Wednesday, February 24, 2010

ಈ ವಿಚಿತ್ರ ಜೀವಿಗೆ ಚಿನ್ನಕ್ಕಿಂತ ಹೆಚ್ಚು ಬೆಲೆ.

          ಕೆಲವೊಂದು ವಿಷಯಗಳು ಕೆಲವೊಂದು ಕಡೆ ತುಂಬಾ ಸಾಮಾನ್ಯವಾದದ್ದಾಗಿರುತ್ತದೆ. ಆದರೆ ಹೊರಗಿನವರಿಗೆ ಅವು ತುಂಬಾ ಆಶ್ಚರ್ಯದ ವಿಷಯಗಳಾಗಿರುತ್ತವೆ. ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ ಬೆಂಗಳೂರಿನ ಪಾಷ್ ಶಾಪಿಂಗ್ ಮಾಲ್ ನಲ್ಲಿ ಇಂಬಳವೊಂದನ್ನ ಕಲ್ಪಿಸಿಕೊಳ್ಳಿ. ಜನ ಅದನ್ನು ಹೇಗೆ ಕಣ್ಣು ಬಾಯಿ ಬಿಟ್ಟು ನೋಡಬಹುದು? ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಪಟಪಟಾಂತ ಅದರ ಫೋಟೋ ತೆಗೆಯಬಹುದು. ಆದರೆ ಮಲೆನಾಡು ಕರಾವಳಿ ಜನರಿಗೆ? ಮಳೆಗಾಲದಲ್ಲಿ ಮನೆಯಿಂದ ಹೊರಗೆ ಕಾಲಿಟ್ಟರೆ ಹತ್ತುವ ಪೀಡೆ. ಅದೇ ವಿಮಾನದ ಶಬ್ದ ಕೇಳಿದರೆ ಇಲ್ಲಿನ ಹುಡುಗರು ಹೊರಗೆ ಬಂದು ಎಲ್ಲಿದೆಂತ ನೋಡ್ತಾರೆ. ಬೆಂಗಳೂರಲ್ಲಿ ಅದು ಮಾಮೂಲು. ಈ ಪೀಠಿಕೆಯೊಂದಿಗೆ ನಾನು ಹೇಳಲು ಹೊರಟಿದ್ದು ಉತ್ತರ ನೇಪಾಳದ ಕೆಲವು ಊರುಗಳಲ್ಲಿ ಬೇಸಿಗೆಯೊಂದಿಗೆ ಆರಂಬವಾಗುವ ಚಿನ್ನದಷ್ಟೇ ಬೆಲೆಯ ವಸ್ತುವೊಂದರ ಬೇಟೆಯ ನಿಜಕಥೆ.

       ನೇಪಾಳ ಬೆಟ್ಟ ಗುಡ್ಡಗಳ ದೇಶ. ಉತ್ತರ ನೇಪಾಳದ ಬೆಟ್ಟಗಳು ಸಾಕಷ್ಟು ಎತ್ತರವಾಗಿವೆ. ಚಳಿಗಾಲದಲ್ಲಿ ಸಾಕಷ್ಟು ಹಿಮಪಾತವಾಗುತ್ತದೆ. ಬೇಸಿಗೆಯಲ್ಲಿ ಎತ್ತರ ಜಾಗದಲ್ಲಿದ್ದ ಹಿಮಕರಗುತ್ತಿದ್ದಂತೆ ಕೆಳಗಿರುವ ಹಳ್ಳಿಗಳು ಅಕ್ಷರಶಃ ಖಾಲಿಯಾಗುತ್ತವೆ. ಬೆಟ್ಟ ಹತ್ತಲಾಗದ ಅಶಕ್ತ ಮುದುಕರು, ತುಂಬು ಗರ್ಬಿಣಿ ಹಾಗು ಹಸಿ ಬಾಣಂತಿಯರನ್ನು ಬಿಟ್ಟು ಊರಿಗೆ ಊರೇ ಎತ್ತರದ ಪ್ರದೇಶಕ್ಕೆ ಗುಳೆ ಹೊರಡುತ್ತದೆ. ಚಿಕ್ಕ ಮಕ್ಕಳಂತೂ ಬೇಕೇ ಬೇಕು. ಎತ್ತರ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಟೆಂಟ್ಗಳಲ್ಲಿ ಮುಂದಿನ ಎರಡು ಮೂರು ತಿಂಗಳು ಅವರ ಸಂಸಾರಗಳ ವಾಸ. ಮಕ್ಕಳು ಮರಿ ಎಲ್ಲಾ ಕಟ್ಟಿಕೊಂಡು ಊಟನೂ ತೆಗೆದುಕೊಂಡು ಬೆಳಿಗ್ಗೆ ಟೆಂಟ್ ಬಿಟ್ಟು ಹೊರಟರೆಂದರೆ ಬರುವುದು ಸಂಜೆ. ದಿನವಿಡೀ ಹಿಮ ಕರಗಿದ ಹುಲ್ಲಿನಲ್ಲಿ ಇಂಚು ಇಂಚು ಬಿಡದೆ ತಮ್ಮ ಅದೃಷ್ಟವನ್ನು ಹುಡುಕುತ್ತಾರೆ. ಅದೃಷ್ಟ ಚೆನ್ನಾಗಿದ್ದರೆ ಕೈತುಂಬಾ ಸಂಪಾದನೆ. ಒಂದಲ್ಲ ಎರಡಲ್ಲ ಕೆಲವು ಸಾವಿರ ಜನ ಈ ಹುಡುಕಾಟದಲ್ಲಿ ಭಾಗವಹಿಸುತ್ತಾರೆ. (ಎತ್ತರದ ಪ್ರದೇಶಗಳಿಗೆ ಈ ರೀತಿ ಗುಳೆ ಹೋಗಲು ಸರ್ಕಾರದ ಅನುಮತಿ ಮತ್ತು ಪ್ರವೇಶ ಶುಲ್ಕ ಕೊಡಬೇಕು)

