Sunday, January 9, 2011

ಗಗನಚುಕ್ಕಿಗಿಂತ ಭರಚುಕ್ಕಿನೇ ಮಜಾ!!!!!!

                       ಈ ಲೇಖನವನ್ನು ಪ್ರವಾಸಕ್ಕೆ ಹೋಗಿಬಂದವರ ಕೊರೆತ ಎಂದು ಪರಿಗಣಿಸಿ ಓದದೆ ಹೋದರೆ ನೀವೂ ಮುಂದೆ ನಾನು ಹಿಂದೆ (ಮೂರು ಬಾರಿ) ಮಾಡಿದ ತಪ್ಪನ್ನು ಮಾಡುವ ಸಂಭವವೇ ಹೆಚ್ಚೆಂದು ನನ್ನನಿಸಿಕೆ. ಹಿಂದೆ (ಹತ್ತು ವರ್ಷದಲ್ಲಿ) ಮೂರು ಬಾರಿ ನಾನು ಶಿವನಸಮುದ್ರಕ್ಕೆ ಹೋಗಿದ್ದೆ. ಕೇವಲ ಗಗನಚುಕ್ಕಿಯನ್ನು ಮಾತ್ರ ನೋಡಿ ಹಿಂದಿರುಗಿದ್ದೆ. ನಾನೀಗ ಬರೆದಂತಹ ಲೇಖನವನ್ನು ನಾನು ಹಿಂದೆಂದೆಲ್ಲಾದರೂ ಓದಿದ್ದರೆ ಅಥವಾ ಭರಚುಕ್ಕಿಯ ಚಿತ್ರಗಳನ್ನು ನೋಡಿದ್ದರೆ-ಇದು ನಿಜ-ನಿಜಕ್ಕೂ ಭರಚುಕ್ಕಿಯನ್ನು ಅಂದು ಬಿಡುತ್ತಿರಲಿಲ್ಲ!!!! ಜಲಪಾತ ಪ್ರವಾಸಕ್ಕೆ ಹೋಗಿಬಂದಮೇಲೆ-ಅನುಭವವನ್ನು ಅನೇಕರೊಂದಿಗೆ ಹಂಚಿಕೊಂಡಾಗ-ನನ್ನ ಗಮನಕ್ಕೆ ಬಂದಿದ್ದು-(ನನ್ನ ಕೆಲವು ಪರಿಚಿತರು ಮಾಡಿದಂತೆ) ಕೇವಲ ಗಗನಚುಕ್ಕಿಯನ್ನು ಮಾತ್ರ ನೋಡಿ ವಾಪಸ್ ಬರುತ್ತಾರೆ. ನನ್ನನಿಸಿಕೆಯಂತೆ ನಿಜವಾದ ಮಜಾ ಇರುವುದು ಭರಚುಕ್ಕಿಯಲ್ಲೇ!!!! 
                       ಸಾದಾರಣ ಬೆಂಗಳೂರು ಮೈಸೂರಿನಿಂದ ಹೊರಡುವ ಮಂದಿ (ಮೊದಲು ಸಿಗುವ) ಗಗನಚುಕ್ಕಿ ತಲುಪುತ್ತಿರುವಷ್ಟರಲ್ಲೇ ಹೈರಾಣರಾಗಿರುತ್ತಾರೆ. ಎರಡು ಮೂರು ಘಂಟೆಗಳ ಸತತ ಪ್ರಯಾಣ ಹಾಗೂ ಮಳವಳ್ಳಿ ಮದ್ದೂರು ಮದ್ಯೆ ಇರುವ ಕೆಟ್ಟ ರಸ್ತೆ ನಮ್ಮನ್ನು ಸುಸ್ತಾಗಿಸುತ್ತವೆ. ಮಳವಳ್ಳಿಯಿಂದ ಹೋಗುವಾಗ ಹೆದ್ದಾರಿಯಿಂದ ಎಡಕ್ಕೆ ಮೊದಲು ಸಿಗುವುದು ಗಗನಚುಕ್ಕಿ. ನಿಜಕ್ಕೂ ಸುಂದರ ದೃಶ್ಯ.ಇಲ್ಲಿ ಎರಡು ಕವಲಾಗಿ ದುಮ್ಮಿಕ್ಕುವ ಕಾವೇರಿಯ ಮೊದಲ ಕವಲು ನೋಡಲು ರುದ್ರರಮಣೀಯ. ಆದರೆ ಅಜ್ಜ್ಯಮ್ಮಂದಿರ ತರ (ದೂರದಲ್ಲೇ ಕೂತು) ಜಲಪಾತ ನೋಡಬೇಕು!!!! ಕೆಳಗೆಲ್ಲೂ ಹೋಗಿ ಹತ್ತಿರದಿಂದ ನೋಡುವಂತಿಲ್ಲ. ಮುಳ್ಳುತಂತಿಯ ಬೇಲಿ ಬೇರೆ. (ಏಳೆಂಟು ವರ್ಷದ ಕೆಳಗೆ ಹೋದಾಗ ಸ್ವಲ್ಪ ಕೆಳಗಿಳಿದು ಹೋಗಿ ಹತ್ತಿರದಿಂದ ನೋಡಿದ ನೆನಪು. ಅಮೇರಿಕಾ ಅಥವಾ ಆಸ್ಟ್ರೇಲಿಯ ಅಥವಾ ಯುರೋಪಾಗಿದ್ದರೆ ಜಲಪಾತದ ಬುಡದಿಂದ, ಎದುರಿನಿಂದ, ಬದಿಯಿಂದ, ಹಿಂದಿಂದ, ನೆತ್ತಿಯಿಂದ ಹಾಗೂ ದುಡ್ಡಿದ್ದವರಿಗೆ ಆಕಾಶದಿಂದಲೂ ನೋಡುವ ವ್ಯವಸ್ಥೆಯಿರುತ್ತದೆಂದು ಕೇಳಿದ್ದ ನನಗೆ ನಿಜಕ್ಕೂ ಬೇಜಾರಾಯಿತು).
ಗಗನಚುಕ್ಕಿಯ ಒಂದು ಕವಲು
ಗಗನಚುಕ್ಕಿಯ ಎರಡೂ ಕವಲುಗಳು
ಜಿಯಾಗ್ರಫಿ ವಿದ್ಯಾರ್ಥಿಗಳಿಗೆ ಬಯಲು ಪಾಠಶಾಲೆ??? 

                       ಇನ್ನು ಇದೇ ಜಾಗದಿಂದ ಎದುರು ಕಾಣುವ ಗಗನಚುಕ್ಕಿಯ ಇನ್ನೊಂದು ಕವಲು. ಕೆಲವರ ಪಾಲಿಗೆ ಅದೇ ಭರಚುಕ್ಕಿ!!! ಅಲ್ಲೊಂದು ಮುಸ್ಲಿಂ ದರ್ಗಾ ಇದೆ. ಇಲ್ಲಿ ಕಾವೇರಿ ಎರಡು ಮೂರು ಹಂತದಲ್ಲಿ ಬಳುಕುತ್ತಾ ದುಮುಕುತ್ತಾಳೆ. (ಮೊದಲ ಬಾರಿಗೆ ಹೋದವರು ಕೂತು) ಗಗನಚುಕ್ಕಿ ನೋಡಿಯಾದಮೇಲೆ ಹೂ. ಮುಗೀತು. ಭರಚುಕ್ಕಿ ಎಲ್ಲಿ? ಎಂದು ಅದು-ಇದು ಮಾರಾಟಮಾಡುವವರನ್ನು ಕೇಳಿದಾಗ ಬರುವ ಉತ್ತರ-ಹದಿನಾರು ಹದಿನೇಳು ಕಿ.ಮೀ.!!! ಹೌದು. ಕಣ್ಣೆದುರು ಕಾಣುವ ಆ ದರ್ಗಾವೂ ವಾಹನದಲ್ಲಿ ಹೋಗುವುದಾದರೆ ಅಷ್ಟೇ ದೂರ. ಪುನಹ ಮುಖ್ಯರಸ್ತೆಗೆ ಬಂದು-ಕೊಳ್ಳೇಗಾಲ ದಿಕ್ಕಿನಲ್ಲೇ ಮುಂದುವರೆದು-ಕಾವೇರಿ ಕವಲೊಡೆಯುವುದಕ್ಕೆ ಮೊದಲು ಇರುವ ಸೇತುವೆ ದಾಟಿ-ಪುನಹ ಎಡಕ್ಕೆ ತಿರುಗಿ-(ಭರಚುಕ್ಕಿಯೆಡೆ ಸಾಗುವ) ಕಾವೇರಿಯ ಕವಲಿಗೆ ಕಟ್ಟಿದ ಸೇತುವೆ ದಾಟಿ-ನಡುಗುಡ್ಡೆಗೆ ಬರಬೇಕು.(ಮದ್ಯರಂಗ??). ಅಲ್ಲಿದೆ ದರ್ಗಾ. ಅದಕ್ಕೆ ಸ್ವಲ್ಪ ಆಚೆ ಇರುವುದೇ ಭರಚುಕ್ಕಿ. ವಿವರಣೆ ಕೇಳಿಯೇ ಗಾಬರಿಯಾಗುವ (ಕೆಲವು) ಪ್ರವಾಸಿಗರು ಅಲ್ಲಿ ಹೋದ್ರುನೂ ಇಷ್ಟೇ ಎಂದು ತಮ್ಮಲ್ಲೇ ಹೇಳಿಕೊಂಡು ಶಿವನಸಮುದ್ರಕ್ಕೆ ಟಾಟಾ ಮಾಡಿ ತಲಕಾಡು ಕಡೆ ತೆರೆಳುತ್ತಾರೆ!!! ಆದ್ರೆ ನಿಜವಾದ ಮಜಾ ಇರುವುದು ಭರಚುಕ್ಕಿಯಲ್ಲೇ. ಏನಿದೆ ಅಲ್ಲಿ ಮಜಾ??  
ಹುರ್ರಾ!!!!!!!!

                                   ಸುತ್ತಿ ಬಳಸಿ ದರ್ಗಾ ತಲುಪಿ ಅಲ್ಲಿಂದ ಭರಚುಕ್ಕಿಯ ಇನ್ನೊಂದು ಕವಲು ನೋಡಿ ಸ್ವಲ್ಪ ಮುಂದೆ ಹೋದರೆ ಕಾಣುವುದೇ ಭರಚುಕ್ಕಿ. ಇದನ್ನು ಒಂದು ಜಲಪಾತ ಅನ್ನುವುದಕ್ಕಿಂತ ಎರಡು ಮೂರು ಹಂತಗಳಲ್ಲಿ ದುಮುಕುವ ಅನೇಕ ಜಲಪಾತಗಳ ಸಮೂಹ ಎನ್ನುವುದೇ ಸರಿ. ವಾಹನ ನಿಲ್ಲಿಸಿ ಒಂದಿಷ್ಟು ಮೆಟ್ಟಿಲು ಇಳಿದು ಸುಲಭವಾಗಿ ಜಲಪಾತದ ಬುಡಕ್ಕೇ ಹೋಗಬಹುದು. ಅತಿ ವಯಸ್ಸಾದ ಅಜ್ಜ್ಯಮ್ಮರನ್ನು ಬಿಟ್ಟು ಹೆಂಗಸರೂ ಚಿಕ್ಕಮಕ್ಕಳೂ ಕೂಡ ಕೆಳಕ್ಕಿಳಿಯಬಹುದು. ಜೋಗಾಕ್ಕೆ ಹೋಲಿಸಿದರೆ ಏನೇನೂ ಅಲ್ಲ.ಕೆಳಕ್ಕಿಳಿದಮೇಲೆ ಬನ್ನಿ ಮಜಾ!!! ಎಲ್ಲಿ ನೋಡಿದರೂ ಜುಳುಜುಳು ನೀರು. ಜಲಪಾತಗಳು!!! ಚಿಕ್ಕ ಮಕ್ಕಳೂ ನೀರಿಗೆ ತಲೆಯೊಡ್ಡಬಹುದು. ಈಜು ಬಲ್ಲವರು ಮನದಣಿಯೇ ಈಜಬಹುದು. ಬಂಡೆ ಮೇಲಿಂದ ನೀರಿನ ಹೊಂಡಕ್ಕೆ ಹಾರಿ ಮುಳುಗು ಹಾಕಬಹುದು. ನೀರಿಗಿಳಿಯುವ ಮನಸ್ಸಿಲ್ಲದೆ ನೀರೊಳಗೆ ಸಾಗುವ ಬಯಕೆಯಿದ್ದರೆ ನಿಮಗಾಗಿ ಉಕ್ಕಡಗಳಿವೆ. ಅದರಲ್ಲಿ ಕೂತು (ಲೈಫ್ ಜಾಕೆಟ್ ಇರುವುದಿಲ್ಲ. ಉಕ್ಕಡ ಮುಳುಗಿದರೆ ಈಜು ಬರದವರು ಗೋವಿಂದ!!!!) ನೀರಿನ ಮಡುವಿನ ಆಚೆಯಿರುವ ಜಲಪಾತದ ಬುಡಕ್ಕೂ ಹೋಗಬಹುದು. ಮಡುವಿನ ಮದ್ಯದಲ್ಲಿ (ಹುಟ್ಟು ಹಾಕುವವನ ಕೃಪೆಯಿಂದ) ಗರಗರನೆ ತಿರುಗುವ ಅನುಭವ ಪಡೆಯಬಹುದು. (ಇಲ್ಲಿ ಕಡಿಮೆ ಅಂದರೂ ಐವತ್ತು ಅಡಿ ಆಳವಿದೆಯಂತೆ!!!) ಹೇಳುವವರು-ಕೇಳುವವರು ಯಾರೂ ಇಲ್ಲ!!! ಮಜವೋ ಮಜಾ.ಅಷ್ಟು ದೂರದ (ಪ್ರಾಯಾಸದ) ಪ್ರಯಾಣ ಸಾರ್ಥಕ.
ಉಕ್ಕಡದ ಮಜಾ!!!!

