Monday, August 3, 2020

"ನೀ ಕಾಚ ಹಾಕ್ಕುಂಡಿದ್ಯನೇ???"

       ಶೀರ್ಷಿಕೆ ಓದಿ 'ಇದು ಮಾಚಿಕೊಪ್ಪ ಬ್ಲಾಗ್ ಹೌದೋ ಅಲ್ಲವೋ' ಎಂದು ಆಶ್ಚರ್ಯಪಡಬೇಡಿ. ಇದು ನನ್ನದೇ ಬ್ಲಾಗ್. ಶಾಲಾ ದಿನಗಳಲ್ಲಿ ನಮ್ಮ ಕನ್ನಡ ಪ್ರಶ್ನೆ ಪತ್ರಿಕೆಗಳಲ್ಲಿದ್ದ 'ಸಂದರ್ಭದೊಂದಿಗೆ ಸ್ವಾರಸ್ಯ ವಿವರಿಸಿ' ಎಂಬ ಪ್ರಷ್ನೆಯೊಂದನ್ನು ಜ್ನಾಪಿಸಿಕೊಳ್ಳಿ. ಈ ಬರಹದ ಶೀರ್ಷಿಕೆಯ ಸ್ವಾರಸ್ಯವನ್ನು-ಸಂದರ್ಭದೊಂದಿಗೆ ನಾನು ವಿವರಸಿದರೆ-ಪದೆಪದೆ ಜ್ನಾಪಕ ಮಾಡಿಕೊಂಡು ಆ ಬಸ್ ಡ್ರೈವರ್ ನಕ್ಕಂತೆ-ಗ್ಯಾರಂಟಿ ನೀವೂ ನಗುತ್ತೀರಿ.

     ಮಲೆನಾಡಿನಲ್ಲಿ ಗೌಡ್ಲು ಎಂಬ ಗುಡ್ಡಗಾಡು ಜನಾಂಗವಿದೆ. ಶ್ರಿಂಗೇರಿ/ಕೊಪ್ಪಾ/ಕಳಸ ಪೇಟೆಯಿಂದ ದೂರದ ಗುಡ್ಡಗಾಡುಗಳ ನಡುವೆ ಇವರ ವಾಸ. ನಗರ, ಪಟ್ಟಣಗಳಲ್ಲಿ ವಾಸಿಸುವ ನೀವುಗಳು - ದೂರದ ಗುಡ್ಡಗಾಡುಗಳಲ್ಲಿ ವಾಸಿಸುವ ಗೌಡ್ಲುಗಳನ್ನು - ಅತೀ ಗ್ರಾಮ್ಯ ಭಾಷೆ ಮಾತಾಡುವ, ಕೊಳಕು ಹರಕು ಬಟ್ಟೆಗಳ ಜೋಪಡಿವಾಸಿಗಳೆಂದು ಕಲ್ಪಿಸಿಕೊಂಡರೆ - ನಿಮಗಿಂತ ದಡ್ಡರು ಇನ್ನೊಬ್ಬರಿಲ್ಲ. (ಐವತ್ತು ಅರವತ್ತು ವರ್ಷಕ್ಕಿಂತ ಮೇಲ್ಪಟ್ಟವರನ್ನು ಬಿಟ್ಟರೆ) ಯುವ ಜನಾಂಗ ಹಾಗೂ ಹುಡುಗರೆಲ್ಲ ಬೆಂಗಳೂರಿನವರಿಗಿಂತ.ಚನ್ನಾಗಿ ಕನ್ನಡ ಮಾತನಾಡುತ್ತಾರೆ.  ಹಸಿರು ಸೂಸುವ ಬತ್ತದ ಗದ್ದೆಗಳು (ನೀರು ಸಾಕಷ್ಟು ಇರುವುದರಿಂದ ಅನೇಕರು ಎರಡು ಬೆಳೆ ಬೆಳೆಯುತ್ತಾರೆ), ನಡುವೆ ನೀಟಾದ ಅಂಗಳದ ಪಕ್ಕ ಚಂದದ ಅಚ್ಚುಕಟ್ಟಾದ ಮನೆ, ಪಕ್ಕದಲ್ಲಿ ಅಡಿಕೆ ಕಾಳುಮೆಣಸು ಕಾಫೀ ಗಿಡಗಳಿರುವ ತೋಟ, ಜುಳುಜುಳು ಹರಿಯುವ ತೊರೆ, ದೂರದಲ್ಲಿ ಕಾಣುವ (ಕೇಳುವ) ಜಲಪಾತ, ವಾಹನಗಳ ಕರ್ಕಶ ಶಬ್ದಕ್ಕೆ ಬದಲಾಗಿ ಹಕ್ಕಿಗಳ ಚಿಲಿಪಿಲಿ, ಸುತ್ತಲೂ ಹಸಿರು ಹೊದ್ದ ಬೆಟ್ಟಸಾಲು, ಅಲ್ಲೆಲ್ಲಾ ಮೇಯುವ ದನಗಳ ಕಿಣಿಕಿಣಿ ಕಟಕಟ ಮರಗುಣಿ ಶಬ್ದ - ಇವರು ವಾಸಿಸುವ (ಅಲ್ಲೊಂದು ಇಲ್ಲೊಂದು ಮನೆಯಿರುವ) ಗ್ರಾಮಗಳು ಸ್ವರ್ಗದಂತಿರುತ್ತವೆ. (ಆದರೆ ಮೊಬೈಲ್ ನೆಟ್ವರ್ಕ್ ಸಮಸ್ಯೆ, ವಿದ್ಯುತ್ ಸಮಸ್ಯೆ ಹಾಗೂ ರಸ್ತೆ ಸಮಸ್ಯೆ ಇದೆ). 

