Tuesday, October 18, 2011

ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು............


              ಭ್ರಷ್ಟಾಚಾರದ ವಿರುದ್ದ ಹೋರಾಡಲು ಒಂದು ಹರಿತ ಆಯುಧಕ್ಕಾಗಿ ಉಪವಾಸ ಸತ್ಯಾಗ್ರಹಗಳೆಲ್ಲಾ ನಡೆದುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇನ್ನು ಸಿದ್ದವಾಗಿ ಬರಲಿರುವ ಲೋಕಪಾಲ್ ಮಸೂದೆ ಎಷ್ಟು ಹರಿತವೋ ಎಂಬುದನ್ನು ಕಾಲವೇ ಹೇಳಬೇಕು. ಭ್ರಷ್ಟಾಚಾರದ ವಿರುದ್ದ ಹೋರಾಡಲು ಈಗಾಗಲೇ ಒಂದು (ಸಾಕಷ್ಟು ಹರಿತವಾದ) ಆಯುದವಿದೆಯೆಂದು ಎಷ್ಟು ಜನಕ್ಕೆ ಗೊತ್ತು?? ಆ ಆಯುದವನ್ನು ಉಪಯೋಗಿಸಿ ಅಲ್ಲಿ ಎನು ನಡಿಯುತ್ತಿದೆ? ಎಂದು ತಿಳಿದುಕೊಂಡು ಭ್ರಷ್ಟಾಚಾರದ ಆಳವನ್ನು ಕಾಣಬಹುದು ಎಂಬುದು ಎಷ್ಟು ಜನರಿಗೆ ಗೊತ್ತಿದೆ?? ಆ ಆಯುದದ ಹೆಸರು ನಿಮಗೆಲ್ಲಾ ಎಲ್ಲೋ ಕೇಳಿ ಗೊತ್ತಿರಬಹುದು. ನಿಮ್ಮಲ್ಲಿ ಕೆಲವರಾದರೂ ಅದನ್ನು ಉಪಯೋಗಿಸಿಯೂ ಉಪಯೋಗಿಸಿರಬಹುದು. (ಕಾಮೆಂಟ್ ನಲ್ಲಿ ನಿಮ್ಮ ಅನುಭವ ಹೇಳಬಹುದು). ಅದೇ ಮಾಹಿತಿ ಹಕ್ಕು ಎಂಬ ಕಾನೂನು!!! ಈ ಲೇಖನ ಓದಿದ ಮೇಲೆ ಒಂದಿಬ್ಬರು ಇದನ್ನು ಉಪಯೋಗಿಸಿ ಅಲ್ಲಿ ಎನು ನಡಿಯುತ್ತಿದೆ ಎಂದು ತಿಳಿದುಕೊಂಡು ಸಂಬಂದಪಟ್ಟವರಿಗೆ ದೂರು ಕೊಟ್ಟರೆ ಕಾಮಗಾರಿಗಳು ಸ್ವಲ್ಪವಾದರೂ ಸರಿಯಾಗುತ್ತದೆ ಎಂಬುದೇ ನನ್ನ ಆಶಯ ಹಾಗೂ ನನ್ನ ಅನುಭವ. (ಹಾಗೆಲ್ಲಾ ಕಾಟಾಚಾರಕ್ಕೆ ಏನೇನೋ ಮಾಡದಂತೆ ಸ್ವಲ್ಪವಾದರೂ ಸರಿಯಾಗಿ ಕೆಲಸಮಾಡುವಂತೆ ಚುರುಕು ಮುಟ್ಟಿಸುತ್ತದೆ).ನಮ್ಮೂರ ರಸ್ತೆಯೊಂದರ ಕಳಪೆ ಡಾಮರ್ ಕಾಮಗಾರಿ ನಡೆದಾಗ - ಈ ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ - ಕಾಮಗಾರಿಯ ಎಸ್ಟಿಮೆಶನ್ ತರಿಸಿ - ದೂರು ಕೊಡುತ್ತೇವೆಂದಾಗ – ಜಿಲ್ಲಾಪಂಚಾಯತ್ ಇಂಜೀನಿಯರ್ ಮತ್ತು ರಸ್ತೆ ಕಂಟ್ರಾಕ್ಟರ್ ನಮ್ಮ ಮನೆಯವರೆಗೂ ಪಾದಬೆಳೆಸಿ – ತಪ್ಪಾಗಿದ್ದನ್ನು ಒಪ್ಪಿಕೊಂಡು - ರಸ್ತೆಗೆ ಹೊಸದಾಗಿ ಜಲ್ಲಿ ಟಾರಿನ ಒಂದು ಪದರ ಹಾಕಿದ ವಿಷಯವೇ ಈ ಬ್ಲಾಗಿನ ಬರಹ.
ಟಾರ್ ಹಾಕಿದ್ದರೂ ಕೆಳಗೆ ಕಾಣಿಸುವ ದೊಡ್ಡಜಲ್ಲಿಕಲ್ಲುಗಳು!! 
            ಸುಮಾರು ಎರಡೂವರೆ ವರ್ಷದ ಕೆಳಗೆ ನಡೆದ ಘಟನೆ. ಬಸ್ಸುಗಳೋಡಾಡುವ ಮುಖ್ಯರಸ್ತೆಯಿಂದ ಎರಡೂವರೆ ಕಿ.ಮೀ. ದೂರವಿರುವ ನಮ್ಮೂರಿನ ಜಲ್ಲಿ ರಸ್ತೆಯ ಬದಿಗೆ ಅಲ್ಲಲ್ಲಿ ಲಾರಿಯಿಂದ ಕಲ್ಲುಗಳು ದಡದಡಾಂತ ಇಳಿಸಲ್ಪಟ್ಟವು. ನಾಲ್ಕೈದು ದಿನಗಳಲ್ಲಿ ಆ ದೊಡ್ಡ ಕಲ್ಲುಗಳನ್ನು ಸುತ್ತಿಗೆಯಲ್ಲಿ ಕುಟ್ಟಿ ಪುಡಿ ಮಾಡಲು ಒಂದೆರಡು ಲಂಬಾಣಿ ಕುಟುಂಬಗಳ ಆಗಮನವೂ ಆಯ್ತು. (ಸ್ವಲ್ಪ ಗಾಜುಗಣ್ಣಿನ ಬಿಳಿ ಕೆಂಪು ಮೈಬಣ್ಣದ ಅವರ ಚಿಳ್ಳೆಪಿಳ್ಳೆಗಳು – ಆಹಾ-ನೋಡಲು ಒಂದಕ್ಕಿಂತ ಒಂದು ಮುದ್ದಾಗಿದ್ದವು). ನೋಡುನೋಡುತ್ತಿದ್ದಂತೆಯೇ ಆ ಸುಡು ಬಿಸಿಲಿನಲ್ಲಿ ಮೂರು ಕೋಲಿನ ತಾತ್ಕಾಲಿಕ ಚಪ್ಪರ ಹಾಕಿಕೊಂಡು ಅದರಡಿ ಕೂತು ಆ ಕಲ್ಲುಗಳನ್ನು ಸುತ್ತಿಗೆಯಲ್ಲಿ ಒಡೆದು ಮುಷ್ಟಿಗಾತ್ರದ ಜಲ್ಲಿಗಳನ್ನಾಗಿ ಮಾಡಿದರು. ಐದಾರು ದಿನಗಳಲ್ಲೇ ಮತ್ತೊಂದಿಷ್ಟು ಜನರು, ರೋಡ್ ರೋಲರ್, ಡಾಮರ್ ಡ್ರಂಗಳು, ‘ಬೇಬಿಜೆಲ್ಲಿ’, ಡಾಮರ್-ಜಲ್ಲಿಕಲ್ಲು ಮಿಶ್ರಣ ಮಾಡುವ ಯಂತ್ರ-ಎಲ್ಲದರ ಆಗಮನವಾಯಿತು. ಹಳೆ ರಸ್ತೆಯನ್ನು ಅಗೆದು, ಅದಕ್ಕೆ ದೊಡ್ಡ ಜಲ್ಲಿ ಸುರಿದು, ರೋಡ್ ರೋಲರ್ ಓಡಿಸಿ, ಮಟ್ಟಮಾಡಿದಂತೆ ಮಾಡಿ, ಅದರಮೇಲೆ ಬೇಬಿಜಲ್ಲಿ ಡಾಂಬರ್ ಬಿಸಿ ಮಿಶ್ರಣ ಚೆಲ್ಲಿ, ಮತ್ತೊಂದೆರಡು ಬಾರಿ ರೋಡ್ ರೋಲರ್ ಓಡಿಸಿ, ಒಂದೂವರೆ ದಿನದಲ್ಲೇ ಟಾರ್ ರಸ್ತೆ ರೆಡಿಮಾಡಿ ಉಳಿದ (ಉಳಿಸಿದ) ಬೆಬಿಜಲ್ಲಿ,ಟಾರ್ ಡ್ರಂ ಎಲ್ಲಾ ಲಾರಿಗೆ ತುಂಬಿ ಕೆಲಸ ಮುಗಿಸಿ ಹೋದರು!!! ಚಿಕ್ಕಜಲ್ಲಿ ಹಾಗೂ ಡಾಂಬರ್ ಮಿಶ್ರಣ ಹಾಕಿದ್ದರೂ ಕೆಳಗೆ ಹಾಕಿದ್ದ ದೊಡ್ದಜಲ್ಲಿ ಕಾಣುತ್ತಿತ್ತು. ಸರಿಯಾಗಿ ಕಾಲಲ್ಲಿ ಒದ್ದರೆ ಎಲ್ಲಾ ಕಿತ್ತುಬರುವಂತಿತ್ತು. ಮಾಡುವಾಗ ಊರ ಜನ ಕೇಳಿದಾಗ – ಅದಿನ್ನೂ ಸೆಟ್ ಆಗಬೇಕು. ಕೆಲವೇ ದಿನದಲ್ಲಿ ಎಲ್ಲಾ ಸರಿಯಾಗಿ ಫಸ್ಟ್ ಕ್ಲಾಸ್ ಆಗುತ್ತದೆ – ಎಂಬ ಉತ್ತರ – ಮೇಸ್ತ್ರಿ ಕಡೆಯಿಂದ!!! ಶುದ್ದ ಕಳಪೆ ಕಾಮಗಾರಿ. ನಾನು ಮಾತ್ರ-ಅಲ್ಲಿ ಏನೂ ವೀರಾವೇಶದ ವಾಗ್ವಾದ ಮಾಡದೇ-ಆ ಕಾಮಗಾರಿ ಮಾಡುವಾಗಿನ ಫೋಟೋಗಳನ್ನ ತೆಗೆದಿಟ್ಟುಕೊಂಡೆ.
        ಈ ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ ಬೇಕಾದ ಮಾಹಿತಿ ಕೇಳಲು ಸಂಬಂದಪಟ್ಟ ಕಛೇರಿಗಳಿಗೆ ಅಲೆಯುವ ಅವಶ್ಯಕತೆಯಿಲ್ಲ. ಒಂದು ರೂಪಾಯಿಗೆ ಕ್ಸೆರಾಕ್ಸ್ ಅಂಗಡಿಗಳಲ್ಲಿ ಸಿಗುವ ಮಾಹಿತಿ ಹಕ್ಕು ಫಾರಂ ತಂದು ಮನೆಯಲ್ಲೇ ಕೂತು ಭರ್ತಿಮಾಡಿ ಅಂಚೆ ಕಛೇರಿಯಿಂದ ಹತ್ತು ರೂಪಾಯಿ ಐ.ಪಿ.ಓ ತಂದು ಅದರೊಟ್ಟಿಗಿಟ್ಟು ಸಂಬಂದಪಟ್ಟ ಇಲಾಖೆಗೆ ಕೊರಿಯರ್ ಮಾಡಿದರೆ ಮುಗಿಯಿತು. ಒಂದು ತಿಂಗಳೊಳಗೇ ನಿಮ್ಮ ಮನೆಗೇ ಉತ್ತರ ಬರುತ್ತದೆ. (ಹಾಗೆ ಏನೂ ಉತ್ತರವೇ ಕೊಡದಿದ್ದರೆ ಅಧಿಕಾರಿಗಳು ದಿನಕ್ಕೆ ೨೫೦ ರೂಪಾಯಿ ದಂಡ ತೆರಬೇಕು). ಮಾಹಿತಿ ಹಕ್ಕು ಕಾನೂನನ್ನು ಮೊದಲ ಬಾರಿಗೆ ಬಳಸಿ ಜಿಲ್ಲಾ ಪಂಚಾಯತಿಯಿಂದ ಕಾಮಗಾರಿ ನಡೆದ ನಮ್ಮ ರಸ್ತೆಯ ಕೆಲಸದ ಎಸ್ಟಿಮೆಶನ್ ತರಿಸಿದೆ. (ಎಸ್ಟಿಮೆಶನ್=ಕಾಮಗಾರಿ ಹೇಗೆ ನಡೆಯಬೇಕು ಹಾಗೂ ಅದಕ್ಕೆ ಖರ್ಚೆಷ್ಟು ಎಂಬುದರ ಸಂಪೂರ್ಣ ವಿವರ). ಜೊತೆಗೆ ಜಲ್ಲಿ ಡಾಮರ್ ಕಾಮಗಾರಿ ಕಳಪೆಯಾದರೆ ಯಾರಿಗೆ ದೂರುಕೊಡಬೇಕೆಂಬ ಇನ್ನೊಂದು ಮಾಹಿತಿಯನ್ನೂ ಕೇಳಿದ್ದೆ!!!  ಪುಟವೊಂದಕ್ಕೆ ಎರಡು ರುಪಾಯಂತೆ (ಅದನ್ನೂ ಪೋಸ್ಟಲ್ ಐ.ಪಿ.ಓ. ಮೂಲಕ ಕೊರಿಯರ್ ಮಾಡಬೇಕು) ಐದಾರು ಪುಟಗಳ ಮಾಹಿತಿ ಕೈ ತಲುಪಿತು. ಎಸ್ಟಿಮೆಶನ್ ನೋಡಿದರೆ ನಮಗೆ ಗೊತ್ತಾಗುವುದು ಕಳಪೆ ಕಾಮಗಾರಿಯ ಸಂಪೂರ್ಣ ಮಾಹಿತಿ!!! ಪ್ರತಿ ಹಂತದಲ್ಲೂ ಕಳಪೆ ಹಾಗೂ ಕಾಟಾಚಾರದ ಕೆಲಸ ನಡೆದಿತ್ತು.
"ಕೆಲವೇ ದಿನದಲ್ಲಿ ಫಸ್ಟ್ ಕ್ಲಾಸ್ ಆಗುವ ರಸ್ತೆಯಂತೆ!!!"
          A4 ಸೈಜಿನ ಎರಡು ಪೇಪರ್ ತೆಗೆದುಕೊಂಡು – ಕಾಮಗಾರಿ ಯಾವ್ಯಾವ ಹಂತದಲ್ಲಿ ಎಷ್ಟೆಷ್ಟು ಕಳಪೆಯಾಗಿದೆಯೆಂದು ೧,೨,೩,೪..... ಎಂದು ಒಂದರಕೆಳಗೆ ಒಂದರಂತೆ ಸವಿಸ್ತಾರವಾಗಿ ಬರೆದುಕಾಮಗಾರಿ ನೂರಕ್ಕೆ ನೂರು ಎಸ್ಟಿಮೆಶನ್ ನಂತೆ ಮಾಡುವುದು ಕಷ್ಟಸಾದ್ಯವಾದರೂ ಸಂಪೂರ್ಣ ಕಳಪೆಯಾಗಿರುವುದರಿಂದ ದೂರುಕೊಡುವುದು ಅನಿವಾರ್ಯವಾಗಿದೆ. ಕಾಮಗಾರಿಯ ವಿವಿದ ಹಂತಗಳ ಫೋಟೊ ತೆಗೆದಿಟ್ಟುಕೊಂಡಿದ್ದು ಕಳಪೆಯಾಗಿದ್ದನ್ನು ಸರಿಪಡಿಸದಿದ್ದರೆ ಇಲಾಖೆಗೆ ಅಧಿಕೃತ ದೂರುಕೊಡಬೇಕಾಗುತ್ತದೆ. ಅಧಿಕೃತ ದೂರುಕೊಡುವ ಮೊದಲು (ಅಧಿಕೃತ ದೂರನ್ನು ಯಾರಿಗೆ ಕೊಡಬೇಕೆಂಬ ಮಾಹಿತಿಯನ್ನು ಮೊದಲೇ ಕೇಳಿಪಡೆದುಕೊಂಡಿದ್ದೆನಷ್ಟೇ!!) ನಿಮ್ಮ ಗಮನಕ್ಕೆ ಈ ಪತ್ರ – ಎಂಬ ಎಚ್ಚರಿಕೆಯೊಂದಿಗೆ ಪತ್ರವೊಂದನ್ನುಮೂರು ಪ್ರತಿಗಳನ್ನಾಗಿ ಕ್ಸೆರಾಕ್ಸ್ ಮಾಡಿ – ೧) ಜಿಲ್ಲಾ ಪಂಚಾಯತ್ ಇಂಜೀನಿಯರ್, ೨) ಜಿಲ್ಲಾ ಪಂಚಾಯತ್ ನಮ್ಮ ಕ್ಷೇತ್ರದ ಸದಸ್ಯರು ಹಾಗೂ ೩) ಕಾಮಗಾರಿ ಮಾಡಿದ ಕಂಟ್ರಾಕ್ಟರ್ – ಈ ಮೂರೂ ವಿಳಾಸಕ್ಕೆ ಕೊರಿಯರ್ ಮಾಡಿದೆ. ಸದಾ ನಗುಮೊಗದ ನಮ್ಮ ಘನವೆತ್ತ ಜಿಲ್ಲಾ ಪಂಚಾಯತ್ ಸದಸ್ಯರಿಂದ (ಈಗ ಮಾಜಿ) ಈವರೆಗೂ ಉತ್ತರ ಬಂದಿಲ್ಲ – ಉತ್ತರ ಕಳಿಸುವವರಿಗೆ ಕಷ್ಟವಾಗದಂತೆ ನನ್ನ ವಿಳಾಸ ಬರೆದಿದ್ದ ಐದು ರೂಪಾಯಿ ಪೋಸ್ಟ್ ಕವರ್ ಇಟ್ಟು ಕಳಿಸಿದ್ದರೂ ಕೂಡ!!!