           ಈಗ ನಿಮ್ಮನಿಸಿಕೆ ಹೇಳಿ-ಗಗನಚುಕ್ಕಿಗಿಂತ ಭರಚುಕ್ಕಿಯೇ ಮಜಾ ಎಂಬ ನನ್ನ ಹೇಳಿಕೆ ಸರಿಯೇ ತಪ್ಪೇ-ಅಂತ. (ಎರಡನ್ನೂ ನೋಡಿದವರ ಅಭಿಪ್ರಾಯ ಇಲ್ಲಿ ಪ್ರಸ್ತುತ) ಈ ಲೇಖನ ನಿಮ್ಮನ್ನು ಇನ್ನು ಮುಂದೆ ಶಿವನಸಮುದ್ರಕ್ಕೆ ಹೋದಾಗ ಭರಚುಕ್ಕಿಗೆ ಕರೆದೊಯ್ಯುತ್ತದೆಂದು ನನ್ನೆಣಿಕೆ.

Thursday, December 16, 2010

“ಆಳ ಮುಳುಗುವಿಕೆ” ಎಂಬ ಅಪಾಯಕಾರಿ ಕ್ರೀಡೆಯ ಕುರಿತು.............

              ನನಗೆ ತುಂಬಾ ಆಶ್ಚರ್ಯವೆಂದೆನಿಸುವ ವಿಷಯಗಳನ್ನ ಇತರರೊಡನೆ ಹಂಚಿಕೊಳ್ಳುವುದು ನನಗಿಷ್ಟ. ಈ ಹಿಂದಿನ ನನ್ನ ಅನೇಕ ಬರಹಗಳು ಅಂತಹವೇ. ಈಗ ನಾನು ಹೇಳಹೊರಟಿರುವುದು ಮುಳುಗುವಿಕೆ (Competitive Apnea) ಎಂಬ ಕ್ರೀಡೆಯ ಕುರಿತು. ಈ ಕ್ರೀಡೆಯ ವಿಷಯ ನಿಮಗೆ ಗೊತ್ತಿರುವ ಸಂಭವ ಕಡಿಮೆಯೆಂದೇ ನನ್ನನಿಸಿಕೆ. ಆದ್ದರಿಂದಲೇ ಈ ಲೇಖನ.
          ಗಾಳಿತುಂಬಿದ ಸಿಲಿಂಡರ್ ಮೊದಲಾದ ಆದುನಿಕ ಮುಳುಗು ಉಪಕರಣಗಳು ಬರುವ ಮೊದಲು ಮುಳುಗುವಿಕೆ ಎಂಬುದು ಮುತ್ತು ಆಯುವವರು ಹಾಗು ಸ್ಪಂಜು ಆಯುವವರಿಗೆ ಅನಿವಾರ್ಯವಾಗಿತ್ತು. ಉಸಿರನ್ನು ಸಾಕಷ್ಟು ಶ್ವಾಸಕೋಶದಲ್ಲಿ ತುಂಬಿಸಿಕೊಂಡು ಸಮುದ್ರದಾಳಕ್ಕೆ ಇಳಿದು ಮುತ್ತನ್ನು ಬಿಡಿಸಿ ತೆಗೆದು/ಸ್ಪಂಜನ್ನು ಆಯ್ದು ಮೇಲೆ ಬರಬೇಕಿತ್ತು. ಆದರೆ ಇಂದು ಕಾಲ ಬದಲಾಗಿದೆ. ಕೃತಕ ಉಸಿರಾಟ ನೀಡುವ ಮುಳುಗು ಉಪಕರಣಗಳು ಇಂದು ಈ ಕೆಲಸಗಳನ್ನು ಸುಲಭ ಮಾಡಿವೆ.(ಕೆಲವರು ನೀರಿನ ತೊಟ್ಟಿಗಳಲ್ಲೂ ಆ ಮೃದ್ವಂಗಿಗಳನ್ನು ಸಾಕಿ ಚಿಪ್ಪಿನೊಳಗೆ ಕಸ ತುರುಕಿ ಮುತ್ತು ಉತ್ಪಾದಿಸುತ್ತಾರೆ!!!) ವೃತ್ತಿ ಸಂಬಂದಿಸಿದ ಅನಿವಾರ್ಯತೆಯಿಲ್ಲದಿದ್ದರೂ ಇಂದು ಮುಳುಗುವಿಕೆ (Competitive Apnea) ಎಂಬುದು ದಾಖಲೆಗಳನ್ನು ಮುರಿಯುವ ಕ್ರೀಡೆಯಾಗಿ ಬೆಳೆಯುತ್ತಿದೆ!!!
         ತಮಗಿಂತ ಹಿಂದಿನವರು ಮಾಡಿದ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆಯಲು ಕೈಗೊಳ್ಳುವ ಈ ಮುಳುಗುವಿಕೆಯಲ್ಲಿ ಅನೇಕ ವಿದಗಳಿವೆ. ಅಷ್ಟೇನೂ ಅಪಾಯಕಾರಿಯಲ್ಲದ-ಈಜುಕೊಳದಲ್ಲಿ ಉಸಿರು ಒಳಗೆಳೆದುಕೊಂಡು ಆದಷ್ಟು ಹೊತ್ತು ಇರುವುದು, ಉಸಿರೆಳೆದುಕೊಂಡು ಮುಳುಗಿ ಆದಷ್ಟು ದೂರ ಕ್ರಮಿಸುವುದು-ಇವೆಲ್ಲಾ ಒಂದುಕಡೆಯಾದರೆ ಅಂಜದ,ಅಪಾಯಗಳಿಗೆ ಎದೆಯೊಡ್ಡುವ ವ್ಯಕ್ತಿತ್ವದವರಿಗೆ ಸದಾ ಸವಾಲಾಗಿರುವ ಮುಳುಗುವಿಕೆಯ ಪ್ರಕಾರವೇ ಮೈ ಝುಂ ಎನ್ನಿಸುವ ಆಳ ಮುಳುಗುವಿಕೆ!!!! ಹೆಚ್ಚಿನವರ ಅನಿಸಿಕೆಯಂತೆ ಪ್ರಪಂಚದ (ಬೇಸ್ ಜಂಪಿಂಗ್ ನಂತರದ) ಎರಡನೇ ಅತ್ಯಂತ ಅಪಾಯದ ಕ್ರೀಡೆ!!! ಬನ್ನಿ. ಇದರ ಬಗ್ಗೆ ಹೆಚ್ಚು ತಿಳಿಯೋಣ.
          ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡು ಶ್ವಾಸಕೊಶದೊಳಗೆ ಗಾಳಿ ತುಂಬಿಕೊಂಡು ಒಬ್ಬ ವ್ಯಕ್ತಿ ಎಷ್ಟು ಆಳದವರೆಗೆ ನೀರಿನಲ್ಲಿ ಮುಳುಗಬಹುದು?? (ಸರಿಯಾದ ಪದಪ್ರಯೋಗವೆಂದರೆ-ಎಷ್ಟು ಆಳದವರೆಗೆ ಮುಳುಗಿ ಜೀವಂತವಾಗಿ ಮೇಲೇರಬಲ್ಲ??-ಎಂಬುದು) ೨೦ ಅಡಿ? ೩೦ ಅಡಿ?? ೫೦ ಅಡಿ??? ಊಹೂ. ನೀವು ಹತ್ತಿರದಲ್ಲೂ ಇಲ್ಲ. ಈ ಆಳ ಮುಳುಗುವಿಕೆಯಲ್ಲೂ ಎರಡು ವಿದಗಳಿವೆ. ಒಂದು-ಉಸಿರೆಳೆದುಕೊಂಡು ಲೋಹದ ತೂಕದೊಂದಿಗೆ ಆಳಕ್ಕಿಳಿಯುವುದು-ಯೋಜಿತ ಆಳ ತಲುಪಿದನಂತರ ಗಾಳಿ ಚೀಲದ ಸಹಾಯದಿಂದ ಸರಸರನೆ ಮೇಲೆ ಬರುವುದು.(ಗಾಳಿಚೀಲ ಒದಗಿಸಲು ಕೃತಕ ಉಸಿರಾಟದ ಸಹಾಯಕರಿರುತ್ತಾರೆ). ಈ ಪ್ರಕಾರದಲ್ಲಿ ವಿಶ್ವದಾಖಲೆ-ಉಸಿರು ಬಿಗಿಹಿಡಿದು ಓದಿ-೨೧೪ ಮೀಟರ್(೭೦೬ಅಡಿ)!!! ಇನ್ನೊಂದು ಪ್ರಕಾರ-ಸಮತೂಕ ಮುಳುಗುವಿಕೆ (Constant Weight Apnea)-ಮುಳುಗಲು ಹಾಗೂ ಮೇಲೇರಲು ಯಾವುದೇ ತೂಕ/ಗಾಳಿಚೀಲ ಉಪಯೋಗಿಸದೆ ಉಸಿರೆಳೆದು ಮುಳುಗಿ ಮೇಲೇಳುವುದು. (ಕಾಲುಗಳಿಗೆ ಜಾಲಪಾದ ಕಟ್ಟಿಕೊಳ್ಳಬಹುದು). ಇದು ಮುಳುಗುವಿಕೆ ಕ್ರೀಡೆಯಲ್ಲೇ ಅತ್ಯಂತ ಕಷ್ಟದ ವಿದ. ಈ ಪ್ರಕಾರದಲ್ಲೂ ಆಸ್ಟ್ರೇಲಿಯಾದ ಸಾಹಸಿಯೊಬ್ಬ ೧೨೪ ಮೀಟರ್(೪೦೯ಅಡಿ) ಆಳ ಕ್ರಮಿಸಿ ಮೇಲೆಬಂದಿದ್ದಾನೆ!!!! ಅಬ್ಬಾ ಮನುಷ್ಯರ ಛಲವೇ!!!
          ಕೇವಲ ಉಸಿರೆಳೆದುಕಟ್ಟಿಕೊಂಡು ೨೦೦-೩೦೦ ಅಡಿ ಆಳ ಮುಳುಗುವುದನ್ನು ಕಲ್ಪಿಸಿಕೊಂಡರೇನೇ ಈ ಆಳಮುಳುಗುವಿಕೆಯ ಅಪಾಯ ಹಾಗೂ ಭೀಕರತೆ ನೀರಿನಲ್ಲಿ ಈಜಾಡಿ, ಮುಳುಗಿಯೆದ್ದು ಅನುಭವವಿರುವ ಓದುಗರಿಗೆ ಮಾತ್ರ ಸುಲಭವಾಗಿ ಅರ್ಥವಾಗುತ್ತದೆ. ಉಸಿರೆಳೆದುಕೊಂಡು ಶ್ವಾಸಕೋಶದಲ್ಲಿ ತುಂಬಿರುವ ಗಾಳಿಯು ಗಾಳಿಚೀಲದಂತೆ ಮೇಲಕ್ಕೆ ದೇಹವನ್ನು ತಳ್ಳುವುದರಿಂದ ೧೫ ಮೀ. ಆಳದವರೆಗೆ ಮುಳುಗುವುದು ಕಷ್ಟವೇ. ಅಲ್ಲಿಂದ ಆಳಕ್ಕೆ,ಮೇಲಿನ ನೀರಿನ ಒತ್ತಡದಿಂದ, ದೇಹ ಕೆಳಕೆಳಕ್ಕೆ ಸುಲಭವಾಗಿ ಜಾರಲಾರಂಬಿಸುತ್ತದೆ. ಆಳಕ್ಕಿಳಿಯುತ್ತಾ ಹೋಗುತ್ತಿದ್ದಂತೆ ಪರಿಸರ ಬದಲಾಗುತ್ತಾ ಹೋಗುತ್ತದೆ. ಒಂದೊಂದೇ ಬಣ್ಣಗಳು ಮಾಯವಾಗುತ್ತಾ ಹೋಗಿ ನೀಲಿ ಬಣ್ಣವೇ ತುಂಬಿಕೊಳ್ಳುತ್ತದೆ. ೬೦ ಮೀಟರ್ ಗಿಂತ ಕೆಳಕ್ಕೆ ಹೋಗುತ್ತಿದ್ದಂತೆ ನೀಲಿ ಬೆಳಕೂ ಮಾಯವಾಗುತ್ತದೆ. ಅಲ್ಲಿಂದ ಮುಂದೆ ಬರೇ ಕತ್ತಲು!!! (ಅಲ್ಲಾಡದಂತೆ ಫಿಕ್ಸ್ ಮಾಡಲಾದ ಅಳತೆ ಹಗ್ಗವೇ ಮುಳುಗಿ ಮೇಲೆ ಬರುವವರಿಗೆ ದಾರಿದೀಪ. ಆ ಹಗ್ಗದ ಕೆಳತುದಿಯಲ್ಲಿ ಇಟ್ಟಿರುವ ಗುರುತೊಂದನ್ನು ಮೇಲೆ ತರಬೇಕು). ಇನ್ನು ಆಳಕ್ಕೆ ಹೋದಂತೆ ದೇಹದಲ್ಲಾಗುವ ಬದಲಾವಣೆಗಳು-ಆಳ ಹೋದಂತೆಲ್ಲಾ ಒತ್ತಡದಿಂದಾಗಿ ರಕ್ತ ಹೃದಯ ಹಾಗೂ ಶ್ವಾಸಕೋಶದ ಕಡೆ ನುಗ್ಗಲಾರಂಬಿಸುತ್ತದೆ. ಶ್ವಾಸಕೋಶದ ಗಾತ್ರ ಚಿಕ್ಕದಾಗುತ್ತಾ ಹೋಗುತ್ತದೆ. ರಕ್ತದಲ್ಲಿ ಸಾರಜನಕ ಅಂಶ ಹೆಚ್ಚಾಗಿ ಮುಳುಗುಗಾರರ ಮಾನಸಿಕ ಹಾಗೂ ದೈಹಿಕ ಸ್ಥಿತಿ ಬದಲಾಗಬಹುದು. ಒಟ್ಟಿನಲ್ಲಿ ಆಳ ಮುಳುಗಿ ಮೇಲೆ ಬರಲು ಅಸಮಾನ್ಯ ಮಾನಸಿಕ ಹಾಗು ದೈಹಿಕ ಸಾಮರ್ಥ್ಯ ಬೇಕೇ ಬೇಕು.
