Friday, April 19, 2013

ಜೇಬಿನಲ್ಲಿ ಸಾವಿರ ರುಪಾಯಿಯ ಎರಡು ನೋಟುಗಳನ್ನಿಟ್ಟುಕೊಂಡು ನಾರ್ವೆಗೆ ಹೋದ ಸೀನ ಪಟ್ಟ ಪಜೀತಿ !!!

                     ಅದೆಷ್ಟು ತಮಾಷೆಯ ಘಟನೆಗಳು ಸಂಭವಿಸುತ್ತಿರುತ್ತವೆ ಸುತ್ತಮುತ್ತ. ಅವುಗಳಲ್ಲಿ ಇದೂ ಒಂದು. ಸೀನ ಆಲಿಯಾಸ್ ಶ್ರೀನಿವಾಸ ನಮ್ಮೂರ ನಿವಾಸಿ. ದಲಿತ ಸಂಘರ್ಷ ಸಮಿತಿಯ ಅದ್ಯಾವುದೋ ಒಂದು ಬಣದ ತಾಲೂಕು ಮಟ್ಟದ ಪದಾಧಿಕಾರಿ. ಆದರೆ ಪ್ರಾಮಾಣಿಕ ಮನುಷ್ಯ. ಯಾರಿಗೂ ಕೇಡು ಬಯಸದ ಒಳ್ಳೆಯ ಮನುಷ್ಯ. ರೋಲ್ ಕಾಲ್ ಗೀಲ್ ಕಾಲ್ ಗಳಿಂದ ದೂರ. ಈಗ ಲೇಖನದ ಶೀರ್ಷಿಕೆಯತ್ತ ಬರೋಣ. ಅರೆ!! ಕೇವಲ ಸಾವಿರ ರುಪಾಯಿಯ ಎರಡು ನೋಟುಗಳನ್ನು – ಅಂದರೆ ಎರಡು ಸಾವಿರ ರುಪಾಯಿಗಳನ್ನು ಜೋಬಿನಲ್ಲಿಟ್ಟುಕೊಂಡು - ಸೀನ ಅದ್ಹೇಗೆ ನಾರ್ವೆ ದೇಶಕ್ಕೆ ಹೋಗಿಬಂದ ಎಂಬುದು ನಿಮ್ಮ ಪ್ರಶ್ನೆಯಲ್ಲವೇ? ಊಹೂ. ಸೀನ ಹೋಗಿದ್ದು ನಾರ್ವೆ ದೇಶಕ್ಕಲ್ಲ. ನಮ್ಮ ಹಳ್ಳಿಯ ಸಮೀಪ ನಾರ್ವೆ ಎಂಬ ಪುಟ್ಟ ಊರಿದೆ. (ಪುಟ್ಟ ಊರು = ಒಂದು ಹೈಸ್ಕೂಲ್, ಒಂದು ಬ್ಯಾಂಕ್, ಎರಡು ಮೂರು ದೇವಸ್ಥಾನಗಳು, ಒಂದು ಮಸೀದಿ, ಒಂದು ಟೆಲಿಫೋನ್ ಎಕ್ಸ್ ಚೇಂಜ್, ಮೊಬೈಲ್ ಟವರ್ (ಬಿ.ಎಸ್.ಏನ್.ಎಲ್.ಎಂದು ಹೇಳುವ ಅವಶ್ಯಕತೆಯಿಲ್ಲವೇನೋ!!), ಕಟಿಂಗ್ ಶಾಪ್, ಒಂದಿಷ್ಟು ಅಂಗಡಿ ಹಾಗು ಮನೆಗಳು. ಸಂಜೆ ಗಂಡಸರುಗಳೆಲ್ಲಾ ಸೇರಿ ಪಟಾಕಿಹೊಡೆಯುವ ಸ್ಥಳ). ಆ ನಾರ್ವೆಗೇ ಸೀನ ಹೋಗಿದ್ದು – ಸಾವಿರ ರುಪಾಯಿಯ ಎರಡು ನೋಟುಗಳೊಂದಿಗೆ. ಈ ಲೇಖನದ ಕೊನೆಯಲ್ಲಿ ನಿಮಗೆ ಆಶ್ಚರ್ಯವಾಗಬಹುದು – ನಡೆದ ಘಟನಾವಳಿಗಳಲ್ಲಿ ಯಾರಿಗೂ ನಷ್ಟವಾಗಲಿಲ್ಲ - ಬದಲಾಗಿ ಎಲ್ಲರಿಗೂ ಲಾಭವೇ ಆಯಿತೆಂದು!!! ಸಾವಿರ ರುಪಾಯಿಯ ಎರಡು ನೋಟುಗಳೊಂದಿಗೆ ನಾರ್ವೆಗೆ ಹೋಗಿ ಸೀನ ಏನು ಪಜೀತಿಪಟ್ಟ ಎಂಬುದರ ವಿವರಣೆಯೇ ಲೇಖನದ ಮುಂದಿನ ಭಾಗ. 
