Tuesday, March 8, 2011

ಎಂಡೋಸಲ್ಫಾನ್ ಎಂಡೋಸಲ್ಫಾನ್ ಎಂಡೋಸಲ್ಫಾನ್ ಎಂಡೋಸಲ್ಫಾನ್....ಎಂಡೋಸಲ್ಫಾನ್ ಅತ್ಯಂತ ಕೆಟ್ಟದ್ದೇ?????


             ಟೊಂಯ್ಯ್ ಟೊಂಯ್ಯ್ ಎಂಬ ದುಃಖಭರಿತ ಹಿನ್ನಲೆ ದನಿಯೊಂದಿಗೆ ತಲೆದಪ್ಪ ಕೈಕಾಲು ಸೊಟ್ಟೆ ವಿಕಲಾಂಗ ಮಕ್ಕಳ ವ್ಯಕ್ತಿಗಳ ಚಿತ್ರಗಳು-ಒಂದೆರಡು ತಿಂಗಳಿಂದ ಈಚೆ ಇದನ್ನು ಮತ್ತೆ ಮತ್ತೆ ಟೀ.ವಿ ಯಲ್ಲಿ ನೀವು ನೋಡಿಯೇ ನೋಡಿರುತ್ತೀರಿ. ನಮ್ಮೆಲ್ಲಾ ಮಾದ್ಯಮಗಳು ಕರ್ನಾಟಕದ ಗಡಿಗೆ ತಾಗಿದಂತಿರುವ ಕಾಸರಗೋಡು ತಾಲೂಕಿನ ಕೆಲವು ಭಾಗದಲ್ಲಿ ನಡೆದ ಎಂಡೋಸಲ್ಫಾನ್ ದುರಂತದ ಬಗ್ಗೆ ವರದಿ ಮಾಡಿವೆ. (ಈ ದುರಂತ ನಡೆದು ದಶಕಗಳೇ ಆಗಿವೆ. ಆದರೆ ಈಗ ದೊಡ್ಡ ಸುದ್ದಿಯಾಗಿದೆ). ಮಂತ್ರಿಣಿಯೊಬ್ಬರು ಸಂತ್ರಸ್ತರ ಪರವಾಗಿ ಹೋರಾಡಿ ಅವರಿಗೆ ಪರಿಹಾರ ಕೊಡಿಸಲು ಪ್ರಯತ್ನಿಸುವುದಲ್ಲದೆ ಮುಂದೆಂದೂ ಹೀಗಾಗದಿರಲೆಂದು ಎಂಡೋಸಲ್ಫಾನನ್ನು ನಿಷೇದಿಸಲು ಮನವಿಮಾಡಿದ್ದಾರೆ. ಆಪ್ತ ಮಂತ್ರಿಣಿಯ ಮನವಿಯಂತೆ ಮಾನ್ಯ ಮುಖ್ಯಮಂತ್ರಿ ಯಡ್ಡಿಯೂರಪ್ಪರು ಕರ್ನಾಟಕದಲ್ಲಿ ತಾತ್ಕಾಲಿಕವಾಗಿ ಎಂಡೋಸಲ್ಫಾನ್ ಮಾರಾಟವನ್ನು ನಿಷೇದಿಸಿದ್ದಾರೆ. ಆದರೆ ಕೇಂದ್ರಸರ್ಕಾರ ಮಾತ್ರ ಬೇರೆಯೇ ರಾಗ ಹಾಡುತ್ತಿದೆ!! ತಿಮಿಂಗಿಲದಂತೆ ಕಾಣುವ ಶರದ್ ಪವಾರ್ ಎಂಡೋಸಲ್ಫಾನ್ ಪರವಾಗಿ ಮಾತಾಡುತ್ತಿದ್ದಾರೆ!!! ಆಸ್ಟ್ರೇಲಿಯಾ, ಬ್ರೆಜಿಲ್ ಮೊದಲಾದ ನಲವತ್ತಕ್ಕೂ ಹೆಚ್ಚು ದೇಶಗಳಲ್ಲಿ ಎಂಡೋಸಲ್ಫಾನ್ ಬಳಕೆಯಲ್ಲಿದೆ. ಸದ್ಯದಲ್ಲಿ ನಿಷೇದಿಸುವ ಅಗತ್ಯವಿಲ್ಲ. ಹಿಂದಿನ ನಾಲ್ಕು ತಜ್ಞರ ವರದಿಗಳು ನಿಷೇಧಿಸುವ ಅಗತ್ಯವಿಲ್ಲವೆಂದೇ ಹೇಳಿವೆ. ಇನ್ನೂ ಒಂದು ಹೊಸ ತಜ್ಞರ ಸಮಿತಿ ರಚಿಸಿ ಘಟನೆ ಪರಿಶೀಲಿಸಿ ಹಾನಿಯಬಗ್ಗೆ ಸಮಗ್ರ ವರದಿಕೊಟ್ಟರೆ ನಿಷೇದಿಸುವ ಬಗ್ಗೆ ಪರಿಶೀಲಿಸಬಹುದು-ಎಂದಿದ್ದಾರೆ!!!! ಅಬ್ಬಾ ಸೊಕ್ಕೆ!! ಅಂತಹಾ ವಿಷವನ್ನು ನಿಷೇದಿಸುವುದಿಲ್ಲವಂತೆ!!! ತಯಾರಿಸುವ ಕಂಪನಿಗಳಿಂದ ಎಷ್ಟು ದುಡ್ಡು ತಿಂದಿದ್ದಾನೇನೋ??-ಹೀಗೆಲ್ಲಾ ಸರಣಿ ಅಭಿಪ್ರಾಯಗಳು ನಿಮ್ಮ ತಲೆಯಲ್ಲಿ ಮೂಡಿದರೆ ಅದು ಅಸಹಜವಲ್ಲ. ಸಹಜ. ಆದರೆ ನಿಜ ಬೇರೆಯೇ ಇದೆ!! ನಾನು ಮುಂದೆ ಬರೆಯಲಿರುವ ಬರಹ ಎಂಡೋಸಲ್ಫಾನ್ ಅತ್ಯಂತ ಕೆಟ್ಟದು ಎಂಬ ನಿಮ್ಮ ಖಚಿತ ಅಭಿಪ್ರಾಯವನ್ನು ಬದಲಾಯಿಸದಿದ್ದರೂ ಸ್ವಲ್ಪವಾದರೂ ಅಲ್ಲಾಡಿಸಬಹುದು!!!! ಈ ಬಗ್ಗೆ ಹೆಚ್ಚಿಗೆ ಗೊತ್ತಿರುವವರನ್ನು ಕೇಳಿ ತಿಳಿದುಕೊಳ್ಳುವಂತೆ ಪ್ರೇರೇಪಿಸಬಹುದು. (ನೀವು ಹಾಗೆ ಮಾಡಿ ನಮ್ಮೊಂದಿಗೆ ಹಂಚಿಕೊಂಡರೆ ನನ್ನ ಅಭಿಪ್ರಾಯ ಸರಿಯೇ ತಪ್ಪೇ ಎಂದು ನನಗೂ, ಎಂಡೋಸಲ್ಫಾನ್ ಬಗ್ಗೆ ನಿಜವೇನು ಎಂದು ಇತರರಿಗೂ ಗೊತ್ತಾಗುತ್ತದೆ)
           ಒಂದು ದಶಕದ ಹಿಂದಿನ ಕಥೆ. ಮಲೆನಾಡು-ಕರಾವಳಿಗಳಲ್ಲಿ ವನಿಲ್ಲಾದ್ದೇ ಮಾತುಕತೆ. ವನಿಲ್ಲಾಕ್ಕೆ ಚಿನ್ನದ ಬೆಲೆಯಿದ್ದ ದಿನಗಳವು. (ಇಂದು ವನಿಲ್ಲಾಕ್ಕೆ ಕಾಲಿಗೆ ಹಾಕುವ ಹವಾಯಿ ಚಪ್ಪಲಿಯಷ್ಟು ಬೆಲೆಯಷ್ಟೇ!!) ಜನವರಿ-ಪೆಬ್ರವರಿಯಲ್ಲಿ ತೋಟಕ್ಕೆ ನೀರುಬಿಟ್ಟಕೂಡಲೇ ವನಿಲ್ಲಾ ಬಳ್ಳಿಯಲ್ಲಿ ಎಲೆ ಖಾಂಡ ಸೇರುವ ಭಾಗದಿಂದ ಗೊಂಚಲು ಮೂಡಲಾರಂಬಿಸುತ್ತಿತ್ತು. ಅನಂತರ ಅದು ಉದ್ದ ಬೆಳೆದು ಅದರಲ್ಲಿ ಹತ್ತಿಪ್ಪತ್ತು ಹೂ ದಿನಕ್ಕೊಂದು ಒಮ್ಮೊಮ್ಮೆ ಎರೆಡರಂತೆ ಅರಳುತ್ತಿದ್ದವು. ಅವನ್ನು ಕೃತಕ ಪರಾಗಸ್ಪರ್ಶ ಮಾಡಿದರೆ ಕಾಯಿಕಟ್ಟುತ್ತಿತ್ತು. ವನಿಲ್ಲಾಕ್ಕೆ ಚಿನ್ನದ ಬೆಲೆಯಿದ್ದಾಗ ಒಂದೊಂದು ಗೊಂಚಲೂ ನೂರಾರು ರೂಪಾಯಿಯ ಮಾಲಾಗಿತ್ತು. ಎಳೆ ಗೊಂಚಲು ಎಲೆ ಖಾಂಡದ ಮದ್ಯೆ ಹೊರಡುತ್ತಿದ್ದಂತೆ ಅದನ್ನೊಂದು ಕೀಟ ಕೊರೆಯುತ್ತಿತ್ತು. ಹಾಗೂ ಕೊರೆದ ಆ ಜಾಗದಲ್ಲಿ ಶಿಲೀಂದ್ರ ಬೆಳೆದು ಇಡೀ ಇಡೀ ಗೊಂಚಲೇ ಪ್ರಾರಂಬದಲ್ಲೇ ಸುಟ್ಟು ಕರಟಿಹೋದಂತಾಗುತ್ತಿತ್ತು. ಸಾವಿರಾರು ರೂಪಾಯಿ ಹಾನಿ. ಈ ಕೀಟದ ಉಪಟಳ ಹೆಚ್ಚಾದಾಗ ನಾವು ಸುತ್ತಮುತ್ತಲಿನ ಉಳಿದ ಬೆಳೆಗಾರರು ಮಾಡಿದಂತೆ ಮಾನೋಕ್ರೋಟೋಪಾಸ್ (ಬೆಳೆಗಳಿಗೆ-ತರಕಾರಿಗಳಿಗೆ ಸಾದಾರಣವಾಗಿ ಉಪಯೋಗಿಸುವ ಅಂತರ್ವ್ಯಾಪಿ ಕೀಟನಾಶಕ) ಹಾಗೂ ಮ್ಯಾನ್ಕೊಜೆಬ್ (ಕಾಂಟ್ಯಾಕ್ಟ್ ಫನ್ಜಿಸೈಡ್)-ಇವೆರಡನ್ನು ನೀರಿನಲ್ಲಿ ಕರಡಿ ವನಿಲ್ಲಾ ಬಳ್ಳಿಗೆ ಸ್ಪ್ರೇ ಮಾಡಿದೆವು. ಸ್ವಲ್ಪ ಹತೋಟಿ ಬಂದಂತಾದರೂ ಹತ್ತು ಹನ್ನೆರಡು ದಿನಗಳಾದಮೇಲೆ ಮತ್ತೆ ಕೀಟಗಳ ಹಾವಳಿ ಶುರು!!! ಆಗ ಬೇರೊಬ್ಬರ ಸಲಹೆಯಂತೆ ರೋಗಾರ್ (ಒಂದು ಅಂತರ್ವ್ಯಾಪಿ ಕೀಟನಾಶಕ) ಹಾಗೂ ಬಾವಿಸ್ಟಿನ್ (ಒಂದು ಅಂತರ್ವ್ಯಾಪಿ ಶಿಲೀಂದ್ರನಾಶಕ)ಗಳನ್ನು