       ಅವರು ಹುಡುಕುವುದು ಏನನ್ನು? ಚಿನ್ನದಷ್ಟೇ ಬೆಲೆಬಾಳುವ ಆ ವಸ್ತು ಯಾವುದು? ಇಲ್ಲಿ ಮಕ್ಕಳ ಅತ್ಯಗತ್ಯತೆ ಏನು? ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಅದೊಂದು ಶಿಲೀಂದ್ರ. ಬಡತನದಿಂದ ಕೂಡಿದ ಉತ್ತರ ನೇಪಾಳದ ಅನೇಕ ಊರುಗಳ ಆರ್ಥಿಕತೆಯ ಬೆನ್ನುಮೂಳೆ. ಅದಕ್ಕೆ ಚಿನ್ನದಷ್ಟೇ ಬೆಲೆ. ೩೫೦೦ ಮೀಟರಿಗಿಂತ ಎತ್ತರದಲ್ಲಿ ಮಾತ್ರ ಕಂಡುಬರುವ ಅತಿ ವಿಶಿಷ್ಟ ಶಿಲೀಂದ್ರ. ಅದೇ ‘ಕಂಬಳಿಹುಳು ಶಿಲಿಂದ್ರ’. (Caterpillar fungus; Cordyceps sinensis) ಬಗ್ಗಿ ಹುಡುಕುವಾಗ ಒಣಗಿದ ಹುಲ್ಲು, ಕಲ್ಲಿನ ಮಧ್ಯೆ ಕೇವಲ ೪-೫ ಸೆಂ. ಮೀ. ಉದ್ದದ ಪೆನ್ಸಿಲಿನ ಸೀಸದ ಬಣ್ಣದ, ಸಾದಾರಣ ಪೆನ್ಸಿಲಿನಷ್ಟೇ ದಪ್ಪದ ಆ ಶಿಲಿಂದ್ರದ ತುದಿ ಕಂಡರೆ ಅವರ ಜೋಬಿಗೆ ೨೦೦ ರೂಪಾಯಿ ಸೇರಿದಂತೆ. ನಿದಾನವಾಗಿ ಚಾಕುವಿನಿಂದ ಕಲ್ಲನ್ನೆಲ್ಲ ಬದಿಗೆ ಸರಿಸಿ ಬುಡ ಸಮೇತವಾಗಿ ಬಿಡಿಸಿ ತೆಗೆಯಬೇಕು. ಇಲ್ಲಿ ಮಕ್ಕಳ ಅತ್ಯಗತ್ಯತೆ ನಿಮಗೆ ಗೊತ್ತಾಗಿರಬಹುದು. ಮಕ್ಕಳ ಸೂಕ್ಷ್ಮ ದೃಷ್ಟಿ ಅದನ್ನು ಹುಡುಕಲು ಅಗತ್ಯ. ಅನಂತರ ಅದನ್ನು ಹಳೆ ಬ್ರೆಶ್ನಲ್ಲಿ ನಿಧಾನವಾಗಿ ಉಜ್ಜಿ ಹಿಡಿದ ಮಣ್ಣು ತೆಗೆದು ಚನ್ನಾಗಿ ಕಾಣುವಂತೆ ಮಾಡುತ್ತಾರೆ.

     ಏನದು ಕಂಬಳಿಹುಳು ಶಿಲಿಂದ್ರ? ಅದೊಂದು ಅತಿ ಅಪರೂಪದ ಜೀವಿ. ಪ್ರಕೃತಿಯ ವಿಸ್ಮಯ. ರೋಮವಿಲ್ಲದ ಕಂಬಳಿಹುಳುವಿಗೆ ತಲೆಯಲ್ಲಿ ಉದ್ದದ ಒಂದೇ ಕೊಂಬು ಇದ್ದಾರೆ ಹೇಗಿರುತ್ತೋ ಹಾಗಿರುತ್ತೆ. ಈ ಶಿಲಿಂದ್ರದ ಬೆಳವಣಿಗೆಯೇ ಒಂದು ವಿಚಿತ್ರ. ಬೇರೆಲ್ಲಾ ಶಿಲಿಂದ್ರದಂತೆಯೇ ಇದರ ಕಣ (spores)ಗಳು ಅಲ್ಲಲ್ಲಿ ಹರಡಿ ಚೆಲ್ಲಿರುತ್ತವೆ. ಬೇಸಿಗೆ ಶುರುವಾಗಿ ಹಿಮ ಕರಗಿದಂತೆ ಈ ಶಿಲಿಂದ್ರದ ಕಣಗಳು ಹಿಮಾಲಯದಲ್ಲಿ ಕಾಣಸಿಗುವ ಒಂದು ಜಾತಿಯ ನೊಣದ ಲಾರ್ವಾಗಳ ಚರ್ಮದ ಮೇಲೆ ಬಿದ್ದು ಬೆಳೆಯಲಾರಂಬಿಸುತ್ತವೆ. ಅದು ಮೈ ಮೇಲೆ ಬೆಳೆಯುತ್ತಾ ಹೋದಂತೆ ಈ ಲಾರ್ವ ಅಂದರೆ ಕಂಬಳಿಹುಳ ನಿದಾನವಾಗಿ ಸಾಯಲಾರಂಬಿಸುತ್ತದೆ. ಪಾಪ ಅದಕ್ಕೆಷ್ಟು ನೋವಾಗಬೇಡ? ತನ್ನ ಆಶ್ರಯದಾತ ಕಂಬಳಿಹುಳುವಿನ ದೇಹದ ಅಂಗಾಂಗಗಳನ್ನೆಲ್ಲಾ ತಿಂದು ಮುಗಿಸಿದ ಮೇಲೆ ಈ ಶಿಲೀಂದ್ರ ಉದ್ದದ ಕೊಂಬಿನಂತೆ ಹುಳುವಿನ ತಲೆಯ ಬದಿಯಿಂದ ಹೊರಗೆ ಹೊರಟು ೪-೫ ಸೆಂ. ಮೀ. ಎತ್ತರಕ್ಕೆ ಬೆಳೆದು ನಿಲ್ಲುತ್ತದೆ. ಕಂಬಳಿಹುಳದ ಅಂಗಾಂಗದ ಜಾಗದಲ್ಲಿ ಶಿಲೀಂದ್ರದ ಹೈಫೆ ತುಂಬಿಕೊಂಡಿರುತ್ತದೆ. ಹೊರ ಮೈ ಮಾತ್ರ ಕಂಬಳಿಹುಳದ್ದು. ಎಷ್ಟು ವಿಚಿತ್ರ?

