Wednesday, May 4, 2011

ಬೊಜ್ಜು ಕರಗಿಸುವ ತಾಯತ!!!!!!!


              ಕೂತೇ ಮಾಡುವ ಕೆಲಸ, ಕಡಿಮೆ ಓಡಾಟ, ಜೋಬು ತುಂಬುವ ಸಂಬಳದಿಂದ ಸದಾ (ಅಗತ್ಯಕ್ಕಿಂತ ಹೆಚ್ಚು) ತುಂಬುತ್ತಿರುವ ಹೊಟ್ಟೆ, ಓಡಾಡಲು ಸದಾ ಕಾರು-ಸ್ಕೂಟರ್-ಬೈಕ್, ಸುಭದ್ರ ಆರ್ಥಿಕತೆಯಿಂದ ಮಾನಸಿಕ ನೆಮ್ಮದಿ, ಮನಕ್ಕೊಪ್ಪುವ ಮಡದಿ/ಗಂಡ - ಹೀಗೆ ಅನೇಕ (ಒಮ್ಮೊಮ್ಮೆ ಒಂದೇ ಅಥವಾ ಅದಕ್ಕಿಂತ ಹೆಚ್ಚಿನ) ಕಾರಣಗಳಿಂದ ಇಂದು ಬೊಜ್ಜು ಎಂಬುದು ಒಂದು ಅತಿ ದೊಡ್ಡ ಸಮಸ್ಯೆಯಾಗಿದೆ ಎಂಬ ಮಾತನ್ನು ಯಾರೂ ಅಲ್ಲಗೆಳೆಯಲಾರಿರೆಂದು ನನ್ನ ನಂಬಿಕೆ. ಹೊಟ್ಟೆ, ತೊಡೆಯ ಸುತ್ತ (ಕೆಲವರಿಗೆ ಕುತ್ತಿಗೆ ಹಾಗು ಸರ್ವ ಅಂಗಾಂಗಗಳ ಸುತ್ತ!!!) ಶೇಖರವಾಗುವ ಈ ಬೊಜ್ಜು ನಿಮಗೆಲ್ಲರಿಗೂ ಗೊತ್ತಿರುವಂತೆ ಅನೇಕ (ಜೀವವನ್ನೇ ಮೊಟಕುಗೊಳಿಸುವಂತಹ) ಕಾಯಿಲೆಗಳಿಗೆ ಹೆದ್ದಾರಿ. ಮದುಮೇಹ, ಹೃದಯ ಸಂಬಂದೀ ಕಾಯಿಲೆಗಳು, ಮೂಳೆ ಸವೆಯುವಿಕೆ, ಗಂಟು ನೋವು, ಸೊಂಟ ನೋವು, ಋತುಚಕ್ರದಲ್ಲಿ ಏರುಪೇರು- ಒಂದೇ ಎರಡೇ???. ಓದುತ್ತಾ ಓದುತ್ತಾ ಒಮ್ಮೆ ಸೊಂಟದ ಮೇಲೆ ಕೈ ಆಡಿಸಿಕೊಂಡು (ಟೈರ್ ತರ ಬೊಜ್ಜು ಹೆಬ್ಬೆರಳು ಹಾಗು ಉಳಿದ ಬೆರಳುಗಳ ಮದ್ಯ ಸಿಕ್ಕರೆ) ಗಾಬರಿಯಾಗಬೇಡಿ. ಎಲ್ಲವಕ್ಕೂ ಒಂದು ಪರಿಹಾರವಿದೆ. ಆ ಪರಿಹಾರವೇ ಬೊಜ್ಜು ಕರಗಿಸುವ ತಾಯತ!!!! ಅದರ ಬಗ್ಗೆ ನನಗೆ ಮಾಹಿತಿಯಿದ್ದು (ನಿಮ್ಮಲ್ಲಿ ಕೆಲವರಿಗಾದರೂ ಉಪಯೋಗವಾಗಲೆಂಬ ಪರೋಪಕಾರ ಬುದ್ದಿಯಿಂದ) ಅದನ್ನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ!!!!
ನಂತರ!!!!
