Monday, November 16, 2009

ಮಲೆನಾಡಿನ ಮದ್ಯದಿಂದ (ವಿನೋದ ಪ್ರಸಂಗಗಳು)

ಮಲೆನಾಡಿನ ಪ್ರತಿ ಹಳ್ಳಿಯಲ್ಲೂ ಅನೇಕ ಸ್ವಾರಸ್ಯಕರ ಘಟನೆಗಳು ನಡಿಯುತ್ತಲೆ ಇರುತ್ತದೆ. ಕೆಲವೊಂದು ಕಥೆಗಳನ್ನು ಇಲ್ಲಿ ಹೇಳುತ್ತೇನೆ.


ರಮೇಶ ರಾಯರು ನಮ್ಮ ಪಕ್ಕದ ಊರಿನ ಒಬ್ಬ ವ್ಯವಸಾಯಗಾರರು. ವಿನೋದ ಪ್ರವೃತ್ತಿಯ ಗಂಭೀರ ನಿಲುವಿನ ಮನುಷ್ಯ. ಯಾರದ್ದಾದ್ರ ತಲೆಗೆ ಏನಾರು ಹುಳಬಿಟ್ಟು ಅವರು ಮಂಗ ಆಗುವುದನ್ನ ದೂರದಿಂದ ನೋಡುತ್ತಿರುತ್ತಾರೆ. ಗಂಭೀರ ವದನರಾಗಿ ವಿಷಯಗಳನ್ನು ಹೇಳುತ್ತಿದ್ದಾರೆ ಯಾರಾದರು ಅದನ್ನು ನಂಬಲೇಬೇಕು.


ಸದಾಶಿವ ಭಟ್ಟರು ಅದೇ ಊರಿನ ಮತ್ತೊಬ್ಬ ಚಿಕ್ಕ ವ್ಯವಸಾಯಗಾರರು. ಲೋಕಜ್ಞಾನ ಸ್ವಲ್ಪ ಕಡಿಮೆ. ಹಿತ್ತಾಳಿ ಕಿವಿ. ಸ್ವಲ್ಪ ದುಡ್ಡಿನಾಸೆ. ರಮೇಶ ರಾಯರಿಂದ ಆಗಾಗ್ಗೆ ಮಂಗ ಆಗುತ್ತಿರುತ್ತಾರೆ. ಆದರೂ ಮತ್ತೆ ಮತ್ತೆ ರಾಯರು ಹೇಳಿದ್ದನ್ನೇ ನಂಬುತ್ತಾರೆ.

ಮಲೆನಾಡಿನಲ್ಲಿ ಸಾದಾರಣವಾಗಿ ಒಂದು ಬೆಳೆ ಮಾತ್ರ ಬತ್ತ ಬೆಳೆಯುತ್ತಾರೆ. ಮಳೆಗಾಲದ ಪ್ರಾರಂಭದೊಡನೆ ಗದ್ದೆ ಕೆಲಸ ಶುರುವಾಗುತ್ತದೆ. ಬೆಸಿಗೆಯಲ್ಲೆಲ್ಲ ಅಲ್ಲಿ ದನಗಳು ಮೇಯುತ್ತಿರುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಎಲ್ಲರು ಗದ್ದೆಗೆ ತಾತ್ಕಾಲಿಕ ಬೇಲಿ ಮಾಡುತ್ತಾರೆ. ಈ ರೀತಿ ಬೇಲಿ ಮಾಡಲು ಚಿಗುರು ಗೂಟ ಬಳಸುತ್ತಾರೆ.

ಒಮ್ಮೆ ಸದಾಶಿವ ಬಟ್ಟರು ರಮೇಶ ರಾಯರ ಜೊತೆ ಮಾತನಾಡುತ್ತಿರುವಾಗ ಮಳೆ ನೀರು ಒಳಗೆ ಸೇರಿ ಚಿಗುರು ಗೂಟ ಕೊಳೆತು ಹೋಗುವ ತಮ್ಮ ಸಮಸ್ಯೆ ಹೇಳಿಕೊಂಡರು. ಇಪ್ಪತ್ತು ವರ್ಷದ ಕೆಳಗೆ ಪ್ಲಾಸ್ಟಿಕ್ ಕವರ್ ಗಳು ಈಗಿನಂತೆ ಬೇಕಾಬಿಟ್ಟಿ ಸಿಗುತ್ತಿರಲಿಲ್ಲ.

