Friday, September 10, 2010

ಟಾಮೀ!!!!!.....ಮಲೆನಾಡಿನ ಶಿಕಾರಿಯ ಒಂದು (ಕಟ್ಟು)ಕಥೆ.

                 ಒಂದು ದಶಕದ ಹಿಂದೆ-ನಾನು ಹಾಸ್ಟೆಲ್ಲಿನಲ್ಲಿ ಇದ್ದು ಓದುತ್ತಿದ್ದಾಗ-ಓದಿ ಓದಿ ಬೇಜಾರಾಗಿ ಸ್ನೇಹಿತರೆಲ್ಲ ಅಪರಾತ್ರಿ ಯಾರದ್ದೋ ರೂಮಿನಲ್ಲಿ ಸೇರಿ ಪಟಾಕಿ ಹೊಡೆಯುತ್ತಿದ್ದಾಗ-ತೇಲಿ ಬಂದ ವಿಷಯವೇ ಈ ಸ್ವಾರಸ್ಯಕರ ಕಥೆ!!! ನಾಲ್ಕು ಜನ ಸೇರಿ ಲೋಕಾಭಿರಾಮವಾಗಿ ಮಾತಾಡುವಾಗ ಎಲ್ಲರ ಗಮನವನ್ನು ತನ್ನೆಡೆ ಸೆಳೆಯಲು ಕಾಲು ಬಾಲ ಸೇರಿಸಿ ಕಥೆ ಹೇಳುವವರನ್ನು ನೀವು ನೋಡಿರಬಹುದು. ನಮ್ಮ ಸಹಪಾಟಿ ರಮೇಶನೂ ಅಂತಹವನೇ. ರಮೇಶ ಬಯಲುಸೀಮೆಯಾವನಾದರೂ ಅವನ ತಾಯಿಯ ತವರೂರು ಮಲೆನಾಡಿನ ನಮ್ಮ ತಾಲೂಕು ಕೊಪ್ಪಾಕ್ಕೆ ಸೇರಿದ ಒಂದು ಹಳ್ಳಿ. ಅಲ್ಲಿ ಅವನ ಸೋದರಮಾವ ಮತ್ತು ತಾಯಿಯ ನೆಂಟರೆಲ್ಲಾ ಜಮೀನು ಮಾಡಿಕೊಂಡು ಇದ್ದಾರೆ. ಅವರ ಮಾವ ಹಾಗೂ ಅವರ ಗೆಳೆಯರೆಲ್ಲಾ ಶಿಕಾರಿಗೆ ಹೋಗುತ್ತಿರುತ್ತಾರಂತೆ. ಹಾಗೆ ಒಮ್ಮೆ ಶಿಕಾರಿಗೆ ಹೋದಾಗ, ನಿಜವಾಗಿ ನಡೆದ ಘಟನೆ. ಹೌದು ಕಂಡ್ರೋ ಎಂದು ಒಗ್ಗರಣೆ ಹಾಕಿ-ರಮೇಶ ಹೇಳಿದ್ದು ಹೀಗೆ-
               ರಮೇಶನ ಸೋದರ ಮಾವ ಹಾಗೂ ಮೂರ್ನಾಲ್ಕು ಸ್ನೇಹಿತರು ಒಮ್ಮೆ ಶಿಕಾರಿಗೆ ಹೋದರಂತೆ. ಜೊತೆಗೆ ಅವರ ನಾಯಿ ಟಾಮಿ ಕೂಡಾ ಇತ್ತಂತೆ. ಶಿಕಾರಿಗೆ ಹೊರಡುವ ಪರಿವಾರದಲ್ಲಿ ನಾಯಿ ಎಂದೆಂದೂ ಅವಿಭಾಜ್ಯ ಅಂಗ. ವಾಸನೆಯಿಂದಲೇ ಪ್ರಾಣಿಗಳನ್ನು ಗುರುತಿಸುವುದು, ಅದನ್ನು ಬೆನ್ನತ್ತುವುದು, ಬೆದರಿ ಕದ್ದು ಕೂತ ಪ್ರಾಣಿಗಳನ್ನು ಅಲ್ಲಿಂದ ಎಬ್ಬಿಸುವುದು-ಈ ಕಾರ್ಯಗಳಲ್ಲಿ ನಾಯಿಗಳ ಕಾರ್ಯಕ್ಷಮತೆ ಮನುಷ್ಯರಿಗಿಂತ ಹೆಚ್ಚಂತೆ. (ನಾನೆಂದೂ ಶಿಕಾರಿಗೆ ಹೋದವನಲ್ಲ!!! ಅನುಭವಿಗಳಿಂದ ಕೇಳಿತಿಳಿದಿದ್ದು). ಹೀಗೆ ಶಿಕಾರಿಗೆ ಹೋದವರಿಗೆ ಗಂಟೆಗಟ್ಟಲೆ ಅಲೆದರೂ ಒಂದೇ ಒಂದು (ಯೋಗ್ಯ) ಪ್ರಾಣಿ ಸಿಗಲಿಲ್ಲ. ಅಲೆದಲೆದು ಸುಸ್ತಾಗಿ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಹಂದಿಗಳ ಹಿಂಡೊಂದು ಕಾಣಿಸುವುದೆ!!!! ಕೇಳಬೇಕೆ? ಸುಸ್ತು ಮರೆತು ನಾಯಿ ಹಾಗೂ ಶಿಕಾರಿಗಾರರು ಹಂದಿಗಳ ಬೆನ್ನತ್ತಿದರು. 
                ಉಳಿದ ಹಂದಿಗಳು ಚಲ್ಲಾಚದುರಿ ದಿಕ್ಕುಪಾಲಾಗಿ,ಮರಿಹಂದಿಯೊಂದು ಮಾತ್ರ ಗುಂಪಿನಿಂದ ಬೇರೆಯಾಗಿ ಒಂಟಿಯಾಯಿತು. ಇವರು ಮರಿಹಂದಿಯ ಬೆನ್ನು ಬಿದ್ದರು. ಆ ಮರಿಹಂದಿಯೋ ಇವರನ್ನು ಚೆನ್ನಾಗಿ ಕುಣಿಸಿತು. ಒಮ್ಮೆ ಪೊದೆಯಲ್ಲಿ ಓಡಿಹೋಗಿ ಸೇರಿಕೊಳ್ಳುವುದು-ಅಲುಗಾಡದೆ ಇರುವುದು-ನಾಯಿ, ಮನುಷ್ಯರು ತುಂಬಾ ಹತ್ತಿರ ಬರುತ್ತಿದ್ದಂತೆ ಪಟ್ಟನೆ ಅಲ್ಲಿಂದ ಓಟಕೀಳುವುದು. ಶಿಕಾರಿಗಾರರು ಸುಸ್ತೋ ಸುಸ್ತು.ಇದು ಹೀಗೇ ಎರಡು ಮೂರು ಸರ್ತಿ ಪುನರಾವರ್ತನೆಯಾದಾಗ-ಹಂದಿಮರಿ ಓಡಿಹೋಗಿ ಪೋದೆಯೊಂದನ್ನು ಸೇರಿಕೊಂಡಾಗ-ಅದನ್ನು ಹೊರಗೆ ಹೊರಡಿಸುವ ಗೋಜಿಗೆ ಹೋಗದೆ-ಶಿಕಾರಿಗಾರರು ಪೊದೆಗೇ ಬೆಂಕಿಯಿಟ್ಟರು!! ಹೇಗೂ ಸಾಯಿಸಿಯೇ ತಿನ್ನುವುದಲ್ಲವೇ? ಬೆಂಕಿಲೇ ಸಾಯಲಿ-ಎಂಬುದು ಅವರೆಣಿಕೆ. ಪೊದೆ ಪೂರ್ತಿ ಉರಿಯುವ ತನಕ ಬೀಡಿ ಸೇದುತ್ತ,ಅದು ಇದು ಹರಟುತ್ತ ವಿಶ್ರಾಂತಿ ಪಡೆದರು.
               ಸ್ವಲ್ಪ ಹೊತ್ತು ಬಿಟ್ಟು ಬೆಂಕಿಉರಿ ಕಡಿಮೆಯಾದಮೇಲೆ ಕೆದಕಿ ನೋಡಿದರೆ ಹದವಾಗಿ ಬೆಂದ ಹಂದಿಮಾಂಸ!!! ಅಷ್ಟು ಚೂರು ಮಾಂಸ ಮನೆಗೆ ತೆಗೆದುಕೊಂಡು ಹೋಗುವುದು ಹೇಗೆ? ಹೇಗೂ ಸುಸ್ತಾಗಿ ಹಸಿವಾಗಿದೆ. ಇಲ್ಲೇ ತಿಂದುಮುಗಿಸುವ- ಎಂದು ತಿರ್ಮಾನಿಸಿದ ರಮೇಶನ ಸೋದರಮಾವ ಮತ್ತು ಅವರ ಸ್ನೇಹಿತರು ಅಲ್ಲೇ ಅದನ್ನು ತಿಂದು ಮುಗಿಸಿದರಂತೆ!! ಹೊಟ್ಟೆ ಸ್ವಲ್ಪ ತಣ್ಣಗಾಗಿ ಕಾಡಿಂದ ಮನೆದಿಕ್ಕಿಗೆ ಹೊರಟಾಗಲೇ ಅವರಿಗೆ ತಮ್ಮ ನಾಯಿ ಟಾಮಿಯ ಜ್ಞಾಪಕ ಬಂದಿದ್ದು. ಕುರುಕುರು, ಟಾಮಿ, ಟಾಮೀ-ಎಷ್ಟು ಕರೆದರೂ ಟಾಮಿಯ ಸುಳಿವಿಲ್ಲ!! ಬದುಕಿದ್ದರೆ ತಾನೇ ಟಾಮಿ ಬರುವುದು?? ಪೊದೆಗೆ ಬೆಂಕಿ ಹಚ್ಚಿದಾಗ ಜಾಣ ಮರಿಹಂದಿ ಎಲ್ಲೋ ಓಡಿಹೋಗಿ ಇವರ ನಾಯಿ ಟಾಮಿಯೇ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡು ಸತ್ತುಹೋಯ್ತಂತೆ!! ಇವರು ತಿಂದು ತೇಗಿದ್ದು ಟಾಮಿಯ ಮಾಂಸವಂತೆ!!!!!
                ಸದ್ದುಮಾಡದೆ ಈ ಕಥೆ ಕೇಳುತ್ತಿದ್ದ ಎಲ್ಲರೂ ಕಥೆ ಮುಗಿಯುತ್ತಿದ್ದಂತೆ ಗೊಳ್ಳೆಂದು ನಕ್ಕರು. ನಾನಂತೂ ಈ ಕತೆಯನ್ನು ಎಳ್ಳಷ್ಟು ನಂಬುವುದಿಲ್ಲ. ಉಪ್ಪು-ಗಿಪ್ಪು ಇಲ್ಲದೆ ಮಾಂಸವನ್ನು ಹಾಗೆಯೇ ತಿನ್ನಬಹುದೆ?? ಈ ಕತೆಯ ಸತ್ಯಾಸತ್ಯತೆಯನ್ನು ಬ್ಲಾಗಿನಲ್ಲಿ ಶಿಕಾರಿಯಬಗ್ಗೆ ಬರೆಯುವ ಯಡೂರಿನ ಪ್ರವೀಣ್ ಗೌಡ ಅವರೇ ಹೇಳಬೇಕು.(ಇದನ್ನು ಓದಿದರೆ ಕಾಮೆಂಟ್ ನಲ್ಲಿ ಬರೆಯಿರಿ). ಅದೇನೇ ಇರಲಿ, ಈ ಘಟನೆ ನಂತರ ಸ್ನೇಹಿತರ ವಲಯದಲ್ಲಿ (ಕೆಲವು ತಿಂಗಳ ವರೆಗೆ) ರಮೇಶ ಟಾಮಿಯೆಂದೇ ಕರೆಯಲ್ಪಡುತ್ತಿದ್ದ!!!. ರಮೇಶ. ರಮೇಶಾ- ಎಂದು ಕರೆದರೂ ಕತ್ತೆತ್ತಿ ನೋಡದಿದ್ದರೆ ಹಾಯ್ ಟಾಮ್ಸ್ ಎಂದು ಕರೆದರೆ ಸಾಕು. ಗುರಾಯಿಸುತ್ತಿದ್ದ!!!! 

Friday, June 25, 2010

ಹಕ್ಕಿಯ ಹಿಕ್ಕೆಗಳ ಗಣಿಗಾರಿಕೆ!!!!!