        ಆದರೆ ಇಂಜೀನಿಯರ್ ಹಾಗೂ ಕಂಟ್ರಾಕ್ಟರ್ ಗೆ ಕಳಿಸಿದ್ದ ಪತ್ರ ಕೆಲಸಮಾಡಿತ್ತು. ನೀವು ಮಾಡಿದ ರಸ್ತೆ ಕಾಮಗಾರಿ ಕಳಪೆಯಾಗಿದೆಯೆಂದು ಗ್ರಾಮಸ್ಥರಿಂದ ದೂರು ಬಂದಿದ್ದು, ಮಳೆಗಾಲ ಕಳೆದ ನಂತರ ಸರಿಪಡಿಸದಿದ್ದರೆ ನಿಮ್ಮಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ – ಎಂದು ಇಂಜೀನಿಯರ್ ಕಂಟ್ರಾಕ್ಟರ್ಗೆ ಒಂದು ಪತ್ರ ಬರೆದು ಅದರ ನಕಲನ್ನು ನನಗೆ ಕಳಿಸಿದರು. ಕಂಟ್ರಾಕ್ಟರ್ ಕಡೆಯಿಂದಲೂ ಮಳೆಗಾಲ ಕಳೆದ ನಂತರ ಸರಿಪಡಿಸಿಕೊಡುವ ಆಶ್ವಾಸನೆಯ ಪತ್ರ ಬಂತು. ಇಷ್ಟೆಲ್ಲಾ ಓದಿ ನೀವು – ವಾವ್!!! ಆ ವರ್ಷ ಮಳೆಗಾಲ ಕಳೆದಕೂಡಲೇ ಕಂಟ್ರಾಕ್ಟರ್ ಬಂದು ರಸ್ತೆ ಸರಿಮಾಡಿಕೊಟ್ಟರು ತಾನೇ – ಎಂದು ಉದ್ಗಾರ ತೆಗೆಯಬೇಡಿ. ಮಳೆಗಾಲ ಮುಗಿದು ನಾಲ್ಕೈದು ತಿಂಗಳುಗಳಾದನಂತರವೂ ಅವರದ್ದು ಜಾಣಮರೆವು!!! ಆ ಜಾಣಮರೆವಿಗೆ ಔಷದಿಯಾಗಿ ಉಪಯೋಗಿಸಿದ್ದು ಮತ್ತೊಮ್ಮೆ ಮಾಹಿತಿಹಕ್ಕು ಕಾನೂನು!!! ಈ ಬಾರಿ ಕೇಳಿದ ಮಾಹಿತಿ – ರಸ್ತೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯ ಸಂಪೂರ್ಣ ವಿವರ (ಟೆಂಡರ್ ಕರೆದ ದಿನಾಂಕ, ತೆರೆದ ದಿನಾಂಕ, ಭಾಗವಹಿಸಿದ್ದ ಬಿಡ್ಡುದಾರರು, ಕೊಟ್ ಮಾಡಿದ ಬಿಡ್). ಚುರುಕು ಮುಟ್ಟಿತು. ಒಂದು ದಿನ (ನಾನು ಮನೆಯಲ್ಲಿರಲಿಲ್ಲ) ಕಂಟ್ರಾಕ್ಟರ್ ಹಾಗೂ ಇಂಜೀನಿಯರ್ ನಮ್ಮಮನೆಯವರೆಗೂ ಬಂದು – ಟಾರ್ ನ ಗುಣಮಟ್ಟ ಕಡಿಮೆಯಿದ್ದುದರಿಂದ ಹಾಗಾಗಿದ್ದು – ಎಂದು ಸ್ಪಷ್ಟೀಕರಣ ನೀಡಿ (!!!) ಇನ್ನೊಂದು ಪದರ ಟಾರ್ ಹಾಕಿ ಸರಿಪಡಿಸುವುದಾಗಿ ಹೇಳಿದರು. ಒಂದೆರೆಡು ದಿನಗಳಲ್ಲೇ ಮತ್ತೊಮ್ಮೆ ಲಾರಿ, ಬೇಬಿಜೆಲ್ಲಿ, ಟಾರ್ ಡ್ರಂಗಳು, ಟಾರ್ ಮತ್ತು ಜಲ್ಲಿ ಮಿಶ್ರಣಮಾಡುವ ಯಂತ್ರ, ರೋಡ್ ರೋಲರ್  ಹಾಗೂ ಕೆಲಸಗಾರರು – ಇವರೆಲ್ಲರ ಆಗಮನವಾಯಿತು. ರಸ್ತೆಯನ್ನೊಮ್ಮೆ ಗುಡಿಸಿ – ಹೊಸದಾಗಿ ಬಿಸಿ ಟಾರ್ ಜಲ್ಲಿ ಮಿಶ್ರಣ ಸುರಿದು – ಅದರಮೇಲೆ ರೋಡ್ ರೋಲರ್ ಓಡಿಸಿ – ರಸ್ತೆ ಸರಿಪಡಿಸಿದರು!!!! (ನಾಳೆ ನಮ್ಮೂರಿಗೆ ನೀವು ಬಂದಾಗ – ಎಲ್ಲಿ ಆ ಸೂಪರ್ ಸುಪ್ರಿಂ ರೋಡ್? ಎಂದು ಕೇಳಿದರೆ – ಇದು ಎರಡೂವರೆ ವರ್ಷ ಹಿಂದಿನ ಕಥೆ. ಮೂರ್ನಾಲ್ಕು ತಿಂಗಳಲ್ಲೇ ಹಾಳಾಗುವ ಬದಲು ಈಗ ಕಿತ್ತುಹೋಗಲು ಶುರುವಾಗಿದೆ!!!)
           ಸ್ವಲ್ಪ ಕಲ್ಪಿಸಿಕೊಳ್ಳೋಣ. ಮಾಹಿತಿ ಹಕ್ಕು ಎಂಬ ಕಾನೂನೇ ಇಲ್ಲದಿದ್ದರೆ? ಕಳಪೆ ರಸ್ತೆ ಕಾಮಗಾರಿ ದೂರುಕೊಡಲು ನಾನು ಜಿಲ್ಲಾಪಂಚಾಯತ್ ಆಫೀಸಿಗೆ ಹೋಗುವುದು. ಎಸ್ಟಿಮೆಶನ್ ಎಲ್ಲಿ ಸಿಗುತ್ತೆ?ಎಲ್ಲಿ ದೂರು ಕೊಡುವುದು? – ಎಂದು ನಾನು ಕೇಳುವುದು!! ಕೇಳುತ್ತಿರುವಂತೆಯೇ (ಯಾವನೋ ಒಬ್ಬ ಎಲ್ಲಾ ಸರಿಮಾಡುವವನು ಬಂದ – ಎಂಬಂತೆ ಆಶ್ಚರ್ಯ ಹಾಗು ಅಸಡ್ಡೆಯಿಂದ ನನ್ನನ್ನು ನೋಡುತ್ತಾ) ಅಲ್ಲಿ ಕೂತ ಯಾವನೋ ಒಬ್ಬ ಸಿಬ್ಬಂದಿ – ಕಿಸಕ್ಕನೆ ನಗುತ್ತಾ – ಸಾಹೇಬ್ರಿಲ್ಲ, ನಾಳೆ ಬನ್ನಿ – ಎಂದು ಹೇಳುವುದು. ಯಾವ ಎಸ್ಟಿಮೆಶನ್ ಮಾಹಿತಿ ಹಕ್ಕು ಕಾನೂನಿನ ಸಹಾಯದಿಂದ – ಇಪ್ಪತ್ತು ಮೂವತ್ತು ರೂಪಾಯಿಗೆ ನಮ್ಮ ಮನೆಬಾಗಿಲಿಗೆ ಬರುತ್ತದೋ – ಅದೇ ಎಸ್ಟಿಮೆಶನ್ ಗೆ ಆ ಕಾನೂನು ಇಲ್ಲದಿದ್ದರೆ - ನಾವು ಎಷ್ಟೊಂದು ಕಷ್ಟಪಡಬೇಕಾಗುತ್ತಿತ್ತು ಅಲ್ವಾ. 