                   ನಾರ್ವೆಯಲ್ಲಿ ಅಂಗಡಿಯೊಂದರಲ್ಲಿ ಒಂದಿಷ್ಟು ಸಾಮಾನು ಕಟ್ಟಿಸಿ ಸಾವಿರದ ಒಂದು ನೋಟನ್ನು ಕೊಟ್ಟ ಸೀನ. ಆದರೆ ಅಂಗಡಿಯವರಿಂದ ಚಿಲ್ಲರೆ ಇಲ್ಲ ಎಂದುತ್ತರ ಬರುತ್ತದೆ. ಕಟ್ಟಿಸಿದ ಸಾಮಾನು ಅಲ್ಲೇ ಬಿಟ್ಟು ಸೀನ ಸಾವಿರ ರುಪಾಯಿಯ ನೋಟಿಗೆ ಚಿಲ್ಲರೆ ಹುಡುಕುತ್ತಾ ಹೊರಟ. ಪಕ್ಕದ ಅಂಗಡಿಗಳು, ಮೇಲೆ ಕೆಳಗೆ, ಎಲ್ಲಿ ಹೋದರೂ ಸೀನನಿಗೆ ಚಿಲ್ಲರೆ ಹುಟ್ಟಲಿಲ್ಲ. ಏನಪ್ಪಾ ಮಾಡುದು ಎಂದು ತಲೆ ಕೆರೆದುಕೊಳ್ಳುತ್ತಾ ನಿಂತಿದ್ದ ಸೀನನಿಗೆ ಎದುರಾದವನೇ ಆನಂದಪ್ಪ. ಸೀನ ಎಷ್ಟಾದರೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಯಲ್ಲವೇ, ಯಾವುದೋ ಒಂದು ಪ್ರತಿಭಟನೆಯಲ್ಲಿ ಭಾಗವಹಿಸಿದಾಗ ಅಲ್ಲಿ ಹಿಂದೆಂದೋ ಆನಂದಪ್ಪನನ್ನು ನೋಡಿದ ಪರಿಚಯ. ಅರೆ! ಏನು ಇಲ್ಲಿ? ಏನು ವಿಷ್ಯಾ?? – ಎಂಬ ಆನಂದಪ್ಪನ ಪ್ರಶ್ನೆಗೆ ಉತ್ತರವಾಗಿ ಸೀನ ನಡೆದದ್ದು – ಎಲ್ಲೂ ಸಾವಿರ ರುಪಾಯಿಗೆ ಚಿಲ್ಲರೆ ಹುಟ್ಟದಿದ್ದ ವಿಷಯ - ಹೇಳಿದ. ಅದುಕ್ಯಾಕ್ ತಲೆ ಕೆಡ್ಸ್ಕಂತೀರಿ?? ಕೊಡಿ ಆ ನೋಟು. ನಾನೀಗ್ ತರ್ತೀನಿ ಚಿಲ್ರೆ – ಎಂದು ಆ ನೋಟು ಇಸ್ಕಂಡ್ ಆನಂದಪ್ಪ ಮಾಯವಾದ!!!!
