Friday, September 10, 2010

ಟಾಮೀ!!!!!.....ಮಲೆನಾಡಿನ ಶಿಕಾರಿಯ ಒಂದು (ಕಟ್ಟು)ಕಥೆ.

                 ಒಂದು ದಶಕದ ಹಿಂದೆ-ನಾನು ಹಾಸ್ಟೆಲ್ಲಿನಲ್ಲಿ ಇದ್ದು ಓದುತ್ತಿದ್ದಾಗ-ಓದಿ ಓದಿ ಬೇಜಾರಾಗಿ ಸ್ನೇಹಿತರೆಲ್ಲ ಅಪರಾತ್ರಿ ಯಾರದ್ದೋ ರೂಮಿನಲ್ಲಿ ಸೇರಿ ಪಟಾಕಿ ಹೊಡೆಯುತ್ತಿದ್ದಾಗ-ತೇಲಿ ಬಂದ ವಿಷಯವೇ ಈ ಸ್ವಾರಸ್ಯಕರ ಕಥೆ!!! ನಾಲ್ಕು ಜನ ಸೇರಿ ಲೋಕಾಭಿರಾಮವಾಗಿ ಮಾತಾಡುವಾಗ ಎಲ್ಲರ ಗಮನವನ್ನು ತನ್ನೆಡೆ ಸೆಳೆಯಲು ಕಾಲು ಬಾಲ ಸೇರಿಸಿ ಕಥೆ ಹೇಳುವವರನ್ನು ನೀವು ನೋಡಿರಬಹುದು. ನಮ್ಮ ಸಹಪಾಟಿ ರಮೇಶನೂ ಅಂತಹವನೇ. ರಮೇಶ ಬಯಲುಸೀಮೆಯಾವನಾದರೂ ಅವನ ತಾಯಿಯ ತವರೂರು ಮಲೆನಾಡಿನ ನಮ್ಮ ತಾಲೂಕು ಕೊಪ್ಪಾಕ್ಕೆ ಸೇರಿದ ಒಂದು ಹಳ್ಳಿ. ಅಲ್ಲಿ ಅವನ ಸೋದರಮಾವ ಮತ್ತು ತಾಯಿಯ ನೆಂಟರೆಲ್ಲಾ ಜಮೀನು ಮಾಡಿಕೊಂಡು ಇದ್ದಾರೆ. ಅವರ ಮಾವ ಹಾಗೂ ಅವರ ಗೆಳೆಯರೆಲ್ಲಾ ಶಿಕಾರಿಗೆ ಹೋಗುತ್ತಿರುತ್ತಾರಂತೆ. ಹಾಗೆ ಒಮ್ಮೆ ಶಿಕಾರಿಗೆ ಹೋದಾಗ, ನಿಜವಾಗಿ ನಡೆದ ಘಟನೆ. ಹೌದು ಕಂಡ್ರೋ ಎಂದು ಒಗ್ಗರಣೆ ಹಾಕಿ-ರಮೇಶ ಹೇಳಿದ್ದು ಹೀಗೆ-
               ರಮೇಶನ ಸೋದರ ಮಾವ ಹಾಗೂ ಮೂರ್ನಾಲ್ಕು ಸ್ನೇಹಿತರು ಒಮ್ಮೆ ಶಿಕಾರಿಗೆ ಹೋದರಂತೆ. ಜೊತೆಗೆ ಅವರ ನಾಯಿ ಟಾಮಿ ಕೂಡಾ ಇತ್ತಂತೆ. ಶಿಕಾರಿಗೆ ಹೊರಡುವ ಪರಿವಾರದಲ್ಲಿ ನಾಯಿ ಎಂದೆಂದೂ ಅವಿಭಾಜ್ಯ ಅಂಗ. ವಾಸನೆಯಿಂದಲೇ ಪ್ರಾಣಿಗಳನ್ನು ಗುರುತಿಸುವುದು, ಅದನ್ನು ಬೆನ್ನತ್ತುವುದು, ಬೆದರಿ ಕದ್ದು ಕೂತ ಪ್ರಾಣಿಗಳನ್ನು