                ಆಂಗ್ಲ ಮಾಸಿಕವೊಂದರಲ್ಲಿ ಮೊದಲ ಬಾರಿಗೆ ಈ ಲೇಖನ ಓದಿದಾಗ ನಾನೊಂದು ತೀರ್ಮಾನಕ್ಕೆ ಬಂದೆ- ಈ ಪ್ರಪಂಚದಲ್ಲಿ ಸಂಭವಿಸುವ ಅಚ್ಚರಿಗಳಿಗೆ ಕೊನೆಮೊದಲೇ ಇಲ್ಲ-ಎಂದು!! ಅಷ್ಟು ಆಶ್ಚರ್ಯವಾಯಿತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳುವುದೇ ಈ ಲೇಖನ. ನೀವು ಕಲ್ಲಿದ್ದಿಲು ಗಣಿಗಾರಿಕೆ ಕೇಳಿರಬಹುದು, ಚಿನ್ನ, ಬಾಕ್ಸೈಟ್ ಗಣಿಗಾರಿಕೆ ಕೇಳಿರಬಹುದು. ಬಳ್ಳಾರಿ ಗಣಿಗಾರಿಕೆಯಂತೂ ಕೇಳಿಯೇ ಕೇಳಿರುತ್ತೀರಿ. ಆದರೆ ನಾನು ಈ ಮುಂದೆ ಬರೆಯಲಿರುವ ಗಣಿಗಾರಿಕೆ ಬಗ್ಗೆ ನೀವು ಇಲ್ಲಿಯವರೆಗೂ ಕೇಳಿರುವ ಸಂಭವ ಕಡಿಮೆಯೆಂದೇ ನನ್ನ ಅನಿಸಿಕೆ.
               ಡಿಸ್ಕವರಿ ಅಥವಾ ನ್ಯಾಷನಲ್ ಜಿಯಾಗ್ರಫಿಕ್ ಚಾನಲ್ನಲ್ಲಿ ಒಮ್ಮೆಯಾದರೂ ಈ ದೃಶ್ಯವನ್ನು ನೀವು ನೋಡಿಯೇ ನೋಡಿರುತ್ತೀರಿ. ಶಾಂತ ಸಾಗರ. ಮರಗಿಡಗಳಿಲ್ಲದ  ಚೂಪು ಕೊಡುಗಲ್ಲುಗಳಿಂದ ಕೂಡಿದ ದ್ವೀಪ. ದಡಕ್ಕೆ ಅಪ್ಪಳಿಸುವ ತೆರೆಗಳು. ಸಾವಿರ ಸಾವಿರ ಕಡಲ ಹಕ್ಕಿಗಳ ಕಲರವ. ಬಂಡೆಗಳ ಮಧ್ಯ ಅವುಗಳ ಸಂಸಾರ. ತೆರೆಗಳೊಂದಿಗೆ ಬರುವ ಮೀನು ಏಡಿಗಳನ್ನು ಅವು ಹೆಕ್ಕುವುದು.(ಕೆಲವೊಮ್ಮೆ ಆ ಹಕ್ಕಿಗಳನ್ನು ನೀರೋಳಗಿರುವ ಸೀಲ್ ಗಳು ಗಬಕ್ಕನೆ ಹಿಡಿದು ತಿನ್ನುತ್ತಿರುತ್ತವೆ). ಪೆರು ದೇಶದ ಪಶ್ಚಿಮದಲ್ಲಿನ ಶಾಂತ ಸಾಗರದ ತೀರದಲ್ಲಿ ಅಂತಹ ಒಂದು ದ್ವೀಪಸಮೂಹವಿದೆ. (Guanape Norte). ಆ ದ್ವೀಪದಲ್ಲಿ ಸಾವಿರ ಸಾವಿರ ಕಡಲ ಹಕ್ಕಿಗಳು ವಾಸಿಸುತ್ತವೆ. ಹಕ್ಕಿಗಳನ್ನು ಬಿಟ್ಟರೆ ಮರಗಿಡಗಳಾಗಲಿ, ಇತರ ಪ್ರಾಣಿಗಳಾಗಲೀ ವಾಸಿಸಲಾಗದ ಅಂತಹ ದ್ವೀಪಗಳಲ್ಲಿ ಕೆಲವು ವರ್ಷಗಳಿಗೊಮ್ಮೆ (ಕೆಲವು ತಿಂಗಳು ಮಾತ್ರ) ಮನುಷ್ಯರ ಸಂಚಾರ, ಮನುಷ್ಯರ ವಾಸ ಕಂಡುಬರುತ್ತದೆ!!! ಅವರು ಅಲ್ಲೇನು ಮಾಡುತ್ತಾರೆ? ಅವರಿಗೇನು ಕೆಲಸ?? ಆಶ್ಚರ್ಯವಾಯಿತೇ??? ಅಲ್ಲಿ ನಡೆಯುವುದೇ ನಾನು ಹೇಳ ಹೊರಟಿರುವ ಹಕ್ಕಿಗಳ ಹಿಕ್ಕೆಗಳ ಗಣಿಗಾರಿಕೆ!!!!  


            ಆ ಕೆಲವೊಂದು ತಿಂಗಳುಗಳು ಮಾತ್ರ ದ್ವೀಪದ ನಿರ್ಜನ ಬ್ಯಾರಕ್ ಗಳಿಗೆ ಜೀವ ಬರುತ್ತವೆ. ತಮ್ಮ ಸಂಸಾರವನ್ನು ಊರಲ್ಲೇ ಬಿಟ್ಟು ಪೆರುವಿನ ಮುಖ್ಯ ಭೂಬಾಗದಿಂದ ಬರುವ ಕೆಲಸದಾಳುಗಳಿಗೆ ಆ ಬ್ಯಾರಕ್ ಗಳೇ ಆಶ್ರಯ ತಾಣ.(ಅಲ್ಲಿಗೆ ಕುಡಿಯುವ ನೀರಿನಿದ ಹಿಡಿದು ಎಲ್ಲವೂ ಮುಖ್ಯ ಭೂ ಭಾಗದಿಂದ ಬರಬೇಕು!!). ಬೆಳ್ಳಂಬೆಳಗ್ಗೆ ಸೂರ್ಯ ಹುಟ್ಟುವ ಮೊದಲೇ ಅವರ ದಿನಚರಿ ಆರಂಭವಾಗುತ್ತದೆ. ದೊಡ್ಡ ಮಗ್ಗಿನ ತುಂಬಾ ಕಾಫಿಯೇ ಬೆಳಗಿನ ಉಪಾಹಾರ. ಬ್ಯಾರಕ್ ನಿಂದ ಹೊರಡುವ ಜನ ಮುಂಜಾನೆಯ ತಂಪಿನ ವಾತಾವರಣದಲ್ಲಿ ಹಕ್ಕಿಗಳು ವಾಸಿಸುವ ಜಾಗಗಳಿಗೆ ತಲಪುತ್ತಾರೆ. ಮಾಮೂಲಿ ಗಣಿಗಾರಿಕೆ ಮಣ್ಣೆತ್ತುವ ಮಿಶಿನ್, ದೊಡ್ಡ ಲಾರಿಗಳ ಮುಖಾಂತರ ನಡೆದರೆ ಈ ಗಣಿಗಾರಿಕೆಯಲ್ಲಿ ಆಯುಧ ಲೋಹದ ಹಲ್ಲುಗಳಿರುವ ದೊಡ್ಡ ಬ್ರಶ್ ಗಳು, ಪಿಕಾಸಿ, ಸಬ್ಬಲ್ಲು, ಚೀಲಗಳು!!!

            ಈ ದ್ವೀಪ ಮೊದಲೇ ಹೇಳಿದಂತೆ ಸಾವಿರ ಸಾವಿರ ಕಡಲ ಹಕ್ಕಿಗಳಿಗೆ ಮರಿಮಾಡುವ ಸ್ಥಳ. ಅವುಗಳ ಹಿಕ್ಕೆಗಳು ಕಲ್ಲು ಬಂಡೆಗಳ ಮೇಲೆ ಅಂಟಿ ಬಿದ್ದಿರುತ್ತವೆ. ಎಂಟತ್ತು ವರ್ಷಗಳಲ್ಲಿ ಹಿಕ್ಕೆಗಳ ಒಂದು ಪದರವೇ ಕಲ್ಲು ಬಂಡೆಗಳ ಮೇಲೆ ಸಂಗ್ರಹವಾಗಿರುತ್ತದೆ.ಸತ್ತ ಅಸಂಖ್ಯ ಹಕ್ಕಿಗಳ ದೇಹಗಳೂ ಅದರಲ್ಲಿ ಸೇರಿಕೊಂಡು ಕುಂಬಾಗಿ ಹೋಗಿರುತ್ತದೆ. ಗಣಿಗಾರರು ಸಬ್ಬಲ್ಲು, ಪಿಕಾಸಿಗಳಿಂದ ಕೆಲವೆಡೆ ಒಂದು ಅಡಿಗೂ ಹೆಚ್ಚು ದಪ್ಪವಿರುವ ಆ ಹಿಕ್ಕೆಯ ಪದರವನ್ನು ಕುಟ್ಟಿ ಪುಡಿಮಾಡುತ್ತಾರೆ . ಬ್ರಶ್ ಗಳನ್ನು ಉಪಯೋಗಿಸಿ ಬಂಡೆಗಳ ಸಂದಿಯಿಂದ ಚೂರೂ ಬಿಡದೆ ಗುಡಿಸುತ್ತಾರೆ. ಅದನ್ನೆಲ್ಲಾ ಚೀಲದಲ್ಲಿ ತುಂಬಿ ಒಂದೆಡೆ ಹಾಕುತ್ತಾರೆ. ಅನಂತರ ಅದರಲ್ಲಿ ಸೇರಿರುವ ಮೂಳೆಯ ದೊಡ್ಡ ತುಂಡುಗಳು, ಕಲ್ಲುಗಳನ್ನು ಬೇರೆ ಮಾಡುವ ಕೆಲಸ. ಜಾಲರಿಗಳಿಗೆ ಅದನ್ನು ಹಾಕಿ ಜಾಲರಿಗಳನ್ನು ಅಲುಗಾಡಿಸಿದಾಗ ನುಣುಪಾದ ಹಳದಿ ಪುಡಿಯಂತ ಕೆಟ್ಟ ವಾಸನೆಯ ವಸ್ತು ಸಿಗುತ್ತದೆ. ಅದರ ಹೆಸರೇ ಗುಅನೋ(Guano)!!! ಅದಕ್ಕಿದೆ ಬೆಲೆ!!! ಗಣಿಗಾರಿಕೆ ನಡೆಯುವ ಸ್ಥಳ ಹಿಕ್ಕೆಗಳ ಕೆಟ್ಟ ವಾಸನೆ ಹಾಗೂ ದೂಳಿನಿಂದ ಕೂಡಿರುತ್ತದೆ. ದಿನದಂತ್ಯಕ್ಕೆ ಎಲ್ಲರ ತಲೆ ಕೂದಲು,ಮೀಸೆ, ಮೈ ರೋಮದ ಬಣ್ಣ ಬದಲಾಗಿರುತ್ತದೆ. ಸಹಜವಾಗಿಯೇ ವಾಸನೆ ಘ್ರಹಿಸುವ ನರಗಳು ಸತ್ತಂತಾಗಿರುತ್ತವೆ. ಟನ್ನುಗಟ್ಟಲೆ ಸಿಗುವ ಅದನ್ನು ಚೀಲಕ್ಕೆ ತುಂಬಿ ಹುಲಿದು ಟ್ರಾಲಿಗಳ ಮುಖಾಂತರ ಹಡಗಿಗೆ ಸಾಗಿಸಿ ಬೇರೆಡೆ ಕಳಿಸಲಾಗುತ್ತದೆ.
          ಆಯ್ತು, ಅದರ ಉಪಯೋಗವೇನು? ಹಕ್ಕಿಗಳ ಹಿಕ್ಕೆಯ ಈ ಗುಅನೋ ಸಾರಜನಕ, ರಂಜಕ, ಪೊಟಾಶ್, ಕ್ಯಾಲ್ಸಿಯಂ – ಇವನ್ನೆಲ್ಲಾ ಒಳಗೊಂಡ ಉತ್ತಮ ಗೊಬ್ಬರ!!! ಈಗ ಬಿಡಿ, ಯಾವುದೇ ಚಿಕ್ಕ ಊರಿಗೆ ಹೋದರೂ ಈ ಎಲ್ಲಾ ಗೊಬ್ಬರಗಳೂ (ಸರ್ಕಾರ ಕೊಡುವ ಸಬ್ಸಿಡಿಯಿಂದ) ಕಡಿಮೆ ಬೆಲೆಗೆ ದೊರೆಯುತ್ತದೆ. ಆದರೆ ರಸಗೊಬ್ಬರಗಳ ಆವಿಷ್ಕಾರಕ್ಕಿಂತ ಹಿಂದಿನ ದಿನಗಳಲ್ಲಿ ಈ ಗುಅನೋ ಬೆಳೆಯ ಇಳುವರಿ ಹೆಚ್ಚು ಮಾಡುವ ಮಾಯಾ ಮಂತ್ರದ ವಸ್ತುವಾಗಿತ್ತು. ಇದರ ಸಂಗ್ರಹಣೆಯ ವಿಷಯದಲ್ಲಿ ಯುದ್ದಗಳೇ ಆಗಿವೆ. ದ್ವೀಪದ ಇಳಿಜಾರು ಪ್ರದೇಶಗಳಲ್ಲಿ ಈ ಗುಅನೋ ಮಳೆಯಲ್ಲಿ ತೊಳೆದು ಹೋಗಿ ಸಮುದ್ರ ಸೇರಿ ದಂಡವಾಗದಂತೆ ಕೋಟೆಗೋಡೆತರ  ಕಿಲೋಮೀಟರ್ಗಟ್ಟಲೆ ಉದ್ದ ಕಟ್ಟಿದ್ದರು. ಈ ರಸಗೊಬ್ಬರಗಳ ಕಾಲದಲ್ಲಿ ಗುಅನೋಗೆ ಆಗಿನಷ್ಟು ಪ್ರಾಮುಖ್ಯತೆ ಇಲ್ಲದಿದ್ದರೂ ಈ ಸಾವಯವ ಗೊಬ್ಬರಕ್ಕೆ ತನ್ನದೇ ಆದ ಬೇಡಿಕೆಯಿದೆ.
           ಈ ಲೇಖನ (ಹಾಗೂ ಚಿತ್ರ) ನೋಡಿದಮೇಲೆ ನಿಮಗೂ ನನಗೆ ಮೊದಲ ಬಾರಿ ಓದಿದಾಗ ಆದಷ್ಟೇ ಆಶ್ಚರ್ಯವಾಗಬಹುದು. ಈ ಪ್ರಪಂಚದಲ್ಲಿ ಸಂಭವಿಸುವ ಅಚ್ಚರಿಗಳಿಗೆ ಕೊನೆಮೊದಲೇ ಇಲ್ಲ-ಎಂಬ ತೀರ್ಮಾನಕ್ಕೆ ನೀವೂ ಬರುತ್ತೀರೆಂದು ನಂಬಿರುತ್ತೇನೆ. ಈ ಮೊದಲು ಈ ವಿಷಯ ನಿಮಗೆ ಗೊತ್ತಿತೆ?             

