Tuesday, June 1, 2010

“ಅಡಿಕೆ ಹಳದಿಎಲೆ ರೋಗ” ನೀವು ಸಿದ್ದರಾಗಿದ್ದೀರಾ?


                 ಬ್ಲಾಗ್ ಪ್ರಪಂಚದಲ್ಲಿ ಅನೇಕ ಜನ ಅಡಿಕೆ ಬೆಳೆಗಾರರಿದ್ದಾರೆ. ಅವರಿಗಾಗಿ ಈ ಲೇಖನ!!.(ಆಸಕ್ತರೂ ಓದಬಹುದು)

                        ಆ ಒಂದು ವರ್ಷವನ್ನು ಜ್ಞಾಪಿಸಿಕೊಳ್ಳಿ. ತುಂಬಾ ಮಳೆಬಂದ ವರ್ಷ ಅದು. ಎಡೆಬಿಡದ ಮಳೆಯಿಂದಾಗಿ ಆ ವರ್ಷ ಅಡಿಕೆ ಕೊನೆಗಳಿಗೆ (ಶಿಲೀಂದ್ರ ನಾಶಕ) ಔಷದಿ (ಕಾಪರ್ ಸಲ್ಫೇಟ್) ಸಮಯಕ್ಕೆ ಸರಿಯಾಗಿ ಸಿಂಪಡಿಸಲು ಆಗಿರಲೇ ಇಲ್ಲ. ಪರಿಣಾಮ? ಎಳೆ ಕಾಯಿಗಳು ಉದುರಿ ಬಿದ್ದಿದ್ದವು. ಹೆಚ್ಚಿನ ಪಸಲು ನೆಲ ಸೇರಿತ್ತು!!! ಅಡಿಕೆಯ ಆಆ ವರ್ಷದ ಪಸಲನ್ನೇ ನಂಬಿ ಜೀವನ ನಡೆಸುವ ಬೆಳೆಗಾರನ ಕಥೆ ಹೇಗಾಗಬೇಡ? ಆ ಒಂದು ವರ್ಷ ಸಂಸಾರ ತೂಗಿಸುವುದು ಎಷ್ಟು ಕಷ್ಟ. ಇನ್ನು ಪ್ರತೀ ವರ್ಷ ಅಡಿಕೆ ಪಸಲು ಇದೇ ರೀತಿ ಕೈಕೊಡುತ್ತಿದ್ದರೆ ಅಲ್ಲೆಲ್ಲಾ ಜೀವನ ಹೇಗಿರಬಹುದು?

