುಮತಿ ದೊರೆತರೆ – ಕೆನಡಾದ ಪಶ್ಚಿಮ ತೀರದ ಕಿಟಿಮತ್ ನಲ್ಲಿ ಅಗಾದ ಪ್ರಮಾಣದ ತೈಲಸಂಗ್ರಾಹಕಗಳು ಹಾಗೂ ಪೆಟ್ರೋಲಿಯಂನ್ನು ಏಷ್ಯಾಕ್ಕೆ ಸಾಗಿಸಲು – ಮಾನವ ಹಿಂದೆಂದೂ ಕಂಡುಕೇಳರಿಯದ ಅತೀ ದೊಡ್ಡ ತೈಲವಾಹಕಹಡಗುಗಳು(ಆಯಿಲ್ ಟ್ಯಾಂಕರ್) ತಯಾರಾಗುತ್ತವೆ. ಪಶ್ಚಿಮ ತೀರದಲ್ಲಿ ಆಯಿಲ್ ಟ್ಯಾಂಕರ್ ಗಳ ತೇಲಾಟ ಹೆಚ್ಚಲಿದೆ. ಅಂತಹ ಬೃಹತ್ ತೈಲವಾಹಕ ಹಡಗುಗಳಲ್ಲಿ ಒಂದು – ಸಹಜ ಅಪಘಾತಕ್ಕೀಡಾಗಿ ಸಮುದ್ರದ ಒಡಲು ಸೇರಿದರೂ – ಅದರಿಂದ ವರ್ಷಾನುಗಟ್ಟಲೆ ನಿದಾನವಾಗಿ ಹೊರಬರುವ ತೈಲ – ಸಮುದ್ರಜೀವಿಗಳನ್ನು ಸಾಯಿಸುವುದಲ್ಲದೆ – ಸಮುದ್ರದ ಮಲ್ಮೈ ಹಾಗೂ ಅಲೆಗಳೊಂದಿಗೆ ದಡಸೇರುವ ಅಂಟಂಟು ತೈಲ – ಸೀಲ್ ಗಳು/ಮೀನು ಹಿಡಿಯಲು ಸಮುದ್ರ ನುಗ್ಗುವ ಕಡಲಹಕ್ಕಿಗಳು ಮತ್ತೆ ರೆಕ್ಕೆಬಿಚ್ಚಿಕೊಳ್ಳಲಾಗದಂತೆ ನರಳಿ ಸಾಯುವುದಕ್ಕೆ ಕಾರಣವಾಗುತ್ತದೆ. (ಹಿಂದೆಲ್ಲಾ ಇದು ಆಗಿದೆ). ಸಹಜವಾಗಿಯೇ ಕೆನಡಾದ ಪಶ್ಚಿಮ ತೀರದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಈ ಉದ್ದೇಶಿತ ಪೈಪ್ ಲೈನ್ ಗೆ ಸಾಕಷ್ಟು ವಿರೋದ ವ್ಯಕ್ತವಾಗುತ್ತಿದೆ. ತಮ್ಮ ನೆಲ/ಜಲದಲ್ಲಿ ಇದು ಸಾಗುವುದರಿಂದ (ಪೈಪ್ ಲೈನ್ ಎಲ್ಲಾದರೂ ಲೀಕ್ ಆದರೆ ಜಲಮಾಲಿನ್ಯವಾಗಬಹುದೆಂದು) ಅಲ್ಲಿನ ಮೂಲ ಇಂಡಿಯನ್ನರಿಂದಲೂ ಪ್ರತಿರೋದ ಶುರುವಾಗಿದೆ. ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ, ಆರ್ಥಿಕ ಚಿತ್ರಣವೇ ಬದಲಾಗುತ್ತದೆ, ಬ್ರಿಟಿಷ್ ಕೊಲಂಬಿಯಾ ಮತ್ತೂ ಆರ್ಥಿಕವಾಗಿ ಬಲಾಡ್ಯವಾಗುತ್ತದೆ – ಎಂದು ಕಂಪನಿಗಳು ಹೇಳಿಕೊಳ್ಳುತ್ತಿವೆ. (ಈ ಬ್ಲಾಗ್ ಲೇಖನವನ್ನು ಪ್ರಕಟಿಸಿದ ದಿನ (೨೪/೧೦/೨೦೧೨) ಸಂಜೆ ನೀವು ಓದುತ್ತಿದ್ದರೆ - ಅತ್ತ ಭೂಮಿಯ ಇನ್ನೊಂದು ಮಗ್ಗುಲಿನಲ್ಲಿ – ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ – ದೊಡ್ಡಪ್ರತಿಭಟನೆ ನಡೆಯುತ್ತಿರುತ್ತದೆ!! ಕೆನಡಾದ ಕನ್ನಡಿಗರ್ಯಾರಾದರು ಈ ಬ್ಲಾಗ್ ಲೇಖನ ಓದಿದರೆ ಅಲ್ಲಿ ನಡೆಯುತ್ತಿರುವ ವಿಷಯಗಳನ್ನು ಕಾಮೆಂಟಿಸಿ ).