       ಕೆರೆಕಟ್ಟೆಯು ಶೃಂಗೇರಿಯಿಂದ 20-22 ಕಿ.ಮೀ. ದೂರದಲ್ಲಿ ದಟ್ಟ ಕಾಡಿನ ನಡುವೆ ಇರುವ ಪುಟ್ಟ ಹಳ್ಳಿ. ಮೊದಲು ಬಸ್ ಸೌಕರ್ಯ ಇರಲಿಲ್ಲ. ಕುದುರೆಮುಖದಲ್ಲಿ ಕಬ್ಬಿಣದ ಗಣಿಗಾರಿಕೆ ದೊಡ್ಡ ಪ್ರಮಾಣದಲ್ಲಿ ಶುರುವಾಗುವುದೆಂದು ಆದಮೇಲೆ, ಘಟ್ಟ ಕೊರೆದು ಕಾರ್ಕಳ - ಕುದುರೆಮುಖ ಹೊಸ ದಾರಿ ಮಾಡಲಾಯಿತು. ಹಾಗೂ ಆ ದಾರಿಗೆ, ಶೃಂಗೇರಿ - ಕೆರೆಕಟ್ಟೆ ರಸ್ತೆಯನ್ನು ವಿಸ್ತರಿಸಿ ಎಸ್. ಕೆ. ಬಾರ್ಡರ್ ಎಂಬಲ್ಲಿ ಜೋಡಿಸಲಾಯಿತು. ಇದೀಗ ಶಿವಮೊಗ್ಗ - ಮಂಗಳೂರಿಗೆ ಅತಿಹತ್ತಿರದ ದಾರಿಯಾಗಿದ್ದು, ಈಗ ರಾಷ್ಟ್ರೀಯ ಹೆದ್ದಾರಿಯಾಗಿಯೂ ಬದಲಾಗಿದ್ದು, ನೂರಾರು ವಾಹನಗಳು ಹಾಗೂ ಹಲವಾರು ಬಸ್ಸುಗಳೂ ಓಡಾಡುತ್ತಿವೆ. ಈ ಕೆರೆಕಟ್ಟೆಯಿಂದ ಒಳಗೊಳಗೆ, ನಾನು ಮೇಲೆ ವಿವರಿಸಿದಂತಹ ಅನೇಕ ಹಳ್ಳಿಗಳಿವೆ. ಅಂತಹ ಒಂದು ಹಳ್ಳಿಯಲ್ಲಿ ವಾಸಿಸುವ, ಬಲಿಷ್ಠ ಮೈಕಟ್ಟಿನ, ತಾಮ್ರ ಕಪ್ಪು ಬಣ್ಣದ, ದಪ್ಪ ಬಿಳಿ ಗಿರಿಜಾ ಮೀಸೆಯ, ಅಂದಾಜು 55-60 ವರ್ಷದ ರಾಮಯ್ಯ ಗೌಡ್ಲುನೇ ಈ ಬರಹದ ಕಥಾನಾಯಕ. ಆತನ ಹೆಂಡತಿ ರುಕ್ಮಿಣಿ ಕಥಾನಾಯಕಿ.


           ಜೂನ್ ಎರಡನೇ ವಾರ. ಬೇಸಿಗೆ ಮುಗಿದಾಗಿರತ್ತೆ. ಮಳೆಗಾಲ ಶುರುವಾಗಿರತ್ತೆ. ಆದರೆ ಅಂತಾ ಮಳೆ ಇರೋಲ್ಲ. ಗಾಳಿ, ಮೋಡ, ಒಂದೊಂದು ಮಳೆ. ಸೋಮವಾರ ಶೃಂಗೇರಿ ಸಂತೆ. ಕೂಲಿ ಕಾರ್ಮಿಕರಿಗೆ ವಾರದ ರಜೆ. ತರಕಾರಿ, ಸಾಮಾನು,ಅದು ಇದು ತೆಗೆದುಕೊಳ್ಳಲು ಸಂತೆ ದಿನ ಶೃಂಗೇರಿಗೆ ಬರುತ್ತಾರೆ. ಈಗೆಲ್ಲಾ ಊರುಮನೆ ಅಂಗಡಿಗಳಲ್ಲೂ ಎಲ್ಲವೂ ಸಿಕ್ಕಿದರೂ ಸಂತೆಯ ಖದರು ಕಡಿಮೆಯಾಗಿಲ್ಲ. ದೂರದವರು ಪ್ರತೀ ವಾರ ಬಾರದಿದ್ದರೂ, ತಿಂಗಳಿಗೊಮ್ಮೆ ಅಥವಾ ಅವಶ್ಯಕತೆ ಇದ್ದಾಗ ಬರುತ್ತಾರೆ. ರಾಮಯ್ಯ ಗೌಡ್ಲು-ರುಕ್ಮಿಣಿ ದಂಪತಿಯೂ ಕೆರೆಕಟ್ಟೆಯಲ್ಲಿ ಬಸ್ ಹತ್ತಿ ಶೃಂಗೇರಿ ಸಂತೆಗೆ ಬಂದಿದ್ದಾರೆ.