                        ಬನ್ನಿ. ಸಾಂಪ್ರದಾಯಕವಾಗಿ ಅಡಿಕೆ ಬೆಳೆ ಬೆಳೆಯುವ ಪ್ರದೇಶವಾದ ಕೊಪ್ಪ-ಶೃಂಗೇರಿ ತಾಲೂಕಿಗೆ ಬನ್ನಿ. ಸಾವಿರಾರು ಸಂಸಾರಗಳಲ್ಲಿ ಅಡಿಕೆ ಪಸಲು ಅದೆಷ್ಟೋ ವರ್ಷಗಳಿಂದ ಸತತವಾಗಿ ನೆಲಕಚ್ಚುತ್ತಾ ಬಂದಿದೆ. ಅದೆಷ್ಟೋ ಕುಟುಂಬಗಳ ಕೆಂಪಡಿಕೆ ಉತ್ಪಾದನೆ ಎಕರೆಗೆ ೪೦-೫೦ ಕೆ.ಜಿ !!!! ಯಾಕೆ ಹೀಗೆ? ಏನು ಕಾರಣ? ಕಾರಣ ಅಡಿಕೆಯ ಮಾರಣಾಂತಕಾರಿ ರೋಗ. "ಹಳದಿ ಎಲೆ ರೋಗ". ಸಾವಿರಾರು ಎಕರೆ ಅಡಿಕೆತೋಟವನ್ನು ನುಂಗಿ ನೀರುಕುಡಿದು ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಈ ರೋಗದ ಬಗ್ಗೆ ತಿಳಿದುಕೊಳ್ಳಲು ಕುತೂಹಲವೇ? ಮುಂದೆ ಓದಿ.
               ಹೌದು. ಅಡಿಕೆಗೆ ಮಾರಣಾಂತಿಕ ಈ ರೋಗ ಕೊಪ್ಪಾ ತಾಲೂಕಿನ ದಕ್ಷಿಣ ಭಾಗದ ಕೆಲವು ಹಳ್ಳಿಗಳಲ್ಲಿ ೪೦-೫೦ ವರ್ಷದ ಕೆಳಗೆ ಅಲ್ಲಲ್ಲಿ ಕಾಣಿಸಿಗೊಂಡಿತು. ನಿದಾನವಾಗಿ ಹರಡುತ್ತಿದ್ದ ಈ ರೋಗ ಈಗ ಎಂಟತ್ತು ವರ್ಷಗಳಿಂದ ಆಶ್ಚರ್ಯಕರ ವೇಗದಲ್ಲಿ ಹರಡುತ್ತಿದೆ. ಈ ರೋಗದ ಮೊದಲ ಸೂಚನೆ ಪಸಲು ಹೆಚ್ಚಾಗುವುದು!!! ಬುಡಕ್ಕೆ ಏನೂ ಹಾಕದಿದ್ದರೂ ಬಲವಾದ ಕೊನೆಗಳೇ ಇರುತ್ತವೆ. ಅನಂತರ ಪಸಲು ಕಡಿಮೆಯಾಗಲಾರಂಬಿಸುತ್ತದೆ. ಅಡಿಕೆ ಎಲೆ (ತುದಿಯಿಂದ) ಹಳದಿಯಾಗಲಾರಂಬಿಸುತ್ತದೆ. (ಹೊಸದಾಗಿ ಬರುವ ಎಲೆಗಳು ಹಸಿರಾಗೇ ಇರುತ್ತವೆ. ಬೇರುಹುಳ ತೊಂದರೆಯಲ್ಲಿ ಸುಳಿ ಎಲೆಗಳು ಹಳದಿಯಾಗಿರುತ್ತದೆ). ಅಡಿಕೆ ಕಾಯಿಗಳ ಗಾತ್ರ ತುಂಬಾ ಚಿಕ್ಕದಾಗುತ್ತದೆ.(ಕೈ ಕಿರು ಬೆರಳಿನಷ್ಟು ದಪ್ಪ!!) ಸುಲಿದರೆ ಕೆಳ ಅರ್ದ ಕಪ್ಪು ಮೇಲರ್ದ ಮಾಮೂಲಿ ಬಣ್ಣವಿರುವ ಮೆದು ಅಡಿಕೆ. ಬೇಯಿಸಿ ಹರಡಿದರೆ ಬಿಸಲಿಗೆ ಇನ್ನೂ ಚಿಕ್ಕದಾಗಿ ಚಿರುಟಿಹೋಗುತ್ತದೆ!! ಮಳೆಗಾಲದ ಕೊನೆಯಲ್ಲಿ ಹಾಗೂ ನೆಲ ಜೌಗು ಇರುವ ಪ್ರದೇಶದಲ್ಲಿ ಎಲೆ ಹೆಚ್ಚು ಹಳದಿಯಾಗಿರುತ್ತದೆ. ಬೇಸಿಗೆಯಲ್ಲಿ ಅಷ್ಟು ಹಳದಿ ಕಾಣಿಸುವುದಿಲ್ಲ. ಮಾಮೂಲಿನಂತೆ ಹಸಿರಾಗೇ ಕಾಣಿಸುತ್ತದೆ. (ನನ್ನ ಪರಿಚಯಸ್ತರ ತೋಟವೊಂದನ್ನ ಬೇಸಿಗೆಯಲ್ಲಿ ನೋಡಿ ದೂರದ ಪಾರ್ಟಿ ಕೊಂಡಿತು!! ಇವರಾಗೇ ರೋಗದ ವಿಷಯ ಹೇಳಲು ಹೋಗಲಿಲ್ಲ)

              ಸರಿ. ಯಾವುದರಿಂದ ಈ ರೋಗ ಬರುತ್ತದೆ? ಹೇಗೆ ಹರಡುತ್ತದೆ? ಸಂಶೋದನೆಗಳೆನಾದರು ಆಗಿದೆಯೇ? ಇನ್ನೂ ಪರಿಹಾರ ಸಿಕ್ಕಿಲ್ಲವೇ? ಸಂಶೋದನೆ ಎಂದರೆ ರೈತರು ಅಸಡ್ಡೆ ಮುಖ ಮಾಡುತ್ತಾರೆ. ಮೇಲಿಂದ ಮೇಲೆ ಅನೇಕ ಸಂಶೋದನೆ ನಡೆದಿದ್ದರೂ ರೋಗದ ಕಾರಣ ಹಾಗೂ ಹರಡುವಿಕೆಯ ಸ್ಪಸ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಫೈಟೋಪ್ಲಾಸ್ಮ,ಸೂಕ್ಷ್ಮ ಪೋಷಕಾಂಶಗಳ ಕೊರತೆ, ಕೆಡಾಂಗ್ - ಕೆಡಾಂಗ್ ರೋಗ – ಹೀಗೆ ಅನೇಕ ಸಿದ್ದಾಂತಗಳಲ್ಲಿ ವಿಜ್ಞಾನಿಗಳು ಮುಳುಗೇಳುತ್ತಿದ್ದಾರೆ!! (ಇಲ್ಲೊಂದು ಸ್ವಾರಸ್ಯಕರ ವಿಷಯ ಹೇಳಲು ಬಯಸುತ್ತೇನೆ. ಹಳದಿ ಎಲೆ ರೋಗಕ್ಕೆ ಸಂಬಂದಪಟ್ಟ ಸೆಮಿನಾರ್ ಒಂದಕ್ಕೆ ಬ್ರಹ್ಮಾವರದಿಂದ ಒಬ್ಬರು ವಿಜ್ಞಾನಿ ಬಂದಿದ್ದರು. ಅಡಿಕೆ ಕೊನೆಗಳಿಗೆ ಸಿಂಪಡಿಸುವ ಕಾಪರ್ ಸಲ್ಫೇಟ್ ಮಣ್ಣಿಗೆ ಸೇರುವುದೇ ರೋಗಕ್ಕೆ ಕಾರಣವೆಂದು ಪ್ರತಿಪಾದಿಸಿದರು!!! ನೀವು ಒಂದಾದರೂ ಗಿಡದ ಬುಡಕ್ಕೆ ಅದನ್ನು ಹಾಕಿ ಬದಲಾವಣೆ ಗಮನಿಸಿ ಹೇಳುತ್ತಿದ್ದೀರಾ ಎಂದು ನಾನು ಕೇಳಿದೆ. ಅವರಿಗೆ ಸಿಟ್ಟೇ ಬಂತು. ಹೆಚ್ಚಿನ ವಿವರಗಳಿಗೆ ಆ ಬಗ್ಗೆ ಅವರು ಬರೆದ ಪುಸ್ತಕವನ್ನು ಎಲ್ಲರೂ ಓದುವಂತೆ ವೇದಿಕೆಮೇಲಿಂದ ಸಲಹೆ ಮಾಡಿದರು. ೨೦ ರೂಪಾಯಿಯ ಆ ಚಿಕ್ಕ ಪುಸ್ತಕ ಅನೇಕ ಪ್ರತಿ ಮಾರಾಟ ಕಂಡಿತು. ಎಷ್ಟು ಬುದ್ದಿವಂತರು ನಮ್ಮ ವಿಜ್ಞಾನಿಗಳು.ರೋಗಕ್ಕೆ ಅವರು ಹೇಳಿದ ಕಾರಣವೇ ಇರಬಹುದು. ಆದರೆ ಪ್ರಯೋಗಗಳನ್ನು ಮಾಡದೆ ನಮ್ಮಂತೆ ಹೇಳುವುದು ಸರಿಯೇ?)