        ಇನ್ನು ಪೆಟ್ರೋಲಿಯಂ ಹಾಗೂ ಅದರ ಉತ್ಪನ್ನಗಳಬಗ್ಗೆ ಅರಿವು ಮೂಡಿಸಲು ಒಂದು ಪ್ಯಾರವನ್ನು ಈ ಲೇಖನದೊಂದಿಗೆ ಸೇರಿಸುವುದು ಅವಶ್ಯವೆಂದನಿಸುತ್ತದೆ. ಇಂದು ನಾವು ತೆಗೆಯುವ ಪೆಟ್ರೋಲಿಯಂ - ಹಿಂದ್ಯಾವುದೋ ಒಂದು ಕಾಲದಲ್ಲಿ ಅದೆಷ್ಟೋ ಲಕ್ಷವರ್ಷಗಳ ಕೆಳಗೆ – ಅಗಾದ ಪ್ರಮಾಣದಲ್ಲಿ  ಸತ್ತು ಮಣ್ಣಾದ ಆಲ್ಗೆ/ಪ್ರಾಣಿ ಹಾಗೂ ಸಸ್ಯಗಳ ಅವಶೇಷ!!! ಅತೀ ಒತ್ತಡಕ್ಕೆ ಸಿಕ್ಕಿ ಕಪ್ಪು ಜಿಗುಟು ದ್ರವದಂತಿರುವ ಸಾವಯವ ಪದಾರ್ಥ. ಗ್ಯಾಸ್ ಕೂಡ ಅವೇ. ತೈಲಬಾವಿಗಳಲ್ಲಿ ಮೊದಲು ಗ್ಯಾಸ್ ದೊರೆಯುತ್ತವೆ. ಮೇಲೆತ್ತುವ ಪೆಟ್ರೋಲಿಯಂನ್ನು (ರಿಫೈನರಿಗಳಲ್ಲಿ) ಅಂಶಿಕ ಬಟ್ಟಿಇಳಿಸುವಿಕೆಯಲ್ಲಿ ಬಟ್ಟಿಯಿಳಿಸಿದಾಗ ಸಾವಿರಾರು ಉತ್ಪನ್ನಗಳು ದೊರೆಯುತ್ತವೆ. ಪೆಟ್ರೋಲ್/ಡೀಸಲ್/ಏವಿಯೇಶನ್ ಪೆಟ್ರೋಲ್/ಸಿಮೆಎಣ್ಣೆ ಕೊನೆಯಲ್ಲಿ ಟಾರ್!!!– ಇನ್ನೂ ಅನೇಕ. ಪೆಟ್ರೋಲಿಯಂ ಉತ್ಪನ್ನಗಳು ಮಾನವನ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿವೆ. ಅವುಗಳಿಲ್ಲದ ಜೀವನವನ್ನು ಊಹಿಸಲೂ ಸಾದ್ಯವಿಲ್ಲ!!! ಪ್ಲಾಸ್ಟಿಕ್/ವ್ಯಾಸಲಿನ್/ಬಣ್ಣಗಳು/ಯುರಿಯಾ ಮೊದಲಾದ ಗೊಬ್ಬರಗಳು/ಸೌಂದರ್ಯ ಪ್ರಸಾದನಗಳು/ಔಷದಿಗಳು/ಗ್ರೀಸ್/ಆಯಿಲ್ – ದಿನನಿತ್ಯವೂ ಉಪಯೋಗಿಸುತ್ತೇವೆ. ಅವೆಲ್ಲವೂ ಆರ್ಗ್ಯಾನಿಕ್!!!!
       ನಾನು ಈ ಲೇಖನದಲ್ಲಿ ವಿವರಿಸಿದ ವಿಷಯ ನಿಮಗೆ ಹಿಂದೆ ಗೊತ್ತಿತ್ತೇ? ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದರೆ ಸಂತೋಷ. ಲೇಖನದಲ್ಲಿನ ತಪ್ಪು/ಒಪ್ಪುಗಳನ್ನು ಕಾಮೆಂಟಿಸಿದರೆ ತಿದ್ದಿಕೊಳ್ಳಲು ಅನುಕೂಲ!! (ಬರಹಗಾರರಿಗೆ ಕಾಮೆಂಟ್ ಗಳು ಟಾನಿಕ್ ಇದ್ದಂತೆ). ಲೇಖನ ಮೆಚ್ಚುಗೆಯಾಗಿ ಕಾಮೆಂಟಿಸಲು  ಪುರುಸೋತ್ತಾಗದಿದ್ದರೆ ಪರವಾಗಿಲ್ಲ – ಕೆಳಗೆ +1 ರ ಮೇಲೆ ಕ್ಲಿಕ್ ಮಾಡಬಹುದು!!!

