Wednesday, February 24, 2010

ಈ ವಿಚಿತ್ರ ಜೀವಿಗೆ ಚಿನ್ನಕ್ಕಿಂತ ಹೆಚ್ಚು ಬೆಲೆ.

          ಕೆಲವೊಂದು ವಿಷಯಗಳು ಕೆಲವೊಂದು ಕಡೆ ತುಂಬಾ ಸಾಮಾನ್ಯವಾದದ್ದಾಗಿರುತ್ತದೆ. ಆದರೆ ಹೊರಗಿನವರಿಗೆ ಅವು ತುಂಬಾ ಆಶ್ಚರ್ಯದ ವಿಷಯಗಳಾಗಿರುತ್ತವೆ. ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ ಬೆಂಗಳೂರಿನ ಪಾಷ್ ಶಾಪಿಂಗ್ ಮಾಲ್ ನಲ್ಲಿ ಇಂಬಳವೊಂದನ್ನ ಕಲ್ಪಿಸಿಕೊಳ್ಳಿ. ಜನ ಅದನ್ನು ಹೇಗೆ ಕಣ್ಣು ಬಾಯಿ ಬಿಟ್ಟು ನೋಡಬಹುದು? ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಪಟಪಟಾಂತ ಅದರ ಫೋಟೋ ತೆಗೆಯಬಹುದು. ಆದರೆ ಮಲೆನಾಡು ಕರಾವಳಿ ಜನರಿಗೆ? ಮಳೆಗಾಲದಲ್ಲಿ ಮನೆಯಿಂದ ಹೊರಗೆ ಕಾಲಿಟ್ಟರೆ ಹತ್ತುವ ಪೀಡೆ. ಅದೇ ವಿಮಾನದ ಶಬ್ದ ಕೇಳಿದರೆ ಇಲ್ಲಿನ ಹುಡುಗರು ಹೊರಗೆ ಬಂದು ಎಲ್ಲಿದೆಂತ ನೋಡ್ತಾರೆ. ಬೆಂಗಳೂರಲ್ಲಿ ಅದು ಮಾಮೂಲು. ಈ ಪೀಠಿಕೆಯೊಂದಿಗೆ ನಾನು ಹೇಳಲು ಹೊರಟಿದ್ದು ಉತ್ತರ ನೇಪಾಳದ ಕೆಲವು ಊರುಗಳಲ್ಲಿ ಬೇಸಿಗೆಯೊಂದಿಗೆ ಆರಂಬವಾಗುವ ಚಿನ್ನದಷ್ಟೇ ಬೆಲೆಯ ವಸ್ತುವೊಂದರ ಬೇಟೆಯ ನಿಜಕಥೆ.

       ನೇಪಾಳ ಬೆಟ್ಟ ಗುಡ್ಡಗಳ ದೇಶ. ಉತ್ತರ ನೇಪಾಳದ ಬೆಟ್ಟಗಳು ಸಾಕಷ್ಟು ಎತ್ತರವಾಗಿವೆ. ಚಳಿಗಾಲದಲ್ಲಿ ಸಾಕಷ್ಟು ಹಿಮಪಾತವಾಗುತ್ತದೆ. ಬೇಸಿಗೆಯಲ್ಲಿ ಎತ್ತರ ಜಾಗದಲ್ಲಿದ್ದ ಹಿಮಕರಗುತ್ತಿದ್ದಂತೆ ಕೆಳಗಿರುವ ಹಳ್ಳಿಗಳು ಅಕ್ಷರಶಃ ಖಾಲಿಯಾಗುತ್ತವೆ. ಬೆಟ್ಟ ಹತ್ತಲಾಗದ ಅಶಕ್ತ ಮುದುಕರು, ತುಂಬು ಗರ್ಬಿಣಿ ಹಾಗು ಹಸಿ ಬಾಣಂತಿಯರನ್ನು ಬಿಟ್ಟು ಊರಿಗೆ ಊರೇ ಎತ್ತರದ ಪ್ರದೇಶಕ್ಕೆ ಗುಳೆ ಹೊರಡುತ್ತದೆ. ಚಿಕ್ಕ ಮಕ್ಕಳಂತೂ ಬೇಕೇ ಬೇಕು. ಎತ್ತರ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಟೆಂಟ್ಗಳಲ್ಲಿ ಮುಂದಿನ ಎರಡು ಮೂರು ತಿಂಗಳು ಅವರ ಸಂಸಾರಗಳ ವಾಸ. ಮಕ್ಕಳು ಮರಿ ಎಲ್ಲಾ ಕಟ್ಟಿಕೊಂಡು ಊಟನೂ ತೆಗೆದುಕೊಂಡು ಬೆಳಿಗ್ಗೆ ಟೆಂಟ್ ಬಿಟ್ಟು ಹೊರಟರೆಂದರೆ ಬರುವುದು ಸಂಜೆ. ದಿನವಿಡೀ ಹಿಮ ಕರಗಿದ ಹುಲ್ಲಿನಲ್ಲಿ ಇಂಚು ಇಂಚು ಬಿಡದೆ ತಮ್ಮ ಅದೃಷ್ಟವನ್ನು ಹುಡುಕುತ್ತಾರೆ. ಅದೃಷ್ಟ ಚೆನ್ನಾಗಿದ್ದರೆ ಕೈತುಂಬಾ ಸಂಪಾದನೆ. ಒಂದಲ್ಲ ಎರಡಲ್ಲ ಕೆಲವು ಸಾವಿರ ಜನ ಈ ಹುಡುಕಾಟದಲ್ಲಿ ಭಾಗವಹಿಸುತ್ತಾರೆ. (ಎತ್ತರದ ಪ್ರದೇಶಗಳಿಗೆ ಈ ರೀತಿ ಗುಳೆ ಹೋಗಲು ಸರ್ಕಾರದ ಅನುಮತಿ ಮತ್ತು ಪ್ರವೇಶ ಶುಲ್ಕ ಕೊಡಬೇಕು)

       ಅವರು ಹುಡುಕುವುದು ಏನನ್ನು? ಚಿನ್ನದಷ್ಟೇ ಬೆಲೆಬಾಳುವ ಆ ವಸ್ತು ಯಾವುದು? ಇಲ್ಲಿ ಮಕ್ಕಳ ಅತ್ಯಗತ್ಯತೆ ಏನು? ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಅದೊಂದು ಶಿಲೀಂದ್ರ. ಬಡತನದಿಂದ ಕೂಡಿದ ಉತ್ತರ ನೇಪಾಳದ ಅನೇಕ ಊರುಗಳ ಆರ್ಥಿಕತೆಯ ಬೆನ್ನುಮೂಳೆ. ಅದಕ್ಕೆ ಚಿನ್ನದಷ್ಟೇ ಬೆಲೆ. ೩೫೦೦ ಮೀಟರಿಗಿಂತ ಎತ್ತರದಲ್ಲಿ ಮಾತ್ರ ಕಂಡುಬರುವ ಅತಿ ವಿಶಿಷ್ಟ ಶಿಲೀಂದ್ರ. ಅದೇ ‘ಕಂಬಳಿಹುಳು ಶಿಲಿಂದ್ರ’. (Caterpillar fungus; Cordyceps sinensis) ಬಗ್ಗಿ ಹುಡುಕುವಾಗ ಒಣಗಿದ ಹುಲ್ಲು, ಕಲ್ಲಿನ ಮಧ್ಯೆ ಕೇವಲ ೪-೫ ಸೆಂ. ಮೀ. ಉದ್ದದ ಪೆನ್ಸಿಲಿನ ಸೀಸದ ಬಣ್ಣದ, ಸಾದಾರಣ ಪೆನ್ಸಿಲಿನಷ್ಟೇ ದಪ್ಪದ ಆ ಶಿಲಿಂದ್ರದ ತುದಿ ಕಂಡರೆ ಅವರ ಜೋಬಿಗೆ ೨೦೦ ರೂಪಾಯಿ ಸೇರಿದಂತೆ. ನಿದಾನವಾಗಿ ಚಾಕುವಿನಿಂದ ಕಲ್ಲನ್ನೆಲ್ಲ ಬದಿಗೆ ಸರಿಸಿ ಬುಡ ಸಮೇತವಾಗಿ ಬಿಡಿಸಿ ತೆಗೆಯಬೇಕು. ಇಲ್ಲಿ ಮಕ್ಕಳ ಅತ್ಯಗತ್ಯತೆ ನಿಮಗೆ ಗೊತ್ತಾಗಿರಬಹುದು. ಮಕ್ಕಳ ಸೂಕ್ಷ್ಮ ದೃಷ್ಟಿ ಅದನ್ನು ಹುಡುಕಲು ಅಗತ್ಯ. ಅನಂತರ ಅದನ್ನು ಹಳೆ ಬ್ರೆಶ್ನಲ್ಲಿ ನಿಧಾನವಾಗಿ ಉಜ್ಜಿ ಹಿಡಿದ ಮಣ್ಣು ತೆಗೆದು ಚನ್ನಾಗಿ ಕಾಣುವಂತೆ ಮಾಡುತ್ತಾರೆ.