                  ತೋಟಗಾರಿಕ ಬೆಳೆಗಳ ಬಗ್ಗೆ ಸಂಶೋಧನೆಗೆಂದೆ ಸರ್ಕಾರಿ ಸಂಸ್ಥೆ CPCRI ಕಾಸರಗೋಡಿನಲ್ಲಿದೆ. (ಇದರ ಶಾಖೆ ಕರ್ನಾಟಕದಲ್ಲಿ ವಿಟ್ಲದಲ್ಲಿದೆ). ತೋಟಗಾರಿಕಾ ಬೆಳೆಗಳಿಗೆ ತಗಲುವ ರೋಗಗಳ ಸಂಶೋದನೆಗೆ ಸರ್ಕಾರದಿಂದ ನಿಯುಕ್ತರಾದ ವಿಜ್ಞಾನಿಗಳ ದಂಡೇ ಅಲ್ಲಿದೆ. ಅವರೇನು ಹೇಳುತ್ತಾರೆ ಕೇಳೋಣ. ರೋಗದ ಕಾರಣದ ಬಗ್ಗೆ ಅವರಲ್ಲಿ ಅಸ್ಪಷ್ಟತೆಯಿಲ್ಲ. CPCRI ಪ್ರಕಾರ ಹಳದಿ ರೋಗಕ್ಕೆ ಕಾರಣ 'ಫೈಟೋಪ್ಲಾಸ್ಮಾ' ಎಂಬ ಅತಿ ಸೂಕ್ಷ್ಮ ಜೀವಿ!!! ಅವು ಮರದಿಂದ ಮರಕ್ಕೆ ಹರಡುವುದು ಒಂದು ಜಾತಿಯ ಮಿಡತೆಯಿಂದ. (ಈ ಸಂಶೋದಯ ಬಗ್ಗೆ ಅವರೊಂದು ಪುಸ್ತಕ ಪ್ರಕಟಿಸಿದ್ದಾರೆ) ಈ ರೋಗಕ್ಕೆ ಚಿಕಿತ್ಸೆಯೇ ಇಲ್ಲ. ಆದರೆ ಸಕಾರಣದೊಂದಿಗೆ ಈ ಸಂಶೋದನೆಯ ಖಚಿತತೆ ಬಗ್ಗೆ ಅನುಮಾನ ವ್ಯಕ್ತಪಡಿಸುವ ಬೆಳೆಗಾರರು ಮತ್ತು ವಿಜ್ಞಾನಿಗಳು ಅನೇಕಜನ ಇದ್ದಾರೆ!!