            ಎಲ್ಲರಿಗೂ ಗೊತ್ತಿರುವ ಸತ್ಯವೇನೆಂದರೆ (ಹೆಚ್ಚಿನ ಎಲ್ಲಾ ಕಾಮಗಾರಿಗಳಲ್ಲಿ) ಕಾಮಗಾರಿಗೆಂದು ಬಿಡುಗಡೆಯಾಗುವ ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗಿರುವುದಿಲ್ಲ. ಕಾಮಗಾರಿಗಳನ್ನು ಕಾಟಾಚಾರಕ್ಕೆಮಾಡಿ ಇಂಜೀನಿಯರ್, ಕಂಟ್ರಾಕ್ಟರ್ ಹಾಗು (ಹೆಚ್ಚಿನ ಸಂದರ್ಭದಲ್ಲಿ) ರಾಜಕಾರಣಿ – ಈ ಮೂರೂ ಜನ ಸೇರಿ ದುಡ್ಡು ಹೊಡೆಯುತ್ತಾರೆ. ಈ ಮೂರೂ ಜನರಲ್ಲಿ ರಾಜಕಾರಣಿ ಸ್ವಲ್ಪ ಸುರಕ್ಷಿತ. ಅವರು ತಿಂದಿದ್ದು ಗೊತ್ತೇ ಆಗುವುದಿಲ್ಲ!!! (ಕಂಡಲ್ಲೆಲ್ಲಾ ನಮಸ್ಕಾರ ಮಾಡುವ ಸದಾ ನಯವಂತಿಕೆ ಪ್ರದರ್ಶಿಸುವ ರಾಜಕಾರಣಿ (ಸಾದಾರಣವಾಗಿ) ದೊಡ್ಡ ಕಳ್ಳ ಆಗಿರುತ್ತಾನೆ). ಆದರೆ ಕಂಟ್ರಾಕ್ಟರ್ ಹಾಗೂ ಇಂಜೀನಿಯರ್ – ಒಬ್ಬ ಕಳಪೆ ಕಾಮಗಾರಿ ಮಾಡಿದವನು ಹಾಗೂ ಮತ್ತೊಬ್ಬ ಅದು ಸರಿಯಿದೆ. ಹಣ ಮಂಜೂರು ಮಾಡಬಹುದು ಎಂದು ಸಹಿ ಹಾಕಿದವನು – ಇಬ್ಬರೂ ಅಂಜಿಕೆಯಿಂದಲೇ ಇರುತ್ತಾರೆ. ಜನರಿಂದ ದೂರು ದಾಖಲಾಗಿ ಉನ್ನತ ತನಿಖೆಯಿಂದ ಕಾಮಗಾರಿ ಕಳಪೆಯೆಂದು ಸಾಬೀತಾದರೆ – ಕಂಟ್ರಾಕ್ಟರ್ ಕಪ್ಪು ಪಟ್ಟಿಗೆ ಸೇರಿದರೆ – ಇಂಜೀನಿಯರ್ ಸಸ್ಪೆಂಡ್ ಆಗಿ ಮನೆಗೆ ಹೋಗುತ್ತಾರೆ. ಸರ್ಕಾರ ಕಾಮಗಾರಿಗಳಿಗೆ ಲಕ್ಷಾಂತರ ರೂಪಾಯಿ ತೆಗೆದಿರಿಸಿ ಹ್ಯಾಗಾದರೂ ಮಾಡು ರಾಜಾ ಎಂದು ಹೇಳಿ ಕಂಟ್ರಾಕ್ಟರ್ ಕೈ ಮೇಲೆ ಹಾಕುವುದಿಲ್ಲ. ಗುಣಮಟ್ಟ ಕಾಪಾಡಲು ಇಂಜೀನಿಯರ್ ನೇಮಕ, ಹಾಗೂ ಗುಣಮಟ್ಟ ಕಳಪೆಯಾದರೆ ಅದನ್ನು ಸಾರ್ವಜನಿಕರು ದೂರುಕೊಡುವ ವ್ಯವಸ್ಥೆ ಹಾಗೂ ತನಿಖೆ ಇದ್ದೇ ಇರುತ್ತದೆ. ಇಂಜೀನಿಯರ್ ಹಾಗೂ ಕಂಟ್ರಾಕ್ಟರ್ ಸೇರಿ – ಕಳಪೆ ಕಾಮಗಾರಿ ಮಾಡಿ – ದುಡ್ಡು ನುಂಗಲು ಮುಖ್ಯ ಕಾರಣ – ತಾವೇನು ಮಾಡಿದರೂ ನಡೆಯುತ್ತೆ. ಜನ ಗೊಣಗುಟ್ಟುತ್ತಾರೆಯೇ ವಿನಃ (ಸರಿಯಾದ ಕ್ರಮದಲ್ಲಿ) ಕೆಳುವುದಿಲ್ಲ. (ಸರಿಯಾದ ಕ್ರಮದಲ್ಲಿ) ದೂರು ಕೊಡುವುದಿಲ್ಲ – ಎಂಬ ಧೈರ್ಯ!!! ಜನರ ಪರವಾಗಿ ಪ್ರಶ್ನಿಸಬೇಕಾಗಿದ್ದ ಜನಪ್ರತಿನಿದಿಯ ಕೈ ಬೆಚ್ಚಗೆ ಮಾಡಿ ಬುಟ್ಟಿಗೆ ಹಾಕಿಕೊಂಡ ಧೈರ್ಯ!!! ಜನ ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ ನನ್ನ ಕುತ್ತಿಗೆಗೆ ತರುತ್ತಾರೆ, ನಾನು ಸಸ್ಪೆಂಡ್ ಆಗಬಹುದು ಎಂಬ ಹೆದರಿಕೆಯೇ ಸಾಕು – ಅತೀ ಕಳಪೆ ಕಾಮಗಾರಿಗೂ ಕಣ್ಮುಚ್ಚಿ ಇಂಜೀನಿಯರ್ ಸಹಿಹಾಕದಿರಲು!!! ಆದರೆ ಕೆಳುವರ್ಯಾರು? ಎಷ್ಟು ಜನ?? 
              ಗ್ರಾಮಾಂತರ ಪ್ರದೇಶದಲ್ಲೂ ಇಂದು ಬದಲಾವಣೆಗಳಾಗಿವೆ. ಪ್ರತೀ ಚಿಕ್ಕ ಹಳ್ಳಿಗಳಲ್ಲೂ ಧರ್ಮಸ್ಥಳ ಸಂಘ, ಸ್ವಸಹಾಯ ಸಂಘಗಳು, ಆ ಸಂಘ, ಈ ಸಂಘ – ಎಂದು ಹತ್ತಾರು ಸಂಘಗಳಿವೆ. ಯಾವುದೇ ಕಾಮಗಾರಿ ಹಳ್ಳಿಗೆ-ಊರಿಗೆ ಮಂಜೂರಾದರೆ ಸಂಘದ ಪರವಾಗಿ ಯಾರಾದರೊಬ್ಬರು ಆ ಕಾಮಗಾರಿಯ ಎಸ್ಟಿಮೆಶನನ್ನು ಮಾಹಿತಿ ಹಕ್ಕಿನ ಮೂಲಕ ತರಿಸಿ ಸ್ವಲ್ಪವಾದರೂ ಗಮನಿಸುತ್ತಿದ್ದಾರೆ ಕಾಮಗಾರಿಗಳು ಅಷ್ಟು ಕಳಪೆಯಾಗಲಿಕ್ಕಿಲ್ಲವೆಂಬುವುದು ನನ್ನ ಅಭಿಪ್ರಾಯ. ಕಾಮಗಾರಿ ತುಂಬಾ ಕಳಪೆ ಮಾಡಿದರೆ ಜನ ಪ್ರಶ್ನಿಸುತ್ತಾರೆ ಎಂಬ ಹೆದರಿಕೆ (ಸ್ವಲ್ಪವಾದರೂ) ಇಂಜೀನಿಯರ್ ಹಾಗೂ ಕಂಟ್ರಾಕ್ಟರ್ ಗಳಿಗೆ ಇರುತ್ತದೆ. ಈ ಲೇಖನ ಓದಿದವರಲ್ಲಿ – ನೂರಕ್ಕೆ ಹತ್ತರಷ್ಟು ಜನರಾದರೂ – ನಾಲ್ಕೈದು ಜನ ಪರಿಚಯದ ಜನರಿಗೆ ಅಥವಾ ಸಂಘದ ಸದಸ್ಯರಿಗೆ ಈ ವಿಷಯ ಹೇಳಿ – ಒಬ್ಬಿಬ್ಬರಾದರೂ (ಸಂಬಂದಪಟ್ಟ) ಮಾಹಿತಿ ಕೇಳಿದರೂ – ನಾನು ಬರೆದ ಈ ಬರಹ ಸಾರ್ಥಕವೆಂಬುದು ನನ್ನಭಿಪ್ರಾಯ.