          ಸಂತೆ ಮೈದಾನದಲ್ಲಿ ತಿರುಗೋದು ಒಂಥರಾ ಮಜ. ವ್ಯಾಪಾರಗಾರರಂತೂ ಗಿರಾಕಿಗಳ 'ಮೈಂಡ್ ರೀಡಿಂಗ್' ನಲ್ಲಿ ಎತ್ತಿದ ಕೈ.  ಸಂಜೆಯಾಗುತ್ತಿದ್ದಂತೆ ಬೆಲೆಗಳೂ ಕಡಿಮೆಯಾಗುತ್ತವೆ. ಆದರೆ ಆರಿಸಿ ಬಿಟ್ಟವು ತಗೋಬೇಕು. ಸಂತೆಗೆ ಬಂದ ರಾಮಯ್ಯ ದಂಪತಿಗಳು ಒಣಮೆಣಸು, ಹೊಗೆಸೊಪ್ಪು, ತರಕಾರಿ, ಹಾಲು ಸೌಸುದು, ಹೇರ್ ಪಿನ್, ಬಾಚಣಗೆ - ಅದು ಇದು ತಗಂಡಿದ್ದಾರೆ. ರಾಮಯ್ಯ ಹೊಗೆಸೊಪ್ಪು ತಿಕ್ತ  'ದುರ್ಗಾದೇವಸ್ಥಾನ ಜಾತ್ರೇಲ್ ಅಷ್ಟುಕ್ ಸಿಗ್ತಿತ್ತು. ಅದೇನ್ ಇಲ್ ಇಷ್ಟ್ ರೇಟ್?' ಅಂತೆಲ್ಲಾ ತಲೆ ಉಪಯೋಗಿಸಿ ಚೌಕಾಸಿ ಮಾಡಿ ವ್ಯಾಪಾರ ಮಾಡಿದ್ದಾರೆ

        "ಆತಲಾ ಎಲ್ಲಾ ತಗಂಡ್?" - ಹೆಂಡತೀನ ಕೇಳಿದ. "ಹೂ. ಆತು. ಹೊಗಾನ" ಅಂದಳಾಕೆ. "ತಡಿ ತಡಿ. ಈಗ್ ಬಂದೆ. ಇಲ್ಲೇ ಇರು" ಅಂತ ಹೇಳಿ ಇದ್ದಕ್ಕಿದ್ದಂತೆ ಮಾಯವಾದ ರಾಮಯ್ಯ. ಅಷ್ಟು ವರ್ಷ ರಾಮಯ್ಯನ ಜೊತೆ ಬಾಳ್ವೆ ಮಾಡಿದ ರುಕ್ಮಿಣಿಗೆ, ಮಾಯವಾದ ಆತ ಎಲ್ಲಿ ಪ್ರತ್ಯಕ್ಷ ಆಗುತ್ತಾನೆನ್ನುವುದು ಗೊತ್ತಿಲ್ಲದ ಸಂಗತಿಯೇ? ನರ್ತಕಿ ಬಾರಿಗೆ ನುಗ್ಗಿ, ಅಲ್ಲೇ ಬಾಟಲಿ ಓಪನ್ ಮಾಡಿಸಿ, ನೀರು ಬೆರೆಸಿ ಮರೆಯಲ್ಲೇ 60-60-60-60 ನಾಲ್ಕು ಬಾರಿ ರಮ್ ಎತ್ತಿದ್ದಾನೆ ರಾಮಯ್ಯ. ಜೊತೆಗೆ ಸಣ್ಣ, ಖಾರದ ನೆಲಗಡಲೆ ಪ್ಯಾಕೆಟ್ ಖಾಲಿ. ತನ್ನ ಒರಟು ಕೈಯಲ್ಲಿ ಗಿರಿಜಾ ಮೀಸೆಯನ್ನು ಒರಸಿಕೊಳ್ಳುತ್ತಾ, ಸದ್ದು ಮಾಡದೇ ರುಕ್ಮಿಣಿ ಪಕ್ಕ ಬಂದು 'ಹೊಗಾನ. ಬಸ್ ಬರೋ ಟೈಮಾತು' ಅಂದಿದ್ದಾನೆ.

     'ಐದ್ ನಿಮಿಷದಲ್ಲಿ ಬಸ್ ಬರತ್ತೆ. ಇಲ್ಲೇ ಇರಿ' ಅಂದ ಏಜೆಂಟ್. ರಸ್ತೆ ಬದಿ ನಿಂತವರಿಗೆ ತಾತ್ಕಾಲಿಕ (ಸಂತೆ ದಿನಕ್ಕೆ ಮಾತ್ರ ಎಬ್ಬಿಸುವ) ಬಟ್ಟೆ ಅಂಗಡಿ ಕಂಡಿದೆ. ಆಗ ರುಕ್ಮಿಣಿಗೆ ಜ್ಞಪಕಕ್ಕೆ ಬಂದಿದ್ದು ಮುಂಬರುವ ಮಳೆಗಾಲ ಹಾಗೂ ಅದರ ಸಿದ್ಧತೆಗೆ ಬೇಕಾದ ಒಳ ಉಡುಪುಗಳು.