           ಸರಿ. ಈ ದಾಖಲೆಗಳೆಲ್ಲ ಎಲ್ಲಿ ಬರೆಯಲ್ಪಡುತ್ತವೆ? ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸುವರು ಯಾರು? ಅರಬ್ಬೀ ಸಮುದ್ರದಲ್ಲೂ ಮುಳುಗು ಹಾಕಿ ಇಂತಿಷ್ಟು ಆಳಕ್ಕೆ ಹೋಗಿಬಂದೆ ಎಂದರೆ ಆಗುತ್ತಾ? ಇಲ್ಲ. ಫುಟ್ಬಾಲ್ ಗೆ ಫಿಫಾ ಹಾಗೂ ಕ್ರಿಕೆಟ್ಟಿಗೆ ಐಸಿಸಿ ಇದ್ದಹಾಗೆ ಈ ಮುಳುಗುವಿಕೆ ಕ್ರೀಡೆಯೂ ಅಂತರಾಷ್ಟ್ರೀಯ ಸಂಸ್ಥೆಯೊಂದರ ನಿಯಂತ್ರಣಕ್ಕೊಳಕ್ಕೊಳಪ್ಪಟ್ಟಿದೆ. ಅದೇ-ಇಂಟರ್ನ್ಯಾಷನಲ್ ಅಸ್ಸೋಸಿಯೇಶನ್ ಫಾರ್ ದ ಡೆವಲಪ್ಮೆಂಟ್ ಆಫ್ ಆಪ್ನಿಯ (AIDA) – ನಿಯಮಾವಳಿಗೊಳಪಟ್ಟು ನಿರ್ದಿಷ್ಟ ಸ್ಥಳಗಳಲ್ಲಿ ನಡೆಯುವ ಮುಳುಗುವಿಕೆಯನ್ನು ಅಧಿಕೃತವಾಗಿ ದಾಖಲಿಸುವ ಸಂಸ್ಥೆ. ಸಂಸ್ಥೆಯ ಸದಸ್ಯರುಗಳೆಲ್ಲಾ ಸೇರಿ ವಿಮರ್ಶೆ ಮಾಡಿ ಅಂತಿಮವಾಗಿ ಸಿದ್ದಪಡಿಸುವ ನಿಯಮಾವಳಿಗಳಿಂದಾಗಿ ಕೆಲವೊಮ್ಮೆ ದಾಖಲೆಯ ಮುಳುಗುವಿಕೆ ನಡೆದರೂ ದಾಖಲೆಯ ಪುಸ್ತಕಕ್ಕೆ ಹೋಗದ ವಿಚಿತ್ರ ನೋಡಲು ಈ ಕೆಳಗಿನ ಪ್ಯಾರ ಓದಿ!!!  
ಸಾರಾ ಕ್ಯಾಂಬೆಲ್
         ೧೦೦ ಮೀಟರ್ ಆಳದವರೆಗೆ ಪುರುಷರು ಮುಳುಗಿ ಮೇಲೆಬಂದಿದ್ದರೂ ಮಹಿಳೆಯರ ಪಾಲಿಗೆ ಆ ೧೦೦ ಮೀಟರ್ ಗುರಿ ಗಗನಕುಸುಮವಾಗಿದೆ.(ಗಗನಕುಸುಮಕ್ಕಿಂತ ಆಳಕುಸುಮ ಪದಪ್ರಯೋಗವೇ ಸರಿಯೇನೋ!!). ಪ್ರಪಂಚಾದ್ಯಂತ ಇರುವ ಮುಳುಗುಪ್ರಿಯರ ಹಾಗೂ ಆಸಕ್ತರ ಕಣ್ಣು ಇಬ್ಬರು ಮಹಿಳೆಯರ ಈ ಸಾದನೆಯ ಪ್ರಯತ್ನದ ಮೇಲೆ ನೆಟ್ಟಿವೆ. ಮುಳುಗು ರಾಣಿ ಪಟ್ಟಕ್ಕೆ ಇವರಿಬ್ಬರ ನಡುವೆ ನಡೆಯುತ್ತಿರುವ ಸ್ಪರ್ದೆ ನಿಜಕ್ಕೂ ರೋಮಾಂಚಕಾರಿ. ಅವರೇ ಆಂಗ್ಲ ಸಂಜಾತೆ ಆದರೆ ಈಗ ಈಜಿಪ್ಟ್ ನಲ್ಲಿ ವಾಸಿಸುತ್ತಿರುವ ಸಾರಾ ಕ್ಯಾಂಬೆಲ್ ಹಾಗೂ ರಷ್ಯಾದ ನತಾಲಿಯ ಮೊಲ್ಖನೋವ. ಇವರಿಬ್ಬರೂ (ಬೇರೆಬೇರೆ ಸಂದರ್ಬದಲ್ಲಿ) ೧೦೦ ಮೀಟರ್ ಆಳ ಕ್ರಮಿಸಿದ್ದರೂ ಅದು ದಾಖಲೆಯಾಗದೆ ಅಧಿಕೃತವಾಗಿ ಆ ದಾಖಲೆ ಯಾರ ಹೆಸರಿಗೆ ಬರೆಯಲ್ಪಡುತ್ತದೆಂದು ಕಾಲವೇ ಹೇಳಬೇಕು. ಸದ್ಯಕ್ಕಂತೂ ಅತಿ ಆಳಕ್ಕೆ ಮುಳುಗಿದ ದಾಖಲೆ(೯೬ ಮೀಟರ್) ಕ್ಯಾಂಬೆಲ್ ಹೆಸರಲ್ಲೇ ಕಳೆದ ಒಂದೂವರೆ ವರ್ಷದಿಂದ ಇದೆ. ಆ ದಾಖಲೆ ಮಾಡಿದ ಐದೇ ದಿನದಲ್ಲಿ-೧೦೦ ಮೀಟರ್ ಗುರಿಮುಟ್ಟಲು-ಮುಳುಗಿದ ಕ್ಯಾಂಬೆಲ್ –ಆ ಗುರಿ ತಲುಪಿ-ಮೇಲೆ ಬಂದರೂ-ಮೇಲೆ ಬಂದವಳೇ ಎರಡು ದೀರ್ಘ ಉಸಿರೆಳೆದು-ಕೂಡಲೇ ಪ್ರಜ್ಞಾಶೂನ್ಯಳಾದಳು. ಆಕೆಯ ೧೦೦ ಮೀಟರ್ ಮುಳುಗುವಿಕೆ ಅಧಿಕೃತ ದಾಖಲೆಯಾಗಲೇ ಇಲ್ಲ. ಕಾರಣ-ಮುಳುಗಿ ಮೇಲೆ ಬಂದಮೇಲೆ ೬೦ ಸೆಕೆಂಡುಗಳವರೆಗೆ ಪ್ರಜ್ಞೆಕಳೆದುಕೊಳ್ಳಬಾರದೆಂಬ AIDA ನಿಯಮ!!!
           ಇನ್ನು ನತಾಲಿಯ ಕಥೆ ಇನ್ನೂ ಮಜವಾಗಿದೆ. ೨೫ ಸೆಪ್ಟಂಬರ್ ೨೦೦೯. ಉಸಿರೆಳೆದುಕೊಂಡು ನೀರಲ್ಲಿ ಮುಳುಗಿದ ನತಾಲಿಯ ಕನಸಿನ ಆ ಗುರಿ ಮುಟ್ಟಿದಳು. ೧೦೧ ಮೀಟರ್ ಆಳಕ್ಕಿಳಿದು ಮೇಲೆ ಬಂದಳು. ಮೇಲೆ ಬಂದವಳೇ ಉಸಿರು ಬಿಟ್ಟು ಎಳೆದುಕೊಂಡು ನಿಯಮದಂತೆ ೬೦ ಸೆಕೆಂಡುಗಳ ಕಾಲ ಪ್ರಜ್ಞಾಶೂನ್ಯಳಾಗದೆ ಎಚ್ಚರವಾಗಿಯೂ ಇದ್ದಳು. ಹೊಸ ದಾಖಲೆ ಅವಳ ಹೆಸರಲ್ಲಿ ಬರೆಯಲ್ಪಟ್ಟಿತು. ಆದರೆ ಈ ಸಂತೋಷ ಕೇವಲ ಏಳು ತಿಂಗಳು ಮಾತ್ರ. ಈ ವರ್ಷದ ಮೇ ತಿಂಗಳಲ್ಲಿ ಅವಳ ಹೆಸರನ್ನು ದಾಖಲೆ ಪುಸ್ತಕದಿಂದ ತೆಗೆಯಲಾಯಿತು!!! ಕಾರಣ?? ಅವಳ ತರಬೇತುದಾರ ಆ ಮುಳುಗುವಿಕೆಯ
ಆಯೋಜಕನಾಗಿದ್ದಲ್ಲದೆ ಮುಖ್ಯ ತೀರ್ಪುಗಾರನೂ ಆಗಿದ್ದ. AIDA ನಿಯಮಾವಳಿಗಳ ಪ್ರಕಾರ ಹಾಗೆ ಮಾಡುವಂತಿಲ್ಲ!!!
 (ಮುಳುಗುವಿಕೆ ಆಸಕ್ತರಲ್ಲಿ ಇನ್ನೂ ಈ ವಿಷಯದ ಬಗ್ಗೆ ವಾದ ವಿವಾದ ನಡೆಯುತ್ತಿದೆ).AIDA ಅಧಿಕೃತ ದಾಖಲೆಗಳು ಏನೇ ಇರಲಿ, ೧೦೧ ಮೀಟರ್ ಆಳ ಕ್ರಮಿಸಿದ ಮೊದಲ ಮಹಿಳೆ ನತಾಲಿಯ.
         ಅಪಾಯಕಾರಿ ಸಾಹಸಗಳನ್ನ ಕೈಗೊಳ್ಳುವ ವಿಷಯದಲ್ಲಿ ಪಾಶ್ಚಾತ್ಯರಿಗೆ ಸರಿಸಾಟಿ ನಮ್ಮವರಲ್ಲವೇ ಅಲ್ಲ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಅತಿಸಾಹಸದ ಕ್ರೀಡೆಗಳು (Extreme Adventures) ಅಲ್ಲಿ ನಡೆಯುತ್ತಲೇ ಇರುತ್ತವೆ(ಯಂತೆ). ಟಿ.ವಿ. ವಾಹಿನಿಗಳು ಪ್ರಾಯೋಜಕರಾಗಿ ದುಡ್ಡು ಸುರಿಯುತ್ತವೆ. ವಾಚು,ಟೆಂಟ್,ಕ್ಯಾಮರ ಮೊದಲಾದವುಗಳ ಜಾಹಿರಾತುಗಳು ಕೈ ಬೀಸಿ ಕರೆಯುತ್ತವೆ. ಧೈರ್ಯ,ಛಲ, ಪ್ರೋತ್ಸಾಹ ಅವರಕಡೆಯಿದೆ. ನನಗೆ ಆಶ್ಚರ್ಯವೆನಿಸುವುದು-ಐದಾರು ಜನರ ತಂಡ-ಗೋಡೆಯಂತಹ ಸಾವಿರಾರು ಅಡಿ ಎತ್ತರದ ಬಂಡೆಯ ಪರ್ವತ ಏರುವುದು. ಕೆಳಗೆ ಪ್ರಪಾತ. ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಂಡೆಯ ಮದ್ಯದ ಕೊರಕಲಿನೊಳಗೆ ಹುಕ್ಸ್ ಹಾಕಿ ನೇತಾಡುತ್ತಾ ಮೇಲೇರುತ್ತಾರೆ. ಅತಿ ಆಶ್ಚರ್ಯವೆಂದರೆ ಹತ್ತುತ್ತಾ ಕತ್ತಲಾದಾಗ (ಹುಕ್ಸ್ ಗಳಿಂದ ಹುಕ್ಸ್ ಗಳಿಗೆ ಕಟ್ಟಿದ ನೈಲಾನ್ ಹಗ್ಗದಲ್ಲಿ) ನೇತಾಡುವ ಟೆಂಟಿನಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮತ್ತೆ ಹತ್ತಲಾರಂಬಿಸುತ್ತಾರೆ!!!
        ನಿಮಗೆ ಈ ಮುಳುಗುವಿಕೆ ಕ್ರೀಡೆಯ ಬಗ್ಗೆ ಮೊದಲೇ ಗೊತ್ತಿತ್ತೇ? ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ.
            

