Tuesday, March 9, 2010

ಒಂದು ಮಾತ್ರೆ ತಿಂದರೆ ತಲೆಯಲ್ಲಿ ಹರಿದಾಡುವ ಹೇನುಗಳೆಲ್ಲ ಸಾಯುವಂತಿದ್ದರೆ-


ಈ ಕನಸು ಒಮ್ಮೆಯಾದರೂ ನಿಮ್ಮ ತಲೆಯಲ್ಲಿ ಮೂಡಿರಬಹುದು. ಬಾಲ್ಯ ಜ್ಞಾಪಿಸಿಕೊಳ್ಳಿ. ಸದಾ ತಲೆ ಕೆರೆದುಕೊಳ್ಳುತ್ತಿದ್ದ ಅಕ್ಕನನ್ನೋ, ತಂಗಿಯನ್ನೋ ನೋಡಿದಾಗ ಅಥವಾ ಕಷ್ಟಪಟ್ಟು ಹೇನು ಹಣಿಗೆಯಲ್ಲಿ ತಲೆ ಬಾಚಿಕೊಳ್ಳುವ ಅಮ್ಮನನ್ನೋ, ಚಿಕ್ಕಮ್ಮನನ್ನೋ, ಅಕ್ಕನ ಮಗಳನ್ನೋ ನೋಡಿದಾಗ ಬಹುಶಃ ಒಮ್ಮೆಯಾದರೂ ಈ ಆಲೋಚನೆ ಬಂದಿರಬಹುದು. (ಹೆಣ್ಣು ಮಕ್ಕಳ ತಲೆಯಲ್ಲಿ ಸಾದಾರಣವಾಗಿ ಹೇನು ಇರುತ್ತವೆ). ಇಂದು ಈ ಕನಸು ಸಾಕಾರವಾಗಿದೆ!!

ಆದುನಿಕ ವೈದ್ಯ ಶಾಸ್ತ್ರ ನಮ್ಮ ಅನೇಕ ಕನಸುಗಳನ್ನು ನನಸು ಮಾಡಿದೆ. ಒಟ್ಟೊಟ್ಟೆಯಾದ ಮಂಡಿಯನ್ನು (knee joint) ಕತ್ತರಿಸಿ ಬಿಸುಟು ಆ ಜಾಗದಲ್ಲಿ ಲೋಹದ ಜಾಯಿಂಟ್ ಕೂರಿಸಿ ನಾಳೆಯೇ ನಡಿಯುವಂತೆ ಮಾಡಿದೆ. ಆಪರೇಶನ್ ಟೇಬಲ್ಲಿಂದ ದೂರದಲ್ಲಿ ಕೂತು ರೋಬೋಟ್ ಸಹಾಯದಿಂದ ಸಂಕೀರ್ಣ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಬಹುದಾಗಿದೆ. ಕಣ್ಣು ಮುಚ್ಚಿಮಲಗಿ ಗುಹೆಯಂತಾ ಯಂತ್ರದೊಳಗೆ ದೇಹ ಒಮ್ಮೆ ಹೋಗಿ ಬಂದರೆ ಕಾಯಿಲೆಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊರಗಡೆ ಕಂಪ್ಯೂಟರ್ನಲ್ಲಿ ಮೂಡುವ ವ್ಯವಸ್ಥೆ ಇದೆ.(ಕುಟುಕು ಜೀವ,ಅದೃಷ್ಟ ಹಾಗೂ ಬಾರದ ಜೋಬು ಇದ್ದರೆ ಪವಾಡಗಳೇ ಆಗಬಹುದು). ಇದೇ ರೀತಿ ಹೇನು ಸಾಯುವ ಮಾತ್ರೆಯ ಕನಸೂ ಇಂದು ನನಸಾಗಿದೆ. ಆ ಮಾತ್ರೆಯೇ ಐವರ್ಮೆಕ್ಟಿನ್ (Ivermectin) ಮಾತ್ರೆ!! ಹೊಟ್ಟೆ ಹುಳಕ್ಕೆ ಕೊಡುವ ಒಂದು ಜಾತಿಯ ಮಾತ್ರೆ.

ತುಂಬಾ ಹಿಂದಲ್ಲ. ೧೦-೧೨ ವರ್ಷದ ಕೆಳಗೆ ನಾವು ತ್ರಿಪಾಟಿ ಫಾರ್ಮಕಾಲಜಿ ಓದುತ್ತಿದ್ದಾಗ ಜಂತುನಾಶಕ (antihelmenthic) ಔಷದಿಗಳ ಪಟ್ಟಿಯಲ್ಲಿ ಐವರ್ಮೆಕ್ಟಿನ್ಗೆ ಸ್ಥಾನವಿರಲಿಲ್ಲ. ಪ್ರಪಂಚದ ಹಲವೆಡೆ ಉಪಯೋಗಿಸಲ್ಪಡುತ್ತಿದ್ದು ಭಾರತದಲ್ಲಿನ್ನೂ ಮಾರುಕಟ್ಟೆಗೆ ಬಂದಿಲ್ಲವೆಂಬ ಅಡಿಟಿಪ್ಪಣಿಯಿತ್ತು. ಐವರ್ಮೆಕ್ಟಿನ್ ಮಾತ್ರೆ ರಕ್ತಕ್ಕೆ ಸೇರಿ ಜಂತುಗಳ ನರಕೋಶಗಳ ಕ್ಲೋರೈಡ್ ಚಾನಲ್ಗಳಿಗೆ ಅಂಟಿಕೊಂಡು ಕೋಶದೊಳಗೆ ಕ್ಲೋರೈಡ್ ಅಯಾನ್ ಹರಿಯುವಿಕೆ ಹೆಚ್ಚುಮಾಡಿ ಜಂತುಗಳ ಸಾವಿಗೆ ಕಾರಣವಾಗುತ್ತದೆ. ಆದರೆ ಜೀವ ಸರಪಳಿಯಲ್ಲಿ ಮೇಲ್ಮಟ್ಟದಲ್ಲಿರುವ ಸಸ್ತನಿಗಳ ನರವ್ಯೂಹದಲ್ಲಿ ಈ ರೀತಿ ವ್ಯವಸ್ಥೆ ಇಲ್ಲದಿರುವುದರಿಂದ ಐವರ್ಮೆಕ್ಟಿನ್ ಮನುಷ್ಯರೂ ಸೇರಿದಂತೆ ಸಸ್ತನಿಗಳಿಗೆ ತೊಂದರೆಮಾಡುವುದಿಲ್ಲ.(ಸಾಯಿಸುವುದಿಲ್ಲ!!).ಈಗ ಐವರ್ಮೆಕ್ಟಿನ್ ಭಾರತದಲ್ಲೂ ಲಭ್ಯ.ಎಲ್ಲರಿಗೂ (ಎಲ್ಲಾ ಡಾಕ್ಟರಿಗೂ) ಗೊತ್ತಿರುವ ಐವರ್ಮೆಕ್ಟಿನ್ ನ ಮುಖ್ಯ ಉಪಯೋಗ ಹೊಟ್ಟೆ ಹುಳ ನಾಶಕವಾಗಿ ಇದರ ಬಳಕೆ. CIMSನಲ್ಲೂ ಇದರ ಉಪಯೋಗ ಬರಿ ಜಂತು ನಾಶಕವಾಗಿ ಮಾತ್ರ.