        ಅರೆ!!! ಮಳೆಗಾಲಕ್ಕೆ ಒಳ ಉಡುಪು ಸಿದ್ದಪಡಿಸುವುದು!!!! ಹಾಗೆಂದರೇನು??? ನೀವು ಕರಾವಳಿ/ಮಲೆನಾಡಿಗರಲ್ಲದಿದ್ದರೆ ಈ ಪ್ರಶ್ನೆ ನಿಮ್ಮ ತಲೆಗೆ ಬಂದೇ ಬರುತ್ತದೆ. ಮಲೆನಾಡೇ ಹಾಗೆ. ಮಲೆನಾಡಿನವರ ಸಮಸ್ಯೆ ಮಲೆನಾಡಿನವರಿಗೆ ಮಾತ್ರ ಅರ್ಥ ಆಗುತ್ತದೆ. ಧೋ ಎಂದು ನಾಲ್ಕು ತಿಂಗಳು ಸುರಿಯುವ ಗಾಳಿ ಮಳೆ ಥಂಡಿಗೆ ಸಿದ್ದತೆ ಅಗತ್ಯ. ಹಿಂದೆಲ್ಲಾ ಆ ಪಟ್ಟಿ ದೊಡ್ಡ ಇತ್ತು-(ಬತ್ತ ಮಿಲ್ ಮಾಡಿಸಿ) ಅಕ್ಕಿ, ಬೇಳೆ ಕಾಳುಗಳು, ಕಟ್ಟಿಗೆ, ಒಣಗಿಸಿದ ಹಾಳೆ ಕೊನೆಮೊಟ್ಟೆ, ಹಪ್ಪಳ ಸಂಡಿಗೆ, ದಿಂಡಿನಕಾಯಿ ಗೊಜ್ಜು, (ದನಗಳಿಗೆ) ಒಣಹುಲ್ಲು, ಹಿಂಡಿ (ಇನ್ನೇನಾದರೂ ನಾನು ಬಿಟ್ಟಿದ್ದರೆ ಕಾಮೆಂಟಿಸಿ). ಇಂದಿನ ದಿನಗಳಲ್ಲಿ ಸಣ್ಣಪುಟ್ಟ ಹಳ್ಳಗಳಿಗೂ ಮೋರಿ ಸೇತುವೆ ಆದಮೇಲೆ ಆ ಪಟ್ಟಿ ಕಿರುದಾಗಿದೆ. ಏನೇ ಬದಲಾವಣೆಗಳಾದರೂ, ಕೆಲವೊಂದು ಐಟಂಗಳು ಆ ಪಟ್ಟಿಯಿಂದ ಎಂದೆಂದಿಗೂ ಡಿಲೀಟ್ ಆಗದಂತವು. ಅವುಗಳಲ್ಲಿ ರುಕ್ಮಿಣಿ ಜ್ಞಾಪಕಕ್ಕೆ ಬಂದ ಒಳ ಉಡುಪುಗಳೂ ಒಂದು. ಹೌದು. ಸದಾ ಥಂಡಿ (humidity) ಗಾಳಿಯಿರುವ, ಬಿಸಿಲೇ ಕಾಣಿಸದ ನಾಲ್ಕು ತಿಂಗಳ ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದೇ ಸಮಸ್ಯೆ ಜೀನ್ಸ್ ಪ್ಯಾಂಟ್ ಗಳಂತೂ ವಾರನೇ ಬೇಕು. ಕೆಲವೊಮ್ಮೆ ಅರ್ಧಂಬರ್ಧ ಒಣಗಿ ಬೂಸ್ಟ್ ಬೆಳೆದು ಮುಗುಟು ವಾಸನೆ ಬರುತ್ತದೆ. ಬೇರೆಲ್ಲಾ ಬಟ್ಟೆ ಓಕೆ. ಆದರೆ ಅಂಡರ್ವೆರ್ ಗಳು ಹಾಗಾಗೋಲ್ಲ. ಒಣಗಿದ್ದೇ ಉಪಯೋಗಿಸಬೇಕು. ಇಲ್ಲದಿದ್ದರೆ fungal infection, ಕೆರೆತ ಗ್ಯಾರಂಟಿ. ಇರುಸುಮುರುಸು. ಹೆಣ್ಣು ಮಕ್ಕಳು, ಹೆಂಗಸರಿಗಂತೂ ಡಾಕ್ಟರ್ ಗಳಿಗೆ ತೋರಿಸೋಕ್ಕೂ ನಾಚಿಕೆ.


             ಬಸ್ ಬಂದು ನಿಲ್ಲುವ ಜಾಗದಲ್ಲಿ, ರಸ್ತೆ ಬದಿಯಲ್ಲಿದ್ದ,(ಸಂತೆಯೊಂದೇ ದಿನದ) ತಾತ್ಕಾಲಿಕ ಬಟ್ಟೆ ಅಂಗಡಿಗೆ ದಂಪತಿಗಳು ಹೋಗಿದ್ದಾರೆ. ಒಳ ಉಡುಪುಗಳ ಬಗ್ಗೆ ವಿಚಾರಿಸಿದ್ದಾರೆ. ಬೇರೆ ಅಂಗಡಿಗಳಲ್ಲಿಯಂತೆ ಚರ್ಚೆನೂ ನಡೆದಿದೆ. ತಾಳಿಕೆ ಬಾಳಿಕೆ ಬಗ್ಗೆ ಟೀಕೆ, ರೇಟ್ ಹೆಚ್ಚೆಂಬ ಗೊಣಗಾಟ, ಅಲ್ಲೆಲ್ಲೋ ಇನ್ನೂ ಕಮ್ಮಿ ರೇಟು ಅಂತ ಮಾತು. ಕೊನೆಗೂ ರೇಟು ಹೊಂದಾಣಿಕೆಯಾಗಿ, ಇವರು ಬೇಕಾದ ಬಣ್ಣ ಆರಿಸುತ್ತಿರಬೇಕಾಗಲೇ.......