                     ಫೈಟೋಪ್ಲಾಸ್ಮದಿಂದ ಪಾಮ್ ಜಾತಿಯ ಮರಗಳಿಗೆ ಹಳದಿ ಎಲೆ ರೋಗ ಬರುವುದು ಹೊಸ ವಿಷಯವೇನಲ್ಲ. ಅಮೇರಿಕಾ ಖಂಡಗಳಲ್ಲಿ ಸಾವಿರಾರು ಎಕರೆ ತೆಂಗಿನ ತೋಟ ಹಳದಿ ರೋಗದಿಂದ ನೆಲಕಚ್ಚಿದೆ.ಇದಕ್ಕೆ ಇಲ್ಲಿಯವರೆಗೂ ಚಿಕಿತ್ಸೆ ಕಂಡುಹಿಡಿದಿಲ್ಲ ಎಂಬುದೂ ಸತ್ಯ. ಆದರೆ ಮಾಲಿಕ್ಯುಲರ್ ಬಯಾಲಜಿ ಮಟ್ಟದ ಸಂಶೋದನೆಗಳಿಂದ ( PCR ವಿದಾನ, DNA ಮೂಲಕ ) ಫೈಟೋಪ್ಲಾಸ್ಮ ಇರುವಿಕೆಯನ್ನು ಪತ್ತೆಹಚ್ಚುತ್ತಾರೆ. (ಈ ವಿಷಯದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಒಂದು ಯಾಹೂ ಗ್ರೂಪ್ (CICLY-Centre for Information on Lethal Yellowing)ಇದೆ. ಆಸಕ್ತರು ಸೇರಿ ಮಾಹಿತಿ ಹಂಚಿಕೊಳ್ಳಬಹುದು).ಈ PCR ಟೆಕ್ನಿಕ್ ಉಪಯೋಗಿಸಿ ರೋಗದ ಕಾರಣ ಫೈಟೋಪ್ಲಾಸ್ಮ ಎಂದು CPCRI ಸಂಶೋದನೆ ಮಾಡಿದಂತಿಲ್ಲ. (ಹೆಚ್ಚಿನ ಮಾಹಿತಿಗೆ CICLYಯ ಭಾರತಕ್ಕೆ ಸಂಬಂದಿಸಿದ, ಕೊನೆಯ ಬಾರಿ ೨೦೦೫ ರಲ್ಲಿ ಅಪ್ ಡೆಟ್ ಆದ ಈ ಜಾಲ ಪುಟ ನೋಡಿ). ಆದರೇನಂತೆ, ಈ ರೋಗಕ್ಕೆ ತಮ್ಮ ತೋಟವನ್ನು ಕಳೆದುಕೊಂಡ ಬೆಳೆಗಾರರೊಬ್ಬರ ಮಗ ಈ PCR ಟೆಕ್ನಿಕ್ ಉಪಯೋಗಿಸಿ ರೋಗ ಪೀಡಿತ ಅಡಿಕೆ ಸಸ್ಯ(ಭಾಗ)ದ ಸಂಶೋದನೆ ಮಾಡಿದ್ದಾರೆ. ಆದರೆ ಪಲಿತಾಂಶ CPCRI ಹೇಳಿಕೆಗೆ ತದ್ವಿರುದ್ದ!!! ಅವರ ಸಂಶೋದನೆಗಳ ಪ್ರಕಾರ ಈ ರೋಗಕ್ಕೆ CPCRI ಹೇಳುವಂತೆ ಫೈಟೋಪ್ಲಾಸ್ಮ ಕಾರಣವಲ್ಲ!!!!. (ಈ ಸಂಶೋದನೆಯ ಮಾಹಿತಿ ಅಂತರ್ಜಾಲದಲ್ಲಿದ್ದು ಆಸಕ್ತರು ನೋಡಬಹುದು .ಈಗ ಅಮೆರಿಕದಲ್ಲಿರುವ ಶೃಂಗೇರಿ ಮೂಲದ ಇನ್ನೊಬ್ಬ ತಳಿ ಶಾಸ್ತ್ರಜ್ಞ ಡಾ. ರಾಜೇಂದ್ರ ಕೂಡ CPCRI ಸಂಶೋದನೆಯ ವಿದಾನ ಹಾಗೂ ಖಚಿತತೆಯನ್ನು ಅನುಮಾನಿಸುತ್ತಾರೆ).