          ಈ ಬರಹ ಮುಗಿಸುವ ಮೊದಲು ಒಂದು ಪ್ಯಾರಾವನ್ನು ಮಾಹಿತಿ ಹಕ್ಕು ಕಾನೂನು ವಿಷಯದಲ್ಲಿ ಹುಲಿಗಳಂತಿರುವ ಇಬ್ಬರಬಗ್ಗೆ ನಿಮಗೆ ತಿಳಿಸಲು ಮೀಸಲಾಗಿಡಲು ಬಯಸುತ್ತೇನೆ. ಅವರೇ ಕೊಪ್ಪದ ಸಮೀಪದ ತಲಮಕ್ಕಿ ಸುಬ್ರಮಣ್ಯ ಹಾಗೂ ಬಾಳೆಹೊನ್ನೂರು ಫೋಟೊ ಭಟ್ರು. ಕೊಪ್ಪಾ ಸಮೀಪ ತಲಮಕ್ಕಿ ಎಂಬ ಹಳ್ಳಿಯಲ್ಲಿರುವ ಸುಬ್ರಮಣ್ಯ – ತಲಮಕ್ಕಿಯ ತಮ್ಮ ಹಳ್ಳಿಯಲ್ಲಿರುವ ಫೋನಿಗೆ – ಅದು ಕೊಪ್ಪಾ ಎಕ್ಸ್ಚೇಂಜ್ ನಿಂದ ಹೊರಟಿದ್ದಕ್ಕೆ – ಬಿ.ಎಸ್.ಏನ್.ಎಲ್ ನವರು ಪಟ್ಟಣದ ಬಾಡಿಗೆ ಹಾಕುವುದಕ್ಕೆ ವಿರೋದಿಸಿ (ಗ್ರಾಮಾಂತ ಎಕ್ಸ್ಚೇಂಜ್ ಹಾಗೂ ಪಟ್ಟಣದ ಎಕ್ಸ್ಚೇಂಜ್ ಫೋನ್ ಗಳಲ್ಲಿ ಬಾಡಿಗೆಯಲ್ಲಿ ತುಂಬಾ ವ್ಯತ್ಯಾಸವಿದೆ) ಹೋರಾಡಿ ಗೆದ್ದವರು!!! ಇನ್ನು ಬಾಳೆಹೊನ್ನೂರಿನ (ಆರ್.ಟಿ.ಓ ಏಜೆಂಟ್!!!) ಫೋಟೊ ಭಟ್ರು. ಹೆಗಲಿಗೊಂದು ಜೋಳಿಗೆ ಹಾಕಿಕೊಂಡು ಭಟ್ರು ಶೂನ್ಯದೆಡೆ ನೋಡುತ್ತಾ ಸಿಗರೆಟ್ ಹಚ್ಚಿ ಧಂ ಎಳೆದರೆಂದರೆ ಯಾವುದೋ ಮಾಹಿತಿ ಕೇಳಲು ಸ್ಕೆಚ್ ಹಾಕುತ್ತಿದ್ದಾರೆಂದೇ ಅರ್ಥ. ಜನಜಾಗೃತಿಗೆ ಸಂಬಂದಿಸಿದ ಸಂಘವೊಂದರ ಸದಸ್ಯರೂ ಆಗಿರುವ ಭಟ್ಟರು ಮಾಹಿತಿ ಹಕ್ಕು ಕಾನೂನು ಉಪಯೋಗಿಸಿ ಅನೇಕ ಅವ್ಯವಹಾರಗಳನ್ನು ಬಯಲಿಗೆಳೆದಿದ್ದಾರೆ. ಕೆನರಾ ಬ್ಯಾಂಕ್ ಚಿನ್ನದ ನಾಣ್ಯ ಪ್ರಕರಣದಲ್ಲಿ – ಇವರು ಕೇಳಿದ ನಾಲ್ಕು ಮಾಹಿತಿ ನೀಡದೆ ಸತಾಯಿಸಿದ ಬ್ಯಾಂಕ್ ಅಧಿಕಾರಿ – ೨೫೦೦೦ ರೂಪಾಯಿ ದಂಡ ಕಟ್ಟಬೇಕಾಯಿತು!!! (ಕೇಂದ್ರ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿ – ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ – ಅಧಿಕಾರಿ, ಇವರು ಹಾಗೂ ಕೇಂದ್ರ ಮಾಹಿತಿ ಆಯೋಗ (ದೆಹಲಿ) ಇವರ ನಡುವೆ ವೀಡಿಯೋ ಕಾನ್ಫಾರೆನ್ಸ್ ನಡೆದು ಬಗೆಹರಿದ ಘಟನೆ ಇದು)
    ವಿಶೇಷ ಸೂಚನೆ :- ಈ ಬರಹ ಓದಿ ಸ್ಪೂರ್ತಿಹೊಂದಿ ಒಂದಿಷ್ಟು ಮಾಹಿತಿ ಕೇಳೋಣ ಎಂದು ಹೊರಟವರು ನೀವಾಗಿದ್ದರೆ – ಚಿಕ್ಕ (ಆದರೆ ಬೆಲೆಕಟ್ಟಲಾಗದ) ಸಲಹೆ - ಎಳ್ಳಷ್ಟೂ ಸಂಬಂದವಿಲ್ಲದ, ಕೇವಲ ಅಧಿಕಾರಿಗಳಿಗೆ ಕಿರುಕುಳ ಕೊಡುವ ಒಂದೇ ಉದ್ದೇಶವಿಟ್ಟುಕೊಂಡು ಅನವಶ್ಯಕ ಮಾಹಿತಿಗಳನ್ನ ದಯವಿಟ್ಟು ಕೇಳಬೇಡಿ. (ಅದರಲ್ಲೂ ಪೋಲಿಸ್ ಇಲಾಖೆಯ ಬಗ್ಗೆ). ಯಾಕೆ? ಏನಾಗುತ್ತೆ?? – ಎಂಬುವುದು ನಿಮ್ಮ ಪ್ರಶ್ನೆಯಾಗಿದ್ದರೆ – ಅದಕ್ಕೆ ನನ್ನ ಉತ್ತರ – ಇಲ್ಲದಸಲ್ಲದ ಮಾಹಿತಿಗಳನ್ನು ಬೇರೆಬೇರೆ ಇಲಾಖೆಗಳಲ್ಲಿ ಕೇಳಿ ಪರಿಪಾಟಲು ಪಟ್ಟ ನನ್ನ ಸ್ನೇಹಿತನೊಬ್ಬನ ಕಥೆ – ನನ್ನ ಬ್ಲಾಗಿನಲ್ಲೇ ಮುಂದೊಂದುದಿನ ಬರೆಯುತ್ತೇನೆ.
              (ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ. ನಿಮ್ಮನಿಸಿಕೆಗಳು ನಮ್ಮ (ಮುಂದಿನ) ಬರಹಗಳನ್ನ ಸರಿಪಡಿಸುವ ಔಷಧ. ಬರಹ ಇಷ್ಟವಾಗಿ ಕಾಮೆಂಟ್ ಬರೆಯಲು ಪುರುಸೊತ್ತು ಸಿಗದಿದ್ದರೆ ಈ ಕೆಳಗಿರುವ +1 ರ ಮೇಲೆ ಕ್ಲಿಕ್ ಮಾಡಬಹುದು. ಫೇಸ್ ಬುಕ್ ನಲ್ಲಿ ಶೇರ್ ಮಾಡಿದರೆ ಹತ್ತಾರು ಜನರಿಗೆ ತಲುಪಿ, ಮೂರ್ನಾಲ್ಕು ಜನರಾದರೂ ಮಾಹಿತಿ ಕೇಳುವ ಮನಸ್ಸುಮಾಡಿ, ಒಂದಿಬ್ಬರಾದರೂ ಮಾಹಿತಿ ಕೇಳಿ ಒಂದಿಷ್ಟು ಉಪಯೋಗವಾದರೆ ನನ್ನ ಈ ಬರಹ ಸಾರ್ಥಕ) 
.  