                                       ........‌ ಮೇನ್ ಬಸ್ ಸ್ಟ್ಯಾಂಡ್ ನಲ್ಲೇ ಹೊಟ್ಟೆ ತುಂಬಿಸಿಕೊಂಡು ರಶ್ಶಾದ ಬಸ್ ಸಂತೆ ಬಸ್ಟಾಪಿಗೆ ಬಂದಿದೆ. 'ನೆಮ್ಮಾರ್-ಕೆರೆಕಟ್ಟೆ-ಬಜಗೋಳಿ-ಕಾರ್ಕಳ-ಮಂಗ್ಳೂರ್-ಮಂಗ್ಳೂರ್' ಅಂತ ಏಜೆಂಟ್ ಕೂಗಿದಾನೆ. (ಏಜೆಂಟ್ ಅಂದರೆ ಯಾರು? ಗೊತ್ತಾಗದಿದ್ದರೆ ನಿಮ್ಮ ಕರಾವಳಿ, ಮಲೆನಾಡಿನ ಸ್ನೇಹಿತರನ್ನು ಕೇಳಿ). ಬಸ್ ಇಂಜಿನ್ ಆಫ್ ಮಾಡದೆ ಗರಗರ ಶಬ್ದ ಮಾಡ್ತಾ ನಿಂತಿದೆ. 'ಬೇಗ ಬೇಗ. ಮುಂದ್ಬನ್ನಿ. ಹತ್ತಿ ಹತ್ತಿ' ಏಜೆಂಟ್ ಕೂಗ್ತಿದಾನೆ. ಜನ ದೊಬದೊಬ ಹತ್ತಿದಾರೆ. 'ಗ್ರಂಗ್ರಹ್' ಅಂತಾ ಶಬ್ದ ಮಾಡ್ತಿದ್ದ ಬಸ್ಸಿನ ಎಕ್ಸಲೇಟರನ್ನು ಇನ್ನೊಂದಿಷ್ಟು ತುಳಿದು ಶಬ್ದ ಹೆಚ್ಚಿಗೆ ಮಾಡಿ, ಬಸ್ ಹತ್ತುವ ಗುಂಪಿಗೆ ಚುರುಕು ಮೂಡಿಸಿದ್ದಾನೆ ಡ್ರೈವರ್. "ಬಸ್ ಬಂತು. ಬಸ್ ಬಂತು. ಬೇಗ್ಬೇಗ್ ಬ್ಯಾಗಿಗ್ ಹಾಕ್ಕಳಿ. ದುಡ್ ಕೊಟ್ ಚೇಂಜ್ ಇಸ್ಗಳಿ. ಹೋಗಾಣ" - ರುಕ್ಮಿಣಿ ಗಡಿಬಿಡಿ ಮಾಡಿದಳು. ಅಂತೂ ಗಡಿಬಿಡಿಯಲ್ಲಿ ಕಾಚಾ ವ್ಯಾಪಾರ ಮುಗಿಸಿ, ಬಸ್ ಹತ್ತುವ ಗುಂಪಿನ ನಡುವೆ ಸೇರಿ, ತಳ್ಳಲ್ಪಟ್ಟು ಬಸ್ಸೊಳಗೆ ಅಂತು ಇಂತೂ ಸೇರಿದರು ದಂಪತಿಗಳು. ಬಿಟ್ಟರೆ ಮುಂದಿನ ಬಸ್ ಮಧ್ಯರಾತ್ರಿ.

      ರಶ್ ಬಸ್ ಬಗ್ಗೆ ವಿಸ್ತಾರವಾಗಿ ಬರೆದರೆ ಅದೇ ಒಂದು ದೊಡ್ಡ ಬ್ಲಾಗ್ ಬರಹ. ತಳ್ಳಾಟ ನೂಕಾಟ. 'ಮುಂದೆ ಬನ್ನಿ, ಮುಂದೆ ಹೋಗಿ, ಯಾರ್ರೀ ಟಿಕೆಟ್ ಟಿಕೆಟ್' - ಏಜೆಂಟ್ ನ ನಿಲ್ಲದ ವಿಚಾರಣೆಗಳು. 'ರಯ್ಯ' ಅನ್ನುವ ಕಂಡಕ್ಟರ್. ಮಗಳ ವಯಸ್ಸಿನ ಹೆಣ್ಣು ಮಕ್ಕಳಿಗೂ ಒತ್ತಿ ನಿಲ್ಲುವ ಚಪಲಚಿತ್ತ ಗಂಡಸರು. ಹಾರ್ಮೋನುಗಳ ಹುಚ್ಚು ಹರಿದಾಟ. ರಶ್ ನಲ್ಲಿ ರುಕ್ಮಿಣಿ ಮುಂದೆ ಹೋಗಿದಾಳೆ. ರಾಮಯ್ಯ ಹಿಂದೆಯೇ ಉಳಿದಿದ್ದಾನೆ. ಬಸ್ ತ್ಯಾವಣದ ಪಕ್ಕ ಹೋಗಿರಬಹುದೇನೋ. ರಾಮಯ್ಯನ ತಲೆಯಲ್ಲಿ, 'ಬಟ್ಟೆ ಅಂಗಡಿಯಲ್ಲಿ ತಗಂಡ ಕಾಚಾಗಳನ್ನು - ಬಸ್ ಬಂದ ಗಡಿಬಡಿಯಲ್ಲಿ - ಬ್ಯಾಗಿಗೆ ಹಾಕಿಕೊಂಡಿದ್ದೀವೋ ಇಲ್ಲ ಅಲ್ಲೇ ಬಿಟ್ಟಿದೀವೋ' - ಎಂಬ ಅನುಮಾನ ಹುಟ್ಟಿದೆ.