    ಸರಿ. ಅದಕ್ಯಾಕೆ ಚಿನ್ನದ ಬೆಲೆ? ಅದರಿಂದೆನಾದರು ಜೀವರಕ್ಷಕ ಔಷಧಿ ಮಾಡುತ್ತಾರಾ?
ನಿಮ್ಮೆಣಿಕೆ ತಪ್ಪು. ಅದಕ್ಕೆ ಬೇಡಿಕೆ ಇರುವುದು ಹಿಮಾಲಯದಿಂದ ದೂರದ ಶಾಂಘೈ, ಹಾಂಗ್ ಕಾಂಗ್, ತೈವಾನ್. ಸಿಂಗಾಪುರಗಳಲ್ಲಿ. ಇವಕ್ಕೆ ನೇಪಾಳದಲ್ಲಿ ೪ ಲಕ್ಷ ರೂ ಇದ್ದರೆ ಈ ನಗರಗಳಲ್ಲಿ ಕೆಜಿಗೆ ೨೦ ಲಕ್ಷ ರೂ ಗು ಹೆಚ್ಚು!! (ಇತ್ತೀಚಿಗೆ ಕೊಳ್ಳುಗರು ಮೆಟಲ್ ಡಿಟೆಕ್ಟರ್ ಉಪಯೋಗಿಸಿ ತಂತಿ ತುಂಡು ಸೇರಿಸಿದ್ದಾರಾ ಎಂದು ಪರೀಕ್ಷಿಸಿ ಕೊಳ್ಳುತ್ತಾರಂತೆ). ಪಾರಂಪರಿಕ ಚೀನಾ ವೈದ್ಯಕೀಯ ಪದ್ದತಿಯಲ್ಲಿ ಅನೇಕ ರೋಗಗಳಿಗೆ ಈ ವಿಚಿತ್ರ ಶಿಲೀಂದ್ರ ರಾಮಬಾಣ - ಹೃದಯ,ಕಿಡ್ನಿ ಕಾಯಿಲೆಗಳು,ಅಸ್ತಮಾ.ಮೂಲವ್ಯಾಧಿ,ಕ್ಷಯ, ಎಲ್ಲದಕ್ಕಿಂತ ಹೆಚ್ಹಾಗಿ ಲೈಂಗಿಕ ದೌರ್ಬಲ್ಯ. (ಪುರುಷತ್ವದ ವಿಷಯ ಬಂದಾಗ ಹಣ ಹುಲ್ಲಿಗೆ ಸಮಾನ !!!) ಅತಿ ಬೆಲೆ ಬಾಳುವ ಈ ಶಿಲೀಂದ್ರದ ಸೂಪ್ , ಮಾಂಸದ ಅಡಿಗೆ ಮುಕ್ಕುವುದು ಚೀನಾದ “ಹೊಸ ಶ್ರೀಮಂತರಿಗೆ” ಬಲು ಹೆಮ್ಮೆಯ ವಿಷಯ!! ಈ ದಶಕದಲ್ಲಿ ಚೀನಾದ ಆರ್ಥಿಕತೆ ರಾಕೆಟಿನಂತೆ ಮೇಲೆ ಹೋಗಿರುವುದೇ ಈ ಶಿಲೀಂದ್ರಕ್ಕೆ ಇನ್ನಿಲ್ಲದ ಬೆಲೆ ಬಂದಿರುವುದು ಕಾರಣ.(ಈ ಶಿಲೀಂದ್ರದಲ್ಲಿ ನಿಜವಾಗಿಯೂ ಎಲ್ಲಾ ಕಾಯಿಲೆಗಳಿಗೂ ಅನುಕೂಲವಾಗುವ ಯಾವುದಾದರೂ ಅಣುಗಳಿದ್ದಾವೆಯೇ ಎಂದು ಔಷದಿ ಕಂಪನಿಗಳು ಇನ್ನೂ ಹುಡುಕುತ್ತಿದ್ದಾವೆ. ಆದರೆ ಇಲ್ಲಿಯವರೆಗೂ ಹೊಸದೇನೂ ಸಿಕ್ಕಿಲ್ಲ.)

  ಈ ಲೇಖನ ಬರೆದು ಮುಗಿಸುತ್ತಿದ್ದಂತೆ ಮೊನ್ನಿನ ಪ್ರಜಾವಾಣಿಯಲ್ಲಿ ಇದರ ಬಗ್ಗೆ ಒಂದು ಸುದ್ದಿ ಓದಿ ನಗು ಬಂತು.ಪಿ.ಟಿ.ಐ.ಸುದ್ದಿ. ಶೀರ್ಷಿಕೆ – “ಪರ್ಯಾಯ ವೈಯಾಗ್ರಗಳ ಅಕ್ರಮ ಜಾಲ” . ಈ ವರದಿಗಾರನ ಪ್ರಕಾರ “ಯಾರ್ಷ ಗೊಂಬಾ” (ನೇಪಾಳಿ ಭಾಷೆಯಲ್ಲಿ ಕಂಬಳಿಹುಳು ಶಿಲೀಂದ್ರ) ಅಂದರೆ “ಹಸಿ ಶುಂಟಿ ಮಾದರಿಯ ಸಣ್ಣ ಸಣ್ಣ ಬೇರಿನ ತುಂಡುಗಳು” !!! ಅಜ್ಞಾನ ಎಲ್ಲಿ ನುಸುಳಿರಬಹುದು? ಬಹುಶಃ “ಸರ್ವಜ್ಞ” ವರದಿಗಾರನಿಂದಾಗಿರಬಹುದು.
ಈ ವಿಚಿತ್ರ ಶಿಲೀಂದ್ರದ ಬಗ್ಗೆ ಈ ಹಿಂದೆ ನಿಮಗೆ ಗೊತ್ತಿತ್ತೇ? ಅಥವಾ ನಿಮಗೂ ಇದೊಂದು ಹೊಸ ವಿಷಯವೇ? ತಿಳಿಸಿ.         

  

Monday, February 15, 2010

Blogger.com ಕ್ಲಿಕ್ಕಿಸದೆ ಹೊಸ ಬ್ಲಾಗ್ ಪ್ರಕಟಿಸುವ ಬಗೆ.


ಈ ವಿಷಯ ನಿಮಗೆ ಗೊತ್ತಿದ್ದರೂ ಗೊತ್ತಿರಬಹುದು. ನಾನು ಇದನ್ನುಆಕಸ್ಮಿಕವಾಗಿ ಕಂಡುಕೊಂಡು ಮೊದಲ ಬಾರಿಗೆ ಪ್ರಯೋಗಿಸುತ್ತಿದ್ದೇನೆ. ಆ ಪ್ರಯೋಗವೇ ಈ ಬರಹ.
ಹೌದು. Internet Explorer ತೆರೆಯದೆ, blogger.com ಎಂದು ಕ್ಲಿಕ್ಕಿಸದೆ ನಾನು ಈ ಹೊಸ ಬ್ಲಾಗ್ ಪ್ರಕಟಿಸುತ್ತಿದ್ದೇನೆ.

 ನಾನು ಮೊದಲ ಬ್ಲಾಗ್ ಪೋಸ್ಟ್ ಬರೆದ ಬಗೆ ಇನ್ನೂ ಜ್ಞಾಪಕದಲ್ಲಿದೆ.(ಇತ್ತೀಚೆಗಷ್ಟೇ ಶುರುಮಾಡಿದ್ದರಿಂದ ಮರೆಯಲು ಹೇಗೆ ಸಾದ್ಯ?) Blogger .com ಹೋಗಿ ಸೈನ್ ಇನ್ ಆಗಿ, ನ್ಯೂ ಪೋಸ್ಟ್ ಮೇಲೆ ಕ್ಲಿಕ್ಕಿಸಿ ಅದರಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಂಡು ಅನಂತರ ಬರೆಯಬೇಕಿತ್ತು. ನಾನಂತೂ ಒಂದು ಲೇಖನವನ್ನು ಒಮ್ಮೆಗೇ ಯಾವತ್ತೂ ಬರೆದವನಲ್ಲ. ಪುರುಸೊತ್ತಾದಾಗೆಲ್ಲ ನಾಲ್ಕೈದು ಸಾಲು ಬರೆದು ಎಂಟತ್ತು ದಿನಕ್ಕೆ ಪೂರೈಸಿ ಇನ್ಯಾವುದೋ ಒಂದು ದಿನ ಪ್ರಕಟಿಸುವವನು. ಪ್ರತೀ ಬಾರಿ ಆನ್ಲೈನ್ನಲ್ಲಿ ಸ್ವಲ್ಪ ಸ್ವಲ್ಪ ಬರೆದು ಸೇವ್ ಮಾಡಿ ಕೊನೆಗೊಮ್ಮೆ ಪ್ರಕಟಿಸುತ್ತಿದ್ದೆ.