                  ಇಷ್ಟಕ್ಕೂ ಆನಂದಪ್ಪ ನಾರ್ವೆಕಡೆಯವನು ಎಂಬುದೊಂದು ಬಿಟ್ಟರೆ ಆತನ ಮನೆ ನಾರ್ವೆ ಪಕ್ಕ ಯಾವ ಹಳ್ಳಿಯಲ್ಲಿ ಎಂದಾಗಲಿ, ನಿಜ ಹೇಳಬೇಕೆಂದರೆ ಆತನ ಹೆಸರಾಗಲೀ ಸೀನನಿಗೆ ಗೊತ್ತಿರಲಿಲ್ಲ!!! ಮೂರ್ನಾಕು ಬಾರಿ ನೋಡಿದ ಮುಖಪರಿಚಯವಷ್ಟೇ. ಐದು-ಹತ್ತು-ಇಪ್ಪತ್ತು ನಿಮಿಷಗಳಾದರೂ ಆನಂದಪ್ಪನ ಸುಳಿವೇ ಇಲ್ಲ!!! ಇಷ್ಟರವರೆಗೂ ಸಾವಿರ ರುಪಾಯಿಗೆ ಚಿಲ್ಲರೆ ಹುಡುಕುತ್ತಿದ್ದ ಸೀನ – ಚಿಲ್ಲರೆ ತರುತ್ತೇನೆಂದು ಸಾವಿರ ರುಪಾಯಿ ನೋಟು ತೆಗೆದುಕೊಂಡು ಹೋದ ಆನಂದಪ್ಪನನ್ನು ಹುಡುಕಿಕೊಂಡು – ಮತ್ತೆ ನಾರ್ವೆ ಮೇಲೆ ಕೆಳಗೆ ಒಂದೆರೆಡು ಬಾರಿ ಓಡಾಡಿದ. ಊಹೂ. ಆನಂದಪ್ಪ ನಾಪತ್ತೆ!!!!. ಇದೊಳ್ಳೆ ಪಜೀತಿಯಾಯ್ತಲ್ಲಾ ಅಂತಾ ತಲೆಕೆರೆದುಕೊಳ್ಳುತ್ತಾ ನಿಂತ ಸೀನ.
                  ಟೈಲರ್ ಅಂಗಡಿಯಲ್ಲಿ ಕುಳಿತು ಬಟ್ಟೆ ಹುಲಿಯುತ್ತಿದ್ದ ಟೈಲರ್ ಚಂದ್ರು – ಸೀನ ಬಂದು ಚಿಲ್ಲರೆ ಕೇಳಿದ್ದು – ಅನಂತರ ಮೇಲೆ ಕೆಳಗೆ ಓಡಾಡುತ್ತಿದ್ದಿದ್ದು – ಆನಂದಪ್ಪನ ಜೊತೆ ಏನೋ ಮಾತಾಡುತ್ತಿದ್ದಿದ್ದು – ಮತ್ತೆ ಮೇಲೆ ಕೆಳಗೆ ಓಡಾಡಿದ್ದು – ಕೊನೆಗೆ ತಲೆಕೆರೆದುಕೊಳ್ಳುತ್ತಾ ನಿಂತಿದ್ದು – ಎಲ್ಲಾ ಗಮನಿಸುತ್ತಿದ್ದವನು – ಕುತೂಹಲ ತಡೆಯಲಾರದೆ ಸೀನನನ್ನು ಕರೆದು ಏನಾಯಿತೆಂದು ಕೇಳಿದ. (ಜನಸಂಖ್ಯೆ ಕಡಿಮೆಯಿರುವ ಹಳ್ಳಿಗಳಲ್ಲಿ ಜನ, ಬಸ್ ಸ್ಟ್ಯಾಂಡ್/ರಸ್ತೆಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು  ಕುತೂಹಲದಿಂದ ಗಮನಿಸುತ್ತಿರುತ್ತಾರೆ). ಸೀನ ನಡೆದಿದ್ದೆಲ್ಲಾ ಹೇಳಿ ನನ್ನ ಜೊತೆ ಸ್ವಲ್ಪಹೊತ್ತಿನ ಮುಂಚೆ ಮಾತಾಡುತ್ತಿದ್ದು ಚಿಲ್ಲರೆ ತರುತ್ತೇನೆಂದು ಸಾವಿರ ರುಪಾಯಿ ನೋಟು ತಗಂಡು ಹೋಗಿದ್ದು ನೋಡಿದ್ರಲಾ. ಯಾರವನು?’ ಎಂದು ಕೇಳಿದ.