Tuesday, June 1, 2010

“ಅಡಿಕೆ ಹಳದಿಎಲೆ ರೋಗ” ನೀವು ಸಿದ್ದರಾಗಿದ್ದೀರಾ?


                 ಬ್ಲಾಗ್ ಪ್ರಪಂಚದಲ್ಲಿ ಅನೇಕ ಜನ ಅಡಿಕೆ ಬೆಳೆಗಾರರಿದ್ದಾರೆ. ಅವರಿಗಾಗಿ ಈ ಲೇಖನ!!.(ಆಸಕ್ತರೂ ಓದಬಹುದು)

                        ಆ ಒಂದು ವರ್ಷವನ್ನು ಜ್ಞಾಪಿಸಿಕೊಳ್ಳಿ. ತುಂಬಾ ಮಳೆಬಂದ ವರ್ಷ ಅದು. ಎಡೆಬಿಡದ ಮಳೆಯಿಂದಾಗಿ ಆ ವರ್ಷ ಅಡಿಕೆ ಕೊನೆಗಳಿಗೆ (ಶಿಲೀಂದ್ರ ನಾಶಕ) ಔಷದಿ (ಕಾಪರ್ ಸಲ್ಫೇಟ್) ಸಮಯಕ್ಕೆ ಸರಿಯಾಗಿ ಸಿಂಪಡಿಸಲು ಆಗಿರಲೇ ಇಲ್ಲ. ಪರಿಣಾಮ? ಎಳೆ ಕಾಯಿಗಳು ಉದುರಿ ಬಿದ್ದಿದ್ದವು. ಹೆಚ್ಚಿನ ಪಸಲು ನೆಲ ಸೇರಿತ್ತು!!! ಅಡಿಕೆಯ ಆಆ ವರ್ಷದ ಪಸಲನ್ನೇ ನಂಬಿ ಜೀವನ ನಡೆಸುವ ಬೆಳೆಗಾರನ ಕಥೆ ಹೇಗಾಗಬೇಡ? ಆ ಒಂದು ವರ್ಷ ಸಂಸಾರ ತೂಗಿಸುವುದು ಎಷ್ಟು ಕಷ್ಟ. ಇನ್ನು ಪ್ರತೀ ವರ್ಷ ಅಡಿಕೆ ಪಸಲು ಇದೇ ರೀತಿ ಕೈಕೊಡುತ್ತಿದ್ದರೆ ಅಲ್ಲೆಲ್ಲಾ ಜೀವನ ಹೇಗಿರಬಹುದು?

                        ಬನ್ನಿ. ಸಾಂಪ್ರದಾಯಕವಾಗಿ ಅಡಿಕೆ ಬೆಳೆ ಬೆಳೆಯುವ ಪ್ರದೇಶವಾದ ಕೊಪ್ಪ-ಶೃಂಗೇರಿ ತಾಲೂಕಿಗೆ ಬನ್ನಿ. ಸಾವಿರಾರು ಸಂಸಾರಗಳಲ್ಲಿ ಅಡಿಕೆ ಪಸಲು ಅದೆಷ್ಟೋ ವರ್ಷಗಳಿಂದ ಸತತವಾಗಿ ನೆಲಕಚ್ಚುತ್ತಾ ಬಂದಿದೆ. ಅದೆಷ್ಟೋ ಕುಟುಂಬಗಳ ಕೆಂಪಡಿಕೆ ಉತ್ಪಾದನೆ ಎಕರೆಗೆ ೪೦-೫೦ ಕೆ.ಜಿ !!!! ಯಾಕೆ ಹೀಗೆ? ಏನು ಕಾರಣ? ಕಾರಣ ಅಡಿಕೆಯ ಮಾರಣಾಂತಕಾರಿ ರೋಗ. "ಹಳದಿ ಎಲೆ ರೋಗ". ಸಾವಿರಾರು ಎಕರೆ ಅಡಿಕೆತೋಟವನ್ನು ನುಂಗಿ ನೀರುಕುಡಿದು ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಈ ರೋಗದ ಬಗ್ಗೆ ತಿಳಿದುಕೊಳ್ಳಲು ಕುತೂಹಲವೇ? ಮುಂದೆ ಓದಿ.
               ಹೌದು. ಅಡಿಕೆಗೆ ಮಾರಣಾಂತಿಕ ಈ ರೋಗ ಕೊಪ್ಪಾ ತಾಲೂಕಿನ ದಕ್ಷಿಣ ಭಾಗದ ಕೆಲವು ಹಳ್ಳಿಗಳಲ್ಲಿ ೪೦-೫೦ ವರ್ಷದ ಕೆಳಗೆ ಅಲ್ಲಲ್ಲಿ ಕಾಣಿಸಿಗೊಂಡಿತು. ನಿದಾನವಾಗಿ ಹರಡುತ್ತಿದ್ದ ಈ ರೋಗ ಈಗ ಎಂಟತ್ತು ವರ್ಷಗಳಿಂದ ಆಶ್ಚರ್ಯಕರ ವೇಗದಲ್ಲಿ ಹರಡುತ್ತಿದೆ. ಈ ರೋಗದ ಮೊದಲ ಸೂಚನೆ ಪಸಲು ಹೆಚ್ಚಾಗುವುದು!!! ಬುಡಕ್ಕೆ ಏನೂ ಹಾಕದಿದ್ದರೂ ಬಲವಾದ ಕೊನೆಗಳೇ ಇರುತ್ತವೆ. ಅನಂತರ ಪಸಲು ಕಡಿಮೆಯಾಗಲಾರಂಬಿಸುತ್ತದೆ. ಅಡಿಕೆ ಎಲೆ (ತುದಿಯಿಂದ) ಹಳದಿಯಾಗಲಾರಂಬಿಸುತ್ತದೆ. (ಹೊಸದಾಗಿ ಬರುವ ಎಲೆಗಳು ಹಸಿರಾಗೇ ಇರುತ್ತವೆ. ಬೇರುಹುಳ ತೊಂದರೆಯಲ್ಲಿ ಸುಳಿ ಎಲೆಗಳು ಹಳದಿಯಾಗಿರುತ್ತದೆ). ಅಡಿಕೆ ಕಾಯಿಗಳ ಗಾತ್ರ ತುಂಬಾ ಚಿಕ್ಕದಾಗುತ್ತದೆ.(ಕೈ ಕಿರು ಬೆರಳಿನಷ್ಟು ದಪ್ಪ!!) ಸುಲಿದರೆ ಕೆಳ ಅರ್ದ ಕಪ್ಪು ಮೇಲರ್ದ ಮಾಮೂಲಿ ಬಣ್ಣವಿರುವ ಮೆದು ಅಡಿಕೆ. ಬೇಯಿಸಿ ಹರಡಿದರೆ ಬಿಸಲಿಗೆ ಇನ್ನೂ ಚಿಕ್ಕದಾಗಿ ಚಿರುಟಿಹೋಗುತ್ತದೆ!! ಮಳೆಗಾಲದ ಕೊನೆಯಲ್ಲಿ ಹಾಗೂ ನೆಲ ಜೌಗು ಇರುವ ಪ್ರದೇಶದಲ್ಲಿ ಎಲೆ ಹೆಚ್ಚು ಹಳದಿಯಾಗಿರುತ್ತದೆ. ಬೇಸಿಗೆಯಲ್ಲಿ ಅಷ್ಟು ಹಳದಿ ಕಾಣಿಸುವುದಿಲ್ಲ. ಮಾಮೂಲಿನಂತೆ ಹಸಿರಾಗೇ ಕಾಣಿಸುತ್ತದೆ. (ನನ್ನ ಪರಿಚಯಸ್ತರ ತೋಟವೊಂದನ್ನ ಬೇಸಿಗೆಯಲ್ಲಿ ನೋಡಿ ದೂರದ ಪಾರ್ಟಿ ಕೊಂಡಿತು!! ಇವರಾಗೇ ರೋಗದ ವಿಷಯ ಹೇಳಲು ಹೋಗಲಿಲ್ಲ)

              ಸರಿ. ಯಾವುದರಿಂದ ಈ ರೋಗ ಬರುತ್ತದೆ? ಹೇಗೆ ಹರಡುತ್ತದೆ? ಸಂಶೋದನೆಗಳೆನಾದರು ಆಗಿದೆಯೇ? ಇನ್ನೂ ಪರಿಹಾರ ಸಿಕ್ಕಿಲ್ಲವೇ? ಸಂಶೋದನೆ ಎಂದರೆ ರೈತರು ಅಸಡ್ಡೆ ಮುಖ ಮಾಡುತ್ತಾರೆ. ಮೇಲಿಂದ ಮೇಲೆ ಅನೇಕ ಸಂಶೋದನೆ ನಡೆದಿದ್ದರೂ ರೋಗದ ಕಾರಣ ಹಾಗೂ ಹರಡುವಿಕೆಯ ಸ್ಪಸ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಫೈಟೋಪ್ಲಾಸ್ಮ,ಸೂಕ್ಷ್ಮ ಪೋಷಕಾಂಶಗಳ ಕೊರತೆ, ಕೆಡಾಂಗ್ - ಕೆಡಾಂಗ್ ರೋಗ – ಹೀಗೆ ಅನೇಕ ಸಿದ್ದಾಂತಗಳಲ್ಲಿ ವಿಜ್ಞಾನಿಗಳು ಮುಳುಗೇಳುತ್ತಿದ್ದಾರೆ!! (ಇಲ್ಲೊಂದು ಸ್ವಾರಸ್ಯಕರ ವಿಷಯ ಹೇಳಲು ಬಯಸುತ್ತೇನೆ. ಹಳದಿ ಎಲೆ ರೋಗಕ್ಕೆ ಸಂಬಂದಪಟ್ಟ ಸೆಮಿನಾರ್ ಒಂದಕ್ಕೆ ಬ್ರಹ್ಮಾವರದಿಂದ ಒಬ್ಬರು ವಿಜ್ಞಾನಿ ಬಂದಿದ್ದರು. ಅಡಿಕೆ ಕೊನೆಗಳಿಗೆ ಸಿಂಪಡಿಸುವ ಕಾಪರ್ ಸಲ್ಫೇಟ್ ಮಣ್ಣಿಗೆ ಸೇರುವುದೇ ರೋಗಕ್ಕೆ ಕಾರಣವೆಂದು ಪ್ರತಿಪಾದಿಸಿದರು!!! ನೀವು ಒಂದಾದರೂ ಗಿಡದ ಬುಡಕ್ಕೆ ಅದನ್ನು ಹಾಕಿ ಬದಲಾವಣೆ ಗಮನಿಸಿ ಹೇಳುತ್ತಿದ್ದೀರಾ ಎಂದು ನಾನು ಕೇಳಿದೆ. ಅವರಿಗೆ ಸಿಟ್ಟೇ ಬಂತು. ಹೆಚ್ಚಿನ ವಿವರಗಳಿಗೆ ಆ ಬಗ್ಗೆ ಅವರು ಬರೆದ ಪುಸ್ತಕವನ್ನು ಎಲ್ಲರೂ ಓದುವಂತೆ ವೇದಿಕೆಮೇಲಿಂದ ಸಲಹೆ ಮಾಡಿದರು. ೨೦ ರೂಪಾಯಿಯ ಆ ಚಿಕ್ಕ ಪುಸ್ತಕ ಅನೇಕ ಪ್ರತಿ ಮಾರಾಟ ಕಂಡಿತು. ಎಷ್ಟು ಬುದ್ದಿವಂತರು ನಮ್ಮ ವಿಜ್ಞಾನಿಗಳು.ರೋಗಕ್ಕೆ ಅವರು ಹೇಳಿದ ಕಾರಣವೇ ಇರಬಹುದು. ಆದರೆ ಪ್ರಯೋಗಗಳನ್ನು ಮಾಡದೆ ನಮ್ಮಂತೆ ಹೇಳುವುದು ಸರಿಯೇ?)