ನನ್ನ ರೋಗಿಯೊಬ್ಬರಿಗೆ ಸಾದಾರಣವಾಗಿ ಕೊಡುವ ಜಂತುನಾಶಕಗಳಿಂದ ಹೊಟ್ಟೆ ಹುಳಗಳು ಸಾಯದಿದ್ದಾಗ ನನಗೆ ಜ್ಞಾಪಕಕ್ಕೆ ಬಂದಿದ್ದೇ ಈ ಐವರ್ಮೆಕ್ಟಿನ್. ಅದನ್ನು ತರಿಸಿ ಕೊಟ್ಟಾಗ (ನನ್ನದುಅರೆಕಾಲಿಕ ಡಿಸ್ಪೆನ್ಸರಿ) ಅವರ ಹುಳಗಳ ಸಮಸ್ಯೆ ಮಾಯವಾಯಿತು. ಆಗ ಈ ಐವರ್ಮೆಕ್ಟಿನ್ ಬಗ್ಗೆ ಓದಿದಾಗ ಮನುಷ್ಯರನ್ನು ಆಶ್ರಯಿಸಿ ರಕ್ತ ಹೀರಿ ತೊಂದರೆ ಕೊಡುವ ಕೆಲವು ಜೀವಿಗಳಿಗೆ ಯಾಕೆ ಪ್ರಯೋಗಿಸಿ ನೋಡಬಾರದೆಂದು ಅನ್ನಿಸಿತು. ಮೊದಲು ತಲೆಗೆ ಬಂದಿದ್ದು ಸ್ಕೇಬಿಸ್.(ಕೈ ಬೆರಳು ಸಂದಿ, ಸೊಂಟ, ಇಲ್ಲೆಲ್ಲ ಚಿಕ್ಕ ನಿರು ಗುಳ್ಳೆ, ತುರಿಕೆಯಿಂದ ಕೂಡಿದ ಚಿಕ್ಕ ಕ್ರಿಮಿಯಿಂದ ಬರುವ ಒಂದು ರೀತಿಯ ಅಂಟು ಕಾಯಿಲೆ) ಐವರ್ಮೆಕ್ಟಿನ್ ಇಲ್ಲೂ ಗೆದ್ದಿತು.ರಕ್ತ ಹೀರುವ ಹೇನುಗಳ ಮೇಲೆ ಯಾಕೆ ಇದನ್ನು ಪ್ರಯೋಗಿಸಬಾರದೆಂದು ಆಲೋಚಿಸಿದೆ.(ಹೇನುಗಳದ್ದು ದೊಡ್ಡ ಸಮಸ್ಯೆ.ಆದರೆ ಆಸ್ಪತ್ರೆಗೆ ಬರುವುದು ಕಡಿಮೆ. ಬಹುಶಃ ಅನೇಕ ಜನ ಅದು ಸಹಜ ಎಂದು ತಿಳಿದುಕೊಂದಿರುತ್ತಾರೆ!! ಅತಿ ಹೆಚ್ಹಾದರೆ ಮಾತ್ರ ಬರುತ್ತಾರೆ). ಐ.ಎಂ.ಎ. ಕಾರ್ಯಕ್ರಮದಲ್ಲಿ ಪರಿಚಯದ ಒಂದಿಬ್ಬರು ಡಾಕ್ಟರನ್ನು ಐವರ್ಮೆಕ್ಟಿನ್ ಹೇನಿಗೆ ಕೊಟ್ಟಿದ್ದಿರಾ ಎಂದು ಕೇಳಿದಾಗ "ಇಲ್ವಲ್ಲಾ ,ಕೊಟ್ಟರೆ ಆಗಬಹುದೇನೋ" ಅಂದರು. ಇಂಟರ್ನೆಟ್ನಲ್ಲಿ ಹುಡುಕಿದಾಗ ಐವರ್ಮೆಕ್ಟಿನನ್ನು ಹೇನುಗಳ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿದ್ದು ಗೊತ್ತಾಯಿತು.(ಇಂಟರ್ನೆಟ್ ನಿಜಕ್ಕೂ ಒಂದು ವರ!!)ಇನ್ನು ಪ್ರಯೋಗ ಮಡಿ ಪಲಿತಾಂಶ ಪಡೆಯುವುದೊಂದು ಬಾಕಿ.