   
Enhanced by Zemanta

Sunday, November 7, 2010

ರೈಟ್ರು ಭಟ್ರು ಹೇಳಿದ “ಚೌಡಿಯ ಕಣ್ಣು ಕಟ್ಟಿದ” (ನಿಜ)ಕತೆ!!!!

                              ಮೊನ್ನೆ ಮುಸ್ಸಂಜೆಲಿ ಆಡಾಡ್ ಮಳೆ ಜೋರ್ ಬರ್ತಿದ್ದಾಗ-ಮಳೆ ನಿರೀಕ್ಷೆಯಿಲ್ಲದೆ ಮನೇಲಿ ಕೊಡೆ ಬಿಟ್ಟ್ ಬಂದಿದ್ದ ರೈಟ್ರುಭಟ್ರು-ಅದು ಇದು ಮಾತಾಡ್ತಾ-ನಂಬಿಕೆ ಆಚಾರಗಳ ವಿಚಾರ ಬಂದಾಗ-ಇತ್ತೀಚೆಗಷ್ಟೇ ನಡೆದ-ಅವರು ಬೇರೆ ಯಾರಿಗೂ ಹೇಳಬೇಡಿ ಎಂದು ಹೇಳಿ ಹೇಳಿದ-ಒಂದು ನಿಜ ಘಟನೆ ಇಗೋ ನಿಮ್ಮ ಮುಂದೆ. (ರೈಟ್ರುಭಟ್ರು –ಹಾಗೆಂದರೇನು?? ಎಂಬ ಯೋಚನೆ ನಿಮ್ಮ ತಲೆಯಲ್ಲಿ ಬಂದರೆ ನಿಮಗಾಗಿ ಹೆಚ್ಚಿನ ಮಾಹಿತಿ-ಹೆಚ್ಚು ಜಮೀನು ಇರುವ ಅಥವಾ ಜಮೀನಿನಿಂದ ದೂರದಲ್ಲಿ ವಾಸಿಸುತ್ತಿರುವ ಜನ ಜಮೀನಿನಲ್ಲಿ ನಡೆಯುವ ಕೆಲಸ ಕಾರ್ಯಗಳ ಮೇಲ್ವೀಚಾರಣೆಗಾಗಿ ಇರಿಸಿರುವ ವ್ಯಕ್ತಿಯನ್ನ ರೈಟ್ರು ಎಂದು ಕರೆಯುತ್ತಾರೆ. ಸದಾಶಿವ ಭಟ್ರು ಪಕ್ಕದ ಎಸ್ಟೇಟ್ನಲ್ಲಿ ಈ ಕೆಲಸ ಮಾಡ್ತಾ ಇದ್ದಾರೆ. ಆದ್ದರಿಂದ ಅವರನ್ನು ಜನ ಕರೆಯುವುದು ರೈಟ್ರುಭಟ್ರು ಅಂತನೇ!!!) ಈ ನಿಜಕತೆಯ ದ್ವಿತೀಯಾರ್ದದಲ್ಲಿ ಬರುವ ಪಾತ್ರದಾರಿಗಳಿಗೆ ಮೊದಲಾರ್ದದಲ್ಲಿ ನಡೆದ ಘಟನೆಯ ಬಗ್ಗೆ ಕಿಂಚತ್ತೂ ಅರಿವಿಲ್ಲ. ಆ ಘಟನೆಯ ಬಗ್ಗೆ ಸ್ವಲ್ಪ ಸುಳಿವು ಅವರಿಗೆ ಬಂದರೂ ನಿಜಕತೆಯ ಮೊದಲಾರ್ದದಲ್ಲಿ ಬರುವ ಪಾತ್ರದಾರಿಗಳನ್ನು ಅವರು ಸಮಾ ಬಯ್ಯದೆ ಬಿಡುವುದಿಲ್ಲ!!!! ಈ ನಿಜಕತೆ ಇಂತಿದೆ-
                         ಒಮ್ಮೆ ಕಾಪಿತೋಟದಲ್ಲಿ ಕೆಲಸ ಮಾಡಿಸುತ್ತಿರುವಾಗ ತಮ್ಮ ಕತ್ತಿ ನಾಪತ್ತೆಯಾಗಿದ್ದು ರೈಟ್ರುಭಟ್ರು ಗಮನಕ್ಕೆ ಬಂತು. ಸ್ವಲ್ಪ ಹೊತ್ತಿನ ಮುಂಚೆ ಉಪಯೋಗಿಸಿದ ಕತ್ತಿ ಇದ್ದಕ್ಕಿದ್ದಂತೆ ನಾಪತ್ತೆ!! ಅಲ್ಲೇ ಕೆಲಸಮಾಡುತ್ತಿರುವ ಯಾರದ್ದೋ ಕಿತಾಪತಿ ಎಂದೆಣಿಸಿದ ರೈಟ್ರುಭಟ್ರು ನನ್ ಕತ್ತಿ ಎಲ್ಲಿ? ಯಾರ್ ತಗಂಡಿದ್ದೀರಿ? ಎಂದು ವಿಚಾರಣೆ ಶುರುಮಾಡಿದರು. ಎಲ್ಲಾ ಕೆಲಸಗಾರರೂ ತಮಗೆ ಗೊತ್ತಿಲ್ಲ,ತಮಗೆ ಗೊತ್ತಿಲ್ಲ-ಎಂದೇ ಹೇಳಿದರು. ಸುಳ್ಳು ಹೇಳ್ತೀರಾ, ತಡಿರಿ ಬುದ್ದಿಕಲಿಸ್ತೀನಿ ಎಂದ ರೈಟ್ರುಭಟ್ರು ಕೊನೆಯ ಬಾಣವಾಗಿ ತೆಂಗಿನ ಕಾಯಿಯೊಂದಕ್ಕೆ ಕುಂಕುಮ ಹಚ್ಚಿ ನೀವ್ಯಾರೂ ನನ್ನ ಕತ್ತಿ ಮುಟ್ಟಿಲ್ಲ ತಾನೇ. ಈ ಕಾಯಿ ಮುಟ್ಟಿ ಹೇಳಿ. ಆ ಮೇಲ್ಮಕ್ಕಿ ಚೌಡಿಯೇ ನೋಡಿಕೊಳ್ಳಲಿ ಎಂದು ಹೇಳಿ ಅಲ್ಲಿದ್ದ ಎಲ್ಲಾ ಕೆಲಸಗಾರರ ಕೈಲಿ ಆ ಕಾಯಿ ಮುಟ್ಟಿಸಿ ಹೇಳಿದಂತೆ ಅದನ್ನು ತೆಗೆದುಕೊಂಡು ಹೋಗಿ ಕಾಡು ಉಡಿಯ ಮದ್ಯೆ ಇದ್ದ ಮೇಲ್ಮಕ್ಕಿ ಚೌಡಿಯ ಚಿಕ್ಕ ಗುಡಿಯ ಮುಂದೆ ಇಟ್ಟುಬಂದರು. (ಬಹುಶಃ ಕೆಲಸಗಾರರ್ಯಾರೂ ಆ ಕತ್ತಿ ತೆಗೆದುಕೊಂಡಿರಲಿಕ್ಕಿರಲಿಲ್ಲ. ರೈಟ್ರುಭಟ್ರು ಎಲ್ಲೋ ಇಟ್ಟಿರಬೇಕು. ಮೇಲ್ಮಕ್ಕಿ ಚೌಡಿ ತುಂಬಾ ಪ್ರಸಿದ್ದಿ!!! ಚೌಡಿ ಹೆಸರು ಕೇಳುತ್ತಿದ್ದಂತೆ-ನಿಜವಾಗಿ ಯಾರಾದ್ರೂ ತಗಂಡಿದ್ರೆ-ನೋಡಿ ಭಟ್ರೇ. ಇಲ್ಲೇ ಸಂದಿ ಬಿದ್ದಿದ್ಯಲ್ಲಾ ಎಂದು ಹೇಳಿ ಕತ್ತಿ ಕೊಡುತ್ತಿದ್ದಾರೆ ವಿನಾ ಅಪ್ಪಿತಪ್ಪಿ ಕಾಯಿ ಮುಟ್ಟುತ್ತಿರಲಿಲ್ಲ!!! ರೈಟ್ರುಭಟ್ರು ಅದನ್ನು ನನ್ನಜೊತೆ ಮಾತನಾಡುತ್ತಿರುವಾಗ ಒಪ್ಪಿಕೊಂಡರು). ಇದು ಮೊದಲಾರ್ದ ನಡೆದ ಘಟನೆಯಾದರೆ ದ್ವಿತಿಯಾರ್ದ ಮುಂದೆ ಓದಿ-
                                      ಮೇಲ್ಮಕ್ಕಿ ಚೌಡಿಯ ಗುಡಿಯ ಆಸುಪಾಸಿನಲ್ಲೇ ಮೇಲ್ಮಕ್ಕಿ ಹೆಗ್ಡೇರು ಕುಟುಂಬಕ್ಕೆ ಸೇರಿದ ಜಮೀನಿದೆ. ಮೊದಲು ಒಂದೇ ಮನೆಯಲ್ಲಿದ್ದ ಕುಟುಂಬ ಬೆಳೆದಂತೆ ಒಡೆದು ಇಂದು ಅಲ್ಲಿ ಮೂರ್ನಾಲ್ಕು ಮನೆಗಳಾಗಿವೆ. ಇತ್ತೀಚೆಗೆ ಯಾರೋ ಒಬ್ಬರ ಮನೇಲಿ ತುಂಬಾ ಅನಾರೋಗ್ಯ ಖರ್ಚು ವೆಚ್ಚಗಳಾದಾಗ ಹಾಗು ಇನ್ಯಾರೋ ಒಬ್ಬರ ಮನೇಲಿ ಜಾನುವಾರುಗಳಿಗೆ ಪದೇಪದೆ ತೊಂದರೆಯಾದಾಗ ಹೆಗ್ಡೇರು ಕುಟುಂಬದ ಹಿರಿ ಸದಸ್ಯರೆಲ್ಲಾ ಸೇರಿ ಸರಿಯಾದ ಕಡೆ ಕೇಳಿಸುವುದೆಂದು ತೀರ್ಮಾನಿಸಿದ್ದಾರೆ. ಅಂತೆಯೇ ನಾಲ್ಕೈದು ಮನೆ ಹಿರಿಯರು ಒಟ್ಟಾಗಿ, ನಿಮಿತ್ಯ ಹೇಳುವ ಮೂರ್ನಾಡು ರಾಮಭಟ್ಟರನ್ನು ಕಂಡಿದ್ದಾರೆ. ಕವಡೆ ಹಾಕಿದ ರಾಮಭಟ್ಟರು ನಿಮ್ಮ ಪರಿಸರದಲ್ಲಿ ಯಾವುದೋ ಚೌಡಿನೋ, ಮತ್ಯಾವುದೋ ಇರಬೇಕು ನೋಡಿ. ಅದರ ಕಣ್ಣು ಕಟ್ಟಿದಹಾಗಿದೆ(!!!!), ಅದಕ್ಕೇ ತೊಂದರೆಗಳು-ಎಂದು ಅರುಹಿದ್ದಾರೆ. ಕಾಡಿನೊಳಗೆ ಉಡಿಯ ಮಧ್ಯದಲ್ಲಿರುವ ಮೇಲ್ಮಕ್ಕಿ ಚೌಡಿಯ ಪುಟ ಗುಡಿ ಜ್ಞಾಪಿಸಿಕೊಂಡು ಹೌದೌದು. ಹಾಗೊಂದಿರುವುದು ಹೌದು.-ಎಂದು ಹೆಗ್ಡೇರುಗಳು (ಭಟ್ಟರ ನಿಮಿತ್ಯ ಹೇಳುವ ಜ್ಞಾನದ ಬಗ್ಗೆ ವಿಸ್ಮಯಪಡುತ್ತಾ) ತಲೆ ಆಡಿಸಿದ್ದಾರೆ. ರಾಮಭಟ್ಟರ ಸಲಹೆಯಂತೆ ಆ ಚೌಡಿಗೆ ಹಣ್ಣು ನೈವೇದ್ಯ ಅರ್ಪಿಸಿ ಇನ್ನು ಮುಂದೆ ಸರಿಯಾಗಿ ನಡೆದುಕೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ.