 ಈ ಸಮಸ್ಯೆ ಕಡಿಮೆ ಮಾಡಿದ್ದು ಗೂಗಲ್ transliteration.( http://www.google.com/ime/transliteration/) ಅದನ್ನು ನಮ್ಮ ಕಂಪ್ಯೂಟರಿಗೆ ಜಾಲದಿಂದ ಇಳಿಸಿಕೊಂಡು ಆಫ್ ಲೈನಲ್ಲಿ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಕನ್ನಡದಲ್ಲಿ ಟೈಪ್ ಮಾಡಬಹುದು.(ಚಾಟ್ ಬಾಕ್ಸ್ ನಲ್ಲೂ ಕನ್ನಡ ಮೂಡಿಸುವುದು ನಮ್ಮ ಕೆಲ ಸ್ನೇಹಿತರಿಗೆ, ನೆಂಟರಿಗೆ ಆಶ್ಚರ್ಯ. ಅದು ಹೇಗೆ-ಎಂದು ಕೇಳುವುದಿದೆ). ಇದನ್ನು ಉಪಯೋಗಿಸಿಕೊಂಡು MS Word ನಲ್ಲಿ ಪುರುಸೊತ್ತಾದಾಗೆಲ್ಲ ಬ್ಲಾಗನ್ನು ಬರೆದು ಮುಗಿದ ಮೇಲೆ ಯಾವತ್ತೋ ಒಂದು ದಿನ ಆನ್ ಲೈನ್ ಇದ್ದಾಗ Blogger.com ಗೆ ಹೋಗಿ ಸೈನ್ ಇನ್ ಮಾಡಿ ನ್ಯೂ ಪೋಸ್ಟ್ ಕ್ಲಿಕ್ ಮಾಡಿ MS Word ಇಂದ ಲೇಖನವನ್ನು ಕಟ್ & ಪೇಸ್ಟ್ ಮಾಡಲಾರಂಭಿಸಿದೆ.

 ಆದರೆ ಈಗ ಆಕಸ್ಮಿಕವಾಗಿ ಬ್ಲಾಗ್ ಪ್ರಕಟಿಸುವ ಹೊಸ ವಿದಾನ ಕಂಡುಕೊಂಡೆ. ಏಮ್.ಎಸ್ ಆಫಿಸ್ ೨೦೦೭ ಇದ್ದವರು ಈ ವಿದಾನ ಬಳಸಬಹುದು. MS Word ತೆರೆದು ನ್ಯೂ ಕ್ಲಿಕ್ ಮಾಡಿ ನ್ಯೂ ಬ್ಲಾಗ್ ಪೋಸ್ಟ್ ಕ್ಲಿಕ್ ಮಾಡಬೇಕು.ಮೊದಲ ಬಾರಿ ಉಪಯೋಗಿಸುವಾಗ ಇಂಟರ್ನೆಟ್ ಆನ್ ಮಾಡಿಕೊಂಡು MS Word ನಲ್ಲಿ ನಮ್ಮ ಬ್ಲಾಗ್ ನೀಡುಗರ ಹೆಸರು, ನಮ್ಮ ಬ್ಲಾಗರ್ ಯುಸರ್ ನೇಮ್, ಪಾಸ್ ವರ್ಡ್, ನೀಡಿ ಒಂದು ಅಕೌಂಟ್ ಕ್ರಿಯೇಟ್ ಮಾಡಬೇಕು. MS Word ಅದನ್ನು ವೇರಿಫೈ ಮಾಡುತ್ತದೆ. ಅನಂತರ ಆಫ್ ಲೈನ್ ಮಾಡಿಕೊಂಡು ಪುರುಸೊತ್ತಾದಾಗೆಲ್ಲ ಬ್ಲಾಗ್ ಲೇಖನ ಬರೆಯುತ್ತಿರಬಹುದು. ಅದು MS Word ನಲ್ಲಿ ಬ್ಲಾಗ್ ಪೋಸ್ಟ್ ಆಗಿ ನಾವು ಕೊಟ್ಟ ಹೆಸರಿನಲ್ಲಿ ಸೇವ್ ಆಗುತ್ತಿರುತ್ತದೆ. ಲೇಖನ ಮುಗಿದಮೇಲೆ ಆನ್ ಲೈನ್ನಲ್ಲಿ ಇದ್ದಾಗ ಪಬ್ಲಿಶ್ ಬಟನ್ ಕ್ಲಿಕ್ ಮಾಡಿದರೆ ಸರಿ. Internet Explorer ತೆರೆಯುವುದೂ ಬೇಡ. ಬ್ಲಾಗರ್ ಕ್ಲಿಕ್ಕಿಸುವುದೂ ಬೇಡ. ಆ ಲೇಖನ ನಮ್ಮ ಬ್ಲಾಗಲ್ಲಿ ಮೂಡಿರುತ್ತದೆ. ಅದಕ್ಕೆ ಈ ಲೇಖನವೇ ಉದಾಹರಣೆ.

ಇದೇ ರೀತಿ Internet Explorer ತೆರೆಯದೆ, google/yahoo ಕ್ಲಿಕ್ ಮಾಡದೆ ನಮ್ಮ ಕಂಪ್ಯೂಟರ್ನಲ್ಲಿ ಇರುವ MS Office Outlook ಉಪಯೋಗಿಸಿ ಇಮೇಲ್ ಕಳಿಸಬಹುದು.(ನಾನು ಮೇಲ್ ಕಳಿಸಲು ಇದೇ ರೀತಿ ಉಪಯೋಗಿಸುವುದು) ಅನೇಕ ಜನ ಹವ್ಯಾಸಿ ಕಂಪ್ಯೂಟರ್ ಬಳಕೆದಾರರು ಈ ವಿಷಯ ತಿಳಿದಿರುವುದಿಲ್ಲ.


ಬ್ಲಾಗನ್ನು ಮೇಲೆ ತಿಳಿಸಿದಂತೆ ಬರೆದು ಪ್ರಕಟಿಸುವ ವಿದಾನ ನಿಮಗೆ ಗೊತ್ತಿತ್ತೆ? ಅಥವಾ ನನಗೆ ಮಾತ್ರ ಇತ್ತೀಚೆಗೆ ಗೊತ್ತಾಗಿದ್ದ?

Wednesday, February 10, 2010

ನನ್ನ Orkut ಪ್ರೊಫೈಲ್ ಕನ್ನ ಕೊರಕರ ದಾಳಿಗೆ ಗುರಿಯಾದ ಕಥೆ.

ಬೆಕ್ಕಿನಮರಿಯ ಕುತೂಹಲದಿಂದಾಗಿ ಇತ್ತೀಚಿಗೆ ನನ್ನ ಆರ್ಕುಟ್ ಪ್ರೊಫೈಲ್ ಕನ್ನಕೊರಕರ ದಾಳಿಗೆ ಗುರಿಯಾಯಿತು. ಆ ಕನ್ನಕೊರಕರಿಗೆ ಕೋಟೆಯ ಹೆಬ್ಬಾಗಿಲಿನ ಬೀಗ ತೋರಿಸಿ ಕೀಲಿ ಕೈಯೆತ್ತಿ ಕೊಟ್ಟವರು ನಾವೇ ಅನ್ನುವುದು ನೂರಕ್ಕೆ ನೂರು ಸತ್ಯ. ನಾವು ಹೇಗೆ ಮಂಗಗಳು ಆದೆವೆಂಬುದನ್ನು ಮುಂದೆ ಓದಿ.