                ಇನ್ನೊಂದು ತಮಾಷೆಯೆಂದರೆ ಈ ಸಂಶೋದನೆಯ ವಿಷಯಕ್ಕೆ (ಕಳೆದ ವಿಧಾನ ಸಭಾ ಚುನಾವಣೆಯಲ್ಲಿ) ರಾಜಕೀಯ ಬಣ್ಣ ಬಂದಿದ್ದು!! ಹಿಂದೆ ಗೆದ್ದ ಜನಪ್ರತಿನಿಧಿಗಳು ಏನೂ ಮಾಡಿಲ್ಲವೆಂದು ಹೇಳುತ್ತಾ ತಾವು ಅಧಿಕಾರ ಹಿಡಿದರೆ ಶೃಂಗೇರಿಯಲ್ಲಿ ಸಂಶೋದನಾ ಕೇಂದ್ರ ತೆರೆಯುವುದಾಗಿ ಬಿ.ಜೆ.ಪಿ ತುತ್ತೂರಿ ಊದಿತು (ಹೇಳಿದಂತೆ ಆಗುತ್ತಿದೆ). ಆದರೆ ದಳ ಮತ್ತು ಕಾಂಗ್ರೆಸ್ ನಾಯಕರು (ರೋಗಕ್ಕೆ ಪರಿಹಾರ ಇಲ್ಲ ಎಂಬ CPCRI ವಿಜ್ಞಾನಿಗಳ ಮಾತು ನಂಬಿ) ಅದೆಲ್ಲೋ ತೋಟಗಾರಿಕಾ ಮಿಶನ್ ನಲ್ಲಿರುವ ಎಷ್ಟೋ ಸಾವಿರ ಕೋಟಿ ತಂದು ರೋಗ ಬಾದಿತರಿಗೆ ಒಂದೇ ಸಾರ್ತಿ ಪರಿಹಾರವಾಗಿ ಎಕರೆಗೆ ಎರಡೋ ಮೂರೋ ಲಕ್ಷ ಕೊಡುವ ಪತ್ರಿಕಾ ಹೇಳಿಕೆ ಕೊಡಲಾರಂಬಿಸಿದರು!! ತಕ್ಷಣ ಎಚ್ಚೆತ್ತ ಬಿ.ಜೆ.ಪಿ. ಯವರು ಸರ್ವೇ ಮಾಡಿ ಎಕರೆಗೆ ಐದು ಲಕ್ಷ ಕೊಡುವುದಾಗಿ ತೇಲಿಬಿಟ್ಟರು. (ಉದ್ದದ ಕ್ಯೂನಲ್ಲಿ ನಿಂತು ಪಹಣೆ ತಂದು ರೈತರು ತೋಟಗಾರಿಕಾ ಇಲಾಖೆಗೆ ಫಾರಂ ಭರ್ತಿಮಾಡಿ ಕೊಟ್ಟಿದ್ದಾರೆ. ರೋಗವೇ ಬಾರದ ಎಷ್ಟೋ ರೈತರು ತಮ್ಮ ತೋಟದಲ್ಲೂ ರೋಗವಿದೆ ಎಂದು ಹೇಳಿಕೊಂಡಿದ್ದಾರೆ. ಸರ್ವೇ ಮಾಡಿದ ಶಾಸ್ತ್ರವೂ ನಡೆದಿದೆ)

                     ಮತ್ತೂ ಒಂದು ದೊಡ್ಡ ತಮಾಷೆಯೆಂದರೆ, ಈ ರೋಗಕ್ಕೆ ಕಾರಣವೇನೆಂದು ಒಂದಿಷ್ಟು ಜನ ಹೊಸನಗರನೋ ಸಾಗರನೋ ಅಲ್ಲೆಲ್ಲೋ ಹೋಗಿ ಅಲ್ಯಾರಿಂದಲೋ ಅಷ್ಟಮಂಗಲ ಪ್ರಶ್ನೆ ಇಡಿಸಿದ್ದು!!! ಆ ಅಷ್ಟಮಂಗಲ ಪ್ರಶ್ನೆ(ಗೆ) ಹೇಳುವವರ ಪ್ರಕಾರ ಈ ರೋಗಕ್ಕೆ ಕಾರಣ ಶೃಂಗೇರಿ ಶ್ರೀಗಳು ಯಾವುದೋ ಒಂದು ಕಾಲದಲ್ಲಿ ಏನೋ ತಪ್ಪು ಮಾಡಿದ ಭಕ್ತಾದಿಗಳಿಗೆ ಕೊಟ್ಟ ಶಾಪವಂತೆ.(ಶೃಂಗೇರಿ ಮಠ ಇದನ್ನು ಅಲ್ಲಗೆಳೆಯಿತು) ಅದಕ್ಕೆ ಹೋಮ ಹವನ ಮಾಡಿ ಚಿನ್ನದ ಅಡಿಕೆ ಯಾವುದೋ ಎರಡ್ಮೂರು ದೇವರಿಗೆ ಅರ್ಪಿಸಬೇಕಂತೆ.(ಎಲ್ಲಾ ಎಕರೆಗೆ ಇಂತಿಷ್ಟು ಅಂತ ದುಡ್ಡು ಎತ್ತಿ ಅದನ್ನೂ ನೆರವೇರಿಸಿಯಾಯಿತು)