ಯಾರ ಮೇಲೆ ಪ್ರಯೋಗಿಸುವುದು? ಮೊದಲೇ ಹೇಳಿದೆ. ಹೇನುಗಳ ಸಮಸ್ಯೆಯಿಂದ ಮಾತ್ರ ಆಸ್ಪತ್ರೆಗೆ ಬರುವವರ ಸಂಖ್ಯೆ ತುಂಬಾ ಕಡಿಮೆ. ಆದರೆ ತಲೆಗೆ ಏನಾದರೊಂದು ನುಸುಳಿದರೆ ಪ್ರಯೋಗಮಾಡಿ ಪಲಿತಾಂಶ ತಿಳಿಯುವ ಕುತೂಹಲ.ಆಗ ಜ್ನಾಪಕವಾಗಿದ್ದೆ ನನ್ನಮ್ಮ!!!. ಮೂರು ನಾಲ್ಕು ದಿನಕ್ಕೊಮ್ಮೆ ತನ್ನ ಉದ್ದ ಕೂದಲನ್ನು ಹೇನು ಹಣಿಗೆಯಲ್ಲಿ ಬಾಚಿ ಹಣಿಗೆಯನ್ನು ಬಿಚ್ಚಿದ ಹಳೆ ಪೇಪರ್ ಮೇಲೆ ಕುಕ್ಕಿ ಹೇನುಗಳನ್ನು ಸಾಯಿಸುತ್ತಿದ್ದಳು."ಒಂಸಲ ಸೇರಿಕೊಂಡರೆ ಪಕ್ನೆ ಹೋಗೊಲ್ಲ. ತಲೆತುಂಬ ಹರಿದಾಡಿದಂತಾಗುತ್ತದೆ" ಅಂತ ಗೊಣಗುದು ಆಗಾಗ ಕಿವಿಗೆ ಬೀಳ್ತಿತ್ತು. ಮನೆಯೇ ಮೊದಲ ಪ್ರಯೋಗಶಾಲೆಯೆಂದು ಅಮ್ಮನಿಗೇ ಹೊಟ್ಟೆ ಹುಳುಗಳಿಗೆ ಕೊಡುವ ಐವರ್ಮೆಕ್ಟಿನ್ ಮತ್ತು ಆಲ್ಬೆಂಡಜೊಲ್ ಕಾಂಬಿನೇಶನ್ ಮಾತ್ರೆ ಕೊಟ್ಟೆ!!! ಹೇನುಗಳ ಹರಿದಾಟದ ಅನುಭವ ಮಾಯ!!!. ಮೂರು ತಿಂಗಳ ಮೇಲಾಯಿತು. ಇವತ್ತಿಗೂ ಇಲ್ಲ. (ಇನ್ನೂ ಗಮನಿಸಬೇಕು)

ಇಲ್ಲಿ ಒಂದೆರಡು ಅತಿ ಮುಖ್ಯ ಸಂಗತಿಗಳಿವೆ. ಈ ಔಷದ ರಕ್ತ ಹೀರುವ ಹೇನುಗಳನ್ನು ಮಾತ್ರ ಸಾಯಿಸುತ್ತದೆ. ಹೇನುಗಳ ಮರಿ(ಇಲ್ಲಿ ನಾವು ಚೀರು ಅನ್ನುತ್ತೇವೆ)ಗಳನ್ನಲ್ಲ. ಮೊದಲ ಮಾತ್ರೆ ತಿಂದು ಸರಿಯಾಗಿ ಎಂಟನೆ ದಿನ ಇನ್ನೊಂದು ಮಾತ್ರೆ ತಿನ್ನಬೇಕು. ಆಗ ಹೇನುಗಳಾಗಿರುವ ಆ ಚೀರುಗಳೂ ಸಾಯುತ್ತವೆ.(ಲೇಟಾಗಿ ಎರಡನೇ ಮಾತ್ರೆ ತಿಂದರೆ ಅವು ಮತ್ತೆ ಮೊಟ್ಟೆ ಇಟ್ಟಿರುವ ಸಂಭವವಿರುತ್ತದೆ!!). ಶಾಲಾ ಮಕ್ಕಳಲ್ಲಿ ಅಥವಾ ಮನೆಯಲ್ಲಿ ಹೆಚ್ಚು ಮಕ್ಕಳಿದ್ದರೆ ಒಬ್ಬರಿಂದ ಇನ್ನೊಬ್ಬರಿಗೆ ಹೇನುಗಳು ದಾಟಬಹುದು. ಅದನ್ನು ಗಮನಿಸಿ ಉಳಿದವರಿಗೂ ಔಷದಿ ಬೇಕಾಗಬಹುದು. ರೋಗಿ ಹಾಗೂ ವೈದ್ಯ – ಯಾರು ತಪ್ಪು ಮಾಡಿದರೂ ವೈದ್ಯರಿಗೇ ಕೆಟ್ಟ ಹೆಸರು. ಬಸರಿ, ಬಾಣಂತಿಯರು ಈ ಔಷದಿ ತೆಗೆದುಕೊಳ್ಳುವಂತಿಲ್ಲ. ಏನಕ್ಕೂ ನಿಮ್ಮ ಫ್ಯಾಮಿಲಿ ಡಾಕ್ಟರ್ ಸಲಹೆಯಿಲ್ಲದೆ ಯಾವ ಮಾತ್ರೆಯನ್ನೂ ತೆಗೆದುಕೊಳ್ಳಬಾರದು.