                  ತೋಟಗಾರಿಕ ಬೆಳೆಗಳ ಬಗ್ಗೆ ಸಂಶೋಧನೆಗೆಂದೆ ಸರ್ಕಾರಿ ಸಂಸ್ಥೆ CPCRI ಕಾಸರಗೋಡಿನಲ್ಲಿದೆ. (ಇದರ ಶಾಖೆ ಕರ್ನಾಟಕದಲ್ಲಿ ವಿಟ್ಲದಲ್ಲಿದೆ). ತೋಟಗಾರಿಕಾ ಬೆಳೆಗಳಿಗೆ ತಗಲುವ ರೋಗಗಳ ಸಂಶೋದನೆಗೆ ಸರ್ಕಾರದಿಂದ ನಿಯುಕ್ತರಾದ ವಿಜ್ಞಾನಿಗಳ ದಂಡೇ ಅಲ್ಲಿದೆ. ಅವರೇನು ಹೇಳುತ್ತಾರೆ ಕೇಳೋಣ. ರೋಗದ ಕಾರಣದ ಬಗ್ಗೆ ಅವರಲ್ಲಿ ಅಸ್ಪಷ್ಟತೆಯಿಲ್ಲ. CPCRI ಪ್ರಕಾರ ಹಳದಿ ರೋಗಕ್ಕೆ ಕಾರಣ 'ಫೈಟೋಪ್ಲಾಸ್ಮಾ' ಎಂಬ ಅತಿ ಸೂಕ್ಷ್ಮ ಜೀವಿ!!! ಅವು ಮರದಿಂದ ಮರಕ್ಕೆ ಹರಡುವುದು ಒಂದು ಜಾತಿಯ ಮಿಡತೆಯಿಂದ. (ಈ ಸಂಶೋದಯ ಬಗ್ಗೆ ಅವರೊಂದು ಪುಸ್ತಕ ಪ್ರಕಟಿಸಿದ್ದಾರೆ) ಈ ರೋಗಕ್ಕೆ ಚಿಕಿತ್ಸೆಯೇ ಇಲ್ಲ. ಆದರೆ ಸಕಾರಣದೊಂದಿಗೆ ಈ ಸಂಶೋದನೆಯ ಖಚಿತತೆ ಬಗ್ಗೆ ಅನುಮಾನ ವ್ಯಕ್ತಪಡಿಸುವ ಬೆಳೆಗಾರರು ಮತ್ತು ವಿಜ್ಞಾನಿಗಳು ಅನೇಕಜನ ಇದ್ದಾರೆ!!

                     ಫೈಟೋಪ್ಲಾಸ್ಮದಿಂದ ಪಾಮ್ ಜಾತಿಯ ಮರಗಳಿಗೆ ಹಳದಿ ಎಲೆ ರೋಗ ಬರುವುದು ಹೊಸ ವಿಷಯವೇನಲ್ಲ. ಅಮೇರಿಕಾ ಖಂಡಗಳಲ್ಲಿ ಸಾವಿರಾರು ಎಕರೆ ತೆಂಗಿನ ತೋಟ ಹಳದಿ ರೋಗದಿಂದ ನೆಲಕಚ್ಚಿದೆ.ಇದಕ್ಕೆ ಇಲ್ಲಿಯವರೆಗೂ ಚಿಕಿತ್ಸೆ ಕಂಡುಹಿಡಿದಿಲ್ಲ ಎಂಬುದೂ ಸತ್ಯ. ಆದರೆ ಮಾಲಿಕ್ಯುಲರ್ ಬಯಾಲಜಿ ಮಟ್ಟದ ಸಂಶೋದನೆಗಳಿಂದ ( PCR ವಿದಾನ, DNA ಮೂಲಕ ) ಫೈಟೋಪ್ಲಾಸ್ಮ ಇರುವಿಕೆಯನ್ನು ಪತ್ತೆಹಚ್ಚುತ್ತಾರೆ. (ಈ ವಿಷಯದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಒಂದು ಯಾಹೂ ಗ್ರೂಪ್ (CICLY-Centre for Information on Lethal Yellowing)ಇದೆ. ಆಸಕ್ತರು ಸೇರಿ ಮಾಹಿತಿ ಹಂಚಿಕೊಳ್ಳಬಹುದು).ಈ PCR ಟೆಕ್ನಿಕ್ ಉಪಯೋಗಿಸಿ ರೋಗದ ಕಾರಣ ಫೈಟೋಪ್ಲಾಸ್ಮ ಎಂದು CPCRI ಸಂಶೋದನೆ ಮಾಡಿದಂತಿಲ್ಲ. (ಹೆಚ್ಚಿನ ಮಾಹಿತಿಗೆ CICLYಯ ಭಾರತಕ್ಕೆ ಸಂಬಂದಿಸಿದ, ಕೊನೆಯ ಬಾರಿ ೨೦೦೫ ರಲ್ಲಿ ಅಪ್ ಡೆಟ್ ಆದ ಈ ಜಾಲ ಪುಟ ನೋಡಿ). ಆದರೇನಂತೆ, ಈ ರೋಗಕ್ಕೆ ತಮ್ಮ ತೋಟವನ್ನು ಕಳೆದುಕೊಂಡ ಬೆಳೆಗಾರರೊಬ್ಬರ ಮಗ ಈ PCR ಟೆಕ್ನಿಕ್ ಉಪಯೋಗಿಸಿ ರೋಗ ಪೀಡಿತ ಅಡಿಕೆ ಸಸ್ಯ(ಭಾಗ)ದ ಸಂಶೋದನೆ ಮಾಡಿದ್ದಾರೆ. ಆದರೆ ಪಲಿತಾಂಶ CPCRI ಹೇಳಿಕೆಗೆ ತದ್ವಿರುದ್ದ!!! ಅವರ ಸಂಶೋದನೆಗಳ ಪ್ರಕಾರ ಈ ರೋಗಕ್ಕೆ CPCRI ಹೇಳುವಂತೆ ಫೈಟೋಪ್ಲಾಸ್ಮ ಕಾರಣವಲ್ಲ!!!!. (ಈ ಸಂಶೋದನೆಯ ಮಾಹಿತಿ ಅಂತರ್ಜಾಲದಲ್ಲಿದ್ದು ಆಸಕ್ತರು ನೋಡಬಹುದು .ಈಗ ಅಮೆರಿಕದಲ್ಲಿರುವ ಶೃಂಗೇರಿ ಮೂಲದ ಇನ್ನೊಬ್ಬ ತಳಿ ಶಾಸ್ತ್ರಜ್ಞ ಡಾ. ರಾಜೇಂದ್ರ ಕೂಡ CPCRI ಸಂಶೋದನೆಯ ವಿದಾನ ಹಾಗೂ ಖಚಿತತೆಯನ್ನು ಅನುಮಾನಿಸುತ್ತಾರೆ).

                ಇನ್ನೊಂದು ತಮಾಷೆಯೆಂದರೆ ಈ ಸಂಶೋದನೆಯ ವಿಷಯಕ್ಕೆ (ಕಳೆದ ವಿಧಾನ ಸಭಾ ಚುನಾವಣೆಯಲ್ಲಿ) ರಾಜಕೀಯ ಬಣ್ಣ ಬಂದಿದ್ದು!! ಹಿಂದೆ ಗೆದ್ದ ಜನಪ್ರತಿನಿಧಿಗಳು ಏನೂ ಮಾಡಿಲ್ಲವೆಂದು ಹೇಳುತ್ತಾ ತಾವು ಅಧಿಕಾರ ಹಿಡಿದರೆ ಶೃಂಗೇರಿಯಲ್ಲಿ ಸಂಶೋದನಾ ಕೇಂದ್ರ ತೆರೆಯುವುದಾಗಿ ಬಿ.ಜೆ.ಪಿ ತುತ್ತೂರಿ ಊದಿತು (ಹೇಳಿದಂತೆ ಆಗುತ್ತಿದೆ). ಆದರೆ ದಳ ಮತ್ತು ಕಾಂಗ್ರೆಸ್ ನಾಯಕರು (ರೋಗಕ್ಕೆ ಪರಿಹಾರ ಇಲ್ಲ ಎಂಬ CPCRI ವಿಜ್ಞಾನಿಗಳ ಮಾತು ನಂಬಿ) ಅದೆಲ್ಲೋ ತೋಟಗಾರಿಕಾ ಮಿಶನ್ ನಲ್ಲಿರುವ ಎಷ್ಟೋ ಸಾವಿರ ಕೋಟಿ ತಂದು ರೋಗ ಬಾದಿತರಿಗೆ ಒಂದೇ ಸಾರ್ತಿ ಪರಿಹಾರವಾಗಿ ಎಕರೆಗೆ ಎರಡೋ ಮೂರೋ ಲಕ್ಷ ಕೊಡುವ ಪತ್ರಿಕಾ ಹೇಳಿಕೆ ಕೊಡಲಾರಂಬಿಸಿದರು!! ತಕ್ಷಣ ಎಚ್ಚೆತ್ತ ಬಿ.ಜೆ.ಪಿ. ಯವರು ಸರ್ವೇ ಮಾಡಿ ಎಕರೆಗೆ ಐದು ಲಕ್ಷ ಕೊಡುವುದಾಗಿ ತೇಲಿಬಿಟ್ಟರು. (ಉದ್ದದ ಕ್ಯೂನಲ್ಲಿ ನಿಂತು ಪಹಣೆ ತಂದು ರೈತರು ತೋಟಗಾರಿಕಾ ಇಲಾಖೆಗೆ ಫಾರಂ ಭರ್ತಿಮಾಡಿ ಕೊಟ್ಟಿದ್ದಾರೆ. ರೋಗವೇ ಬಾರದ ಎಷ್ಟೋ ರೈತರು ತಮ್ಮ ತೋಟದಲ್ಲೂ ರೋಗವಿದೆ ಎಂದು ಹೇಳಿಕೊಂಡಿದ್ದಾರೆ. ಸರ್ವೇ ಮಾಡಿದ ಶಾಸ್ತ್ರವೂ ನಡೆದಿದೆ)

                     ಮತ್ತೂ ಒಂದು ದೊಡ್ಡ ತಮಾಷೆಯೆಂದರೆ, ಈ ರೋಗಕ್ಕೆ ಕಾರಣವೇನೆಂದು ಒಂದಿಷ್ಟು ಜನ ಹೊಸನಗರನೋ ಸಾಗರನೋ ಅಲ್ಲೆಲ್ಲೋ ಹೋಗಿ ಅಲ್ಯಾರಿಂದಲೋ ಅಷ್ಟಮಂಗಲ ಪ್ರಶ್ನೆ ಇಡಿಸಿದ್ದು!!! ಆ ಅಷ್ಟಮಂಗಲ ಪ್ರಶ್ನೆ(ಗೆ) ಹೇಳುವವರ ಪ್ರಕಾರ ಈ ರೋಗಕ್ಕೆ ಕಾರಣ ಶೃಂಗೇರಿ ಶ್ರೀಗಳು ಯಾವುದೋ ಒಂದು ಕಾಲದಲ್ಲಿ ಏನೋ ತಪ್ಪು ಮಾಡಿದ ಭಕ್ತಾದಿಗಳಿಗೆ ಕೊಟ್ಟ ಶಾಪವಂತೆ.(ಶೃಂಗೇರಿ ಮಠ ಇದನ್ನು ಅಲ್ಲಗೆಳೆಯಿತು) ಅದಕ್ಕೆ ಹೋಮ ಹವನ ಮಾಡಿ ಚಿನ್ನದ ಅಡಿಕೆ ಯಾವುದೋ ಎರಡ್ಮೂರು ದೇವರಿಗೆ ಅರ್ಪಿಸಬೇಕಂತೆ.(ಎಲ್ಲಾ ಎಕರೆಗೆ ಇಂತಿಷ್ಟು ಅಂತ ದುಡ್ಡು ಎತ್ತಿ ಅದನ್ನೂ ನೆರವೇರಿಸಿಯಾಯಿತು)

                    ಸರಿ. ಎಕರೆಗೆ ಎಪ್ಪತ್ತೆಂಬತ್ತು ಕೆ.ಜಿ. ಅಡಿಕೆಯಿಂದ ಜನ ಹೇಗೆ ಜಿವನಸಾಗಿಸುತ್ತಾರೆ? ಈ ಅನುಮಾನ ನಿಮಗೆ ಮೂಡಬಹುದು. ರೋಗ ಬಂದ ಜಾಗದಲ್ಲಿ ಕಾಫಿ ಚೆನ್ನಾಗಿ ಆಗುತ್ತದರಿಂದ ಸ್ವಲ್ಪ ಬಚಾವ್. (ಆದರೆ ಕಾಫಿ ಅಡಕೆಗೆ ಸಮವಲ್ಲ. ಕೆಲಸ ಹೆಚ್ಚು;ಆದಾಯ ಕಡಿಮೆ) ಮಕ್ಕಳು ಓದಿ ಬೆಂಗಳೂರಲ್ಲಿ ಕೆಲಸ ಸೇರಿದ್ದಾರೆ. ಸ್ವಲ್ಪ ಕಡಿಮೆ ಓದಿದವರು ಬೆಂಗಳೂರು ಮೊದಲಾದ ಪೇಟೆಗಳನ್ನು ಸೇರಿ ಸ್ವ ಉದ್ಯೋಗ (ಅಡಿಗೆ,ಕ್ಯಾಂಟಿನ್ ಇತ್ಯಾದಿ) ಮಾಡುತ್ತಿದ್ದಾರೆ. ಅಡಿಕೆ ಪಸಲಿನ ಅಂದಾಜಿನಲ್ಲಿ ಸಾಲ ಮಾಡಿಕೊಂಡಿರುವ ಹೊಸತಾಗಿ ರೋಗ ಬಂದಿರುವ ಬೆಳೆಗಾರರಿಗೆ ಮಾತ್ರ ತುಂಬಾ ಕಷ್ಟ. ಕಗ್ಗತ್ತಲಲ್ಲಿ ಬೆಳ್ಳಿಯ ಗೆರೆಯಂತೆ ಕಾಣುವುದು ಕೆಲವು ರೈತರ ಪ್ರಯತ್ನ. ಅಷ್ಟೇನೂ ಓದಿಲ್ಲದ ಶೃಂಗೇರಿಯ ರೈತ ಮಾವಿನಕಾಡು ಬಾಲಕೃಷ್ಣ ಈ ರೋಗದ ಬಗ್ಗೆ ಒಂದಿಷ್ಟು ಪ್ರಯೋಗ ಮಾಡಿದ್ದು ಅವರು ಈ ರೋಗ ಲಘು ಪೋಷಕಾಂಶಗಳ ಕೊರತೆಯಿಂದಲೇ ಬರುವುದೆಂದು ವಿಜ್ಞಾನಿಗಳ ಜೊತೆಗೂ ವಾದ ಮಾಡುತ್ತಾರೆ.