                              ಜಮೀನಿನಂಚಿನ  ಕಾಡಿನಲ್ಲಿ ಪೊದೆಗಳ ಮದ್ಯದಲ್ಲಿ ಮರದ ಕೆಳಗೆ ತುಂಬಾ ಕಷ್ಟದಲ್ಲಿ ಗುಡಿಯೆಂದು ಹೇಳಬಹುದಾದ ಕಲ್ಲಿನ ರಚನೆಯೊಂದರ ಒಳಗಿರುವುದೇ ಮೇಲ್ಮಕ್ಕಿ ಚೌಡಿ(ಯ ಕಲ್ಲು). ಅದಕ್ಕೆ ಬರುವ ದಾರಿಯಲ್ಲಿನ ಹಾಗೂ ಸುತ್ತಮುತ್ತ ಬೆಳೆದ ಉಡಿಯನ್ನ ಸವರಿ ಚೌಡಿಯ ಗುಡಿಯ ಬಳಿಗೆ ಬಂದ ಹೆಗಡೆಯವರ ಕುಟುಂಬದ ಸದಸ್ಯರಿಗೆ (ರೈಟ್ರುಭಟ್ರು ಕುಂಕುಮ ಹಚ್ಚಿ ಇಟ್ಟಿದ್ದ) ತೆಂಗಿನ ಕಾಯನ್ನು ನೋಡಿ ಆಕಾಶವೇ ತಲೆಮೇಲೆ ಬಿದ್ದಂತಾಗಿದೆ!! ನಿಮಿತ್ಯ ಹೇಳಿದ್ದು ಸರಿ. ನೋಡಿ.ಯಾವನೋ ಸತ್ ಮಲಗ್ಯಾನೆ-ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಪಿಯುಸಿ ಓದುತ್ತಿರುವ ಹೆಗಡೇರ ಕುಟುಂಬದ ಹುಡುಗನೊಬ್ಬ ಆ ಕಾಯನ್ನು ಮುಟ್ಟಲು ಹತ್ತಿರ ಹೋಗುತ್ತಿದ್ದಂತೆ ತಡಿ ತಡಿ ತಡಿ ಮುಟ್ಬ್ಯಾಡ ಎಂದು ಅವನನ್ನು ತಡೆದ ಹೆಗ್ಡೇರ ಕುಟುಂಬದ ಹಿರಿತಲೆಯೊಬ್ಬರು  ಮುರ್ನಾಡಿಗ್ಹೋಗಿ ರಾಂಭಟ್ರನ್ನೇ ಕೇಣಾಣ-ಅಂತ ಎಲ್ಲರ ತಲೆಯಲ್ಲೂ ಬಂದಿರಬಹುದಾದ ಸಲಹೆಯನ್ನು ಬಾಯ್ಬಿಟ್ಟು ಹೇಳಿದರು.
                  ಮತ್ತೊಮ್ಮೆ ಅವರೆಲ್ಲರ ಸವಾರಿ ಮೂರ್ನಾಡು ರಾಂಭಟ್ಟರ ಮನೆಕಡೆ ಹೊರಟಿದೆ. ದೂರದಲ್ಲಿ ಕುಳಿತೇ ಕವಡೆ ಹಾಕಿ ಚೌಡಿಯ ಕಣ್ಣುಕಟ್ಟಿದ ವಿಷಯ ಹೇಳಿದ ರಾಂಭಟ್ಟರ ನಿಮಿತ್ಯದ ಸಾಮರ್ಥ್ಯ ಹೊಗಳಿ ಮುಂದೇನು ಮಾಡಬೇಕು ಎಂದು ತಲೆತಗ್ಗಿಸಿ ಕೇಳಿಕೊಂಡಿದ್ದಾರೆ. ನಾನು ಹೇಳಿರಲಿಲ್ಲವಾ ಎಂದೇ ಮಾತು ಶುರುಮಾಡಿದ ರಾಂಭಟ್ಟರು ಯೋಚನೆ ಮಾಡಬೇಡಿ. ಎಲ್ಲದಕ್ಕೂ ಒಂದು ಪರಿಹಾರ ಅಂತಿದೆ ಎಂದು ಅಭಯ ನೀಡಿ ನಿವಾರಣೆಗೆ ಕೈಗೊಳ್ಳಬೇಕಾದ ಕಾರ್ಯಗಳ ಒಂದು ಪಟ್ಟಿಯನ್ನೇ ನಿಡಿದರು. ಅದೆಲ್ಲಾ ನಿಮಗೇ ಬಿಟ್ಟಿದ್ದು. ಎಷ್ಟ್ ಜನ ಬೇಕು ಏನೇನ್ ಬೇಕು ಏನೇನ್ ಮಾಡ್ಬೇಕು ನೀವೇ ಮಾಡ್ಬಿಡಿ. ಖರ್ಚು ನಾವ್ ನಾಕೈದ್ ಮನೆಯವರ್ ಹಂಚ್ಕಂಡ್ ಕೊಡ್ತೀವಿ-ಎಂದು ಹೆಗ್ಡೇರುಗಳು ಹೇಳಲು ಅದೆಲ್ಲಾ ನನಗ್ ಬಿಟ್ಬಿಡಿ. ಖರ್ಚು ಅಂದಾಜು ಇಂತಿಷ್ಟಾಗಬಹುದು ಎಂದ ರಾಂಭಟ್ರು ಯಾವುದೋ ಒಂದು ದಿನ ಗೊತ್ತುಮಾಡಿ ಕೊಟ್ಟರು. 
                 ಆ ದಿನದಂದು ಮೇಲ್ಮಕ್ಕಿಗೆ ರಾಮಭಟ್ಟರು ಮೂರ್ನಾಲ್ಕು ಮರಿಭಟ್ಟರುಗಳನ್ನ ಜೊತೆಗೆ ಕರೆದುಕೊಂಡುಬಂದು ಅಗತ್ಯದ ಪೂಜೆಗಳನ್ನು ಚೌಡಿಯ ಗುಡಿಯ ಪಕ್ಕ ಮಾಡಿದರು. ಊರಿನಲ್ಲಿರುವ ಹೆಗ್ಡೇರು ಕುಟುಂಬದ ಸದಸ್ಯರುಗಳಲ್ಲದೆ ಬೆಂಗಳೂರು ಸೇರಿದ್ದ ಹೆಗ್ಡೇರು ಕುಟುಂಬದ ಪಿಳಿಕೆಗಳೂ ಬಂದು ಸೇರಿದ್ದವು. ಹೊರಗೆ ಕೊಟ್ಟ ಹೆಣ್ಣುಮಕ್ಕಳೂ ಚಿಳ್ಳೆ ಪಿಳ್ಳೆಗಳೊಂದಿಗೆ ಬಂದಿದ್ದರು. (ಅಡಿಗೆ)ಭಟ್ಟರನ್ನು ಕರೆಸಿ ಉಟದ ವ್ಯವಸ್ಥೆಯೂ ಇತ್ತು. ಪೂಜೆಯೆಲ್ಲಾ ಮುಗಿಸಿ ಎಲ್ಲಾ ಸರಿಯಾಗಿದೆ. ಇನ್ನೇನು ಯೋಚನೆ ಮಾಡಬೇಡಿ ಎಂದು ಹೇಳಿ ರಾಮಭಟ್ಟರು ಪ್ರಸಾದ ಕೊಟ್ಟಾಗ ನೆರೆದ ಕುಟುಂಬದ ಸದಸ್ಯರಿಗೆಲ್ಲಾ ಯಾವುದೋ ಸಂಕಷ್ಟದಿಂದ ಹೊರಬಂದ ನಿರಾಳ ಭಾವ!!!!
               ದ್ವಿತಿಯಾರ್ದ ಘಟನೆ ಓದಿದ ಮೇಲೆ ನೀವೇ ಹೇಳಿ-ಮೊದಲಾರ್ದ ನಡೆದ ಘಟನೆ ಹೆಗಡೇರು ಕುಟುಂಬದವರಿಗೆ ಗೊತ್ತಾದರೆ ಸಮಾ ಬಯ್ಯುವುದಿಲ್ಲವೇ? ಇಡೀ ಘಟನೆಯನ್ನು ನೋಡಿದ ಎಸ್ಟೇಟ್ ಕೆಲಸಗಾರರು ಮುಸಿಮುಸಿ ನಗುತ್ತಿದ್ದಾರೆ.
               ಇದೊಂದು ಕೇವಲ ಮತ್ತೊಂದು ನಗೆಬರಹವಾಗಿ ಕೊನೆಯಾಗದಿರಲೆಂದು ಈ ಪ್ಯಾರ- ನಮ್ಮ ಜೀವನದಲ್ಲಿ (ಸಹಜವಾಗಿ ನಡೆಯುವ) ಇಷ್ಟ-ಅನಿಷ್ಟ ಘಟನೆಗಳನ್ನು ನಿರ್ದರಿಸುವುದು ಯಾವುದು?? ನಾವು ಹುಟ್ಟಿದ ಸಮಯದಲ್ಲಿನ ಆಕಾಶದಲ್ಲಿನ ಗ್ರಹನಕ್ಷತ್ರಗಳ ಸ್ಥಾನವೇ? (ಸಾಮಾನ್ಯ ಭಾಷೆಯಲ್ಲಿ-ಜಾತಕ,ಕುಂಡಲಿನಿ,Horoscope) ಅಥವಾ ನಮ್ಮ ಅಪ್ಪಂದೋ ಅಮ್ಮಂದೋ ಮಕ್ಕಳದ್ದೋ ಸೋಸೆದೋ ಜಾತಕವಾ? ಅಥವಾ ನಮ್ಮ ಆತ್ಮ ಈಗಿರುವ ದೇಹವನ್ನು ಸೇರುವುದಕ್ಕೆ ಮುಂಚೆ ಹಿಂದಿದ್ದ ಯಾವುದೋ ದೇಹದಲ್ಲಿ ನಡೆಸಿದ ಕರಾಮತ್ತುಗಳೇ? ಅಥವಾ ನಾವು ಕೈಗೊಳ್ಳುವ (ಸಂಖ್ಯಾದರಿತ) ಮಂತ್ರಗಳ ಪಠಣ ಹಾಗು ಹೋಮ ಹವನಗಳಾ? ಅಥವಾ ದೂರದ ಯಾವುದೋ ಒಂದು ದೇವಸ್ಥಾನಕ್ಕೆ ಹೋಗಿ ದರುಶನ ಮಾಡಿ ಚೀಟಿ ಮಾಡಿಸಿ ಸೇವೆ ಕೈಗೊಂಡ ಮೇಲೆ ಕಣ್ಣು ಬಿಟ್ಟು ನಮ್ಮ ಮೇಲೆ ಕೃಪೆತೋರುವ ಆ ದೇವರಾ?(ತೊಂದರೆ ಬಂದಾಗ ಹೊಗಿಬರ್ತೀವಿ ಅಂತ ಹರಕೆ ಹೊತ್ತರೂ ಸಮಸ್ಯೆ ಪರಿಹಾರವಾಗು(ತ್ತಂ)ತ್ತೆ!!!). ನೀವೇ ಹೇಳಬೇಕು-ಇವೆಲ್ಲವುವಾ ಅಥವಾ ಯಾವುದಾದರೂ ಒಂದಾ ಎರಡಾ ಅಥವಾ ಬೇರೆಯಾವುದಾದಾರಾ??? ಓದಿದವರು ದಯವಿಟ್ಟು ಉತ್ತರಿಸಿ. (ನನ್ನನಿಸಿಕೆಯಂತೆ ಇವೆಲ್ಲಾ ನಮ್ಮ ಇಷ್ಟ-ಅನಿಷ್ಟಗಳ ಮೇಲೆ ಎಳ್ಳಷ್ಟೂ ಪ್ರಭಾವಬೀರುವುದಿಲ್ಲ. ಬದಲಾಗಿ ಅಳುಕುವ ಮನಸ್ಸಿಗೆ ಸ್ವಲ್ಪ ಮಾನಸಿಕ ನೆಮ್ಮದಿ ನೀಡುತ್ತವೆ. ಆದರೆ ಅದಕ್ಕಾಗಿ ತೆರುವ ಬೆಲೆಯೆಷ್ಟು?)  
       ವಿ.ಸೂ- ಮೇಲ್ಮಕ್ಕಿ ಚೌಡಿ ಬಗ್ಗೆ ಹಾಗೆಲ್ಲಾ ಹಗುರವಾಗಿ ಮಾತಾಡಬಾರದಿತ್ತು, ಮೂರ್ನಾಡು ರಾಮಭಟ್ಟರು ತುಂಬಾ ಪ್ರಸಿದ್ದರು, ಅವರ ಬಗ್ಗೆ ನಿಮಗೇನ್ ಗೊತ್ತು-ಎಂದೆಲ್ಲಾ ಕ್ಯಾತೆ ತೆಗೆಯುವವರಿಗಾಗಿ-ಮೇಲೆ ಹೇಳಿದ ಘಟನೆ ಮಾತ್ರ ನೂರಕ್ಕೆ ನೂರು ಸತ್ಯ. ಪಾತ್ರಗಳು ಹಾಗು ಸ್ಥಳಗಳ ಹೆಸರು ಬದಲಿಸಲಾಗಿದೆ ಅಷ್ಟೆ.      