        ಹೌದು.ನಿಜ. ಅಂತದ್ದೊಂದು ತಾಯತವಿರುದು ನಂಬುವುದು ಕಷ್ಟವಾದರೂ ಇರುವುದು ನಿಜ. ನೀವೂ ಅಂತದ್ದೊಂದು ತಾಯತ ಕಟ್ಟಿಕೊಂಡರೆ ನಿಮ್ಮ ಬೊಜ್ಜೂ ದಿನೇದಿನೇ ಕರಗಿ ಸ್ಮಾರ್ಟ್ ಆಗುವುದು ನಿಮ್ಮ ಗಮನಕ್ಕೆ ಬಂದೇ ಬರುತ್ತದೆ. ಇನ್ನೇಕೆ ತಡ?. ಆದರೆ ಒಂದು ವಿಚಾರ. ಹೇಗೆ ಗಣಪತಿ ವ್ರತ ಮಾಡುತ್ತೇನೆಂದು ಹೇಳಿ ಕಾಟಾಚಾರಕ್ಕೆ ನಾಲ್ಕು ಹೂ ಏರಿಸಿದರೆ ಆ ವ್ರತದ ಫಲ ದೊರಕದೆ ಮಡಿಯಿಂದ ಒಂದು ನಿರ್ದಿಷ್ಟ ಕ್ರಮದಲ್ಲಿ ವ್ರತ ಮಾಡಿದಾಗ ಮಾತ್ರ ಅದರ ಫಲ ದೊರಕುತ್ತದೋ ಹಾಗೆಯೇ-ಹೇಗೆ ಸತ್ಯನಾರಾಯಣ ಕಥೆ ಮಾಡುತ್ತೇನೆಂದು ಹೇಳಿ ಒಟ್ರಾಶಿ ಮಾಡಿದರೆ ಅದರ ಫಲ ದೊರಕದೆ ಮಡಿಯಿಂದ ಕ್ರಮವರಿತು ಮಾಡಿದರೆ ಮಾತ್ರ ಸತ್ಫಲ (!!??) ದೊರೆಯುತ್ತದೋ ಹಾಗೆಯೇ-ಹೇಗೆ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡುತ್ತೇನೆಂದು ಹೇಳಿ ನಿಯಮ ನಿಷ್ಠೆಯಿಂದ ವ್ರತ ಮಾಡದೆ ಹೋದರೆ ಅಲ್ಲಿ ಜ್ಯೋತಿಯೂ ಕಾಣದೆ ತೊಂದರೆಗಳುಂಟಾಗುತ್ತವೋ ಹಾಗೆಯೇ-ಈ ತಾಯತ ಕಟ್ಟಿಕೊಂಡರೂ ಫಲ ಸಿದ್ದಿಯಾಗಬೇಕಾದರೆ (ಅಂದರೆ ಬೊಜ್ಜುಕರಗಿ ದಪ್ಪ ಕಡಿಮೆಯಾಗಬೇಕಾದರೆ) ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು!!! ಹಾಗಾದರೆ ಮಾತ್ರ ಫಲಸಿದ್ದಿ. ತಲೆಕೆಡಿಸಿಕೊಳ್ಳಬೇಡಿ. ತುಂಬಾ ಸುಲಭದ ನಿಯಮಗಳನ್ನು (ಹೆಚ್ಚೇನಿಲ್ಲ) ಪಾಲಿಸಿದರಾಯಿತಷ್ಟೆ. ಕಡಿಮೆ ಬೊಜ್ಜಿನ ಸ್ಮಾರ್ಟ್ ಶರೀರ ನಿಮ್ಮದಾಗುತ್ತದೆ!!! ತಾಯತ ಕಟ್ಟಿಕೊಂಡು ಪಾಲಿಸಬೇಕಾದ ಆ ನಿಯಮಾವಳಿಗಳನ್ನ ಅತಿ ಮುಖ್ಯವಾದವುಗಳು ಮೊದಲು ಮೊದಲು-ಕಡಿಮೆ ಕಡಿಮೆ ಮುಖ್ಯವಾದದ್ದು ಅನಂತರ ಅನಂತರ-ಈ ಕ್ರಮದಲ್ಲಿ ಕೆಳಗೆ ಬರೆದಿದ್ದೇನೆ.
     ೧) ರಾತ್ರಿ ಮಲಗುವಾಗ ಬೆಳಿಗ್ಗೆ ೫:೫೦ಕ್ಕೆ ಅಲರಾಂ ಇಡುವುದು. ಮೊಬೈಲ್ ನಲ್ಲಾದರೆ ಒಮ್ಮೆ ಮಾಡಿದರೆ ಸಾಕು. (ಪ್ರತಿ ದಿನ ಆ ಸಮಯಕ್ಕೇ ಎಬ್ಬಿಸುತ್ತೆ). ನಾನು ಹೇಳಲಿಲ್ವಾ. ಎಷ್ಟೊಂದು ಸುಲಭದ ನಿಯಮಗಳು!!!