      ಎಣ್ಣೆ ಹೊಟ್ಟೆಗೆ ಸೇರಿ, ಅಲ್ಲಿಂದ ರಕ್ತ ಸೇರಿದಾಗ - ಎಣ್ಣೆ ಹಾಕಿದವರ ತಲೆಯಲ್ಲಿ - ಏನಾದರೂ ಅನುಮಾನ ಬಂದರೆ ಮುಗಿದೇ ಹೋಯಿತು. ರಾಮಯ್ಯನಿಗೂ ಹಾಗೇ ಆಗಿದೆ. ಕಾಚಾಗಳು ಬ್ಯಾಗಿನಲ್ಲಿ ಇದಾವೋ, ಇಲ್ಲಾ ಅಲ್ಲೇ ಬಿಟ್ಟು ಬಂದವೋ ಅಂತಾ ತಲೆಯಲ್ಲಿ ಕೊರೆಯಲಾರಂಭಿಸಿದೆ.ಬಗ್ಗಿ, ಕಾಲುಗಳ ಮಧ್ಯೆ ಇಟ್ಟುಕೊಂಡ ಬ್ಯಾಗನ್ನು ಕೆದಕಿ ಹುಡುಕಲಾರಂಭಿಸಿದ - ತಿರುವುಗಳಲ್ಲಿ ಆಚೆ ಈಚೆ ಆಗುವ ಬಸ್ಸಿನಲ್ಲಿ ಬ್ಯಾಲೆನ್ಸ್ ಮಾಡಿಕೊಳ್ಳುತ್ತಾ. ಎಷ್ಟು ಕಿತ್ತುಮರಚಿ ಹುಡುಕಿದರೂ, ಊಹೂ, ಕಾಚಾಗಳು ನಾಪತ್ತೆ. ಅನುಮಾನ ನಿಜವಾಗಿದೆ. ಗಡಿಬಿಡಿಯಲ್ಲಿ ಅಲ್ಲೇ ಬಿಟ್ಟು ದುಡ್ಡು ಮಾತ್ರ ಕೊಟ್ಟು ಬಂದಿರಬಹುದು - ಅಂದುಕೊಂಡ ಬೇಜಾರಾದ ರಾಮಯ್ಯ. 'ರುಕ್ಮಿಣಿ ಕೈಲೂ ಒಂದು ಬ್ಯಾಗಿದೆ. ಅದಕ್ಕೆ ಅವಳು ಹಾಕ್ಕಣ್ತಿದ್ದಾಗೆ ಕಾಣುಸ್ತು. ನಂದೂ ಅದಕ್ಕೇ ಹಾಕಿರಬಹುದಾ?'- ಹೀಗೆ ಯೋಚಿಸಿದ ರಾಮಯ್ಯನಿಗೆ ಸ್ವಲ್ಪ ಸಮಾಧಾನ ಆಗಿದೆ. ಅವಳು ಅಲ್ಲೆಲ್ಲೋ ರಶ್ಶಲ್ಲಿ ಮುಂದಿದ್ದಾಳೆ. ಬಸ್ಸಿಂದ ಇಳಿದಮೇಲೆ ಕೇಳಬಹುದಾಗಿತ್ತು. ಆದರೆ ಸ್ವಲ್ಪ 'ಡಿಂಗ್ ಡಾಂಗ್' ಆಗಿದ್ದ ರಾಮಯ್ಯಂಗೆ ಕೂಡಲೇ ಅನುಮಾನ ಬಗೆಹರಿಸಿಕೊಳ್ಳುವ ತವಕ. ಬಸ್ಸಲ್ಲಿ ಹಿಂದೆ ನಿಂತಿದ್ದ ರಾಮಯ್ಯ ಗಂಟಲು ದೊಡ್ಡ ಮಾಡಿ -

           "ರುಕ್ಮಿಣೀ. ಏ ರುಕ್ಮಿಣಿ'

        ಅಂತ ಕೂಗಿ ಕರೆದೇ ಬಿಟ್ಟ. ಜೋರಾಗೇ ಕರೆದರೂ ರುಕ್ಮಿಣಿ ಕಿವಿಗೆ ಬೀಳಲು ಅದೇನು ಪಬ್ಲಿಕ್ ಲೈಬ್ರರಿನಾ? ತುಂಬಿದ ಬಸ್.  ದೊಡ್ಡ ಕಂಠದಲ್ಲಿ ಏಜೆಂಟ್ ವಿಚಾರಣೆ. 'ಅಲಕಣೇ' - ಅಂತ ಶುರುವಾಗುವ, ಎಂದೂ ಮುಗಿಯದ, ಹೆಣ್ಮಕ್ಕಳ ನಡುವಿನ ಮಾತುಗಳು, ನಗು, ಕೇಕೆ. ಮಳೆ ಬೆಳೆ ಕೆಲಸದವರ ತೊಂದರೆ ಬಗ್ಗೆ ಗಂಡಸರ ಮಾತುಗಳು. ಹೊಗೆಸೊಪ್ಪು ಹಾಕಿಕೊಂಡವರು ಹಾಗೂ ಗಂಡ್ಮಕ್ಕಳೇ ಸ್ವಲ್ಪ ಇದ್ದಿದ್ರಲ್ಲಿ ಸೈಲೆಂಟ್. (ಆದರೆ ಅವರ ಮೊಬೈಲ್ ಬಾಯಿ ಜೋರು).  ಆ ಗಲಾಟೆಯಲ್ಲಿ, ಎಲ್ಲೋ ನೋಡುತ್ತಾ, ಏನೋ ಯೋಚನೆ ಮಾಡ್ತಾ ರಶ್ಶಲ್ಲಿ ನಿಂತಿದ್ದ ರುಕ್ಮಿಣಿಗೆ ಅದು ಕೇಳುತ್ತಾ? ಊಹೂ. 

      ದನಿಯೇರಿಸಿ ಮತ್ತೊಮ್ಮೆ ಗಟ್ಟಿಯಾಗಿ ಕರೆದ ರಾಮಯ್ಯ. ಊಹೂ ಕೇಳಲಿಲ್ಲ. ಮತ್ತೂ ಜೋರಾಗಿ ಕರೆದಾಗ ಕೇಳಿಸ್ತು ರುಕ್ಮಿಣಿಗೆ. ಅವಳೂ ಅಲ್ಲಿಂದಲೇ ಉತ್ತರಿಸಿದಳು - "ಯಾಂತಲ್ರ?". 

     "ಏ ರುಕ್ಮಿಣಿ. ಇಲ್ಕೇಣು. ನೀ ಕಾಚ ಹಾಕ್ಕುಂಡಿದ್ಯನೇ" - ಕೇಳಿಯೇ ಬಿಟ್ಟ ರಾಮಯ್ಯ. ರಾಮಯ್ಯನ ಅಕ್ಕಪಕ್ಕದಲ್ಲಿದ್ದವರು ಗಾಬರಿಬಿದ್ದು ರಾಮಯ್ಯನನ್ನೇ ಆಶ್ಚರ್ಯದಿಂದ ನೋಡಿದರು. 'ಅರೆ!! ಇವನ್ಯಾವ್ ಸೀಮೆ ಮನುಷ್ಯನಪ್ಪ!!! ಹೆಂಡತೀನ ಪಬ್ಲಿಕ್ಕಲ್ಲಿ ಹೀಗ್ ಕೇಳ್ತಾನೆ' - ಅಂತ ಅವರಿಗೆ ಅನ್ನಿಸಿರದೇ ಇರುತ್ತದೆಯೇ.