        

13 comments:

  1. ನಿಮ್ಮ ಲೇಖನ ತುಂಬ ಚೆನ್ನಾಗಿದೆ.... ಇಂದು ಮನುಷ್ಯನ ಆಟೋಟಗಳಿಂದ ಪರಿಸರ ದಿಕ್ಕು ದೆಸೆ ಇಲ್ಲದ ಹಾಗೆ ಹಾಳಾಗುತ್ತಿದೆ.... ಈ ಲೇಖನ ಓದಿದ ಮೇಲೆ ಒಂದು ಕ್ಷಣ ಮುಂದೆ ಹಾಗುವ ಪರಿಣಾಮವನ್ನು ಊಹಿಸಿದರೆ ನಡುಕ ಶುರು ಆಗುತ್ತದೆ... ಆದರೂ ಕೆಲವು ದೈತ್ಯ ಕಂಪೆನಿಗಳ ಕೆಲಸಗಳಿಂದಾಗಿ ಬೇರೆಯವರು ತೊಂದರು ಅನುಭವಿಸುತ್ತಾರೆ ಅಲ್ಲದೆ ಹೀಗೆ ಮುಂದುವರಿದರೆ ಮುಂದಿನ ಪೀಳಿಗೆಗೆ ನಾವು ಕೊಡುವುದಾದರೂ ಏನು ಅಲ್ಲವೇ?

    ReplyDelete
  2. ಅತ್ಯುತ್ತಮ ಮಾಹಿತಿಯನ್ನು ನೀಡಿರುವಿರಿ

    ReplyDelete
  3. ಅಭ್ಭಾ....ಇಪ್ಪತ್ತು ರೂಪಾಯಿ ಪೆಟ್ರೋಲು ಹಾಕಿಕೊಂಡು ಮೂವತ್ತು ಕಿಲೋಮೀಟರು ಬರುವಾದಾ?? ಎಂದು ಲೆಕ್ಕ ಮಾಡುವುದಷ್ಟೇ ಗೊತ್ತಿದ್ದಿದ್ದದ್ದು ನನಗೆ..ಇನ್ನು ಆಗೊಮ್ಮೆ ಈಗೊಮ್ಮೆ ಟಿ.ವಿಯಲ್ಲಿ ಪೆಟ್ರೊಲ್ ದರ ಏರಿಕೆಯ ಗಲಾಟೆಯನ್ನು ಕೇಳಿದ್ದೆ...ಪೆಟ್ರೋಲಿನ ಬಗ್ಗೆ ಸವಿವರವಾಗಿ ತಿಳಿಸಿದ್ದಕ್ಕೆ ಮೊದಲು ವಂದನೆಗಳು ನಿಮಗೆ..