                          ಈಗ ಆಗಬೇಕಾಗಿರುವುದೇನು ಎಂದು ಪ್ರತಿಯೊಬ್ಬ ಅಡಿಕೆ ಬೆಳೆಗಾರ ಯೋಚನೆ ಮಾಡುವುದು ಒಳಿತು. ಇಂದಲ್ಲಾ ನಾಳೆ ಈ ರೋಗ (ಹೀಗೇ ಬಿಟ್ಟರೆ) ಅಡಿಕೆ ಬೆಳೆಯುವ ಪ್ರದೇಶವನ್ನೆಲ್ಲಾ ನಾಶ ಮಾಡುವುದು ಶತಸಿದ್ದ. ಈಗ ಮೊದಲು ಆಗಬೇಕಿರುವುದು ಇದು ಫೈಟೋಪ್ಲಾಸ್ಮಾದಿಂದ ಬರುವ ರೋಗ ಹೌದೋ ಅಲ್ಲವೋ ಎಂಬ ಖಚಿತ ಸಂಶೋದನೆ (ಮಾಲಿಕ್ಯುಲರ್ ಬಯಾಲಜಿ ಮಟ್ಟದಲ್ಲಿ). ಫೈಟೋಪ್ಲಾಸ್ಮದಿಂದಾ ಎಂದಾದರೆ ಅಲ್ಲಿಗೆ ಒಂದು ಅಧ್ಯಾಯ ಮುಗಿದಂತೆ!! ಹೆಚ್ಚಿಗೆ ತಲೆಕೆಡಿಸಿಕೊಳ್ಳದೆ ರೋಗ ನಿರೋದಕ ಶಕ್ತಿ ಹೊಂದಿರುವ ತಳಿ (resistant variety ) ಅಭಿವೃದ್ದಿಪಡಿಸಿ ಹಂಚುವುದು. (ರೋಗ ಬಂದ ಜಾಗದಲ್ಲಿ ಅತೀ ಅಪರೂಪಕ್ಕೆ ಒಂದೊಂದು ಮರಗಳು ಚೆನ್ನಾಗಿಯೇ ಇರುತ್ತವೆ). ಫೈಟೋಪ್ಲಾಸ್ಮ ಅಲ್ಲಾ ಎಂದಾದರೆ ಬೇರೆ ಕಾರಣ ಹುಡುಕುವುದು.

ಈ ಮಾಹಿತಿ ನಿಮಗೆ ಉಪಯೋಗವಾಯಿತೆ? ಅಡಿಕೆ ಹಳದಿ ಎಲೆ ರೋಗದ ಬಗ್ಗೆ ನಿಮ್ಮ ಪ್ರಶ್ನೆಗಳೇನಾದರೂ ಇದ್ದರೆ ಸ್ವಾಗತ.
ಕೆಲವು ಜಾಲ ಕೊಂಡಿಗಳು-
   CPCRI - http://cpcri.nic.in/
   ಹಳದಿ ರೋಗದ ಬಗ್ಗೆ ಯಾಹೂ ಗ್ರೂಪ್ - http://tech.groups.yahoo.com/group/cicly/
   CICLY ಹೋಂ ಪೇಜ್ - http://www.avxl82.dsl.pipex.com/CICLY/main.html
   CICLY ನಲ್ಲಿ ಭಾರತದ ಬಗ್ಗೆ ಇರುವ ಮಾಹಿತಿ - http://www.avxl82.dsl.pipex.com/CICLY/india.html

Friday, May 21, 2010

ಸರ್ ಜಾರ್ಜ್ ಎವರೆಸ್ಟ್ – ಆತನೆಂದೂ ಎತ್ತರದ ಆ ಪರ್ವತ ನೋಡಿರಲೇ ಇಲ್ಲ!!!


         ಕೆಲವೊಂದು ವಿಷಯಗಳು ಎಷ್ಟು ಆಶ್ಚರ್ಯದಿಂದ ಕೂಡಿರುತ್ತವೆಂದರೆ ಅವುಗಳನ್ನು ನಂಬುವುದೇ ಕಷ್ಟವಾಗುತ್ತವೆ. ಇದಕ್ಕೆ ಎವರೆಸ್ಟ್ ಪರ್ವತಕ್ಕೆ ಆ ಹೆಸರು ಹೇಗೆ ಬಂತೆಂಬ ವಿಷಯವೇ ಒಂದು ಒಳ್ಳೆಯ ಉದಾಹರಣೆ. ನಾವು ಶಾಲಾ ಪುಸ್ತಕಗಳಲ್ಲಿ ಓದಿರುವುದೇನು? "ಸರ್ ಜಾರ್ಜ್ ಎವರೆಸ್ಟ್ ಮೊದಲ ಬಾರಿಗೆ ಅದರ ಎತ್ತರ ಕಂಡು ಹಿಡಿದ. ಅದಕ್ಕೆ ಅವನ ಹೆಸರನ್ನೇ ಅದಕ್ಕೆ ಇಡಲಾಗಿದೆ"-ಎಂದು ತಾನೇ? ಆದರೆ ಸತ್ಯ ವಿಚಿತ್ರವಾಗಿದೆ. ಭಾರತದ ಸರ್ವೇಯರ್ ಜನರಲ್ ಆಗಿದ್ದ ಸರ್ ಜಾರ್ಜ್ ಎವರೆಸ್ಟ್ ಎಂದೂ ಆ ಪರ್ವತವನ್ನ ಕಣ್ಣಾರೆ ಕಂಡಿರಲಿಲ್ಲ!!!! ಆಶ್ಚರ್ಯವೇ? ಮುಂದೆ ಓದಿ-

     ೧೯ ನೇ ಶತಮಾನದ ಪ್ರಾರಂಬದಲ್ಲಿ ಆಗ ಭಾರತದಲ್ಲಿ ಬಲವಾಗಿ ಕಾಲುರಿದ್ದ ಈಸ್ಟ್ ಇಂಡಿಯಾ ಕಂಪನಿ ಒಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಂಡಿತು. ಅದೇ "ಭಾರತದ ಮಹಾ ಮೊಜಣೆ" (The Great Arc Project) ಸಂಪೂರ್ಣ ಭಾರತವನ್ನು ಭೂಪಟೀಕರಿಸುವ ದೊಡ್ಡ ಯೋಜನೆಯದು. (ಹೊಸ ಹೊಸ ಪ್ರದೇಶಗಳ ಅನ್ವೇಷಣೆಯಲ್ಲಿ ಯುರೋಪಿಯನ್ನರಿಗಿರುವಷ್ಟು ಆಸಕ್ತಿ ಮತ್ತಾರಿಗೂ ಇಲ್ಲವೆಂದೇ ನನ್ನನಿಸಿಕೆ. ಪ್ರಪಂಚದ ಇತಿಹಾಸವನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ. ಅತಿ ಕಷ್ಟಕರವಾದ ಪ್ರದೇಶ ನುಗ್ಗಿ ಜಾಲಾಡಿದ್ದಾರೆ- ಆಫ್ರಿಕಾ, ಅಮೇರಿಕಾ ಖಂಡಗಳು, ಆಸ್ಟ್ರೇಲಿಯಾ, ಅಂಟಾರ್ಕ್ಟಿಕ. ನಮ್ಮ ದೇಶದ ಭೂಗೊಳವನ್ನು ಸರಿಯಾಗಿ ನಮಗೆ ತಿಳಿಸಲೂ ನಮಗೆ ಅವರೇ ಬರಬೇಕಾಯಿತು!!) ೧೮೦೨ ರಲ್ಲಿ ಚೆನ್ನೈನಿಂದ ಆರಂಭವಾದ ಈ ದೊಡ್ಡ ಗಾತ್ರದ ಸರ್ವೇ ಯೋಜನೆ ಅನೇಕ ದಶಕಗಳ ಕಾಲ ಮುಂದುವರೆಯಿತು. ಆವರೆಗೆ ಪ್ರಪಂಚದಲ್ಲೆಲ್ಲೂ ಅಷ್ಟು ದೊಡ್ಡ ಗಾತ್ರದ ಸರ್ವೇ ನಡೆದಿರಲಿಲ್ಲ. ಹಳ್ಳ-ಕೊಳ್ಳ,ಪ್ರವಾಹ, ಮರುಭೂಮಿ, ದಟ್ಟ ಕಾಡುಗಳು,ಹಿಮಬೆಟ್ಟಗಳು-ಹೀಗೆ ಎಲ್ಲಾ ಪ್ರದೇಶಗಳಲ್ಲಿ ಕಬ್ಬಿಣದ ಸರಪಳಿಗಳನ್ನು ಎಳೆಯುತ್ತ ನೂರಾರು ಜನ ಕೆಲಸಗಾರರು, ಗಣಿತಜ್ಞರು ಸೇರಿ ತ್ರಿಕೋನಮಿತಿ (trigonometry) ಆದಾರದ ಮೇಲೆ ನಡೆಸಿದ ಸರ್ವೇ ಅದು. ಸಾವಿರಾರು ಪುಟಗಳಲ್ಲಿ ಅದನ್ನು ದಾಖಲಿಸಲಾಯಿತು.

            ಇದನ್ನು ಪ್ರಾರಂಬಿಸಿದವನು ವಿಲಿಯಂ ಲ್ಯಾಮ್ಮ್ಬನ್. ಇವನ ನಂತರ ಸರ್ವೇಯರ್ ಜನರಲ್ ಆಫ್ ಇಂಡಿಯಾ ಆಗಿ ನೆಮಕವಾದವನೇ ಸರ್ ಜಾರ್ಜ್ ಎವರೆಸ್ಟ್. ಈತ ಸರ್ವೇಯರ್ ಜನರಲ್ ಆಗಿದ್ದ ಕಾಲದಲ್ಲೂ (೧೮೨೩-೧೮೪೩) ಈ ಕ್ಲಿಷ್ಟಕರ ಸರ್ವೇ ಯೋಜನೆ ಮುಂದುವರೆದು ಹಿಮಾಲಯದ ಬುಡದವರೆಗೂ ತಲುಪಿತು. ೧೮೪೩ ರಲ್ಲಿ ಎವರೆಸ್ಟ್ ನಿವೃತ್ತಿ ಹೊಂದಿ ತಾಯ್ನಾಡಿಗೆ ಹೋಗಿ ನೆಲೆಸುತ್ತಾನೆ. ಆತನ ನಂತರ ಸರ್ವೇಯರ್ ಜನರಲ್ ಆಫ್ ಇಂಡಿಯಾ ಆಗಿ ಬಂದ ಆಂಡ್ರ್ಯೂ ವಾನ ಕಾಲದಲ್ಲಿ ಹಿಮಾಲಯದ ಸುತ್ತಮುತ್ತ ಸರ್ವೇ ನಡೆಯುತ್ತದೆ.