     ೨) ಅಲರಾಂ ಹೊಡೆದಕೂಡಲೇ ಎದ್ದು ಪ್ರಾತಃ ವಿದಿಗಳನ್ನು ಮುಗಿಸಿ ೬:೦೫ ರಿಂದ ೬:೪೫ ರವರೆಗೆ-ಮೊದಲು ಸ್ವಲ್ಪ ಹೊತ್ತು ಮೆಲು ಓಟ (ಜಾಗಿಂಗ್)-ಅನಂತರ ವೇಗದ ನಡಿಗೆ ಮಾಡಲೇಬೇಕು. ಮೊದಲು ಹದಿನೈದು ದಿನ ಐದು ನಿಮಿಷ ಜಾಗಿಂಗ್ ಮೋವತ್ತೈದು ನಿಮಿಷ ವೇಗದ ನಡಿಗೆ. ನಂತರದ ೧೫ ದಿನ ೧೦ ನಿಮಿಷ ಜಾಗಿಂಗ್ ಹಾಗು ೩೦ ನಿಮಿಷ ನಡಿಗೆ. ಹೀಗೆ ಹದಿನೈದು ಹದಿನೈದು ದಿನಕ್ಕೊಮ್ಮೆ ಜಾಗಿಂಗ್ ಸಮಯ ಹೆಚ್ಚಿಸಿ ಕೊನೆಗೆ ಪ್ರತಿದಿನ ೧೫ ನಿಮಿಷ ಜಾಗಿಂಗ್ ಹಾಗು ೨೫ ನಿಮಿಷ ವೇಗದ ನಡಿಗೆ ಮಾಡಲೇಬೇಕು. (ಅನುಕೂಲಕ್ಕೆ ತಕ್ಕಂತೆ (ಹಾಗೂ ಕಾಲಕ್ಕೆ ತಕ್ಕಂತೆ) ಶುರುಮಾಡುವ ಸಮಯವನ್ನು ಹಿಂದೊತ್ತಬಹುದು. ಆದರೆ ಮುಂದೂಡುವಂತಿಲ್ಲ!!!) 
ಮೊದಲು
    ೩) ಬೆಣ್ಣೆ/ತುಪ್ಪ ವಾರಕ್ಕೆ ಮೂರುಬಾರಿಗಿಂತ ಹೆಚ್ಚು ಉಪಯೋಗಿಸಬಾರದು.
    ೪) ಐಸ್ಕ್ರೀಂ ವಾರಕ್ಕೆ ನಾಕುಬಾರಿಗಿಂತ ಹೆಚ್ಚು ತಿನ್ನಬಾರದು.
    ೫) ಸಿಹಿ ಪದಾರ್ತ, ಕುರ್ಕುರೆ ತರ ತಿಂಡಿಗಳು, ಪಾನಿಪುರಿ ಇತ್ಯಾದಿಗಳನ್ನು ತಿನ್ನಬಹುದು. ಆದರೆ ದಿನಕ್ಕೊಮ್ಮೆ ಮಾತ್ರ. (ಹೆಚ್ಚಿಗೆ ಉಪಯೋಗಿಸಿದರೆ ತಾಯತದಿಂದ ನಿರೀಕ್ಷಿತ ಫಲ ದೊರೆಯುವುದಿಲ್ಲ)
    ೬) ಎಣ್ಣೆ-ಉಪಯೋಗಿಸದಿದ್ದರೆ ತಾಯತದ ಫಲ ಬೇಗ ಸಿಗುತ್ತದೆ. ೧೫ ದಿನಕ್ಕೊಮ್ಮೆ ಅಲ್ಪಸ್ವಲ್ಪ ಹಾಕಿದರೂ ಓಕೆ. 
    ೭) ಬತ್ತಿ-ಊಹೂಂ. ಎಂದೆಂದೂ ಬೇಡ. ಬತ್ತಿ ಎಳೆದರೆ ನಿಷ್ಫಲ ಗ್ಯಾರಂಟಿ!!!