Friday, October 1, 2010

ಪ್ಲುಟೊ-ಅದನ್ನು ಸೌರವ್ಯೂಹ ಗ್ರಹಗಳ ಗುಂಪಿನಿಂದ ಹೊರಗಿಟ್ಟಿದ್ದೇಕೆ??

                ಸೌರವ್ಯೂಹದ ಗ್ರಹಗಳನ್ನು ಹೆಸರಿಸಿ- ಈ ಪ್ರಶ್ನೆಗೆ ನಾವು ಉತ್ತರಿಸುತ್ತಿದ್ದೆವು- ಬುಧ, ಶುಕ್ರ,.............ಯುರೇನಸ್, ನೆಪ್ಚೂನ್ ಮತ್ತು ಪ್ಲುಟೊ. ಹೌದು. ನಾವು ಓದುವಾಗ ಸೌರವ್ಯೂಹದಲ್ಲಿ ಒಂಬತ್ತು ಗ್ರಹಗಳಿದ್ದವು. ಆದರೆ ಈಗ ಕಾಲ ಬದಲಾಗಿದೆ!!! ಪ್ಲುಟೊ ನವಗ್ರಹಗಳ ಆ ಗುಂಪಿನಲ್ಲಿ ಇಲ್ಲ. ಸೌರವ್ಯೂಹದಲ್ಲಿರುವುದು ಈಗ ಎಂಟೇ ಗ್ರಹಗಳು!!!  ನಾಲ್ಕು ವರ್ಷಗಳ ಹಿಂದೆ ಪ್ರಾಗ್ ನಲ್ಲಿ ನಡೆದ ಇಂಟರ್ನ್ಯಾಷನಲ್ ಆಸ್ಟ್ರೋನಾಮಿಕಲ್ ಯುನಿಯನ್ನ ೨೬ನೇ ಮಹಾಸಭೆಯ ತೀರ್ಮಾನದಂತೆ ಪ್ಲುಟೊವನ್ನು ಹೊರಗಿಡಲಾಗಿದೆ. ಈ ವಿಷಯ ನಿಮಗೆ ಗೊತ್ತಿದೆಯೆಂದೇ ಭಾವಿಸುತ್ತೇನೆ. ಆದರೆ ಈ ಪ್ಲುಟೊ ಗ್ರಹಗಳ ಪಟ್ಟಿಗೆ ಸೇರಿದ್ದು ಹೇಗೆ? ಸೇರಿಸಿ ಅದನ್ನು ಹೊರಗಿಟ್ಟಿದ್ದೇಕೆ?-ಎಂಬುದನ್ನು ನಿಮಗೆ ತಿಳಿಸುವುದೇ ಈ ಲೇಖನದ ಉದ್ದೇಶ.
               ೧೯ನೇ ಶತಮಾನದ ಕೊನೆಯಲ್ಲಾಗಲೇ ಯುರೋಪಿನಲ್ಲಿ ಸೌರವ್ಯೂಹದ ಎಂಟು ಗ್ರಹಗಳನ್ನ ಕಂಡುಹಿಡಿದು ಗುರುತಿಸಿ ಅಭ್ಯಸಿಸಲಾಗಿತ್ತು. ಆದರೆ ಇನ್ನೂ ಒಂದು ಗ್ರಹವಿರಬಹುದೆಂಬ ಕುತೂಹಲ ಸಂಶೋಧಕರಲ್ಲಿ ಮನೆಮಾಡಿತ್ತು. ಪ್ಲಾನೆಟ್-x’ – ಎಂಬ ಕಾಲ್ಪನಿಕ ಹೆಸರು ಕೊಟ್ಟು ಆ ಗ್ರಹದ ಹುಡುಕಾಟದಲ್ಲಿ ಪ್ರಪಂಚಾದ್ಯಂತ ಅಬ್ಸರ್ವೆಟರಿಗಳಲ್ಲಿ ಸಂಶೋಧಕರು ನಿರತರಾಗಿದ್ದರು. ಅದನ್ನು ತಾವೇ ಮೊದಲು ಗುರುತಿಸಲು ಅವರಲ್ಲೇ ಪೈಪೋಟಿ ಇತ್ತು!!! ಅಂತಹಾ ಅಬ್ಸರ್ವೇಟರಿಗಳಲ್ಲಿ ಅಮೆರಿಕಾದ ಧನಿಕ ಹವ್ಯಾಸಿ ಖಗೋಳಶಾಸ್ತ್ರಜ್ಞ ಪರ್ಸಿವಲ್ ಲೊವೆಲ್ ಅರಿಜೊನಾದಲ್ಲಿ ಸ್ಥಾಪಿಸಿದ್ದ ಸ್ವಂತ ಅಬ್ಸರ್ವೇಟರಿಯೂ ಒಂದು. ಅಲ್ಲಿ (೧೯೨೯ರಲ್ಲಿ) ಆ ಕೆಲಸವನ್ನು ಯುವ ಖಗೋಳಶಾಸ್ತ್ರಜ್ಞನೊಬ್ಬನಿಗೆ ವಹಿಸಲಾಗಿತ್ತು. ಕಂಪ್ಯೂಟರ್ ಹಾಗೂ ಡಿಜಿಟಲ್ ತಂತ್ರಜ್ನಾನವಿಲ್ಲದ ಆ ಕಾಲದಲ್ಲಿ ಅಂತರಿಕ್ಷದಲ್ಲಿ ಹುಡುಕಾಟ ತುಂಬಾ ಶ್ರಮ ಬೇಡುವ ಕೆಲಸವಾಗಿತ್ತು. ವ್ಯವಸ್ತಿತವಾಗಿ ಅನಂತಾಕಾಶದಲ್ಲಿ ಗ್ರಹಗಳ ಪಥದ (ಕ್ರಾಂತಿವೃತ್ತ) ಚಿಕ್ಕ ಭಾಗದ ಫೋಟೋಗಳನ್ನ (ದೂರದರ್ಶಕದಿಂದ) ತೆಗೆಯುವುದು-ಮತ್ತೆ ಒಂದು ವಾರ ಬಿಟ್ಟು ಅದೇ ಚಿಕ್ಕ ಭಾಗದ ಫೋಟೋವನ್ನು ಮತ್ತೊಮ್ಮೆ ತೆಗೆಯುವುದು-ಸಾವಿರಾರು ಚುಕ್ಕಿ(dots)ಗಳಿರುವ ಆ ಎರಡು ಫೋಟೋಗಳಲ್ಲಿ ಯಾವುದಾದರೂ ಚುಕ್ಕಿ ಸ್ಥಾನಪಲ್ಲಟವಾಗಿದೆಯೇ ಎಂದು ಗಮನಿಸುವುದು-ಹೀಗೆ ಸಾಗಿತ್ತು ಕೆಲಸ. (ಇಂದಿನ ಡಿಜಿಟಲ್ ಯುಗದಲ್ಲಿ ಇದು ತುಂಬಾ ಸುಲಭ). ಹತ್ತು ತಿಂಗಳ ಶ್ರಮದ ಕೆಲಸ ಹಾಗೂ ಸಾವಿರಾರು ಫೋಟೋಗಳು-ಕೊನೆಗೊಂದು ದಿನ-ವಾರಗಳ ಅಂತರದಲ್ಲಿ ತೆಗೆದ ಒಂದು ಜೊತೆ ಫೋಟೋದಲ್ಲಿ-ಉಳಿದೆಲ್ಲಾ ಚುಕ್ಕಿಗಳು ಸ್ಥಿರವಾಗಿದ್ದರೂ ಒಂದೇ ಚುಕ್ಕಿ ಕೆಲವೇ ಮಿಲಿಮೀಟರ್ ಚಲಿಸಿದ್ದು ಕಂಡುಬಂತು!!!. ಮತ್ತೂ ಒಂದು ತಿಂಗಳು ಸತತವಾಗಿ ಅದನ್ನು ಅಭ್ಯಸಿಸಿ ಅದರ ಗ್ರಹಪಥ ಲೆಕ್ಕಾಚಾರ ಮಾಡಿ ಅರಿಜೋನಾದಿಂದ ಪ್ಲಾನೆಟ್-ಎಕ್ಸ್ ಕಂಡುಹಿಡಿದ ಸುದ್ದಿ ಪ್ರಪಂಚಕ್ಕೆ ಬಿತ್ತು. ಇಡೀ ಪ್ರಪಂಚವೇ ಬೆಕ್ಕಸಬೆರಗಾಯಿತು. 
                       ನಂತರದ್ದು ಪ್ಲಾನೆಟ್-ಎಕ್ಸ್ ಗೆ ಹೆಸರಿಡುವ ಕೆಲಸ. ಪ್ರಪಂಚದ ಮೂಲೆಮೂಲೆಗಳಿಂದ ಅರಿಜೋನಾಕ್ಕೆ ಅನೇಕ ಸಲಹೆಗಳು ಹರಿದು ಬಂದವು. ೧೧ ವರ್ಷದ ಬ್ರಿಟಿಷ್ ಹುಡುಗಿಯಿಂದ ಬಂದ ಸಲಹೆ-ಸೂರ್ಯನಿಂದ ಅತಿ ದೂರದಲ್ಲಿ ಕತ್ತಲ ಪಥದಲ್ಲಿ ಸುತ್ತುವುದರಿಂದ-ಇತರೆಲ್ಲಾ ಗ್ರಹಗಳಿಗೆ ಗ್ರೀಕ್ ಪುರಾಣದ ಹೆಸರಿಟ್ಟಂತೇ-ಕತ್ತಲೆಯ ಪಾತಾಳ ಲೋಕದ ಗ್ರೀಕ್ ದೇವತೆ ಪ್ಲುಟೊ ಹೆಸರು-ಅದನ್ನು ಹೊಸ ಗ್ರಹಕ್ಕೆ ನಾಮಕರಣ ಮಾಡಲಾಯಿತು!! ಈ ಪ್ಲುಟೊ ಎಷ್ಟು ಪುಟ್ಟ ಗ್ರಹವೆಂದರೆ ಸೌರವ್ಯೂಹದ ಕೆಲವು ಉಪಗ್ರಹಗಳೇ ಇದಕ್ಕಿಂತ ಎಷ್ಟೋ ದೊಡ್ಡವು!!! ಇದರ ಭೌತಿಕ ರಚನೆಯೂ ವಿಚಿತ್ರ. ಅತ್ತ ಭೂಮಿ, ಮಂಗಳಗಳಂತೆ ಗಟ್ಟಿ ಹೊರಮೈಯೂ ಇಲ್ಲ. ಇತ್ತ ಗುರು,ಶನಿಯಂತೆ ದಟ್ಟ ಅನಿಲದಿಂದ ಕೂಡಿದ್ದೂ ಅಲ್ಲ. ಅತಿ ಶೀತಕ್ಕೆ ಅನಿಲಗಳು ಗಡ್ಡೆಕಟ್ಟಿ ಗ್ರಹದ ಮೇಲ್ಮೈ ಆಗಿದೆ!!! ಇದರ ಪಥವೂ ಉಳಿದೆಲ್ಲಾ ಗ್ರಹಗಳ ಪಥಕ್ಕಿಂತ ಸ್ವಲ್ಪ ವಾರೆ.
              ದಶಕಗಳು ಕಳೆದಂತೆ ಕಂಪ್ಯೂಟರ್ ಹಾಗೂ ಡಿಜಿಟಲ್ ತಂತ್ರಜ್ಞಾನ ಮುಂದುವರೆದಂತೆ ಖಗೋಳ ವೀಕ್ಷಣೆಯಲ್ಲೂ ಕ್ರಾಂತಿಕಾರಕ ಸುಧಾರಣೆಗಳಾದವು. ೧೯೯೨ರಲ್ಲಿ ಹವಾಯಿಯ ಮೌನ ಕೀ ಅಬ್ಸರ್ವೆಟರಿ ಪ್ಲುಟೊ ಆಚೆ ಮತ್ತೊಂದು ಹೊಸ ಆಕಾಶಕಾಯ ಪತ್ತೆಮಾಡಿತು. ಏಳೆಂಟು ವರ್ಷಗಳಲ್ಲೇ ಅಂತಹ ೩೦೦ಕ್ಕೂ ಹೆಚ್ಚು ಗ್ರಹಗಳ ತರದ ಆಕಾಶಕಾಯಗಳು ಪತ್ತೆಯಾದವು!!! ನಾಸಾ ಕಂಡುಹಿಡಿದ ಒಂದು ಆಕಾಶಕಾಯವಂತೂ ಪ್ಲುಟೊಗಿಂತ ದೊಡ್ಡದಾಗಿತ್ತು.(ಕೆಲವು ವರ್ಷದ ಕೆಳಗೆ ಏರಿಸ್ ಎಂಬ ಹತ್ತನೇ ಗ್ರಹದ ಪತ್ತೆ-ಎಂಬ ಸುದ್ದಿ ನೀವು ಪತ್ರಿಕೆಗಳಲ್ಲಿ ಓದಿರಬಹುದು). ಹಾಗಾದರೆ ಅವುಗಳನ್ನೆಲ್ಲಾ ಸೌರವ್ಯೂಹದ ಗ್ರಹಗಳ ಸಾಲಿನಲ್ಲಿ ಸೇರಿಸುವುದೇ ಅಥವಾ ಪ್ಲುಟೊವನ್ನು ಆ ಸಾಲಿನಿಂದ ಹೊರದಬ್ಬುವುದೇ-ಎಂಬ ವಿಷಯದಲ್ಲಿ ಖಗೋಳವಿಜ್ಞಾನಿಗಳಲ್ಲೇ ಎರಡು ಬಣವಾಯಿತು!!! 
                    ಈ ವಾದ ವಿವಾದಗಳಿಗೆ ಮಂಗಳ ಹಾಡಲು ಇಂಟರ್ನ್ಯಾಷನಲ್ ಆಸ್ತ್ರೋನೋಮಿಕಲ್ ಸೊಸೈಟಿ (IAU)ನಿರ್ದರಿಸಿತು. (ಅನೇಕ ದೇಶಗಳ ಕೆಲವು ಸಾವಿರ ವೃತ್ತಿಪರ ಸಂಶೋದಕರು ಸದಸ್ಯರಾಗಿರುವ ಒಂದು ಸಂಸ್ಥೆ ಈ ಸೊಸೈಟಿ). ಗ್ರಹಗಳಿಗೆ ಸಂಬಂದಿಸಿದಂತೆ ಆಕಾಶಕಾಯವೊಂದನ್ನು ಗ್ರಹವೆಂದು ಪರಿಗಣಿಸಲು ಅದಕ್ಕೆ ಇರಬೇಕಾದ ಅರ್ಹತೆಗಳನ್ನು ಪಟ್ಟಿಮಾಡಿ ಒಂದು ಗೊತ್ತುವಳಿ ಅಂಗೀಕರಿಸಲಾಯಿತು. ಆ ಗೊತ್ತುವಳಿ (IAU Resolution 5A) ಪ್ರಕಾರ ಆಕಾಶಕಾಯವೊಂದನ್ನು ಗ್ರಹವೆಂದು ಪರಿಗಣಿಸಲು –                                            
೧)ಗೋಳಾಕಾರ ಹೊಂದಿರಲು ಸಾಕಾಗುವಷ್ಟು ದ್ರವ್ಯರಾಶಿಯನ್ನು ಹೊಂದಿರಬೇಕು.  
೨)ವೃತ್ತಾಕಾರದ ಪಥದಲ್ಲಿ ಸೂರ್ಯನನ್ನು ಸುತ್ತುತ್ತಿರಬೇಕು. ಹಾಗೂ
೩)ತನ್ನ ಪಥದ ಸುತ್ತಮುತ್ತವಿರುವ ಚಿಕ್ಕಪುಟ್ಟ ಆಕಾಶಕಾಯಗಳನ್ನು ಗುಡಿಸಿ ಹಾಕುವಷ್ಟು ಬಲಿಷ್ಟ ಗುರುತ್ವಾಕರ್ಷಣಾ ಶಕ್ತಿ ಹೊಂದಿರಬೇಕು.
            ಮೊದಲೆರಡು ಅರ್ಹತೆ ಹೊಂದಿದ್ದ ಪ್ಲುಟೊಗೆ ಮೂರನೆ ಅರ್ಹತೆ ಇರಲೇ ಇಲ್ಲ!!! ಅದರ ಗುರುತ್ವಾಕರ್ಷಣೆ ಶಕ್ತಿ ಅಷ್ಟು ಕಡಿಮೆ. ಬೇರೆ ದೊಡ್ಡ ಗ್ರಹಗಳ ಗುರುತ್ವಾಕರ್ಷಣಾ ಶಕ್ತಿ ಎಷ್ಟಿರುತ್ತದೆಯೆಂದರೆ ಅವುಗಳ ಪಥದ ಸುತ್ತಮುತ್ತಲಿನ ಆಕಾಶಕಾಯಗಳು ಒಂದೇ ಆ ಗ್ರಹಗಳೊಂದಿಗೇ ಕೂಡಿಕೊಂಡಿರುತ್ತವೆ ಇಲ್ಲಾ ಅದರ ಸುತ್ತ ಸುತ್ತುವ ಉಪಗ್ರಹವಾಗಿ ಸೇರಿಕೊಂಡಿರುತ್ತವೆ. ಆದರೆ ಪುಟ್ಟ ಪ್ಲುಟೊ ಪಥದಲ್ಲಿ ಅಲ್ಲಲ್ಲಿ ಸಾವಿರಾರು ಚಿಕ್ಕಪುಟ್ಟ ಆಕಾಶಕಾಯಗಳು. ಆದ್ದರಿಂದ ೨೦೦೬ರ ಆಗಸ್ಟ್ ೨೪ರಂದು ಜೆಕ್ ಗಣರಾಜ್ಯದ ಪ್ರಾಗ್ ನಲ್ಲಿ ನಡೆದ ಇಂಟರ್ನ್ಯಾಷನಲ್ ಆಸ್ತ್ರೋನಾಮಿಕ್ ಯೂನಿಯನ್ನ ಸಾಮಾನ್ಯ ಸಭೆಯಲ್ಲಿ ಮತದಾನದ ಮೂಲಕ ಪ್ಲುಟೊವನ್ನು ಸೌರವ್ಯೂಹದ ಗ್ರಹಗಳ ಪಟ್ಟಿಯಿಂದ ಹೊರಗಿಡಲಾಯಿತು.  
             ನಿರೀಕ್ಷೆಯಂತೆ ಹೆಚ್ಚಿನ ಪ್ರತಿರೋಧ ಬಂದಿದ್ದು ಅಮೆರಿಕಾದಿಂದ. ಏಕೆಂದರೆ ಅಮೇರಿಕಾ ಕಂಡುಹಿಡಿದ ಒಂದೇ ಒಂದು ಗ್ರಹ ಅದು. ಜನಸಾಮಾನ್ಯರು ಹಾಗೂ ಖಗೋಳಶಾಸ್ತ್ರಜ್ಞರಿಂದ ಪ್ರತಿಭಟನಾ ಪತ್ರಗಳು ಸಾಕಷ್ಟು ಸಂಖ್ಯೆಯಲ್ಲಿ IOU ತಲುಪಿದವು. ಪುಟಾಣಿ ಪ್ಲುಟೊವನ್ನು ಹೊರಗಟ್ಟಿದಕ್ಕೆ ಮಕ್ಕಳು ಮರುಗಿದರು!! ‘to pluto’ ಎಂಬುವುದು ಹಿಂದೊತ್ತು ಅಥವಾ ಮೌಲ್ಯಕಳೆ (to demote or to devalue something)ಎಂಬರ್ಥದಲ್ಲಿ ಬಳಸಲಾರಂಬಿಸಲ್ಪಟ್ಟಿತು!!!! ನ್ಯೂ ಮೆಕ್ಸಿಕೋ ರಾಜ್ಯದ ಪಾರ್ಲಿಮೆಂಟ್ ಅಂತೂ ರಾತ್ರಿ ಆಕಾಶದಲ್ಲಿ ನ್ಯೂ ಮೆಕ್ಸಿಕೋ ಮೇಲೆ ಪ್ಲುಟೊ ಹಾದು ಹೋಗುವವರೆಗೂ ಅದನ್ನು ಗ್ರಹವೆಂದೇ ಪರಿಗಣಿಸುವ ತೀರ್ಮಾನ ಕೈಗೊಂಡಿತು!! (ಅರಿಜೊನಾ ಆ ರಾಜ್ಯದಲ್ಲಿ ಬರುತ್ತದೆ)
            ಈ ವಿಷಯ ನಿಮಗೆ ಗೊತ್ತಿತ್ತೇ? ಈಗ ನಿಮಗೊಂದು ಪ್ರಶ್ನೆ-ಸೌರವ್ಯೂಹದಲ್ಲಿ ಎಷ್ಟು ಗ್ರಹಗಳಿವೆ? ಅವುಗಳ ಹೆಸರೇನು?(ಕೊನೆಯ ಎರಡು ಗ್ರಹಗಳ ಹೆಸರು ಸಾಕು!!) ಲೇಖನ ಓದಿದವರು ನಿಮ್ಮನಿಸಿಕೆ ಬರೆದರೆ ಸಂತೋಷ.           
                                            

Friday, September 10, 2010

ಟಾಮೀ!!!!!.....ಮಲೆನಾಡಿನ ಶಿಕಾರಿಯ ಒಂದು (ಕಟ್ಟು)ಕಥೆ.