                    ಸರಿ. ಎಕರೆಗೆ ಎಪ್ಪತ್ತೆಂಬತ್ತು ಕೆ.ಜಿ. ಅಡಿಕೆಯಿಂದ ಜನ ಹೇಗೆ ಜಿವನಸಾಗಿಸುತ್ತಾರೆ? ಈ ಅನುಮಾನ ನಿಮಗೆ ಮೂಡಬಹುದು. ರೋಗ ಬಂದ ಜಾಗದಲ್ಲಿ ಕಾಫಿ ಚೆನ್ನಾಗಿ ಆಗುತ್ತದರಿಂದ ಸ್ವಲ್ಪ ಬಚಾವ್. (ಆದರೆ ಕಾಫಿ ಅಡಕೆಗೆ ಸಮವಲ್ಲ. ಕೆಲಸ ಹೆಚ್ಚು;ಆದಾಯ ಕಡಿಮೆ) ಮಕ್ಕಳು ಓದಿ ಬೆಂಗಳೂರಲ್ಲಿ ಕೆಲಸ ಸೇರಿದ್ದಾರೆ. ಸ್ವಲ್ಪ ಕಡಿಮೆ ಓದಿದವರು ಬೆಂಗಳೂರು ಮೊದಲಾದ ಪೇಟೆಗಳನ್ನು ಸೇರಿ ಸ್ವ ಉದ್ಯೋಗ (ಅಡಿಗೆ,ಕ್ಯಾಂಟಿನ್ ಇತ್ಯಾದಿ) ಮಾಡುತ್ತಿದ್ದಾರೆ. ಅಡಿಕೆ ಪಸಲಿನ ಅಂದಾಜಿನಲ್ಲಿ ಸಾಲ ಮಾಡಿಕೊಂಡಿರುವ ಹೊಸತಾಗಿ ರೋಗ ಬಂದಿರುವ ಬೆಳೆಗಾರರಿಗೆ ಮಾತ್ರ ತುಂಬಾ ಕಷ್ಟ. ಕಗ್ಗತ್ತಲಲ್ಲಿ ಬೆಳ್ಳಿಯ ಗೆರೆಯಂತೆ ಕಾಣುವುದು ಕೆಲವು ರೈತರ ಪ್ರಯತ್ನ. ಅಷ್ಟೇನೂ ಓದಿಲ್ಲದ ಶೃಂಗೇರಿಯ ರೈತ ಮಾವಿನಕಾಡು ಬಾಲಕೃಷ್ಣ ಈ ರೋಗದ ಬಗ್ಗೆ ಒಂದಿಷ್ಟು ಪ್ರಯೋಗ ಮಾಡಿದ್ದು ಅವರು ಈ ರೋಗ ಲಘು ಪೋಷಕಾಂಶಗಳ ಕೊರತೆಯಿಂದಲೇ ಬರುವುದೆಂದು ವಿಜ್ಞಾನಿಗಳ ಜೊತೆಗೂ ವಾದ ಮಾಡುತ್ತಾರೆ.

                          ಈಗ ಆಗಬೇಕಾಗಿರುವುದೇನು ಎಂದು ಪ್ರತಿಯೊಬ್ಬ ಅಡಿಕೆ ಬೆಳೆಗಾರ ಯೋಚನೆ ಮಾಡುವುದು ಒಳಿತು. ಇಂದಲ್ಲಾ ನಾಳೆ ಈ ರೋಗ (ಹೀಗೇ ಬಿಟ್ಟರೆ) ಅಡಿಕೆ ಬೆಳೆಯುವ ಪ್ರದೇಶವನ್ನೆಲ್ಲಾ ನಾಶ ಮಾಡುವುದು ಶತಸಿದ್ದ. ಈಗ ಮೊದಲು ಆಗಬೇಕಿರುವುದು ಇದು ಫೈಟೋಪ್ಲಾಸ್ಮಾದಿಂದ ಬರುವ ರೋಗ ಹೌದೋ ಅಲ್ಲವೋ ಎಂಬ ಖಚಿತ ಸಂಶೋದನೆ (ಮಾಲಿಕ್ಯುಲರ್ ಬಯಾಲಜಿ ಮಟ್ಟದಲ್ಲಿ). ಫೈಟೋಪ್ಲಾಸ್ಮದಿಂದಾ ಎಂದಾದರೆ ಅಲ್ಲಿಗೆ ಒಂದು ಅಧ್ಯಾಯ ಮುಗಿದಂತೆ!! ಹೆಚ್ಚಿಗೆ ತಲೆಕೆಡಿಸಿಕೊಳ್ಳದೆ ರೋಗ ನಿರೋದಕ ಶಕ್ತಿ ಹೊಂದಿರುವ ತಳಿ (resistant variety ) ಅಭಿವೃದ್ದಿಪಡಿಸಿ ಹಂಚುವುದು. (ರೋಗ ಬಂದ ಜಾಗದಲ್ಲಿ ಅತೀ ಅಪರೂಪಕ್ಕೆ ಒಂದೊಂದು ಮರಗಳು ಚೆನ್ನಾಗಿಯೇ ಇರುತ್ತವೆ). ಫೈಟೋಪ್ಲಾಸ್ಮ ಅಲ್ಲಾ ಎಂದಾದರೆ ಬೇರೆ ಕಾರಣ ಹುಡುಕುವುದು.

ಈ ಮಾಹಿತಿ ನಿಮಗೆ ಉಪಯೋಗವಾಯಿತೆ? ಅಡಿಕೆ ಹಳದಿ ಎಲೆ ರೋಗದ ಬಗ್ಗೆ ನಿಮ್ಮ ಪ್ರಶ್ನೆಗಳೇನಾದರೂ ಇದ್ದರೆ ಸ್ವಾಗತ.
ಕೆಲವು ಜಾಲ ಕೊಂಡಿಗಳು-
   CPCRI - http://cpcri.nic.in/
   ಹಳದಿ ರೋಗದ ಬಗ್ಗೆ ಯಾಹೂ ಗ್ರೂಪ್ - http://tech.groups.yahoo.com/group/cicly/
   CICLY ಹೋಂ ಪೇಜ್ - http://www.avxl82.dsl.pipex.com/CICLY/main.html
   CICLY ನಲ್ಲಿ ಭಾರತದ ಬಗ್ಗೆ ಇರುವ ಮಾಹಿತಿ - http://www.avxl82.dsl.pipex.com/CICLY/india.html

16 comments:

  1. ತು೦ಬಾ ಉಪಯುಕ್ತ ಮಾಹಿತಿ.
    ಇದನ್ನು ಅಡಿಕೆ ಬೆಳೆಗಾರರು ಓದಿ ಅರಿತುಕೊಳ್ಳಬೇಕಾಗಿದೆ.