ಹಿಂದೊಮ್ಮೆ ಸರಿಯಾಗಿ ಏಟು ತಿಂದ ಮೇಲೆ ಜಾಲ ತಾಣ ಕ್ಲಿಕ್ ಮಾಡುವ ವಿಷಯದಲ್ಲಿ ನಾನು ತುಂಬಾ ಎಚ್ಚರವಾಗಿರುತ್ತೇನೆ. ಇಂಟರ್ನೆಟ್ ಹಾಗು ಕಂಪ್ಯೂಟರ್ ಬಂದ ಹೊಸತರಲ್ಲಿ ಏನೇನೋ ಹುಡುಕಿ ಯಾವುದೋ ವೆಬ್ ಸೈಟ್ಗೆ ಹೋಗಿ ಅವಾಂತರ ಪಟ್ಟಿದ್ದೆ.(ಹಾವು ಬಿಡುವವರು ಅವರೇ ದುಡ್ಡಿಗೆ ಹಾವು ಹಿಡಿಯುವವರೂ ಅವರೇ – ಎಂಬ ಮಾತಿನ ಸಾಕ್ಷಾತ್ ಅನುಭವವಾಗಿತ್ತು.) ಡೈಲ್ ಅಪ್ ಇಂಟರ್ನೆಟ್ ನಲ್ಲೇ ತುಂಬಾ ಹಾನಿಯಾಗಿತ್ತು. ಕಂಪ್ಯೂಟರ್ ರಿ ಫಾರ್ಮೆಟ್ ಮಾಡಬೇಕಾಯಿತು. ಆಗ ಡಿಜಿಟಲ್ ಕ್ಯಾಮೆರಾ ಇರಲಿಲ್ಲವಾದ್ದರಿಂದ ಕೆಲವೊಂದು ಹಾಡುಗಳನ್ನ ಬಿಟ್ಟರೆ ಹೆಚ್ಹೇನನ್ನು ಕಳೆದುಕೊಂಡಿರಲಿಲ್ಲ. ಒಮ್ಮೆ ಹಾಗೆ ಆದಮೇಲೆ ಮತ್ತೆ ಹಾಗೆಂದೂ ಆಗಿರಲಿಲ್ಲ. ಆನ್ ಲೈನ್ ವಹಿವಾಟುಗಳನ್ನು ಮಾಡುತ್ತಿದ್ದರೂ ಏನೂ ಆಗಿರಲಿಲ್ಲ.

ಆದರೆ ಮೊನ್ನೆ ಮಾತ್ರ ಆರ್ಕುಟ್ನಲ್ಲಿ ಏನಾಯಿತೆಂದರೆ —

ಅರವತ್ತಕ್ಕಿಂತ ಹೆಚ್ಚು ವಯಸ್ಸಾದ, ದೊಡ್ಡ ಶಾಲೆಯೊಂದರ ನಿರ್ದೇಶಕರಾದ, ಜ್ಯೋತಿಷ್ಯ ವಿಶಾರದರಾದ, ನನ್ನ ಕಸಿನ್ ಹೆಂಡತಿಯ ನೆಂಟರಾದ, ದೊಡ್ಡ ಫೋಟೋಗ್ರಾಫರ್ ಆದ ನನ್ನ ಆರ್ಕುಟ್ ಸ್ನೇಹಿತರೊಬ್ಬರ (ನನ್ನ ಹೋಂ ಪೇಜ್ನಲ್ಲಿ ಕಂಡ) ಅಪ್ ಡೆಟ್ ನ ಲಿಂಕ್ ಒಂದರ ಮೇಲೆ ಬೆಕ್ಕಿನ ಮರಿಯ ಕುತೂಹಲದಿಂದ ಕ್ಲಿಕ್ ಮಾಡಿದೆ.(ಅವರು ವಿನೋದಕ್ಕೆ ಆ ಸೈಟಿನ ಲಿಂಕ್ ಅಪ್ ಡೆಟ್ ಮಾಡಿಕೊಂದಿದ್ದರೆನೋ. ಬೇರೆ ಹುಡುಗ ಬುದ್ದಿಯವರು ಆ ವೆಬ್ ಸೈಟ್ ಲಿಂಕ್ ಅಪ್ ಡೆಟ್ ಮಾಡಿದ್ದರೆ ಕಣ್ಣೆತ್ತಿಯೂ ನೋಡುತ್ತುರಲಿಲ್ಲ.) ಅಷ್ಟು ಮಾಡಿದ್ದೆ ತಡ ಆರ್ಕುಟ್ ಹೋಂ ಪೇಜ್ ಪ್ರತ್ಯಕ್ಷವಾಯಿತು. ಕೆಲವೊಮ್ಮೆ ಬೇರೆ ಟ್ಯಾಬ್ ನಲ್ಲಿ ಗೂಗಲ್ ನವರ ಇತರ ಸೇವೆಗಳು ಅಂದರೆ ಬ್ಲಾಗರ್, ಜಿ ಮೇಲ್ ಕೆಲಸ ಮಾಡುತ್ತಿದ್ದು ಅಲ್ಲಿ ನಾವು ಸೈನ್ ಔಟ್ ಮಾಡಿ ಆರ್ಕುಟ್ ನ ನಮ್ಮ ಪೇಜ್ ಮೇಲೆ ಏನಾದರೂ ಕ್ಲಿಕ್ ಮಾಡಿದಾಗ ಅಲ್ಲೂ ಹಾಗೇ ಆಗಿ ಆರ್ಕುಟ್ ಹೋಂ ಪೇಜ್ ಬರುತ್ತಿತ್ತು. ನಾವು ಮತ್ತೊಮ್ಮೆ ನಮ್ಮ ಯುಸರ್ ನೇಮ್ ಪಾಸ್ ವರ್ಡ್ ಕೊಟ್ಟು ಮತ್ತೊಮ್ಮೆ ಲಾಗಿನ್ ಆಗಬೇಕಿತ್ತು. ಹಾಗೇನೂ ಆಯಿತೇನೋ ಎಂದು ತಿಳಿದು ಪ್ರತ್ಯಕ್ಷವಾದ ಆರ್ಕುಟ್ ಹೋಂ ಪೇಜ್ ನಲ್ಲಿ ನನ್ನ ಯುಸರ್ ನೇಮ್, ಪಾಸ್ ವರ್ಡ್ ಕೊಟ್ಟು ಎಂಟರ್ ಒತ್ತಿ ನನ್ನ ಪೇಜ್ ತೆರೆಯುವುದೇ ಕಾಯುತ್ತಿದ್ದೆ. ತೆರೆಯದಿದ್ದಾಗ ಅನುಮಾನ ಬಂದು ಆ ಸೈಟನ್ನು ಕ್ಲೋಸ್ ಮಾಡಿ ಲ್ಯಾಪ್ ಟಾಪ್ ಆಫ್ ಮಾಡಿದೆ. ಅಷ್ಟರಲ್ಲಾಗಲೇ ಬೀಗ ಮತ್ತು ಬೀಗದ ಕೈ ಕನ್ನಕೊರಕರ ಕೈ ಸೇರಿಯಾಗಿದೆ.

ನಾನು ಮೊನ್ನೆ ರಾತ್ರಿ ಮನೆ ಸೇರುತ್ತಿದ್ದಂತೆಯೇ ಹೆಂಡತಿ ಮೊದಲು ಹೇಳಿದ ವಿಷಯ ಇಂಜಿನಿಯರ್ ಓದುತ್ತಿರುವ ನನ್ನ ಅಕ್ಕನ (ಕಸಿನ್) ಮಗ ನಮ್ಮನೆಗೆ ಫೋನ್ ಮಾಡಿ ನನ್ನ ಪ್ರೊಫೈಲ್ ಹ್ಯಾಕ್ ಆಗಿದೆಯೆಂದು ಹೇಳಿದ್ದು. ಸಾದಾರಣ ಉಟವಾದಮೇಲೆ ನೆಟ್ ತೆರೆಯುವವನು ಅಂದು ಕೂಡಲೇ ಕನೆಕ್ಟ್ ಮಾಡಿ ನನ್ನ ಆರ್ಕುಟ್ ಪೇಜ್ ನೋಡ್ತೀನಿ. ಏನಿದೆ ಅಲ್ಲಿ? ನನ್ನ ಫೋಟೋ ಬದಲು ಜೀನ್ಸ್ – ಟಿ ಶರ್ಟ್ ಧಾರಿ ನಗುಮೊಗದ ಚೆಲುವೆಯ ಚಿತ್ರ!! ಹೆಸರೂ ತುಂಬ ರಮ್ಯ."Call girl for sex"-ಅಂತ. (ಅಷ್ಟರಲ್ಲಾಗಲೇ ಕೊಂಗನೊಬ್ಬನ ಫ್ರೆಂಡ್ ರಿಕ್ವೆಸ್ಟ್ ಬೇರೆ!!) ಹ್ಯಾಕ್ ಆಗಿದೆಯೆಂದು ನನ್ನ ಕೆಲವು ಮಿತ್ರರ ಹೇಳಿಕೆಗಳು. ಕೂಡಲೇ ಆನ್ ಲೈನಲ್ಲಿ ಕಾಣಿಸಿಕೊಂಡ ಒಂದಿಬ್ಬರು ಮಿತ್ರರು ಹ್ಯಾಗಾಯಿತೆಂಬ ಪ್ರಶ್ನೆ. ಒಮ್ಮೆಲೇ ಜೋರು ನಗುಬಂತು. ಸದ್ಯ ೫-೬ ಘಂಟೆ ಮಾತ್ರ ಆಗಿದ್ದದರಿಂದ ಹೆಚ್ಚಿನ ಜನ ನೋಡಿರಲಿಲ್ಲ.
 ಹತ್ತು ನಿಮಿಷದಲ್ಲೇ ಎಲ್ಲಾ ಸರಿಮಾಡಿಕೊಂಡೆ. ನಾನು ಏನೇನು ಮಾಡಿದೆನೆಂದು ಹೇಳುತ್ತೇನೆ. ನಾಳೆ ನಿಮ್ಮ ಪ್ರೋಫೈಲೂ ಹ್ಯಾಕ್ ಆಗಬಹುದು. ನೀವೂ ಹೀಗೇ ಮಾಡಿಕೊಳ್ಳಬಹುದು.
-ಆರ್ಕುಟ್ ನಿಂದ ಸೈನ್ ಔಟ್ ಮಾಡಿ ಗೂಗಲ್ ಅಕೌಂಟ್ಗೆ ಹೋಗಿ ಸೈನ್ ಇನ್ ಮಾಡಿದೆ.
-ಪಾಸ್ ವರ್ಡ್ ಚೇಂಜ್ ಕ್ಲಿಕ್ ಮಾಡಿ ಹೊಸ ಪಾಸ್ ವರ್ಡ್ ಪಡೆದೆ.
-ಈಗ ಮತ್ತೆ ಹೊಸ ಪಾಸ್ ವರ್ಡ್ ನಿಂದ ಆರ್ಕುಟ್ ಲಾಗ್ ಇನ್ ಆಗಿ ಪ್ರೊಫೈಲನ್ನು ಹೊಸದಾಗಿ ಎಡಿಟ್ ಮಾಡಿ ಹಾರ್ಡ್ ಡಿಸ್ಕ್ ನಿಂದ ನನ್ನ ಫೋಟೋ ಅಪ್ ಲೋಡ್ ಮಾಡಿಕೊಂಡೆ. ಸ್ನೇಹಿತರಿಗೆಲ್ಲ ಸುದ್ದಿ ಮುಟ್ಟಿಸಿದ್ದಕ್ಕೆ ಧನ್ಯವಾದ ಹೇಳಿದೆ.
-ಹ್ಯಾಕರ್ ನನ್ನನ್ನು ಸೇರಿಸಿದ ಯಾವ್ಯಾವುದೋ ಕಮ್ಯೂನಿಟಿಯಿಂದ ಹೊರಬಂದೆ.

ಇಲ್ಲಿ ನಾನು (ನಾವು) ತಪ್ಪದೇ ಧನ್ಯವಾದ ಹೇಳಬೇಕಾಗಿರುವುದು ಆ ಪುಣ್ಯಾತ್ಮ ಹ್ಯಾಕರ್ ನಿಗೆ!!!! ನಿಜಕ್ಕೂ ಪುಣ್ಯಾತ್ಮ. ಆತ ಏನು ಬೇಕಾದರೂ ಮಾಡಬಹುದಿತ್ತು. ಬ್ಲಾಗುಗಳನ್ನ, ಮೇಲ್ಗಳನ್ನ ಹಾಗೂ ಪಿಕಾಸದಲ್ಲಿದ್ದ ಅನೇಕ ನೂರು ಫೋಟೋಗಳನ್ನ ಅಳಿಸಿ ಹಾಕಬಹುದಿತ್ತು. ಆದರೆ ಹಾಗಾಗಿರಲಿಲ್ಲ.

ನೀವೂ ಹ್ಯಾಕರ್ ದಾಳಿ ಅನುಭವ ಪಡೆಯಬೇಕೇ? ಅಥವಾ ನಿಮ್ಮ ಸ್ನೇಹಿತರಿಗೆ ಆ ಅನುಭವ ಕೊಡಬೇಕೇ?

  

Monday, February 1, 2010

ಮಲೆನಾಡಿನ ಮದ್ಯದಿಂದ (ವಿನೋದ ಪ್ರಸಂಗಗಳು) - 3

ಬೆಳಿಗ್ಗೆ ಮುಂಚೆ ಸವಿ ನಿದ್ದೆಯಿಂದ ಎದ್ದು ಬರುತ್ತಿದ್ದಂತೆ ಬಸವನ ಆಡಿಸುವವನ ವಾಲಗದ ‘ಪೆ-ಪೆ-ಪ್ಯಾ’ ಶಬ್ದ, ಕಟ್ಟಿಹಾಕಿದ ದೊಡ್ಡ ದನಿಯ ನಾಯಿಗಳ ಬೊಗಳುವಿಕೆಯ ಪ್ರತ್ಯುತ್ತರ-ಕೇಳಿದಾಗ ಬಾಲಭಟ್ರಿಗೆ ಹ್ಯಾಗಾಗಿರಬೇಡ? ಅದಕ್ಕಿಂತ ಹೆಚ್ಹಾಗಿ ಬಸವನ ಆಡಿಸುವವನು “ನಿವ್ ಸುಮ್ನಿರಿ, ಹೋಗಿ. ನಿಮ್ಮಣ್ಣನ ಕರೀರಿ” ಅಂದಾಗ ಎಷ್ಟು ಸಿಟ್ಟು ಬಂದಿರಬೇಡ? ಬನ್ನಿ, ಮೊದಲಿಂದ ಓದಿ.