                     ಯಾರು? ಅವನಾ?? ನಿಮ್ ಜೊತೆ ಮಾತಾಡ್ತಿದ್ನಲಾ ಅವನ್ ಸಾವಿರ ರುಪಾಯಿ ನೋಟ್ ಚಿಲ್ರೆ ತರ್ತೀನಿ ಅಂತ ತಗಂಡ್ ಹೋದ್ನಾ??  ಹಾಗಾದ್ರೆ ಸಾವಿರ ರುಪಾಯಿ ಕಥೆ ಮುಗೀತು. ಅವನ್ ಆನಂದಪ್ಪ. ದೊಡ್ಡ ಕುಡುಕ!! ಹಗಲೊತ್ತಲ್ಲೇ  ಟೈಟ್. – ಎಂದು ಟೈಲರ್ ಚಂದ್ರು ಹೇಳಿದಾಗ ಸೀನನ ತಲೆಮೇಲೆ ಆಕಾಶನೇ ಬಿದ್ದಂತಾಯಿತು. ಸಾವಿರ ರುಪಾಯಿ ಕೈಬಿಟ್ಟಂತೆಯೇ ಎಂದುಕೊಂಡ. ಅಷ್ಟರಲ್ಲೇ ಆಕಡೆಯಲ್ಲೆಲ್ಲಿಂದಲೋ ಇಬ್ಬರು ಯುವಕರು ಬೈಕ್ ನಲ್ಲಿ ಟೈಲರ್ ಅಂಗಡಿಕಡೆ ಬಂದರು. ಅವರನ್ನು ಟೈಲರ್ ಚಂದ್ರು ಕೇಳಿದ – ಅಲ್ಲೆಲ್ಲಾದರೂ ಆನಂದಪ್ಪ ಕಂಡನಾ?. ಉತ್ತರ ಬಂತು – ಯಾರ್ ಆ ಎಣ್ಣೆ ಪಾರ್ಟಿ ಆನಂದಪ್ಪನಾ? ಬರುವ ಹೊತ್ತಿಗೆ ಈಗ ನೋಡಿದ್ವು. ಐದ್ ನಿಮಿಷದ ಕೆಳಗೆ ಗೌಡರ ಅಂಗಡಿ ಮುಂದೆ ನಿಂತಿದ್ದ. ಏನಕ್ ಆನಂದಪ್ಪನ ಕೇಳ್ತಿದ್ದೀರಿ? ಏನ್ ಕಥೆ??. ಟೈಲರ್ ಚಂದ್ರು ನಡೆದ ಕಥೆ ಹೇಳಿದ. ಕೂಡಲೇ ಗೌಡರ ಅಂಗಡಿಗೆ ಫೋನ್ ಹಚ್ಚಲಾಯಿತು. ಗೌಡರ ಅಂಗಡಿಯೆಂದರೆ ಊರಿನ ಸ್ವಲ್ಪ ಹೊರಗಿದ್ದ ಅಣ್ಣೆಗೌಡರ ದಿನಸಿ ಕಂ ಎಣ್ಣೆ ಅಂಗಡಿ. (ಮೊದಲೆಲ್ಲ ಊರಿಗೊಂದು ಸರಾಯಿಯ ಕೊಟ್ಟೆ (ಪಾಕೀಟು -ಆಡುಭಾಷೆಯಲ್ಲಿ )  ಮಾರುವ ಅಂಗಡಿಯಿರುತ್ತಿತ್ತು. ಆದರೆ ಸರ್ಕಾರ ಸರಾಯಿ ವ್ಯವಸ್ತೆ ತೆಗೆದುಹಾಕಿದಮೇಲೆ – ಹಳ್ಳಿಗಳಲ್ಲಿ ಅನೇಕ ದಿನಸಿ ಅಂಗಡಿಗಳು – ಸಂಜೆ ದಿನಸಿ ಸಾಮಾನಲ್ಲದೆ ಎಣ್ಣೆ ಬಾಟಲಿ ಮಾರಾಟದಲ್ಲಿ ತೊಡಗಿವೆ!!! ಆ ಅಂಗಡಿಗಳಲ್ಲಿ ಕೂಲಿಕಾರ್ಮಿಕರ ಜೇಬಿನ ಬಾರ ಬೇಗ ಕಡಿಮೆಯಾಗುತ್ತವೆ!!! ಆದರೆ ಕಾಫಿ ಬೆಲೆ ಚನ್ನಾಗಿರುವುದರಿಂದ (ಸ್ವಲ್ಪ ಕೆಲಸಮಾಡಿದರೆ) ಜೇಬು ಮತ್ತೆ ಬಾರವಾಗುತ್ತಿರುತ್ತದೆ). ಅತ್ತ ಫೋನ್ ನಲ್ಲಿ ಮಾತಾಡಿದ ಗೌಡರು ಹೌದು. ಆನಂದಪ್ಪ ಬಂದಿದ್ದ. ಹಳೆ ಬಾಕಿ ತೀರ್ಸಿ,ಇನ್ನೂ ಎರಡು ಕ್ವಾರ್ಟರ್ ಬಾಟಲಿ ತಗಂಡ್ ಈಗತಾನೆ ಅಂಗಡಿಯಿಂದ ಹೋದ ಎಂದರು.