    ಹೆಚ್ಚಿನ ಬೆಳೆಗಾರರು ”ಸ್ಥಿತಪ್ರಜ್ನರು”. ಎಲ್ಲರಿಗಾದದ್ದು ನಮಗೂ ಆಗುತ್ತೆ.. ಅನ್ನುವ ಅಲೌಕಿಕ ಜ್ನಾನವನ್ನೇ ನೆಚ್ಚಿಕೊ೦ಡವರಾಗಿದ್ದಕ್ಕೆ ಅವರು ತಲೆ ಬಿಸಿ ಮಾಡಿಕೊಳ್ಳುವುದು ಇನ್ನೂ ಅನುಮಾನ. ಈ ಮಾಹಿತಿಯನ್ನು ಅವಶ್ಯವಾಗಿ ಕೆಲವರಿಗಾದರೂ ನಾನು ತಿಳಿಸಲೇ ಬೇಕಿದೆ....!!!
    ತು೦ಬಾ ತು೦ಬಾ ಥ್ಯಾ೦ಕ್ಸ್.

    ReplyDelete
  2. ee rogakke nammalli ''arishina mundige roga ''ennuttaare.

    ReplyDelete
  3. ಉಪಯುಕ್ತ ಲೇಖನ. ಮಲೆನಾಡಿನವನಾದ ನಾನು ಅಡಿಕೆತೋಟದಿಂದ ಮೇಲೆಬಂದ ಮತ್ತು ನಷ್ಟ ಅನುಭವಿಸಿದ ಜನರನ್ನು ನೋಡಿದ್ದೇನೆ. ನಿಮ್ಮ ಲೇಖನ ಮತ್ತು ಕೊಟ್ಟ linkಗಳು ಬಹಳ ಉಪಯುಕ್ತ

    ReplyDelete
  4. ಒಳ್ಳೆಯ ಮಾಹಿತಿ ತಿಳಿಸಿದ್ದೀರಾ........
    ನಮ್ಮಂತ ಸಣ್ಣ ರೈತರಿಗೆ ಅಡಿಕೆಯೇ ಆದಾಯ ಮೂಲ. ಹೀಗಿರುವಾಗ ಇಂತಹ ರೋಗಗಳು ಬಂದರೆ ಬಲು ಕಷ್ಟ.

    ReplyDelete
  5. ಮಾಚಿಕೊಪ್ಪ ಸರ್
    ತುಂಬಾ ಉಪಯುಕ್ತ ಮಾಹಿತಿಯುಳ್ಳ ಬರಹ
    ಸಂಶೋಧನೆ ಚೆನ್ನಾಗಿದೆ

    ReplyDelete
  6. very good information sir thank you

    ReplyDelete
  7. ಅಡಿಕೆ ಬೆಳೆಗಾರರು ಸಾಮಾನ್ಯವಾಗಿ ಲೋಕದ ದೃಷ್ಟಿಯಲ್ಲಿ 'ಉಳ್ಳವರು'. ಆದರೆ ಆ ಕಷ್ಟವು ಅಡಿಕೆಬೆಳೆಗಾರರಿಗೆ ಮಾತ್ರ ಗೊತ್ತು. ಒಬ್ಬ ಬೆಳೆಗಾರನಾಗಿ ಅಡಿಕೆಗೆ ಹಳದಿ ಎಲೆ ರೋಗದ ಬಗ್ಗೆ ನೀವು ಬೆಳಕುಚಲ್ಲಿದ್ದಿರಾ. ನೀವು ಬರೆದದ್ದು ಸಂಗ್ರಹ ಯೋಗ್ಯ ವಿಷಯ ಎಂದರೆ ಅದು ಖಂಡಿತಾ ಅತಿಶಯೋಕ್ತಿ ಎನಿಸದು.ಹೀಗೆಯೇ ಬರೆಯುತ್ತಿರಿ.

    ReplyDelete
  8. ತುಂಬಾ ಚೆನ್ನಾಗಿದೆ, ಲೇಖನ...