    ಇನ್ನು ಎಲ್ಲರಿಗೂ ಅರ್ಥವಾಗದ ರೀತಿಯಲ್ಲಿ ಲೇಖನವನ್ನು ಬರೆದಿದ್ದೀರಿ..ಅಲ್ಲಿ ಮಣ್ಣನ್ನು ತೆಗೆದು ಸಾಗಿಸಿವ ಬಗೆಯನ್ನು ಅಂದವಾಗಿ ವಿವರಿಸಿದ್ದೀರಿ,ಅದು ಇಷ್ಟವಾಯ್ತು..

    ಇನ್ನು ರಾಜಕೀಯದ ಕಾರಣಗಳನ್ನೂ ತಿಳಿಸಿದ್ದೀರಿ..ಜೊತೆಗೊಂದಿಷ್ಟು ಒಳ್ಳೆಯ ಚಿತ್ರಗಳು ಕೂಡಾ..

    ಹಾಂ ನಾನು ನೋಡುತ್ತಿರುವಂತೆ ಬ್ಲಾಗುಗಳಲ್ಲೊಂದು ಸಂಪ್ರದಾಯ ಬೆಳೆದುಬಿಟ್ಟಿದೆ.. ಚಿತ್ರಗಳು ನಿಮ್ಮ ಸ್ವಂತದ್ದೋ ,ಅಂತರ್ಜಾಲದಿಂದ ಪಡೆದಿದ್ದೋ ಗೊತ್ತಾಗುತ್ತಿಲ್ಲ...ಪಡೆದರೂ ನಮೂದಿಸಲು ಮರೆತಿರಾ? ನಾನೇ ಸರಿಯಾಗಿ ನೋಡಿಲ್ಲವಾ??ಅವುಗಳನ್ನು ನಮೂದಿಸುವ ಅವಶ್ಯವಿಲ್ಲವಾ(ಪತ್ರಿಕೆಗಳಲ್ಲಿ ನಾನು ನೋಡಿಲ್ಲ)...ಗೊತ್ತಿಲ್ಲ..


    ಹಾಂ ಟಿಕೆಟ್ಟಿಲ್ಲದೇ ಕೆನಡಾಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದ ಸಾರ್!!!...ಬರಿತಾ ಇರಿ..

    ನಮಸ್ತೆ..

    ReplyDelete
    Replies
    1. ಅಯ್ಯೋ ದೇವ್ರೇ!! ಚಿತ್ರಗಳು ಸ್ವಂತದ್ದಲ್ಲ!!! ಅಂತರ್ಜಾಲದ್ದೆ. ಸ್ವಂತದ್ದಾದರೆ ಮಾತ್ರ ಸ್ವಂತದ್ದೆಂದು ಹಾಕಿಕೊಳ್ಳುವಷ್ಟು ಅಂತರ್ಜಾಲದ ಚಿತ್ರಗಳೇ ಬಳಕೆಯಾಗುತ್ತಿವೆ!!! :-)

      Delete
  4. adbhuta maahiti. bhugarbha vijnaaniyaada nanage tiliyada maahiti.
    Thanks a lot!!

    ReplyDelete
  5. ಮಾಹಿತಿಪೂರ್ಣ ಬರಹ. ವಿಷಯದ ಎರೆಡೂ ಮಗ್ಗುಲನ್ನು ತೆರೆದಿಟ್ಟಿದ್ದೀರಿ, ಖುಷಿಯಾಯ್ತು..

    ನಮ್ಮೀ ಇಂಧನ ದಾಹಕ್ಕೆ ಭೂಮಿಯನ್ನೇ ಬಲಿಕೊಡುತ್ತಿದ್ದೇವೆ. ಹೀಗೇ ನಡೆಯುತ್ತಿದ್ದರೆ ಜೀವಜಗತ್ತಿನ ಅಳಿವಿಗೆ ನಮ್ಮ ’ಅಭಿವೃದ್ದಿ’ಯೇ ಕಾರಣವಾದೀತು... ಮಿತಿಯಿಲ್ಲದ-ಅಗತ್ಯವಿಲ್ಲದ ಅಭಿವೃದ್ದಿಯಿಂದ ಏನಾದೀತು ಎಂಬುದಕ್ಕೆ ಈಸ್ಟರ್ ದ್ವೀಪದಂತಹ ಉದಾಹರಣೆ ನಮ್ಮ ಮುಂದಿದೆ. ಹೀಗಿದ್ದೂ ನಾವು ಅದೇ ಹಾದಿಯಲ್ಲಿ ಹೊರಟಿದ್ದೇವೆ ಎನ್ನಿಸುತ್ತಿದೆ..