15 comments:

 1. Vyvastheya hulukugalannu saripadisalu horaduttiddera...

  Abhinanddane galue sir.

  ReplyDelete
 2. ಪರ್ವಾಗಿಲ್ಲ ಡಾಕ್ಟ್ರೆ...
  ಹಾಳಾದ ಆರೋಗ್ಯಕ್ಕೊ೦ದೇ ಅಲ್ಲದೇ ಹಾಳಾದ ರಸ್ತೆಗೂ ಔಷಧಿ ಮಾಡಿದ್ದೀರಿ..ಒಳ್ಳೆಯದು.. ಮಾದರಿ ವಿಚಾರ..:)

  ReplyDelete
 3. ಮಾಹಿತಿ ಪಡೆಯುವದರ ಬಗೆಗೆ ಹಾಗು ಆ ಮಾಹಿತಿಯ ಸದ್ಬಳಕೆಯ ಬಗೆಗೆ ತುಂಬ ಉತ್ತಮ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು.

  ReplyDelete
 4. ಸರ್ ಕೆಲವರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮದಲ್ಲಿ ಅರ್ಜಿ ಇಟ್ಟು. ಅಧಿಕಾರಿಗಳನ್ನು ಹೆದರಿಸಿ ಹಣ ಮಾಡುತ್ತಿದ್ದಾರೆ.

  ReplyDelete
 5. ತುಂಬ ಉತ್ತಮ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು.
  ನಿಮ್ಮ ಅನುಮತಿಯೊಂದಿಗೆ ನನ್ನ ಬ್ಲಾಗ್ ಅಲ್ಲಿ ಇದನ್ನು ಪ್ರಕಟಿಸಬಹುದೇ ?

  ReplyDelete
 6. ಚಂದ್ರು ಮಲ್ಲೀಗೆರೆ ಅವರಿಗೆ-

  ನಿಜಕ್ಕೂ ಸಂತೋಷ. ಹೆಚ್ಚು ಜನ ಇದನ್ನು ಓದಲಿ. ಮಾಹಿತಿ ಕೇಳಿ ಅವ್ಯವಹಾರ ಬಯಲಿಗೆಳೆಯಲಿ ಎಂಬುದೇ ನನ್ನ ಆಶಯ. ಅದರ ಲಿಂಕ್ ಕೊಡಿ.

  ReplyDelete
 7. ಗೆಳೆಯರೇ, ಮಾಹಿತಿ ಹಕ್ಕಿನ ಬಳಕೆಯ ಬಗ್ಗೆ, ಅದರ ಕ್ರಮದ ಬಗ್ಗೆ, ಈ ನಿಮ್ಮ ಲೇಖನದಿಂದ ತಿಳಿಯಿತು. ನಾನು ಮಾಹಿತಿ ಹಕ್ಕಿನ ಅಡಿಯಲ್ಲಿ ಅವ್ಯವಹಾರಗಳನ್ನು ಬಯಲಿಗೆ ಎಳೆಯಬಹುದಾ ಅಂತ ಯೋಚಿಸುತ್ತಿದ್ದೇನೆ. ಖಂಡಿತಾ ಈ ನಿಮ್ಮ ಲೇಖನ ನೋಡಿದ ಮೇಲೆ ಇನ್ನಷ್ಟು ಆತ್ಮಸ್ಥೈರ್ಯ ಹೆಚ್ಚಾಗುತ್ತಿದೆ. ನಾನು ಸಮಯ ಮಾಡಿಕೊಂಡು ಮಾಡಲು ಪ್ರಯತ್ನಿಸುತ್ತೇನೆ. ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ಬೇಕಾಗುವ ಮುದ್ರಣ ಪುಸ್ತಕಗಳನ್ನು, ಖರೀದಿಸುವ ಸ್ಟೇಷನರಿ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಬಿಲ್ ಹಾಕಿಸಿ, ಪಡೆಯುತ್ತಿದ್ದಾರೆ (ಉದಾ : ಆಸ್ಪತ್ರೆ ಚೀಟಿ 100 ಹಾಳೆಗೆ ತಗಲುವ ವೆಚ್ಚ 26 ಪೈಸೆ, ಆದರೆ ಇವರು ಒಂದು ರೂ ನಂತೆ ಬಿಲ್ ಮಾಡಿಸಿದ್ದಾರೆ ಅನ್ನೋ ಅನುಮಾನವಿದೆ. ಅದು ಸತ್ಯವೂ ಕೂಡ, ಹಾಗೆಯೇ 1000 ಪುಸ್ತಕಕ್ಕೆ ಆರ್ಡರ್ ಕೊಟ್ಟು 1000 ಕ್ಕೆ ಬಿಲ್ ಹಾಕಿಸಿ, 600 ಪುಸ್ತಕ ಮಾತ್ರ ಮಾಡಿಸಿದ ಸತ್ಯ ನನ್ನ ಕಣ್ಣ ಮುಂದೆ ಇದೆ) ಯಾವ ರೀತಿಯ ಇದರ ಬಗ್ಗೆ ಕೆಲಸ ಮಾಡಬೇಕಾಗುತ್ತದೆ. ತಿಳಿಸುತ್ತೀರಾ?

  ReplyDelete
 8. ರಾಜು ಅವರಿಗೆ-

  ಸಣ್ಣಪುಟ್ಟ ಅವ್ಯವಹಾರಗಳಿಗಿಂತ, ನೇರವಾಗಿ ನಮ್ಮ ಅಥವಾ ನಮ್ಮ ಅತೀ ಹತ್ತಿರದವರ ಬುಡಕ್ಕೇ ತೊಂದರೆಯಾದಾಗ, ಅನ್ಯಾಯವಾದಾಗ ಈ ಮಾಹಿತಿ ಹಕ್ಕು ಕಾನೂನು ತಪ್ಪದೇ ಉಪಯೋಗಿಸಬೇಕು.ಸ್ವಲ್ಪವೂ ಸಂಬಂದಪಡದ ವಿಷಯಗಳ ಬಗ್ಗೆ ಮಾಹಿತಿಗಳನ್ನ ಕೇಳದಿರುವುದೇ ಒಳ್ಳೆಯದು. ನಮಗೆ ಸಂಬಂದ ಪಡದ ಕಡೆಗಳಲ್ಲಿ ನಾವೇ ಸ್ವತಹ ಮಾಹಿತಿ ಕೇಳುವ ಬದಲು ಆ ವಿಷಯಗಳಿಗೆ ಸಂಬಂದಪಟ್ಟ ಬೇರೆಯವರಿಗೆ ಮಾಹಿತಿ ಕೇಳುವಂತೆ ಪ್ರೋತ್ಸಾಹಿಸುವುದು ಒಳ್ಳೆಯದು.

  ಆಸ್ಪತ್ರೆ-ಚೀಟಿ ವಿಷಯದಲ್ಲಿ ಹೇಳುವುದಾದರೆ - ನೀವೇ ಸ್ವತಹ ಮಾಹಿತಿ ಕೇಳುವ ಬದಲು - ನಿಮ್ಮ ಪರಿಚಯದ ಮುದ್ರಣಾಲಯದವರು ಮಾಹಿತಿ ಕೇಳುವುದು ಒಳ್ಳೆಯದು.

  ReplyDelete
 9. ತುಂಬಾ ಉತ್ತಮವಾಗಿದೆ ಸರ್ . ಒಳ್ಳೆ ಲೇಖನ.. ಜಾಸ್ತಿ ಜನರಿಗೆ ತಲುಪಿಸುವಂತಹದ್ದು ನಮ್ಮ ಹೊಣೆ .. ಅವ್ಯವಹಾರಗಳು ಎಲ್ಲೆಡೆ ಇದೆ. ಒಂದೊಂದಾಗಿ ಬಯಲಿಗೆಳೆಯಬೇಕು ಮತ್ತು ಬೆಳೆಯದಂತೆ ನೋಡಿಕೊಳ್ಳುವುದು ಎಲ್ಲರ ಹೊಣೆ.

  ReplyDelete
 10. ಸುಬ್ರಹ್ಮಣ್ಯ ಅವರೆ,

  ನಿಮ್ಮ ವಿಜಯಕ್ಕೆ ಅಭಿನಂದನೆಗಳು, ವಿವರಗಳನ್ನು ಹಂಚಿಕೊಂಡದ್ದಕ್ಕೆ ತುಂಬಾ ಧನ್ಯವಾದಗಳು. ಒಂದೆರಡು ಎಚ್ಚರಿಕೆಯ ಮಾತುಗಳನ್ನೂ ಆಡಲು ಬಯಸುತ್ತೇನೆ.

  ನಾನು ಇತ್ತೀಚೆಗೆ ಕೇಳಿ ತಿಳಿದಂತೆ ಈ ಮಾಹಿತಿ ಹಕ್ಕನ್ನು ಒಬ್ಬರೇ ಆಗಿ ಉಪಯೋಗಿಸುವುದು ಅಪಾಯವನ್ನು ಆಹ್ವಾನಿಸಿದಂತೆ ಎಂದು. ಮಾಹಿತಿ ಹಕ್ಕನ್ನು ಉಪಯೋಗಿಸುವ ಧೀರರ ಹತ್ಯೆಗಳು ಇತ್ತೇಚೆಗೆ ನಡೆಯುತ್ತಲೇ ಇವೆ, ಅಲ್ಲವೇ? ಇತ್ತೀಚೆಗೆ ಈ ಬಗ್ಗೆ ಒಬ್ಬ ತಜ್ಞರ ಜೊತೆ ಕೂಡ ಮಾತಾಡಿದ್ದೆ. ಅವರ ಸಲಹೆ: ಹತ್ತಾರು (ಸಾಧ್ಯವಾದರೆ ನೂರಾರು) ಜನರ ಗುಂಪು ಮಾಡಿಕೊಂಡು ಮಾಹಿತಿ ಕೇಳಿ, ಒಬ್ಬರೇ ಆದರೆ ಜೀವಕ್ಕೆ ಅಪಾಯ ಬರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ ಎಂದು.

  ಈ ವಿಷಯದಲ್ಲಿ ಇನ್ನೊಬ್ಬರು ಸಕ್ರಿಯ ವ್ಯಕ್ತಿಯನ್ನೂ ಭೆಟಿಯಾದೆ. ಅವರೂ ಕೂಡ ಹೇಳಿದರು - ನಿಮ್ಮನ್ನು ಹೆದರಿಸಲೆಂದು ಹೇಳುತ್ತಿಲ್ಲ, ಆದರೆ ವಿವಿಧ ರೀತಿಯ ಕಿರುಕುಳ, ಕಷ್ಟಗಳಿಗೆ ತಯಾರಾಗಿಯೇ ಈ ರಂಗಕ್ಕೆ ಇಳಿಯಿರಿ ಎಂದು. ಅವರೊಂದು ಸಣ್ಣ ಉದಾಹರಣೆಯನ್ನೂ ಕೊಟ್ಟರು. ತಮ್ಮ ಮನೆಕೆಲಸದವಳ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಅವರ ಮೇಲೆ ಯಾರೋ ಪೋಲೀಸ್‍ಗೆ ಸತ್ಯಕ್ಕೆ ದೂರವಾದ ದೂರು ಕೊಟ್ಟರಂತೆ. ಅದರ ಆಧಾರದಲ್ಲಿ ಅವರನ್ನು ಯಾವುದೇ ವಿಚಾರಣೆ, ಆಧಾರಗಳಿಲ್ಲದೇ ಜೈಲಿಗೆ ಎಳೆದುಕೊಂಡು ಹೋಗಬಹುದಿತ್ತಂತೆ, ತನಿಖೆ ಎಲ್ಲಾ ಆಮೇಲೆ. ಅದೃಷ್ಟವಶಾತ್ ಅವರು ಅದರಿಂದ ಹೇಗೋ ನುಣುಚಿಕೊಂಡರು, ದುರದೃಷ್ಟವಶಾತ್ ಅವರಿಗೆ ಈ ವಿಷಯದಲ್ಲಿ ಸಹಾಯ ಮಾಡಿದ್ದು ಕೆಲವು ಪ್ರಭಾವೀ ವ್ಯಕ್ತಿಗಳು (ವಿಪರ್ಯಾಸ). ಆದರೆ ಜನಸಾಮಾನ್ಯನೊಬ್ಬ ಅದೇ ಸನ್ನಿವೇಶದಲ್ಲಿ ಚೆನ್ನಾಗಿ ಏಟು ತಿನ್ನುತ್ತಿದ್ದ ಎಂದವರು ವಿಷಾದದಿಂದ ಹೇಳಿದರು.

  ಹಾಗೆಂದು ಸುಮ್ಮನೆ ಕೂರಬೇಕೆಂದಲ್ಲ, ಆದರೆ ಜಾಗರೂಕತೆಯಿಂದ ಹಾಗೂ ಸಾಧ್ಯವಾದಲ್ಲೆಲ್ಲಾ ಗುಂಪಾಗಿ ಮುಂದೆ ನಡೆಯುವುದು ಉತ್ತಮ ಎಂದು ಅವರೆಲ್ಲರ ಸಲಹೆ. ನಾನಿನ್ನೂ ಈ ರಂಗಕ್ಕೆ ಇಳಿಯಲಿಲ್ಲ, ಮುಂದೊಂದು ದಿನ ಇಳಿಯಲೂ ಬಹುದು, ಗೊತ್ತಿಲ್ಲ.

