Friday, May 21, 2010

ಸರ್ ಜಾರ್ಜ್ ಎವರೆಸ್ಟ್ – ಆತನೆಂದೂ ಎತ್ತರದ ಆ ಪರ್ವತ ನೋಡಿರಲೇ ಇಲ್ಲ!!!


         ಕೆಲವೊಂದು ವಿಷಯಗಳು ಎಷ್ಟು ಆಶ್ಚರ್ಯದಿಂದ ಕೂಡಿರುತ್ತವೆಂದರೆ ಅವುಗಳನ್ನು ನಂಬುವುದೇ ಕಷ್ಟವಾಗುತ್ತವೆ. ಇದಕ್ಕೆ ಎವರೆಸ್ಟ್ ಪರ್ವತಕ್ಕೆ ಆ ಹೆಸರು ಹೇಗೆ ಬಂತೆಂಬ ವಿಷಯವೇ ಒಂದು ಒಳ್ಳೆಯ ಉದಾಹರಣೆ. ನಾವು ಶಾಲಾ ಪುಸ್ತಕಗಳಲ್ಲಿ ಓದಿರುವುದೇನು? "ಸರ್ ಜಾರ್ಜ್ ಎವರೆಸ್ಟ್ ಮೊದಲ ಬಾರಿಗೆ ಅದರ ಎತ್ತರ ಕಂಡು ಹಿಡಿದ. ಅದಕ್ಕೆ ಅವನ ಹೆಸರನ್ನೇ ಅದಕ್ಕೆ ಇಡಲಾಗಿದೆ"-ಎಂದು ತಾನೇ? ಆದರೆ ಸತ್ಯ ವಿಚಿತ್ರವಾಗಿದೆ. ಭಾರತದ ಸರ್ವೇಯರ್ ಜನರಲ್ ಆಗಿದ್ದ ಸರ್ ಜಾರ್ಜ್ ಎವರೆಸ್ಟ್ ಎಂದೂ ಆ ಪರ್ವತವನ್ನ ಕಣ್ಣಾರೆ ಕಂಡಿರಲಿಲ್ಲ!!!! ಆಶ್ಚರ್ಯವೇ? ಮುಂದೆ ಓದಿ-

     ೧೯ ನೇ ಶತಮಾನದ ಪ್ರಾರಂಬದಲ್ಲಿ ಆಗ ಭಾರತದಲ್ಲಿ ಬಲವಾಗಿ ಕಾಲುರಿದ್ದ ಈಸ್ಟ್ ಇಂಡಿಯಾ ಕಂಪನಿ ಒಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಂಡಿತು. ಅದೇ "ಭಾರತದ ಮಹಾ ಮೊಜಣೆ" (The Great Arc Project) ಸಂಪೂರ್ಣ ಭಾರತವನ್ನು ಭೂಪಟೀಕರಿಸುವ ದೊಡ್ಡ ಯೋಜನೆಯದು. (ಹೊಸ ಹೊಸ ಪ್ರದೇಶಗಳ ಅನ್ವೇಷಣೆಯಲ್ಲಿ ಯುರೋಪಿಯನ್ನರಿಗಿರುವಷ್ಟು ಆಸಕ್ತಿ ಮತ್ತಾರಿಗೂ ಇಲ್ಲವೆಂದೇ ನನ್ನನಿಸಿಕೆ. ಪ್ರಪಂಚದ ಇತಿಹಾಸವನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ. ಅತಿ ಕಷ್ಟಕರವಾದ ಪ್ರದೇಶ ನುಗ್ಗಿ ಜಾಲಾಡಿದ್ದಾರೆ- ಆಫ್ರಿಕಾ, ಅಮೇರಿಕಾ ಖಂಡಗಳು, ಆಸ್ಟ್ರೇಲಿಯಾ, ಅಂಟಾರ್ಕ್ಟಿಕ. ನಮ್ಮ ದೇಶದ ಭೂಗೊಳವನ್ನು ಸರಿಯಾಗಿ ನಮಗೆ ತಿಳಿಸಲೂ ನಮಗೆ ಅವರೇ ಬರಬೇಕಾಯಿತು!!) ೧೮೦೨ ರಲ್ಲಿ ಚೆನ್ನೈನಿಂದ ಆರಂಭವಾದ ಈ ದೊಡ್ಡ ಗಾತ್ರದ ಸರ್ವೇ ಯೋಜನೆ ಅನೇಕ ದಶಕಗಳ ಕಾಲ ಮುಂದುವರೆಯಿತು. ಆವರೆಗೆ ಪ್ರಪಂಚದಲ್ಲೆಲ್ಲೂ ಅಷ್ಟು ದೊಡ್ಡ ಗಾತ್ರದ ಸರ್ವೇ ನಡೆದಿರಲಿಲ್ಲ. ಹಳ್ಳ-ಕೊಳ್ಳ,ಪ್ರವಾಹ, ಮರುಭೂಮಿ, ದಟ್ಟ ಕಾಡುಗಳು,ಹಿಮಬೆಟ್ಟಗಳು-ಹೀಗೆ ಎಲ್ಲಾ ಪ್ರದೇಶಗಳಲ್ಲಿ ಕಬ್ಬಿಣದ ಸರಪಳಿಗಳನ್ನು ಎಳೆಯುತ್ತ ನೂರಾರು ಜನ ಕೆಲಸಗಾರರು, ಗಣಿತಜ್ಞರು ಸೇರಿ ತ್ರಿಕೋನಮಿತಿ (trigonometry) ಆದಾರದ ಮೇಲೆ ನಡೆಸಿದ ಸರ್ವೇ ಅದು. ಸಾವಿರಾರು ಪುಟಗಳಲ್ಲಿ ಅದನ್ನು ದಾಖಲಿಸಲಾಯಿತು.