        ಆ ಗಜಿಬಿಲಿ ಕೇಳುತ್ತಾ ರುಕ್ಮಿಣಿಗೆ? ಊಹೂ. ಏನೋ ಹೇಳ್ತಿರೋದು ಗೊತ್ತಾಗುತ್ತಿದೆ. ಏನೂಂತ ಸರಿಯಾಗಿ ಕೇಳ್ತಿಲ್ಲ. 'ಯಂತಾ' ಅಂತ ರಾಗ ಎಳೆದು ಕೇಳಿದಳು.

       ಬಸ್ಸಲ್ಲಿ ಹಿಂದೆ ರಶ್ಶಲ್ಲಿ ನಡುವೆ ನಿಂತಿದ್ದ ರಾಮಯ್ಯ, ಸೀಟಲ್ಲಿ ಕೂತವರ ಕಡೆ ಸೊಂಟ ಅಡ್ಡಲಾಗಿ ಬಗ್ಗಿಸಿ, ರಶ್ ನಿಂದ ಸೊಂಟದಿಂದ ಮೇಲಿನ ಬಾಗ, ಅಡ್ಡಲಾಗಿ ಹೊರಬರುವಂತೆ ಮಾಡಿ, "ಅಲಕಣೇ, ಕೇಣ್ಲ್ವಾ? ನೀ ಕಾಚ ಹಾಕ್ಕುಂಡಿದ್ಯಾ?' ಅಂತ ಇನ್ನೊಮ್ಮೆ ಗಟ್ಟಿಯಾಗಿ ಕೇಳಿದ. 

         ಈಗ ನಡು ಬಸ್ ವರೆಗೆ ಆ ಧ್ವನಿ ಕೇಳಿತೇನೋ. ಒಂದಿಷ್ಟು ಜನ ಮಾತು ನಿಲ್ಲಿಸಿ, 'ಇದೇನಪ್ಪಾ' ಅಂತ ಆಶ್ಚರ್ಯಪಡುತ್ತಾ ರಾಮಯ್ಯನ ಕಡೆ ನೋಡಿ, ಬಿಟ್ಟ ಕಣ್ಣು ಬಿಟ್ಟಂತೆ ಕಿವಿ ಚುರುಕು ಮಾಡಿ, 'ಏನು ಸಂಭಾಷಣೆ ಇದು' ಅಂತಾ ಗಮನಿಸಲಾರಂಭಿಸಿದರು. 

       ಆದರೆ, ರುಕ್ಮಿಣಿ ಬಸ್ ನಲ್ಲಿ ಮುಂದೆ ನಿಂತಿದ್ದಳಷ್ಟೇ. ಅಲ್ಲಿ ಇಂಜಿನ್ ಶಬ್ದ ಹಾಗೂ ಮಾತುಗಳಿಂದ ಸರಿ ಕೇಳಿಸಲೇ ಇಲ್ಲ. ಕತ್ತು ತಿರುಗಿಸಿ, ಆಚೆ ಈಚೆ ಹಂದಾಡುವ ಬಸ್ ನಲ್ಲಿ ಬ್ಯಾಲೆನ್ಸ್ ಮಾಡಿಕೊಳ್ಳುತ್ತಾ "ಥೋ. ಯಾಂತ್ರಲ್ರಾ. ಒಂಚೂರ್ ಗಟ್ಟಿ ಹೇಳ್ರೋ. ಕೇಣಲ" ಅಂದಳು.

         "ಕಾಚಕಣೇ ಕಾಚ. ನೀ ಕಾಚ ಹಾಕ್ಕುಂಡಿದ್ಯನೇ? ಒಂದೀಟ್ ನೋಡು. ಹಾಕ್ಕುಂಡಿದ್ಯಾ ಅಥವಾ ಹಂಗೇ ಬಂದ್ಯಾ?" ಈಗ ಸಾಕಷ್ಟು ನಿಶ್ಶಬ್ಧವಾಗಿದ್ದ ಬಸ್ಸಿನಲ್ಲಿ, ಗಟ್ಟಿಯಾಗಿ ಕೇಳಿದರು ರಾಮಯ್ಯ. ಜನರಿಗೆಲ್ಲ ಕುತೂಹಲ. 'ಏನಪ್ಪಾ ಇದು. ಕಥೆ' ಅಂದುಕೊಂಡು ಕಿವಿ ನೆಟ್ಟಗೆ ಮಾಡಿ ಗಮನಿಸಲಾರಂಭಿಸಿದರು. 

         ಈಗ ರುಕ್ಮಿಣಿಗೆ ಕೇಳಿಸ್ತು. 'ಇವ್ರುದ್ದೊಂದು. ಈ ರಶ್ಶಲ್ ಬಗ್ ನೋಡಕ್ಕಾತದಾ?' ಅಂತ ನಿಧಾನಕ್ಕೆ ಹೇಳ್ತಾ ಕಷ್ಟಪಟ್ಟು ಬಗ್ಗಿ ತನ್ನ ಚೀಲ ಕೆದುಕಲಾರಂಭಿಸಿದಳು. ಆದರೆ ರುಕ್ಮಿಣಿಗೆ ತಾನು ಹೇಳಿದ್ದು ಕೇಳಿರಲಿಕ್ಕಿಲ್ಲ ಎಂದೇ ರಾಮಯ್ಯನ ತಲೆಯಲ್ಲಿ.