ಅಲ್ಲಿಂದ ಎಬ್ಬಿಸುವುದು-ಈ ಕಾರ್ಯಗಳಲ್ಲಿ ನಾಯಿಗಳ ಕಾರ್ಯಕ್ಷಮತೆ ಮನುಷ್ಯರಿಗಿಂತ ಹೆಚ್ಚಂತೆ. (ನಾನೆಂದೂ ಶಿಕಾರಿಗೆ ಹೋದವನಲ್ಲ!!! ಅನುಭವಿಗಳಿಂದ ಕೇಳಿತಿಳಿದಿದ್ದು). ಹೀಗೆ ಶಿಕಾರಿಗೆ ಹೋದವರಿಗೆ ಗಂಟೆಗಟ್ಟಲೆ ಅಲೆದರೂ ಒಂದೇ ಒಂದು (ಯೋಗ್ಯ) ಪ್ರಾಣಿ ಸಿಗಲಿಲ್ಲ. ಅಲೆದಲೆದು ಸುಸ್ತಾಗಿ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಹಂದಿಗಳ ಹಿಂಡೊಂದು ಕಾಣಿಸುವುದೆ!!!! ಕೇಳಬೇಕೆ? ಸುಸ್ತು ಮರೆತು ನಾಯಿ ಹಾಗೂ ಶಿಕಾರಿಗಾರರು ಹಂದಿಗಳ ಬೆನ್ನತ್ತಿದರು. 
                ಉಳಿದ ಹಂದಿಗಳು ಚಲ್ಲಾಚದುರಿ ದಿಕ್ಕುಪಾಲಾಗಿ,ಮರಿಹಂದಿಯೊಂದು ಮಾತ್ರ ಗುಂಪಿನಿಂದ ಬೇರೆಯಾಗಿ ಒಂಟಿಯಾಯಿತು. ಇವರು ಮರಿಹಂದಿಯ ಬೆನ್ನು ಬಿದ್ದರು. ಆ ಮರಿಹಂದಿಯೋ ಇವರನ್ನು ಚೆನ್ನಾಗಿ ಕುಣಿಸಿತು. ಒಮ್ಮೆ ಪೊದೆಯಲ್ಲಿ ಓಡಿಹೋಗಿ ಸೇರಿಕೊಳ್ಳುವುದು-ಅಲುಗಾಡದೆ ಇರುವುದು-ನಾಯಿ, ಮನುಷ್ಯರು ತುಂಬಾ ಹತ್ತಿರ ಬರುತ್ತಿದ್ದಂತೆ ಪಟ್ಟನೆ ಅಲ್ಲಿಂದ ಓಟಕೀಳುವುದು. ಶಿಕಾರಿಗಾರರು ಸುಸ್ತೋ ಸುಸ್ತು.ಇದು ಹೀಗೇ ಎರಡು ಮೂರು ಸರ್ತಿ ಪುನರಾವರ್ತನೆಯಾದಾಗ-ಹಂದಿಮರಿ ಓಡಿಹೋಗಿ ಪೋದೆಯೊಂದನ್ನು ಸೇರಿಕೊಂಡಾಗ-ಅದನ್ನು ಹೊರಗೆ ಹೊರಡಿಸುವ ಗೋಜಿಗೆ ಹೋಗದೆ-ಶಿಕಾರಿಗಾರರು ಪೊದೆಗೇ ಬೆಂಕಿಯಿಟ್ಟರು!! ಹೇಗೂ ಸಾಯಿಸಿಯೇ ತಿನ್ನುವುದಲ್ಲವೇ? ಬೆಂಕಿಲೇ ಸಾಯಲಿ-ಎಂಬುದು ಅವರೆಣಿಕೆ. ಪೊದೆ ಪೂರ್ತಿ ಉರಿಯುವ ತನಕ ಬೀಡಿ ಸೇದುತ್ತ,ಅದು ಇದು ಹರಟುತ್ತ ವಿಶ್ರಾಂತಿ ಪಡೆದರು.