"ಚಿಗರು ಗೂಟಕ್ಕೆ ಪ್ಲಾಸ್ಟಿಕ್ ಕವರ್ ಹುಡ್ಕೊದೆ ದೊಡ್ಡ್ ಪ್ರಾಬ್ಲಂ ಆಗಿದೆ ರಾಯರೇ. ಏನ್ ಮಾಡೋದು ತಲೆಗೆ ಹೊಳಿತಾ ಇಲ್ಲ."

ರಾಯರು - "ಅದಕ್ ಯಾಕ್ ಅಷ್ಟು ಯೋಚನೆ ಮಾಡ್ತೀರಿ ಭಟ್ರೇ. ಗೌರ್ಮೆಂಟ್ ಆಸ್ಪತ್ರೆಲೆ ಅಂತಾ ಕವರ್ ಸಿಗುತ್ತೆ. ರಬ್ಬರಿಂದು. ಒಂಚೂರು ನೀರ್ ಹೋಗೋಲ್ಲ. ನಾವೆಲ್ಲ ಅದನ್ನೇ ಉಪಯೋಗಿಸೋದು. ಚಿಗುರು ಗೂಟಕ್ಕೆ ಹಾಕೋದು ಸುಲಭ. ಕಟ್ಟೋ ತಾಪತ್ರಯನು ಇಲ್ಲ. ಡಾಕ್ಟ್ರು ಒಬ್ಬರೇ ಇದ್ದಾಗ ಹೋಗಿ ಕೇಳಿ. ಎರಡ್ ಮೂರ್ ಮಾತ್ರ ಕೊಡ್ತಾರೆ. ಒತ್ತಾಯ ಮಾಡಿದ್ರೆ ನಿಮಗೆ ಬೇಕಾದಷ್ಟು ಕೊಡ್ತಾರೆ."


ಭಟ್ಟರು ಮಾರನೆ ದಿನ ಮಧ್ಯಾನ ಸಮಯಕ್ಕೆ ಗೌರ್ಮೆಂಟ್ ಆಸ್ಪತ್ರೆಗೆ ಹೋದರು. (ಆಸ್ಪತ್ರೆ ಅಂದರೆ ಪಿ.ಹೆಚ್.ಸಿ) ಪೇಷೆಂಟ್ ಎಲ್ಲಾ ಕಾಲಿಯಾಗುತಂಕ ಕಾದು ಡಾಕ್ಟರರು ಒಬ್ಬರೇ ಆದಾಗ ನಿದಾನವಾಗಿ ಸಮೀಪಿಸಿ ಕೇಳಿಯೇ ಬಿಟ್ಟರು.

"ಗೂಟಕ್ಕೆ ಹಾಕು ರಬ್ಬರಿನ ಕವರ್ ಇಲ್ಲಿ ಫ್ರೀ ಕೊಡ್ತಿರಂತಲ. ನಂಗು ಬೇಕಿತ್ತು."

ಅರವತ್ತರ ಆಸುಪಾಸಿನ ತಲೆ ಹಣ್ಣಾದ ಬಟ್ಟರು ಸಂಕೋಚದಿಂದ ನಿರೋದ್ಹ್ ಕೇಳಿದ್ದು ಡಾಕ್ಟರಿಗೆ ದಂಗು ಬಡಿದಂತಾಯಿತು. ಹೋಗಲಿ ಮುದುಕ ಎಂದು ಮೂರರ ಒಂದು ಕವರ್ ಕೊಟ್ಟರೆ ಭಟ್ಟರು "ಇಸ್ಟ್ ಯಾವ್ ಮೂಲೆಗೂ ಸಾಕಾಗಲ್ಲ. ತುಂಬಾ ಬೇಕು." ಅಂತಾ ಗಲಾಟೆನೇ ಎಬ್ಸಿದ್ರು.


ಅದಾಗಿ ಕೆಲವು ತಿಂಗಳವರೆಗೂ ಊರು ಮನೇಲಿ ಭಟ್ಟರು ಗೌರ್ಮೆಂಟ್ ಆಸ್ಪತ್ರೇಲಿ ನಿರೋದ್ಹ್ ಕೇಳಿದ್ದೆ ಸುದ್ದಿ. ರಮೇಶ ರಾಯರ ಇಂತಹ ಇನ್ನು ಸುಮಾರು ಕಥೆಗಳಿವೆ.