          ತನ್ನ ಕೈ ಕೆಳಗಿನ ಸರ್ವೇ ಅಧಿಕಾರಿಗಳಿಂದ ಒಟ್ಟುಪಡಿಸಿದ ದತ್ತಾಂಶಗಳ ಆದಾರದ ಮೇಲೆ ಆಂಡ್ರ್ಯೂ ವಾ ೧೮೫೬ರಲ್ಲಿ ಕಲ್ಕತ್ತಾ ಎಸಿಯಾಟಿಕ್ ಸೊಸೈಟಿಗೆ ೮೮೪೦ ಮೀ ಎತ್ತರದ 'ಪೀಕ್ XV' ಬಹುಶಃ ಪ್ರಪಂಚದ ಅತ್ಯಂತ ಎತ್ತರದ ಪರ್ವತವಾಗಿರಬೇಕೆಂದು ವರದಿ ಮಾಡುತ್ತಾನೆ. (ಅಲ್ಲಿಯವರೆಗೆ ಜನ ಅತಿ ಎತ್ತರದ ಶಿಖರ ಇನ್ನೂ ಸಂಪೂರ್ಣವಾಗಿ ಶೋಧಿಸದ ಆಂಡಿಸ್ನಲ್ಲೆಲ್ಲೋ ಇರಬೇಕೆಂದು ನಂಬಿದ್ದರು) ಅಷ್ಟಲ್ಲದೇ ಅದಕ್ಕೆ ತನಗಿಂತ ಮೊದಲು ಸರ್ವೇಯರ್ ಜನರಲ್ ಆಗಿದ್ದ ಎವರೆಸ್ಟ್ ಹೆಸರನ್ನು ಸೂಚಿಸುತ್ತಾನೆ. ಅದಕ್ಕೆ ಸಕಾರಣ ಇವತ್ತಿಗೂ ಗೊತ್ತಿಲ್ಲ!!! (ಆದರೆ ಜಾರ್ಜ್ ಎವರೆಸ್ಟ್ ಅದಕ್ಕೆ ಸ್ಥಳೀಯ ಹೆಸರಾದ 'ಚೋಮೊಲುಂಗ್ಮ'ವೇ ಸರಿಯಾದ್ದೆಂದು ಸೂಚಿಸಿದನೆಂದು ಹೇಳಲಾಗಿದೆ). ಏನೇ ಆಗಲಿ ಆ ಶಿಖರ ಅವನ ಹೆಸರು ಹೊದ್ದು ನಿಂತಿದೆ. ಆದರೆ ಅದನ್ನೆಂದೂ ಅವನು ಕಣ್ಣಾರೆ ನೋಡಿರಲೇ ಇಲ್ಲ!!! ಆದರೆ ಇವತ್ತಿಗೂ ಪಾಠದ ಪುಸ್ತಕಗಳು ಆತ ಅದರ ಎತ್ತರ ಕಂಡು ಹಿಡಿದವನು ಎಂದೇ ಹೇಳುತ್ತಿವೆ. ಹಾಗೂ ಹೆಚ್ಚಿನ ಜನ ಹಾಗೇ ನಂಬಿದ್ದಾರೆ!!! ತರಗುಟ್ಟುವ ಚಳಿಯಲ್ಲಿ ಅದರ ಸುತ್ತ ಮುತ್ತ ಸರ್ವೇ ಮಾಡಿ ಅದರ ಎತ್ತರ ಕಂಡುಹಿಡಿದ ಪುಣ್ಯಾತ್ಮ ಯಾರೋ. ದೇವರೇ ಬಲ್ಲ.
            ಈ ವಿಷಯ ನಿಮಗೆ ಗೊತ್ತಿತ್ತೇ? ಇದನ್ನು ಓದಿದ ಮೇಲೆ ಕನ್ನಡದ ಒಂದು ಗಾದೆ ನೆನಪಾಗುವುದಿಲ್ಲವೇ? (ಈರಪ್ಪ-ಸೂರಪ್ಪ ಎಂಬ ಹೆಸರು ಒಳಗೊಂಡಿರುವ ಸ್ವಲ್ಪ non-veg ಗಾದೆ ಅದು!!)



Saturday, April 17, 2010

ಈಗ ಫೈಲ್ ಗಳಿಗೆ ಕನ್ನಡದಲ್ಲೇ ಹೆಸರು ಕೊಡಬಹುದು!!!



             ಮುಂಗಾರುಮಳೆ ಹಾಡು ಕೇಳದೆ ತುಂಬಾ ದಿನ ಆಗಿದೆ.- ಹೀಗೆಂದು ಅನ್ನಿಸುತ್ತಿದ್ದಂತೆ ಕರ್ಸರ್ Music ಮೇಲೆ ಹೋಗುತ್ತದೆ. ಅಲ್ಲಿ Mungaaru male ಫೈಲ್ ಕ್ಲಿಕ್ ಮಾಡುತ್ತೀರಿ. "ಅನಿಸುತಿದೆ ಯಾಕೋ ಇಂದು" ಹಾಡು ಕೇಳಬೇಕೆನ್ನಿಸುತ್ತದೆ. Anisutide yaako indu ಎಂಬ ಫೈಲ್ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ ಆಲಿಸುತ್ತೀರಿ.


ಅದೇ ರೀತಿ ಫೋಟೋ ಫೈಲ್ ಗಳಿಗೂ ನಾವು ಸಾದಾರಣವಾಗಿ ಇಂಗ್ಲಿಷ್ನಲ್ಲೇ ಹೆಸರು ಕೊಟ್ಟಿರುತ್ತೇವೆ.- Bayakemane photos, flowers, kids at home, falls ಇತ್ಯಾದಿ, ಇತ್ಯಾದಿ.


              ಈಗ ನೀವು ಸೇವ್ ಮಾಡುವ ಫೈಲ್ ಗಳಿಗೂ ಕನ್ನಡದಲ್ಲೇ ಹೆಸರು ಕೊಡಬಹುದು!!! ಆಶ್ಚರ್ಯವಾಯಿತೇ?. ಇದು ನಿಜ.(ಹಾಗೂ ತುಂಬಾ ಸುಲಭ).ಮೊದಲು ಅಂತರ್ಜಾಲದಿಂದ Google Transliteration IME
ಎಂಬ ಇನ್ ಪುಟ್ ಮೆಥಡ್
ಇಳಿಸಿಕೊಳ್ಳಬೇಕು. ಆ ಜಾಲತಾಣದ ಲಿಂಕ್ ಇಂತಿದೆ- http://www.google.com/ime/transliteration/ .ಈ ಪುಟದಲ್ಲಿ Choose your IME language ನಲ್ಲಿ Kannada ಆಯ್ಕೆ ಮಾಡಿಕೊಂಡು Download Google IME ಕ್ಲಿಕ್ ಮಾಡಿ ಡೌನ್ಲೋಡ್ ಆದ ಫೈಲನ್ನು ರನ್ ಮಾಡಿದರೆ ಮುಗಿಯಿತು. Taskbar ನ notification area ದಲ್ಲಿ (ಬಲಬದಿಯ ಕೆಳ ಮೂಲೆಯಲ್ಲಿ) EN ಎಂದು ಕೂತಿರುತ್ತದೆ. ನಾವು ಯಾವುದಾದರೊಂದು ಕಡೆಯಲ್ಲಿ ಕನ್ನಡದಲ್ಲಿ ಟೈಪ್ ಮಾಡಬೇಕೆಂದಾಗ ಈ EN ಮೇಲೆ ಕ್ಲಿಕ್ ಮಾಡಿ KD Kannada ಆಯ್ಕೆ ಮಾಡಿಕೊಂಡು ಟೈಪಿಸಿದರೆ ಕನ್ನಡ ಅಕ್ಷರ ಮೂಡಿಸಬಹುದು. ಇಲ್ಲಿ ಯಾವುದಾದರೂ ಕಡೆ ಎಂದರೆ ಚಾಟ್ ಬಾಕ್ಸ್ ಇರಬಹುದು, ಹೊಸ ಮೇಲ್ ಇರಬಹುದು, ಅಥವಾ ಎಂ.ಎಸ್. ಆಫೀಸ್ ಇರಬಹುದು.

                ಈಗ ಮತ್ತೆ Mungaaru male ಗೆ ಹೋಗೋಣ. Mungaaru male ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ Rename ಆಪ್ಶನ್ ಕ್ಲಿಕ್ ಮಾಡಿ. ಈಗ ಬಲಬದಿಯ ಕೆಳ ಮೂಲೆಯಲ್ಲಿರುವ EN ಮೇಲೆ ಕ್ಲಿಕ್ ಮಾಡಿ KD Kannada ಆರಿಸಿಕೊಂಡು ಕನ್ನಡದಲ್ಲೇ "ಮುಂಗಾರು ಮಳೆ" ಎಂದು ಫೈಲ್ ಗೆ ಹೆಸರು ಕೊಡಬಹುದು.!!! ಹೀಗೆ ಯಾವ ಫೈಲ್ ಗೂ ಬೇಕಾದರೂ ಕನ್ನಡದಲ್ಲೇ ಹೆಸರು ಕೊಡಬಹುದು.


                   ನಾನು ಆದಷ್ಟು ಮಟ್ಟಿಗೆ ಸರಳವಾಗಿ ಹೇಳಲು ಪ್ರಯತ್ನಪಟ್ಟು ಬರೆದಿದ್ದೇನೆ. ಮಾಡಿ ನೋಡಿ. ಏನಾಯಿತು ಹೇಳಿ. ನಿಮಗೆ ಈ ವಿಷಯ ಮೊದಲೇ ಗೊತ್ತಿತ್ತಾ? (ಅಥವಾ ನನಗೆ ಗೊತ್ತಾಗಿದ್ದು ಇತ್ತೀಚೆಗಾ?)


Friday, April 2, 2010

ಬೊಲಿವಿಯಾದ "ಸಾವಿನ ಹೆದ್ದಾರಿ" ; ಪ್ರಪಂಚದ ಅತ್ಯಂತ ದುರ್ಗಮ ರಸ್ತೆ!!!