  ನಿಮ್ಮ ಅವಗಾನೆಗೆ: ನಿಮ್ಮೀ ಲೇಖನದ ಒಂದು ಕಾಪಿ ಗಲ್ಫ್ ಕನ್ನಡಿಗ ತಾಣದಲ್ಲಿ ಕೂಡ ಪ್ರಕಟವಾಗಿದೆ http://www.gulfkannadiga.com/news-54485.html ಆದರೆ ಇಲ್ಲಿ ನೀವು ಮಾಡುವ ಲಘು ಪರಿಷ್ಕರಣೆಗಳು ಅಲ್ಲಿ ಮೂಡಿಬರುತ್ತಿಲ್ಲ. ಬಹುಷಃ ನೀವು ಕೊಂಡಿಯನ್ನು ಮಾತ್ರ ಹಾಕುವಂತೆ ಅವರನ್ನು ಒತ್ತಾಯಿಸಬೇಕೇನೋ?

  ReplyDelete
 11. ಮಾಹಿತಿಯುಕ್ತ ಲೇಖನಕ್ಕಾಗಿ ಧನ್ಯವಾದಗಳು,

  ReplyDelete
 12. ಕೃಷ್ಣಶಾಸ್ತ್ರಿ ಅವರಿಗೆ -
  ಅದನ್ನೇ ನಾನು ಬರೆದಿದ್ದು.
  "ಈ ಬರಹ ಓದಿ ಸ್ಪೂರ್ತಿಹೊಂದಿ ಒಂದಿಷ್ಟು ಮಾಹಿತಿ ಕೇಳೋಣ ಎಂದು ಹೊರಟವರು ನೀವಾಗಿದ್ದರೆ – ಚಿಕ್ಕ (ಆದರೆ ಬೆಲೆಕಟ್ಟಲಾಗದ) ಸಲಹೆ - ಎಳ್ಳಷ್ಟೂ ಸಂಬಂದವಿಲ್ಲದ, ಕೇವಲ ಅಧಿಕಾರಿಗಳಿಗೆ ಕಿರುಕುಳ ಕೊಡುವ ಒಂದೇ ಉದ್ದೇಶವಿಟ್ಟುಕೊಂಡು ಅನವಶ್ಯಕ ಮಾಹಿತಿಗಳನ್ನ ದಯವಿಟ್ಟು ಕೇಳಬೇಡಿ. (ಅದರಲ್ಲೂ ಪೋಲಿಸ್ ಇಲಾಖೆಯ ಬಗ್ಗೆ). “ಯಾಕೆ? ಏನಾಗುತ್ತೆ??” – ಎಂಬುವುದು ನಿಮ್ಮ ಪ್ರಶ್ನೆಯಾಗಿದ್ದರೆ – ಅದಕ್ಕೆ ನನ್ನ ಉತ್ತರ – ಇಲ್ಲದಸಲ್ಲದ ಮಾಹಿತಿಗಳನ್ನು ಬೇರೆಬೇರೆ ಇಲಾಖೆಗಳಲ್ಲಿ ಕೇಳಿ ಪರಿಪಾಟಲು ಪಟ್ಟ ನನ್ನ ಸ್ನೇಹಿತನೊಬ್ಬನ ಕಥೆ – ನನ್ನ ಬ್ಲಾಗಿನಲ್ಲೇ ಮುಂದೊಂದುದಿನ ಬರೆಯುತ್ತೇನೆ."

  ReplyDelete
 13. ನೀವು ಲೇಖನದ ಕೊನೆಯಲ್ಲಿ ಕೊಟ್ಟ ಎಚ್ಚರಿಕೆ ಓದಿದ್ದೆ, ಆದರೆ ನಾನು ಹೇಳಬಯಸಿದ್ದೇನೆಂದರೆ ನಮಗೆ ಸಂಬಂಧಪಟ್ಟದ್ದಾಗಿದ್ದರೂ ಕೂಡ ಒಬ್ಬರೇ ಎದುರಿಸುವುದು ಗಂಡಾಂತಕಾರಿಯಾಗಬಹುದು ಎಂದು, ಅಷ್ಟೆ. ಅದು ಚಿಕ್ಕ-ಪುಟ್ಟ ಕಿರುಕುಳಗಳಲ್ಲಿ ನಿಲ್ಲಬೇಕೆಂದೇನಿಲ್ಲ, ಬಲಶಾಲಿಗಳನ್ನು ಎದುರಿಸಲು ಹೊರಟರೆ ದೊಡ್ಡ ಬೆಲೆಯನ್ನೇ ತೆರಬೇಕಾಗಿಯೂ ಬರಬಹುದು ಎಂದು.

  ಇದು ನಾನು ಹೇಳಿದ್ದಲ್ಲ, ಈ ಕ್ಷೇತ್ರದಲ್ಲಿ ಸಾಕಷ್ಟು ಅಧ್ಯಯನ ಮಾಡಿದ ತಜ್ಞರೊಬ್ಬರು + ಇದನ್ನು ಸಾಕಷ್ಟು ಸಮಯದಿಂದ ಉಪಯೋಗಿಸುತ್ತಿರುವ ಸಕ್ರಿಯ ವ್ಯಕ್ತಿಯೊಬ್ಬರು ನನಗೆ ಕೊಟ್ಟ ಎಚ್ಚರಿಕೆಯ ಮಾತುಗಳು, ಉತ್ಸಾಹಕ್ಕೆ ತಣ್ಣೀರೆರೆಚಲೆಂದು ಅಲ್ಲ, ಆದರೆ ಜಾಗರೂಕತೆಯಿಂದ ಮುಂದುವರಿಯಲು ಕೊಟ್ಟ ಕಿವಿಮಾತು.

  ನಿಮ್ಮ ಮುಂದಿನ ಕಥೆಯನ್ನು ಓದಲು ಕುತೂಹಲದಿಂದ ಕಾಯುತ್ತಿದ್ದೇನೆ.

  ReplyDelete
 14. ನಿಮ್ಮ ಬರಹವು ನಮ್ಮಂತವರೀಗೆ ಪೂರ್ಣವಾಗಿಯೂ ತುಂಬಾ ಉಪಯುಕ್ತವಾಗಿದೆ ನಾನು ಕೂಡಾ ನಿಮ್ಮ ಮಾಹಿತಿಯನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದೇನೆ, ನನ್ನ ಬ್ಲಾಗ್ ನ ಹೆಸರು "ಮಂಜೇಶ್ವರ್ ಟೈಮ್ಸ್" ಸಮಯ ಸಿಕ್ಕಾಗ ಒಮ್ಮೆ ಬೇಟಿ ಕೊಡಿ ಧನ್ಯವಾದಗಳೊಂದಿಗೆ-ರಹಿಮಾನ್ ಉದ್ಯಾವರ

  ReplyDelete
 15. ನಿಮ್ಮ ಬರಹವು ತುಂಬಾ ಚೆನ್ನಾಗಿದೆ ನಿಮ್ಮಂತಹವರು , ಗ್ರಾಮಕ್ಕೊಬ್ಬ ಹುಟ್ಟಿಕೊಂಡರೆ ಈ ದೇಶಕ್ಕೆ ಭ್ರಷ್ಟಚಾರ ಮಸೂದೆಯೇ ಬೇಡೆವೇನೋ ಅನಿಸುತ್ತದೆ... ಯಾಕೆಂದರೆ ಇಂದು ನಮ್ಮಲ್ಲಿ ಅಧಿಕಾರಿ ವರ್ಗದಿಂದ ಹಿಡಿದು - ಆಳುವ ವರ್ಗದ ತನಕವು ಭ್ರಷ್ಟಚಾರ ತುಂಬಿತುಳುಕುತ್ತಿದೆ.. ಹೀಗಾಗಿ ನಮ್ಮ ಕಡೆಯಿಂದ ಭ್ರಷ್ಟ ಅಧಿಕಾರಿಗಳಿಗೆ ಹಾಗೂ ಭ್ರಷ್ಟ ರಾಜಕಾರಣಿಗಳಿಗೆ ದಿಕ್ಕಾರವಿರಲಿ
  ರಾಘವೇಂದ್ರ.ಎಸ್
  http://generalknowledgepr.blogspot.com

  ReplyDelete