     ಏನದು ಕಂಬಳಿಹುಳು ಶಿಲಿಂದ್ರ? ಅದೊಂದು ಅತಿ ಅಪರೂಪದ ಜೀವಿ. ಪ್ರಕೃತಿಯ ವಿಸ್ಮಯ. ರೋಮವಿಲ್ಲದ ಕಂಬಳಿಹುಳುವಿಗೆ ತಲೆಯಲ್ಲಿ ಉದ್ದದ ಒಂದೇ ಕೊಂಬು ಇದ್ದಾರೆ ಹೇಗಿರುತ್ತೋ ಹಾಗಿರುತ್ತೆ. ಈ ಶಿಲಿಂದ್ರದ ಬೆಳವಣಿಗೆಯೇ ಒಂದು ವಿಚಿತ್ರ. ಬೇರೆಲ್ಲಾ ಶಿಲಿಂದ್ರದಂತೆಯೇ ಇದರ ಕಣ (spores)ಗಳು ಅಲ್ಲಲ್ಲಿ ಹರಡಿ ಚೆಲ್ಲಿರುತ್ತವೆ. ಬೇಸಿಗೆ ಶುರುವಾಗಿ ಹಿಮ ಕರಗಿದಂತೆ ಈ ಶಿಲಿಂದ್ರದ ಕಣಗಳು ಹಿಮಾಲಯದಲ್ಲಿ ಕಾಣಸಿಗುವ ಒಂದು ಜಾತಿಯ ನೊಣದ ಲಾರ್ವಾಗಳ ಚರ್ಮದ ಮೇಲೆ ಬಿದ್ದು ಬೆಳೆಯಲಾರಂಬಿಸುತ್ತವೆ. ಅದು ಮೈ ಮೇಲೆ ಬೆಳೆಯುತ್ತಾ ಹೋದಂತೆ ಈ ಲಾರ್ವ ಅಂದರೆ ಕಂಬಳಿಹುಳ ನಿದಾನವಾಗಿ ಸಾಯಲಾರಂಬಿಸುತ್ತದೆ. ಪಾಪ ಅದಕ್ಕೆಷ್ಟು ನೋವಾಗಬೇಡ? ತನ್ನ ಆಶ್ರಯದಾತ ಕಂಬಳಿಹುಳುವಿನ ದೇಹದ ಅಂಗಾಂಗಗಳನ್ನೆಲ್ಲಾ ತಿಂದು ಮುಗಿಸಿದ ಮೇಲೆ ಈ ಶಿಲೀಂದ್ರ ಉದ್ದದ ಕೊಂಬಿನಂತೆ ಹುಳುವಿನ ತಲೆಯ ಬದಿಯಿಂದ ಹೊರಗೆ ಹೊರಟು ೪-೫ ಸೆಂ. ಮೀ. ಎತ್ತರಕ್ಕೆ ಬೆಳೆದು ನಿಲ್ಲುತ್ತದೆ. ಕಂಬಳಿಹುಳದ ಅಂಗಾಂಗದ ಜಾಗದಲ್ಲಿ ಶಿಲೀಂದ್ರದ ಹೈಫೆ ತುಂಬಿಕೊಂಡಿರುತ್ತದೆ. ಹೊರ ಮೈ ಮಾತ್ರ ಕಂಬಳಿಹುಳದ್ದು. ಎಷ್ಟು ವಿಚಿತ್ರ?