       ಈಗ ಸಂಪೂರ್ಣ ನಿಶ್ಶಬ್ಧವಾದ ಬಸ್ ನಲ್ಲಿ ಮತ್ತೊಮ್ಮೆ ರಾಮಯ್ಯನ ಕಂಚಿನ ಕಂಠ ಮೊಳಗಿತು. "ಏ ರುಕ್ಮಿಣಿ. ಅಲಕಣೇ. ನೀ ಕಾಚ ಹಾಕ್ಕುಂಡಿದ್ಯನೇ? ಇಲಾ ಗಡಿಬಿಡಿಲ್ ಹಂಗೇ ಬಂದ್ಯಾ? ನೋಡ್ ನೋಡ್"'.

        ಇಡೀ ಬಸ್ಸಿನಲ್ಲಿ ನಗು ಎದ್ದಿತು. ಎಲ್ಲರಿಗೂ ಆಶ್ಚರ್ಯ. 'ಯಾಕೆ ಹೀಗೆ ಪಬ್ಲಿಕ್ಕಲ್ಲಿ ಈ ರೀತಿ ಕಾಚ ಹಾಕಿಕೊಂಡಿದ್ದೀಯ ಅಂತ ಹೆಂಡತೀನ ಕೇಳ್ತಾನೆ ಈ ವ್ಯಕ್ತಿ ಅಂತ'. ಜೊತೆಗೆ ತಡೆಯಲಾರದ ನಗು. ಎಲ್ಲರೂ ನಗುವವರೇ. ಹೆಣ್ಣು ಮಕ್ಕಳಂತೂ ತಲೆತಗ್ಗಿಸಿ ಕಿಸಿಕಿಸಿ ನಗತೊಡಗಿದರು

         ಇತ್ತ ಬಗ್ಗಿ ಚೀಲದಲ್ಲಿ ಅಂಗಡಿಯಲ್ಲಿ ಕೊಂಡ ಕಾಚಾಗಳಿಗೆ ಹುಡುಕುತ್ತಿದ್ದ ರುಕ್ಮಿಣಿಗೆ, ಹಳೆ ಪೇಪರಿನಲ್ಲಿ ಸುತ್ತಿದ್ದ ಆಕೆ ಆಯ್ದುಕೊಂಡ ಕಾಚಾಗಳು ಸಿಕ್ಕಿವೆ. ಎಷ್ಟು ಕಿತ್ತುಮರಚಿದರೂ ರಾಮಯ್ಯ ಕೊಂಡವು ಕಾಣಲಿಲ್ಲ. ಮತ್ತೊಮ್ಮೆ ಹುಡುಕಿ, ಇಲ್ಲದಿರುವುದು ನಿಶ್ಚಯವಾದಮೇಲೆ, ಎದ್ದು ಹಿಂದಕ್ಕೆ ತಿರುಗಿ - "ನಂದ್ ನಾ ಹಾಕ್ಕುಂಡೀನಿ. ನಿಮ್ದ್ ಕಾಚಾ ನೀವೇ ಹಾಕ್ಕುಂಡ್ರಿ. ನಾ ಕಣ್ಣಾರೆ ನೋಡಿದ್ ಗ್ಯಾಪ್ಗ. ಸರೀ ನೋಡ್ರ" - ಅಂತ ಗಟ್ಟಿಯಾಗಿ ಗಂಡನಿಗೆ ಹೇಳಿದಳು.

          ಬಸ್ಸಿನಲ್ಲಿ ಮತ್ತೊಮ್ಮೆ ನಗೆಬುಗ್ಗೆ. ಎಲ್ಲರೂ 'ಹೋ' ಅಂತ ನಗಲಾರಂಭಿಸಿದರು. ಹುಡುಗರಂತೂ - "ಯಾರ್ಯಾರು ಕಾಚ ಹಾಕಿದೀರಿ? ಹಂಗೇ ಬಂದಿದೀರಿ?, ನೀ ಕಾಚ ಹಾಕಿದ್ಯಾ?, ಕಾಚ ಹಾಕ್ದೆದ್ದೋರಿಗೆ ಬಸ್ ಒಳಗೆ ಪ್ರವೇಶ ಇಲ್ಲ, 'ಇದೀಗ ಬಂದ ವಾರ್ತೆ - ನಿಷ್ಮಿತಾ ಬಸ್ ನಲ್ಲಿ ಕಾಚ ಹಾಕದೇ ಜನರ ಪ್ರಯಾಣ" - ಅಂತೆಲ್ಲಾ ಆಡಿಕೊಳ್ಳಲು ಶುರುಹಚ್ಚಿಕೊಂಡವು.

            ಆತ ಆ ಬಸ್ ಡ್ರೈವರ್. ನಡುವಯಸ್ಸಿನ ವ್ಯಕ್ತಿ. ಸದಾ ಗಂಭೀರವದನ. ಆತ ನಕ್ಕಿದ್ದೇ ನೋಡಿದವರು ಕಡಿಮೆ. ಅಂತಹಾ ಡ್ರೈವರ್ - ಮಂಗಳೂರು ತಲುಪವವರೆಗೂ - ಈ ಘಟನೆ ಆಗಾಗ್ಯೆ ಜ್ಞಾಪಿಸಿಕೊಂಡು - ಹಹ್ಹಹ್ಹ ಅಂತ ನಗುತ್ತಿದ್ದನಂತೆ - ಎಂಬುದು ಅತಿಶಯೋಕ್ತಿನೋ ಸತ್ಯನೋ ನೀವೇ ಹೇಳಬೇಕು.

               (ಕಾಮೆಂಟ್ ಗಳಿಗೆ ಸ್ವಾಗತ. ಕಾಮೆಂಟ್ ಗಳು ತಪ್ಪುಗಳಿದ್ದರೆ ತಿದ್ದುವ ಓಷಧಗಳು. ಜೊತೆಗೆ ಹೊಸ ಬರವಣಿಗೆಗಳಿಗೆ ಶಕ್ತಿ ಕೊಡುವ ಟಾನಿಕ್ ಗಳು)