                   ಅನೇಕ ವರ್ಷಗಳ ಕೆಳಗೆ ಎಲ್ಲೋ ಓದಿದ ನೆನಪು. ಬಯಲುಸೀಮೆಯಲ್ಲೇ ಯಾವಾಗಲೂ ಬಸ್ ಓಡಿಸುತ್ತಿದ್ದ ಡ್ರೈವರ್ಗೆ ಚಾರ್ಮಾಡಿ ಘಾಟಿ ರೂಟ್ ಕೊಟ್ಟರಂತೆ. ಹೋಗಿಬಂದ ಮೇಲೆ ಅವನು ಮೊದಲು ಮಾಡಿದ ಕೆಲಸ ಕೈ ಮುಗಿದು ಇನ್ನು ಆ ರೂಟಿಗೆ ಹಾಕಬೇಡಿ ಎಂದು ಕೇಳಿಕೊಂಡಿದ್ದು!! ಕೆಲವೊಂದು ಗುಡ್ಡಗಾಡು ರಸ್ತೆಗಳು ಹಾಗೇ. ಪ್ರಯಾಣ ರೋಮಾಂಚನ. (ನಮ್ಮಲ್ಲಿ ಶೃಂಗೇರಿ-ಜಯಪುರ-ಬಸರಿಕಟ್ಟೆ-ಹೊರನಾಡು ರಸ್ತೆ ಸ್ವಲ್ಪ ಹಾಗೇ). ಹಿಮಾಲಯದ ತಪ್ಪಲಲ್ಲಿ ಅಂತಹ ಅನೇಕ ರಸ್ತೆಗಳಿವೆ. ಪ್ರಪಂಚ ಮಟ್ಟದಲ್ಲಿ ಅತಿ ಅಪಾಯಕಾರಿ ದುರ್ಗಮ ಹೆದ್ದಾರಿಯೆಂದು ಹೆಸರುಮಾಡಿರುವ ರಸ್ತೆಯ ವಿವರವನ್ನು ನಿಮ್ಮ ಮುಂದೆ ಬಿಚ್ಚಿಡುವುದೇ ಈ ಲೇಖನ. ಅದೇ ಬೊಲಿವಿಯಾದ “ಸಾವಿನ ಹೆದ್ದಾರಿ”.
                  ಬೊಲಿವಿಯಾ ನಿಮಗೆ ಗೊತ್ತಿರಬಹುದು. ದಕ್ಷಿಣ ಅಮೇರಿಕಾದ ಒಂದು ಬಡ ಚಿಕ್ಕ(ಆ ಖಂಡದ ಬೇರೆ ದೇಶಗಳಿಗೆ ಹೋಲಿಸಿದರೆ!!) ದೇಶ. ಸಮುದ್ರ ತೀರವೇ ಇಲ್ಲದ ಈ ದೇಶದ ಜಿಯಾಗ್ರಫಿಯೇ ವಿಚಿತ್ರ. ಪಶ್ಚಿಮ ಭಾಗದಲ್ಲಿ ಗಗನಚುಂಬಿ ಆಂಡಿಸ್ (Andes)ಪರ್ವತ ಶ್ರೇಣಿ. ಪೂರ್ವದಲ್ಲಿ ತಗ್ಗಿನ ಅಮೆಜಾನ್ ಮಳೆಕಾಡು. ಆಲ್ಟಿಪ್ಲೇನೋ ಎಂದು ಕರೆಯಲ್ಪಡುವ ಆಂಡಿಸ್ ಪರ್ವತದ ಅತಿ ಎತ್ತರದ ವಿಶಾಲ ಪ್ರದೇಶದಲ್ಲಿ ಬೊಲಿವಿಯಾದ ರಾಜಧಾನಿ ಲಾ-ಪಾಜ್(La-Paz) ಇದೆ. ಇದು ಪ್ರಪಂಚದ ಅತ್ಯಂತ ಎತ್ತರದ ರಾಜಧಾನಿಗಳಲ್ಲಿ ಒಂದು!! ಸಮುದ್ರ ಮಟ್ಟದಿಂದ 14,000 ಅಡಿಗೂ ಎತ್ತರ. (ನಮ್ಮ ಬೆಂಗಳೂರು 3,000 ಅಡಿ ಹಾಗೂ ನಾನೀಗ ಕೂತು ಬರೆಯುತ್ತಿರುವ ನನ್ನೂರು 2300 ಅಡಿ ಎತ್ತರದಲ್ಲಿದೆ) ರಾಜಧಾನಿ ಲಾ-ಪಾಜನ್ನು ಪಶ್ಚಿಮದ ತಗ್ಗಿನ ಅಮೆಜಾನ್ ಮಳೆಕಾಡಿನ ಪ್ರಾರಂಭದಲ್ಲಿರುವ ಬೊಲಿವಿಯಾದ ಮತ್ತೊಂದು ಪ್ರಮುಖ ನಗರ ಕೊರೈಕೋವನ್ನು ಸೇರಿಸುವ 70 ಕಿ.ಮೀ. ಉದ್ದದ ಹೆದ್ದಾರಿಯೇ ಪ್ರಪಂಚದ ಅತಿ ದುರ್ಗಮ ರಸ್ತೆ-“ಸಾವಿನ ಹೆದ್ದಾರಿ” (Death Road)
                ಲಾ-ಪಾಜ್ ದಿಂದ ಹೊರಡುವ ಹೆದ್ದಾರಿ ಮೊದಲ ಕೆಲವು ಕಿಲೋಮೀಟರ್ ಏರು ದಾರಿ ಸಾಗಿ 15,000 ಅಡಿಗೂ ಎತ್ತರ ತಲುಪುತ್ತದೆ. ಅಲ್ಲಿಂದ ಕಿಲೋಮೀಟರ್ಗಟ್ಟಲೆ ಬರೇ ಇಳಿಜಾರು. ರಸ್ತೆ ಮುಗಿಯುವ ಕೊರೈಕೋ ನಗರವಿರುವುದು 3,900 ಅಡಿ ಎತ್ತರದಲ್ಲಿ. ಕೇವಲ 50-60 ಕಿ.ಮೀ. ಗಳಲ್ಲಿ 11,000 ಅಡಿ ಎತ್ತರ ಕಳೆದುಕೊಳ್ಳುತ್ತದೆ ಈ ರಸ್ತೆ. ಹಾವಿನಂತೆ ಆಂಡಿಸ್ ಪರ್ವತಗಳ ಸಂದಿ ಸಂದಿಯಲ್ಲಿ ಸಾಗುವ ಈ ರಸ್ತೆ ಲೆಕ್ಕವಿಲ್ಲದಷ್ಟು ಅಪಾಯಕಾರಿ ತಿರುವುಗಳನ್ನು, ಕಡಿದಾದ ಪ್ರಪಾತಗಳನ್ನು ಹೊಂದಿದ್ದು ಕೆಲವೊಂದುಕಡೆ ಅತಿ ಇಳಿಜಾರಾಗಿದೆ.ಕೆಲವೆಡೆ ಕಡಿದಾದ ಬೆಟ್ಟಗಳನ್ನು ಕೊರೆದು ರಸ್ತೆ ಮಾಡಿದ್ದು ಅಗಲ ತುಂಬಾ ಕಡಿಮೆ. ಪ್ರಪಾತದ ಬದಿಯಲ್ಲಿ ತಡೆ ಗೋಡೆಗಳು ಇಲ್ಲ!! (ನೆಲ ಒದ್ದೆ ಇದ್ದಾಗ ಸ್ವಲ್ಪ ಬದಿಗೆ ವಾಹನ ಹೋದರೆ ಕುಸಿದು ಪ್ರಪಾತಕ್ಕೆ ಸೇರಿದರೂ ಆಶ್ಚರ್ಯವಿಲ್ಲ) ಉರುಳುವ ಜಲ್ಲಿ ಕಲ್ಲುಗಳು ಬೇರೆ. ಇವೆಲ್ಲದಕ್ಕೂ ಜೊತೆಯಾಗಿ ಆಗಾಗ್ಯೆ ಕವಿಯುವ ಮಂಜು ಹಾಗೂ ಮಳೆ!! ದೇಶದ ಎರಡು ಪ್ರಮುಖ ನಗರಗಳನ್ನು ಸೇರಿಸುವ ರಸ್ತೆಯಾದ್ದರಿಂದ ವಾಹನದಟ್ಟಣೆಯನ್ನು ನೀವೇ ಊಹಿಸಿಕೊಳ್ಳಿ-ಲಾರಿಗಳು,ಬಸ್ಸುಗಳು,ಟ್ಯಾಂಕರ್ಗಳು. ವರ್ಷಕ್ಕೆ ಸರಾಸರಿ ನೂರು ಜನ ಸಾಯುತ್ತಿದ್ದರು.
                     “ನೂರು ಜನ ಸಾಯುತ್ತಿದ್ದರು” – ಎಂದು ಭೂತಕಾಲ ಬಳಸಿದೆ. ಹೌದು. 2006 ರ ಈಚೆಗೆ ಕಾಲ ಬದಲಾಗಿದೆ. ಜನ ಈ ದುರ್ಗಮ ರಸ್ತೆಯಲ್ಲಿ ಓಡಾಡುವ ಅನಿವಾರ್ಯತೆಯಿಲ್ಲ!! ಕಣಿವೆಯ ಮತ್ತೊಂದು ಬದಿಯಲ್ಲಿ ಅಗಲದ ಆದುನಿಕ ರಸ್ತೆ ನಿರ್ಮಾಣವಾಗಿದೆ. ತಡೆಗೋಡೆಗಳೂ ಇವೆ. ಆದರೂ ಪ್ರತಿವರ್ಷ ಸಾವಿರಾರು ಜನ ದುರ್ಗಮ ಆ ಹಳೆ ರಸ್ತೆಯಲ್ಲೇ ಸಂಚರಿಸಲು ಇಷ್ಟಪಡುತ್ತಾರೆ. ಅದೂ ಸೈಕಲ್ಲಲ್ಲಿ!!! ಆಶ್ಚರ್ಯವಾಗಬಹುದು. ಹೌದು ನಿಜ. ರಕ್ತದಲ್ಲಿ ಹೆಚ್ಚು ಅಡ್ರಿನಾಲಿನ್ ಇರುವ ಸಾಹಸಿ ಪ್ರವಾಸಿಗರು. ಅವರಿಗಾಗಿಯೇ ಸೈಕಲ್ ಪ್ರವಾಸ ಆಯೋಜಿಸುವ ಅನೇಕ ಏಜೆಂಟರು ಲಾ-ಪಾಜ್ ನಲ್ಲಿದ್ದಾರೆ. ರಸ್ತೆಯ ಅತಿ ಎತ್ತರದ ಬಾಗಕ್ಕೆ ವಾಹನದಲ್ಲಿ ಸೈಕಲ್ ಮತ್ತು ಸಾಹಸಿಗರನ್ನು ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ಸೈಕಲ್ ಹತ್ತಿ ಸಾಹಸಿಗರು ಇಳಿಯಲಾರಂಬಿಸುತ್ತಾರೆ. ಬೆಂಗಾವಲಿಗೆ ವಾಹನ ಹಿಂದಿರುತ್ತದೆ. (ಆಗಾಗ್ಯೆ ಟಯರ್-ಬ್ರೇಕ್ ಶೂ ಬದಲಾಯಿಸಲು). ಭೀಕರ ಬಸ್ ಅಪಘಾತದಲ್ಲಿ ತನ್ನ ಕುಟುಂಬದ ಎಲ್ಲಾ ಸದಸ್ಯರನ್ನೂ ಕಳೆದುಕೊಂಡ ವ್ಯಕ್ತಿಯೊಬ್ಬ ಅಪಘಾತ ನಡೆದ ತಿರುವಿನಲ್ಲಿ ವಾಹನಗಳನ್ನು ನಿಯಂತ್ರಿಸಲು ಸದಾ ಇರುತ್ತಾನಂತೆ!!!


        ಈ ಪ್ರಪಂಚ ಎಷ್ಟು ವಿಚಿತ್ರ ಅಲ್ವಾ?
                          

Tuesday, March 9, 2010

ಒಂದು ಮಾತ್ರೆ ತಿಂದರೆ ತಲೆಯಲ್ಲಿ ಹರಿದಾಡುವ ಹೇನುಗಳೆಲ್ಲ ಸಾಯುವಂತಿದ್ದರೆ-


ಈ ಕನಸು ಒಮ್ಮೆಯಾದರೂ ನಿಮ್ಮ ತಲೆಯಲ್ಲಿ ಮೂಡಿರಬಹುದು. ಬಾಲ್ಯ ಜ್ಞಾಪಿಸಿಕೊಳ್ಳಿ. ಸದಾ ತಲೆ ಕೆರೆದುಕೊಳ್ಳುತ್ತಿದ್ದ ಅಕ್ಕನನ್ನೋ, ತಂಗಿಯನ್ನೋ ನೋಡಿದಾಗ ಅಥವಾ ಕಷ್ಟಪಟ್ಟು ಹೇನು ಹಣಿಗೆಯಲ್ಲಿ ತಲೆ ಬಾಚಿಕೊಳ್ಳುವ ಅಮ್ಮನನ್ನೋ, ಚಿಕ್ಕಮ್ಮನನ್ನೋ, ಅಕ್ಕನ ಮಗಳನ್ನೋ ನೋಡಿದಾಗ ಬಹುಶಃ ಒಮ್ಮೆಯಾದರೂ ಈ ಆಲೋಚನೆ ಬಂದಿರಬಹುದು. (ಹೆಣ್ಣು ಮಕ್ಕಳ ತಲೆಯಲ್ಲಿ ಸಾದಾರಣವಾಗಿ ಹೇನು ಇರುತ್ತವೆ). ಇಂದು ಈ ಕನಸು ಸಾಕಾರವಾಗಿದೆ!!

ಆದುನಿಕ ವೈದ್ಯ ಶಾಸ್ತ್ರ ನಮ್ಮ ಅನೇಕ ಕನಸುಗಳನ್ನು ನನಸು ಮಾಡಿದೆ. ಒಟ್ಟೊಟ್ಟೆಯಾದ ಮಂಡಿಯನ್ನು (knee joint) ಕತ್ತರಿಸಿ ಬಿಸುಟು ಆ ಜಾಗದಲ್ಲಿ ಲೋಹದ ಜಾಯಿಂಟ್ ಕೂರಿಸಿ ನಾಳೆಯೇ ನಡಿಯುವಂತೆ ಮಾಡಿದೆ. ಆಪರೇಶನ್ ಟೇಬಲ್ಲಿಂದ ದೂರದಲ್ಲಿ ಕೂತು ರೋಬೋಟ್ ಸಹಾಯದಿಂದ ಸಂಕೀರ್ಣ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಬಹುದಾಗಿದೆ. ಕಣ್ಣು ಮುಚ್ಚಿಮಲಗಿ ಗುಹೆಯಂತಾ ಯಂತ್ರದೊಳಗೆ ದೇಹ ಒಮ್ಮೆ ಹೋಗಿ ಬಂದರೆ ಕಾಯಿಲೆಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊರಗಡೆ ಕಂಪ್ಯೂಟರ್ನಲ್ಲಿ ಮೂಡುವ ವ್ಯವಸ್ಥೆ ಇದೆ.(ಕುಟುಕು ಜೀವ,ಅದೃಷ್ಟ ಹಾಗೂ ಬಾರದ ಜೋಬು ಇದ್ದರೆ ಪವಾಡಗಳೇ ಆಗಬಹುದು). ಇದೇ ರೀತಿ ಹೇನು ಸಾಯುವ ಮಾತ್ರೆಯ ಕನಸೂ ಇಂದು ನನಸಾಗಿದೆ. ಆ ಮಾತ್ರೆಯೇ ಐವರ್ಮೆಕ್ಟಿನ್ (Ivermectin) ಮಾತ್ರೆ!! ಹೊಟ್ಟೆ ಹುಳಕ್ಕೆ ಕೊಡುವ ಒಂದು ಜಾತಿಯ ಮಾತ್ರೆ.

ತುಂಬಾ ಹಿಂದಲ್ಲ. ೧೦-೧೨ ವರ್ಷದ ಕೆಳಗೆ ನಾವು ತ್ರಿಪಾಟಿ ಫಾರ್ಮಕಾಲಜಿ ಓದುತ್ತಿದ್ದಾಗ ಜಂತುನಾಶಕ (antihelmenthic) ಔಷದಿಗಳ ಪಟ್ಟಿಯಲ್ಲಿ ಐವರ್ಮೆಕ್ಟಿನ್ಗೆ ಸ್ಥಾನವಿರಲಿಲ್ಲ. ಪ್ರಪಂಚದ ಹಲವೆಡೆ ಉಪಯೋಗಿಸಲ್ಪಡುತ್ತಿದ್ದು ಭಾರತದಲ್ಲಿನ್ನೂ ಮಾರುಕಟ್ಟೆಗೆ ಬಂದಿಲ್ಲವೆಂಬ ಅಡಿಟಿಪ್ಪಣಿಯಿತ್ತು. ಐವರ್ಮೆಕ್ಟಿನ್ ಮಾತ್ರೆ ರಕ್ತಕ್ಕೆ ಸೇರಿ ಜಂತುಗಳ ನರಕೋಶಗಳ ಕ್ಲೋರೈಡ್ ಚಾನಲ್ಗಳಿಗೆ ಅಂಟಿಕೊಂಡು ಕೋಶದೊಳಗೆ ಕ್ಲೋರೈಡ್ ಅಯಾನ್ ಹರಿಯುವಿಕೆ ಹೆಚ್ಚುಮಾಡಿ ಜಂತುಗಳ ಸಾವಿಗೆ ಕಾರಣವಾಗುತ್ತದೆ. ಆದರೆ ಜೀವ ಸರಪಳಿಯಲ್ಲಿ ಮೇಲ್ಮಟ್ಟದಲ್ಲಿರುವ ಸಸ್ತನಿಗಳ ನರವ್ಯೂಹದಲ್ಲಿ ಈ ರೀತಿ ವ್ಯವಸ್ಥೆ ಇಲ್ಲದಿರುವುದರಿಂದ ಐವರ್ಮೆಕ್ಟಿನ್ ಮನುಷ್ಯರೂ ಸೇರಿದಂತೆ ಸಸ್ತನಿಗಳಿಗೆ ತೊಂದರೆಮಾಡುವುದಿಲ್ಲ.(ಸಾಯಿಸುವುದಿಲ್ಲ!!).ಈಗ ಐವರ್ಮೆಕ್ಟಿನ್ ಭಾರತದಲ್ಲೂ ಲಭ್ಯ.ಎಲ್ಲರಿಗೂ (ಎಲ್ಲಾ ಡಾಕ್ಟರಿಗೂ) ಗೊತ್ತಿರುವ ಐವರ್ಮೆಕ್ಟಿನ್ ನ ಮುಖ್ಯ ಉಪಯೋಗ ಹೊಟ್ಟೆ ಹುಳ ನಾಶಕವಾಗಿ ಇದರ ಬಳಕೆ. CIMSನಲ್ಲೂ ಇದರ ಉಪಯೋಗ ಬರಿ ಜಂತು ನಾಶಕವಾಗಿ ಮಾತ್ರ.