ಕೇವಲ ಥಿಯರಿ ಆದಾರದ ಮೇಲೆ ಆಲೋಚನೆ ಮಾಡಿದರೆ ಕೆಲವೊಂದು ವಸ್ತುಗಳ "ಅಸಂಪ್ರದಾಯಕ" ಉಪಯೋಗಗಳು ಬೆಳಕಿಗೆ ಬರುತ್ತವೆ. ಕಟಿಂಗ್ ಪ್ಲೇಯರ್ನಿಂದ ಹೂ ಗಿಡಗಳ ಮಧ್ಯೆ ಬೆಳೆದಿರುವ ಒಂದೊಂದು ನಾಚಿಗೆ ಮುಳ್ಳಿನ ಗಿಡಗಳನ್ನು ಬೇರುಸಹಿತ ಕಿತ್ತು ಬಿಸಾಡಬಹುದು. ನೈಲ್ ಕಟರ್ ನಲ್ಲಿರುವ ಬಾಟ್ಲ್ ಓಪನರ್ ಲಾನ್ ನಲ್ಲಿರುವ ಕಳೆಗಳನ್ನು ಹುಲ್ಲಿಗೆ ಏನೂ ಆಗದಂತೆ ಬೇರುಸಮೇತ ಕೀಳಲು ಅತ್ಯುತ್ತಮ. ಬಹುಶಃ ಈ ಐವರ್ಮೆಕ್ಟಿನ್ ಚಳಿಗಾಲದ ಆರಂಭದಲ್ಲಿ (ಹೆಚ್ಹಾಗಿ ಮಕ್ಕಳ) ಕಿವಿಯೊಳಗೆ ಸೇರಿ ಕಚ್ಚಿ ತುಂಬಾ ನೋವು ಉಂಟುಮಾಡುವ ಉಣುಗುಗಳಿಗೂ ಆಗಬಹುದು. (ಅವನ್ನು ತೆಗೆಯುವುದು ಮಕ್ಕಳಲ್ಲಿ ಕಷ್ಟಸಾದ್ಯ). ಅಪರೂಪಕ್ಕೆ ಮಳೆಗಾಲದಲ್ಲಿ ಮಲೆನಾಡಕಡೆ ಟ್ರೆಕಿಂಗ್ ಬರುವ ಬೆಂಗಳೂರಿಗರು ಬೆಳಿಗ್ಗೆ ಒಂದು ಐವರ್ಮೆಕ್ಟಿನ್ ಮಾತ್ರೆ ತಿಂದು ಕಾಡು,ಬೆಟ್ಟ-ಗುಡ್ಡ ನುಗ್ಗಿದರೆ ಕಾಲಿಗೆ ಕಚ್ಚುವ (ಕೆಲವೊಮ್ಮೆ ಇನ್ನೂ ಮೇಲೆ ಮೇಲೆ!!) ಇಂಬಳಗಳು ರಕ್ತ ಕುಡಿಯಲು ಆರಂಬಿಸುತ್ತಿದ್ದಂತೆ ಬಿದ್ದು ಸಾಯಬಹುದು!!! (ಪ್ರಯೋಗ ಮಾಡಿ ನೋಡಲು ಮಳೆಗಾಲ ಕಾಯುತ್ತಿದ್ದೇನೆ).