                   ನಡೆದಿದ್ದಿಷ್ಟೇ. ಚಿಲ್ಲರೆ ತರುತ್ತೇನೆಂದು ಸಾವಿರ ರುಪಾಯಿ ನೋಟು ತೆಗೆದುಕೊಂಡು ಹೋದ ಆನಂದಪ್ಪ – ಊರಿನಿಂದ ಸ್ವಲ್ಪ ಹೊರಗಿದ್ದ  ಗೌಡರ ಎಣ್ಣೆ ಕಂ ದಿನಸಿ ಅಂಗಡಿಗೆ ಹೋಗಿದ್ದಾನೆ. ಸಾವಿರ ರುಪಾಯಿ ನೋಟು ಗೌಡರಿಗೆ ಕೊಟ್ಟಿದ್ದಾನೆ. (ಹಿಂದೆ ಎಣ್ಣೆ ಹೊಡೆಯಲು ಮಾಡಿದ) ಆನಂದಪ್ಪನ ಹಿಂದಿನ ಬಾಕಿ – ನೂರಾ ನೂರೈವತ್ತಾ ರುಪಾಯಿಯನ್ನು ಗೌಡರು ಮುರಿದುಕೊಂಡು ಉಳಿದ ಚಿಲ್ಲರೆ ಕೊಟ್ಟಿದ್ದಾರೆ. ಭಂಡ ಆನಂದಪ್ಪ ಆ ಚಿಲ್ಲರೆಯಲ್ಲಿ ಮತ್ತೆರೆಡು ಕ್ವಾರ್ಟರ್ ಬಾಟಲಿ ಕೊಂಡುಕೊಂಡು ಜೇಬಿಗಿಳಿಸಿದ್ದಾನೆ. ಉಳಿದ ದುಡ್ಡನ್ನೂ ತನ್ನ ಹತ್ರನೇ ಇಟ್ಟುಕೊಂಡಿದ್ದಾನೆ!!!
                 ಆನಂದಪ್ಪನ ಸುಳಿವು ಸಿಕ್ಕಿದ್ದೇ ತಡ, ಒಂದು ಕ್ಷಣವೂ ಸಮಯ ವ್ಯರ್ಥಮಾಡದೆ ಬೈಕಿನಲ್ಲಿ ಬಂದ ಆ ಯುವಕರು ಸೀನನನ್ನು ಮದ್ಯದಲ್ಲಿ ಕೂರಿಸಿಕೊಂಡು ಸೀದಾ ಗೌಡರ ಅಂಗಡಿಯ ದಿಕ್ಕಿಗೆ ಬೈಕ್ ತಿರುಗಿಸಿದರು. ಗೌಡರ ಅಂಗಡಿಯಿಂದ ಸ್ವಲ್ಪಮುಂದೆ ತೂರಾಡುತ್ತಾ  ಕಾಲೆಳೆದುಕೊಂಡು ಹೋಗುತ್ತಿದ್ದ ಆನಂದಪ್ಪ ಕಂಡ. ಸೀನನಿಗೆ ಜೀವ ಬಂದಂತಾಯಿತು. ಇವರು ಕಾಣುತ್ತಿದ್ದಂತೆ ಆನಂದಪ್ಪ ರಸ್ತೆ ಬಿಟ್ಟು ಓಡಲಾರಂಬಿಸಿದ. ಆದರೆ ಬೈಕಿನಲ್ಲಿ ಬಂದ ಆ ಯುವಕರು – ಆನಂದಪ್ಪನನ್ನು ಬೆನ್ನಟ್ಟಿ ಹೋಗಿ ಎಳೆದು ತಂದರು. ಎಣ್ಣೆಮತ್ತಿನ ಆನಂದಪ್ಪ ಕೈ ಮುಗಿದು ಪೆಚ್ಚುಮೊರೆ ಮಾಡಿಕೊಂಡು ನಿಂತ. ಒಂದೆರೆಡು ಧರ್ಮದೇಟುಗಳು ಬಿದ್ದವು. ಜೇಬು ಜಪ್ತಿಮಾಡಿದಾಗ ಆರುನೂರು