ರಮೇಶರಾಯರು ನಮ್ಮ ಪಕ್ಕದ ಊರಿನ ವ್ಯವಸಾಯಗಾರರು. ಒಳ್ಳೆಯ ಮನುಷ್ಯ. ನೋಡಲು ತುಂಬಾ ಗಂಭೀರರಾಗಿ ಕಾಣುತ್ತಾರೆ. ಆದರೆ ವಿನೋದ ಪ್ರವೃತ್ತಿಯ ಮನುಷ್ಯ. (ಅವರ ಬಗ್ಗೆ ನನ್ನ ಹಿಂದಿನ ಬ್ಲಾಗಿನಲ್ಲಿ ಓದಿ). ಒಮ್ಮೆ ಬೈಕ್ ನಲ್ಲಿ ರಮೇಶರಾಯರು ಕೊಪ್ಪಕ್ಕೆ ಹೋಗುತ್ತಿರುವಾಗ ಕುಂಚೂರು ಘಾಟಿಲಿ ಒಬ್ಬ ಬಸವನ ಆಡಿಸುವವನು ಎತ್ತಿನ ಜೊತೆ ಹೋಗುತ್ತಿದ್ದುದ್ದನ್ನು ಕಂಡು ಬೈಕನ್ನು ಗಕ್ಕನೆ ನಿಲ್ಲಿಸಿದರು.


“ಪುಣ್ಯಾತ್ಮ ಮಹಾರಾಯ. ಅಂತೂ ಸಿಕ್ಕಿದಿಯಲ್ಲ. ಒಬ್ಬ ಬಸವನ ಆಡಿಸುವವನು ಕಾಣದೆ ಎಷ್ಟ್ ದಿನ ಆಗಿತ್ತು. ದೇವರ ದಯೆ. ಇಲ್ಲಾಂತೊಂದ್ ಹೇಳ್ಬೇಡ “-ಅಂತ ರಾಯರು ಹೇಳಿದಾಗ ಬಸವನ ಆಡಿಸುವವನು ಕಕ್ಕಾಬಿಕ್ಕಿಯಾಗಿ ಕೇಳಿದ-“ಏನ್ ಹೇಳಿ ಸ್ವಾಮಿ? “. ಅದಕ್ಕೆ ರಾಯರು “ನಮ್ಮಮ್ಮ ಒಂದ್ ಹರಕೆ ಬಸವನ ಆಟ ಆಡಿಸ್ತೀನಿ ಅಂತಾ ಹೇಳ್ಕಂಡಿದ್ಲಂತೆ ಕಣಯ್ಯಾ.ಎಷ್ಟೋ ವರ್ಷದ್ ಕೆಳಗೆ ನನ್ನ್ ಮಗಳಿಗೆ ವಾಂತಿ ಬೇದಿ ಆದಾಗ್ ಹೇಳ್ಕಂಡಿದ್ದಂತೆ. ಮರ್ತೆ ಹೋಗಿತ್ ನೋಡ್. ಹೋದ್ ತಿಂಗ್ಳು ಮಗಳಿಗೆ ಟೈಫೈಡ್ ಆದಾಗ್ ಮತ್ ಜ್ಞಾಪಕ ಮಾಡ್ಕೊಂಡು ಹೇಳಿದ್ಲು. ಒಂದ್ ಹರಕೆ ಬಸವನಾಟ ಆಗ್ಬೇಕ್. ಯಾವತ್ ಬರ್ತಿ ಹೇಳ್ “ ಎಂದು ದಪ್ಪ ದನಿಯಲ್ಲಿ ನಿಧಾನವಾಗಿ ಹೇಳಿದರು.


ಬಸವನಾಡಿಸುವವನಿಗೆ ಖುಷಿಯೋ ಖುಷಿ. “ಆಯ್ತು ಸ್ವಾಮಿ. ಅದಕ್ಕೇನ್. ನಿಮ್ಮನೆ ಎಲ್ಲಿ ಹೇಳಿ. ನಿವ್ ಹೇಳಿದ್ಡಿವಸ ಬರ್ತೀನಿ. “ ಅಂದ. ರಮೇಶ ರಾಯರು ಐವತ್ತರ ನೋಟೊಂದನ್ನು ಅವನ ಕೈ ಮೇಲೆ ಹಾಕುತ್ತಾ ಕೊಪ್ಪಾ-ಜಯಪುರ ಮುಖ್ಯ ರಸ್ತೆಯಿಂದ ಸ್ವಲ್ಪವೇ ಒಳಗಿದ್ದ ಮನೆಯ ವಿಳಾಸ ನೀಡಿ- “ಆಮೇಲಿಂದ್ ಹರಕೆ ಆಟ ಆದ್ಮೇಲ್ ಕೊಡ್ತಿನಿ. ನಾಡಿದ್ ಸೋಮವಾರ ಒಳ್ಳೇ ದಿನ. ಬೆಳಿಗ್ಗೆ ಮುಂಚೆ ಆರೂವರೆಗೆ ಬಾ” ಅಂದು ಬೈಕ್ ಹತ್ತಿ ಹೊರಟರು. ಹೊರಟವರು ಮತ್ತೆ ಬೈಕ್ ತಿರುಗಿಸಿ ಬಂದು ನಿಧಾನವಾಗಿ “ಮನೇಲ್ ನಂಜೊತೆ ನನ್ನ ತಮ್ಮನೂ ಇದ್ದಾನೆ. ಅವನಿಗೆ ಇದೆಲ್ಲಾ ನಂಬಿಕೆಯಿಲ್ಲ್ಲ.ನಿನ್ ಬಂದಾಗ ಅವನೇ ಎಲ್ಲಾದ್ರು ಮೊದ್ಲು ಸಿಕ್ಕಿ ಬೈದರೆ ಬೇಜಾರ್ ಮಾಡ್ಕೋಬೇಡ. ನನ್ ಕರಿಯಕ್ ಹೇಳು.“-ಎಂದು ಕಿವಿಯಲ್ಲಿ ಅರುಹಿ ಹೋದರು.