           ನೋಡಿ. ತಾಯತ ಕಟ್ಟಿಕೊಂಡು ನಿರೀಕ್ಷಿತ ಫಲ ದೊರಕಲು ಮಾಡಲೇಬೇಕಾದ ನಿಯಮಾವಳಿಗಳು ಎಷ್ಟೊಂದು ಸುಲಭವಿದೆಯಲ್ಲವಾ?? ಅಯ್ಯಪ್ಪಮಾಲೆ ಹಾಕಿದವರು ಮಾಡಲೇಬೇಕಾದ-ಅತಿ ಮುಂಚೆ ಹಾಗೂ ರಾತ್ರಿ ಚಳೀಲಿ ತಣ್ಣೀರ್ ಸ್ನಾನ-ಅಂತಹ ಕಷ್ಟ ನಿಯಮಾಚರಣೆಗಳಿಲ್ಲ. ಬೇರೆ ವ್ರತಾಚರಣೆಗಳಿಗೆ ಹೋಲಿಸಿದರೆ ನನ್ನ ಬಳಿಯಿರುವ ಬೊಜ್ಜು ಕರಗಿಸುವ ತಾಯತ ಕಟ್ಟಿಕೊಂಡು ಪಾಲಿಸಬೇಕಾದ ನಿಯಮಗಳು ನಿಜಕ್ಕೂ ಸುಲಭ ಹಾಗು ಸರಳ. ಜೋಬಿಗೆ ಕತ್ತರಿಹಾಕುವ ಯಾವ ಸಲಹೆ-ಸೂಚನೆಗಳೂ ಇಲ್ಲ. ಹಾಗೆ ಮಾಡಬೇಡಿ-ಹೀಗೆ ಮಾಡಬೇಡಿ, ಅದು ಮುಟ್ಟಬೇಡಿ-ಇದು ತಿನ್ನಬೇಡಿ-ಎಂಬ ದೊಡ್ಡ ಪಟ್ಟಿ ಇಲ್ಲ ಅಲ್ವಾ? ದೇವರ ದಯೆಯಿಂದ ಅಂತಹ ತಾಯತ ನನಗೆ ಲಭಿಸಿದೆ!!!
          ಇಷ್ಟು ಓದುತ್ತಿರುವಂತೆ ನಿಮ್ಮ ಮನದಲ್ಲಿ (ಕೆಲವರಿಗಾದರೂ) ಮೂಡುತ್ತಿರುವ ಭಾವನೆಗಳನ್ನು ಇಲ್ಲಿ ಕುಳಿತೇ ನಾನು ಅರ್ಥಮಾಡಿಕೊಳ್ಳಬಲ್ಲೆ. ಅಂತಹ ತಾಯತ ಇರುವುದು ಹೌದೇ? (ಉತ್ತರ:ಹೌದು), ಇರುವುದು ಹೌದಾದರೆ ನಿಮ್ಮಲ್ಲಿ ಇರುವುದು ಹೌದೇ?? (ಇದಕ್ಕೂ ಉತ್ತರ : ಹೌದೌದು!!!). ನಿಮ್ಮಲ್ಲಿ ಇರುವುದೇ ಹೌದಾದರೆ ನಿಮ್ಮ ಸಂಪರ್ಕ ಮಾಹಿತಿಗಳು (ಮೊಬೈಲ್ ನಂಬರ್, ಮೈಲ್ ಐ.ಡಿ) ಎಲ್ಲಿ???-ಈ ಎಲ್ಲಾ ಕುತೂಹಲಕ್ಕೆ ಇಗೋ ಇಲ್ಲಿದೆ ಮಾಹಿತಿ- ಆ ಸಂಪರ್ಕಮಾಹಿತಿಗಳೆಲ್ಲ ನಿಮಗೆ ಅಗತ್ಯವಿಲ್ಲ. ಫ್ಯಾನ್ಸಿ ಐಟಂ ಅಥವಾ ಕುಂಕುಮ ಎಲ್ಲ ಸಿಗುವ ಯಾವುದಾದರೂ ಅಂಗಡಿಗೆ ಹೋಗಿ ಎರಡು ರುಪಾಯಿಗೋ ಐದು ರುಪಾಯಿಗೋ ಸಿಗುವ ಕಾಶಿದಾರವೊಂದನ್ನು ತನ್ನಿ.