ಒಟ್ಟುಸೇರಿಸಿ ಬಳ್ಳಿಗಳಿಗೆ ಹೊಡೆದೆವು. ಆದರೂ ಒಂದೆರಡು ವಾರಗಳ ನಂತರ ಮತ್ತೆ ಕೀಟಸಮಸ್ಯೆ ಅಲ್ಲಲ್ಲಿ ಕಾಣಿಸಿಕೊಂಡಿತು!!! (ನಮ್ಮ ಪಕ್ಕದೂರಿನ ವನಿಲ್ಲಾ ಮಾರಾಟಗಾರನೊಬ್ಬ ಸಾಗರದಲ್ಲಿನ ಪರಿಚಯಸ್ತ ಬೆಳೆಗಾರರೊಬ್ಬರಿಗೆ ಫೋನ್ ಮಾಡಿ ಅಲ್ಲಿ ಅವರು ಗೊಂಚಲು ಹೊರಡುವುದಕ್ಕೆ ಮುಂಚೆಯೇ ಎಂಡೋಸಲ್ಫಾನ್ ಹೊಡೆಯುತ್ತಾರೆಂಬ ಸುದ್ದಿ ಹೇಳಿದ. ಅದನ್ನು ಕೇಳಿ ಅಬ್ಬಾ!! ಅಂತಾ ವಿಷ ಉಪಯೋಗಿಸುತ್ತಾರೆಯೇ ಎಂದು ಆಶ್ಚರ್ಯವಾಯಿತು!!) ಏನೇ ಆಗಲಿ. ಈ ಕೀಟಸಮಸ್ಯೆಗೆ ಸೂಕ್ತ ಪರಿಹಾರವೇನೆಂದು-ಸಕಲೇಶಪುರದ ಸಾಂಬಾರು ಮಂಡಳಿ ಸಂಶೋದನಾಕೇಂದ್ರದಲ್ಲಿ ಹಿರಿಯ ವಿಜ್ಞಾನಿಗಳಾಗಿದ್ದ-ನನ್ನ (ಕಸಿನ್) ಅಕ್ಕಳ ಮೈದುನರೂ ಆಗಿದ್ದ-ಶ್ರೀಯುತರನ್ನು ದೂರವಾಣಿ ಮೂಲಕ ಸಂಪರ್ಕಿಸಿದೆವು.
              ಶ್ರೀಯುತರ (ಅವರ ಹೆಸರು ಬೇರೆಯೇ ಇದೆ) ಜೊತೆಗಿನ ನಮ್ಮ ಸಂಬಾಷಣೆ ಬರೆಯುವ ಮೊದಲು ಆ ಹಿರಿಯ ವಿಜ್ಞಾನಿಗಳ ಬಗ್ಗೆ ಒಂದು ಪ್ಯಾರ ಬರೆಯುವುದೇ ಸೂಕ್ತ. ಕೊಪ್ಪಾ ಮೂಲದವರಾದ ಶ್ರೀಯುತರದ್ದು ಸಾಂಬಾರು ಮಂಡಳಿಯಲ್ಲಿ ದೊಡ್ದಹೆಸರು. ತಮ್ಮ ತೂಕದ ವಸ್ತುನಿಷ್ಟ ವಿಶ್ಲೇಷಣೆಗೆ ಹೆಸರಾದವರು. ಅನೇಕ ಉಪಯುಕ್ತ ಸಂಶೋದನಾ ಪ್ರಬಂದ ಮಂಡಿಸಿದವರು.