ಸರಿ, ಆದ್ರೆ ರಮೇಶ ರಾಯರ ತಾಯಿ ಸತ್ತು ಯಾವುದೋ ಕಾಲವಾಗಿದೆ. ಮಗಳಿಗೆ ಟೈಫೈಡ್ ಬಂದಿದ್ದೂ ಸುಳ್ಳೇ. ಹರಕೆ ಆಟನು ಸುಳ್ಳೇ. ರಾಯರು ಬಸವನಾಡಿಸುವವನಿಗೆ ಹೇಳಿದ್ದೆಲ್ಲಾ ಸುಳ್ಳೇ. ನಮ್ಮನೆಗೆ ಬೆಳಿಗೆ ಮುಂಚೆನೇ ಬಾ ಎಂದು ಹೇಳಿ ಅವರು ಕೊಟ್ಟಿದ್ದು ತಮ್ಮ ಮನೆ ವಿಳಾಸವಲ್ಲ. ಬದಲಾಗಿ ರಸ್ತೆಯಿಂದ ಸ್ವಲ್ಪವೇ ಒಳಗಿದ್ದ ತನ್ನ ಸ್ನೇಹಿತ ಬಾಲಭಟ್ರ ಮನೆ ವಿಳಾಸವನ್ನ. ಬಾಲಭಟ್ರು ನಮ್ಮ ಪಕ್ಕದೂರಿನ ಜಮೀನ್ದಾರ್ರು. ಒಳ್ಳೇ ಮನುಷ್ಯ. ಮಾತು ಸ್ವಲ್ಪ ಖಡಕ್. ಒಳ್ಳೇ ಲಹರಿಲಿದ್ರೆ ಒಳ್ಳೇ ಮನುಷ್ಯ, ಸಿಟ್ ಬಂದ್ರೆ ಕೋಪಕ್ಕೆ ಕೆಂಪ್ ಕೆಂಪಾಗಿ ಜೋರ್ ಕೂಗ್ತಾರೆ.


ರಾಯರು ಹೇಳಿದ ದಿನ ಬಂತು. ಪಾಪ ಬಸವನಾಡಿಸುವವನಿಗೆ ಹೇಗ್ ಗೊತ್ತಾಗಬೇಕ್ ರಾಯರು ಹೇಳಿದ್ದು ಸುಳ್ಳುಂತ. ಆತನ ಸವಾರಿ ಬೆಳಿಗ್ಗೆ ಮುಂಚೆನೇ ಬಸವ ಮತ್ತು ವಾಲಗದ ಜೊತೆ ಬಾಲಭಟ್ರ ಮನೆಗೆ ಹೋಯಿತು. ಸಿಹಿನಿದ್ದೆಯಿಂದೆದ್ದು ಬಾಲಭಟ್ರು ಹಲ್ಲುಜ್ಜಿ ತ..ನ..ನಾ.. ಎಂದು ತಾಳಹಾಕುತ್ತಾ ಕಾಫಿ ಕುಡಿಯಲು ಬರುತ್ತಿದ್ದಂತೆ ಕಿಟಿಕಿಯಾಚೆಯಿಂದ ಬಸವನಾಡಿಸುವವನ ವಾದ್ಯದ ‘ಪೆ..ಪೆ..ಪ್ಪೇ’ ಶಬ್ದ ಗಟ್ಟಿಯಾಗಿ ಕಿವಿಮೇಲೆ ಬಿತ್ತು. ಅದಕ್ಕೆ ಉತ್ತರವೇನೋ ಎಂಬಂತೆ ಬಾಲಭಟ್ರು ಸಾಕಿದ್ದ ದೊಡ್ಡ ಗಾತ್ರದ ನಾಯಿಗಳ ಕರ್ಕಶ ಕೂಗಾಟ ಶುರುವಾಯಿತು. ಭಟ್ರಿಗೆ ಸಿಟ್ಟು ನೆತ್ತಿಗೇರಿತು. ಹೊರಗೆ ಬಂದು “ಎನೆಯ್ಯ ನಿಂದು? ಹೊತ್ತು ಗೊತ್ತು ಒಂದೂ ಇಲ್ವಾ? ಇನ್ನೂ ಸೂರ್ಯ ಸರಿಯಾಗಿ ಹುಟ್ಟಿಲ್ಲ. ಅಷ್ಟರಲ್ಲೆ ಬಂದು ವಾಲಗ ಊದ್ತಿ”. ಎಂದು ದಬಾಯಿಸಲು ಶುರುಮಾಡಿದರು. ಅದಕ್ಕೆ ಬಸವನವನು ತಣ್ಣಗೆ “ನೀವ್ ಸುಮ್ಕಿರಿ. ನಿಮ್ಮಣ್ಣನ ಕರೆಯಿರಿ”.ಎಂದಾಗ ಅಪ್ಪನಿಗೆ ಒಬ್ಬನೇ ಮಗನಾದ ಭಟ್ರಿಗೆ ಮಾತಾಡುಕ್ಕಾಗದಷ್ಟು ಸಿಟ್ಟು. “ಎಂತಂದಿ?” ಅಂತ ಕೇಳಿದರು. “ನಿಮ್ಮಣ್ಣ ಬೈಕಲ್ಲಿ ಹೋಗೋರು ಸಿಕ್ಕಿ ಹರಕೆ ಆಟ ಇದೆ; ಮುಂಚೆ ಬಾ ಎಂದ್ ಹೇಳಿದ್ದಕ್ಕೆ ನಾನ್ ಬಂದಿದ್ದು” ಎಂದು ಬಸವನವ ಹೇಳಿದ.


ಬೈಕ್ ನಿಲ್ಸಿ ಬರಕ್ಕೆ ಹೇಳಿದ್ರು ಅಂದಾಗ ಬಾಲಭಟ್ರಿಗೆ ಇದು ಯಾರ ಕಿತಾಪತಿಯಾಗಿರಬಹುದೆಂದು ಅಂದಾಜಿಗೆ ಬಂತು. ಸೀದಾ ರಮೆಶರಾಯರಿಗೆ ಫೋನ್ ಮಾಡಿ “ಏನಯ್ಯ ಇದ್ ನಿನ್ ಕತೆ? ಬಸವನಾಡಿಸುವವನನ್ನು ಇಷ್ಟ್ ಮುಂಚೆನೇ ನಮ್ಮನೆಗೆ ಕಳಿಸಿದ್ಯಲಯ್ಯ” ದಬಾಯಿಸಿ ಫೋನ್ ಮಾಡಿದರೆ ಆ ಫೋನನ್ನೇ ಕಾಯುತ್ತಿರುವರಂತೆ ಮನೆಯಲ್ಲಿ ಕೂತಿದ್ದ ರಮೇಶ ರಾಯರು “ಹಲೋ,ಹಲೋ, ಫೋನ್ ಸರಿಯಿಲ್ಲ.one way ಆಗಿದೆ. ನೀವ್ ಮಾತಾಡಿದ್ದು ಕೇಳ್ತಾ ಇಲ್ಲ ಮತ್ ಮಾಡಿ” ಎಂದು ಹೇಳಿ ಕೆಳಗಿಟ್ಟು ಹೊಟ್ಟೆ ಹಿಡಿದುಕೊಂಡು ನೆಗಾಡಿದರು.


( ವಿ.ಸೂ-ಕೆಂಪು ಬುದ್ದಿಯ ಓದುಗರ್ಯಾರಾದರು ಇದನ್ನು ಓದಿ ಮಲೆನಾಡಿನ ಜಮಿನ್ದಾರರುಗಳು ಬಡಪಾಯಿ ಬಸವನಾಡಿಸುವವನನ್ನು ಗೋಳು ಹೊಯಿದುಕೊಂಡರೆಂದು ತೀರ್ಮಾನಿಸಬೇಡಿ. ಸಿಟ್ಟು ಇಳಿದ ಮೇಲೆ ಭಾಲಭಟ್ರು ಅವನ ಜೋಳಿಗೆ ತುಂಬಿಸಿಯೇ ಕಳಿಸಿದರು)