ನಿಮಗೂ ಯಾವುದಾದರೂ ವಸ್ತುಗಳ ಉಪಯುಕ್ತವಾದ "ಅಸಂಪ್ರದಾಯಕ ಉಪಯೋಗಗಳು" ಗೊತ್ತಿದ್ದರೆ ಹಂಚಿಕೊಳ್ಳಿ.

14 comments:

 1. ಮಾಚಿಕೊಪ್ಪ ಸರ್
  ತುಂಬಾ ಚೆನ್ನಾಗಿ ಬರೆದಿದ್ದೀರಿ
  ಬಹಳಷ್ಟು ಉಪಯೋಗವಾಗುವ ಲೇಖನ
  ನಿಮ್ಮ ಸಂಶೋಧನೆಗೆ ಅಭಿನಂದನೆ
  ಆಧುನಿಕತೆ ಬೆಳೆದಂತೆಲ್ಲ ನಮ್ಮಲ್ಲಿ ಉಪಯೋಗ ಎಷ್ಟಿದೆಯೋ ಅಷ್ಟೇ ದುರುಪಯೋಗವೂ ಬೆಳೆಯುತ್ತದೆ ಅಲ್ಲವೇ?

  ReplyDelete
 2. ಡಾಕ್ಟರ್‍ ತುಂಬಾ ಉಪಯುಕ್ತ ಲೇಖನ. ಧನ್ಯವಾದಗಳು.

  ReplyDelete
 3. ತು೦ಬಾ ಉಪಯುಕ್ತ ಲೇಖನ..ಅನೇಕ ಗೊತ್ತಿಲ್ಲದ ವಿಚಾರಗಳು ತಿಳಿದುಬ೦ದವು.

  ಊರಿಗೆ ಹೋದಾಗ ಗುಡ ಬೆಟ್ಟ ತಿರುಗಬೇಕೆ೦ಬ ಆಸೆ..ಅಲ್ಲಿ ಪಾರ್ಥೇನಿಯಮ್ ಗಿಡಗಳಲ್ಲಿರುವ ಚಿಕ್ಕ ಚಿಕ್ಕ ಉಣುಗುಗಳ ಹಾವಳಿಯಿ೦ದ ಹೆದರುತ್ತೇನೆ.ಒ೦ದು ಸಾರಿ ಕಚ್ಚಿದರೆ ಗುಣವಾಗಲು ತಿ೦ಗಳುಗಟ್ಟಲೇ ಬೇಕಾಗುತ್ತದೆ.ಉಣುಗುಗಳಿ೦ದ ಕಚ್ಚಿಸಿಕೊಳ್ಳದ೦ತೆ ಇರಲು ಉಪಾಯವಿದ್ದರೆ ದಯವಿಟ್ಟು ತಿಳಿಸಿ.
  ವ೦ದನೆಗಳು.