ತೊಳೆದು ಇಷ್ಟದೇವರ ಮುಂದಿಟ್ಟು (ನನ್ನ ಗಮನಕ್ಕೆ ಬರಲೆಂದು) ಈ ಲೇಖನದ ಕೊನೆಯಲ್ಲಿ ಕಾಮೆಂಟ್ ನಲ್ಲಿ ಬರೆಯಿರಿ/ಫೇಸ್ ಬುಕ್ ನನ್ನ ವಾಲ್ ನಲ್ಲಿ ಬರೆಯಿರಿ/ಆರ್ಕುಟ್ ನಲ್ಲಿ ಸ್ಕ್ರಾಪ್ ಮಾಡಿರಿ. ೨೪ ಘಂಟೆಗಳಲ್ಲಿ ಆ ತಾಯತಕ್ಕೆ ಶಕ್ತಿಯನ್ನು ಇಲ್ಲಿಂದಲೇ ಆವಾಹನೆ ಮಾಡುತ್ತೇನೆ!!!!! ಅನಂತರ ಕಟ್ಟಿಕೊಂಡು ನಿಯಮ ಪಾಲಿಸಿ. (ಹೊರಗಡೆ ಕೆಲಸದ ಸಮಯದಲ್ಲಿ ಕಟ್ಟಿಕೊಂಡಿರಲು ಕಿರಿಕಿರಿಯಾದರೆ ಬೆಳಿಗ್ಗೆ ಆರರಿಂದ ಎಂಟರವರೆಗೆ ಕಟ್ಟಿಕೊಂಡರೆ ಸಾಕು). ಆರು ತಿಂಗಳಲ್ಲೇ ನಿಮ್ಮ ಬೊಜ್ಜು ಸಾಕಷ್ಟು ಕರಗಿ ನೀವು ತೆಳ್ಳಗಾಗುವುದರಲ್ಲಿ ಅನುಮಾನವೇ ಇಲ್ಲ!!! ಈ ತಾಯತದ ಇನ್ನೊಂದು ಮಹಿಮೆಯೆಂದರೆ ಇದು ನಿಮ್ಮನ್ನು ದಿನವಿಡೀ ಉಲ್ಲಸಿತರಾಗಿಟ್ಟಿರುತ್ತದೆ!!
        ಆರು ತಿಂಗಳಲ್ಲಿ ಬೊಜ್ಜು ಕರಗದಿದ್ದರೆ??-ಇದಲ್ಲವೇ ನಿಮ್ಮ ಪ್ರಶ್ನೆ? ಆರು ತಿಂಗಳು ತಾಯತ ಕಟ್ಟಿಕೊಂಡರೂ ಬೊಜ್ಜು ಸ್ವಲ್ಪವೂ ಕರಗದಿದ್ದರೆ ನಿಯಮಾಚರಣೆಗಳಲ್ಲಿ ಏನೋ ಲೋಪವಾಗಿದೆಯೆಂದೇ ಅರ್ಥ. ನಿಯಮಾಚರಣೆಗಳನ್ನು ನೂರಕ್ಕೆ ನೂರು ಪಾಲಿಸಿದರೂ ಬೊಜ್ಜು ಸ್ವಲ್ಪವೂ ಕರಗದಿದ್ದರೆ (ಈ ರೀತಿ ಸಲಹೆಕೊಟ್ಟಿದ್ದಕ್ಕೆ ಪರಿಹಾರವಾಗಿ) ನಿಮ್ಮ ದುಡ್ಡನ್ನು ನಾನೇ ವಾಪಸ್ ಕೊಡುತ್ತೇನೆ!!! ಮುಂದಿನ ಬಾರಿ ದೇವರಿಗೆ ಕಾಣಿಕೆಹಾಕುವಾಗ ಐದು ರೂಪಾಯಿ ಕಡಿಮೆ ಹಾಕಿ ಹಾಗೂ (ಮೇಲೆ ತಿಳಿಸಿದ ಕ್ರಮದಲ್ಲಿ-ಕಾಮೆಂಟ್/ವಾಲ್/ಸ್ಕ್ರಾಪ್) ನನ್ನ ಗಮನಕ್ಕೆ ತನ್ನಿ. ಇಲ್ಲಿಂದಲೇ ಐದು ರೂಪಾಯಿಯನ್ನು ದೇವರಿಗೆ (೨೪ ಘಂಟೆಯಲ್ಲಿ) ಜಮಾ ಮಾಡುತ್ತೇನೆ!!!!
(ಅತಿ ಮುಖ್ಯ ಸೂಚನೆ : ಎರಡನೇ ನಿಯಮ ಆಚರಣೆ ಮಾಡುವಾಗ ಎದೆ ಅಥವಾ ಹೊಟ್ಟೆಯ ಮೇಲ್ಬಾಗದಲ್ಲಿ ನೋವು ಬಂದರೆ ಕೂಡಲೇ ಹೃದಯತಜ್ಞರ ಸಲಹೆ ಪಡೆದು ಇ.ಸಿ.ಜಿ ಹಾಗೂ ಟಿ.ಎಂ.ಟಿ. ಮಾಡಿಸಿಕೊಳ್ಳಲೇಬೇಕು.)