ನನ್ನ ರೋಗಿಯೊಬ್ಬರಿಗೆ ಸಾದಾರಣವಾಗಿ ಕೊಡುವ ಜಂತುನಾಶಕಗಳಿಂದ ಹೊಟ್ಟೆ ಹುಳಗಳು ಸಾಯದಿದ್ದಾಗ ನನಗೆ ಜ್ಞಾಪಕಕ್ಕೆ ಬಂದಿದ್ದೇ ಈ ಐವರ್ಮೆಕ್ಟಿನ್. ಅದನ್ನು ತರಿಸಿ ಕೊಟ್ಟಾಗ (ನನ್ನದುಅರೆಕಾಲಿಕ ಡಿಸ್ಪೆನ್ಸರಿ) ಅವರ ಹುಳಗಳ ಸಮಸ್ಯೆ ಮಾಯವಾಯಿತು. ಆಗ ಈ ಐವರ್ಮೆಕ್ಟಿನ್ ಬಗ್ಗೆ ಓದಿದಾಗ ಮನುಷ್ಯರನ್ನು ಆಶ್ರಯಿಸಿ ರಕ್ತ ಹೀರಿ ತೊಂದರೆ ಕೊಡುವ ಕೆಲವು ಜೀವಿಗಳಿಗೆ ಯಾಕೆ ಪ್ರಯೋಗಿಸಿ ನೋಡಬಾರದೆಂದು ಅನ್ನಿಸಿತು. ಮೊದಲು ತಲೆಗೆ ಬಂದಿದ್ದು ಸ್ಕೇಬಿಸ್.(ಕೈ ಬೆರಳು ಸಂದಿ, ಸೊಂಟ, ಇಲ್ಲೆಲ್ಲ ಚಿಕ್ಕ ನಿರು ಗುಳ್ಳೆ, ತುರಿಕೆಯಿಂದ ಕೂಡಿದ ಚಿಕ್ಕ ಕ್ರಿಮಿಯಿಂದ ಬರುವ ಒಂದು ರೀತಿಯ ಅಂಟು ಕಾಯಿಲೆ) ಐವರ್ಮೆಕ್ಟಿನ್ ಇಲ್ಲೂ ಗೆದ್ದಿತು.ರಕ್ತ ಹೀರುವ ಹೇನುಗಳ ಮೇಲೆ ಯಾಕೆ ಇದನ್ನು ಪ್ರಯೋಗಿಸಬಾರದೆಂದು ಆಲೋಚಿಸಿದೆ.(ಹೇನುಗಳದ್ದು ದೊಡ್ಡ ಸಮಸ್ಯೆ.ಆದರೆ ಆಸ್ಪತ್ರೆಗೆ ಬರುವುದು ಕಡಿಮೆ. ಬಹುಶಃ ಅನೇಕ ಜನ ಅದು ಸಹಜ ಎಂದು ತಿಳಿದುಕೊಂದಿರುತ್ತಾರೆ!! ಅತಿ ಹೆಚ್ಹಾದರೆ ಮಾತ್ರ ಬರುತ್ತಾರೆ). ಐ.ಎಂ.ಎ. ಕಾರ್ಯಕ್ರಮದಲ್ಲಿ ಪರಿಚಯದ ಒಂದಿಬ್ಬರು ಡಾಕ್ಟರನ್ನು ಐವರ್ಮೆಕ್ಟಿನ್ ಹೇನಿಗೆ ಕೊಟ್ಟಿದ್ದಿರಾ ಎಂದು ಕೇಳಿದಾಗ "ಇಲ್ವಲ್ಲಾ ,ಕೊಟ್ಟರೆ ಆಗಬಹುದೇನೋ" ಅಂದರು. ಇಂಟರ್ನೆಟ್ನಲ್ಲಿ ಹುಡುಕಿದಾಗ ಐವರ್ಮೆಕ್ಟಿನನ್ನು ಹೇನುಗಳ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿದ್ದು ಗೊತ್ತಾಯಿತು.(ಇಂಟರ್ನೆಟ್ ನಿಜಕ್ಕೂ ಒಂದು ವರ!!)ಇನ್ನು ಪ್ರಯೋಗ ಮಡಿ ಪಲಿತಾಂಶ ಪಡೆಯುವುದೊಂದು ಬಾಕಿ.

ಯಾರ ಮೇಲೆ ಪ್ರಯೋಗಿಸುವುದು? ಮೊದಲೇ ಹೇಳಿದೆ. ಹೇನುಗಳ ಸಮಸ್ಯೆಯಿಂದ ಮಾತ್ರ ಆಸ್ಪತ್ರೆಗೆ ಬರುವವರ ಸಂಖ್ಯೆ ತುಂಬಾ ಕಡಿಮೆ. ಆದರೆ ತಲೆಗೆ ಏನಾದರೊಂದು ನುಸುಳಿದರೆ ಪ್ರಯೋಗಮಾಡಿ ಪಲಿತಾಂಶ ತಿಳಿಯುವ ಕುತೂಹಲ.ಆಗ ಜ್ನಾಪಕವಾಗಿದ್ದೆ ನನ್ನಮ್ಮ!!!. ಮೂರು ನಾಲ್ಕು ದಿನಕ್ಕೊಮ್ಮೆ ತನ್ನ ಉದ್ದ ಕೂದಲನ್ನು ಹೇನು ಹಣಿಗೆಯಲ್ಲಿ ಬಾಚಿ ಹಣಿಗೆಯನ್ನು ಬಿಚ್ಚಿದ ಹಳೆ ಪೇಪರ್ ಮೇಲೆ ಕುಕ್ಕಿ ಹೇನುಗಳನ್ನು ಸಾಯಿಸುತ್ತಿದ್ದಳು."ಒಂಸಲ ಸೇರಿಕೊಂಡರೆ ಪಕ್ನೆ ಹೋಗೊಲ್ಲ. ತಲೆತುಂಬ ಹರಿದಾಡಿದಂತಾಗುತ್ತದೆ" ಅಂತ ಗೊಣಗುದು ಆಗಾಗ ಕಿವಿಗೆ ಬೀಳ್ತಿತ್ತು. ಮನೆಯೇ ಮೊದಲ ಪ್ರಯೋಗಶಾಲೆಯೆಂದು ಅಮ್ಮನಿಗೇ ಹೊಟ್ಟೆ ಹುಳುಗಳಿಗೆ ಕೊಡುವ ಐವರ್ಮೆಕ್ಟಿನ್ ಮತ್ತು ಆಲ್ಬೆಂಡಜೊಲ್ ಕಾಂಬಿನೇಶನ್ ಮಾತ್ರೆ ಕೊಟ್ಟೆ!!! ಹೇನುಗಳ ಹರಿದಾಟದ ಅನುಭವ ಮಾಯ!!!. ಮೂರು ತಿಂಗಳ ಮೇಲಾಯಿತು. ಇವತ್ತಿಗೂ ಇಲ್ಲ. (ಇನ್ನೂ ಗಮನಿಸಬೇಕು)

ಇಲ್ಲಿ ಒಂದೆರಡು ಅತಿ ಮುಖ್ಯ ಸಂಗತಿಗಳಿವೆ. ಈ ಔಷದ ರಕ್ತ ಹೀರುವ ಹೇನುಗಳನ್ನು ಮಾತ್ರ ಸಾಯಿಸುತ್ತದೆ. ಹೇನುಗಳ ಮರಿ(ಇಲ್ಲಿ ನಾವು ಚೀರು ಅನ್ನುತ್ತೇವೆ)ಗಳನ್ನಲ್ಲ. ಮೊದಲ ಮಾತ್ರೆ ತಿಂದು ಸರಿಯಾಗಿ ಎಂಟನೆ ದಿನ ಇನ್ನೊಂದು ಮಾತ್ರೆ ತಿನ್ನಬೇಕು. ಆಗ ಹೇನುಗಳಾಗಿರುವ ಆ ಚೀರುಗಳೂ ಸಾಯುತ್ತವೆ.(ಲೇಟಾಗಿ ಎರಡನೇ ಮಾತ್ರೆ ತಿಂದರೆ ಅವು ಮತ್ತೆ ಮೊಟ್ಟೆ ಇಟ್ಟಿರುವ ಸಂಭವವಿರುತ್ತದೆ!!). ಶಾಲಾ ಮಕ್ಕಳಲ್ಲಿ ಅಥವಾ ಮನೆಯಲ್ಲಿ ಹೆಚ್ಚು ಮಕ್ಕಳಿದ್ದರೆ ಒಬ್ಬರಿಂದ ಇನ್ನೊಬ್ಬರಿಗೆ ಹೇನುಗಳು ದಾಟಬಹುದು. ಅದನ್ನು ಗಮನಿಸಿ ಉಳಿದವರಿಗೂ ಔಷದಿ ಬೇಕಾಗಬಹುದು. ರೋಗಿ ಹಾಗೂ ವೈದ್ಯ – ಯಾರು ತಪ್ಪು ಮಾಡಿದರೂ ವೈದ್ಯರಿಗೇ ಕೆಟ್ಟ ಹೆಸರು. ಬಸರಿ, ಬಾಣಂತಿಯರು ಈ ಔಷದಿ ತೆಗೆದುಕೊಳ್ಳುವಂತಿಲ್ಲ. ಏನಕ್ಕೂ ನಿಮ್ಮ ಫ್ಯಾಮಿಲಿ ಡಾಕ್ಟರ್ ಸಲಹೆಯಿಲ್ಲದೆ ಯಾವ ಮಾತ್ರೆಯನ್ನೂ ತೆಗೆದುಕೊಳ್ಳಬಾರದು.

ಕೇವಲ ಥಿಯರಿ ಆದಾರದ ಮೇಲೆ ಆಲೋಚನೆ ಮಾಡಿದರೆ ಕೆಲವೊಂದು ವಸ್ತುಗಳ "ಅಸಂಪ್ರದಾಯಕ" ಉಪಯೋಗಗಳು ಬೆಳಕಿಗೆ ಬರುತ್ತವೆ. ಕಟಿಂಗ್ ಪ್ಲೇಯರ್ನಿಂದ ಹೂ ಗಿಡಗಳ ಮಧ್ಯೆ ಬೆಳೆದಿರುವ ಒಂದೊಂದು ನಾಚಿಗೆ ಮುಳ್ಳಿನ ಗಿಡಗಳನ್ನು ಬೇರುಸಹಿತ ಕಿತ್ತು ಬಿಸಾಡಬಹುದು. ನೈಲ್ ಕಟರ್ ನಲ್ಲಿರುವ ಬಾಟ್ಲ್ ಓಪನರ್ ಲಾನ್ ನಲ್ಲಿರುವ ಕಳೆಗಳನ್ನು ಹುಲ್ಲಿಗೆ ಏನೂ ಆಗದಂತೆ ಬೇರುಸಮೇತ ಕೀಳಲು ಅತ್ಯುತ್ತಮ. ಬಹುಶಃ ಈ ಐವರ್ಮೆಕ್ಟಿನ್ ಚಳಿಗಾಲದ ಆರಂಭದಲ್ಲಿ (ಹೆಚ್ಹಾಗಿ ಮಕ್ಕಳ) ಕಿವಿಯೊಳಗೆ ಸೇರಿ ಕಚ್ಚಿ ತುಂಬಾ ನೋವು ಉಂಟುಮಾಡುವ ಉಣುಗುಗಳಿಗೂ ಆಗಬಹುದು. (ಅವನ್ನು ತೆಗೆಯುವುದು ಮಕ್ಕಳಲ್ಲಿ ಕಷ್ಟಸಾದ್ಯ). ಅಪರೂಪಕ್ಕೆ ಮಳೆಗಾಲದಲ್ಲಿ ಮಲೆನಾಡಕಡೆ ಟ್ರೆಕಿಂಗ್ ಬರುವ ಬೆಂಗಳೂರಿಗರು ಬೆಳಿಗ್ಗೆ ಒಂದು ಐವರ್ಮೆಕ್ಟಿನ್ ಮಾತ್ರೆ ತಿಂದು ಕಾಡು,ಬೆಟ್ಟ-ಗುಡ್ಡ ನುಗ್ಗಿದರೆ ಕಾಲಿಗೆ ಕಚ್ಚುವ (ಕೆಲವೊಮ್ಮೆ ಇನ್ನೂ ಮೇಲೆ ಮೇಲೆ!!) ಇಂಬಳಗಳು ರಕ್ತ ಕುಡಿಯಲು ಆರಂಬಿಸುತ್ತಿದ್ದಂತೆ ಬಿದ್ದು ಸಾಯಬಹುದು!!! (ಪ್ರಯೋಗ ಮಾಡಿ ನೋಡಲು ಮಳೆಗಾಲ ಕಾಯುತ್ತಿದ್ದೇನೆ).

ನಿಮಗೂ ಯಾವುದಾದರೂ ವಸ್ತುಗಳ ಉಪಯುಕ್ತವಾದ "ಅಸಂಪ್ರದಾಯಕ ಉಪಯೋಗಗಳು" ಗೊತ್ತಿದ್ದರೆ ಹಂಚಿಕೊಳ್ಳಿ.