  ReplyDelete
 4. ಮನಮುಕ್ತಾ ಅವರಿಗೆ ನಮಸ್ಕಾರ.
  ಉತ್ತರದ ಜಿಲ್ಲೆಗಳಿಂದ ಕಾಫಿ ಹಣ್ಣು ಕುಯ್ಯುವ ಕೆಲಸಕ್ಕೆ ಈ ಕಡೆ ಬರುವವರು ಉಣುಗಿನ ಕಾಟದಿಂದ ಹೈರಾಣರಾಗುತ್ತಾರೆ !! ಕೆಲವು ಎಸ್ಟೇಟುಗಳಲ್ಲಿ ಸಿಕ್ಕಾಪಟ್ಟೆ ಉಣುಗು ಇರುತ್ತವೆ.(ನಾವು scabex lotion/BB lotion ಕೊಡ್ತೇವೆ.ಇವು ಸ್ವಲ್ಪ ಸ್ಟ್ರಾಂಗ್)

  permethrin cream (Permite) ಮೈಗೆ,ಕೈ ಕಾಲಿಗೆ ಹಚ್ಚಿಕೊಳ್ಳಿ (ಗುಡ್ಡ ಬೆಟ್ಟ ತಿರುಗುವುದಕ್ಕೆ ಮೊದಲು). ಕೇವಲ ಒಂದು ದಿನದ ಸುತ್ತಾಟವಾದರೆ ನೀವೂ ಐವರ್ಮೆಕ್ಟಿನ್ ಮಾತ್ರೆ ಬೆಳಿಗ್ಗೆ ಒಂದು ತಿನ್ನಬಹುದು.

  ReplyDelete
 5. ಸುಬ್ರಹ್ಮಣ್ಯ ಅವರೆ,
  ಉಣುಗಿನ ಸಮಸ್ಯೆಗೆ ಪರಿಹಾರ ತಿಳಿಸಿರುವುದಕ್ಕೆ ಧನ್ಯವಾದಗಳು.

  ReplyDelete
 6. uttama maahiti..
  aadare side effect enaadroo iruttaa....?

  ReplyDelete
 7. ನಮಸ್ಕಾರ 'ಚುಕ್ಕಿ ಚಿತ್ತಾರ'ರೆ .
  ಅಂತಾ ಸೈಡ್ ಎಫ್ಫೆಕ್ಟ್ ಏನೂ ಇಲ್ಲ. ಬಸರಿಯರು,ಬಾಣಂತಿಯರು ತಿನ್ನ ಬಾರದು ಅಷ್ಟೇ. ಒಂದು ವಾರದ ನಂತರ ಮತ್ತೊಂದು ಮಾತ್ರೆ ತಪ್ಪದೇ ತಿನ್ನಬೇಕು. ಯಾವುದಕ್ಕೂ ಫ್ಯಾಮಿಲಿ ಡಾಕ್ಟರ ಸಲಹೆ ಪಡೆದೇ ತೆಗೆದು ಕೊಳ್ಳುವುದು ಉತ್ತಮ.

  ReplyDelete
 8. hi bhava,

  wa super, when am reading am surprise, these types of pills are there.thank you very much.

  ReplyDelete
 9. Hello Subramanyaravare,
  Very informative and thanks for that. These Ivermectin and Emamectin benzoate (a drug, chemically belongs same group as Ivermectin) are also used to treat sealice which stick and feed on fish tissues. Five to ten sea lices that kills a fish of size ranging from 6-8 Kgs. Its impossible to get rid of the sealices from water bodies, however they can be effectively controlled using above indicated drugs.

  ReplyDelete
 10. ದಿನನಿತ್ಯದ ಜೀವನದಲ್ಲಿ ಉಪಯುಕ್ತವಾಗುವಂತಹ ಮಾಹಿತಿಪೂರ್ಣ ಬರಹಕ್ಕಾಗಿ ದನ್ಯವಾದಗಳು.

  ReplyDelete
 11. ಇನ್ನೂ ಮೇಲೆ ಮೇಲೆ ಅಂದ್ರೆ ?

  ReplyDelete
 12. ವಸಂತ ಕುಮಾರ್August 7, 2011 at 9:29 PM

  ಉಪಯುಕ್ತ ಮಾಹಿತಿಯನ್ನೊಳಗೊಂಡ ಲೇಖನ... ನಿಮ್ಮ ಬರವಿಣಿಗೆ ಸದಾ ಹರಿದು ಬರಲಿ... .

  ReplyDelete