    ReplyDelete
  9. ಧನ್ಯವಾದಗಳು. ಲೇಖನ ತುಂಬಾ ಚನ್ನಾಗಿದೆ. ಒಂದು ರೋಗದ ಸುತ್ತ ಎಷ್ಟೋಂದು ಮಜಲುಗಳು. ತುಂಬಾ ಆಸಕ್ತಿಯಿಂದ ಓದಿದೆ. ನಮ್ಮ ವಿಜ್ಞಾನಿಗಳ ಸಂಶೋಧನೆಯ ದಿಕ್ಕು, ರೈತ ಕಾಳಜಿ, ರಾಜಕಾರಣಿಗಳ ಬುಧ್ಧಿ, .... ಎಷ್ಟೊಂದು ಮುಖಗಳು ಒಂದು ಸಮಸ್ಯೆಗೆ?
    ನಾವು ಅಡಿಕೆ ಕೃಷಿಕರು ಬದಲೀ ಕೃಷಿ ಉತ್ಪನ್ನಗಳ ಬಗ್ಗೆ , ಮೌಲ್ಯ ವರ್ಧನೆಯ ಬಗ್ಗೆ ಯೋಚಿಸದೇ ಇದ್ದರೆ ಮುಂಬರುವ ದಿನಗಳು ಕಷ್ಟ.

    ReplyDelete
  10. This comment has been removed by the author.

    ReplyDelete
  11. Realistic analysis of the problem.You are doing good job.
    But we can not expect much from this bullshit government or elected members simply because they have been elected by useless people like us. Yatha Praja tatha Raja

    ReplyDelete
  12. ಈ ರೋಗ ಲಘು ಪೋಷಕಾಂಶಗಳ ಕೊರತೆಯಿಂದಲೇ ಬರುವುದೆಂದು ನಂಬಿರುವ ಕೃಷಿಕರು ಯಾರಾದರೂ ಇದ್ದರೆ ಅದರ ಪರಿಹಾರಕ್ಕೆ ನಮ್ಮಲ್ಲಿ ಒಂದು ಉತ್ಪನ್ನವಿದೆ. ಆಸಕ್ತರು ಸಂಪರ್ಕಿಸಿದರೆ ನಾವು ಅವರ ಜೊತೆ ಸೇರಿ ಈ ಸಮಸ್ಯೆಯನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲು ಸಿದ್ದರಿದ್ದೇವೆ.ಪ್ರಾಮಾಣಿಕವಾಗಿ ಆಸಕ್ತರು ದಯವಿಟ್ಟು ಸಂಪರ್ಕಿಸಿ.
    ಇಲ್ಲಿ ಒಂದು ಮಾತು ನಾನೂ ತಮ್ಮಂತೇ ಒರ್ವ ಅಡಿಕೆ ಕೃಷಿಕ ಎಂಬುದನ್ನು ಗಮನಿಸಬೇಕು.
    ನನ್ನ ದೂರವಾಣಿ: 9448726093.

    ReplyDelete
    Replies
    1. ಶೃಂಗೇರಿಸಮೀಪ ಮಾವಿನಕಾಡು ಬಾಲಕೃಷ್ಣ ಹಾಗೆಂದೇ ಸಾದಿಸುತ್ತಿದ್ದಾರೆ. ಪ್ರಯೋಗಗಳನ್ನೂ ಮಾಡುತ್ತಿದ್ದಾರೆ.

      Delete
  13. ಈ ರೋಗದ ಬಗ್ಗೆ ಹಲವು ಬಗೆಯ ವಾದಗಳು ಇವೆ.ಆದರೆ ಯಾವುದೂ ಸಂಪೂರ್ಣ ಪರಿಹಾರ ಒದಗಿಸುತ್ತಿಲ್ಲ.ಸಿಪಿಸಿಆರೈಯವರ ವಾದ ಸರಿಯಾದುದೇ ಆಗಿದ್ದಲ್ಲಿ ರೋಗ ಹರಡುವ ಮಿಡತೆಯನ್ನು ನಿಯಂತ್ರಿಸಿ ರೊಗ ಹತೋಟಿ ಮಾಡ ಬಹುದಲ್ಲವೇ..ಲಘು ಪೋಶಕಾಂಶಗಳ ಕೊರತೆಯೇ ಕಾರಣವಾಗಿದ್ದಲ್ಲಿ ಯಾಕೆ ಈ ರೋಗ ಕೆಲವೇ ಕೆಲವು ಊರುಗಳಲ್ಲಿ ಕಾಣಿಸಿಕೊಳ್ಳುತ್ತದೆ? ಇದು ಒಂದು ರೋಗದಂತೆ ಹರಡುತ್ತಿದೆ.ಪೋಶಕಾಂಶಗಳ ಕೊರತೆ ಕಾರಣವಾಗಿದ್ದಲ್ಲಿ ಈ ಮಾದರಿ ಹರಡ ಬಾರದಿತ್ತು.ರೋಗ ಬಾಧಿತ ಊರುಗಳಲ್ಲಿ ರೋಗ ಬಾಧಿಸದ ಮರಗಳ ಅಧ್ಯಯನ ಆಗ ಬೇಕಿತ್ತು.ಅದರ ಜೊತೆಗೆ ರೋಗ ಬಾಧಿತ ಮರಗಳ ಅಧ್ಯಯನ ನಡೆಸಿ ವ್ಯತ್ಯಾಸಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದರೆ ಚೆನ್ನಾಗಿತ್ತು.ಅಲ್ಲೇನೋ ಸುಳುಹು ಸಿಗಬಹುದು ಎನಿಸುತ್ತದೆ.

    ReplyDelete