ಸಾಂಬಾರು ಗಿಡಗಳ ಬಗ್ಗೆ ವಿಷಯ ಚೆನ್ನಾಗಿ ತಿಳಿದುಕೊಂಡಿರುವ ಹಾಗೂ ಅದಕ್ಕಿಂತ ಹೆಚ್ಚಾಗಿ ಹೊಸಹೊಸ ವಿಷಯ ತಿಳಿದುಕೊಳ್ಳಲು ಸದಾ ಉತ್ಸಾಹ ತೋರುವ ವ್ಯಕ್ತಿ. ಕಾರ್ಯಕ್ರಮಗಳಲ್ಲಿ ಎಂದೂ ಒಟ್ರಾಶಿ ಕಾಟಾಚಾರಕ್ಕೆ ಏನೇನೋ (ರೈತರ ಎದುರು) ವದರುವವರಲ್ಲ. (ಅನೇಕಜನ ಕೃಷಿತಜ್ಞರು ಎದುರಿಗೆ ಕೂತ ರೈತರನ್ನು ಗೂಬೆಗಳೆಂದು ತಿಳಿದು ಒಟ್ಟಾರೆ ಏನೇನೋ ವದರುತ್ತಿರುತ್ತಾರೆ!!) ಕಾರ್ಯಕ್ರಮಗಳಲ್ಲಿ ಏನಾದರೊಂದು ಚರ್ಚೆ ನಡೆಯುತ್ತಿದ್ದು ಗಲಾಟಿ ವಾತಾವರಣವಿದ್ದು ಆ ಸಮಯದಲ್ಲಿ ತಮ್ಮ ಅಭಿಪ್ರಾಯ ಹೇಳಲು ಇವರು ಎದ್ದು ನಿಂತರೆ ಅವರ ಮಾತು ಕೇಳಲು ಇಡೀ ಸಭೆಯೇ ನಿಶಬ್ದವಾಗುತ್ತಿತ್ತು. ಈಗ ಅವರು ಬಹುಷಃ ಸಿಕ್ಕಿಂ ನ ಗ್ಯಾಂಗ್ಟಕ್ ನಲ್ಲಿ ಕೆಲಸಮಾಡುತ್ತಿರಬೇಕು.
            ಅತ್ತ ಫೋನ್ ಎತ್ತಿದ ಶ್ರೀಯುತರಿಗೆ ಕೀಟಬಾದೆ ಸಮಸ್ಯೆಯನ್ನೂ ಹಾಗೂ ಅದರ ನಿಯಂತ್ರಣಕ್ಕೆ ಉಪಯೋಗಿಸಿದ ಕೀಟನಾಶಕ/ಶಿಲೀಂದ್ರನಾಶಕಗಳ ಪಟ್ಟಿಯನ್ನು ಸಂಕ್ಷಿಪ್ತವಾಗಿ ಹೇಳಿ ಅಲ್ಪಸ್ವಲ್ಪ ಕೀಟಗಳ ಹಾವಳಿ ಇರುವುದರಿಂದ ಇನ್ನೇನು ಸ್ಪ್ರೇ ಮಾಡಬಹುದೆಂದು ಸಲಹೆ ಕೇಳಿದೆ. ಅವರಿಂದ ಬಂದ ಉತ್ತರ-ಸಾಕು. ಭೂಮಿಗೆ ತುಂಬಾ ವಿಷ ಸುರಿದುಬಿಟ್ಟಿದ್ದೀರಿ. ಎಲ್ಲೋ ಅಲ್ಪಸ್ವಲ್ಪ ಕೀಟಬಾದೆಯಿದ್ದರೆ ಸದ್ಯಕ್ಕಂತೂ ಏನೂ ಬೇಡ. ಆಗ ನಾನು-ಈ ವರ್ಷವಂತೂ ಹೀಗೆ ಆಯಿತು-ಮುಂದಿನವರ್ಷ ಕೀಟಬಾದೆ ಬಗ್ಗೆ ಮುಂಜಾಗರೂಕತೆ ತೆಗೆದುಕೊಳ್ಳೋಣ-ಯಾವುದಾದರೊಂದು ಒಳ್ಳೇ ಕೀಟನಾಶಕವನ್ನು ಗೊಂಚಲು ಹೊರಡುವ ಸಮಯದಲ್ಲೇ ಸ್ಪ್ರೇ ಮಾಡಿಬಿಡೋಣವೆಂದು ಮನದಲ್ಲೇ ಆಲೋಚಿಸಿ-ಆಯಿತು, ಇವೆಲ್ಲದಕ್ಕಿಂತ ಕಡಿಮೆ ಹಾನಿಕಾರಕ ಹಾಗೂ ಕಡಿಮೆ ವಿಷದ ಕೀಟನಾಶಕ ಯಾವುದಾದರೂ ಇದ್ದರೆ ಹೇಳಿ. ಬರುವ ವರ್ಷ ಪ್ರಾರಂಬದಲ್ಲೇ ವನಿಲ್ಲಾ ಬೀಳುಗಳಿಗೆ ಸ್ಪ್ರೇ ಮಾಡುತ್ತೇವೆ-ಎಂದು ಕೇಳಿದಾಗ ಶ್ರೀಯುತರಿಂದ ಬಂದ ಉತ್ತರ-ಒಮ್ಮೆ ನನಗೇ ತುಂಬಾ ಆಶ್ಚರ್ಯವಾಯಿತು-ಎಂಡೋಸಲ್ಫಾನ್(!!!!!!!!). ಎಂಡೋಸಲ್ಫಾನ್ ಸ್ಪ್ರೇ ಮಾಡಿ.ಎಲ್ಲದಕ್ಕಿಂತ ಅದೇ ಕಡಿಮೆ ಹಾನಿಕಾರಕ ಎಂದು.
           ಹೌದು. ಇದೊಂದು ವಿಚಿತ್ರ. ಆದರೂ ಸತ್ಯ!!! ಎಲ್ಲಾ ಕೀಟನಾಶಕಗಳೂ ವಿಷವೇ. ಆದರೆ ಇಂದು ಮಾರುಕಟ್ಟೆಯಲ್ಲಿ ಸಿಗುವ (ನೀವು ಹಗಲಲ್ಲಿ ಈ ಬ್ಲಾಗ್ ಓದುತ್ತಿದ್ದರೆ-ಈ ಕ್ಷಣದಲ್ಲಿ ಸಾವಿರಾರು ರೈತರಿಂದ ಸಿಂಪಡನೆಯಾಗುತ್ತಿರುವ)- ಮಾನೋಕ್ರೋಟೋಪಾಸ್,ರೋಗಾರ್ -ಮೊದಲಾದ ಹೆಚ್ಚಿನ ಎಲ್ಲಾ ಕೀಟನಾಶಕಗಳಿಗಿಂತ ಎಂಡೋಸಲ್ಫಾನ್ ಕಡಿಮೆ ವಿಷದ್ದು ಹಾಗೂ ಹಾಗಾಗಿ ಅವೆಲ್ಲಕ್ಕೆ ಹೋಲಿಸಿದರೆ ಒಳ್ಳೆಯದು!!!! ಇನ್ನೊಂದು ರೀತಿಯಲ್ಲಿ ಹೇಳುವುದಾದರೆ-ನಾವು (ದಿನನಿತ್ಯ) ತಿನ್ನುವ ದೋಸೆ,ಹುಳಿ,ಸಾಂಬಾರು,ಸಾರು,ತರಕಾರಿ ಪಲ್ಯ,ಕೆಲವು ಹಣ್ಣುಗಳು (ಉದ್ದು-ತೊಗರಿ ಗಿಡಗಳಿಗೆ, ತರಕಾರಿ ಗಿಡಗಳಿಗೆ ಕಾಲಕಾಲಕ್ಕೆ ಮೇಲೆ ಹೇಳಿದ ಕೀಟನಾಶಕ/ಶಿಲೀಂದ್ರನಾಶಕಗಳನ್ನು ನಿರೀಕ್ಷಿತ ಪಸಲು ಪಡೆಯಲು ಹೆಚ್ಚಿನ ಎಲ್ಲಾ ರೈತರು ಸ್ಪ್ರೇ ಮಾಡೇಮಾಡಿರುತ್ತಾರೆ!!!)-ಕುಡಿಯುವ ಹಾಲು (ದನಗಳಿಗೆ ದಿನಾ ಹಾಕುವ ಹತ್ತಿ,ಶೇಂಗಾ ಹಿಂಡಿಗಳಲ್ಲಿ ಹತ್ತಿ ಹಾಗೂ ನೆಲಗಡಲೆ ಗಿಡಗಳಿಗೆ ಹೊಡೆದ ಕೀಟನಾಶಕಗಳ ಅಂಶ ಇದ್ದೇಇರುತ್ತೆ!!)