                 ಒಂದು ದಶಕದ ಹಿಂದೆ-ನಾನು ಹಾಸ್ಟೆಲ್ಲಿನಲ್ಲಿ ಇದ್ದು ಓದುತ್ತಿದ್ದಾಗ-ಓದಿ ಓದಿ ಬೇಜಾರಾಗಿ ಸ್ನೇಹಿತರೆಲ್ಲ ಅಪರಾತ್ರಿ ಯಾರದ್ದೋ ರೂಮಿನಲ್ಲಿ ಸೇರಿ ಪಟಾಕಿ ಹೊಡೆಯುತ್ತಿದ್ದಾಗ-ತೇಲಿ ಬಂದ ವಿಷಯವೇ ಈ ಸ್ವಾರಸ್ಯಕರ ಕಥೆ!!! ನಾಲ್ಕು ಜನ ಸೇರಿ ಲೋಕಾಭಿರಾಮವಾಗಿ ಮಾತಾಡುವಾಗ ಎಲ್ಲರ ಗಮನವನ್ನು ತನ್ನೆಡೆ ಸೆಳೆಯಲು ಕಾಲು ಬಾಲ ಸೇರಿಸಿ ಕಥೆ ಹೇಳುವವರನ್ನು ನೀವು ನೋಡಿರಬಹುದು. ನಮ್ಮ ಸಹಪಾಟಿ ರಮೇಶನೂ ಅಂತಹವನೇ. ರಮೇಶ ಬಯಲುಸೀಮೆಯಾವನಾದರೂ ಅವನ ತಾಯಿಯ ತವರೂರು ಮಲೆನಾಡಿನ ನಮ್ಮ ತಾಲೂಕು ಕೊಪ್ಪಾಕ್ಕೆ ಸೇರಿದ ಒಂದು ಹಳ್ಳಿ. ಅಲ್ಲಿ ಅವನ ಸೋದರಮಾವ ಮತ್ತು ತಾಯಿಯ ನೆಂಟರೆಲ್ಲಾ ಜಮೀನು ಮಾಡಿಕೊಂಡು ಇದ್ದಾರೆ. ಅವರ ಮಾವ ಹಾಗೂ ಅವರ ಗೆಳೆಯರೆಲ್ಲಾ ಶಿಕಾರಿಗೆ ಹೋಗುತ್ತಿರುತ್ತಾರಂತೆ. ಹಾಗೆ ಒಮ್ಮೆ ಶಿಕಾರಿಗೆ ಹೋದಾಗ, ನಿಜವಾಗಿ ನಡೆದ ಘಟನೆ. ಹೌದು ಕಂಡ್ರೋ ಎಂದು ಒಗ್ಗರಣೆ ಹಾಕಿ-ರಮೇಶ ಹೇಳಿದ್ದು ಹೀಗೆ-
               ರಮೇಶನ ಸೋದರ ಮಾವ ಹಾಗೂ ಮೂರ್ನಾಲ್ಕು ಸ್ನೇಹಿತರು ಒಮ್ಮೆ ಶಿಕಾರಿಗೆ ಹೋದರಂತೆ. ಜೊತೆಗೆ ಅವರ ನಾಯಿ ಟಾಮಿ ಕೂಡಾ ಇತ್ತಂತೆ. ಶಿಕಾರಿಗೆ ಹೊರಡುವ ಪರಿವಾರದಲ್ಲಿ ನಾಯಿ ಎಂದೆಂದೂ ಅವಿಭಾಜ್ಯ ಅಂಗ. ವಾಸನೆಯಿಂದಲೇ ಪ್ರಾಣಿಗಳನ್ನು ಗುರುತಿಸುವುದು, ಅದನ್ನು ಬೆನ್ನತ್ತುವುದು, ಬೆದರಿ ಕದ್ದು ಕೂತ ಪ್ರಾಣಿಗಳನ್ನು ಅಲ್ಲಿಂದ ಎಬ್ಬಿಸುವುದು-ಈ ಕಾರ್ಯಗಳಲ್ಲಿ ನಾಯಿಗಳ ಕಾರ್ಯಕ್ಷಮತೆ ಮನುಷ್ಯರಿಗಿಂತ ಹೆಚ್ಚಂತೆ. (ನಾನೆಂದೂ ಶಿಕಾರಿಗೆ ಹೋದವನಲ್ಲ!!! ಅನುಭವಿಗಳಿಂದ ಕೇಳಿತಿಳಿದಿದ್ದು). ಹೀಗೆ ಶಿಕಾರಿಗೆ ಹೋದವರಿಗೆ ಗಂಟೆಗಟ್ಟಲೆ ಅಲೆದರೂ ಒಂದೇ ಒಂದು (ಯೋಗ್ಯ) ಪ್ರಾಣಿ ಸಿಗಲಿಲ್ಲ. ಅಲೆದಲೆದು ಸುಸ್ತಾಗಿ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಹಂದಿಗಳ ಹಿಂಡೊಂದು ಕಾಣಿಸುವುದೆ!!!! ಕೇಳಬೇಕೆ? ಸುಸ್ತು ಮರೆತು ನಾಯಿ ಹಾಗೂ ಶಿಕಾರಿಗಾರರು ಹಂದಿಗಳ ಬೆನ್ನತ್ತಿದರು. 
                ಉಳಿದ ಹಂದಿಗಳು ಚಲ್ಲಾಚದುರಿ ದಿಕ್ಕುಪಾಲಾಗಿ,ಮರಿಹಂದಿಯೊಂದು ಮಾತ್ರ ಗುಂಪಿನಿಂದ ಬೇರೆಯಾಗಿ ಒಂಟಿಯಾಯಿತು. ಇವರು ಮರಿಹಂದಿಯ ಬೆನ್ನು ಬಿದ್ದರು. ಆ ಮರಿಹಂದಿಯೋ ಇವರನ್ನು ಚೆನ್ನಾಗಿ ಕುಣಿಸಿತು. ಒಮ್ಮೆ ಪೊದೆಯಲ್ಲಿ ಓಡಿಹೋಗಿ ಸೇರಿಕೊಳ್ಳುವುದು-ಅಲುಗಾಡದೆ ಇರುವುದು-ನಾಯಿ, ಮನುಷ್ಯರು ತುಂಬಾ ಹತ್ತಿರ ಬರುತ್ತಿದ್ದಂತೆ ಪಟ್ಟನೆ ಅಲ್ಲಿಂದ ಓಟಕೀಳುವುದು. ಶಿಕಾರಿಗಾರರು ಸುಸ್ತೋ ಸುಸ್ತು.ಇದು ಹೀಗೇ ಎರಡು ಮೂರು ಸರ್ತಿ ಪುನರಾವರ್ತನೆಯಾದಾಗ-ಹಂದಿಮರಿ ಓಡಿಹೋಗಿ ಪೋದೆಯೊಂದನ್ನು ಸೇರಿಕೊಂಡಾಗ-ಅದನ್ನು ಹೊರಗೆ ಹೊರಡಿಸುವ ಗೋಜಿಗೆ ಹೋಗದೆ-ಶಿಕಾರಿಗಾರರು ಪೊದೆಗೇ ಬೆಂಕಿಯಿಟ್ಟರು!! ಹೇಗೂ ಸಾಯಿಸಿಯೇ ತಿನ್ನುವುದಲ್ಲವೇ? ಬೆಂಕಿಲೇ ಸಾಯಲಿ-ಎಂಬುದು ಅವರೆಣಿಕೆ. ಪೊದೆ ಪೂರ್ತಿ ಉರಿಯುವ ತನಕ ಬೀಡಿ ಸೇದುತ್ತ,ಅದು ಇದು ಹರಟುತ್ತ ವಿಶ್ರಾಂತಿ ಪಡೆದರು.
               ಸ್ವಲ್ಪ ಹೊತ್ತು ಬಿಟ್ಟು ಬೆಂಕಿಉರಿ ಕಡಿಮೆಯಾದಮೇಲೆ ಕೆದಕಿ ನೋಡಿದರೆ ಹದವಾಗಿ ಬೆಂದ ಹಂದಿಮಾಂಸ!!! ಅಷ್ಟು ಚೂರು ಮಾಂಸ ಮನೆಗೆ ತೆಗೆದುಕೊಂಡು ಹೋಗುವುದು ಹೇಗೆ? ಹೇಗೂ ಸುಸ್ತಾಗಿ ಹಸಿವಾಗಿದೆ. ಇಲ್ಲೇ ತಿಂದುಮುಗಿಸುವ- ಎಂದು ತಿರ್ಮಾನಿಸಿದ ರಮೇಶನ ಸೋದರಮಾವ ಮತ್ತು ಅವರ ಸ್ನೇಹಿತರು ಅಲ್ಲೇ ಅದನ್ನು ತಿಂದು ಮುಗಿಸಿದರಂತೆ!! ಹೊಟ್ಟೆ ಸ್ವಲ್ಪ ತಣ್ಣಗಾಗಿ ಕಾಡಿಂದ ಮನೆದಿಕ್ಕಿಗೆ ಹೊರಟಾಗಲೇ ಅವರಿಗೆ ತಮ್ಮ ನಾಯಿ ಟಾಮಿಯ ಜ್ಞಾಪಕ ಬಂದಿದ್ದು. ಕುರುಕುರು, ಟಾಮಿ, ಟಾಮೀ-ಎಷ್ಟು ಕರೆದರೂ ಟಾಮಿಯ ಸುಳಿವಿಲ್ಲ!! ಬದುಕಿದ್ದರೆ ತಾನೇ ಟಾಮಿ ಬರುವುದು?? ಪೊದೆಗೆ ಬೆಂಕಿ ಹಚ್ಚಿದಾಗ ಜಾಣ ಮರಿಹಂದಿ ಎಲ್ಲೋ ಓಡಿಹೋಗಿ ಇವರ ನಾಯಿ ಟಾಮಿಯೇ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡು ಸತ್ತುಹೋಯ್ತಂತೆ!! ಇವರು ತಿಂದು ತೇಗಿದ್ದು ಟಾಮಿಯ ಮಾಂಸವಂತೆ!!!!!
                ಸದ್ದುಮಾಡದೆ ಈ ಕಥೆ ಕೇಳುತ್ತಿದ್ದ ಎಲ್ಲರೂ ಕಥೆ ಮುಗಿಯುತ್ತಿದ್ದಂತೆ ಗೊಳ್ಳೆಂದು ನಕ್ಕರು. ನಾನಂತೂ ಈ ಕತೆಯನ್ನು ಎಳ್ಳಷ್ಟು ನಂಬುವುದಿಲ್ಲ. ಉಪ್ಪು-ಗಿಪ್ಪು ಇಲ್ಲದೆ ಮಾಂಸವನ್ನು ಹಾಗೆಯೇ ತಿನ್ನಬಹುದೆ?? ಈ ಕತೆಯ ಸತ್ಯಾಸತ್ಯತೆಯನ್ನು ಬ್ಲಾಗಿನಲ್ಲಿ ಶಿಕಾರಿಯಬಗ್ಗೆ ಬರೆಯುವ ಯಡೂರಿನ ಪ್ರವೀಣ್ ಗೌಡ ಅವರೇ ಹೇಳಬೇಕು.(ಇದನ್ನು ಓದಿದರೆ ಕಾಮೆಂಟ್ ನಲ್ಲಿ ಬರೆಯಿರಿ). ಅದೇನೇ ಇರಲಿ, ಈ ಘಟನೆ ನಂತರ ಸ್ನೇಹಿತರ ವಲಯದಲ್ಲಿ (ಕೆಲವು ತಿಂಗಳ ವರೆಗೆ) ರಮೇಶ ಟಾಮಿಯೆಂದೇ ಕರೆಯಲ್ಪಡುತ್ತಿದ್ದ!!!. ರಮೇಶ. ರಮೇಶಾ- ಎಂದು ಕರೆದರೂ ಕತ್ತೆತ್ತಿ ನೋಡದಿದ್ದರೆ ಹಾಯ್ ಟಾಮ್ಸ್ ಎಂದು ಕರೆದರೆ ಸಾಕು. ಗುರಾಯಿಸುತ್ತಿದ್ದ!!!! 

Friday, June 25, 2010

ಹಕ್ಕಿಯ ಹಿಕ್ಕೆಗಳ ಗಣಿಗಾರಿಕೆ!!!!!