            ಇದನ್ನು ಪ್ರಾರಂಬಿಸಿದವನು ವಿಲಿಯಂ ಲ್ಯಾಮ್ಮ್ಬನ್. ಇವನ ನಂತರ ಸರ್ವೇಯರ್ ಜನರಲ್ ಆಫ್ ಇಂಡಿಯಾ ಆಗಿ ನೆಮಕವಾದವನೇ ಸರ್ ಜಾರ್ಜ್ ಎವರೆಸ್ಟ್. ಈತ ಸರ್ವೇಯರ್ ಜನರಲ್ ಆಗಿದ್ದ ಕಾಲದಲ್ಲೂ (೧೮೨೩-೧೮೪೩) ಈ ಕ್ಲಿಷ್ಟಕರ ಸರ್ವೇ ಯೋಜನೆ ಮುಂದುವರೆದು ಹಿಮಾಲಯದ ಬುಡದವರೆಗೂ ತಲುಪಿತು. ೧೮೪೩ ರಲ್ಲಿ ಎವರೆಸ್ಟ್ ನಿವೃತ್ತಿ ಹೊಂದಿ ತಾಯ್ನಾಡಿಗೆ ಹೋಗಿ ನೆಲೆಸುತ್ತಾನೆ. ಆತನ ನಂತರ ಸರ್ವೇಯರ್ ಜನರಲ್ ಆಫ್ ಇಂಡಿಯಾ ಆಗಿ ಬಂದ ಆಂಡ್ರ್ಯೂ ವಾನ ಕಾಲದಲ್ಲಿ ಹಿಮಾಲಯದ ಸುತ್ತಮುತ್ತ ಸರ್ವೇ ನಡೆಯುತ್ತದೆ.