-ಇವೆಲ್ಲದರಲ್ಲೂ ಎಂಡೋಸಲ್ಫಾನ್ ಗಿಂತ ಹೆಚ್ಚು ವಿಷದ ಹಾಗೂ ಅಪಾಯಕಾರಿಯಾದ ಕೀಟನಾಶಕಗಳು ಸಾದಾರಣವಾಗಿ ಇದ್ದೇ ಇರುತ್ತವೆ. ಪಾಪ ಎಂಡೋಸಲ್ಫಾನ್ ಮಾತ್ರ ನಿಷೇದಕ್ಕೊಳಗಾಗಿದೆ!!! ಎಷ್ಟೊಂದು ವಿಚಿತ್ರ ಅಲ್ವಾ?? ನಂಬಲೇ ಕಷ್ಟವಾಗುತ್ತದೆ.
           ಶ್ರೀಯುತರು ಹಾಗೆಂದಕೂಡಲೇ ಅವರು ಹೇಳಿದ್ದು ಸತ್ಯವಿರಬಹುದೇನೋ ಎಂದು ನಾನು ನಂಬಿದಂತೆ ನೀವೂ ನಂಬಬೇಕು ಎಂದು ನಾನು ಹೇಳುತ್ತಿಲ್ಲ. ಈ ಬ್ಲಾಗ್ ಓದುಗರ್ಯಾರಾದರೂ ಕೀಟನಾಶಕಗಳ ವಿಷಯದಲ್ಲಿ ತಜ್ಞರಾಗಿದ್ದರೆ ಅಥವಾ ಆ ವಿಷಯದಲ್ಲಿ ಹೆಚ್ಚು ತಿಳಿದುಕೊಂಡವರಿದ್ದರೆ ಎಂಡೋಸಲ್ಫಾನ್ ಬೇರೆಲ್ಲಾ ಕೀಟನಾಶಕಗಳಿಗಿಂತ ಕಡಿಮೆ ಹಾನಿಕಾರಕ ಎಂಬ ವಿಷಯ ಸತ್ಯವೋ ಸುಳ್ಳೋ ಎಂಬುದನ್ನು ನಮ್ಮೊಂದಿಗೆ ಹಂಚಿಕೊಂಡರೆ ಅನುಕೂಲ. ಅಥವಾ ಓದುಗರ್ಯಾರಾದರೂ ತಮ್ಮ ಪರಿಚಯದ ಈ ವಿಷಯದ ಬಗ್ಗೆ ಹೆಚ್ಚು ತಿಳಿದುಕೊಂಡ ವ್ಯಕ್ತಿಗಳಿಗೆ ಈ ಲೇಖನವನ್ನು ಕಳಿಸಿ/ಅಥವಾ ವಿಷಯ ಕೇಳಿ ಅವರ ಅಭಿಪ್ರಾಯ ತಿಳಿದುಕೊಳ್ಳಬಹುದು. (ನನ್ನ ಬ್ಲಾಗ್ ಬರಹಕ್ಕೆ ಯಾರುಬೇಕಾದರೂ ಕಾಮೆಂಟ್ ಬರೆಯಲಾಗುವಂತೆ ಸೆಟ್ಟಿಂಗ್ ಮಾಡಿದ್ದೇನೆ)
            ಮಾದ್ಯಮದಲ್ಲಿ ಎಂಡೋಸಲ್ಫಾನ್ ದುರಂತವನ್ನು ಕಣ್ಣಾರೆ ನೋಡಿರುವ ನಿಮಗೆ ಒಂದು ಪ್ರಶ್ನೆ ಮೂಡಬಹುದು. ಹಾಗಾದರೆ ಕಾಸರಗೋಡಿನಲ್ಲಿ ಗೇರು ಮರಗಳಿಗೆ ಎಂಡೋಸಲ್ಫಾನ್ ಹೊಡೆದಿದ್ದು ಸುಳ್ಳೇ? ಆ ಜಾಗದಲ್ಲಿ ವಿಕಲಾಂಗತೆ ಹೆಚ್ಚಾಗಿ ಕಾಣಿಸಿಕೊಂಡಿದ್ದು ಸುಳ್ಳೇ?? ಅವರೆಲ್ಲಾ ನರಳುತ್ತಿರುವುದು ಸುಳ್ಳೇ??? ಪಡ್ರೆ ಸುತ್ತಮುತ್ತ ಗೇರುಮರಗಳಿಗೆ ಎಂಡೋಸಲ್ಫಾನ್ ಸಿಂಪಡಿಸಿದ್ದು ಸತ್ಯ. ಕೆಲವೊಂದು ವರದಿಗಳ ಪ್ರಕಾರ ಅಲ್ಲೆಲ್ಲ ವಿಕಲಾಂಗತೆ ಹೆಚ್ಚಿದ್ದದ್ದೂ ಸತ್ಯವಿರಬಹುದು. (ಬಹುಷಃ) ಕಾರಣ ಎಂಡೋಸಲ್ಫಾನ್ ಗಿಂತ ಅದನ್ನು ಸಿಂಪಡಿಸಿದ ರೀತಿಯದ್ದು!!!!. ಚಿಕ್ಕ ವಿಮಾನವೋ ಹೆಲಿಕ್ಯಾಪ್ಟರೋ ಯಾವುದೋ ಒಂದರ ಮೂಲಕ ಎತ್ತರದಿಂದ ಮರಗಳೆಲ್ಲದರ ಮೇಲೆ ಮೇಲಿನಿಂದ ಬೀಳುವಂತೆ ಸಿಂಪಡಿಸಿದ್ದು ಆ ರೀತಿ ಸಿಂಪಡಿಸಿದ್ದರಿಂದ ಕುಡಿಯುವ ನೀರಿಗೋ ಅಥವಾ ನೀರಿನ ಮೂಲಕ್ಕೋ ಹೆಚ್ಚಿನ ಪ್ರಮಾಣದಲ್ಲಿ ಸೇರಿ ವಿಕಲಾಂಗಕತೆಗೆ ಕಾರಣವಾಗಿರಬಹುದು. 
         (ಹೆಚ್ಚಿನ ಮಾಹಿತಿ ಬಯಸುವವರಿಗಾಗಿ- ದಿನನಿತ್ಯ ಸಾವಿರಾರು ಲೀಟರ್ ಭೂಮಿಗೆ ಸುರಿಯಲ್ಪಡುತ್ತಿರುವ ಮಾನೋಕ್ರೋಟೋಪಾಸ್ ಹಾಗೂ ಅತ್ಯಂತ ಕೆಟ್ಟದ್ದೆಂದು ನಿಷೇದಕ್ಕೊಳಗಾಗಿರುವ ಎಂಡೋಸಲ್ಫಾನ್ ಇವೆರಡರ ವಿಷತೆ () ವಿಶ್ಲೇಷಣೆ- ಮಾನೋಕ್ರೋಟೋಪಾಸ್- World Health Organization (WHO) Acute Hazard Rankings (???ಪ್ರಕಾರ 1b (Highly hazardous) (ಹೆಚ್ಚಿನ ಮಾಹಿತಿ).  ಎಂಡೋಸಲ್ಫಾನ್ ranking - 2 (Moderately hazardous) (ಹೆಚ್ಚಿನ ಮಾಹಿತಿ)!!!!!)
        ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ-ಅನಿಸಿಕೆಗಳಿಗೆ ಕಾತುರನಾಗಿದ್ದೇನೆ.