                ಆಂಗ್ಲ ಮಾಸಿಕವೊಂದರಲ್ಲಿ ಮೊದಲ ಬಾರಿಗೆ ಈ ಲೇಖನ ಓದಿದಾಗ ನಾನೊಂದು ತೀರ್ಮಾನಕ್ಕೆ ಬಂದೆ- ಈ ಪ್ರಪಂಚದಲ್ಲಿ ಸಂಭವಿಸುವ ಅಚ್ಚರಿಗಳಿಗೆ ಕೊನೆಮೊದಲೇ ಇಲ್ಲ-ಎಂದು!! ಅಷ್ಟು ಆಶ್ಚರ್ಯವಾಯಿತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳುವುದೇ ಈ ಲೇಖನ. ನೀವು ಕಲ್ಲಿದ್ದಿಲು ಗಣಿಗಾರಿಕೆ ಕೇಳಿರಬಹುದು, ಚಿನ್ನ, ಬಾಕ್ಸೈಟ್ ಗಣಿಗಾರಿಕೆ ಕೇಳಿರಬಹುದು. ಬಳ್ಳಾರಿ ಗಣಿಗಾರಿಕೆಯಂತೂ ಕೇಳಿಯೇ ಕೇಳಿರುತ್ತೀರಿ. ಆದರೆ ನಾನು ಈ ಮುಂದೆ ಬರೆಯಲಿರುವ ಗಣಿಗಾರಿಕೆ ಬಗ್ಗೆ ನೀವು ಇಲ್ಲಿಯವರೆಗೂ ಕೇಳಿರುವ ಸಂಭವ ಕಡಿಮೆಯೆಂದೇ ನನ್ನ ಅನಿಸಿಕೆ.
               ಡಿಸ್ಕವರಿ ಅಥವಾ ನ್ಯಾಷನಲ್ ಜಿಯಾಗ್ರಫಿಕ್ ಚಾನಲ್ನಲ್ಲಿ ಒಮ್ಮೆಯಾದರೂ ಈ ದೃಶ್ಯವನ್ನು ನೀವು ನೋಡಿಯೇ ನೋಡಿರುತ್ತೀರಿ. ಶಾಂತ ಸಾಗರ. ಮರಗಿಡಗಳಿಲ್ಲದ  ಚೂಪು ಕೊಡುಗಲ್ಲುಗಳಿಂದ ಕೂಡಿದ ದ್ವೀಪ. ದಡಕ್ಕೆ ಅಪ್ಪಳಿಸುವ ತೆರೆಗಳು. ಸಾವಿರ ಸಾವಿರ ಕಡಲ ಹಕ್ಕಿಗಳ ಕಲರವ. ಬಂಡೆಗಳ ಮಧ್ಯ ಅವುಗಳ ಸಂಸಾರ. ತೆರೆಗಳೊಂದಿಗೆ ಬರುವ ಮೀನು ಏಡಿಗಳನ್ನು ಅವು ಹೆಕ್ಕುವುದು.(ಕೆಲವೊಮ್ಮೆ ಆ ಹಕ್ಕಿಗಳನ್ನು ನೀರೋಳಗಿರುವ ಸೀಲ್ ಗಳು ಗಬಕ್ಕನೆ ಹಿಡಿದು ತಿನ್ನುತ್ತಿರುತ್ತವೆ). ಪೆರು ದೇಶದ ಪಶ್ಚಿಮದಲ್ಲಿನ ಶಾಂತ ಸಾಗರದ ತೀರದಲ್ಲಿ ಅಂತಹ ಒಂದು ದ್ವೀಪಸಮೂಹವಿದೆ. (Guanape Norte). ಆ ದ್ವೀಪದಲ್ಲಿ ಸಾವಿರ ಸಾವಿರ ಕಡಲ ಹಕ್ಕಿಗಳು ವಾಸಿಸುತ್ತವೆ. ಹಕ್ಕಿಗಳನ್ನು ಬಿಟ್ಟರೆ ಮರಗಿಡಗಳಾಗಲಿ, ಇತರ ಪ್ರಾಣಿಗಳಾಗಲೀ ವಾಸಿಸಲಾಗದ ಅಂತಹ ದ್ವೀಪಗಳಲ್ಲಿ ಕೆಲವು ವರ್ಷಗಳಿಗೊಮ್ಮೆ (ಕೆಲವು ತಿಂಗಳು ಮಾತ್ರ) ಮನುಷ್ಯರ ಸಂಚಾರ, ಮನುಷ್ಯರ ವಾಸ ಕಂಡುಬರುತ್ತದೆ!!! ಅವರು ಅಲ್ಲೇನು ಮಾಡುತ್ತಾರೆ? ಅವರಿಗೇನು ಕೆಲಸ?? ಆಶ್ಚರ್ಯವಾಯಿತೇ??? ಅಲ್ಲಿ ನಡೆಯುವುದೇ ನಾನು ಹೇಳ ಹೊರಟಿರುವ ಹಕ್ಕಿಗಳ ಹಿಕ್ಕೆಗಳ ಗಣಿಗಾರಿಕೆ!!!!  


            ಆ ಕೆಲವೊಂದು ತಿಂಗಳುಗಳು ಮಾತ್ರ ದ್ವೀಪದ ನಿರ್ಜನ ಬ್ಯಾರಕ್ ಗಳಿಗೆ ಜೀವ ಬರುತ್ತವೆ. ತಮ್ಮ ಸಂಸಾರವನ್ನು ಊರಲ್ಲೇ ಬಿಟ್ಟು ಪೆರುವಿನ ಮುಖ್ಯ ಭೂಬಾಗದಿಂದ ಬರುವ ಕೆಲಸದಾಳುಗಳಿಗೆ ಆ ಬ್ಯಾರಕ್ ಗಳೇ ಆಶ್ರಯ ತಾಣ.(ಅಲ್ಲಿಗೆ ಕುಡಿಯುವ ನೀರಿನಿದ ಹಿಡಿದು ಎಲ್ಲವೂ ಮುಖ್ಯ ಭೂ ಭಾಗದಿಂದ ಬರಬೇಕು!!). ಬೆಳ್ಳಂಬೆಳಗ್ಗೆ ಸೂರ್ಯ ಹುಟ್ಟುವ ಮೊದಲೇ ಅವರ ದಿನಚರಿ ಆರಂಭವಾಗುತ್ತದೆ. ದೊಡ್ಡ ಮಗ್ಗಿನ ತುಂಬಾ ಕಾಫಿಯೇ ಬೆಳಗಿನ ಉಪಾಹಾರ. ಬ್ಯಾರಕ್ ನಿಂದ ಹೊರಡುವ ಜನ ಮುಂಜಾನೆಯ ತಂಪಿನ ವಾತಾವರಣದಲ್ಲಿ ಹಕ್ಕಿಗಳು ವಾಸಿಸುವ ಜಾಗಗಳಿಗೆ ತಲಪುತ್ತಾರೆ. ಮಾಮೂಲಿ ಗಣಿಗಾರಿಕೆ ಮಣ್ಣೆತ್ತುವ ಮಿಶಿನ್, ದೊಡ್ಡ ಲಾರಿಗಳ ಮುಖಾಂತರ ನಡೆದರೆ ಈ ಗಣಿಗಾರಿಕೆಯಲ್ಲಿ ಆಯುಧ ಲೋಹದ ಹಲ್ಲುಗಳಿರುವ ದೊಡ್ಡ ಬ್ರಶ್ ಗಳು, ಪಿಕಾಸಿ, ಸಬ್ಬಲ್ಲು, ಚೀಲಗಳು!!!

            ಈ ದ್ವೀಪ ಮೊದಲೇ ಹೇಳಿದಂತೆ ಸಾವಿರ ಸಾವಿರ ಕಡಲ ಹಕ್ಕಿಗಳಿಗೆ ಮರಿಮಾಡುವ ಸ್ಥಳ. ಅವುಗಳ ಹಿಕ್ಕೆಗಳು ಕಲ್ಲು ಬಂಡೆಗಳ ಮೇಲೆ ಅಂಟಿ ಬಿದ್ದಿರುತ್ತವೆ. ಎಂಟತ್ತು ವರ್ಷಗಳಲ್ಲಿ ಹಿಕ್ಕೆಗಳ ಒಂದು ಪದರವೇ ಕಲ್ಲು ಬಂಡೆಗಳ ಮೇಲೆ ಸಂಗ್ರಹವಾಗಿರುತ್ತದೆ.ಸತ್ತ ಅಸಂಖ್ಯ ಹಕ್ಕಿಗಳ ದೇಹಗಳೂ ಅದರಲ್ಲಿ ಸೇರಿಕೊಂಡು ಕುಂಬಾಗಿ ಹೋಗಿರುತ್ತದೆ. ಗಣಿಗಾರರು ಸಬ್ಬಲ್ಲು, ಪಿಕಾಸಿಗಳಿಂದ ಕೆಲವೆಡೆ ಒಂದು ಅಡಿಗೂ ಹೆಚ್ಚು ದಪ್ಪವಿರುವ ಆ ಹಿಕ್ಕೆಯ ಪದರವನ್ನು ಕುಟ್ಟಿ ಪುಡಿಮಾಡುತ್ತಾರೆ . ಬ್ರಶ್ ಗಳನ್ನು ಉಪಯೋಗಿಸಿ ಬಂಡೆಗಳ ಸಂದಿಯಿಂದ ಚೂರೂ ಬಿಡದೆ ಗುಡಿಸುತ್ತಾರೆ. ಅದನ್ನೆಲ್ಲಾ ಚೀಲದಲ್ಲಿ ತುಂಬಿ ಒಂದೆಡೆ ಹಾಕುತ್ತಾರೆ. ಅನಂತರ ಅದರಲ್ಲಿ ಸೇರಿರುವ ಮೂಳೆಯ ದೊಡ್ಡ ತುಂಡುಗಳು, ಕಲ್ಲುಗಳನ್ನು ಬೇರೆ ಮಾಡುವ ಕೆಲಸ. ಜಾಲರಿಗಳಿಗೆ ಅದನ್ನು ಹಾಕಿ ಜಾಲರಿಗಳನ್ನು ಅಲುಗಾಡಿಸಿದಾಗ ನುಣುಪಾದ ಹಳದಿ ಪುಡಿಯಂತ ಕೆಟ್ಟ ವಾಸನೆಯ ವಸ್ತು ಸಿಗುತ್ತದೆ. ಅದರ ಹೆಸರೇ ಗುಅನೋ(Guano)!!! ಅದಕ್ಕಿದೆ ಬೆಲೆ!!! ಗಣಿಗಾರಿಕೆ ನಡೆಯುವ ಸ್ಥಳ ಹಿಕ್ಕೆಗಳ ಕೆಟ್ಟ ವಾಸನೆ ಹಾಗೂ ದೂಳಿನಿಂದ ಕೂಡಿರುತ್ತದೆ. ದಿನದಂತ್ಯಕ್ಕೆ ಎಲ್ಲರ ತಲೆ ಕೂದಲು,ಮೀಸೆ, ಮೈ ರೋಮದ ಬಣ್ಣ ಬದಲಾಗಿರುತ್ತದೆ. ಸಹಜವಾಗಿಯೇ ವಾಸನೆ ಘ್ರಹಿಸುವ ನರಗಳು ಸತ್ತಂತಾಗಿರುತ್ತವೆ. ಟನ್ನುಗಟ್ಟಲೆ ಸಿಗುವ ಅದನ್ನು ಚೀಲಕ್ಕೆ ತುಂಬಿ ಹುಲಿದು ಟ್ರಾಲಿಗಳ ಮುಖಾಂತರ ಹಡಗಿಗೆ ಸಾಗಿಸಿ ಬೇರೆಡೆ ಕಳಿಸಲಾಗುತ್ತದೆ.
          ಆಯ್ತು, ಅದರ ಉಪಯೋಗವೇನು? ಹಕ್ಕಿಗಳ ಹಿಕ್ಕೆಯ ಈ ಗುಅನೋ ಸಾರಜನಕ, ರಂಜಕ, ಪೊಟಾಶ್, ಕ್ಯಾಲ್ಸಿಯಂ – ಇವನ್ನೆಲ್ಲಾ ಒಳಗೊಂಡ ಉತ್ತಮ ಗೊಬ್ಬರ!!! ಈಗ ಬಿಡಿ, ಯಾವುದೇ ಚಿಕ್ಕ ಊರಿಗೆ ಹೋದರೂ ಈ ಎಲ್ಲಾ ಗೊಬ್ಬರಗಳೂ (ಸರ್ಕಾರ ಕೊಡುವ ಸಬ್ಸಿಡಿಯಿಂದ) ಕಡಿಮೆ ಬೆಲೆಗೆ ದೊರೆಯುತ್ತದೆ. ಆದರೆ ರಸಗೊಬ್ಬರಗಳ ಆವಿಷ್ಕಾರಕ್ಕಿಂತ ಹಿಂದಿನ ದಿನಗಳಲ್ಲಿ ಈ ಗುಅನೋ ಬೆಳೆಯ ಇಳುವರಿ ಹೆಚ್ಚು ಮಾಡುವ ಮಾಯಾ ಮಂತ್ರದ ವಸ್ತುವಾಗಿತ್ತು. ಇದರ ಸಂಗ್ರಹಣೆಯ ವಿಷಯದಲ್ಲಿ ಯುದ್ದಗಳೇ ಆಗಿವೆ. ದ್ವೀಪದ ಇಳಿಜಾರು ಪ್ರದೇಶಗಳಲ್ಲಿ ಈ ಗುಅನೋ ಮಳೆಯಲ್ಲಿ ತೊಳೆದು ಹೋಗಿ ಸಮುದ್ರ ಸೇರಿ ದಂಡವಾಗದಂತೆ ಕೋಟೆಗೋಡೆತರ  ಕಿಲೋಮೀಟರ್ಗಟ್ಟಲೆ ಉದ್ದ ಕಟ್ಟಿದ್ದರು. ಈ ರಸಗೊಬ್ಬರಗಳ ಕಾಲದಲ್ಲಿ ಗುಅನೋಗೆ ಆಗಿನಷ್ಟು ಪ್ರಾಮುಖ್ಯತೆ ಇಲ್ಲದಿದ್ದರೂ ಈ ಸಾವಯವ ಗೊಬ್ಬರಕ್ಕೆ ತನ್ನದೇ ಆದ ಬೇಡಿಕೆಯಿದೆ.
           ಈ ಲೇಖನ (ಹಾಗೂ ಚಿತ್ರ) ನೋಡಿದಮೇಲೆ ನಿಮಗೂ ನನಗೆ ಮೊದಲ ಬಾರಿ ಓದಿದಾಗ ಆದಷ್ಟೇ ಆಶ್ಚರ್ಯವಾಗಬಹುದು. ಈ ಪ್ರಪಂಚದಲ್ಲಿ ಸಂಭವಿಸುವ ಅಚ್ಚರಿಗಳಿಗೆ ಕೊನೆಮೊದಲೇ ಇಲ್ಲ-ಎಂಬ ತೀರ್ಮಾನಕ್ಕೆ ನೀವೂ ಬರುತ್ತೀರೆಂದು ನಂಬಿರುತ್ತೇನೆ. ಈ ಮೊದಲು ಈ ವಿಷಯ ನಿಮಗೆ ಗೊತ್ತಿತೆ?