          ತನ್ನ ಕೈ ಕೆಳಗಿನ ಸರ್ವೇ ಅಧಿಕಾರಿಗಳಿಂದ ಒಟ್ಟುಪಡಿಸಿದ ದತ್ತಾಂಶಗಳ ಆದಾರದ ಮೇಲೆ ಆಂಡ್ರ್ಯೂ ವಾ ೧೮೫೬ರಲ್ಲಿ ಕಲ್ಕತ್ತಾ ಎಸಿಯಾಟಿಕ್ ಸೊಸೈಟಿಗೆ ೮೮೪೦ ಮೀ ಎತ್ತರದ 'ಪೀಕ್ XV' ಬಹುಶಃ ಪ್ರಪಂಚದ ಅತ್ಯಂತ ಎತ್ತರದ ಪರ್ವತವಾಗಿರಬೇಕೆಂದು ವರದಿ ಮಾಡುತ್ತಾನೆ. (ಅಲ್ಲಿಯವರೆಗೆ ಜನ ಅತಿ ಎತ್ತರದ ಶಿಖರ ಇನ್ನೂ ಸಂಪೂರ್ಣವಾಗಿ ಶೋಧಿಸದ ಆಂಡಿಸ್ನಲ್ಲೆಲ್ಲೋ ಇರಬೇಕೆಂದು ನಂಬಿದ್ದರು) ಅಷ್ಟಲ್ಲದೇ ಅದಕ್ಕೆ ತನಗಿಂತ ಮೊದಲು ಸರ್ವೇಯರ್ ಜನರಲ್ ಆಗಿದ್ದ ಎವರೆಸ್ಟ್ ಹೆಸರನ್ನು ಸೂಚಿಸುತ್ತಾನೆ. ಅದಕ್ಕೆ ಸಕಾರಣ ಇವತ್ತಿಗೂ ಗೊತ್ತಿಲ್ಲ!!! (ಆದರೆ ಜಾರ್ಜ್ ಎವರೆಸ್ಟ್ ಅದಕ್ಕೆ ಸ್ಥಳೀಯ ಹೆಸರಾದ 'ಚೋಮೊಲುಂಗ್ಮ'ವೇ ಸರಿಯಾದ್ದೆಂದು ಸೂಚಿಸಿದನೆಂದು ಹೇಳಲಾಗಿದೆ). ಏನೇ ಆಗಲಿ ಆ ಶಿಖರ ಅವನ ಹೆಸರು ಹೊದ್ದು ನಿಂತಿದೆ. ಆದರೆ ಅದನ್ನೆಂದೂ ಅವನು ಕಣ್ಣಾರೆ ನೋಡಿರಲೇ ಇಲ್ಲ!!! ಆದರೆ ಇವತ್ತಿಗೂ ಪಾಠದ ಪುಸ್ತಕಗಳು ಆತ ಅದರ ಎತ್ತರ ಕಂಡು ಹಿಡಿದವನು ಎಂದೇ ಹೇಳುತ್ತಿವೆ. ಹಾಗೂ ಹೆಚ್ಚಿನ ಜನ ಹಾಗೇ ನಂಬಿದ್ದಾರೆ!!! ತರಗುಟ್ಟುವ ಚಳಿಯಲ್ಲಿ ಅದರ ಸುತ್ತ ಮುತ್ತ ಸರ್ವೇ ಮಾಡಿ ಅದರ ಎತ್ತರ ಕಂಡುಹಿಡಿದ ಪುಣ್ಯಾತ್ಮ ಯಾರೋ. ದೇವರೇ ಬಲ್ಲ.
            ಈ ವಿಷಯ ನಿಮಗೆ ಗೊತ್ತಿತ್ತೇ? ಇದನ್ನು ಓದಿದ ಮೇಲೆ ಕನ್ನಡದ ಒಂದು ಗಾದೆ ನೆನಪಾಗುವುದಿಲ್ಲವೇ? (ಈರಪ್ಪ-ಸೂರಪ್ಪ ಎಂಬ ಹೆಸರು ಒಳಗೊಂಡಿರುವ ಸ್ವಲ್ಪ non-veg ಗಾದೆ ಅದು!!)



8 comments:

  1. ಗೊತ್ತಿಲ್ಲದ ಎಷ್ಟೋ ವಿಷಯಗಳು ಬ್ಲಾಗುಗಳಿಂದ ಗೊತ್ತಾಗುತ್ತದೆ.ಧನ್ಯವಾದಗಳು.

    ReplyDelete
  2. ಮಾಹಿತಿಯುಕ್ತವಾಗಿದೆ, ಚೆನ್ನಾಗಿದೆ.

    ReplyDelete
  3. ಉತ್ತಮ ಬರಹ.. ಧನ್ಯವಾದಗಳು ಸರ್‍.

    ReplyDelete
  4. ಬಸರು ಯಾರದ್ದೋ,ಹೆಸರು ಮಾತ್ರ ಸರ್ ಜಾರ್ಜ್ ಎವರೆಸ್ಟ್.uttama baraha

    ReplyDelete
  5. ಈ ವಿಷಯ ನಿಜವಾಗಿಯೂ ಗೊತ್ತಿರಲಿಲ್ಲ!
    ಮಾಹಿತಿಗೆ ಧನ್ಯವಾದಗಳು.

    ReplyDelete
  6. hIge bareyuttiri, bahaLa upayukta LElhana
    halebeed swamyu

    ReplyDelete
  7. ನಮಸ್ಕಾರ, ನನ್ನ ಈ ಲೇಖನದ ಹಿಂದಿನ ಲೇಖನವನ್ನ ನಿದಾನವಾಗಿ ಓದಿ. ಕನ್ನಡದಲ್ಲಿ ಸುಲಭವಾಗಿ ಬರೆಯುವುದು ಗೊತ್ತಾಗುತ್ತದೆ.

    ReplyDelete