ಚಿಲ್ಲರೆ ರೂಪಾಯಿಗಳು ಸಿಕ್ಕವು. ಜೊತೆಗೆರೆಡು ಎಣ್ಣೆ ಬಾಟಲಿಗಳು. ಯುವಕರು ಅವನ್ನೆಲ್ಲ ಸೀನನ ಕೈಮೇಲೆ ಹಾಕಿದರು. ಅಬ್ಬ. ಇಷ್ಟಾದರೂ ಸಿಕ್ತಲ್ಲಾ ಎಂದು ಸಾವಿರ ರುಪಾಯಿ ಕಳೆದುಕೊಂಡು ಚಿಂತಾಕ್ರಾಂತನಾಗಿದ್ದ ಸೀನ ನಿರಾಳ ಮನದಿಂದ ಆರನೂರು ಚಿಲ್ಲರೆ ರುಪಾಯಿಗಳನ್ನು ಜೇಬಿಗಿಳಿಸಿದ. ಆದರೆ ಎರಡು ಬಾಟಲಿಗಳು. ಸೀನ ಎಣ್ಣೆಹಾಕುವ ವ್ಯಕ್ತಿಯಲ್ಲ. ಆನಂದಪ್ಪನ ಸುಳಿವುಕೊಟ್ಟು, ಫೋನ್ ಮಾಡಿ, ಬೈಕಿನಲ್ಲಿ ಕರೆದುಕೊಂಡು ಹೋಗಿ ಅವನನ್ನು ಹಿಡಿಯಲು ನೆರವಾದ ಆ ಇಬ್ಬರು ಯುವಕರಿಗೆ ಸೀನ ಆ ಎರಡು ಬಾಟಲಿಗಳನ್ನ ನೀಡಿದ!!!
                 ನಾನು ಲೇಖನದ ಮೊದಲಪ್ಯಾರಾದಲ್ಲೇ ಹೇಳಿದೆ – ನಡೆದ ಘಟನಾವಳಿಗಳಲ್ಲಿ ಯಾರಿಗೂ ನಷ್ಟವಾಗಲಿಲ್ಲ. ಬದಲಾಗಿ ಲಾಭವೇ ಆಯಿತೆಂದು. ಸೀನನ ವಿಷಯಕ್ಕೇ ಬರೋಣ. ಆತನಿಗೇ ಸ್ವಲ್ಪ ನಷ್ಟವಾದಂತನಿಸಿದರೂ ಸಾವಿರ ರುಪಾಯಿ ಲಾಸಾಗುವುದು ತಪ್ಪಿ ಆರುನೂರು ಚಿಲ್ಲರೆ ರುಪಾಯಿ ವಾಪಸ್ ಸಿಕ್ಕಿದ್ದರಿಂದ ಸಂತೋಷಪಟ್ಟ!  ಆನಂದಪ್ಪನಿಗೆ? ಗೌಡರ ಅಂಗಡಿಯಲ್ಲಿ ಹಳೆಬಾಕಿ ಚುಕ್ತವಾದ ಲಾಭ!!  ಇನ್ನು ಗೌಡರಿಗೆ – ಹಳೆಬಾಕಿ ತೀರಿಸದೆ ತಲೆತಪ್ಪಿಸಿ ಓಡಾಡುತ್ತಿದ್ದ ಆನಂದಪ್ಪ ಬಾಕಿ ತೀರಿಸಿದ ಲಾಭ!!! ಸಹಾಯ ಮಾಡಿದ ಆ ಇಬ್ಬರು ಯುವಕರಿಗೆ – ಒಂದೊಂದು ಎಣ್ಣೆಬಾಟಲಿ ಸಿಕ್ಕಿದ ಲಾಭ!!!!  ಓದುಗರರಾದ ನಿಮಗೂ ಮನರಂಜನೆಯ ಲಾಭವಾಗಿದೆಯೆಂದು ಅಂದುಕೊಳ್ಳುತ್ತೇನೆ. (ಕಾಮೆಂಟಿಸಿದರೆ/+1 ರ ಮೇಲೆ ಕ್ಲಿಕ್ ಮಾಡಿದರೆ ಗೊತ್ತಾಗುತ್ತೆ).