               ಸ್ವಲ್ಪ ಹೊತ್ತು ಬಿಟ್ಟು ಬೆಂಕಿಉರಿ ಕಡಿಮೆಯಾದಮೇಲೆ ಕೆದಕಿ ನೋಡಿದರೆ ಹದವಾಗಿ ಬೆಂದ ಹಂದಿಮಾಂಸ!!! ಅಷ್ಟು ಚೂರು ಮಾಂಸ ಮನೆಗೆ ತೆಗೆದುಕೊಂಡು ಹೋಗುವುದು ಹೇಗೆ? ಹೇಗೂ ಸುಸ್ತಾಗಿ ಹಸಿವಾಗಿದೆ. ಇಲ್ಲೇ ತಿಂದುಮುಗಿಸುವ- ಎಂದು ತಿರ್ಮಾನಿಸಿದ ರಮೇಶನ ಸೋದರಮಾವ ಮತ್ತು ಅವರ ಸ್ನೇಹಿತರು ಅಲ್ಲೇ ಅದನ್ನು ತಿಂದು ಮುಗಿಸಿದರಂತೆ!! ಹೊಟ್ಟೆ ಸ್ವಲ್ಪ ತಣ್ಣಗಾಗಿ ಕಾಡಿಂದ ಮನೆದಿಕ್ಕಿಗೆ ಹೊರಟಾಗಲೇ ಅವರಿಗೆ ತಮ್ಮ ನಾಯಿ ಟಾಮಿಯ ಜ್ಞಾಪಕ ಬಂದಿದ್ದು. ಕುರುಕುರು, ಟಾಮಿ, ಟಾಮೀ-ಎಷ್ಟು ಕರೆದರೂ ಟಾಮಿಯ ಸುಳಿವಿಲ್ಲ!! ಬದುಕಿದ್ದರೆ ತಾನೇ ಟಾಮಿ ಬರುವುದು?? ಪೊದೆಗೆ ಬೆಂಕಿ ಹಚ್ಚಿದಾಗ ಜಾಣ ಮರಿಹಂದಿ ಎಲ್ಲೋ ಓಡಿಹೋಗಿ ಇವರ ನಾಯಿ ಟಾಮಿಯೇ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡು ಸತ್ತುಹೋಯ್ತಂತೆ!! ಇವರು ತಿಂದು ತೇಗಿದ್ದು ಟಾಮಿಯ ಮಾಂಸವಂತೆ!!!!!
                ಸದ್ದುಮಾಡದೆ ಈ ಕಥೆ ಕೇಳುತ್ತಿದ್ದ ಎಲ್ಲರೂ ಕಥೆ ಮುಗಿಯುತ್ತಿದ್ದಂತೆ ಗೊಳ್ಳೆಂದು ನಕ್ಕರು. ನಾನಂತೂ ಈ ಕತೆಯನ್ನು ಎಳ್ಳಷ್ಟು ನಂಬುವುದಿಲ್ಲ. ಉಪ್ಪು-ಗಿಪ್ಪು ಇಲ್ಲದೆ ಮಾಂಸವನ್ನು ಹಾಗೆಯೇ ತಿನ್ನಬಹುದೆ?? ಈ ಕತೆಯ ಸತ್ಯಾಸತ್ಯತೆಯನ್ನು ಬ್ಲಾಗಿನಲ್ಲಿ ಶಿಕಾರಿಯಬಗ್ಗೆ ಬರೆಯುವ ಯಡೂರಿನ ಪ್ರವೀಣ್ ಗೌಡ ಅವರೇ ಹೇಳಬೇಕು.(ಇದನ್ನು ಓದಿದರೆ ಕಾಮೆಂಟ್ ನಲ್ಲಿ ಬರೆಯಿರಿ). ಅದೇನೇ ಇರಲಿ, ಈ ಘಟನೆ ನಂತರ ಸ್ನೇಹಿತರ ವಲಯದಲ್ಲಿ (ಕೆಲವು ತಿಂಗಳ ವರೆಗೆ) ರಮೇಶ ಟಾಮಿಯೆಂದೇ ಕರೆಯಲ್ಪಡುತ್ತಿದ್ದ!!!. ರಮೇಶ. ರಮೇಶಾ- ಎಂದು ಕರೆದರೂ ಕತ್ತೆತ್ತಿ ನೋಡದಿದ್ದರೆ ಹಾಯ್ ಟಾಮ್ಸ್ ಎಂದು ಕರೆದರೆ ಸಾಕು. ಗುರಾಯಿಸುತ್ತಿದ್ದ!!!!