    -ಪ್ರಸನ್ನ ಆಡುವಳ್ಳಿ

    ReplyDelete
  6. ಉತ್ತಮ ಮಾಹಿತಿ !

    ಇಂದು -
    ಚಿನ್ನಕ್ಕಾಗಿ ಹೊಡೆದಾಡುತ್ತಿದ್ದರು ಎಂಬುದನ್ನು ಕೇಳಿ ನಾವು ನಗುತ್ತಿದ್ದೇವೆ,
    ಮುಂದೆ -
    ಇಂಧನಕ್ಕಾಗಿ ಹೊಡೆದಾಡುತ್ತಿದ್ದರು ಎಂದು ನಮ್ಮನ್ನು ನೋಡಿ ನಗುತ್ತಾರೆ.

    ReplyDelete
  7. ಉತ್ತಮ ಮಾಹಿತಿ ನಾನು ಇದೆ ಮೊದಲ ಸಲ ಇದರ ಬಗ್ಗೆ ಓದಿದ್ದು ತೈಲ ಬೆಲೆ ಕಮ್ಮಿ ಆಗಬಹುದು ಇದರಿಂದ ಆದರೆ ಎಷ್ಟೊಂದು ಮರ ಗಿಡ ಗಳ ಮಾರಣ ಹೋಮ ನೆಡಯುತ್ತಲ್ಲ ಅಂತ ಬೇಸರ ಆಗ್ತಿದೆ, ಮಧ್ಯ ಬಾರತದಲ್ಲಿ ಒಂದು ಕಡೆ ಅಪಾರ ತೈಲ ನಿಕ್ಷೇಪ ಪತ್ತ್ತೆ ಯಾಗಿದೆ ಅಂತ ನೆಟ್ಟಲ್ಲಿ ಸುದ್ದಿ ತೇಲಾಡುತ್ತಿದೆ ಅದು ನಿಜ ಆದ್ರೆ ನಮಗೆ ತೈಲದ ಸಮಸ್ಯೆ ಕಮ್ಮಿ ಆಗಬಹುದು.

    ReplyDelete
  8. chennagideri.ella duddina mele nintirodrindane e reeethi alwa
    ondu vishya helala?????
    namma sutta mutta sanna sanna vishayagalu jarugutte. ellaru adannella gamanisode ella alwa. nodi nanna prakara jayapura balehonnuru road work aytalla. eredo muro cross tegedu neera road madidralla alli tumbane kadu hoytalla. forest or PWD enu aste mara nedli antilla. at-least hale road edda jagada damber jalli tegedu bere kade road ge bed agi use madidre a hale road jagadalli automatic agi gida belkondu kadu agtittaldri. nam malnadalli mara beleyodenu kasta allari, ega ulisodu kasta agide aste

    ReplyDelete
  9. ಹಲವು ಸಾವಿರ ವರುಶಗಳ ನಂತರ ಭೂಮಿಯ ಪೆಟ್ರೋಲಿಯಂ ಉತ್ಪನ್ನಗಳು ಮುಗಿದು,ಭೂಮಿಯು ಬೋಳು ಬರಡಾಗಿ,ಮನುಷ್ಯರ ಜೀವನ ಸ್ಥಿತಿ 1600 ಕ್ಕೆ ಮೊದಲ ಸಮಯದಲ್ಲಿದ್ದ ಜನರಂತೆ ಬಾಳಬೇಕಾಗಿ ಬಂದು ಎಲ್ಲರೂ ಆರಾಮವಾಗಿ ಕೂಲ್ ಆಗಿ ಹುಟ್ಟಿ ಸಾಯಬಹುದು.

    Kamar

    ReplyDelete
  10. Harrah's Cherokee Casino & Hotel - Mapyro
    Harrah's 부천 출장안마 Cherokee Casino & Hotel, Cherokee 영천 출장안마 · 1. The Cherokee Inn Expressway, Murphy, NC 대구광역 출장샵 28719 · 2. Holiday 동해 출장안마 Inn Expressway, Murphy, 경상남도 출장샵 NC 28719 · 3. Hotel

    ReplyDelete