    ಸರಿ. ಅದಕ್ಯಾಕೆ ಚಿನ್ನದ ಬೆಲೆ? ಅದರಿಂದೆನಾದರು ಜೀವರಕ್ಷಕ ಔಷಧಿ ಮಾಡುತ್ತಾರಾ?
ನಿಮ್ಮೆಣಿಕೆ ತಪ್ಪು. ಅದಕ್ಕೆ ಬೇಡಿಕೆ ಇರುವುದು ಹಿಮಾಲಯದಿಂದ ದೂರದ ಶಾಂಘೈ, ಹಾಂಗ್ ಕಾಂಗ್, ತೈವಾನ್. ಸಿಂಗಾಪುರಗಳಲ್ಲಿ. ಇವಕ್ಕೆ ನೇಪಾಳದಲ್ಲಿ ೪ ಲಕ್ಷ ರೂ ಇದ್ದರೆ ಈ ನಗರಗಳಲ್ಲಿ ಕೆಜಿಗೆ ೨೦ ಲಕ್ಷ ರೂ ಗು ಹೆಚ್ಚು!! (ಇತ್ತೀಚಿಗೆ ಕೊಳ್ಳುಗರು ಮೆಟಲ್ ಡಿಟೆಕ್ಟರ್ ಉಪಯೋಗಿಸಿ ತಂತಿ ತುಂಡು ಸೇರಿಸಿದ್ದಾರಾ ಎಂದು ಪರೀಕ್ಷಿಸಿ ಕೊಳ್ಳುತ್ತಾರಂತೆ). ಪಾರಂಪರಿಕ ಚೀನಾ ವೈದ್ಯಕೀಯ ಪದ್ದತಿಯಲ್ಲಿ ಅನೇಕ ರೋಗಗಳಿಗೆ ಈ ವಿಚಿತ್ರ ಶಿಲೀಂದ್ರ ರಾಮಬಾಣ - ಹೃದಯ,ಕಿಡ್ನಿ ಕಾಯಿಲೆಗಳು,ಅಸ್ತಮಾ.ಮೂಲವ್ಯಾಧಿ,ಕ್ಷಯ, ಎಲ್ಲದಕ್ಕಿಂತ ಹೆಚ್ಹಾಗಿ ಲೈಂಗಿಕ ದೌರ್ಬಲ್ಯ. (ಪುರುಷತ್ವದ ವಿಷಯ ಬಂದಾಗ ಹಣ ಹುಲ್ಲಿಗೆ ಸಮಾನ !!!) ಅತಿ ಬೆಲೆ ಬಾಳುವ ಈ ಶಿಲೀಂದ್ರದ ಸೂಪ್ , ಮಾಂಸದ ಅಡಿಗೆ ಮುಕ್ಕುವುದು ಚೀನಾದ “ಹೊಸ ಶ್ರೀಮಂತರಿಗೆ” ಬಲು ಹೆಮ್ಮೆಯ ವಿಷಯ!! ಈ ದಶಕದಲ್ಲಿ ಚೀನಾದ ಆರ್ಥಿಕತೆ ರಾಕೆಟಿನಂತೆ ಮೇಲೆ ಹೋಗಿರುವುದೇ ಈ ಶಿಲೀಂದ್ರಕ್ಕೆ ಇನ್ನಿಲ್ಲದ ಬೆಲೆ ಬಂದಿರುವುದು ಕಾರಣ.(ಈ ಶಿಲೀಂದ್ರದಲ್ಲಿ ನಿಜವಾಗಿಯೂ ಎಲ್ಲಾ ಕಾಯಿಲೆಗಳಿಗೂ ಅನುಕೂಲವಾಗುವ ಯಾವುದಾದರೂ ಅಣುಗಳಿದ್ದಾವೆಯೇ ಎಂದು ಔಷದಿ ಕಂಪನಿಗಳು ಇನ್ನೂ ಹುಡುಕುತ್ತಿದ್ದಾವೆ. ಆದರೆ ಇಲ್ಲಿಯವರೆಗೂ ಹೊಸದೇನೂ ಸಿಕ್ಕಿಲ್ಲ.)

  ಈ ಲೇಖನ ಬರೆದು ಮುಗಿಸುತ್ತಿದ್ದಂತೆ ಮೊನ್ನಿನ ಪ್ರಜಾವಾಣಿಯಲ್ಲಿ ಇದರ ಬಗ್ಗೆ ಒಂದು ಸುದ್ದಿ ಓದಿ ನಗು ಬಂತು.ಪಿ.ಟಿ.ಐ.ಸುದ್ದಿ. ಶೀರ್ಷಿಕೆ – “ಪರ್ಯಾಯ ವೈಯಾಗ್ರಗಳ ಅಕ್ರಮ ಜಾಲ” . ಈ ವರದಿಗಾರನ ಪ್ರಕಾರ “ಯಾರ್ಷ ಗೊಂಬಾ” (ನೇಪಾಳಿ ಭಾಷೆಯಲ್ಲಿ ಕಂಬಳಿಹುಳು ಶಿಲೀಂದ್ರ) ಅಂದರೆ “ಹಸಿ ಶುಂಟಿ ಮಾದರಿಯ ಸಣ್ಣ ಸಣ್ಣ ಬೇರಿನ ತುಂಡುಗಳು” !!! ಅಜ್ಞಾನ ಎಲ್ಲಿ ನುಸುಳಿರಬಹುದು? ಬಹುಶಃ “ಸರ್ವಜ್ಞ” ವರದಿಗಾರನಿಂದಾಗಿರಬಹುದು.
ಈ ವಿಚಿತ್ರ ಶಿಲೀಂದ್ರದ ಬಗ್ಗೆ ಈ ಹಿಂದೆ ನಿಮಗೆ ಗೊತ್ತಿತ್ತೇ? ಅಥವಾ ನಿಮಗೂ ಇದೊಂದು ಹೊಸ ವಿಷಯವೇ? ತಿಳಿಸಿ.         

  

2 comments:

  1. ಮಾಚಿಕೊಪ್ಪ ಸರ್,
    ದಿನದಿಂದ ದಿನಕ್ಕೆ ನಿಮ್ಮ ಬ್ಲಾಗಿನ ವಿಷಯಗಳು ಹೊಸತನ ಪಡೆಯುತ್ತಿವೆ
    ಇಂಥಹ ಬರಹಗಳು ಮನಸ್ಸಿಗೆ ಹೆಚ್ಚು ನಾಟುತ್ತವೆ
    ನಿಮ್ಮ ಇಂದಿನ ಬರಹ ನನಗೆ ಬಲು ಇಷ್ಟವಾಯಿತು
    ಬದಲಾಗುತ್ತಿರುವ ಆಧುನಿಕತೆಯಲ್ಲಿ
    ಹುಳುಗಳಿಗೂ ಚಿನ್ನದ ಬೆಲೆಯಿದೆ
    ನಿಮ್ಮ ಸಂಶೋಧನಾ ಪೂರಿತ ಬರಹಕ್ಕೆ ಅಭಿನಂದನೆ

    ReplyDelete
  2. ಉತ್ತಮ ಲೇಖನ..ನಿಮ್ಮ ಬರಹದಿ೦ದ ವಿಚಿತ್ರ ರೀತಿಯ ಶಿಲೀ೦ದ್ರದ ಬಗ್ಗೆ ತಿಳಿಯಿತು.
    ಧನ್ಯವಾದಗಳು. ಮತ್ತೆ ಮತ್ತೆ ಈ ರೀತಿಯ ಬರಹಗಳು ಬರುತ್ತಿರಲಿ.

    ReplyDelete